ADVERTISEMENT

ಕಬ್ಬಿನ ನೆಲದಲಿ ಇಂಗ್ಲಿಷ್‌ ಸೌತೆ

ಬಿ.ಎನ್.ಶ್ರೀಧರ
Published 20 ಮಾರ್ಚ್ 2017, 19:30 IST
Last Updated 20 ಮಾರ್ಚ್ 2017, 19:30 IST
ಕಬ್ಬಿನ ನೆಲದಲಿ ಇಂಗ್ಲಿಷ್‌ ಸೌತೆ
ಕಬ್ಬಿನ ನೆಲದಲಿ ಇಂಗ್ಲಿಷ್‌ ಸೌತೆ   

ಬೆಳಗಾವಿ ಮತ್ತು ಬಾಗಲಕೋಟೆ ಜಿಲ್ಲೆಗಳಲ್ಲಿ ಸಕ್ಕರೆ ಕಾರ್ಖಾನೆಗಳದ್ದೇ ಕಾರುಬಾರು. ಇವು ಜಿಲ್ಲಾ ರಾಜಕಾರಣದ ಮೇಲೂ ಹಿಡಿತ ಸಾಧಿಸಿವೆ. ಹೀಗಾಗಿಯೇ ವಾಣಿಜ್ಯ ಬೆಳೆಯಾದ ಕಬ್ಬು ಈ ಭಾಗದಲ್ಲಿ ಒಂದು ರೀತಿ ಸಾಂಪ್ರದಾಯಿಕ ಬೆಳೆಯಾಗಿಬಿಟ್ಟಿದೆ. ಹೆಚ್ಚು ತಲೆ ನೋವು ಇಲ್ಲ ಎಂದು ಬಹುತೇಕ ರೈತರು ಕಬ್ಬನ್ನೇ ಬೆಳೆಯುತ್ತಾರೆ. ಒಮ್ಮೆ ಕಟಾವು ಮಾಡಿದರೆ ಒಂದು ವರ್ಷ ಕಾಲ ನೀರು–ಗೊಬ್ಬರ ಕೊಟ್ಟರೆ ಸಾಕು ಎನ್ನುವ ಧೋರಣೆ ಅನೇಕ ರೈತರದ್ದು.

ಇದಕ್ಕೆ ಹೆಚ್ಚು ನೀರು ಬೇಕು ಹಾಗೂ ಎಕರೆಗಟ್ಟಲೆ ಜಮೀನಿನಲ್ಲಿ ಕಬ್ಬು ಹಾಕಿದರೂ ಸರಿಯಾದ ಬೆಲೆ ಸಿಗಲ್ಲ. ಹೀಗಾಗಿ ಒಳ್ಳೆ ದುಡಿಮೆ ಆಗುವುದಿಲ್ಲ ಎಂದು ಅಳಲನ್ನು ತೋಡಿಕೊಳ್ಳುವ ರೈತರು ಅದನ್ನು ಬಿಟ್ಟು ಪರ್ಯಾಯ ಬೆಳೆ ಬಗ್ಗೆ ಚಿಂತನೆ ನಡೆಸಿದ್ದು ಬಹಳ ಕಡಿಮೆಯೇ. ಅಂತಹವರಿಗೆ ಅಪವಾದವಾಗಿ ಇಲ್ಲೊಬ್ಬ ಅಧಿಕಾರಿ–ಕಮ್‌– ರೈತ ಇದ್ದಾರೆ. ಅವರ ಹೆಸರು ಅಶೋಕ ಪಾಟೀಲ.

ರಾಮದುರ್ಗ ತಾಲ್ಲೂಕಿನ ಸಾಲಹಳ್ಳಿ ಮೂಲದ ಅವರಿಗೆ ಬೀಜಗುಪ್ಪಿಯಲ್ಲಿ ಪಿತ್ರಾರ್ಜಿತವಾಗಿ ಬಂದಿರುವ 20 ಎಕರೆ ಜಮೀನು ಇದೆ. ಚಿಕ್ಕಂದಿನಿಂದಲೂ ಕೃಷಿ ಬಗ್ಗೆ ಆಸಕ್ತಿ ಇರುವ ಅವರು ಸಮಾಜ ಕಾರ್ಯದಲ್ಲಿ ಸ್ನಾತಕೋತ್ತರ ಪದವಿ ನಂತರ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯಲ್ಲಿ ಅಧಿಕಾರಿಯಾಗಿ ಕೆಲಸಕ್ಕೆ ಸೇರಿದರು. ಹೀಗೆ 20 ವರ್ಷದಿಂದ ಉದ್ಯೋಗದಲ್ಲಿ ಇದ್ದರೂ ತಮ್ಮ ಜಮೀನನ್ನು ಮಾತ್ರ ಒಮ್ಮೆಯೂ ಖಾಲಿ ಬಿಟ್ಟಿಲ್ಲ.

