ADVERTISEMENT

ಕಲಾಂಗಣ ಕೊಂಕಣಿಗರ ಸಂಸ್ಕೃತಿಯ ಬಿಂಬ

ಬಳಕೂರು ವಿ.ಎಸ್.ನಾಯಕ
Published 24 ಅಕ್ಟೋಬರ್ 2016, 19:30 IST
Last Updated 24 ಅಕ್ಟೋಬರ್ 2016, 19:30 IST
ಕಲಾಂಗಣ ಕೊಂಕಣಿಗರ ಸಂಸ್ಕೃತಿಯ ಬಿಂಬ
ಕಲಾಂಗಣ ಕೊಂಕಣಿಗರ ಸಂಸ್ಕೃತಿಯ ಬಿಂಬ   
ಗೋವಾದಿಂದ ರಾಜ್ಯದ ವಿವಿಧೆಡೆ ವಲಸಿಗರಾಗಿ ಬಂದವರು ಕೊಂಕಣಿ ಸಮುದಾಯದ ಜನ. ಉತ್ತರ ಕನ್ನಡ ಮತ್ತು ದಕ್ಷಿಣ ಕನ್ನಡದ ಕರಾವಳಿ ಪ್ರದೇಶಗಳಲ್ಲಿ ಹೆಚ್ಚಾಗಿ ಕಾಣುವ ಇವರ ವೇಷ ಭೂಷಣ, ಆಚಾರ ವಿಚಾರ, ಭಾಷೆ, ನಡವಳಿಕೆ, ಸಂಸ್ಕೃತಿ ಎಲ್ಲವೂ ವಿಭಿನ್ನ.  
 
ಈ ವಿಭಿನ್ನ ಆಯಾಮಗಳನ್ನು ಸಿಮೆಂಟ್‌ ಕಲಾಕೃತಿಗಳ ಮೂಲಕ ಜನರ ಮುಂದಿಡುವ ಚಿಕ್ಕ ಪ್ರಯತ್ನ ಮಾಡಿದೆ ಕನ್ನಡ ಸಂಸ್ಕೃತಿ ಇಲಾಖೆ. ಬೆಂಗಳೂರಿನ ‘ಕರ್ನಾಟಕ ಅಕಾಡೆಮಿ’ ಹಾಗೂ ಮಂಗಳೂರಿನ ‘ಮಾಂಡ್ ಸೋಭಾನ್’ ಇದಕ್ಕೆ ಕೈಜೋಡಿಸಿವೆ. ಕೊಂಕಣಿ ಸಮುದಾಯದಲ್ಲಿ ಬೇರೆ ಬೇರೆ  ಜನಾಂಗವಿದ್ದು, ಅಲ್ಲಿಯ ಜನರ ಸಂಪೂರ್ಣ ಜೀವನ ಶೈಲಿಯನ್ನು ಪರಿಚಯಿಸುವಂತಹ ಪ್ರಯತ್ನ ಇಲ್ಲಿದೆ. ಈ ಕಲಾಕೃತಿಗಳು ಅನಾವರಣಗೊಂಡಿರುವುದು ಮಂಗಳೂರಿನಿಂದ 10 ಕಿ.ಮೀ. ದೂರದ ಶಕ್ತಿ ನಗರದಲ್ಲಿರುವ ‘ಕಲಾಂಗಣ’ದಲ್ಲಿ. ಕಲಾಂಗಣವು ಕೊಂಕಣಿ ಸಮುದಾಯದ ಸಾಂಸ್ಕೃತಿಕ ಸಂಸ್ಥೆ. 
 
ಕೊಂಕಣಿ ಸಮುದಾಯದ ನೃತ್ಯ ಪ್ರಾಕಾರಗಳಲ್ಲಿ ಹಲವು ವಿಶೇಷತೆಗಳಿವೆ. ಅದನ್ನು ಇಲ್ಲಿ ಕಲಾಕೃತಿಗಳ ಮೂಲಕ ಪರಿಚಯಿಸಲಾಗಿದೆ. ಉತ್ತರ ಕನ್ನಡ ಜಿಲ್ಲೆಯ ಸಿದ್ದಿಜನರ -ದಮ್ಮಾಂಗ್ ನೃತ್ಯ, ಮಂಗಳೂರು ಕೊಂಕಣಿಗರ-ಬಾಯ್ಲನಾಂಚ್ (ಹೆಣ್ಣು ಮಕ್ಕಳ ನೃತ್ಯ), ಕುಡುಮಿ - ಗಮ್ಮಟ, ಗೋವಾ ಕೊಂಕಣಿ ಜನರ ಲಗೋರ, ಭಟ್ಕಳ್ ನವಾಯತರ ದಪ್ ಡ್ಯಾನ್ಸ್, ಗೋವಾ ಸಮುದಾಯದ ಗೊಡಾಯಿ, ಮೊಡ್ನಿ ನೃತ್ಯ ಇವೆಲ್ಲವೂ ಇಲ್ಲಿ ಸಿಮೆಂಟ್‌ ಮೂಲಕ ಮೈದಳೆದಿವೆ. 
 
20 ಹಿರಿಯ–ಕಿರಿಯ ಕಲಾವಿದರು 14 ದಿನಗಳ ಅವಧಿಯಲ್ಲಿ ಇದನ್ನು ರೂಪಿಸಿದ್ದಾರೆ. ‘ಸಿಮೆಂಟ್‌ನಲ್ಲಿ ಮಾಡುವ ಕಲಾಕೃತಿಗಳು ಆಕರ್ಷಕವಾಗಿರುತ್ತವೆ. ಅಷ್ಟೇ ಅಲ್ಲದೇ, ಬೇರೆ ಕಲಾಕೃತಿಗಳಂತೆ ತಯಾರಿಕಾ ವೆಚ್ಚ, ನಿರ್ವಹಣಾ ವೆಚ್ಚವಾಗಲಿ ದುಬಾರಿಯಾಗಿರುವುದಿಲ್ಲ. ಇದರ ಜೊತೆಗೆ ಕಲಾಕೃತಿಗಳಲ್ಲಿ ಶ್ರೀಮಂತಿಕೆ ಮೆರುಗು ಕೂಡ ಬರುತ್ತದೆ. ಆದ್ದರಿಂದಲೇ ಸಿಮೆಂಟ್‌ ಆರಿಸಿಕೊಂಡಿರುವುದು’ ಎನ್ನುತ್ತಾರೆ ಕಲಾವಿದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.