ಜೀವಿಗಳನ್ನು ರೋಗಗಳಿಂದ ರಕ್ಷಿಸುವ ಜೈವಿಕ ಪ್ರಕ್ರಿಯೆಗಳಲ್ಲಿ ಪ್ರತಿರಕ್ಷಣಾ ವ್ಯವಸ್ಥೆಯು ಒಂದು ಬಗೆ. ಇದರ ಕಾರ್ಯವು ಬಹುಮಟ್ಟಿಗೆ ಭದ್ರತಾ ವ್ಯವಸ್ಥೆಯಂತೆ. ನಮ್ಮ ದೇಹಕ್ಕೆ ತಗಲುವ ಯಾವುದೇ ಹಾನಿಕಾರಕ ವೈರಸ್‌ಗಳು ಮತ್ತು ಬ್ಯಾಕ್ಟೀರಿಯಾಗಳನ್ನು ಪತ್ತೆ ಮಾಡಿಕೊಂಡು ಅದಕ್ಕೆ ಸೂಕ್ತವಾಗಿ ಪ್ರತಿಕ್ರಿಯಿಸುತ್ತದೆ.
ಬಹುತೇಕ ಎಲ್ಲ ಜೀವಿಗಳು ಕೆಲವು ಪ್ರತಿರಕ್ಷಣಾ ವ್ಯವಸ್ಥೆಯನ್ನು ಹೊಂದಿವೆ. ಬ್ಯಾಕ್ಟೀರಿಯಾಗಳು ಸಹ ಕಿಣ್ವಗಳ ರೂಪದಲ್ಲಿ ಪ್ರತಿರಕ್ಷಣಾ ವ್ಯವಸ್ಥೆಯನ್ನು ಹೊಂದಿರುತ್ತವೆ; ಅದು ಅವುಗಳನ್ನು ಸೋಂಕಿನಿಂದ ರಕ್ಷಿಸುತ್ತದೆ. ಪ್ರಾಥಮಿಕವಾಗಿ, ಪ್ರತಿರಕ್ಷಣಾ ವ್ಯವಸ್ಥೆಗಳು ಎರಡು ವಿಧಗಳಾಗಿವೆ: ಜನ್ಮಜಾತ ಪ್ರತಿರಕ್ಷಣಾ ವ್ಯವಸ್ಥೆ ಮತ್ತು ಹೊಂದಾಣಿಕೆಯ ಪ್ರತಿರಕ್ಷಣಾ ವ್ಯವಸ್ಥೆ.
ಜನ್ಮಜಾತ ಪ್ರತಿರಕ್ಷಣಾ ವ್ಯವಸ್ಥೆಯು ಸಸ್ಯಗಳು, ಶಿಲೀಂಧ್ರಗಳು, ಕೀಟಗಳು ಮತ್ತು ಪ್ರಾಚೀನ ಬಹುಕೋಶೀಯ ಜೀವಿಗಳಲ್ಲಿ ಕಂಡುಬರುವ ಪ್ರಬಲ ಮತ್ತು ಹಳೆಯ ವಿಕಸನೀಯ ರಕ್ಷಣಾ ವ್ಯವಸ್ಥೆಯಾಗಿದೆ. ಈ ವ್ಯವಸ್ಥೆಯು ತಿಳಿದಿರುವ ಸಂದರ್ಭಗಳು ಮತ್ತು ಪ್ರಚೋದನೆಗಳ ವ್ಯಾಪಕ ಶ್ರೇಣಿಯ ಕೆಲವು ಪ್ರಮಾಣಿತ ಪ್ರತಿಕ್ರಿಯೆಗಳನ್ನು ಒದಗಿಸುತ್ತದೆ. ಇದಕ್ಕೆ ತದ್ವಿರುದ್ಧವಾಗಿ, ಹೊಂದಾಣಿಕೆಯ ಪ್ರತಿರಕ್ಷಣಾ ವ್ಯವಸ್ಥೆಯು ಪ್ರತಿ ಪ್ರಚೋದನೆಗೆ ನಿರ್ದಿಷ್ಟಪ್ರತಿಕ್ರಿಯೆಯನ್ನು ನೀಡುತ್ತದೆ ಮತ್ತು ಅದು ಹಿಂದೆ ಎದುರಿಸಿದ ಅಣುಗಳನ್ನು ಗುರುತಿಸಲು ಕಲಿಯುತ್ತದೆ.
