ADVERTISEMENT

ಬೆಳಕಿನ ಹಬ್ಬಕ್ಕೆ ಗೋಧಿಯ ಸಿಹಿತಿನಿಸು

​ಪ್ರಜಾವಾಣಿ ವಾರ್ತೆ
Published 13 ಅಕ್ಟೋಬರ್ 2017, 19:30 IST
Last Updated 13 ಅಕ್ಟೋಬರ್ 2017, 19:30 IST
ಕಡುಬು
ಕಡುಬು   

ಗೋಧಿಹಿಟ್ಟು ಎಂದರೆ ಬರೀ ಹಿಟ್ಟಿಗೆ ನೀರು ಹಾಕಿ ಕಲೆಸಿ ಚಪಾತಿ ಲಟ್ಟಿಸುವುದಲ್ಲ. ಬದಲಾಗಿ ಗೋಧಿಹಿಟ್ಟಿನಿಂದ ಅನೇಕ ಬಗೆಯ ಸಿಹಿತಿನಿಸುಗಳನ್ನು ತಯಾರಿಸಬಹುದು. ಈ ಸಿಹಿತಿನಿಸುಗಳು ಹಬ್ಬಗಳಿಗೆ ಇನ್ನಷ್ಟು ಮೆರುಗು ತರುತ್ತದೆ. ಬೆಳಕಿನ ಹಬ್ಬ ದೀಪಾವಳಿಗೆ ಗೋಧಿಹಿಟ್ಟಿನಿಂದ ಸಿಹಿತಿನಿಸುಗಳನ್ನು ತಯಾರಿಸುತ್ತಾರೆ.

ಗೋಧಿಹಿಟ್ಟಿನಿಂದ ತಯಾರಿಸುವ ತಿಂಡಿಗಳು ಮಕ್ಕಳಿಗೂ ಇಷ್ಟವಾಗುತ್ತವೆ. ದೀಪಾವಳಿ ಹಬ್ಬಕ್ಕೆ ಜೊತೆಯಾಗುವಂತೆ ಗೋಧಿಹಿಟ್ಟಿನ ಕಡುಬು, ಗೋಧಿಹಿಟ್ಟಿನ ಬರ್ಫಿ, ಗೋಧಿಹಿಟ್ಟಿನ ಹಲ್ವಾ ಮುಂತಾದ ಸಿಹಿತಿನಿಸುಗಳನ್ನು ತಯಾರಿಸುವ ವಿಧಾನವನ್ನು ಇಲ್ಲಿ ವಿವರಿಸಿದ್ದಾರೆ.

ಕಡುಬು
ಬೇಕಾಗುವ ಸಾಮಗ್ರಿಗಳು
ಗೋಧಿಹಿಟ್ಟು - 2ಕಪ್ 
ಕಾಯಿತುರಿ - 1ಕಪ್
ಬೆಲ್ಲ - 1ಕಪ್
ರುಚಿಗೆ ಉಪ್ಪು , ಬಾಳೆಎಲೆ.

ADVERTISEMENT

ತಯಾರಿಸುವ ವಿಧಾನ: ಗೋಧಿಹಿಟ್ಟನ್ನು ಸ್ವಲ್ಪ ಉಪ್ಪು ಹಾಕಿ ಇಡ್ಲಿಹಿಟ್ಟಿನ ಹದಕ್ಕೆ ಕಲಸಿಕೊಳ್ಳಿ. ಬೆಲ್ಲ, ಕಾಯಿತುರಿಯನ್ನು ಚಿಟಿಕೆ ಉಪ್ಪು ಸೇರಿಸಿ ಕಲೆಸಿ. ಗೋಧಿಹಿಟ್ಟನ್ನು ಒಂದು ಸೌಟಿನಲ್ಲಿ ತೆಗೆದು ಬಾಳೆಎಲೆಯಲ್ಲಿ ದೋಸೆಯಂತೆ ಹರಡಿ. ಹಿಟ್ಟಿನಲ್ಲಿ, ಅಂಚನ್ನು ಅರ್ಧ ಇಂಚು ಬಿಟ್ಟು, ಅರ್ಧಚಂದ್ರಾಕರವಾಗಿ ಬೆಲ್ಲ ಕಾಯಿತುರಿ ಹರವಿ, ಮಧ್ಯೆ ಮಡಚಿ.
ಆವಿಯಲ್ಲಿ 20 ನಿಮಿಷ ಬೇಯಿಸಿ. ಆರಿದ ನಂತರ ತುಪ್ಪ ಸೇರಿಸಿ ಸವಿಯಿರಿ.

ಉಂಡಲಕಾಳು
ಬೇಕಾಗುವ ಸಾಮಗ್ರಿಗಳು:
ಗೋಧಿಹಿಟ್ಟು - 2ಕಪ್
ಬೆಲ್ಲ - 1ಕಪ್
ಕಾಯಿತುರಿ - 1ಕಪ್
ಉಪ್ಪು - ಅರ್ಧ ಚಮಚ
ಏಲಕ್ಕಿಪುಡಿ - ಅರ್ಧ ಚಮಚ
ನೀರು - 2ಕಪ್

ತಯಾರಿಸುವ ವಿಧಾನ:
ಗೋಧಿಹಿಟ್ಟನ್ನು ನೀರು ಮತ್ತು ಉಪ್ಪು ಹಾಕಿ ಗಂಟಿಲ್ಲದಂತೆ ಕಲಸಿ. ದಪ್ಪತಳದ ಪಾತ್ರೆಯಲ್ಲಿ ಹಿಟ್ಟನ್ನು ಮುದ್ದೆಯಾಗುವವರೆಗೆ ಕಾಯಿಸಿ. ಅದನ್ನು ಚಿಕ್ಕ ಚಿಕ್ಕ ಉಂಡೆಗಳನ್ನಾಗಿ ಮಾಡಿಕೊಳ್ಳಿ. ಬಾಣಲೆಯಲ್ಲಿ ಕಾಯಿತುರಿ ಬೆಲ್ಲ ಸೇರಿಸಿ, ಬಿಸಿ ಮಾಡಿ. ಬೆಲ್ಲ ಕರಗಿದಾಗ ಉಂಡೆಗಳನ್ನು ಬಾಣಲೆಗೆ ಹಾಕಿ ಸಣ್ಣ ಉರಿಯಲ್ಲಿ ಬೇಯಿಸಿ. ಬೇಕಿದ್ದರೆ ತುಪ್ಪ ಸೇರಿಸಿ ಚೆನ್ನಾಗಿ ಮಗುಚಿ ಬಿಸಿಯಾಗಿ ಸವಿಯಿರಿ .

ಗೋಧಿಹಿಟ್ಟಿನ ಬರ್ಫಿ
ಬೇಕಾಗುವ ಸಾಮಗ್ರಿಗಳು:
ಗೋಧಿಹಿಟ್ಟು - 1ಕಪ್
ತುಪ್ಪ - ಕಾಲು ಕಪ್ 
ಬೆಲ್ಲದಪುಡಿ - ಮುಕ್ಕಾಲು ಕಪ್
ಏಲಕ್ಕಿಪುಡಿ - ಅರ್ಧ ಚಮಚ
ಗೋಡಂಬಿ ಚೂರು - 4ಚಮಚ

ತಯಾರಿಸುವ ವಿಧಾನ :
ಗೋಧಿಹಿಟ್ಟನ್ನು ತುಪ್ಪ ಹಾಕಿ ಚೆನ್ನಾಗಿ ಹುರಿಯಿರಿ. ಕೂಡಲೇ ಏಲಕ್ಕಿ, ಗೋಡಂಬಿ, ಬೆಲ್ಲ ಹಾಕಿ ಚೆನ್ನಾಗಿ ಮಗುಚಿ ತುಪ್ಪ ಸವರಿದ ತಟ್ಟೆಗೆ ಹಾಕಿ ಹರಡಿ. ಬಿಸಿ ಇರುವಾಗಲೇ ಬೇಕಾದ ಆಕಾರದಲ್ಲಿ ತುಂಡರಿಸಿ. ಸುಲಭ ಹಾಗೂ ಆರೋಗ್ಯಕರ ಗೋಧಿಬರ್ಫಿ ರೆಡಿ.

ಗೋಧಿಹಿಟ್ಟಿನ ಹಲ್ವ
ಬೇಕಾಗುವ ಸಾಮಗ್ರಿಗಳು:
ಗೋಧಿಹಿಟ್ಟು – 1ಕಪ್
ಬೆಲ್ಲದಪುಡಿ – ಮುಕ್ಕಾಲು ಕಪ್
ತುಪ್ಪ - ಕಾಲು ಕಪ್
ಹಾಲು - 1ಕಪ್
ಏಲಕ್ಕಿ ಪುಡಿ - ಅರ್ಧ ಚಮಚ

ತಯಾರಿಸುವ ವಿಧಾನ:
ಗೋಧಿಹಿಟ್ಟನ್ನು ತುಪ್ಪ ಹಾಕಿ ಹೊಂಬಣ್ಣ ಬರುವವರೆಗೆ ಹುರಿಯಿರಿ. ನಂತರ ಅದಕ್ಕೆ ಹಾಲು ಹಾಕಿ ಚೆನ್ನಾಗಿ ಮಗುಚಿ. ನಂತರ ಬೆಲ್ಲ ಪುಡಿ ಮತ್ತು ಏಲಕ್ಕಿ ಹಾಕಿ ಚೆನ್ನಾಗಿ ಮಗುಚಿ. ತಟ್ಟೆಯಲ್ಲಿ ಹರವಿ ತುಂಡರಿಸಿ ಸವಿಯಿರಿ. ಹಬ್ಬಕ್ಕೆ ಧಿಡೀರ್ ಸಿಹಿ ತಯಾರು.

ಸಾವಿತ್ರಿ ಭಟ್ ಬಡೆಕ್ಕಿಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.