ADVERTISEMENT

ಮಹಿಳೆಯರ ಆಸ್ತಿ ಹಕ್ಕು-ಪಿತ್ರಾರ್ಜಿತ ಆಸ್ತಿ

ನಿಮಗಿದು ತಿಳಿದಿರಲಿ

​ಪ್ರಜಾವಾಣಿ ವಾರ್ತೆ
Published 23 ಜನವರಿ 2015, 19:46 IST
Last Updated 23 ಜನವರಿ 2015, 19:46 IST

ಮಹಿಳೆಯರಿಗೆ ಪಿತ್ರಾರ್ಜಿತ ಆಸ್ತಿಯಲ್ಲಿ ತೀರ ಇತ್ತೀಚಿನವರೆಗೆ ಯಾವುದೇ ಹಕ್ಕು  ಇರಲಿಲ್ಲ. ಇದಕ್ಕೆ ಕಾರಣ ನಮ್ಮ ಸಮಾಜದ ಯೋಚನಾ ಕ್ರಮ. ನಮ್ಮದು ಪುರುಷ ಪ್ರಧಾನವಾದ, ಪಿತೃ ಪ್ರಧಾನವಾದ ಸಮಾಜ. ತಮ್ಮ ವಂಶವನ್ನು ಮುಂದುವರೆಸುವವರು ಗಂಡು ಮಕ್ಕಳು ಮಾತ್ರ, ತಾವು ಸತ್ತ ನಂತರ ತಮಗೆ ಪಿಂಡ ಪ್ರದಾನ ಮಾಡುವ ಮೂಲಕ ತಮ್ಮನ್ನು ಸ್ವರ್ಗಕ್ಕೆ ಕಳುಹಿಸುವವರು ಗಂಡು ಮಕ್ಕಳು, ಅಪುತ್ರಸ್ಯ ಗತಿರ್ನಾಸ್ತಿ ಎಂದರೆ ಪುತ್ರನಿಲ್ಲದೆ ಇದ್ದರೆ ಮೋಕ್ಷವಿಲ್ಲ ಎಂಬ ನಂಬಿಕೆಗಳು ನಮ್ಮ ಸಮಾಜದಲ್ಲಿ ಆಳವಾಗಿ ಬೇರೂರಿವೆ.

ಇವು ಧಾರ್ಮಿಕ ನಂಬಿಕೆಗಳು. ಅದರ ಪರಿಣಾಮವಾಗಿಯೇ ಪಿತ್ರಾರ್ಜಿತ ಆಸ್ತಿಗೆ ಗಂಡು ಮಕ್ಕಳು ಮಾತ್ರವೇ ವಾರಸುದಾರರಾಗಿರಬೇಕು ಎಂಬ ಪದ್ಧತಿಯೂ ಆಚರಣೆಯಲ್ಲಿ ಬಂದಿತು. ಧಾರ್ಮಿಕ ನಂಬಿಕೆಗಳನ್ನು ಆಧರಿಸಿ ಚಾಲ್ತಿಗೆ ಬಂದ ನಿಯಮಗಳೇ ಮುಂದೆ ಕಾನೂನಿನ ರೂಪದಲ್ಲಿ ಮತ್ತೆ ಚಾಲನೆ ಪಡೆಯಿತು. ಆದರೆ ಈಗ ಕಾಲ ಬದಲಾಗಿದೆ. ಹೆಣ್ಣು ಒಂದು ಹೊರೆ ಎಂಬ ಭಾವನೆ ಬದಲಾಗುತ್ತಿದೆ. ಮಹಿಳೆ ಎಲ್ಲ ಕ್ಷೇತ್ರದಲ್ಲಿಯೂ ತನ್ನ ಸಾಮರ್ಥ್ಯವನ್ನು ಸಾಬೀತು ಪಡಿಸುತ್ತಿದ್ದಾಳೆ. ಮಾನವ ಹಕ್ಕುಗಳ ನೆಲೆಯಲ್ಲಿ ಮಹಿಳೆಯನ್ನು ಪರಿಭಾವಿಸುವ ಅನಿವಾರ್ಯ ವಾತಾವರಣ ನಿಧಾನವಾಗಿಯಾದರೂ ಸಮಾಜದ ಒಪ್ಪಿಗೆಯನ್ನು ಪಡೆದುಕೊಳ್ಳುತ್ತಿದೆ.

ಈ ಹಿನ್ನೆಲೆಯಲ್ಲಿ, ಕಾನೂನಿಗೆ ತಿದ್ದುಪಡಿ ಮಾಡಿ ಪಿತ್ರಾರ್ಜಿತ ಆಸ್ತಿಯಲ್ಲಿಯೂ ಹೆಣ್ಣು ಮಕ್ಕಳಿಗೆ ಪುರುಷರಿಗೆ ಇರುವಂತೆಯೇ ಸಮಾನವಾದ ಹಕ್ಕು ನೀಡಲಾಗಿದೆ. ಹೆಣ್ಣು ಮಕ್ಕಳಿಗೆ ಪಿತ್ರಾರ್ಜಿತ ಆಸ್ತಿಯಲ್ಲಿ ಸಮಾನ ಹಕ್ಕು ನೀಡುವ ಕಾನೂನಿನ ತಿದ್ದುಪಡಿ ಕರ್ನಾಟಕದಲ್ಲಿ ಜಾರಿಯಲ್ಲಿ ಬಂದದ್ದು 1994ರಲ್ಲಿ. ಇದರ ಪ್ರಕಾರ- ಈ ಕಾನೂನು ಜಾರಿಗೆ ಬಂದ ನಂತರ ಭಾಗವಾಗುವ ಆಸ್ತಿಗೆ ಮಾತ್ರ ಇದು ಅನ್ವಯಿಸುತ್ತದೆ. ಆದರೆ, ಈ ಕಾನೂನು ಜಾರಿಗೆ ಬರುವುದಕ್ಕೆ ಮುಂಚೆ ಪಾಲುಗಾರಿಕೆ ಆಗಿದ್ದರೆ ಅದನ್ನು ಪುನಃ ಪರಿಷ್ಕರಿಸುವುದಕ್ಕೆ ಅವಕಾಶವಿಲ್ಲ.

ಈ ಕಾನೂನು ಜಾರಿಗೆ ಬರುವ ಮುನ್ನ ವಿವಾಹವಾಗಿರುವ ಹೆಣ್ಣು ಮಕ್ಕಳಿಗೆ ಇದು ಅನ್ವಯಿಸುವುದಿಲ್ಲ, ಎಂದರೆ ಈ ಕಾನೂನು ಜಾರಿಗೆ ಬಂದ ನಂತರವೇ ಪಿತ್ರಾರ್ಜಿತ ಆಸ್ತಿಯ ಪಾಲುಗಾರಿಕೆ ಪ್ರಕ್ರಿಯೆ ನಡೆದರೂ ಆ ದಿನಾಂಕಕ್ಕೆ ಮುಂಚೆ ಹೆಣ್ಣು ಮಗಳ ಮದುವೆ ಆಗಿದ್ದರೆ, ಅಂಥ ಹೆಣ್ಣು ಮಕ್ಕಳಿಗೆ ಪಿತ್ರಾರ್ಜಿತ ಆಸ್ತಿಯಲ್ಲಿ ಪಾಲು ದೊರೆಯುವುದಿಲ್ಲ.

2005ರ ವರೆಗೂ ಹೆಣ್ಣು ಮಕ್ಕಳಿಗೆ ಪಿತ್ರಾರ್ಜಿತ ಆಸ್ತಿಯಲ್ಲಿ ಸಮಾನ ಹಕ್ಕು ನೀಡುವ ಕಾನೂನು ಕೆಲವು ರಾಜ್ಯಗಳಲ್ಲಿ ಮಾತ್ರ ಜಾರಿಯಲ್ಲಿತ್ತು. ಕೆಲವು ರಾಜ್ಯಗಳಲ್ಲಿ ಈ ಅಸಮಾನತೆ ಹಾಗೆಯೇ ಉಳಿದುಕೊಂಡಿತ್ತು. ಇದನ್ನು ತೊಡೆದು ಹಾಕುವುದಕ್ಕೋಸ್ಕರ, ಕೇಂದ್ರ ಸರ್ಕಾರ 2005ರಲ್ಲಿ ಕೇಂದ್ರ ಕಾನೂನಿಗೇ ತಿದ್ದುಪಡಿ ಮಾಡುವ ಮೂಲಕ ಎಲ್ಲ ರಾಜ್ಯಗಳಲ್ಲಿಯೂ ಏಕರೂಪವಾದ ಪಿತ್ರಾರ್ಜಿತ ಆಸ್ತಿ ಸಂಬಂಧವಾದ ಕಾನೂನನ್ನು ಜಾರಿಗೆ ತಂದಿತು. ಇದರ ಪ್ರಕಾರ, ಈ ಕಾನೂನು ಜಾರಿಗೆ ಬಂದ ನಂತರ ಭಾಗವಾಗುವ ಆಸ್ತಿಗೆ ಮಾತ್ರ ಇದು ಅನ್ವಯಿಸುತ್ತದೆ. ಈ ಕಾನೂನು ಜಾರಿಗೆ ಬಂದ ನಂತರ, ಹಿಂದೆ ಆದಂಥ ಪಾಲುಗಾರಿಕೆಯನ್ನು ಪುನಃ ಪರಿಷ್ಕರಿಸುವಂತಿಲ್ಲ. ಈ ಕಾನೂನು ಜಾರಿಗೆ ಬರುವ ಮುನ್ನ ವಿವಾಹವಾಗಿರುವ ಹೆಣ್ಣು ಮಕ್ಕಳು ಸಹ ಪಿತ್ರಾರ್ಜಿತ ಆಸ್ತಿಗೆ ಹಕ್ಕುದಾರರಾಗಿರುತ್ತಾರೆ ಎಂದರೆ ಈ ಕಾನೂನು ಜಾರಿಗೆ ಬಂದ ನಂತರ ಪಿತ್ರಾರ್ಜಿತ ಆಸ್ತಿಯ ಪಾಲುಗಾರಿಕೆ ಪ್ರಕ್ರಿಯೆ ನಡೆದರೂ ಆ ದಿನಾಂಕಕ್ಕೆ ಮುಂಚೆ ಮದುವೆಯಾಗಿರುವ ಹೆಣ್ಣು ಮಕ್ಕಳಿಗೂ ಅಂಥ ಪಿತ್ರಾರ್ಜಿತ ಆಸ್ತಿಯಲ್ಲಿ ಪಾಲು ದೊರೆಯುತ್ತದೆ.

ಇದು ಹಿಂದೂಗಳ ಪಿತ್ರಾರ್ಜಿತ ಆಸ್ತಿ ವಾರಸುದಾರಿಕೆಗೆ ಸಂಬಂಧಿಸಿದಂತೆ ಇರುವ ಕಾನೂನಿನ ಸ್ಥೂಲ ನಿಯಮಗಳು. ಹೆಣ್ಣು ಮಕ್ಕಳಿಗೆ ಪಿತ್ರಾರ್ಜಿತ ಆಸ್ತಿಯಲ್ಲಿ ಸಮಾನ ಪಾಲು ಕೊಡಬೇಕೆಂಬ ಪ್ರಸ್ತಾವದ ಬಗ್ಗೆ ಆ ಸಮಯದಲ್ಲಿ ಪುರುಷರಿಂದ ಬಾರೀ ವಿರೋಧ ವ್ಯಕ್ತವಾಗಿತ್ತು. ಹೆಣ್ಣು ಮಕ್ಕಳ ಮದುವೆ ಖರ್ಚನ್ನು ಗಂಡು ಮಕ್ಕಳು ಮಾಡಿರುತ್ತಾರೆ, ಮದುವೆಗಾಗಿ ಮಾಡಿದ ಸಾಲದ ಹೊರೆ ಅವರ ಮೇಲಿರುತ್ತದೆ. ಜೊತೆಗೆ ಪಿತ್ರಾರ್ಜಿತ ಆಸ್ತಿ ಭಾಗವಾಗುವಾಗ ಮತ್ತೆ ಅವರಿಗೆ ಪಾಲು ಕೊಟ್ಟಲ್ಲಿ ಕೈ ಬರಿದಾಗುತ್ತದೆ, ತಾವು ಮುಳುಗಿ ಹೋಗುತ್ತೇವೆ ಎಂಬುದು ಅವರ ಅಳಲಾಗಿತ್ತು. ಈ ತಿದ್ದುಪಡಿ ಜಾರಿಯಾದ ಮೇಲೆ ಹೊರಬಿದ್ದ ಸರ್ವೋಚ್ಚ ನ್ಯಾಯಾಲಯ, ತನ್ನ ಅನೇಕ ತೀರ್ಪುಗಳಲ್ಲಿ ಹೆಣ್ಣು ಮಕ್ಕಳು ಬರೀ ಆಸ್ತಿಗಷ್ಟೇ ಅಲ್ಲ, ಸಾಲಗಳಿಗೂ ಹೊಣೆಗಾರರಾಗುತ್ತಾರೆ ಎಂದು ಸ್ಪಷ್ಟಪಡಿಸಿದೆ. ಮಹಿಳೆಯರನ್ನು ಆರ್ಥಿಕವಾಗಿ ಸಬಲಗೊಳಿಸುವುದು, ವರದಕ್ಷಿಣೆಯ ಪಿಡುಗು ನಿರ್ಮೂಲನಗೊಳಿಸುವುದು ತಿದ್ದುಪಡಿಯ ಮೂಲ ಕಾರಣವಾಗಿತ್ತು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.