ಹೊಂದಾಣಿಕೆಯ ಪ್ರತಿರಕ್ಷಣಾ ವ್ಯವಸ್ಥೆಯನ್ನು ‘ಸ್ವಾಧೀನಪಡಿಸಿಕೊಂಡ ಪ್ರತಿರಕ್ಷಣಾ ವ್ಯವಸ್ಥೆ’ ಎಂದೂ ಕರೆಯಲಾಗುತ್ತದೆ. ಏಕೆಂದರೆ ಈ ವ್ಯವಸ್ಥೆಯು ರೋಗನಿರೋಧಕ ಸ್ಮರಣೆಯನ್ನು ಇಟ್ಟುಕೊಳ್ಳುವುದಲ್ಲದೆ, ಇದು ಅದೇ ಹಾನಿಕಾರಕ ಬ್ಯಾಕ್ಟೀರಿಯಾ ಅಥವಾ ವೈರಸ್‌ಗಳು (ರೋಗಕಾರಕ) ನಮ್ಮ ದೇಹದಲ್ಲಿ ಮತ್ತೊಮ್ಮೆ ಕಾಣಿಸಿಕೊಂಡಾಗ ಇನ್ನೂ ವರ್ಧಿತ ಪ್ರತಿಕ್ರಿಯೆಯನ್ನು ನೀಡಬಲ್ಲವು. ಇದೇ ಸ್ವಾಧೀನಪಡಿಸಿಕೊಂಡ ಪ್ರತಿರಕ್ಷೆಯ ಕಾರ್ಯವಿಧಾನವೇ ‘ಲಸಿಕೆ’ಗೆ ಆಧಾರವಾಗಿದೆ.
ಹೊಂದಾಣಿಕೆಯ ಪ್ರತಿರಕ್ಷಣಾ ವ್ಯವಸ್ಥೆಯಲ್ಲಿ ಪ್ರತಿಕಾಯಗಳು (antibodies) ನಿರ್ಣಾಯಕ ಪಾತ್ರವನ್ನು ವಹಿಸುತ್ತವೆ. ಈ ಪ್ರತಿಕಾಯಗಳು ವಿಶೇಷವಾದ Y-ಆಕಾರದ ಪ್ರೊಟೀನ್‌ಗಳಾಗಿದ್ದು ಹೊಂದಾಣಿಕೆಯ ಪ್ರತಿರಕ್ಷಣಾ ವ್ಯವಸ್ಥೆಯಲ್ಲಿ ಹಾನಿಕಾರಕ ಬ್ಯಾಕ್ಟೀರಿಯಾ ಮತ್ತು ವೈರಸ್‌ಗಳನ್ನು ಗುರುತಿಸಲು ಮತ್ತು ತಟಸ್ಥಗೊಳಿಸುವಲ್ಲಿ ಇದರ ಪಾತ್ರ ಪ್ರಮುಖ.