ADVERTISEMENT

ಚಿಕ್ಕ ವಯಸ್ಸಿನಲ್ಲಿದ್ದಾಗಲ್ಲೇ ಅವರ ತಂದೆ 20 ಎಕರೆ ಜಮೀನನ್ನು ಅವರಿಗೆ ಪಾಲು ಕೊಟ್ಟು ಕೃಷಿಗೆ ಹಚ್ಚಿದ್ದರು. ಅಂದಿನಿಂದಲೇ ಸ್ವಾತಂತ್ರವಾಗಿ ಕೃಷಿ ಮಾಡಿಕೊಳ್ಳುತ್ತಾ ಬಂದಿದ್ದಾರೆ. ಉದ್ಯೋಗಕ್ಕೆ ಸೇರಿದ ನಂತರ ಇಬ್ಬರು ರೈತರಿಗೆ ಜಮೀನು ಕೊಟ್ಟು ಅದರಲ್ಲಿ ಕಬ್ಬು ಬೆಳೆಯಲು ಸಲಹೆ ನೀಡಿದ್ದರು. ಎಷ್ಟೇ ಕಷ್ಟಪಟ್ಟು ಬೆಳೆದರೂ ಎಕರೆಗೆ ₹60ರಿಂದ 80 ಸಾವಿರ ಉಳಿದರೆ ಅದೇ ಹೆಚ್ಚು. ಹೀಗಾಗಿ ಹೊಸ ಪ್ರಯೋಗಗಳತ್ತ ಅವರು ಕಣ್ಣಾಡಿಸಿದರು.

(ಮಾರುಕಟ್ಟೆಗೆ ಕೊಂಡೊಯ್ಯಲು ಸಿದ್ಧಗೊಂಡ ಇಂಗ್ಲಿಷ್ ಸೌತೆ)

ಒಮ್ಮೆ ಸ್ನೇಹಿತರ ಸಲಹೆ ಮೇರೆಗೆ ಪುಣೆಗೆ ಹೋದಾಗ ಅಲ್ಲೊಂದು ಹೊಸ ಆಲೋಚನೆ ಹುಟ್ಟಿತು. ಅದೇ ಪಾಲಿ ಹೌಸ್‌. ಪ್ರಾಯೋಗಿಕವಾಗಿ ಚಿಕ್ಕ ಮಟ್ಟದಲ್ಲಿ ಇದನ್ನು ಮಾಡಿ, ಮಾರುಕಟ್ಟೆಯಲ್ಲಿ ಬೇಡಿಕೆ ಇರುವ ಪದಾರ್ಥಗಳನ್ನು ಬೆಳೆಯಲು ಅವರು ತೀರ್ಮಾನಿಸಿದರು. ಆ ಪ್ರಕಾರ ಕೃಷಿ ಇಲಾಖೆಯ ಸಹಾಯಧನ ಸೇರಿಸಿಕೊಂಡು ₹25 ಲಕ್ಷ ಖರ್ಚು ಮಾಡಿ 20 ಗುಂಟೆಯಲ್ಲಿ ಎರಡು ಪಾಲಿ ಹೌಸ್‌ ನಿರ್ಮಿಸಿದರು. ಅದರ ನಂತರ ಯಾವ ಬೆಳೆ ಬೆಳೆಯಬೇಕು ಎನ್ನುವ ಗೊಂದಲ. ಕೆಲವರು ಗುಲಾಬಿ ಬೆಳೆಸಿ ಎಂದು ಹೇಳಿದರೆ, ಇನ್ನೂ ಕೆಲವರು ಏನಾದರು ‘ಅಪರೂಪ’ದ್ದನ್ನು ಬೆಳೆಯಿರಿ ಎಂದು ಬಗೆಬಗೆಯ ಸಲಹೆ ಕೊಟ್ಟರಂತೆ. ‘ಒಬ್ಬೊಬ್ಬರು ಒಂದೊಂದು ಹೇಳಿದಾಗ ಗೊಂದಲ–ಗೋಜಲು. ನಂತರ ಅಂಗಡಿಯೊಂದಕ್ಕೆ ಹೋಗಿ ಬೇಡಿಕೆ ಇರುವ ಪದಾರ್ಥಗಳ ಪಟ್ಟಿ ಪಡೆದೆ. ಅಲ್ಲಿನ ಅಧಿಕಾರಿಗಳ ಸಲಹೆ ಪ್ರಕಾರ ಇಂಗ್ಲಿಷ್‌ ಸೌತೆ ಸಸಿ ನೆಟ್ಟೆ. ಅದನ್ನು ಪುಣೆಯ ಕೆ.ಎಫ್‌.ಬಯೊಪ್ಲಾಂಟ್ಸ್‌ ಸಂಸ್ಥೆಯಿಂದ ತಂದೆ’ ಎಂದು ಅಶೋಕ ಪಾಟೀಲ್‌ ವಿವರಿಸುತ್ತಾರೆ.

