ADVERTISEMENT

ಹೊಂದಾಣಿಕೆ ಇದ್ದರೆ ಸಾಕು

ರೂಪಶ್ರೀ ನಾಗರಾಜ್
Published 18 ಡಿಸೆಂಬರ್ 2015, 19:53 IST
Last Updated 18 ಡಿಸೆಂಬರ್ 2015, 19:53 IST

‘ರಸವೇ ಜನನ, ವಿರಸ ಮರಣ, ಸಮರಸವೇ ಜೀವನ’ ಎಂದು ಇಡೀ ಜೀವನದ ಸಾರಾಂಶವನ್ನು ತಮ್ಮ ಸರಳ ಸಾಲುಗಳಲ್ಲಿ ಹೇಳಿದರು ಕವಿ ದ.ರಾ. ಬೇಂದ್ರೆ. ದಾಂಪತ್ಯ ಅನ್ನುವುದು ‘ಅಧಿಕಾರ-ಜವಾಬ್ದಾರಿ’ ಎನ್ನುವ ಪದಗಳ ಕಟ್ಟುಪಾಡಿನಲ್ಲಿ ಬರುವುದಲ್ಲ, ಪರಸ್ಪರ ಹೊಂದಾಣಿಕೆ ಇದ್ದರೆ ಈ ಪದಗಳು ತಮ್ಮದೇ ಆದ ವಿಶಾಲ ಅರ್ಥದಲ್ಲಿ ನಮ್ಮ ಜೀವನದಲ್ಲಿ ಹಾಸುಹೊಕ್ಕಾಗಿಬಿಡುತ್ತವೆ.

ಈಗಿನ ಹೆಣ್ಣು ಮಕ್ಕಳು ಶಿಕ್ಷಣ ಪಡೆದು ಮಾನಸಿಕವಾಗಿ-ಆರ್ಥಿಕವಾಗಿ ಸ್ವಾವಲಂಬಿಗಳಾಗಿದ್ದಾರೆ. ದಾಂಪತ್ಯದ ವಿಷಯದಲ್ಲಿ ಜವಾಬ್ದಾರಿ-ಅಧಿಕಾರಗಳು ಅವರಿಬ್ಬರ ವಿಶಾಲ ಮನಸ್ಥಿತಿಯ ಮೇಲೆ ಅವಲಂಬಿತವಾಗುತ್ತವೆ. ಈಗ ಸಮಾನತೆ, ಸಮಾನರು ಎಂಬ ವಾದಗಳು ನಡೆಯುತ್ತಿದ್ದರೂ, ತಮ್ಮದೇ ಆದ ಮಿತಿಗಳಿವೆ ಎಂದು ಇಬ್ಬರೂ ಅರ್ಥ ಮಾಡಿಕೊಳ್ಳಬೇಕು.

ಗಂಡನೊಂದಿಗೆ ಎಲ್ಲ ವಿಷಯಗಳಲ್ಲೂ ಸಮಾನತೆಗೆ ಹೋರಾಡುತ್ತೇನೆ ಎಂದು ಹೆಂಡತಿ ಹೇಳಿದರೆ ಅದು ಬಾಲಿಶ ಅನಿಸುತ್ತದೆ. ಮುಕ್ತವಾದ ಮಾತುಕತೆ ಒಂದು ಒಳ್ಳೆಯ ದಾಂಪತ್ಯದ ಭದ್ರ ಬುನಾದಿ. ಯಾವುದೇ ವಿಷಯದ ಕುರಿತು ಮುಕ್ತವಾಗಿ ಚರ್ಚಿಸಿ, ಸೂಕ್ತ ನಿರ್ಧಾರ ಕೈಗೊಳ್ಳುವುದು ಒಳ್ಳೆಯ ಬೆಳವಣಿಗೆ. 

ಇತರರಿಗೆ ತಮ್ಮನ್ನು ಹೋಲಿಸಿಕೊಂಡು ಕೀಳರಿಮೆಯಿಂದ ಬಳಲುವ  ಅನೇಕರು ನಮಗೆ ಕಾಣಸಿಗುತ್ತಾರೆ. ಸಕಾರಾತ್ಮಕ ಚಿಂತನೆ ಇದ್ದ ಕಡೆ ಅಧಿಕಾರದ ದರ್ಪ ಸಾಧ್ಯವೇ ಇಲ್ಲ!  ಪ್ರಾಮಾಣಿಕತೆ ಇರುವ ಕಡೆ ಜವಾಬ್ದಾರಿ ಅಸಹನೀಯ ಆಗುವುದೂ ಇಲ್ಲ!  ಪರಸ್ಪರ ಕೇಳುವ-ತಿಳಿಯುವ ಭಾವವು ಹೃದಯದಿಂದಲೇ ಮೂಡಬೇಕು. ಹಾಗಾದಾಗ ಈ ಪದಗಳು ಕಟ್ಟುಪಾಡುಗಳಾಗದೇ, ಪರಸ್ಪರ ಕೊಡು-ಕೊಳ್ಳುವಿಕೆಯ ಸಂತಸದ ಕ್ಷಣಗಳಾಗುತ್ತವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.