ರೋಗಕಾರಕಗಳಲ್ಲಿ ಕೆಲವು ವಿಶಿಷ್ಟ ಅಣುಗಳಿರುತ್ತವೆ; ಅದಕ್ಕೆ ಪ್ರತಿಜನಕಗಳು (antigen) ಎಂದು ಕರೆಯಲಾಗುತ್ತದೆ. ಪ್ರತಿಜನಕವು ಮೂಲಭೂತವಾಗಿ ರೋಗಕಾರಕಗಳ (ವೈರಸ್‌ಗಳು, ಬ್ಯಾಕ್ಟೀರಿಯಾಗಳು ಮತ್ತು ಪರಾಗಗಳು) ಹೊರಗೆ ಇರುವ ಅಣು ಅಥವಾ ಆಣ್ವಿಕ ರಚನೆಯಾಗಿದೆ. ಪ್ರತಿಕಾಯಗಳು ಇಂತಹ ಪ್ರತಿಜನಕಗಳನ್ನು ಗುರುತಿಸಬಲ್ಲವು ಮತ್ತು ಅದಕ್ಕೆ ಹೋಗಿ ಅಂಟಿಕೊಳ್ಳಬಹುದು (ಅದರ ಜೊತೆ ಸೇರಬಹುದು). ದೇಹದಲ್ಲಿ ವೈರಲ್ ಅಥವಾ ಬ್ಯಾಕ್ಟೀರಿಯಾದ ಸೋಂಕು ತಗಲಿದಾಗ ಪ್ರತಿಜನಕಗಳ ಉಪಸ್ಥಿತಿಯು ಸಾಮಾನ್ಯವಾಗಿ ಪ್ರತಿರಕ್ಷಣಾ ಪ್ರತಿಕ್ರಿಯೆಯನ್ನು ಪ್ರಚೋದಿಸುತ್ತದೆ. ಆಗಪ್ರತಿಕಾಯಗಳು ಪ್ರತಿಜನಕಗಳನ್ನು ಹುಡುಕಿಕೊಂಡು ಹೋಗಿ ಅದರೊಡನೆ ಸೇರುತ್ತವೆ.
ಯಾವುದೇ ರೋಗಕಾರಕ ಸೋಂಕು ತಗುಲಿದ ಸಂದರ್ಭದಲ್ಲಿ, ಪ್ರತಿಕಾಯಗಳು ರಕ್ತದಲ್ಲಿ ಉತ್ಪತ್ತಿಯಾಗುತ್ತವೆ. ಸೋಂಕು ಕಡಿಮೆಯಾದಂತೆ, ಈ ಪ್ರತಿಕಾಯಗಳನ್ನು ಉತ್ಪಾದಿಸುವ ಜೀವಕೋಶಗಳು ಸಾಯುತ್ತವೆ ಮತ್ತು ಅದರ ಪರಿಣಾಮವಾಗಿ ರಕ್ತದ ಪ್ರತಿಕಾಯ ಮಟ್ಟ ಕಡಿಮೆಯಾಗುತ್ತವೆ. ಹೀಗಿದ್ದರೂ ಕೆಲವು ಪ್ರತಿಕಾಯ-ಉತ್ಪಾದಕ ಜೀವಕೋಶಗಳು ಮೂಳೆಗಳ ಮಜ್ಜೆಗೆ ಸೇರುತ್ತವೆ. ಅವನ್ನೇ ದೀರ್ಘಾವಧಿಯ ಪ್ಲಾಸ್ಮಾ ಜೀವಕೋಶಗಳು ಎಂದು ಕರೆಯಲಾಗುತ್ತದೆ. ಇಲ್ಲಿದ್ದುಕೊಂಡೇ ರೋಗಕಾರಕದಿಂದ ಮರುಸೋಂಕನ್ನು ತಡೆಗಟ್ಟಲು ಸ್ವಲ್ಪ ಮಟ್ಟದ ಪ್ರತಿಕಾಯಗಳನ್ನು ನಿರಂತರವಾಗಿ ಸ್ರವಿಸುತ್ತದೆ.
