ADVERTISEMENT

ಕಚೇರಿ ಸೇವೆಗೇ ಹೆಚ್ಚು ಒತ್ತು...

​ಪ್ರಜಾವಾಣಿ ವಾರ್ತೆ
Published 9 ಮಾರ್ಚ್ 2012, 19:30 IST
Last Updated 9 ಮಾರ್ಚ್ 2012, 19:30 IST

ಕೆಎಎಸ್ ಅಧಿಕಾರಿಯಾಗಿರುವ ಗಂಗೂಬಾಯಿ ಮಾನಕರ ವಿಜಾಪುರ ಜಿಲ್ಲೆಯ ಸಿಂದಗಿಯವರು. ವಿಜಾಪುರ ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕಿಯಾಗಿ ಕಾರ್ಯನಿರ್ವಹಿಸುತ್ತಿರುವ ಅವರು ಈ ಬಾರಿ `ಮನೆ-ಜಗತ್ತು~ ಅಂಕಣದಲ್ಲಿ ನಮ್ಮಂದಿಗೆ ಮುಖಾಮುಖಿಯಾಗಿದ್ದಾರೆ.

ಮಹಿಳಾ ಅಧಿಕಾರಿಗೆ ಆಕೆಯ ಕಚೇರಿಯೇ ಮೊದಲ ಸಮಸ್ಯೆ! ಕಚೇರಿಯ ಸಿಬ್ಬಂದಿಯನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡುವುದೇ ದೊಡ್ಡ ಸವಾಲು. ಸ್ವಲ್ಪ ಯಾಮಾರಿದರೂ ನಮ್ಮನ್ನು ದಾರಿ ತಪ್ಪಿಸಿಬಿಡುತ್ತಾರೆ.
 
ಕೆಲ ಸಿಬ್ಬಂದಿಗೆ ಸರ್ಕಾರಿ ಕೆಲಸಕ್ಕಿಂತ ಇನ್ನಾರ ಮೇಲೋ ಲಾಯಲ್ಟಿ. ಆ ಹಿತಾಸಕ್ತಿಗೆ ಪೂರಕವಾಗಿಯೇ ಅವರು ಕೆಲಸ ಮಾಡುತ್ತಿರುತ್ತಾರೆ; ನಮ್ಮಿಂದ ಆ ಕೆಲಸ ಮಾಡಿಸಿಕೊಳ್ಳಲು ಹವಣಿಸುತ್ತಿರುತ್ತಾರೆ. ಮೊದಲು ನಮ್ಮ ಕಚೇರಿಯನ್ನು ಸುಧಾರಿಸಿದರೆ ನಾವು ಅರ್ಧ ಗೆದ್ದಂತೆ. ಕುಟುಂಬ ಕಚೇರಿ ಆಗಬಾರದು; ಕಚೇರಿಯೇ ಒಂದು ಕುಟುಂಬದಂತಾಗಬೇಕು. ಆ ವಾತಾವರಣ ಸೃಷ್ಟಿಸಿಕೊಂಡು ಕೆಲಸ ಮಾಡುವುದೇ ಈಗಿನ ಸವಾಲು.

ಕೆಎಎಸ್ ಅಧಿಕಾರಿ ಹುದ್ದೆ ಎಂಬ ಕೈಗೆ ಬಂದ ತುತ್ತು ಬಾಯಿಗೆ ಬರಲು ಏಳು ವರ್ಷ ಕಾಯ್ದವಳು ನಾನು. ಕೆಎಎಸ್ ಅಧಿಕಾರಿಯಾದ ಮೇಲೆ ಏನೆಲ್ಲ ಕೆಲಸ ಮಾಡಬಹುದು ಎಂದು ಆ ಏಳು ವರ್ಷಗಳಲ್ಲಿ ಕನಸಿನ ಗೋಪುರ ಕಟ್ಟಿಕೊಂಡಿದ್ದೆ. ಆ ಕನಸು-ಹುಮ್ಮಸ್ಸೇ ನನಗೆ ಪ್ರೇರಣೆ.

