ADVERTISEMENT

ಎತ್ತ ಹೋದಳೀ ಹಳದಿ ಚೆಲುವೆ?

ಟಿ.ಎಚ್‌.ಪಂಚಾಕ್ಷರಯ್ಯ
Published 16 ಅಕ್ಟೋಬರ್ 2017, 19:30 IST
Last Updated 16 ಅಕ್ಟೋಬರ್ 2017, 19:30 IST
ಎತ್ತ ಹೋದಳೀ ಹಳದಿ ಚೆಲುವೆ?
ಎತ್ತ ಹೋದಳೀ ಹಳದಿ ಚೆಲುವೆ?   

ದೀಪಾವಳಿ ಹಬ್ಬದ ಸಂಭ್ರಮಕ್ಕೂ ಹುಚ್ಚೆಳ್ಳಿಗೂ ಬಿಡದ ನಂಟು. ‘ದೀವಳಿಗೆ ತಿಪ್ಪಮ್ಮನ ಪೂಜೆಗೆ ಹುಚ್ಚೆಳ್ಳು ಹೂವ ಶ್ರೇಷ್ಠ’ ಎಂಬ ಭಾವನೆ ಮಣ್ಣಿನ ಮಕ್ಕಳಲ್ಲಿದೆ. ಆದರೆ ಈಚಿನ ವರ್ಷಗಳಲ್ಲಿ ಹುಚ್ಚೆಳ್ಳು ಹೂವೆಂಬ ‘ಹಳದಿ ಚೆಲುವೆ’ಯ ಮುಖ ನೋಡುವುದೇ ಕಷ್ಟವಾಗುತ್ತಿದೆ. ಗ್ರಾಮೀಣರು ಕೃಷಿಗೆ ತೋರುತ್ತಿರುವ ಮುನಿಸು ಎಷ್ಟರ ಮಟ್ಟಿಗೆ ಇದೆ ಎಂಬುದನ್ನು ಹೊಲದೊಳಗಿನ ತಾಕುಗಳು, ಅಕ್ಕಡಿಸಾಲುಗಳ ನಾಪತ್ತೆಯನ್ನು ನೋಡಿ ತಿಳಿಯಬಹುದು.

ರಾಗಿ ಹೊಲಗಳಲ್ಲಿ ಸಾವಿರ ಕಾಳಾಗಿ ತೆನೆಗಟ್ಟು ಹೊತ್ತಲ್ಲಿ ಹಸಿರು ಹೊಲವನ್ನು ಹುಚ್ಚೆಳ್ಳು ಹೂ ಅಲಂಕರಿಸಬೇಕಿತ್ತು. ಸಜ್ಜೆ ಕಡ್ಡಿ, ನಾಟಿಜೋಳ, ಅವರೆ ಹೂ, ಅಲಸಂದೆ, ಹುಚ್ಚೆಳ್ಳು, ನವಣೆ, ಸಾಮೆಯ ತೆನಗೆಳು ಕೂಡ ನಾಪತ್ತೆ. ಅಲ್ಲಲ್ಲಿ ಕಾಣುವ ಸಾಸಿವೆ ಗಿಡಗಳು ಮಾತ್ರ ಹಸಿರು ಉಡುಗೆ ಉಟ್ಟ ಹೊಲಗಳ ನಡುವೆ ಏಕತಾನತೆ ಕಂಡ ಕಣ್ಣಿಗೆ ಸಾಂತ್ವನ ಹೇಳುವಂತಿವೆ.

ಗ್ರಾಮೀಣ ಮಹಿಳೆಯರು ಹೊಲಗಳು, ಬಯಲನ್ನು ತಲಾಶ್ ಮಾಡಿ ತಂದ ತಂಗಡಿ ಹೂ, ಸೇವಂತಿಗೆ ಹೂ, ಹಣ್ಣೆ ಹೂಗಳಿಗೆ ಅಲಂಕಾರದ ಭಾರ ಹೊರಿಸಿದ್ದಾರೆ. ಕೆಲವು ಸಂಪ್ರದಾಯಸ್ಥರು ‘ಹುಚ್ಚೆಳ್ಳು ಹೂ’ಗಾಗಿ ಹೊಲಗಳಿರುವ ಊರೂರು ಅಲೆಯುತ್ತಿದ್ದಾರೆ. ಪಟ್ಟಣಿಗರು ಸೆಗಣಿಗಾಗಿಯೂ ಪರದಾಡುವ ಚಿತ್ರಣವನ್ನು ಹಬ್ಬದ ದಿನದಂದು ನೋಡಬಹುದು.

ADVERTISEMENT

‘ಹೋಗ್ಲೀ ಬಿಡಮ್ಮಾ, ಹುಚ್ಚೆಳ್ಳು ಹೂ ಇಲ್ಲದಿದ್ರೆ ದುಡ್ಡಕೊಟ್ಟು ಅದೇ ಬಣ್ಣದ ಹೂ ತಂದು ಹಬ್ಬ ಮಾಡಿದರಾಯ್ತು’ ಎನ್ನುವ ಯುವಕರ ಮಾತು ಹಿರಿಯರಿಗೆ ಪಾಠವಾಗುತ್ತಿದೆ. ‘ಅಯ್ಯೋ ಮಂಕೇ, ಎಷ್ಟು ದುಡ್ಡು ಕೊಟ್ರೂ ಹುಚ್ಚೆಳ್ಳು ಹೂವಿನಲ್ಲಿ ತಿಪ್ಪಮ್ಮನ ಪೂಜೆ ಮಾಡಿದ ತೃಪ್ತಿ ಸಿಗಲ್ಲ’ ಎಂದ್ಹೇಳುವ ಹೆತ್ತವರ ನಗುವ ಧ್ವನಿಯೂ ಕೇಳುತ್ತಿದೆ.

‘ಮನೆಯ ಗೋಡೆಗೆ ಸೆಗಣಿ ಮೆತ್ತಿ ರಚಿಸಿದ ಸೂರ್ಯ-ಚಂದ್ರರು, ನೆಲದ ಮೇಲೆ ಕಟ್ಟುವ ಕೋಟೆಯ ಗೋಡೆ, ಮನೆಯ ಬಾಗಿಲ ಬಳಿ ಹಚ್ಚಿದ ದೀಪಗಳು ಹುಚ್ಚೆಳ್ಳು ಹೂವಿನ ಅಲಂಕಾರವಿಲ್ಲದೆ ಆಕರ್ಷಣೆ ಕಳೆದುಕೊಂಡಿವೆ’ ಎನ್ನುತ್ತಾರೆ ಗ್ರಾಮೀಣ ಮಹಿಳೆಯರು.

ಹಿಂಗಾರು ಮಳೆಗೆ ತೂಗಬೇಕಿದ್ದ ಅಕ್ಕಡಿ ಸಾಲುಗಳಲ್ಲಿ ಬೆಳೆದ ನಮೂನೆಯ ಹೂಗಳಲ್ಲಿ ದೀಪಾವಳಿಯ ತಿಪ್ಪಮ್ಮ ಅಲಂಕೃತಗೊಳ್ಳಬೇಕಿದೆ. ಈಚೆಗೆ ತಿಪ್ಪಮ್ಮನನ್ನು ತಿದ್ದಿ ಅಲಂಕಾರ ಮಾಡುವುದು ರೈತ ಮಹಿಳೆಯರಿಗೆ ಸವಾಲಿನ ಸಂಗತಿಯಾಗಿದೆ. ಕೃಷಿಯಲ್ಲಿ ಪರಾಗಸ್ಪರ್ಶ ಕ್ರಿಯೆಯಿಂದ ಪೈರು ಸಮೃದ್ಧಿಯಾಗಿ ಫಸಲು ನೀಡಲೆಂದು ಹುಚ್ಚೆಳ್ಳು ಬೆಳೆಯುವುದು ರೂಢಿಯಲ್ಲಿದೆ. ಕೊರೆಗಾಲಕ್ಕೆ ಕಾಳುಗಟ್ಟಬೇಕಾದ ಹುಚ್ಚೆಳ್ಳು ಹೂ ಎಲ್ಲಿಯೂ ಕಾಣುತ್ತಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.