SARS-CoV-2 ವೈರಸ್
SARS-CoV-2 ವೈರಸ್‌ನ ಹೊರ ಪದರದಲ್ಲಿ ವಿಶಿಷ್ಟವಾದ ‘ಸ್ಪೈಕ್‌ಗಳನ್ನು’ ಹೊಂದಿದೆ. ಕೆಲವು ಪ್ರತಿಕಾಯಗಳು ಈ ಸ್ಪೈಕ್ ಪ್ರೊಟೀನ್‌ಗಳನ್ನು ಗುರುತಿಸುತ್ತವೆ; ಅದರಲ್ಲಿಗೆ ಹೋಗಿ ಅಂಟಿಕೊಳ್ಳಬಹುದು (ಸೇರಬಹುದು). SARS-CoV-2 ವೈರಸ್ ಸೋಂಕಿನ ಸಮಯದಲ್ಲಿ ಸಹ ಪ್ರತಿಕಾಯಗಳು ಉತ್ಪತ್ತಿಯಾಗುತ್ತವೆ; ಅವು ರಕ್ತದಲ್ಲಿಯೂ ಪರಿಚಲನೆಗೊಳ್ಳುತ್ತವೆ. ಈ ವೈರಸ್ ಸೋಂಕಿನ ಪ್ರಮಾಣ ಮತ್ತು ಆತಿಥೇಯ ದೇಹದ ಸ್ಥಿತಿಯು ಪ್ರತಿಕಾಯಗಳು ಅವುಗಳ ವಿರುದ್ಧ ಹೋರಾಡಬಹುದೇ ಅಥವಾ ಇಲ್ಲವೇ ಎಂಬುದನ್ನು ನಿರ್ಧರಿಸುತ್ತದೆ. ಈಗಾಗಲೇ ತಿಳಿದಿರುವಂತೆ, ರೋಗಲಕ್ಷಣ ಇರುವ ಪ್ರಕರಣಗಳ ಜೊತೆ ರೋಗಲಕ್ಷಣರಹಿತ ಪ್ರಕರಣಗಳು ಈ ವೈರಸ್ ಹರಡುವಿಕೆಯಲ್ಲಿ ಕಾಣುತ್ತಿದ್ದೇವೆ.
ಪ್ರಮುಖವಾಗಿ ಈ ವೈರಸ್ ಸೋಂಕಿರುವ ವ್ಯಕ್ತಿ ರೋಗಲಕ್ಷಣಗಳಿಲ್ಲದ ಸಂದರ್ಭಗಳಲ್ಲಿ ಇದರ ಹರಡುವಿಕೆಗೆ ಕಾರಣವಾಗುತ್ತಾರೆ. ಈ ವೈರಸ್ ಸೋಂಕಿಗೆ ತುತ್ತಾಗಿ ಕೊಮೊರ್ಬಿಡಿಟಿ ಇರುವವವರಲ್ಲಿ ಸಾವಿನ ಪ್ರಮಾಣ ಹೆಚ್ಚಿದೆ. ಈ ವೈರಸ್ ಸೋಂಕು ತಗಲಿದ ಸಂಧರ್ಭದಲ್ಲಿ ದೇಹದ ಪ್ರತಿರಕ್ಷಣಾ ವ್ಯವಸ್ಥೆಯು ಉತ್ತಮವಾಗಿ ಕಾರ್ಯನಿರ್ವಹಿಸಿಯೋ ಅಥವಾ ಸೋಂಕನ್ನು ಎದುರಿಸಲು ಸಾಕಷ್ಟು ಪ್ರತಿಕಾಯಗಳನ್ನು ಉತ್ಪಾದಿಸಿಯೋ ಸೋಂಕಿನಿಂದ ಚೇತರಿಸಿಕೊಂಡ ಬಹಳಷ್ಟು ನಿದರ್ಶನಗಳಿವೆ.
SARS-CoV-2 ಸೋಂಕು ಮನುಷ್ಯರಲ್ಲಿ ನಿರ್ದಿಷ್ಟವಾದ ಪ್ರತಿಜನಕ ಮತ್ತು ದೀರ್ಘಾವಧಿಯ ಹ್ಯೂಮರಲ್ ಪ್ರತಿರಕ್ಷಣಾ ಪ್ರತಿಕ್ರಿಯೆಯನ್ನು ಪ್ರೇರೇಪಿಸುತ್ತದೆ ಎಂದು ಇತ್ತೀಚಿನ ಒಂದು ಅಧ್ಯಯನ ತಿಳಿಸಿದೆ. ಪ್ರತಿಕಾಯಗಳು ದೇಹದ ಹಲವು ಭಾಗಗಳಲ್ಲಿ ಸತ್ತು-ಕೊಳೆತರು, ಅವು ಅಸ್ಥಿಮಜ್ಜೆಯ ಪ್ಲಾಸ್ಮಾಕೋಶಗಳಲ್ಲಿ ವಾಸಿಸುತ್ತವೆ ಎಂದು ತಿಳಿದುಬಂದಿದೆ. ಆದರೆ ಕೆಲವು ಹೊಸ ಅಧ್ಯಯನಗಳು, ಇವೂ ಸುಮಾರು ಒಂದು ವರ್ಷದ ನಂತರ ಸಾಯಬಹುದು ಎಂದು ಸೂಚಿಸಿವೆ; ಅಂತಹ ಸಂದರ್ಭದಲ್ಲಿ – ಬಹುಶಃ ಒಂದು ವರ್ಷದ ನಂತರ ಮರುಸೋಂಕಿಗೆ ತುತ್ತಾಗಬಹುದು. ಇದರಿಂದಲೇ ಬೂಸ್ಟರ್ ಡೋಸ್ ತೆಗೆದುಕೊಳ್ಳುವುದು ಅತ್ಯವಶ್ಯಕ.
ರೋಗನಿರೋಧಕ ಮತ್ತು ಶಕ್ತಿವರ್ಧಕಗಳಾಗಿ ಮಾರಾಟವಾಗುವ ಉತ್ಪನ್ನಗಳು ರೋಗದ ವಿರುದ್ಧ ಸ್ವಾಧೀನಪಡಿಸಿಕೊಂಡಿರುವ ಪ್ರತಿರಕ್ಷೆಯನ್ನು ಒದಗಿಸಲು ಸಾಧ್ಯವಿಲ್ಲ. ಕೊರೊನಾವೈರಸ್ ವಿರುದ್ಧ ಇರುವ ಏಕೈಕ ಮಾರ್ಗ ಅದಕ್ಕೆ ವೃದ್ಧಿಸಿರುವ ಲಸಿಕೆಯನ್ನು ಹಾಕಿಸಿಕೊಳ್ಳುವುದು. ಯಾವುದೇ ಸಂದರ್ಭದಲ್ಲಿ, ರೋಗಕಾರಕಗಳ ವಿರುದ್ಧ ಹೋರಾಡುವ ಪ್ರಮುಖ ಅಂಶವೆಂದರೆ ನಮ್ಮ ಪ್ರತಿಕಾಯಗಳು, ಮತ್ತು SARS-CoV-2 ವಿರುದ್ಧದ ಲಸಿಕೆಯು ಕೊರೊನಾವೈರಸ್ ವಿರುದ್ಧ ಸ್ವಾಧೀನಪಡಿಸಿಕೊಂಡಿರುವ ಪ್ರತಿರಕ್ಷೆಯನ್ನು ಒದಗಿಸುವ ಉದ್ದೇಶವನ್ನು ಹೊಂದಿದೆ.
ಹೀಗಾಗಿ18 ವರ್ಷಕ್ಕಿಂತ ಮೇಲ್ಪಟ್ಟ ಪ್ರತಿಯೊಬ್ಬರೂ ಲಸಿಕೆಯನ್ನು ತೆಗೆದುಕೊಳ್ಳುವುದು ಅನಿವಾರ್ಯ ಮತ್ತು ಅತ್ಯವಶ್ಯಕ. ಇದು ವೈರಸ್ ಹರಡುವುದನ್ನು ತಡೆಯುವ ಏಕೈಕ ಮಾರ್ಗವಾಗಿದೆ. ಹಾಗಾಗಿ ಪ್ರತಿಯೊಬ್ಬರೂ ಲಸಿಕೆ ಹಾಕಿಸಿಕೊಂಡಾಗ ಮಾತ್ರ ನಾವೆಲ್ಲಾ ಸುರಕ್ಷಿತವಾಗಿರಲು ಸಾಧ್ಯ.
–ಸುಧೀರ್ ಎಚ್.ಎಸ್
(ಲೇಖಕ: ಸಂಶೋಧಕ)
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.