ADVERTISEMENT

ಶಾಸಕ ಬೈರತಿ ಬಸವರಾಜ್‌ಗೆ ಜೈಕಾರ ಕೂಗಿದ ಇನ್‌ಸ್ಪೆಕ್ಟರ್‌!

ವಿಡಿಯೊ ವೈರಲ್‌: ಸಾರ್ವಜನಿಕರಿಂದ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 5 ಫೆಬ್ರುವರಿ 2020, 19:35 IST
Last Updated 5 ಫೆಬ್ರುವರಿ 2020, 19:35 IST

ಬೆಂಗಳೂರು: ಕೆ.ಆರ್. ಪುರದ ಬಿಜೆಪಿ ಶಾಸಕ ಬೈರತಿ ಬಸವರಾಜ್ ಅವರ ಜನ್ಮದಿನಕ್ಕೆ 53 ಕೆ.ಜಿ. ತೂಕದ ಕೇಕ್ ಕತ್ತರಿಸಿ, ಕೈಗೆ ಗದೆ ನೀಡಿ ಜೈಕಾರ ಕೂಗಿದ ಸ್ಥಳೀಯ ಇನ್‌ಸ್ಪೆಕ್ಟರ್‌ ಅಂಬರೀಷ್‌ ವರ್ತನೆಗೆ ಸಾರ್ವಜನಿಕ ವಲಯದಿಂದ ಆಕ್ರೋಶ ವ್ಯಕ್ತವಾಗಿದೆ.

ಕೆ.ಆರ್‌. ಪುರ ಠಾಣಾ ವ್ಯಾಪ್ತಿಯ ಅಕ್ಷಯನಗರದಲ್ಲಿ ನಡೆದ ನಿರ್ಮಲಾ ಕೊಲೆ ಪ್ರಕರಣದಲ್ಲಿ ಆರೋಪಿಗಳ ಬಂಧನಕ್ಕೆ ಅಂಬರೀಷ್‌ ನೇತೃತ್ವದಲ್ಲಿ ಪೊಲೀಸರ ತಂಡ ಅಂಡಮಾನ್ ನಿಕೋಬಾರ್‌ಗೆ ತೆರಳಿದೆ. ಹೀಗಾಗಿ, ನೋಟಿಸ್ ಇನ್ನೂ ಅವರ ಕೈ ಸೇರಿಲ್ಲ. ಅಂಬರೀಷ್‌ ಅವರು ಬೆಂಗಳೂರಿಗೆ ಬಂದ ಬಳಿಕ, ಅವರು ನೀಡುವ ಹೇಳಿಕೆ ಆಧರಿಸಿ ಮುಂದಿನ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದರು. ಬೈರತಿ ಬಸವರಾಜ್ ಅವರು ತಮ್ಮ ಬೆಂಬಲಿಗರ ಸಮ್ಮುಖದಲ್ಲಿ ಫೆ. 4 ರಂದು ಜನ್ಮದಿನ ಆಚರಿಸಿಕೊಂಡರು. ಅಲ್ಲಿಗೆ ಇನ್‌ಸ್ಪೆಕ್ಟರ್‌ ಅಂಬರೀಷ್‌ ಸೇರಿ ಕೆಲವು ಪೊಲೀಸ್ ಅಧಿಕಾರಿಗಳು ಶುಭ ಕೋರಲು ತೆರಳಿದ್ದರು. ಶಾಸಕರಿಗಾಗಿ ವಿಶೇಷವಾಗಿ ಕೇಕ್ ಮಾಡಿಸಿಕೊಂಡು ಹೋಗಿದ್ದ ಅಂಬರೀಷ್‌, ಅದನ್ನು ಶಾಸಕರ ಕೈಯಿಂದ ಕತ್ತರಿಸಿ ಗದೆ ನೀಡಿದರು.

ಬಳಿಕ ವೇದಿಕೆ ಮೇಲೆಯೇ ‘ಬೈರತಿ ಬಸವರಾಜ್ ಅಣ್ಣನಿಗೆ ಜೈ ಜೈ’ ಎಂದು ಜೈಕಾರ ಕೂಗಿದರು. ಈ ಸಂದಭದಲ್ಲಿ ಬೈರತಿ ಬಸವರಾಜು ಅವರು ಸುಮ್ಮನಿರುವಂತೆ ಎರಡು ಬಾರಿ ಹೇಳುವ ವಿಡಿಯೊ ವೈರಲ್ ಆಗಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.