ADVERTISEMENT

ಯಾತನೆಗೆ ಬಿಡುಗಡೆ ಎಂದು ?

​ಪ್ರಜಾವಾಣಿ ವಾರ್ತೆ
Published 13 ಏಪ್ರಿಲ್ 2012, 19:30 IST
Last Updated 13 ಏಪ್ರಿಲ್ 2012, 19:30 IST
ಯಾತನೆಗೆ ಬಿಡುಗಡೆ ಎಂದು ?
ಯಾತನೆಗೆ ಬಿಡುಗಡೆ ಎಂದು ?   

ಬಹುಶಃ ಅವಳಿಗೆ ಅರವತ್ತು ವರ್ಷ ವಯಸ್ಸಾಗಿರಬೇಕು. ಅವಳು ಆಗ ತಾನೆ ತುಮಕೂರು ಜಿಲ್ಲೆಯ ಅದ್ಯಾವುದೋ ಹೊಲದಲ್ಲಿ ಕುರಿ ಕೂಡಿಸಿದ್ದರಿಂದ ಅಲ್ಲಿ ಇದ್ದವಳು, ಮಗಳು ಮುಟ್ಟಾದಳು ಎಂಬ ಸುದ್ದಿ ತಿಳಿದು  ಹಿರಿಯೂರು ತಾಲ್ಲೂಕಿನ ಕೆರೆಕೋಡಿಹಟ್ಟಿಗೆ ವಾಪಸಾಗಿದ್ದಳು.
 
ಯಾಕೆಂದರೆ ಮಗಳ ಮನೆಯಲ್ಲಿ ಚಿಕ್ಕಮಕ್ಕಳನ್ನು ನೋಡಿಕೊಳ್ಳಲು ಯಾರೂ ಇರಲಿಲ್ಲ. ಆದ್ದರಿಂದ ತನ್ನೊಂದಿಗೆ ಕುರಿ ಮೇಯಿಸಲು ಬಂದ ಹಿರಿಯರಿಗೆ ಜವಾಬ್ದಾರಿ ಹೊರೆಸಿ ಬಂದಿದ್ದಳು. ನಾವು ಅವಳ ಮಗಳು ಮತ್ತಿತರರೊಂದಿಗೆ ರಕ-ರಕ ಖಡಿ ಬಿಸಿಲಲ್ಲಿ ಜಾಲಿ ಮುಳ್ಳಿನ ಕೆಳಗೆ ಕೂತ್ದ್ದಿದೆವು. ಕೆಲವು ಹೆಣ್ಣುಹುಡುಗಿಯರು ನಮ್ಮಿಂದ ಬಹಳ ದೂರ ಕೂತು ಬೆರಗಾಗುತ್ತ, ಕೊಂಚ ಭಯಗೊಳ್ಳುತ್ತ ಕೂತಿದ್ದರು.

 ನಾವು ಹಟ್ಟಿಯೊಳಗೆ ಹೋಗುವ ಮುನ್ನ ಒಂದು ತಪ್ಪು ಮಾಡಿದ್ದೆವು. ಅದೆಂದರೆ ಹಟ್ಟಿಯ ಬಹು ದೂರದಲ್ಲಿ ಮುಟ್ಟಾದವರಿಗಾಗಿ ಕಟ್ಟಿಸಿದ ಮನೆ ನೋಡಲು ಹೋಗ್ದ್ದಿದೆವು. ಅದೊಂದು ಥೇಟ್ ಆಶ್ರಯ ಮನೆಯೇ ಆಗಿತ್ತು. ಸುತ್ತಲೂ ಬಟಾ ಬಯಲು. ಹನಿ ನೀರಿಲ್ಲ. ಮುರುಕು ಬಾಗಿಲು. ಬಾಗಿಲು ತೆರೆದರೆ ಗವ್ವೆನ್ನುವ ಕತ್ತಲು. ಖಾಲಿಯಾದ ಸಾರಾಯಿ ಬಾಟಲಿಯ ಮುಚ್ಚಳದಿಂದ ಹೊರಗಿಣುಕಿದ ದೀಪದ ಬತ್ತಿ.