`ಕೆಎಎಸ್ ಪರೀಕ್ಷೆ ಪಾಸಾಗಿದ್ದೇನೆ. ಫಲಿತಾಂಶಕ್ಕೆ ಇರುವ ತಡೆ ತೆರವಾಗಿ ಹೇಗೂ ಕೆಎಎಸ್ ಅಧಿಕಾರಿ ಆಗಿಯೇ ತೀರುತ್ತೇನೆ~ ಎಂದು ಕೈಕಟ್ಟಿ ಕೂಡಲಿಲ್ಲ. ಬಿಇ ಪದವೀಧರೆಯಾಗಿದ್ದರೂ ಎಲ್ಲ ಸರ್ಕಾರಿ ಹುದ್ದೆಗಳಿಗೂ ಅರ್ಜಿ ಗುಜರಾಯಿಸುತ್ತಿದ್ದೆ.
 
ಕೆಎಎಸ್ ಅಧಿಕಾರಿ ಆಗುತ್ತೇನೆ ಎಂಬ ಗರ್ವ ಬಿಟ್ಟು ಗ್ರಾಮ ಪಂಚಾಯಿತಿ ಗ್ರೇಡ್-1 ಕಾರ್ಯದರ್ಶಿಯಾಗಿ ಎರಡೂವರೆ ವರ್ಷ ಸೇವೆ ಸಲ್ಲಿಸಿದೆ. ಕೆಳ ಹಂತದ ಸಮಸ್ಯೆಗಳನ್ನು ಅರಿತುಕೊಳ್ಳಲು ಇದು ನೆರವಾಯಿತು.
 
ಆ ಮೇಲೆ ಕೆಎಎಸ್ ಫಲಿತಾಂಶಕ್ಕಿದ್ದ ತಡೆಯಾಜ್ಞೆ ತೆರವಾಗಿ ಸಹಾಯಕ ಕಮಿಷನರ್ ಆಗಿ ಆಡಳಿತ ಸೇವೆಗೆ ಸೇರಿದೆ. ವಿದ್ಯಾವಂತ ಮಹಿಳೆಯರು ತನಗೆ ಇದೇ ಹುದ್ದೆ  ಬೇಕು; ಈ ವಲಯದಲ್ಲಿಯೇ ನೌಕರಿಗೆ ಸೇರಬೇಕು ಎಂದು ಕಾಯುವುದು ಬೇಡ. ಅವಕಾಶ ನಮಗಾಗಿ ಕಾಯುವುದಿಲ್ಲ. ದೊರೆತ ನೌಕರಿ- ಹುದ್ದೆಯಲ್ಲಿಯೇ ನಮ್ಮತನವನ್ನು ತೋರಬೇಕು.

ಅವಿಭಕ್ತ ಕುಟುಂಬದ ಆಸರೆ
ಮಧ್ಯಮ ವರ್ಗದಿಂದ ಬಂದಿರುವ ನನಗೆ ಈಗಲೂ ಅವಿಭಕ್ತ ಕುಟುಂಬವೇ ಆಸರೆ. ತಾಯಿ, ತಮ್ಮ-ತಮ್ಮನ ಪತ್ನಿ-ಆತನ ಮಕ್ಕಳು ಹಾಗೂ ನಾವೆಲ್ಲ ಒಟ್ಟಾಗಿ ವಾಸವಾಗಿದ್ದೇವೆ.

ಮನೆಯನ್ನು ನಿಭಾಯಿಸುವ ಹೊಣೆಗಾರಿಕೆ ಅಷ್ಟಾಗಿ ಇಲ್ಲ. ಹೀಗಾಗಿ ಶೇ.90ರಷ್ಟು ಸಮಯವನ್ನು ಕಚೇರಿ ಕೆಲಸಕ್ಕೇ ಮೀಸಲಿಡುತ್ತೇನೆ. ಮಗಳು ಚಿಕ್ಕವಳಿದ್ದರೂ ಕುಟುಂಬಕ್ಕಿಂತ ಕಚೇರಿ ಸೇವೆಗೇ ಹೆಚ್ಚಿನ ಒತ್ತು ನೀಡುತ್ತಿದ್ದೇನೆ.