‘ಈ ವರ್ಷದ ಜನವರಿ 20ರಂದು ಸಸಿ ನೆಟ್ಟೆ. ಫೆಬ್ರುವರಿ 20ಕ್ಕೆ ಇಂಗ್ಲಿಷ್‌ ಸೌತೆ ಕಟಾವಿಗೇ ಬಂತು! ಒಂದು ರೀತಿ ಖುಷಿ. ನಿಖರವಾಗಿ ಒಂದು ತಿಂಗಳಿಗೆ ಬೆಳೆ ಕಟಾವಿಗೆ ಬಂತು. ಇದರ ಖುಷಿಯಲ್ಲಿ ಮಾರುಕಟ್ಟೆಗೆ ತೆಗೆದುಕೊಂಡು ಹೋದರೆ ಒಂದು ಕೆ.ಜಿ ಸೌತೆಗೆ ₹30 ಬೆಲೆ ಸಿಕ್ಕಿತು. ಅದರಿಂದ ನನ್ನ ಆನಂದಕ್ಕೆ ಪಾರವೇ ಇರಲಿಲ್ಲ. 24 ದಿನಕ್ಕೆ 8 ಟನ್‌ ಸೌತೆ ಕಟಾವು ಮಾಡಿ ಮಾರುಕಟ್ಟೆಗೆ ಸರಬರಾಜು ಮಾಡಲಾಗಿದೆ. ಸರಾಸರಿ ಕೆ.ಜಿ.ಗೆ ₹25 ಸಿಕ್ಕಿದೆ. ವಿಪರೀತ ಬೇಡಿಕೆ ಇರುವ ಈ ಸೌತೆಯನ್ನು 20 ಗುಂಟೆ (ಅರ್ಧ ಎಕರೆ) ಜಾಗದಲ್ಲಿ ಕನಿಷ್ಠ 22 ಟನ್‌ ಬೆಳೆಯುವ ವಿಶ್ವಾಸ ಇದೆ. ಕೃಷಿ ತಂತ್ರಜ್ಞರು ಹೇಳುವ ಪ್ರಕಾರ ಕೆಲವೊಮ್ಮೆ ಇದು ಇನ್ನೂ ಹೆಚ್ಚಾಗುವ ಸಾಧ್ಯತೆ ಇದೆ.

ಇಷ್ಟು ಜಾಗದಲ್ಲಿ ಕಬ್ಬು ಬೆಳೆದರೆ ₹40–60 ಸಾವಿರವೂ ಸಿಗುವುದಿಲ್ಲ. ಅದೂ ವರ್ಷಕ್ಕೆ. ಆದರೆ, ಇಂಗ್ಲಿಷ್‌ ಸೌತೆಯಿಂದ ಕನಿಷ್ಠ ಅಂದರೂ ₹5ರಿಂದ 5.5 ಲಕ್ಷ ಸಿಗುತ್ತದೆ. ಇದರಲ್ಲಿ ಒಂದು ಲಕ್ಷ ಖರ್ಚು ಕಳೆದರೂ ನನಗೇನೂ ನಷ್ಟ ಆಗುವುದಿಲ್ಲ. ಮೂರು ತಿಂಗಳಲ್ಲಿ ಇದಕ್ಕಿಂತ ಹೆಚ್ಚು ಯಾವ ಕೃಷಿಯಲ್ಲಿ ಹುಟ್ಟುತ್ತದೆ ನೀವೇ ಹೇಳಿ’ ಎನ್ನುತ್ತಾರೆ ಪಾಟೀಲ್‌.

**

ಇಂಗ್ಲಿಷ್ ಸೌತೆಗೆ ಹೆಚ್ಚಿದ ಬೇಡಿಕೆ
‘ಇದು ಮಾಮೂಲಿ ಸೌತೆಯಂತಲ್ಲ. ಇದರಲ್ಲಿ ನೀರಿನ ಅಂಶ ವಿಪರೀತ ಹೆಚ್ಚು. ಗ್ರೀನ್ ಮತ್ತು ವೈಟ್ ಹೆಸರಿನಲ್ಲಿ ಲಭ್ಯ ಇದ್ದು, ಬೇಸಿಗೆಯಲ್ಲಿ ನೀರಿನ ದಾಹ ತಣಿಸಲು ಇದು ಹೇಳಿ ಮಾಡಿಸಿದ್ದು.

ಹೀಗಾಗಿ ಬಿಸಿಲು ಹೆಚ್ಚು ಇರುವ ಭಾಗಗಳಲ್ಲಿ ಇದಕ್ಕೆ ಬೇಡಿಕೆ ಇದೆ. ಈ ಭಾಗದಲ್ಲಿ ಇಂತಹ ಸೌತೆಯನ್ನು ನಾಲ್ಕೈದು ರೈತರು ಬೆಳೆಯುತ್ತಿದ್ದು, ಮಾರುಕಟ್ಟೆಯಲ್ಲಿ ಬೇಡಿಕೆ ಹೆಚ್ಚಿಸಿದೆ. ಹೆಚ್ಚು ಕಡಿಮೆ ಜವಾರಿ ಸೌತೆಯಷ್ಟೇ ಬೆಲೆಗೆ ಇದು ಲಭ್ಯ ಇದೆ. ಕೆಲವೊಮ್ಮೆ ತುಸು ದುಬಾರಿಯೂ ಇರುತ್ತದೆ. ಆದರೂ ಇದರ ಬೇಡಿಕೆಗೇನೂ ಕಡಿಮೆ ಆಗಿಲ್ಲ’ ಎನ್ನುತ್ತಾರೆ ಮೋರ್‌ ಅಂಗಡಿಯ ಉತ್ತರ ಕರ್ನಾಟಕ ಭಾಗದ ವ್ಯವಸ್ಥಾಪಕ (ಖರೀದಿ) ಮಹೇಶ.

**

ಕಬ್ಬಿಗೆ ಸಂಕಷ್ಟದ ನಂಟು
‘ಕಬ್ಬು ಬೆಳೆಯುವ ಯಾವ ರೈತರೂ ಸುಖವಾಗಿಲ್ಲ. ಲಾಭ ಬಂತೂ ಎಂದು ಹೇಳುವವರೂ ಇಲ್ಲ. ಅದಕ್ಕಿಂತ ಮುಖ್ಯವಾಗಿ ವಿಪರೀತ ನೀರು ಬೇಕು. ಕಬ್ಬು ಕಟಾವಿಗೆ ಬಂದ ನಂತರ ಕಾರ್ಖಾನೆಗಳ ಜತೆ ಸೂಕ್ತ ಬೆಲೆಗಾಗಿ ಗುದ್ದಾಟ ಬೇರೆ. ಇದರ ಯಾವ ಗೊಡವೆಯೇ ಬೇಡ ಎಂದು ಪರ್ಯಾಯ ಬೆಳೆಗಳತ್ತ ಮುಖ ಮಾಡಿದ್ದೇನೆ.

ಪ್ರಾಯೋಗಿಕವಾಗಿ ಮಾಡಿದ ಈ ಪ್ರಯತ್ನಕ್ಕೆ ಒಳ್ಳೆಯ ಲಾಭ ಸಿಕ್ಕಿದೆ. ಹೀಗಾಗಿ ಹಂತ ಹಂತವಾಗಿ ಕಬ್ಬಿಗೆ ಬದಲಾಗಿ ಪರ್ಯಾಯ ಬೆಳೆಗಳನ್ನು ಬೆಳೆಯುತ್ತೇನೆ. ಇದಷ್ಟೇ ಅಲ್ಲ, ಕಬ್ಬು ಬೆಳೆಗೆ ಜೋತುಬಿದ್ದಿರುವ ರೈತರನ್ನು ಕರೆತಂದು ಅದರ ಲಾಭ– ನಷ್ಟದ ಬಗ್ಗೆ ವಿವರಿಸಿ ಹೇಳುತ್ತೇನೆ. ಮಾರುಕಟ್ಟೆಯಲ್ಲಿನ ಬೇಡಿಕೆಯನ್ನಾಧರಿಸಿ ಕೃಷಿ ಚಟುವಟಿಕೆ ಮಾಡಲು ಉತ್ತೇಜನ ನೀಡುತ್ತೇನೆ’ ಎಂದು ಅಶೋಕ ಪಾಟೀಲ ವಿವರಿಸುತ್ತಾರೆ.
(ಸಂಪರ್ಕಕ್ಕೆ: 94815 67333)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.