ಇದೆಂಥ ಅವಸ್ಥೆ? ಗೋಡೆಗಳ ನಾಲ್ಕೂ ಕಡೆಗೂ ಅಲ್ಲಲ್ಲಿ ಕವನಗಳ ಸಾಲುಗಳು. ತುಂಬ ಖುಷಿಯಿಂದ ಅನಾಮಿಕ-ಅಕ್ಷರಸ್ಥ ಗೆಳತಿಯರು ಬರೆದ ಕವನಗಳನ್ನು ಓದಿದೆವು. ಹೊರಬಂದ ಕೂಡಲೇ ಹತ್ತಾರು ದನಿಗಳು ಒಮ್ಮೆಲೆ,  `ಹಟ್ಟಿ ಒಳಗಡೆ ಬರಬ್ಯಾಡಿ. ಸೂತಕದ ಮನೆ ಮುಟ್ಟಿಸಿಕೊಂಡಿರಿ..... ಅದಕ್ಕೇ~  ಶಬ್ದಗಳು ಕಿವಿಗಪ್ಪಳಿಸಿದವು.

ಅನಿವಾರ್ಯವಾಗಿ ನಾವು, ಋತುಕ್ರಿಯೆಯಲ್ಲಿರುವ ಯುವತಿಯರೊಂದಿಗೆ ಮಾತಾಡತೊಡಗಿದೆವು. ಅವರಲ್ಲಿ ಒಬ್ಬಳಿಗೆ ಪ್ರತೀ ತಿಂಗಳೂ ತೀವ್ರ ಹೊಟ್ಟೆನೋವಿರುತ್ತದೆ. ಅವಳು ಅನುಭವಿಸುವ ಹಿಂಸೆ ಹೇಳತೊಡಗಿದಂತೆ ನನಗೆ ಕಣ್ಣಲ್ಲಿ ನೀರು ಮಡುಗಟ್ಟಿತು. ಮಗುವಿಗೆ ಹಾಲು ಕೊಡುವಂತಿಲ್ಲ.
 
ಕೊಟ್ಟರೆ ಆ ಮಗು ಸಹ ಇವರೊಂದಿಗೆ ಇಲ್ಲೇ ಇರಬೇಕು. ಓದುವ ಹುಡುಗಿಯರಾದರೆ ನಾಲ್ಕು ದಿನಪೂರ್ತಿ ಪುಸ್ತಕ ಪೆನ್ನು ನೋಟ್‌ಬುಕ್ಕು ಮುಟ್ಟುವಂತಿಲ್ಲ. ಮುಟ್ಟಿದರೆ ಅವೆಲ್ಲ ನೀರಿನಲ್ಲಿ ತೊಳೆದು ಸೂತಕ ತೆಗೆಯಬೇಕು! 

ಬೇಸಿಗೆ ಬಂದಾಗೆಲ್ಲ ಹಟ್ಟಿಯಲ್ಲಿ ನೀರಿಗೆ ಬರ ಬರುತ್ತದೆ. ಆಗೆಲ್ಲ ಇವರು ಮೂರು ದಿನಗಟ್ಟಲೇ ಚಂಬು ನೀರಿನಲ್ಲಿ ದಿನ ತಳ್ಳಬೇಕು. ಅನೇಕ ಮಹಿಳೆಯರು ಸ್ಯಾನಿಟರಿ ಪ್ಯಾಡು ಬಳಸುವುದಿಲ್ಲ. ಬಟ್ಟೆ ಬಳಸುವರು. ಒಗೆದು ಮತ್ತೆ ಮುಂದಿನ ತಿಂಗಳು ಅದನ್ನೇ ಬಳಸುವರು. ಹಾಸಿ-ಹೊದ್ದುಕೊಳ್ಳಲು ಹರಕು ಬಟ್ಟೆ ಮಾತ್ರ.  ಊಟ ಮಾಡಲು ಹೇಗೆ? ದೂರದ ಮರದ ಟೊಂಗೆಯ ಸಂದಿನಲ್ಲಿ ಬಿಳಿ ಒಡಕು ಗಂಗಾಳು ತುರುಕಿಟ್ಟಿದ್ದರು.

ಗಂಗಾಳು ಕಳೆದರೆ, ಗಾಳಿಗೆ ಹಾರಿ ಹೋದರೆ ಇನ್ನೊಂದು ತರಲಾರರು. ಪ್ರತಿ ತಿಂಗಳೂ ಮುಟ್ಟಾಗುವುದರಿಂದ ಎಷ್ಟಂತ ತರುವುದು? ಆಗೆಲ್ಲ ಅಂಗೈಯಲ್ಲಿಯೇ ಊಟ!
 
` ಮುದ್ದೆ ಮೇಲೀಟು ಸಾರು ಹಾಕ್ಕೊಂಡು ಅಂಗೇ ತಿಂತೇವೆ ಅಕ್ಕಾ~  ಅಂದ ಅವಳು  `ಅಯ್ಯೋ ಯಾಕ್ ಕೇಳ್ತಿರಿ ನಮ್ ಗತಿ..... ಇದೊಂದು ನರಕ ಅಕ್ಕಾ~  ಎಂದು ಮುಗಿಲು ನೋಡಿದಳು.

 ಮುಟ್ಟಾದಾಗ ಮನೆಯಲ್ಲಿಯೇ ಇದ್ದರೆ ಅವರ ಕುಲದೇವರುಗಳಾದ ಕರೆಕಲ್ಲದೇವರು ಬಾಲದೇವರು ಮತ್ತಿತರ ದೇವರುಗಳು ಮುನಿಸಿಕೊಳ್ಳುವವಂತೆ. ದೈವ ದೇವರು ಪುರಾತನ ಕಾಲದಿಂದ ಹಿಂಗೇ ಮಾಡಿದ್ದು, ಕಟ್ಟುನಿಟ್ಟಾಗಿ ಇದನ್ನು ಜಾರಿ ಮಾಡಬೇಕು ಎಂಬುದು ದೈವದ ಆಜ್ಞೆಯಂತೆ. ಆದ್ದರಿಂದಲೇ ಮುಟ್ಟಾದಾಗ, ಬಾಣಂತನವಾಗುವಾಗ ಮತ್ತು ಬಾಣಂತನವಾದ ಎರಡು ತಿಂಗಳು ಹೀಗೇ ಹಟ್ಟಿಯಿಂದ ದೂರ, ಗುಡಿಸಲು ಹಾಕಿ ಮೈಲಿಗೆ ಹೋಗುವವರೆಗೂ ಅಲ್ಲಿಯೇ ಇರಬೇಕು. ತಿಂಗಳ ಋತುವಾದರೆ ನಾಲ್ಕು ದಿನದಿಂದ ವಾರದವರೆಗೆ. ಬಾಣಂತಿಯಾದರೆ ಕನಿಷ್ಠ ತಿಂಗಳು ಹಸುಕೂಸಿನೊಂದಿಗೆ ಕಾಡಲ್ಲಿಯೇ ವಾಸ. ಹುಳು ಹುಪ್ಪಡಿ ಮುಟ್ಟಿದರೆ, ಪ್ರಾಣಿಗಳಿಂದ ಜೀವಕ್ಕೆ ಅಪಾಯವಾದರೆ?~ಹುಂ ಹಾಗೇ ಇರಬೇಕು. ಹಿಂದಿನವರೆಲ್ಲ ಹಾಗೇ ಇದ್ದರು~  ಕೆಲವರ ಅಂಬೋಣ.

ಕಮರುವ ಕನಸುಗಳು
 ನಾವು ಭೇಟಿಯಾದ ಕೆಲವು ಹಟ್ಟಿಗಳಲ್ಲಿ ವಿದ್ಯಾರ್ಥಿನಿಯರಿದ್ದರು. ಅವರು ಹತ್ತನೇ ತರಗತಿಯ ಪರೀಕ್ಷೆ ಬರೆಯಬೇಕು. ಅವರೆಲ್ಲ ಹಟ್ಟಿಯ ಹೊರಗೆ ಕಣ್ಣಲ್ಲಿ ಕಮರುತ್ತಿರುವ ಕನಸುಗಳನ್ನು ಹೊತ್ತು ಕೂತಿದ್ದರು. ಅಂದರೆ ತಿಂಗಳಲ್ಲಿ ಆರು ದಿನಗಳಗಟ್ಟಲೇ ಪುಸ್ತಕ ಮುಟ್ಟದೇ ಹೋದರೆ ಓದುವುದು ಹೇಗೆ? ಪಾಸಾಗುವುದು ಹೇಗೆ? ಈ ಸ್ವರ್ಧಾತ್ಮಕ ಯುಗದಲ್ಲಿ ಭವಿಷ್ಯ ಹೇಗೆ? ಅವರಲ್ಲಿ ಉತ್ತರವಿರಲಿಲ್ಲ. ಅವರೆಲ್ಲರ ಮಾತು ಒಂದೇ ಆಗಿತ್ತು. `.... 

ನಾವು ಇನ್ನಷ್ಟು ಓದಬೇಕು. ಹೆಂಗಾನಾ ಮಾಡಿ ಈ ಅಮಾನವೀಯ ಪದ್ದತಿ ನಿಲ್ಸಿ...  ಓದಿದವರು, ನೌಕರಸ್ಥರು, ಹೀಗೆ ಎಲ್ಲ ಹೆಣ್ಣುಮಕ್ಕಳು ಈ ನಿಯಮಗಳನ್ನೇ ಪಾಲಿಸಬೇಕಂತೆ. ಇಲ್ಲದಿದ್ದರೆ ಏನಾಗುವುದು?~

ಹಿರಿಯರ ತಲೆಯಲ್ಲಿ ಬಲವಾಗಿ ಸೇರಿಕೊಂಡ ನಂಬಿಕೆಯೆಂದರೆ ಸೂತಕದವರು ಹಟ್ಟಿಗೆ-ಮನೆಗೆ ಬಂದರೆ, ಹಾವು ಚೇಳು ಬರುವವು. ಗುಡ್ಲುಗಳು ಸುಡಬಹುದು ಮತ್ತೆ ಏನೆಲ್ಲ ಅಪಾಯ ಘಟಿಸಿದರೂ ಅದಕ್ಕೆ ಕಾರಣ ಮೈಲಿಗೆ ಇದ್ದವರನ್ನು ಮುಟ್ಟಿಸಿಕೊಳ್ಳುವುದರಿಂದ. ಇದು ಸತ್ಯವೇ? ಎಂದು ಕೇಳಿದರೆ ಮಹಿಳೆಯರು ` ನಮಗೆ ಗೊತ್ತಿಲ್ಲ, ಹಿರೀರು ಹೇಳಿದ್ರು. ನಾವು ಕೇಳಿದ್ವಿ. ಆದರೆ ಪ್ರತಿ ತಿಂಗಳು ಅನುಭವಿಸುವ ಯಾತನೆಯಿಂದ ನಮಗೆ ಬಿಡುಗಡೆ ಬೇಕು~  ಎಂದು ಕಣ್ಣೀರು ತಂದು ಹೇಳುವರು.

ನಾವು ಭೇಟಿ ಮಾಡಿದ ಎಲ್ಲ ಹಳ್ಳಿಗಳಲ್ಲಿ ಬಹುತೇಕ ಹುಡುಗಿಯರು ಹತ್ತನೇ ತರಗತಿ ಪಾಸಾಗಿರುವವರು. ಪ್ರತಿ ತಿಂಗಳು ಆರು ದಿನ ಪುಸ್ತಕ ಮುಟ್ಟದೇ ಒಳ್ಳೆಯ ಅಂಕ ತಗೊಂಡವರೂ ಅವರಲ್ಲಿರುವರು.

ಮುಟ್ಟಾದಾಗ ಸಮರ್ಪಕ ನೀರಿನ, ಸ್ನಾನದ ವ್ಯವಸ್ಥೆಯೂ ಇಲ್ಲದೆ ಇರುವುದರಿಂದ ಆರೋಗ್ಯಕ್ಕೆ ಸಮಸ್ಯೆಗಳಾಗಿವೆಯೇ ಎಂದು ವಿಚಾರಿಸಿದೆವು. ಕೆರೆಕೋಡಿ ಹಟ್ಟಿಯಲ್ಲಿ ನೂರು ಮನೆಗಳಿವೆ. ಈಗಾಗಲೇ  ಎಂಟು ಮಹಿಳೆಯರು ಗರ್ಭಾಶಯದ ಸಮಸ್ಯೆಯಿಂದ ಹಿಸ್ಟರೆಕ್ಟೆಮಿ ಆಪರೇಷನ್ ಮಾಡಿಸಿಕೊಂಡಿರುವರು. ಅನೇಕರು ಈ ತೊಂದರೆಯಿಂದ ನರಳುತ್ತಿರುವರು. ಇನ್ನೂ ಬಿಳಿಮುಟ್ಟು ಮತ್ತಿತರ ತೊಂದರೆಗಳು ಸಹಜವಾಗಿ ಕೇಳಿಬಂದವು.

ಹೊಸ ಬೆಳಕು
ನಮಗೆ ಇದೆಲ್ಲದಕ್ಕೂ ಉತ್ತರವೆಂಬಂತೆ ಅಚ್ಚರಿಯೊಂದು ಕಾದಿತ್ತು. ಅದೆಂದರೆ ಚಿತ್ರದುರ್ಗ ತಾಲ್ಲೂಕಿನ ಚಿಕ್ಕಪುರ ಮತ್ತು ಹಿರಿಯೂರು ತಾಲ್ಲೂಕಿನ ಮುದಿಯಜ್ಜನಹಟ್ಟಿ ಎಂಬ ಗೊಲ್ಲರ ಹಟ್ಟಿಗಳಲ್ಲಿ ಈ ಪದ್ದತಿ ಕೈಬಿಟ್ಟಿರುವುದು. ಮುದಿಯಜ್ಜನ ಹಟ್ಟಿಯಲ್ಲಂತೂ ಯಜಮಾನನನ್ನು ವಿಚಾರಿಸಿದರೆ, `ಅಯ್ಯೋ ಅದೆಲ್ಲ ತಿಳೀದ ಕಾಲಕ್ಕಿತ್ತು ಕಣವ್ವ. ಈಗ ನಮ್ಮ ಮಕ್ಕಳು ಓದಿ ಜಾಣರಾಗಬೇಕು.
 
ಬೆಳೆದ ಹೆಣಮಕ್ಕಳನ್ನ ಪ್ರಾಣಿಗಳಂಗೆ ಕಾಡಿನಂಥ ಕಡೆ ಇಡಾದು ಒಳ್ಳೆದಲ್ಲ. ನಮ್ಮಲ್ಲಿ ಯಾರೂ ಹಟ್ಟಿಯಾಚೆ ಇರಾದಿಲ್ಲ~  ಎಂದು ಹೇಳುವಾಗ ಸುಮಾರು ಮೂವತ್ತಕ್ಕಿಂತ ಹೆಚ್ಚು ಸಂಖ್ಯೆಯಲ್ಲಿರುವ ಯುವತಿಯರು ಕಣ್ಣಲ್ಲಿ ಬೆಳಕು ತುಂಬಿಕೊಂಡು ಕಡುಕತ್ತಲಲ್ಲೂ ಸ್ವಾಭಿಮಾನದಿಂದ ನಗುತ್ತಿದ್ದರು. `ನಮ್ಮಲ್ಲಿ ಅದೆಲ್ಲ ಆಚರಿಸಾದಿಲ್ಲ..... ನಾವೆಲ್ಲರೂ ಹತ್ತನೇ ತರಗತಿ ಪಾಸಾಗಿದ್ದೇವೆ. ಹಿರಿಯೂರು ಇಲ್ಲಿಂದ ಹದಿನೆಂಟು ಕಿಲೋ ಮೀಟರು.
ಕಾಲೇಜಿಗೆ ಹೋಗಬೇಕಂದ್ರೆ ಬಸ್ಸಿಲ್ಲ. ಮಧ್ಯಾಹ್ನ ಒಂದೇ ಸರ್ತಿ ಸರ್ಕಾರಿ ಬಸ್ಸು ಬರಾದು~ ಎಂದು ಗೋಳು ತೋಡಿಕೊಂಡರು. ಮುದಿಯಜ್ಜನಹಟ್ಟಿಯ ದೂರದಲ್ಲಿ ಸರ್ಕಾರ ಕಟ್ಟಿದ ಇಂಥದ್ದಕ್ಕೆ ಇರುವ ಮನೆಗೆ ಅಲ್ಲಿ ಕೆಲಸವಿಲ್ಲ. ದಿನಕ್ಕೆ ನಾಲ್ಕಾವರ್ತಿ ಬಸ್ಸು ಬಂದರೆ ಯುವತಿಯರೆಲ್ಲ ಕಾಲೇಜು ಸೇರುವರು.

`ಕೃಷ್ಣಕುಟೀರ~ ಬೇಡ...
ಇನ್ನು ಚಿಕ್ಕಪುರದಲ್ಲಿಯಂತೂ ಹಟ್ಟಿಯ ಗಂಡಸರೆಲ್ಲ ಸೇರಿ ಒಕ್ಕೊರಲಿನಿಂದ ಹೇಳಿದ್ದು ನಮಗಂತೂ ಅಚ್ಚರಿಯೆನಿಸಿತು. `ನಮ್ಮ ಹಟ್ಟಿಲಿ ಯಾವ ಹೆಂಗಸೂ ಅಂಥ ಆಚರಣೆ ಮಾಡಾದಿಲ್ಲ. ನಾಲ್ಕಾರು ಮನೆಗಳಿವೆ. ಅವರಿಗೆ ಸುಮ್ಮನೆ ದೇವರ ಭಯ ಇದೆ. ದೇವರು ಯಾರಿಗೂ ಹಿಂಗೆ ಮಾಡು ಅಂತ ಹೇಳೋದಿಲ್ಲ.
 
ಆದರೆ ಸೂತಕದ ಮನೆ(ಕೃಷ್ಣಕುಟೀರ) ಕಟ್ಟಿಸುತ್ತೇನೆಂದು ಹೇಳುವ ನೆಪದಲ್ಲಿ ಸರ್ಕಾರ  ವೋಟು ಬ್ಯಾಂಕಿನ ರಾಜಕೀಯ ಮಾಡ್ತಾ ಇದೆ. ಕೃಷ್ಣಕುಟೀರ ಕಟ್ಟುವುದೆಂದರೆ ನಮಗೆ ಅಪಮಾನ ಮಾಡಿದಂತೆ. ಅದರ ಬದಲಿಗೆ ಆಸ್ಪತ್ರೆ ತೆಗೀಲಿ. ಉದ್ಯೋಗ ತರಬೇತಿ ಕೇಂದ್ರಗಳು ತೆರೆಯಲಿ. ನಮ್ಮ ಹೆಣ್ಣುಮಕ್ಕಳಿಗೆ ವೈಜ್ಞಾನಿಕ ವಿಚಾರಧಾರೆ ಕೊಡಲಿ.

ಬೇರೆಯವರ ಮಕ್ಕಳು ಐಟಿಬಿಟಿ ಸಾಫ್ಟವೇರ್ ಅಂತೆಲ್ಲ ಓದುವಾಗ ನಾವು ಮಾತ್ರ ಇಂಥ ಮೌಢ್ಯತೆಯಲ್ಲಿ ಯಾಕಿರಬೇಕು? ಸರ್ಕಾರ ಇದಕ್ಕೆ ಕುಮ್ಮಕ್ಕು ಕೊಡಬಾರದು.~ ಹೀಗೆಂದು ಹೇಳಿದವರು ತಿಮ್ಮರಾಯಪ್ಪನೆಂಬ ಹಿರಿಯ ಯಜಮಾನ. ಅದಕ್ಕೆ ಎಲ್ಲರೂ ಸಹಮತಿಸುತ್ತಿದ್ದರು. ಹೆಣ್ಣುಮಕ್ಕಳಂತೂ ತಾವು ಉಳಿತಾಯದ ಸಂಘ ಕಟ್ಟಿದ್ದೇವೆ. ಈ ಬೇಸಿಗೇಲಿ ಕೆಲಸ ಇಲ್ಲ. ವಾರಕ್ಕೊಮ್ಮೆ ವೇತನ ಕೊಡುವಂಗಿದ್ರೆ ಉದ್ಯೋಗ ಖಾತ್ರಿ ಕೆಲಸಕ್ಕೆ ತಾವು ಅರ್ಜಿ ಹಾಕುವುದಾಗಿ ಹೇಳಿದರು. 

ಜಿಲ್ಲಾ ಪಂಚಾಯತ್ನ ಮಾಜಿ ಅಧ್ಯಕ್ಷರಾದ ಮಹಾಲಿಂಗಣ್ಣ ಅವರನ್ನು ಭೇಟಿಯಾದೆವು. `ಈ ಪದ್ಧತಿ ತಪ್ಪು. ಇದನ್ನು ಹೇಗಾದರೂ ನಿಲ್ಲಿಸಬೇಕು. ತನ್ನದೊಂದು ಹಟ್ಟಿಯಲ್ಲಿ ಅದಿಲ್ಲ~ ಎಂದು ಹೇಳಿದರು. ಮಾತ್ರವಲ್ಲ ಅನೇಕ ಪೂಜಾರಿಗಳು ಈ ಪದ್ದತಿ ತೆಗೆದು ಹಾಕುವ ಕಳಕಳಿ ವ್ಯಕ್ತ ಮಾಡಿದರು.

ಮಹಿಳಾ ಮಕ್ಕಳ ಕಲ್ಯಾಣ ಇಲಾಖೆ, ಆರೋಗ್ಯ ಇಲಾಖೆ, ಮಹಿಳಾ ಆಯೋಗ ಏನು ಮಾಡುತ್ತಿರುವರು? ಮೌಢ್ಯ-ಕಂದಾಚಾರ ತೆಗೆದು ಹಾಕಿ ವೈಜ್ಞಾನಿಕ ತಿಳುವಳಿಕೆ ಕೊಡುವ ಮೂಲಕ ಈ ಸಂಕಟದಿಂದ ಮಹಿಳೆಯರನ್ನು ಪಾರು ಮಾಡಬಹುದು. ಆದರೆ ಸರ್ಕಾರ ಇದನ್ನು ಕೈಬಿಟ್ಟು ಕೃಷ್ಣಕುಟೀರ ಕಟ್ಟಿಸುವ ಮೂಲಕ ಮಹಿಳೆಯರನ್ನು ತುಚ್ಛೀಕರಿಸುವ ಸನಾತನ ನಂಬಿಕೆಯನ್ನು ಗಟ್ಟಿ ಮಾಡಲು ಹೊರಟಿರುವುದು ಷಡ್ಯಂತ್ರವಲ್ಲವೇ?

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT