ADVERTISEMENT

ಚಿನ್ನದ ಹುಡುಗಿ ರತ್ನಾಗೆ ಶಿಕ್ಷಕಿಯಾಗುವಾಸೆ...

ಶಿವರಂಜನ್ ಸತ್ಯಂಪೇಟೆ
Published 27 ಜನವರಿ 2012, 19:30 IST
Last Updated 27 ಜನವರಿ 2012, 19:30 IST

`ತರಗತಿಯಲ್ಲಿ ಶಿಕ್ಷಕರು ಹೇಳುವುದನ್ನು ಗಮನವಿಟ್ಟು ಕೇಳಿ, ಕೇಳಿದ್ದನ್ನು ಚೆನ್ನಾಗಿ ಮನವರಿಕೆ ಮಾಡಿಕೊಳ್ಳಲು ಪ್ರತಿದಿನ ಮೂರು ಗಂಟೆ ಓದುತ್ತಿದ್ದೆ. ಓದಿದ್ದನ್ನು ಬರೆಯುವ ರೂಢಿ ಮಾಡಿಕೊಂಡಿದ್ದೆ. ಇದರಿಂದಾಗಿಯೇ ನಾನು ಚಿನ್ನದ ಪದಕ ಪಡೆಯಲು ಸಾಧ್ಯವಾಯಿತು~-

ಇದು ಗುಲ್ಬರ್ಗದಲ್ಲಿ ಸ್ಥಾಪಿಸಲಾಗಿರುವ ಕರ್ನಾಟಕದ ಏಕೈಕ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದಿಂದ ಇಂಗ್ಲಿಷ್ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದು ಪ್ರಥಮ ಚಿನ್ನದ ಪದಕ ಮುಡಿಗೇರಿಸಿಕೊಳ್ಳಲಿರುವ ರತ್ನಾಬಾಯಿ ಅವರ ಮನದಾಳದ ಮಾತು.
ಮಹಿಳೆಯರಿಗೆ ಶಿಕ್ಷಣ ನೀಡದಿದ್ದರೆ ದೇಶದ ಅರ್ಧ ಪ್ರಗತಿ ಕುಂಠಿತ ಎಂದು ಹೇಳಿರುವ ಮಹಾತ್ಮ ಗಾಂಧೀಜಿ ಮಾತುಗಳನ್ನು ಮನಗಂಡಿರುವ ನಮ್ಮ ಇಂದಿನ ಸಮಾಜ ಮಹಿಳೆಯರಿಗೆ ಉತ್ತಮ ಅವಕಾಶ ನೀಡುತ್ತಿದೆ. ಮಹಿಳೆ ಕೂಡ ತನಗೆ ಸಿಕ್ಕ ಅವಕಾಶಗಳನ್ನು ಸದುಪಯೋಗಪಡಿಕೊಂಡು ಪ್ರತಿಯೊಂದು ಕ್ಷೇತ್ರದಲ್ಲಿ ತನ್ನ ಸಾಮರ್ಥ್ಯವನ್ನು ರುಜುವಾತು ಪಡಿಸುತ್ತಿದ್ದಾಳೆ.

`ಹೆಣ್ಣೊಂದು ಕಲಿತರೆ ಶಾಲೆಯೊಂದು ತೆರೆದಂತೆ~ ಎನ್ನುವ ಮಾತಿನಂತೆ ಮಹಿಳೆಯರಿಗೆ ಶಿಕ್ಷಣ ನೀಡುವುದರಿಂದ ತನ್ನ ಉದ್ಧಾರದ ಜೊತೆಗೆ ಸಮಾಜ ಉದ್ಧಾರಕ್ಕೂ ತೊಡಗುವಂತಾಗುತ್ತದೆ. ಬದಲಾದ ಈ ಕಾಲದಲ್ಲಿ ಮಹಿಳೆಯರು ಸ್ವಾವಲಂಬನೆ ಮೂಲಕ ಬದುಕಿನ ದಾರಿ ಕಂಡುಕೊಳ್ಳಬೇಕು ಎಂಬುದು ರತ್ನಾಬಾಯಿ ಅವರ ಇರಾದೆ. 

ADVERTISEMENT

ಆಳಂದ ತಾಲ್ಲೂಕಿನ ಮದಗುಣಕಿ ಗ್ರಾಮದ ಶರಣಬಸಪ್ಪ ಮತ್ತು ಜಗದೇವಿ ದಂಪತಿಯ ಹಿರಿಯ ಪುತ್ರಿ ರತ್ನಾಬಾಯಿ ಸ್ನಾತಕೋತ್ತರ ಪದವಿಯಲ್ಲಿ ಶೇ. 73 ಅಂಕಗಳನ್ನು ಗಳಿಸಿದಾಕೆ; ಮಧ್ಯಮ ವರ್ಗದ ಕೃಷಿಕ ಕುಟುಂಬದ ಹಿನ್ನೆಲೆಯಿಂದ ಬಂದವರು. ಒಂದನೇ ತರಗತಿಯಿಂದ ಹತ್ತನೇ ತರಗತಿವರೆಗೆ ಗ್ರಾಮೀಣ ಪ್ರದೇಶದಲ್ಲಿ ಕನ್ನಡ ಮಾಧ್ಯಮದಲ್ಲಿ ಅಭ್ಯಾಸ ಮಾಡಿ ಮುಂದೆ ಬಿ.ಎ. ತರಗತಿಯಲ್ಲಿ ಇಂಗ್ಲಿಷ್ ವಿಷಯವನ್ನು ಐಚ್ಛಿಕವಾಗಿ ತೆಗೆದುಕೊಂಡು ಕಠಿಣ ಪರಿಶ್ರಮದ ಮೂಲಕ ಆಂಗ್ಲ ಭಾಷೆಯಲ್ಲಿ ಹಿಡಿತ ಸಾಧಿಸಿದವರು.

ಅಪ್ಪ ಒಕ್ಕಲುತನದ ಕಾಯಕದಲ್ಲಿ ತೊಡಗಿದ್ದರೆ ಅಮ್ಮ ಗೃಹಿಣಿಯಾಗಿದ್ದಾರೆ. ಸಹೋದರಿ ಸುರೇಖಾ ಇದೇ ವಿವಿಯಲ್ಲಿ ನಾಲ್ಕನೇ ಸೆಮಿಸ್ಟರ್‌ನಲ್ಲಿ ಓದುತ್ತಿದ್ದು, ಸಹೋದರ ಸಿದ್ಧಲಿಂಗ ಪಾಟೀಲ ಸಹ ಇದೇ ವಿವಿಯಿಂದ ಎಂಎ ಪದವಿ ಪಡೆದು ಇದೀಗ ಬಿಎಡ್ ವ್ಯಾಸಂಗ ಮಾಡುತ್ತಿದ್ದಾರೆ.

ಕೊನೆಯ ಸಹೋದರ ಮಂಜುನಾಥ ಪಾಟೀಲ ಬಿಎ ಪದವಿಯಲ್ಲಿ ಅಭ್ಯಾಸ ಮಾಡುತ್ತಿದ್ದಾರೆ ಎಂದು ಹೇಳುತ್ತ ಮಾತಿಗಿಳಿದರು.

ಚಿಕ್ಕಪ್ಪ ಶ್ರೀಶೈಲ ಮಾಳಗೆ ಅವರ ಮಾರ್ಗದರ್ಶನ ಪಡೆದು ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ಪ್ರವೇಶ ಪಡೆಯುವಾಗ ಮೊದಲು ನನ್ನಲ್ಲಿ ಭಯ ಆವರಿಸಿತ್ತು. ಆದರೆ ಅಲ್ಲಿನ ಶಿಕ್ಷಕರು, ಸಿಬ್ಬಂದಿ ಹಾಗೂ ಆಡಳಿತ ಮಂಡಳಿಯ ಸ್ನೇಹಪರ ವರ್ತನೆ ಕ್ರಮೇಣವಾಗಿ ಆಪ್ತ ಎನಿಸಿತು. ಬೆಳಿಗ್ಗೆ 7.30ರಿಂದ 8.30ರವರೆಗೆ ಸ್ಥಳೀಯ ಖಾಸಗಿ ಪ್ರೌಢಶಾಲೆಯೊಂದರಲ್ಲಿ ಪಾಠ ಮಾಡಿ ಮತ್ತೆ ವಿಶ್ವವಿದ್ಯಾಲಯಕ್ಕೆ ಬರುತ್ತಿದ್ದೆ. ಗ್ರಂಥಾಲಯದಲ್ಲಿ ಸುಮಾರು ಅರ್ಧ ಗಂಟೆಗೂ ಹೆಚ್ಚು ಕಾಲ ಪಠ್ಯಕ್ಕೆ ಸಂಬಂಧಿಸಿದ ಮತ್ತು ಅದಕ್ಕೆ ಪೂರಕವಾಗುವ ಪುಸ್ತಕಗಳನ್ನು ಓದುತ್ತಿದ್ದೆ.

ಮೊದಲ ಸೆಮಿಸ್ಟರ್‌ನಲ್ಲಿ 600 ಅಂಕಗಳಿಗೆ 400 ಅಂಕ ಗಳಿಸಿದಾಗ ಗೋಲ್ಡ್ ಮೆಡಲ್ ಪಡೆಯುತ್ತೇನೆ ಎಂಬ ವಿಶ್ವಾಸ ಇರಲಿಲ್ಲ. ಬಳಿಕ ಮೂರನೇ ಸೆಮಿಸ್ಟರ್‌ನಲ್ಲಿ 700 ಅಂಕಗಳಿಗೆ 532 ಅಂಕಗಳನ್ನು ಗಳಿಸಿದಾಗ ಖಂಡಿತ ನಾನು ಗೋಲ್ಡ್ ಮೆಡಲ್ ಪಡೆಯುತ್ತೇನೆ ಎಂಬ ಆತ್ಮವಿಶ್ವಾಸ ಮೂಡಿತು.

ಪ್ರತಿ ಶನಿವಾರ ವಿಶ್ವವಿದ್ಯಾಲಯದಲ್ಲಿ ನಡೆಸಲಾಗುವ `ಮೂವಿ ಸ್ಕ್ರೀನಿಂಗ್~ನಲ್ಲಿ ಹೋಮರ್‌ನ ಇಲಿಯಡ್ ಮತ್ತು ಒಡಿಸ್ಸಿ,  ರವೀಂದ್ರನಾಥ ಟ್ಯಾಗೋರ್ ಅವರ ಗೋರಾ, ಎಮಿಲಿ ಬ್ರಾಂಟೆ ಅವರ ವುದ್‌ರಿಂಗ್ ಹೈಟ್ಸ್, ವೈದೇಹಿ ಮತ್ತು ವೀಣಾ ಶಾಂತೇಶ್ವರ ಅವರ ಸಣ್ಣಕಥೆಗಳ ಜೊತೆಗೆ ಕೆ.ಪಿ. ಪೂರ್ಣಚಂದ್ರ ತೇಜಸ್ವಿ, ಡಾ. ಯು.ಆರ್. ಅನಂತಮೂರ್ತಿ ಅವರ ಕಾದಂಬರಿಗಳನ್ನು ಸ್ಕ್ರೀನ್ ಮೇಲೆ ನೋಡುವ ಮತ್ತು ಓದುವ ಅವಕಾಶ . ಜೊತೆಗೆ ಶಿಕ್ಷಕರು ಹೇಳಿಕೊಡುವ ಪರಿಣಾಮಕಾರಿ ಪಾಠದಿಂದ ಪರೀಕ್ಷೆಯಲ್ಲಿ ಇಷ್ಟೊಂದು ಅಂಕ ಗಳಿಸಲು ಸಾಧ್ಯವಾಯಿತು. ಕೇಂದ್ರೀಯ ವಿವಿಯಿಂದ ಮೊದಲ ಚಿನ್ನದ ಪದಕ ಪಡೆದಿರುವುದರಿಂದ ನಿಜಕ್ಕೂ ಖುಷಿಯಾಗುತ್ತಿದೆ ಎಂದು ಮಾತು ಮುಗಿಸಿದರು.

ಶುದ್ಧತೆ ಮತ್ತು ನ್ಯಾಯ ಇಷ್ಟಪಡುವ ರತ್ನಾಗೆ ಉತ್ತಮ ಉಪನ್ಯಾಸಕಿ ಆಗುವ ಆಸೆ. ಒಂದು ವೇಳೆ ಅದು ಈಡೇರದಿದ್ದರೆ ತನ್ನಲ್ಲಿರುವ ಪ್ರತಿಭೆಯಿಂದಲೇ ಜೀವನ ನಡೆಸುವ ಇಚ್ಛೆ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.