ADVERTISEMENT

ಕೇಕ್ ದರ್ಬಾರ್

​ಪ್ರಜಾವಾಣಿ ವಾರ್ತೆ
Published 11 ಮೇ 2012, 19:30 IST
Last Updated 11 ಮೇ 2012, 19:30 IST

ಅರಮನೆ ನಗರಿ ಮೈಸೂರಿನ ಯಾದವಗಿರಿಯ `ಟೂಟ್-ಸಿ~ ಹೆಸರಿನ ಬೇಕರಿ ಹಲವು ವಿಶೇಷಗಳಿಂದ ಗಮನ ಸೆಳೆಯುತ್ತದೆ. ಮಹಿಳೆಯರೇ ಇಲ್ಲಿ `ರಾಜ್ಯಭಾರ~ ನಡೆಸುತ್ತಿದ್ದಾರೆ.

600ಕ್ಕೂ ಹೆಚ್ಚಿನ ವಿನ್ಯಾಸದ ಶುಚಿ-ರುಚಿ ಕೇಕ್‌ಗಳು ಇಲ್ಲಿ ಸಿಗುತ್ತವೆ. ಈ ಚಿತ್ತಾಕರ್ಷಕ ಕೇಕ್‌ಗಳ ಖರೀದಿಗೆ ನೂರಾರು ಮಂದಿ ಭೇಟಿ ನೀಡುತ್ತಾರೆ. ಇದರ ಸ್ಥಾಪಕರು ಮಲೇಷ್ಯಾದಿಂದ ಬಂದ ಝರೀನಾ ಇಂತಿಯಾಜ್ ಎಂಬ ಮಹಿಳೆ ಎಂಬುದು ಎಲ್ಲಕ್ಕಿಂತ ವಿಶೇಷ.

`ಟೂಟ್-ಸಿ~ ಮನೆ ಹಾಗೂ ಬೇಕರಿ ರೂಪದಲ್ಲಿ ಕಾರ್ಯ ನಿರ್ವಹಿಸುತ್ತಿದೆ. ಎರಡೂವರೆ ದಶಕದಿಂದ ಇಲ್ಲಿ ಬೇಕರಿ ಉತ್ಪನ್ನಗಳ ವಹಿವಾಟು ನಡೆಯುತ್ತಿದೆ. ಬೇಕರಿ ಸ್ಥಾಪಕಿ ಝರೀನಾರ ಮೂಲ ನೆಲೆ ಭಾರತವಾದರೂ ಹುಟ್ಟಿ-ಬೆಳೆದದ್ದು ಮಲೇಷ್ಯಾದಲ್ಲಿ. ಇವರ ಅಜ್ಜ ತಮಿಳುನಾಡಿನ ಮದುರೈ ಪಟ್ಟಣದವರು.
 
ಸುಮಾರು ವರ್ಷಗಳ ಹಿಂದೆಯೇ ಮಲೇಷ್ಯಾದಲ್ಲಿ ನೆಲೆಗೊಂಡ್ದ್ದಿದರು. ತಂದೆ-ತಾಯಿಗೂ ಭಾರತದ ನಂಟು ಕಡಿಮೆ. ಹೀಗಾಗಿ ಝರೀನಾ ಅವರಿಗೆ ಮೈಸೂರು ಮಾತ್ರವಲ್ಲ ಭಾರತ ದೇಶವೇ ಅಪರಿಚಿತ.

ಪ್ರಾಥಮಿಕ ಹಂತದಿಂದ ಉನ್ನತ ಶಿಕ್ಷಣದವರೆಗೆ ಎಲ್ಲವನ್ನೂ ವಿದೇಶದಲ್ಲಿ ಪೂರೈಸಿದ್ದಾರೆ. ಬಾಲ್ಯದಲ್ಲಿ ಒಮ್ಮೆ ಮದುರೈ ಪಟ್ಟಣಕ್ಕೆ ಪೋಷಕರ ಜತೆಗೆ ಬಂದಿದ್ದ ನೆನಪು ಅವರ ಮನದಲ್ಲಿದೆ. ಇಂಥ ಕೌಟುಂಬಿಕ ಹಿನ್ನೆಲೆಯ ಮಹಿಳೆಗೆ ಮದುವೆ ಮೂಲಕ ಸಾಂಸ್ಕೃತಿಕ ನಗರಿಯೊಂದಿಗೆ ಅನನ್ಯ ಸಂಬಂಧ ಬೆಸೆದುಕೊಳ್ಳುತ್ತದೆ.

ಮೈಸೂರಿಗೆ ಭಾವ `ಬಂಧನ~:
ಎಂಜಿನಿಯರಿಂಗ್ ಓದಿರುವ ಪತಿ ಇಂತಿಯಾಜ್ ಮೈಸೂರಿನವರು. ಪತಿ ಕೈತುಂಬ ಸಂಬಳ ತರುತ್ತಿರುವುದರಿಂದ ಕುಟುಂಬ ನಿರ್ವಹಣೆಗೆ ಕಷ್ಟವಾಗಿರಲಿಲ್ಲ. ಮನೆ ಕೆಲಸ ಮಾಡಿಕೊಂಡಿದ್ದರೂ ಚೆನ್ನಾಗಿ ಬದುಕು ಸಾಗಿಸಬಹುದಿತ್ತು.
 
ಆದರೆ, ಬಿಡುವಿನ ವೇಳೆ ವ್ಯರ್ಥ ಮಾಡುವುದು ಅವರಿಗೆ ಸರಿ ಕಾಣಿಸಲಿಲ್ಲ. ಸೃಜನಶೀಲ ಕೆಲಸಕ್ಕೆ ಅವರ ಮನ ತುಡಿಯುತ್ತದೆ. ಮಲೇಷ್ಯಾದಲ್ಲಿ ಕಲಿತ ವಿದ್ಯೆ ಬಳಸಿಕೊಂಡು ಒಂದಷ್ಟು ಹಣ ಸಂಪಾದಿಸುವ ಚಿಂತನೆ ಮೊಳೆಯುತ್ತದೆ. ಬಾಲ್ಯದಲ್ಲಿ ತಾಯಿ ಹೇಳಿಕೊಟ್ಟ ಕೇಕ್ ತಯಾರಿಕೆ ಆಗ ನೆನಪಾಯಿತು.

ಕೇಕ್‌ಗಳಿಗೆ ಉತ್ತಮ ಬೇಡಿಕೆ ಇರುವ ಮೈಸೂರಿನಲ್ಲಿ ಒಂದು ಬೇಕರಿ ಆರಂಭಿಸುವುದು ಸೂಕ್ತ ಎಂಬ ನಿರ್ಧಾರಕ್ಕೆ ಬಂದರು. `ಬೇಕರಿ ಆರಂಭ ಕುರಿತು ಪತಿಯೊಂದಿಗೆ ಚರ್ಚಿಸಿದಾಗ ನನ್ನ ಉತ್ಸಾಹಕ್ಕೆ ಬೆಂಬಲವಾಗಿ ನಿಂತರು.

ಅಲ್ಪ ಹಣದ ಹೂಡಿಕೆಯಲ್ಲಿ ನಮ್ಮ `ಟೂಟ್-ಸಿ~ ಕಾರ್ಯಾರಂಭ ಮಾಡಿತು. ಎಲ್ಲ ಕೆಲಸವನ್ನು ನಾನೇ ನಿರ್ವಹಿಸಿದೆ. ಕೇಕ್‌ಗಳ ರುಚಿಗೆ ಜನ ಸೋತುಹೋದರು. ಆತಂಕದಲ್ಲಿ ಶುರು ಮಾಡಿದ ವ್ಯಾಪಾರ ಆತ್ಮವಿಶ್ವಾಸ ತುಂಬಿತು. ಮದುವೆಯಾದ ಒಂದೇ ವರ್ಷದಲ್ಲಿ ಒಂದಷ್ಟು ಹಣ ಗಳಿಸುವ ಮಟ್ಟಕ್ಕೆ ಬೆಳೆದಿದ್ದು ಮನೋಬಲ ಹೆಚ್ಚಿಸಿತು~ ಎನ್ನುತ್ತಾರೆ ಝರೀನಾ.

ಸ್ವಾವಲಂಬನೆಯ `ರುಚಿ~
ಪ್ರತಿದಿನ ಹೊಸ ಪ್ರಯೋಗ ಮಾಡುತ್ತ ಹೊಸ ರುಚಿ ಶೋಧಿಸಿದರು. ಕೇಕ್ ಜತೆಗೆ ಬಿಸ್ಕತ್, ಐಸ್ ಕ್ರೀಂ ತಯಾರಿಕೆಯೂ ಜೋರಾಗಿ ನಡೆಯಿತು. `ಟೂಟ್-ಸಿ~ ಬೇಕರಿ ಉತ್ಪನ್ನಗಳ ರುಚಿ ಇಷ್ಟಪಟ್ಟವರು ಮುಂಗಡವಾಗಿ ಬೇಡಿಕೆ ಇಡತೊಡಗಿದರು. ವ್ಯಾಪಾರ ದೊಡ್ಡದಾಗುತ್ತ ಸಾಗಿದಂತೆ ಒಬ್ಬರಿಗೆ ನಿರ್ವಹಣೆ ಕಷ್ಟವಾಯಿತು.
 
ಆಗ ಕೆಲವು ಮಹಿಳೆಯರನ್ನು ಕೆಲಸಕ್ಕೆ ನೇಮಿಸಿಕೊಂಡರು. ಮಹಿಳೆಯರನ್ನು ಸಂಬಳಕ್ಕೆ ಮಾತ್ರ ದುಡಿಸಿಕೊಳ್ಳದೆ ಕೇಕ್ ತಯಾರಿಕೆಯ ಸಮಗ್ರ ಮಾಹಿತಿಯನ್ನೂ ನೀಡಿದರು. ಕೇಕ್ ಸಿದ್ಧಮಾಡುವ ವಿಧಾನವನ್ನು ಒಂದು ಕೋರ್ಸ್‌ನಂತೆ ಹೇಳಿಕೊಟ್ಟರು. ಆರು ತಿಂಗಳ ಕಾಲ ತರಬೇತಿ ಪಡೆದವರು ಸ್ವಂತ ವ್ಯಾಪಾರ ಆರಂಭಿಸಲು ಮಾರ್ಗದರ್ಶನ ಸಹ ಮಾಡಿದರು.
 
ಹೀಗೆ ತರಬೇತಿ ಪಡೆದ 50ಕ್ಕೂ ಹೆಚ್ಚು ಗೃಹಿಣಿಯರು ವಿವಿಧೆಡೆ ಕೇಕ್ ವಹಿವಾಟು ನಡೆಸುತ್ತಿದ್ದಾರೆ. ಕಲಿಯುವ ಆಸಕ್ತಿಯಿಂದ ಬಂದವರಿಗೆ ಈಗಲೂ ತರಬೇತಿ ನೀಡುತ್ತಾರೆ.

ಮೊದಲು ನಾಲ್ಕೈದು ವಿನ್ಯಾಸಗಳಿಗೆ ಸೀಮಿತಗೊಂಡಿದ್ದು, ಈಗ 600 ಬಗೆಯ ಕೇಕ್‌ಗಳ ತಯಾರಿಸುವ ಮಟ್ಟಕ್ಕೆ `ಟೂಟ್-ಸಿ~ ಬೆಳೆದಿದೆ. ಆರೋಗ್ಯಕ್ಕೆ ಹಾನಿ ಮಾಡುವ ಅಂಶಗಳಿಂದ ತಮ್ಮ ಕೇಕ್‌ಗಳನ್ನು ಮುಕ್ತಗೊಳಿಸಿದ್ದಾರೆ. ರುಚಿಯೊಂದಿಗೆ ಗ್ರಾಹಕರ ಆರೋಗ್ಯ ರಕ್ಷಣೆಗೂ ಆದ್ಯತೆ ನೀಡಿದ್ದಾರೆ.
 
ಎಲ್ಲ ಬಗೆಯ ಕೇಕ್‌ಗಳ ಮಾಹಿತಿ ಒಳಗೊಂಡ ಮೆನು ರೂಪಿಸ್ದ್ದಿದು, ಅದರಲ್ಲಿ ಪ್ರತಿಯೊಂದಕ್ಕೂ ಸಂಖ್ಯೆಯನ್ನು ನಮೂದಿಸಿದ್ದಾರೆ. ಇದನ್ನು ನೋಡಿ ಗ್ರಾಹಕರು ಆರ್ಡರ್ ಕೊಡುತ್ತಾರೆ.
 
ಅರಮನೆ, ಚರ್ಚ್, ಮಕ್ಕಳ ಆಟಿಕೆ, ಕಾರ್ಟೂನ್, ಕಾರು, ಬೈಕ್, ಕಂಪೆನಿಗಳ ಲೋಗೋ... ಹೀಗೆ ತರಹೇವಾರಿ ಕೇಕ್‌ಗಳ ಮಾಹಿತಿ ಅದರಲ್ಲಿವೆ. ಜನರಿಗೆ ಇಷ್ಟವಾದ ವಿನ್ಯಾಸವನ್ನೂ ಕಾಲಮಿತಿಯಲ್ಲಿ ಪೂರೈಸುತ್ತಾರೆ. ಹುಟ್ಟುಹಬ್ಬ, ಪಾರ್ಟಿ, ಹೊಸ ವರ್ಷಾಚರಣೆ ಸಮಾರಂಭಕ್ಕೆ ಬುಕಿಂಗ್ ಪಡೆಯುತ್ತಾರೆ.

 ನಗರ ಪ್ರದೇಶಗಳ ಗೃಹಿಣಿಯರು, ವಿದ್ಯಾರ್ಥಿನಿಯರು ಮಾತ್ರವಲ್ಲದೇ ಹಳ್ಳಿ ಮಹಿಳೆಯರೂ ಇವರಲ್ಲಿ ತರಬೇತಿ ಪಡೆದಿದ್ದಾರೆ. ಗುಂಡ್ಲುಪೇಟೆ, ಚಾಮರಾಜನಗರ, ನಂಜನಗೂಡು, ಕುಶಾಲನಗರ. ಕೆ.ಆರ್. ನಗರ, ಪಿರಿಯಾಪಟ್ಟಣ, ಪಾಂಡವಪುರದ ಹಲವು ಮಹಿಳೆಯರು ಮೈಸೂರಿನ `ಟೂಟ್-ಸಿ~ನಲ್ಲಿ ಕೆಲಸ ಮಾಡಿ ತಮ್ಮ ಊರಿನಲ್ಲಿ ವ್ಯಾಪಾರ ಆರಂಭಿಸಿದ್ದಾರೆ.
ಪಾರ್ಟ್‌ಟೈಂ ಕೆಲಸ ಮಾಡಬಯಸುವ ವಿದ್ಯಾರ್ಥಿನಿಯರನ್ನು ತೊಡಗಿಸಿಕೊಂಡು ಅವರ ವಿದ್ಯಾಭ್ಯಾಸಕ್ಕೆ ನೆರವಾಗುತ್ತಿದ್ದಾರೆ. ಪ್ರಸ್ತುತ ವಿದ್ಯಾರ್ಥಿನಿಯರೂ ಸೇರಿ ಎಂಟು ಮಂದಿ ಕೆಲಸ ಮಾಡುತ್ತಿದ್ದಾರೆ. ಎಲ್ಲರಿಗೂ ಝರೀನಾ ಖುದ್ದು ಮಾರ್ಗದರ್ಶನ ನೀಡುತ್ತಾರೆ.

ಮೈಸೂರಿನ ಯಾದವಗಿರಿ ನಿವಾಸಿಗಳಿಗೆ, ಸುತ್ತಲಿನ ಕಾಲೇಜು ವಿದ್ಯಾರ್ಥಿಗಳಿಗೆ `ಟೂಟ್-ಸಿ~ ಕೇಕುಗಳೆಂದರೆ ಅಚ್ಚುಮೆಚ್ಚು. ಮೈಸೂರಿನಲ್ಲಿ ವರ್ಷದಾದ್ಯಂತ ನಡೆಯುವ ವಸ್ತು ಪ್ರದರ್ಶನದಲ್ಲಿ ಕೇಕ್‌ಗಳನ್ನು ಪ್ರದರ್ಶನಕ್ಕೆ ಇರಿಸುತ್ತಾರೆ. ದಸರಾ ಬಂದರೆ ಇವರ `ಕೇಕ್‌ಗಳ ದರ್ಬಾರ್~ ಜೋರಾಗಿರುತ್ತದೆ.

`1988ರಲ್ಲಿ ಬೇಕರಿ ಶುರು ಮಾಡಿದಾಗ ಇಷ್ಟೊಂದು ಯಶಸ್ಸು ಸಿಗುತ್ತದೆ ಎಂದು ಅನಿಸಿರಲಿಲ್ಲ. ಮಹಿಳೆಯರಿಗೆ ತರಬೇತಿ ನೀಡುತ್ತೇನೆ ಎಂಬ ಊಹೆಯನ್ನೂ ಮಾಡಿರಲಿಲ್ಲ.

ವಿದೇಶಿ ಮೂಲ ಹಾಗೂ ಅಲ್ಲಿ ಶಿಕ್ಷಣ ಪಡೆದಿದ್ದು ಮಾತ್ರವೇ ನನ್ನ ಮನೋಭಾವ ರೂಪಿಸಿದೆ ಎಂದು ನನಗೆ ಅನಿಸುವುದಿಲ್ಲ. ನನ್ನ ಬಳಿ ತರಬೇತಿಗೆ ಬಂದ ಸ್ಥಳೀಯ ಮಹಿಳೆಯರಲ್ಲಿ ನನಗಿಂತ ಹೆಚ್ಚಿನ ಛಲ, ಬುದ್ಧಿವಂತಿಕೆ ಇರುವುದನ್ನು ಗಮನಿಸಿದ್ದೇನೆ~ ಎನ್ನುತ್ತಾರೆ ಝರೀನಾ.

`ಮಹಿಳೆ ಹಣ ಗಳಿಸುವ ಆಸೆಯಿಂದ ಖುಷಿ ನೀಡದ ಸಣ್ಣ-ಪುಟ್ಟ ಕೆಲಸ ಮಾಡುವುದು ತರವಲ್ಲ. ಮತ್ತೊಬ್ಬರ ಕೈಯಲ್ಲಿ ಸಂಬಳಕ್ಕೆ ದುಡಿಯುವುದಕ್ಕಿಂತ ಇಂತಹ ಸಣ್ಣ ವ್ಯಾಪಾರವೇ ಲೇಸು. ಇದರಿಂದ ಮನೆ ಹಾಗೂ ಹೊರಗಿನ ಜವಾಬ್ದಾರಿ ಸಮರ್ಥವಾಗಿ ನಿಭಾಯಿಸಬಹುದು~ ಎನ್ನುತ್ತಾರೆ ಅವರು.

`ಟೂಟ್-ಸಿ~ ಬೇಕರಿಯ ಮಾಹಿತಿಗೆ 0821-2514717 ಸಂಪರ್ಕಿಸಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.