ADVERTISEMENT

ಗೊಂದಲವೇ ಖಿನ್ನತೆಗೆ ಕಾರಣವಾಗಿದೆ...

ಸುನೀತಾ ರಾವ್
Published 20 ಏಪ್ರಿಲ್ 2018, 19:30 IST
Last Updated 20 ಏಪ್ರಿಲ್ 2018, 19:30 IST
ಗೊಂದಲವೇ ಖಿನ್ನತೆಗೆ ಕಾರಣವಾಗಿದೆ...
ಗೊಂದಲವೇ ಖಿನ್ನತೆಗೆ ಕಾರಣವಾಗಿದೆ...   

1. ನಾನು ಸಾಫ್ಟ್‌ವೇರ್ ಉದ್ಯೋಗ ಬಿಟ್ಟು ಯುಪಿಎಸ್‌ಪಿ ಪರೀಕ್ಷೆಗೆ ಓದಲು ಪ್ರಾರಂಭಿಸಿದ್ದೇನೆ. ಆದರೆ ಈಗ ನನಗೆ ಅಭದ್ರತೆಯ ಭಾವ ಕಾಡುತ್ತಿದೆ. ಮತ್ತೆ ಮರಳಿ ಐಟಿ ಕ್ಷೇತ್ರಕ್ಕೆ ಹೋಗಬೇಕು ಎಂದರೆ ಈಗಾಗಲೇ ಒಂದೂವರೆ ವರ್ಷ ಕಳೆದಿದೆ. ಇದರಿಂದ ಇಕ್ಕಟ್ಟಿನಲ್ಲಿ ಸಿಲುಕಿ ಮಾನಸಿಕ ಖಿನ್ನತೆಯನ್ನು ಅನುಭವಿಸುತ್ತಿದ್ದೇನೆ. ಪರಿಹಾರವನ್ನು ಸೂಚಿಸಿ.

– ಹೆಸರು, ಊರು ಬೇಡ

ನೀವು ಇಲ್ಲಿ ಈಗಾಗಲೇ ಯುಪಿಎಸ್‌ಸಿ ಪರೀಕ್ಷೆ ತೆಗೆದುಕೊಂಡಿದ್ದೀರಾ ಅಥವಾ ಪರೀಕ್ಷೆ ತಯಾರಿಯಲ್ಲಿಯೇ ಇದ್ದೀರಾ ಎಂಬುದನ್ನು ತಿಳಿಸಿಲ್ಲ. ಅದೇನೇ ಇರಲಿ, ಯಾವುದರ ಬಗ್ಗೆಯೂ ಭಯಪಡಬೇಡಿ. ಪರೀಕ್ಷೆಯನ್ನು ಬರೆಯಿರಿ ಮತ್ತು ಅದರ ಮೇಲೆ ನಿಮ್ಮ ಗಮನವಿರಲಿ. ಆಗ ನಿಮ್ಮ ಗುರಿಯನ್ನು ಸುಲಭವಾಗಿ ತಲುಪಬಹುದು. ಅದರೊಂದಿಗೆ ಐಟಿ ಕ್ಷೇತ್ರದ ಬಗ್ಗೆಯೂ ಅಪ್‌ಡೇಟ್ ಆಗಿರಿ. ಇದರಿಂದ ನಿಮಗೆ ಯಾವಾಗ ಮರಳಿ ಆ ಕ್ಷೇತ್ರದಲ್ಲಿ ಕೆಲಸ ಮಾಡಬೇಕು ಅನ್ನಿಸುತ್ತದೋ ಆಗ ಸುಲಭವಾಗುತ್ತದೆ. ಕೆಲವು ಆನ್‌ಲೈನ್ ಕೋರ್ಸ್‌ಗಳು ನೀವು ಅ‍ಪ್‌ಡೇಟ್ ಆಗಿರಲು ಸಹಾಯ ಮಾಡುತ್ತವೆ, ಅವನ್ನು ಪರಿಶೀಲಿಸಿ. ಐಟಿ ಕ್ಷೇತ್ರದಲ್ಲಿ ಏನೇನಾಗುತ್ತಿದೆ ಎಂಬುದನ್ನು ತಿಳಿಯಲು ನಿಮ್ಮ ಸ್ನೇಹಿತರು ಹಾಗೂ ಸಹೋದ್ಯೋಗಿಗಳ ಜೊತೆ ಸಂಪರ್ಕದಲ್ಲಿರಿ.

ADVERTISEMENT

2. ನನಗೆ 27 ವರ್ಷ, ಇನ್ನೂ ಮದುವೆ ಆಗಿಲ್ಲ. ನಾನು ಇಷ್ಟಪಡುವ ಹಾಗೆ ಹುಡುಗ ಸಿಗುತ್ತಿಲ್ಲ ಎಂಬ ಕಾರಣಕ್ಕೆ ಮದುವೆಯನ್ನು ಮುಂದೆ ಹಾಕುತ್ತಾ ಬಂದಿದ್ದೇನೆ. ಮನೆಯಲ್ಲಿ ನನಗೆ ಇಷ್ಟವಾಗುವ ರೀತಿಯ ಹುಡುಗನನ್ನು ಹುಡುಕಿ ಎಂದರೂ‌ ತಲೆ ಕೆಡಿಸಿಕೊಳ್ಳುತ್ತಿಲ್ಲ. ಈಗ ನನಗೆ ಮದುವೆ ಎಂದರೆ ಭಯ ಎನ್ನುವ ಹಾಗೇ ಆಗಿದೆ

– ತನ್ಯಾ, ಕೆ. ಆರ್‌. ಪುರಂ

ನೀವು ಯಾವಾಗಲೂ ಒಂದು ವಿಷಯವನ್ನು ಸರಿಯಾಗಿ ನೆನಪಿನಲ್ಲಿಟ್ಟುಕೊಳ್ಳಿ. ನೀವು ಹೇಳುವ ಹಾಗೆ ಪರಿಪೂರ್ಣರಾಗಿರುವ ಅಥವಾ ಆದರ್ಶರಾಗಿರುವ ವ್ಯಕ್ತಿಯನ್ನು ನಿರೀಕ್ಷೆ ಮಾಡಬೇಕಾದರೆ ಮೊದಲು ನೀವು ಹಾಗೆಯೇ ಇರಬೇಕು. ಇದು ನೀವು ಮದುವೆಯ ಬಗ್ಗೆ ಗಂಭೀರವಾಗಿ ಯೋಚನೆ ಮಾಡಬೇಕಾದ ಸಮಯ. ವಯಸ್ಸು ಉರುಳುತ್ತಿದ್ದಂತೆ ಪರಿಸ್ಥಿತಿ ನಿಮ್ಮ ಕೈ ಮೀರಿ ಹೋಗುತ್ತದೆ.  ಸ್ನೇಹಿತರೊಂದಿಗೆ ಹಾಗೂ ಮನೆಯವರೊಂದಿಗೆ ನಿಮ್ಮ ಭಾವನೆಗಳನ್ನು ಯಾವುದೇ ಭಯವಿಲ್ಲದೆ ಹಂಚಿಕೊಳ್ಳುವುದು ತುಂಬ ಮುಖ್ಯ. ಪ್ರಾಮಾಣಿಕತೆ ಹಾಗೂ ಆತ್ಮವಿಶ್ವಾಸದಿಂದ ಕೂಡಿರುವ ವ್ಯಕ್ತಿಯನ್ನು ನೀವು ಬಯಸುತ್ತಿದ್ದರೆ ಆದರೆ ಮೊದಲು ನೀವು ಕೂಡ ಹಾಗೆಯೇ ಇರಬೇಕಲ್ಲವೆ? ಮದುವೆಗೆ ಮೊದಲೇ ಆಪ್ತಸಮಾಲೋಚನೆಯನ್ನು ಪಡೆದುಕೊಳ್ಳಿ. ಭವಿಷ್ಯದಲ್ಲಿ ನೀವು ಎದುರಿಸುವ ಸಂಘರ್ಷಗಳ ಕಾರಣವನ್ನು ಮೊದಲೇ ತಿಳಿಯಲು ಅದರಿಂದ ಸಹಾಯವಾಗುತ್ತದೆ.

3. ನನಗೆ ಭಯ, ಆತಂಕ, ಹೆದರಿಕೆ ಜಾಸ್ತಿ. ಇದರಿಂದ ಜೀವನದಲ್ಲಿ ತುಂಬ ಬೇಸರಗೊಂಡಿದ್ದೇನೆ. ಏನೇ ಕೆಲಸ ಮಾಡಲು ಹೊರಟರೂ, ಮುಂದೆ ಏನಾಗುತ್ತದೆಯೋ ಎಂಬ ಆತಂಕ ಕಾಡುತ್ತದೆ.

– ಪುಷ್ಪಾ, ಊರು ಬೇಡ

ನೀವು ಭಯ ಹಾಗೂ ಆತಂಕದಿಂದ ಹೊರ ಬರಬೇಕಾದರೆ ಇವೆರಡೂ ಕೇವಲ ಭಾವನೆಗಳಷ್ಟೇ ಎಂಬುದನ್ನು ಮೊದಲು ಅರ್ಥ ಮಾಡಿಕೊಳ್ಳಬೇಕು. ನಿಮ್ಮ ಅನುಭವಕ್ಕೆ ಬರುವ ಕೋಪ, ನಿರಾಶೆ, ಖಿನ್ನತೆ, ಸಂತೋಷ, ಆತ್ಮವಿಶ್ವಾಸ, ಉತ್ಸಾಹ, ಒಲವು – ಇತ್ಯಾದಿಗಳಂತೆ ಭಯ–ಆತಂಕಗಳು ಕೂಡ ಭಾವನೆಗಳಷ್ಟೇ. ಯಾವುದು ಭಯ, ಯಾವುದು ಆತಂಕ – ಎಂದು ಕೆಲವು ಸಂದರ್ಭಗಳಲ್ಲಿ ವಿವರಿಸುವುದು ಕಷ್ಟ. ನಿಮ್ಮ ಮನಃಸ್ಥಿತಿ ಹೇಗಿದೆ ಹಾಗೂ ದೇಹದ ಹಾವಭಾವಗಳು ಹೇಗೆ ಪ್ರಕಟವಾಗುತ್ತಿವೆ ಎನ್ನುವುದು ನಿಮ್ಮ ಮನಸ್ಸಿನಲ್ಲಿರುವ ಭಾವನೆಯನ್ನು ತೋರಿಸುವ ಮೊದಲ ಅಂಶ ಎನ್ನಬಹುದು. ಅಂತಹ ಸಮಯದಲ್ಲಿ ನಿಮ್ಮಲ್ಲಿ ದೀರ್ಘವಾಗಿ ಉಸಿರಾಡಲು ಕಷ್ಟವಾಗಬಹುದು; ನೀವು ಮೌನಕ್ಕೆ ಶರಣಾಗಬಹುದು; ಎಲ್ಲಿಗೂ ಹೋಗಲು ಇಷ್ಟವಾಗದಿರಬಹುದು; ಯಾರನ್ನೂ ನೇರವಾಗಿ ನೋಡಲು ಸಾಧ್ಯವಾಗದಿರಬಹುದು. ನೀವು ನಿಮ್ಮ ದೇಹವನ್ನು ಹೆಚ್ಚು ಚಟುವಟಿಕೆಯಿಂದಿರಿಸುವ ಅಭ್ಯಾಸಗಳನ್ನು ರೂಢಿಸಿಕೊಳ್ಳಿ. ನಡಿಗೆ, ಓಡುವುದು, ವ್ಯಾಯಾಮಗಳನ್ನು ತಪ್ಪದೆ ಮಾಡಿ. ಪ್ರಾಣಾಯಾಮವನ್ನೂ ಅಭ್ಯಸಿಸಿ. ನೀವು ಹೆಚ್ಚು ಕ್ರಿಯಾಶೀಲವಾದಷ್ಟೂ ನಿಮ್ಮ ಗಮನ ಭಯ ಹಾಗೂ ಆತಂಕದಿಂದ ಮುಕ್ತವಾಗುತ್ತದೆ. ಧನಾತ್ಮಕ ಯೋಚನೆಗಳ ಮೇಲೆ ಹೆಚ್ಚು ಗಮನವನ್ನು ನೀಡಿ. ನಿಮಗೆ ಇಷ್ಟವಾದ ವಿಷಯಯಗಳಲ್ಲಿ ಹೆಚ್ಚು ಆಸಕ್ತಿಯಿಂದ ತೊಡಗಿಕೊಳ್ಳಿ.

ನಿಮ್ಮ ಭಾಷೆ, ಆಲೋಚನೆ ಹಾಗೂ ನಂಬಿಕೆಗಳು ನಿಮ್ಮ ಭಾವನೆಗಳ ಮೇಲೆ ಪರಿಣಾಮವನ್ನು ಬೀರುತ್ತವೆ. ಭಯ ಹಾಗೂ ಆತಂಕಗಳು ನಿಮ್ಮ ವಶಕ್ಕೆ ಬರಲು ಮೊದಲು ನಿಮ್ಮ ನಂಬಿಕೆಗಳನ್ನೂ ಆಲೋಚನೆಗಳನ್ನೂ ಬದಲಾಯಿಸಿಕೊಳ್ಳಬೇಕು. ನಿಮ್ಮ ಮಾತಿನ ಮೇಲೆ ನಿಮಗೆ ನಿಯಂತ್ರಣವಿರಲಿ; ಅವನ್ನು ಧನಾತ್ಮಕ ವಾಕ್ಯಗಳಾಗಿ ಬದಲಾಯಿಸಿಕೊಳ್ಳಿ. ‘ಹೌದು, ಇದು ನನ್ನಿಂದ ಸಾಧ್ಯ’ ಎಂಬುದೇ ನಿರ್ಧಾರವಾಗಲಿ. ದೈಹಿಕ ದೃಢತೆಯನ್ನೂ ಕಾಪಾಡಿಕೊಳ್ಳಿ. ನಿಮ್ಮ ವ್ಯಕ್ತಿತ್ವದಲ್ಲಿ ಬದಲಾವಣೆಯಾದಂತೆಲ್ಲ ಭಯ–ಆತಂಕಗಳೂ ನಿಮ್ಮಿಂದ ದೂರವಾಗುತ್ತಹೋಗುತ್ತವೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.