ADVERTISEMENT

ಇಂಚು ನೀರಲ್ಲಿ ಸೌತೆ

ಡಾ.ಮಲಿಕ್ಲಾರ್ಜುನ ಕುಂಬಾರ
Published 3 ಆಗಸ್ಟ್ 2015, 19:30 IST
Last Updated 3 ಆಗಸ್ಟ್ 2015, 19:30 IST

ಗದಗ ಜಿಲ್ಲೆಯ ಗಜೇಂದ್ರಗಡದ ಬಳಿ ಇರುವ ಪುರ್ತಗೇರಿ ಗ್ರಾಮದಲ್ಲಿನ ಈ ಹೊಲದಲ್ಲಿ ಕೆಲವರ್ಷಗಳ ಹಿಂದೆ ಕೊಳವೆಬಾವಿ ತೋಡಿದಾಗ ಬಿದ್ದ ನೀರು ಕೇವಲ ಒಂದು ಇಂಚು. ಇಲ್ಲಿರುವ ಸೌತೆ ಬೆಳೆ ವರುಣನಿಗಾಗಿ ಹಪಹಪಿಸುತ್ತಿತ್ತು. ಆದರೂ ಮಳೆ ಬರಲಿಲ್ಲ, ಒಂದು ಇಂಚು ನೀರೇ ಗತಿಯಾಯಿತು. ಆದರೆ ಈ ಇಂಚು ನೀರಿನಿಂದಲೇ ಸೌತೆ ಬೆಳೆಗಳು ಇಂದು ನಳನಳಿಸುತ್ತಿವೆ, ಭರಪೂರ ಕಾಯಿ ಬಿಟ್ಟು ತನ್ನ ಒಡೆಯನ ಹೊಟ್ಟೆ ತುಂಬಿಸುತ್ತಿವೆ!

ಕಾದ ಇಳೆಯು ಮಳೆಗಾಗಿ ಹಂಬಲಿಸುತ್ತಿರುವಾಗ ಅಲ್ಪ ನೀರಿನಲ್ಲಿ ಸೌತೆ ಬೆಳೆದು ಅಸಾಧ್ಯವೆನಿಸುವ ಕೆಲಸವನ್ನು ಮಾಡಿದವರು ಹನುಮಂತಪ್ಪ ಫಕೀರಪ್ಪ ಮುಶಿಗೇರಿ. ರೋಣಕ್ಕೆ ಹೋಗುವ ರಸ್ತೆಗೆ ಹೊಂದಿಕೊಂಡಂತೆ ಕಾಲಕಾಲೇಶ್ವರಕ್ಕೆ ಹೋಗುವ ಪುರ್ತಗೇರಿ ತಿರುವಿನಲ್ಲಿರುವ ಈ 30 ಗುಂಟೆ ಹೊಲಕ್ಕೆ ಆ ಒಂದಿನಿತು ನೀರೇ ಜೀವನಾಧಾರವಾಗಿದೆ. ತಮ್ಮ ಜಮೀನಿನ ಪಕ್ಕದಲ್ಲಿಯೇ 30 ಗುಂಟೆ ಜಮೀನನ್ನು 3500 ರೂಪಾಯಿಗಳಿಗೆ ಲಾವಣಿ ಹಿಡಿದು ಹನುಮಂತಪ್ಪ ಈ ಯಶಸ್ವಿ ಪ್ರಯೋಗ ಮಾಡಿದ್ದಾರೆ.

ಆರಂಭದಲ್ಲಿ, ಕೊಳವೆಬಾವಿಯಲ್ಲಿ ನೀರು ಸಾಕಷ್ಟು ಸಿಗದೇ ಇದ್ದಾಗ ಧೃತಿಗೆಡದ ಹನುಮಂತಪ್ಪ ಮಳೆಯನ್ನು ನಂಬಿ ಸೌತೆ ಬೀಜ ಹಾಕಿದ್ದರು. ವಾರ ಕಳೆದರೂ ಮಳೆ ಬರಲಿಲ್ಲ, ಅದು ಬರುವ ಮುನ್ಸೂಚನೆಯೂ ಸಿಗಲಿಲ್ಲ. ಹನುಮಂತಪ್ಪನವರಿಗೆ ಏನು ಮಾಡಬೇಕು ಎಂದು ತೋಚದಾಯಿತು. ಆದರೂ ಧೃತಿಗೆಡದೆ ಪ್ರಯೋಗಶೀಲರಾದರು. ತಾವು ಕೊರೆಸಿದ ಕೊಳವೆ ಬಾವಿಯಿಂದ ಸ್ವಲ್ಪಸ್ವಲ್ಪವೇ ಬರುತ್ತಿದ್ದ ನೀರಿಗೆ ಒಂದು ಇಂಚಿನ ಪ್ಲಾಸ್ಟಿಕ್ ಪೈಪನ್ನು ಅಳವಡಿಸಿದರು. ಆ ಪೈಪ್‌ ಮೂಲಕ ಹನಿಹನಿಯಾಗಿ ಬಂದ ನೀರನ್ನು ಪ್ರತಿ ಗಿಡಕ್ಕೆ ಹರಿಸಿದರು.

ಆಗ ಮಾಡಿದ ಖರ್ಚು ಕೇವಲ ಎರಡು ಸಾವಿರ ರೂಪಾಯಿಗಳು, ಜೊತೆಗೆ ಒಂದು ಚೀಲ ಗೊಬ್ಬರ. ಆಳನ್ನು ನಂಬಿಕೊಳ್ಳದೇ ಕುಟುಂಬ ಸದಸ್ಯರು ಕಳೆಗಳನ್ನು ಕಿತ್ತರು. ಪರಿಣಾಮವಾಗಿ ಹನಿ ನೀರಿನಲ್ಲಿಯೇ ಸೌತೆಯ ಅಧಿಕ ಇಳುವರಿ ಬರುತ್ತಿದೆ. ದಿನವೂ ಈ ಸೌತೆಕಾಯಿಯನ್ನು ಕಿತ್ತು ಪಟ್ಟಣಕ್ಕೆ ಕಳಿಸುತ್ತಾರೆ. ಒಂದಕ್ಕೆ ಸುಮಾರು 130 ರೂಪಾಯಿಗಳಂತೆ ಮಾರಿ, ನಿತ್ಯವೂ ದಿನಕ್ಕೆ 1000ದಿಂದ 1200ರೂಗಳನ್ನು ತರುತ್ತಾನೆ. ‘ಇದಕ್ಕಿಂದ ಇನ್ನೇನು ಬೇಕು ಹೇಳಿ’ ಎನ್ನುವುದು ಹನುಮಂತಪ್ಪನವರ ಪ್ರಶ್ನೆ.

ಬಲಿತ ದೊಡ್ಡ ಸೌತೆಯನ್ನು ಕತ್ತರಿಸಿ ತನ್ನ ಎತ್ತುಗಳಿಗೆ ಹಾಕುತ್ತಾರೆ. ‘ಒಕ್ಕಲುತನದಲ್ಲಿ ಏನೂ ಇಲ್ಲವೆಂದು ಸದಾ ಗೊಣಗುವವರಿಗೆ ಹನುಮಪ್ಪ ಉತ್ತರವಾಗಿದ್ದಾರೆ’ ಎನ್ನುತ್ತಾರೆ ಕೃಷಿಕ ಶರಣಪ್ಪ ಹದರಿ.  ಮಳೆಯಿಲ್ಲದೇ ಬಿಸಿಲಿನ ತಾಪದಿಂದ ಕಾದ ಇಳೆಯು ಮಳೆಗಾಗಿ ಹಂಬಲಿಸುತ್ತಿರುವಾಗ ಅಲ್ಪ ನೀರಿನಲ್ಲಿ ಸೌತೆ ಬೆಳೆದಿರುವ ಹನುಮಂತಪ್ಪನವರ ಶ್ರಮ ಇತರರಿಗೂ ಮಾದರಿಯಾಗಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.