ಪತಿ ಹೋಟೆಲ್ ವ್ಯವಹಾರ ನೋಡುತ್ತಿದ್ದಾರೆ. ಮನೆಯಲ್ಲಿ ನಾನೊಬ್ಬಳೆ ದುಡಿಯುವವಳು. ಸಹೋದರ ಕೃಷಿ ಮಾಡಿಕೊಂಡಿದ್ದರೂ ಆದಾಯ ಅಷ್ಟಕ್ಕಷ್ಟೆ. ಮನೆಯಲ್ಲಿ ದಿನಸಿ ವಸ್ತುಗಳ ಖರೀದಿಯಿಂದ ಹಿಡಿದು ಮಕ್ಕಳ ಬಟ್ಟೆ, ಶಾಲೆಯ ಫೀ ಸಂದಾಯದವರೆಗೂ ಗಮನ ಹರಿಸುತ್ತೇನೆ.
 
ಕೆಲಸದ ಒತ್ತಡ ಎಂಬ ಕಾರಣಕ್ಕೆ ಒಬ್ಬ ಮಗಳು-ಮಡದಿ-ತಾಯಿಯಾಗಿ ನಿಭಾಯಿಸಲೇ ಬೇಕಾದ ಕನಿಷ್ಠ ಹೊಣೆಗಾರಿಕೆಯಿಂದ ನುಣುಚಿಕೊಳ್ಳುವುದಿಲ್ಲ.

ನನ್ನ ಮಗಳ ಮೂಗಿನ  ಶಸ್ತ್ರಚಿಕಿತ್ಸೆ ಇದ್ದರೂ ಕರ್ತವ್ಯದ ಕರೆಗೆ ಓಗೊಟ್ಟು ಹೋಗಿದ್ದೂ ಇದೆ. ಇಂಥ ಪರಿಸ್ಥಿತಿ ಬಂದಾಗ ತುಂಬಾ ವ್ಯಥೆಯಾಗುತ್ತದೆ. `ರಸ್ತೆ ಬದಿಯಲ್ಲಿ ಕಲ್ಲು ಒಡೆಯುವ ಮಹಿಳೆಯೂ ಕರುಳ ಕುಡಿಯನ್ನು ಸದಾ ಕುಂಕುಳಲ್ಲಿ ಇಟ್ಟುಕೊಂಡು ಸಲುಹುತ್ತಿರುತ್ತಾಳೆ.

ನಮಗೆ ಆ ಸ್ವಾತಂತ್ರ್ಯವೂ ಇಲ್ಲ ನೋಡು. ನಾವು ಉತ್ತಮ ಅಧಿಕಾರಿಯಾಗಿರಬಹುದು. ಆದರೆ, ಒಬ್ಬ ಉತ್ತಮ ತಾಯಿ ಆಗುವ ಅವಕಾಶದಿಂದ ವಂಚಿತರಾಗಿದ್ದೇವೆ. ನಮಗಿಂತ ಕೂಲಿ ಮಾಡುವ ಆ ಮಹಾತಾಯಿಯೇ ವಾಸಿ~ ಎಂದು ಕೆಎಎಸ್ ಅಧಿಕಾರಿಯಾಗಿರುವ ನನ್ನ ಗೆಳತಿ ಕೆ.ಲೀಲಾವತಿ ಹೇಳುತ್ತಿರುತ್ತಾಳೆ. ಈ ಮಾತು ತಮಾಷೆಯಂತೆ ಕಂಡರೂ ವಾಸ್ತವ.

ಧೈರ್ಯವೇ ದೊಡ್ಡ ಬಂಡವಾಳ
ಮನೆ ಬಿಟ್ಟರೆ ಕಚೇರಿ. ಕಚೇರಿ ಬಿಟ್ಟರೆ ಮನೆ ಇದು ನನ್ನ ದಿನಚರಿ. ವೀಕೆಂಡ್- ಸಿನಿಮಾ, ಮನರಂಜನೆ ಎಂದು ನಾನೆಲ್ಲಿಯೂ ಹೋಗುವುದಿಲ್ಲ. ನೌಕರಿಗೆ ಸೇರುವ ಮುನ್ನ ಯೋಗ ಮಾಡುತ್ತಿದ್ದೆ.

