ADVERTISEMENT

ಡೊಳ್ಳ ಗೆದ್ದ; ವಡೆ ಮೆದ್ದ

ಒಡಲ ದನಿ

ಡಾ.ಸುಶಿ ಕಾಡನಕುಪ್ಪೆ
Published 12 ಜುಲೈ 2013, 19:59 IST
Last Updated 12 ಜುಲೈ 2013, 19:59 IST
ಡೊಳ್ಳ ಗೆದ್ದ; ವಡೆ ಮೆದ್ದ
ಡೊಳ್ಳ ಗೆದ್ದ; ವಡೆ ಮೆದ್ದ   

ರೈಲಿನಲ್ಲಿ ಮಂಗಳೂರಿನಿಂದ ಕಾಸರಗೋಡಿಗೆ ಪ್ರಯಾಣ ಬೆಳೆಸಿದ್ದೆವು. ರೈಲು ಇನ್ನೂ ಮಂಗಳೂರು ಸ್ಟೇಷನ್ ಬಿಟ್ಟಿರಲಿಲ್ಲ. ನಾವು ಸಾಮಾನ್ಯ ಬೋಗಿಯಲ್ಲಿ ಕುಳಿತಿದ್ದೆವು. ಪ್ರಯಾಣಿಕರು ರೈಲು ಹತ್ತಿ ಕೂರುತ್ತಿದ್ದರು. ಆಗ ನಮ್ಮ ಎದುರಿಗೆ ಮೂವರು ಕೂಲಿ ಕಾರ್ಮಿಕರು ಬಂದು ಕುಳಿತರು.

ಮಾತು ಕೇಳಿದರೆ ಅವರು ಉತ್ತರ ಭಾರತದ ಯಾವುದೋ ಪ್ರದೇಶದವರಾಗಿದ್ದು, ಕಡು ಬಡತನದಲ್ಲಿ ಬೆಂದು ಹೊಟ್ಟೆಪಾಡಿಗೆ ದಿನಗೂಲಿ ಮಾಡುವವರಂತೆ ಇದ್ದರು. ಅವರ‌್ಯಾರೂ ಇನ್ನೂ ತಿಂಡಿ ತಿಂದಿರಲಿಲ್ಲ ಎಂಬುದು ಅವರ ಮಾತಿನಿಂದ ತಿಳಿದುಬಂತು. ರೈಲಿನಲ್ಲಿ ತಿಂಡಿ ಕಾಫಿ ಮಾರುವವನು ಇಡ್ಲಿ, ವಡೆ, ಕಾಫಿ ಎಂದು ಕೂಗುತ್ತಿದ್ದ. ತಿಂಡಿಯ ಘಮಲಿಗೆ ಹಸಿದ ಆ ಮೂವರ ಬಾಯಲ್ಲಿ ನೀರೂರುತ್ತಿತ್ತು. ಅವರ ಕಣ್ಣುಗಳು ಅವನು ಹಿಡಿದ ತಿಂಡಿಯನ್ನೇ ಹಿಂಬಾಲಿಸುತ್ತಿದ್ದವು. ಆದರೂ ಯಾರೂ ಅವನನ್ನು ಕರೆದು ತಿಂಡಿ ಕೊಳ್ಳಲು ಮುಂದಾಗಲಿಲ್ಲ. ಸಹ ಪ್ರಯಾಣಿಕರು ತಿಂಡಿ ಕೊಂಡು ಬಿಸಿ ಬಿಸಿ ಕಾಫಿ ಜೊತೆ ಮೆಲ್ಲುವುದನ್ನೇ ನೋಡಿ ಕಣ್ತುಂಬಿಕೊಳ್ಳುತ್ತಿದ್ದರು.

ಆ ಮೂವರಲ್ಲಿ ಒಬ್ಬ ಅತ್ಯಂತ ಮುಗ್ಧನಂತಿದ್ದ. ಇನ್ನಿಬ್ಬರು ಅವನನ್ನು ಯಾವ ಯಾವುದೋ ವಿಷಯಕ್ಕೆ ರೇಗಿಸುತ್ತಿದ್ದರು. ಆತ ಸ್ವಲ್ಪವೂ ಬೇಜಾರು ಮಾಡಿಕೊಳ್ಳದೆ ತನಗೇನನ್ನಿಸುತ್ತದೋ ಅದನ್ನು ಹೇಳಿ ಸುಮ್ಮನಾಗುತ್ತಿದ್ದ. ಬೆವೆತ ಮುಖವನ್ನು ಹೆಗಲಿನ ಮೇಲಿದ್ದ ಟವಲಿನಿಂದ ಆಗಾಗ ಒರೆಸಿಕೊಳ್ಳುತ್ತಾ ತಿಂಡಿ ಮಾರುವವನ ಕಡೆ ಆಸೆ ಕಂಗಳಿಂದ ನೋಡುತ್ತಿದ್ದ. ಅವರಲ್ಲಿ ಡೊಳ್ಳಗಿದ್ದ ಮತ್ತೊಬ್ಬ ಆಸಾಮಿಗೆ ತಿನ್ನುವ ಆಸೆ ಅತಿಯಾಯಿತೆಂದು ಕಾಣುತ್ತದೆ.

ಆದರೆ ಅವನು ಜೇಬು ಬಿಚ್ಚಲು ಮಾತ್ರ ತಯಾರಿರಲಿಲ್ಲ. ಡೊಳ್ಳ ವ್ಯಕ್ತಿ ಈ ಮುಗ್ಧನಿಗೆ `ನೀ ಯಾಕೆ ವಡೆ ಕೊಳ್ಳಬಾರದು' ಎಂದು ಆಸೆ ತೋರಿಸಲು ಶುರು ಮಾಡಿದ. `ಆಹಾ! ನೋಡು ಹೇಗೆ ಆಸೆ ಕಂಗಳಿಂದ ವಡೆಗಳನ್ನೇ ನೋಡುತ್ತ ಬಾಯಲ್ಲಿ ನೀರು ಸುರಿಸುತ್ತಿರುವೆ.  ಇಷ್ಟೊಂದು ನೀರು ಸುರಿಸುವ ಬದಲು ಒಂದೆರಡು ವಡೆ ಕೊಂಡುಕೋ ಏನೀಗ' ಎಂದ. ಮೂರನೆಯವನು ಈ ಡೊಳ್ಳನ ಕಿಮ್ಮತ್ತು ಮತ್ತು ಮುಗ್ಧನ ಪರದಾಟ ಎರಡನ್ನೂ ನೋಡಿ ನಗುತ್ತಾ ಖುಷಿ ಪಡುತ್ತಿದ್ದ. ಆ ಮುಗ್ಧನೋ ಡೊಳ್ಳನ ಮಾತುಗಳಿಗೆ ನಿಧಾನವಾಗಿ ಮಾರುಹೋಗುತ್ತಿರುವುದನ್ನು ಅವನ ಕಣ್ಣುಗಳಲ್ಲಿನ ಆಸೆಯೇ ಸಾರಿ ಹೇಳುತ್ತಿತ್ತು. ಕೊನೆಗೂ ಹಸಿವು ತಿಂಡಿ ಮಾರುವವನನ್ನು ಅವನು ಕರೆಯುವಂತೆ ಮಾಡಿತು.

ಅವನು ಇವನ ಬಳಿ ಬಂದು `ಏನು ಕೊಡಲಿ' ಎನ್ನುತ್ತಾ ಬೇರೆಯವರಿಗೆ ಕಾಫಿ ಬಗ್ಗಿಸಿಕೊಡುತ್ತಿದ್ದ. ಈ ಮುಗ್ಧ ಹಸಿವಿಗೆ ಇಡ್ಲಿ ತಿನ್ನುತ್ತಾನೇನೋ ಎಂದುಕೊಂಡರೆ, ಡೊಳ್ಳ ಬಿಡಬೇಕಲ್ಲ! ಡೊಳ್ಳನಿಗೆ ಉದ್ದಿನ ವಡೆ ತಿನ್ನುವ ಆಸೆ ಆಯಿತೇನೊ, `ಅದೇನದು ಇಡ್ಲಿ? ವಡೆ ತಗೊ' ಎಂದು ಕಿಚಾಯಿಸಿದ. ಬಹುಶಃ ಮುಗ್ಧ ಉದ್ದಿನ ವಡೆಯನ್ನು ಎಂದೂ ತಿಂದಿರಲೇ ಇಲ್ಲವೆಂದು ಕಾಣುತ್ತದೆ. ಡೊಳ್ಳ ಆತನಿಗೆ ಯೋಚಿಸಲು ಅವಕಾಶವೇ ಕೊಡದಂತೆ `ಮೂರು ತೆಗೆ, ನಾವು ಮೂವರಿದ್ದೇವಲ್ಲ' ಎಂದು ಹೇಳಿಕೊಟ್ಟ. ಸರಿ ತಿಂಡಿಯವನಿಗೆ ಮೂರು ಎಂದಿದ್ದಾಯಿತು. ಅವನು ಮೂರು ವಡೆ ತೆಗೆದು ಪೇಪರ್ ತಟ್ಟೆಗೆ ಹಾಕಿ ಚಟ್ನಿ ಇನ್ನೂ ಹಾಕಿರಲಿಲ್ಲ ಆಗಲೇ `ಇದಕ್ಕೆ ದುಡ್ಡು ಯಾರು ಕೊಡಬೇಕು' ಎಂಬ ಚರ್ಚೆ ಶುರುವಾಯಿತು. ಆಗ ಡೊಳ್ಳ ಒಂದು

ವಡೆಗೆ ಎಷ್ಟು ಎಂದು ಕೇಳಲು, `8 ರೂಪಾಯಿ' ಎಂದು ತಿಂಡಿಯವನು ಹೇಳಿದ್ದೇ ತಡ, ಡೊಳ್ಳ ಮುಖ ಅತ್ತ ಮಾಡಿ ಕುಳಿತ.
ವಡೆಯ ಬೆಲೆ ಕೇಳಿ ಮುಗ್ಧನಿಗೆ ಎದೆ ಬಡಿತವೇ ನಿಂತು ಹೋದಂತೆ ಒಂದು ಕ್ಷಣ ಮುಖವೆಲ್ಲಾ ಬಿಳುಚಿಕೊಂಡಿತು. ತಕ್ಷಣವೇ `ನನಗೆ ವಡೆ ಬೇಡ, ವಾಪಸ್ ತಗೋ' ಎಂದು ತಿಂಡಿಯವನಿಗೆ ಖಡಾಖಂಡಿತವಾಗಿ ಹೇಳಿದ. ಆದರೆ ತಿಂಡಿಯವನು `ಹಾಗೆಲ್ಲ ಕೊಟ್ಟ ಮೇಲೆ ವಾಪಸ್ ತಗೊಳಲ್ಲ. ನೀ ಮುಟ್ಟಿದ್ದು ಬೇರೆಯವರು ಕೊಳ್ಳಲ್ಲ' ಎಂದು ಹೇಳಿ ವಡೆ ತುಂಬಿದ ತಟ್ಟೆಯನ್ನು ಅವನ ಮುಂದೆ ಇಟ್ಟು ಚಟ್ನಿ ಹಾಕಲು ಮುಂದಾದ. ಚಟ್ನಿಗೆ ಮತ್ತೆ ಎಲ್ಲಿ ದುಡ್ಡು ಕೇಳುವನೋ ಎಂಬ ಭಯದಿಂದ ಚಟ್ನಿಯೇ ಬೇಡವೆಂದು ತಡೆದ. ಚಟ್ನಿಯೂ ವಡೆಯ ಜೊತೆಯೇ ಬರುವುದೆಂಬುದೂ ತಿಳಿದಿರಲಿಲ್ಲ ಅವನಿಗೆ. ಒಂದು ವಡೆಗೆ 8 ರೂಪಾಯಿಯಾದರೆ 3ಕ್ಕೆ ಎಷ್ಟು ಎಂದು ಲೆಕ್ಕ ಹಾಕಿ ಹೌಹಾರಿದ.

ಮೂರನೆಯವನು ಮತ್ತು ಡೊಳ್ಳ ದೊಡ್ಡ ಸಾಧನೆ ಮಾಡಿದವರಂತೆ ಇವನನ್ನು ಕಿಚಾಯಿಸುತ್ತಾ, `ಕೊಳ್ಳಲು ಆಗದಿದ್ದರೆ ಯಾಕೆ ತಗೊಂಡೆ, ಈಗ ನೋಡು ಜೇಬು ಬಿಚ್ಚಲು ಹೇಗೆ ಪರದಾಡುತ್ತಿದ್ದೀ' ಎನ್ನುತ್ತಾ ನಗತೊಡಗಿದರು. ಮುಗ್ಧನಿಗೆ ಬೇರೆ ದಾರಿಯೇ ಇರಲಿಲ್ಲ. ತಿಂಡಿಯವನು ವಾಪಸ್ ತೆಗೆದುಕೊಳ್ಳಲು ತಯಾರಿರಲಿಲ್ಲ. ಅವನ ಸ್ನೇಹಿತರು ಆಡಿಕೊಳ್ಳುವುದರಲ್ಲೇ ಖುಷಿ ಪಡುತ್ತಿದ್ದುದನ್ನು ನೋಡಿದ ಸಹ ಪ್ರಯಾಣಿಕರಿಗೂ ಇವನ ಮೇಲೆ ಅನುಕಂಪ ಮೂಡುತ್ತಿತ್ತು.

ಹಸಿವು, ಆಸೆ ಒಂದು ಕಡೆಯಾದರೆ ಸಂಕೋಚ, ಏನು ಮಾಡಲೂ ತೋಚದ ಮುಗ್ಧತೆ ಇನ್ನೊಂದು ಕಡೆ ಅವನನ್ನು ವಾಲಿಸುತ್ತಿತ್ತು. ಜೇಬಿನಿಂದ ಇರುವ ಎಲ್ಲ ನೋಟುಗಳನ್ನೂ ಒಂದೊಂದಾಗಿ ತೆಗೆದು ನಿಧಾನಕ್ಕೆ ಎಣಿಸತೊಡಗಿದ. ತಿಂಡಿಯವನಿಗೋ ಇವನ ಬಳಿಯೇ ಇಷ್ಟೆಲ್ಲ ಸಮಯ ಹಾಳಾಗಿದ್ದು ಒಂದೆಡೆಯಾದರೆ, ರೈಲು ಹೊರಡುವ ಸೂಚನೆ ಕೊಡುತ್ತಿದ್ದುದು ಕೋಪ ಉಕ್ಕಿಸಿತ್ತು. ಆತ ರೇಗಲು ಶುರು ಮಾಡಿದ. ಮುಗ್ಧನ ಕೈಯಲ್ಲಿದ್ದ ನೋಟುಗಳನ್ನೆಲ್ಲ ಒಂದೇ ಸಾರಿ ಕಿತ್ತುಕೊಂಡು ತಾನೇ ಎಣಿಸತೊಡಗಿದ.

`ಒಂದು ವಡೆಗೆ ಎಂಟಾದರೆ ಮೂರಕ್ಕೆ 24 ಎನ್ನುವಷ್ಟೂ ಬುದ್ಧಿಯಿಲ್ಲದಷ್ಟು ಮೊದ್ದನೇ ನೀನು? ಇಷ್ಟೇ ಹಣವಿದ್ದರೆ ವಡೆ ಯಾಕೆ ಕೊಳ್ಳಬೇಕಿತ್ತು' ಎಂದು ಒಂದೇ ಕ್ಷಣಕ್ಕೆ ಎಣಿಸಿ `ಇಪ್ಪತ್ತೈದಿದೆ. ಎರಡು ರೂಪಾಯಿ ನಾನೇ ನಿನಗೆ ಕೊಡಬೇಕು. ನನ್ನಲ್ಲಿ ಚಿಲ್ಲರೆ ಇಲ್ಲ, ನಿನ್ನಲ್ಲಿ ಹಣವೇ ಇಲ್ಲ. ಎಂಥಾ ಆಸಾಮಿ ಸಿಕ್ಕಯ್ಯ ಬೆಳ್ಳಂಬೆಳಿಗ್ಗೆ' ಎಂದು ಕೂಗಾಡುತ್ತಾ `ಮುಂದೆ ಚಿಲ್ಲರೆ ಸಿಕ್ಕರೆ ವಾಪಸ್ ಬರುವಾಗ ಕೊಡುತ್ತೇನೆ' ಎಂದು ತಿಂಡಿ ಬುಟ್ಟಿ ಏರಿಸಿ ಹೊರಟೇ ಬಿಟ್ಟ.

ಈ ಮುಗ್ಧನಿಗೆ ತಿಂಡಿಯವನ ಜೊತೆ ತನ್ನ ಜೀವವೇ ಹೋದಂತಾಯಿತು! ಎಷ್ಟು ಚಡಪಡಿಸತೊಡಗಿದನೆಂದರೆ ಅವನನ್ನು ನೋಡಿದ ನಮ್ಮೆಲ್ಲರಿಗೂ ತುಂಬಾ ವ್ಯಥೆ ಉಂಟಾಯಿತು. ಡೊಳ್ಳ ಅದ್ಯಾವುದನ್ನೂ ಲೆಕ್ಕಿಸದೆ ಸೀದಾ ತಟ್ಟೆಗೆ ಕೈ ಹಾಕಿ ಒಂದು ವಡೆ ತೆಗೆದು ತಿನ್ನತೊಡಗಿದ. ಇನ್ನೊಬ್ಬನಿಗೆ ಏನ್ನನ್ನಿಸಿತೋ ಏನೋ ವಡೆ ಕೇಳದೆ ಸುಮ್ಮನೆ ಕೂತ. ಮುಗ್ಧ ಡೊಳ್ಳನಿಗೆ ಬೈಯತೊಡಗಿದ. ತಕ್ಷಣವೇ ನೆನಪು ಬಂದಂತೆ ಮೇಲಿರಿಸಿದ್ದ ತನ್ನ ಬುಟ್ಟಿಯನ್ನು ತೆಗೆದ. ಅದರಲ್ಲಿ ಅವನ ಹೆಂಡತಿಯೋ ಅಮ್ಮನೋ ಮಾಡಿಕೊಟ್ಟಿದ್ದ ಚಪಾತಿಗಳಿದ್ದವು.

ಚಪಾತಿಗಳಿರುವಾಗ ವಡೆ ತೆಗೆದುಕೊಳ್ಳುವ ಅವಶ್ಯಕತೆಯಾದರೂ ಏನಿತ್ತು ಎನ್ನುವ ಜಿಗುಪ್ಸೆಯ ಭಾವನೆ ಮುಖದಲ್ಲಿ ಮೂಡಿತು. ಎರಡು ಚಪಾತಿಗಳನ್ನು ತೆಗೆದು ತಿನ್ನಲು ಶುರು ಮಾಡಿದ. ಆದರೆ ವಡೆಗಳನ್ನೂ ತಿನ್ನಬೇಕಲ್ಲ. ಚಪಾತಿಗೆ ನೆಂಚಿಕೆಗೆ ಏನೂ ಇರಲಿಲ್ಲ. ವಡೆಯನ್ನೇ ಮುರಿದು ಚಪಾತಿಯ ಜೊತೆ ಚಟ್ನಿಯ ರೀತಿ ನೆಂಚಿಕೊಂಡು ತಿನ್ನತೊಡಗಿದ. ಇದೆಂಥಾ ತಿನ್ನುವ ಪರಿ ಎಂದು ನಾನು ನೋಡುತ್ತಿದ್ದೆ.

ಒಂದೆರಡು ತುತ್ತು ಆಹಾರ ಹೊಟ್ಟೆಗೆ ಬೀಳುತ್ತಿದ್ದಂತೆ ಅವನ ಮುಖ ಅರಳತೊಡಗಿತು. ಕೆಲವೇ ಕ್ಷಣಗಳ ಹಿಂದೆ ತನ್ನ ಬಗ್ಗೆ ಇದ್ದ ಜಿಗುಪ್ಸೆ, ಹಣವೆಲ್ಲಾ ಬರಿದಾಯಿತು ಎಂಬ ಹತಾಶೆ ಎಲ್ಲವೂ ಮಾಯವಾಗಿ ಸ್ನೇಹಿತರೊಡನೆ ಸರಾಗವಾಗಿ ಹರಟತೊಡಗಿದ. ಹೊಟ್ಟೆ ಚೆನ್ನಾಗಿ ಹಸಿದಿತ್ತೆಂದು ಕಾಣುತ್ತದೆ, ಕೆಲವೇ ನಿಮಿಷಗಳಲ್ಲಿ ಚಪಾತಿ, ವಡೆ ಎರಡನ್ನೂ ತಿಂದು ಮುಗಿಸಿದ. ತೃಪ್ತಿಯಿಂದ ತೇಗಿ ತನ್ನ ನೀರಿನ ಬಾಟಲಿಯಿಂದ ಗಟಗಟನೆ ನೀರು ಕುಡಿದ. ಜೇಬಲ್ಲಿದ್ದ ಹಣ ಕರಗಿದರೇನಂತೆ, ನನ್ನ ಕಸುಬು, ಕೈಯಲ್ಲಿನ ಶಕ್ತಿ ಕರಗಿಲ್ಲವಲ್ಲ, ಎದೆಯಲ್ಲಿನ ಹುಮ್ಮಸ್ಸಿಗೆ ಕೊರತೆಯಾಗಲಿಲ್ಲ, ಜೇಬಲ್ಲಿ ಇದ್ದಷ್ಟು ಹಣಕ್ಕಿಂತ ಹೆಚ್ಚೇ ಸಂಪಾದನೆ ಮಾಡುತ್ತೇನೆ ಎಂಬಂತಹ ಹುರುಪು ಅವನಲ್ಲಿ ಮತ್ತೆ ಮೂಡಿದಂತೆ ಕಂಡಿತು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT