ADVERTISEMENT

ಮಕ್ಕಳ ಡಬ್ಬಿ ಎಂಬ ಕುಸುರಿ ಕೆಲಸ

ಶುಭಶ್ರೀ
Published 1 ಜೂನ್ 2018, 19:30 IST
Last Updated 1 ಜೂನ್ 2018, 19:30 IST
ಮಕ್ಕಳ ಡಬ್ಬಿ ಎಂಬ ಕುಸುರಿ ಕೆಲಸ
ಮಕ್ಕಳ ಡಬ್ಬಿ ಎಂಬ ಕುಸುರಿ ಕೆಲಸ   

ಅಮ್ಮಾ... ನಂಗೆ ಐಸ್‌ಕ್ರೀಂ ಕೊಡು, ಅಮ್ಮ ನಂಗೆ ಕೋಡುಬಳೆ ಮಾಡಿಕೊಡು, ಅಜ್ಜಿ ನನಗೆ ತುಂಬಾ ಬೇಜಾರಾಗ್ತಿದೆ, ನೀವೆ ಯಾವಾಗ್ಲೂ ಟೀವಿ ನೋಡ್ತಾ ಇದ್ರೆ ನಾನು ಯಾವಾಗ ನೋಡೋದು? ನನಗೆ ಬೋರ್ ಆಗ್ತಿದೆ... ಹೊರಗೆ ಕರ್ಕೊಂಡು ಹೋಗು – ಹೀಗೆ ಮುದ್ದು ಮುದ್ದಾಗಿ ಹೇಳುತ್ತಾ ಮನೆ ತುಂಬಾ ಓಡಾಡಿಕೊಂಡಿದ್ದ ಮಗುವಿಗೀಗ ಶಾಲೆ ಶುರುವಾಗಿದೆ.

ಎರಡು ತಿಂಗಳ ಬೇಸಿಗೆ ರಜೆಯಲ್ಲಿ ರಸ್ತೆಗಳಲ್ಲಿ, ಕಾಂಪೌಂಡುಗಳಲ್ಲಿ, ಅಜ್ಜಿ–ಅಜ್ಜಂದಿರ ಅಂಗಳದಲ್ಲಿ ಹಕ್ಕಿಗಳಂತೆ ಹಾರಾಡುತ್ತಿದ್ದ ಮಕ್ಕಳು ಶಾಲೆಯ ನಾಲ್ಕು ಗೋಡೆಗಳ ಒಳಗೆ ದಿನವಿಡೀ ಕುಳಿತುಕೊಳ್ಳುತ್ತಿದ್ದಾರೆ. ಬೆಳಿಗ್ಗೆ ರೆಡಿಯಾಗುವ ಧಾವಂತ, ಶಾಲೆಯಿಂದ ಬಂದ ಮೇಲೆ ಹೋಮ್‌ವರ್ಕ್ ಮಾಡುವ ಕೆಲಸ – ಹೀಗೆ ಮಕ್ಕಳ ದಿನಚರಿ ಬದಲಾಗಿದೆ. ತಂದೆ ತಾಯಂದಿರ ದಿನಚರಿಯೂ. ಶಾಲೆಗೆ ಹೋಗುವ ಮಕ್ಕಳ ಪುಸ್ತಕ, ಸಮವಸ್ತ್ರದ ಜೊತೆಗೆ ಅವರ ‘ಲಂಚ್ ಬಾಕ್ಸ್’ ಸಿದ್ಧತೆಯೂ ಅಮ್ಮಂದಿರ ಪಾಲಿಗೆ ಒಂದು ದೊಡ್ಡ ಸವಾಲು.

ಡಬ್ಬಿ ಹೀಗಿರಲಿ
ಪೂರೈಕೆ ಅಧಿಕ, ಬೇಡಿಕೆ ಕಡಿಮೆಯಾಗಿರುವುದರಿಂದ ಡಬ್ಬಿಯಲ್ಲಿ ಕಳಿಸಿದ್ದನ್ನು ಮಕ್ಕಳು ತಿನ್ನುವಂತೆ ಮಾಡುವುದೊಂದು ಸಾಹಸವೇ! ಹಾಗಾಗಿ ಇಂದಿನ ಅಪ್ಪ–ಅಮ್ಮಂದಿರು ಆವಿಷ್ಕಾರಿಗಳಾಗಬೇಕಿದೆ. ಹೊಸ ಹೊಸ ಪ್ರಯೋಗಗಳನ್ನು ಮಾಡಬೇಕಾಗುತ್ತದೆ. ಹೊಸ ಹೊಸ ಮಾರ್ಗಗಳ ಮೊರೆ ಹೋಗಬೇಕಾಗುತ್ತದೆ.

ADVERTISEMENT

ಸ್ಟೀಲಿನ ಜಾಗದಲ್ಲಿ ಪ್ಲಾಸ್ಟಿಕ್ ತನ್ನ ಅಧಿಪತ್ಯವನ್ನು ಸಾಧಿಸಿದೆ. ಹಾಗಾಗಿ ಮೊದಲಿಗೆ ಮಕ್ಕಳ ಡಬ್ಬಿಯ ಆಯ್ಕೆಯಲ್ಲಿ ನಾವೀನ್ಯ ಇರುವ ಹಾಗೆ ನೋಡಿಕೊಳ್ಳಬೇಕು. ವಿವಿಧ ಶೈಲಿಯ, ವಿವಿಧ ಆಕಾರಗಳ ಡಬ್ಬಿಗಳನ್ನು ಆಯ್ದು ಮಕ್ಕಳಲ್ಲಿ ಮೆಚ್ಚುಗೆ ಮೂಡಿಸಬೇಕು.

ಆನೆಯಾಕಾರದ ಡಬ್ಬಿ, ಆಮೆಯಾಕಾರದ ಡಬ್ಬಿ, ಪಿಂಕು, ಕೆಂಪು, ಹಸಿರು, ನೀಲಿ – ಹೀಗೆ ಬಣ್ಣಗಳಲ್ಲೂ ವೈವಿಧ್ಯವಿರಲಿ. ಆಹಾರದ ಪರಿಮಳ ಮತ್ತು ಬಣ್ಣ –ಇವೇ ಮೊದಲು ಮಕ್ಕಳನ್ನು ಸೆಳೆಯುವುದು; ಅನಂತರಷ್ಟೆ ರುಚಿ!

ಒಂದೇ ಬಗೆಯ ತಿಂಡಿಗಳನ್ನು ಮಾಡಿ ಏಕತಾನತೆಯಾಗದ ಹಾಗೆ ನಿತ್ಯವೂ ಒಂದೊಂದು ಬಗೆಯ ತಿಂಡಿಯನ್ನು ಮಾಡಿ ಕಳಿಸಬೇಕು.

ಬೆಳಗಿನ ತಿಂಡಿ ಮತ್ತು ಮಧ್ಯಾಹ್ನದ ಡಬ್ಬಿಯೂಟ ಬೇರೆಯಾಗಿದ್ದರೆ ಒಳಿತು. ಇಂದು ತಂದೆ ಮಾತ್ರವಲ್ಲದೆ ಬಹುತೇಕ ತಾಯಂದಿರೂ ಉದ್ಯೋಗಸ್ಥರೇ. ಹಾಗಾಗಿ ಧಾವಂತದ ಬದುಕಿನಲ್ಲಿ ಮಾಡುವುದು ಸುಲಭವೆಂದು ದಿನವೂ ಉಪ್ಪಿಟ್ಟೋ ಅವಲಕ್ಕಿಯೋ ಚಿತ್ರಾನ್ನವನ್ನೋ ಮಾಡಿದರೆ ಮಗು ಡಬ್ಬಿ ನೋಡಿದೊಡನೆಯೇ ‘ತೆನಾಲಿ ರಾಮಕೃಷ್ಣನ ಬೆಕ್ಕಿನ ಹಾಗೆ’ ಓಡುತ್ತದೆ. ಹಾಗಾಗಿ ನಿತ್ಯವೂ ಬೇರೆ ಬೇರೆ ತಿಂಡಿಗಳಿರಲಿ. ಉದಾ: ವಾರದಲ್ಲಿ ಎರಡನೇ ಬಾರಿಗೆ ದೋಸೆ ಮಾಡಬೇಕೆಂದರೆ ಒಂದು ದಿನ ಈರುಳ್ಳಿ ದೋಸೆ, ಮತ್ತೊಂದು ದಿನ ಟೊಮ್ಯಾಟೋ ದೋಸೆ ಮಾಡಬಹುದು ಮತ್ತು ವಿವಿಧ ಆಕಾರಗಳಲ್ಲಿ ಮಾಡಿ ಕಳುಹಿಸಿ.

ಒಂದು ಮುಖ್ಯ ತಿಂಡಿಯಾದರೆ ಪುಟ್ಟದೊಂದು ಡಬ್ಬಿಯಲ್ಲಿ ಸಿಹಿಯನ್ನೂ ಕಳಿಸಿ. ಒಂದು ದಿನ ಹಸಿ ತರಕಾರಿ/ಹಣ್ಣನ್ನು ಡಿಸೈನ್ ಆಗಿ ಕತ್ತರಿಸಿ ಕಳಿಸಿದರೆ ಮತ್ತೊಂದು ದಿನ ಮೊಳಕೆಕಾಳು ಕಳಿಸಿ, ಮಗದೊಂದು ದಿನ ಡ್ರೈಫ್ರೂಟ್ಸ್ ಕಳಿಸಿ.

ನಿಮಗೆ ಅಚ್ಚರಿಯಾಗಬಹುದು. ನಾನೂ ಈಗಲೂ ದೋಸೆಯನ್ನೋ ಚಪಾತಿಯನ್ನೋ ಡಬ್ಬಿಗೆ ಒಯ್ಯುವಾಗ ಪುಟ್ಟ ಪುಟ್ಟ ದೋಸೆ, (ಬೊಂಬೆ ದೋಸೆ ಎನ್ನುತ್ತೇವಲ್ಲಾ ಹಾಗೆ), ಚಪಾತಿ ಬೇಯಿಸಿಯಾದ ಮೇಲೆ ಕತ್ತರಿಯಲ್ಲಿ ಆಕಾರ ಕತ್ತರಿಸಿ ಪುಟ್ಟ ಪುಟ್ಟದಾಗಿಸಿ ಒಯ್ಯುತ್ತೇನೆ. ತಿನ್ನುವಾಗ ವಿಶಿಷ್ಟ ಅನುಭೂತಿ. ಇನ್ನು ಮಕ್ಕಳಿಗೆ ಹಾಗಾಗದಿದ್ದೀತೇ? ಟ್ರೈ ಮಾಡಿ ನೋಡಿ!

ಎಲ್ಲಕ್ಕಿಂತ ಬಹುಮುಖ್ಯ ಅಂಶವೆಂದರೆ ಮಕ್ಕಳನ್ನು ಈ ಪ್ರಕ್ರಿಯೆಯಲ್ಲಿ ಒಳಗೊಳ್ಳುವ ಹಾಗೆ ಮಾಡುವುದು. ವಾರದಂತ್ಯದಲ್ಲಿ ಮಗುವಿನ ಜೊತೆ ಕುಳಿತು ಡಬ್ಬಿಗೆ ಏನು ತಿಂಡಿ ಮಾಡಬೇಕು? ಯಾವ ಸೈಡ್ ಡಿಶ್ ಮಾಡುವುದು? ಎಂದೆಲ್ಲ ಕೇಳಿದರೆ ಅದಕ್ಕೆ ತಾನೂ ಮುಖ್ಯ ಎಂಬ ಭಾವನೆ ಮೂಡುತ್ತದೆ. ಮಗು ತನಗೇನು ಬೇಕು ಎಂಬುದನ್ನು ತಾನೇ ಕಂಡುಕೊಳ್ಳುವ ಪ್ರಯತ್ನ ಮಾಡುತ್ತದೆ. ಜೊತೆಗೆ ಬೆಳಿಗ್ಗೆ ಎದ್ದು ಏನು ಮಾಡಬೇಕೆಂದು ತಲೆಕೆರೆದುಕೊಂಡು ಏನೋ ಒಂದು ಧಡ ಬಡ ಅಂತ ಕೂಗಾಡುತ್ತ ಕಿರುಚಾಡುತ್ತ ತಿಂಡಿ ಮಾಡಿ ಡಬ್ಬಿ ಕಟ್ಟುವ ಬದಲು ಇಡೀ ವಾರದ ತಿಂಡಿಗಳ ಬಗ್ಗೆ ಮಕ್ಕಳೊಂದಿಗೂ ಚರ್ಚೆ ಮಾಡಿದರೆ, ಯೋಜಿತವಾಗಿದ್ದರೆ ಹೇಗೆ ಸಮಯ ಉಳಿಸಬಹುದು ಎಂಬುದರ ಬಗ್ಗೆ ಪೋಷಕರಿಗೂ ಮಗುವಿಗೂ ಅರಿವಾಗುತ್ತದೆ.

ಕಳಿಸಿದ ಊಟವೋ ತಿಂಡಿಯೋ ಹಳಸದಂತಿರಲು ಎಚ್ಚರಿಕೆ ವಹಿಸಬೇಕು. ಉದಾ: ಕಾಯಿಚಟ್ನಿ ಬೇಸಿಗೆಯಲ್ಲಿ ಮಧ್ಯಾಹ್ನಕ್ಕೇ ಹಳಸಿಹೋಗುತ್ತದೆ. ಪರ್ಯಾಯವಾಗಿ ಆ ಕಾಲದಲ್ಲಿ ಕೊಬ್ಬರಿ ಚಟ್ನಿಯನ್ನೋ, ಪಲ್ಯ, ಗೊಜ್ಜುಗಳನ್ನೋ ಕಳಿಸಿ. ಮೊಸರು ಹಾಕಿ ಕಲಸಿದ ಅನ್ನ ಮಧ್ಯಾಹ್ನದ ವೇಳೆಗೆ ಹುಳಿಬಂದು ತಿನ್ನಲು ಯೋಗ್ಯವೆನಿಸದು.

ಆರಿದ ಅನ್ನಕ್ಕೆ ತುಂಬ ಹಾಲು ಹಾಕಿ ಸ್ವಲ್ಪ ಮೊಸರು ಹಾಕಿ ಕಲೆಸಿಟ್ಟು, ಸ್ವಲ್ಪ ಸಮಯದ ನಂತರ ಡಬ್ಬಿಗೆ ತುಂಬಿದರೆ ಮಧ್ಯಾಹ್ನದ ವೇಳೆಗೆ ರುಚಿಯಾಗಿರುತ್ತದೆ.

ಖುಷಿಯ, ಬಿಡುವಿನ ಸಮಯದಲ್ಲಿ ಮಕ್ಕಳಿಗೆ ಯಾವ ಆಹಾರಡಬ್ಬಿಗೆ ಯೋಗ್ಯ ಮತ್ತು ಆರೋಗ್ಯಕ್ಕೆ ಪೂರಕ ಎಂಬ ಬಗ್ಗೆ ಮಕ್ಕಳಿಗೆ ನಿಧಾನವಾಗಿ ಉಪದೇಶದ ರೂಪದಲ್ಲಿ ಅಲ್ಲದೆ ಸಹಜ ಮಾತಿನಲ್ಲಿ ಹೇಳಿದರೆ, ಕಳಿಸಿದ ಡಬ್ಬಿಯ ಊಟವನ್ನು ಮಕ್ಕಳು ಹಾಳುಗೆಡವುದಿಲ್ಲ.

ಮಕ್ಕಳು ಅತ್ಯಂತ ಸೂಕ್ಷ್ಮ ಮನಸ್ಸಿನವರು. ತಮ್ಮನ್ನು ಎಲ್ಲದರಲ್ಲೂ ಬೇರೆಯವರೊಂದಿಗೆ ಹೋಲಿಸಿ ನೋಡುತ್ತಿರುತ್ತಾರೆ. ಊಟ ಮಾಡುವಾಗ ತಮ್ಮ ಸ್ನೇಹಿತರ ಡಬ್ಬಿಗಳನ್ನು ನೋಡಿ ಕೀಳರಿಮೆಯೋ ಮೇಲರಿಮೆಯೋ ಆಗದ ಹಾಗೆ ನೋಡಿಕೊಳ್ಳುವುದು ಅವಶ್ಯಕ.

ಅಕಸ್ಮಾತ್ ಯಾವುದಾದರೂ ಕಾರಣಕ್ಕೆ ಡಬ್ಬಿಯೂಟವನ್ನು ತಿನ್ನದೇ ಮಗು ಹಾಗೆಯೇ ಬಂದರೆ ಕಂಡ ಕೂಡಲೇ ಹಾರಾಡಿ ಬೈಯ್ಯದೆ, ಅದಕ್ಕೆ ಕಾರಣವನ್ನು ತಿಳಿದುಕೊಂಡು ಸಮಾಧಾನವಾಗಿ ಸಮಸ್ಯೆಯನ್ನು ಬಗೆಹರಿಸಬೇಕು.

ಡಬ್ಬಿಯೆಂದರೆ ಕೇವಲ ಡಬ್ಬವಲ್ಲ. ಅದು ಒಟ್ಟು ಮಧ್ಯಾಹ್ನದ ಊಟದ ಒಂದು ಪ್ಯಾಕ್. ಅದರಲ್ಲಿ ಲಂಚ್ ಬ್ಯಾಗ್, ವಾಟರ್ ಬಾಟಲ್ (ನೀರಿನ ಡಬ್ಬಿ ಎನ್ನುವ ಮಂದಿ ವಿರಳ!) ಕೂಡ ಸೇರುತ್ತದೆ. ಮಕ್ಕಳು ತಿಂದ ಕೈಲಿ ಮುಟ್ಟಿ, ಚೆಲ್ಲಿ ಊಟದ ಬ್ಯಾಗ್ ಅಶುಚಿಯಾಗುವ ಸಾಧ್ಯತೆಯೇ ಹೆಚ್ಚು. ಅದು ಸ್ವಚ್ಛವಾಗಿರುವ ಹಾಗೆ ನೋಡಿಕೊಳ್ಳಬೇಕು. ವಾರಕ್ಕೆರೆಡು ಬಾರಿಯಾದರೂ ಅದನ್ನು ಒಗೆದು ಚೆನ್ನಾಗಿ ಒಣಗಿಸಿ. ಆಗ ಮಕ್ಕಳಿಗೆ ದಿನವೂ ಒಂದೇ ಬ್ಯಾಗ್ ಎನ್ನುವ ಬೇಸರ ತಪ್ಪುತ್ತದೆ. ಒಮ್ಮೆ ಬ್ಯಾಗಿನಿಂದ ವಾಸನೆ ಬಂದೋ, ಇರುವೆ ಬಂದೋ – ಅದು ಮಗುವಿಗೆ ಅಸಹ್ಯ ಎನಿಸಿದರೆ ಊಟ ಸೇರಿದಂತೆಯೇ ಸರಿ. ಜೊತೆಗೆ ಎಳೆಯ ವಯಸ್ಸಿನಲ್ಲಿ ಹುಟ್ಟಿದ ಅಸಹ್ಯ ಕೊನೆತನಕವೂ ಸುಪ್ತಮನಸ್ಸಿನಲ್ಲಿ ಉಳಿದುಬಿಡುವ ಸಾಧ್ಯತೆಯಿದೆ.

ನೀರಿನ ಬಾಟಲನ್ನು ನಿತ್ಯವೂ ಸ್ವಚ್ಛಮಾಡಬೇಕು. ಮಕ್ಕಳ ಸಂಭ್ರಮಕ್ಕಾಗಿ ಬಣ್ಣಬಣ್ಣದ ಬಾಟಲ್ ಖರೀದಿಸಿ. ಕಲ್ಲುಪ್ಪು ಹಾಕಿ ಕುಲುಕಿದರೆ ಶೇ 80ರಷ್ಟು ಸ್ವಚ್ಛವಾದಂತೆಯೇ. ವಾರಕ್ಕೊಮ್ಮೆಯಾದರೂ ವಿನೇಗರ್ ಅಥವಾ ನಿಂಬೆರಸ ಹಾಕಿ, ಬಾಟಲ್ ಶುದ್ಧಗೊಳಿಸುವ ಬ್ರಷ್‍ನಿಂದ ಕ್ಲೀನ್ ಮಾಡಿ.

ಇದು ನಮ್ಮ ಜವಾಬ್ದಾರಿ
‘sound mind in a sound body.’ ‘ಬಲವಾದ ದೇಹವೇ ಚುರುಕು ಬುದ್ಧಿಗೂ ಕಾರಣ’. ಊಟದ ರುಚಿ ಮತ್ತು ಡಬ್ಬಿ, ಬ್ಯಾಗ್, ಬಾಟಲ್‍ನ ಸ್ವಚ್ಛತೆ ಬಣ್ಣ ಆಕಾರ – ಎಲ್ಲವೂ ಸೇರಿ ಮಗುವಿಗೆ ಹೊಟ್ಟೆಯ ತುಂಬ ಆರೋಗ್ಯಕರ ಆಹಾರ ಸೇರಲಿ. ಮುಂದಿನ ಜನಾಂಗವನ್ನು ಆರೋಗ್ಯಕರವಾಗಿ ಬೆಳೆಸಿ ಕಾಪಾಡುವುದು ನಮ್ಮ ಮೊದಲ ಜವಾಬ್ದಾರಿ. ಅದುವೇ ನಮ್ಮ ಧ್ಯೇಯ ಕೂಡ.

ಊಟ ಮಾಡುವುದು ಕೇವಲ ಕರ್ತವ್ಯವಲ್ಲ, ಹೊಟ್ಟೆ ತುಂಬಿಸುವುದು ಮಾತ್ರವಲ್ಲ. ಆಹಾರವೇ ಔಷಧ. ಸುಸ್ಥಿರ ಮನಸ್ಸು, ಶುದ್ಧ ಸಮತೋಲಿತ ಆಹಾರ ಮಗುವಿನ ಮೈ ಮನಗಳೆರೆಡಕ್ಕೂ ಸೋಪಾನ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.