ಯೋಗಾ ಕೋರ್ಸ್ ಸಹ ಆಗಿದೆ. ಈಗ ವ್ಯಾಯಾಮ, ಯೋಗ, ಊಟ... ಯಾವುದೂ ನಿಯಮಿತ ಇಲ್ಲ. ಮನರಂಜನೆಯಂತೂ ಇಲ್ಲವೇ ಇಲ್ಲ. ಆದರೆ, ಪುಸ್ತಕ ಓದುವ  ನನ್ನ ಹವ್ಯಾಸ ಬಿಟ್ಟಿಲ್ಲ. ಕಾದಂಬರಿ ಅಚ್ಚುಮೆಚ್ಚು. ಮನೆಯಲ್ಲಿ ಪುಸ್ತಕ ಸಂಗ್ರಹ ಮಾಡಿಟ್ಟುಕೊಂಡಿದ್ದೇನೆ.
 
ಹೊಸ ಪುಸ್ತಕಗಳನ್ನು-ಪತ್ರಿಕೆಗಳನ್ನು ಕೊಂಡು ಓದುತ್ತೇನೆ.
ಕೌಟುಂಬಿಕ ಸಭೆ-ಸಮಾರಂಭ, ಮದುವೆಗಳಿಗೆ ಹಾಜರಾಗುತ್ತೇನೆ. ಆದರೆ, ಮನೆಗೆ ಬರುವ ಅತಿಥಿಗಳ ಬಗ್ಗೆ ಗಮನ ಹರಿಸಲು ಆಗುವುದಿಲ್ಲ. ಹೀಗಾಗಿ ಅವ್ರೆಲ್ಲರೂ ಬೇಜಾರು ಮಾಡ್ಕೋತಾರೆ.

ನಮ್ಮ ಪ್ರಾಮಾಣಿಕ ಕೆಲಸಕ್ಕೆ ಹಿರಿಯ ಅಧಿಕಾರಿಗಳ ಪ್ರೋತ್ಸಾಹ ಸದಾ ಇದ್ದೇ ಇರುತ್ತದೆ. ಕಚೇರಿಯನ್ನು ಸಮರ್ಥವಾಗಿ ನಿಭಾಯಿಸಿ ಮಾನವೀಯತೆಯಿಂದ ಕೆಲಸ ಮಾಡಿದರೆ ರಾಜಕೀಯ ಒತ್ತಡದ ಮಧ್ಯೆಯೂ ಉತ್ತಮ ಸೇವೆ ಸಲ್ಲಿಸಬಹುದು.
 
ನಾನು ಕೊಪ್ಪಳ ಜಿಲ್ಲೆಯಲ್ಲಿ ಉಪ ವಿಭಾಗಾಧಿಕಾರಿಯಾಗಿದ್ದಾಗ ಏಕ ಕಾಲಕ್ಕೆ ಐದು ಪ್ರಭಾರ ಹುದ್ದೆಗಳನ್ನು ನಿಭಾಯಿಸುತ್ತಿದ್ದೆ. ಅಲ್ಲಿಯ ಆಶ್ರಯ ಮನೆ ಹಾಗೂ ಕೆಎಚ್‌ಬಿ ಹಗರಣ ಬಯಲಿಗೆಳೆದು ಸಿಒಡಿ ತನಿಖೆಯಾಗುವಂತೆ ಮಾಡಿದ್ದು ಮರೆಯಲಾರದ ಕೆಲಸ. ದುಡಿಯುವ ಮಹಿಳೆಗೆ ಧೈರ್ಯವೇ ಬಹುದೊಡ್ಡ ಬಂಡವಾಳ. 

(ಆಡಳಿತ ಸೂತ್ರ ಹಿಡಿದ ಯಶಸ್ವಿ ಮಹಿಳೆಯರ ಮನದಾಳದ ಮಾತುಗಳಿಗೆ ಭೂಮಿಕೆಯಾಗಿರುವ ಈ ಅಂಕಣ ಪ್ರತಿ ಹದಿನೈದು ದಿನಗಳಿಗೊಮ್ಮೆ ಪ್ರಕಟವಾಗುತ್ತದೆ.)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT