ADVERTISEMENT

ಕಾಳು ಮೆಣಸು ವಿಭಿನ್ನ ಪರಿಕರ

ಹೊಸ ಹೆಜ್ಜೆ -41

ಗಣಪತಿ ಹಾಸ್ಪುರ
Published 17 ಏಪ್ರಿಲ್ 2017, 19:30 IST
Last Updated 17 ಏಪ್ರಿಲ್ 2017, 19:30 IST
ಕಾಳು ಮೆಣಸು ವಿಭಿನ್ನ ಪರಿಕರ
ಕಾಳು ಮೆಣಸು ವಿಭಿನ್ನ ಪರಿಕರ   

ಕಪ್ಪು ಬಂಗಾರವೆಂದೇ ಖ್ಯಾತಿಯಾಗಿರುವ ಕಾಳುಮೆಣಸಿನ ಕೃಷಿಯು ಈಗ ಅಡಿಕೆ ತೋಟದ ಕೃಷಿಯಾಗಿ ಉಳಿದುಕೊಂಡಿಲ್ಲ. ತೆಂಗಿನ ಪ್ಲಾಟು, ಸೊಪ್ಪಿನ ಬೆಟ್ಟ, ಮನೆಯ ಅಂಗಳದಲ್ಲಿಯೂ ವ್ಯವಸ್ಥಿತವಾಗಿ ಬೆಳೆಯಲಾಗುತ್ತಿದೆ.

ಇದು ನಾಜೂಕಿನಿಂದ ಮಾಡುವ ಕೃಷಿಯಾಗಿದ್ದು ಇದರ ಕೊಯ್ಲು ಕೂಡ ಅಷ್ಟೇ ನಾಜೂಕು. ಕಾಳು ಮೆಣಸಿನ ಕೊಯ್ಲು ಮಾಡುವಾಗ ಅದರ ಬಳ್ಳಿಗಳಿಗೆ ಪೆಟ್ಟಾಗದಂತೆ ನೋಡಿಕೊಳ್ಳುವ ಪರಿಣತಿ ಹೊಂದಿರಬೇಕು. ಆದ್ದರಿಂದ ಇದಕ್ಕಾಗಿ ಬಹಳ ಹಿಂದಿನಿಂದಲೂ ವೈವಿಧ್ಯಮಯ ಪರಿಕರಗಳನ್ನು ರೈತರೇ ಕಂಡುಕೊಳ್ಳುತ್ತಾ ಬಂದಿದ್ದಾರೆ.

ಮೊದಲು ಹಲವು ಬೆಳೆಗಾರರು ಬೆತ್ತದಿಂದ ಸಿದ್ಧಪಡಿಸಿದ ಚೂಳಿಯನ್ನು ಪರಿಚಯಿಸಿದ್ದರು. ಈ ಚೂಳಿಯನ್ನು ಸೊಂಟಕ್ಕೆ ಕಟ್ಟಿಕೊಂಡು ಕಾಳುಮೆಣಸನ್ನು ಕೊಯ್ಯುತ್ತಿದ್ದರು. ಒಂದು ಸೀಜನ್‌ ಮುಗಿದ ಮೇಲೆ ಚೂಳಿಗಳನ್ನು ಜತನದಿಂದ ಕಾಪಾಡುವ ಸಂಬಂಧ ಹೊಗೆ ಅಟ್ಟಕ್ಕೆ ಚೂಳಿಯನ್ನು ತೂಗಿ ಹಾಕಿ ಭದ್ರವಾಗಿ ಇಟ್ಟುಕೊಳ್ಳುತ್ತಿದ್ದರು.

ಆದರೆ ಕಾಲಕ್ರಮೇಣ ಕಟ್ಟಿಗೆ ಚೂಳಿ ಮರೆಯಾಯಿತು. ಚೂಳಿಗಾಗಿ ಬೆತ್ತವನ್ನು ದೂರದ ಕಾಡಿನಿಂದ ತರುವುದು, ಅದರಿಂದ ಸಲಕೆಯನ್ನು ಎತ್ತುವುದು, ಆ ಸಲಕೆಯಿಂದ ಬಹಳ ನಾಜೂಕಿನಿಂದ ಹೆಣೆದು ಚೂಳಿಯನ್ನು ಸಿದ್ಧ ಮಾಡುವುದು ಸುಲಭದ ಕೆಲಸವಲ್ಲದ್ದರಿಂದ ಅದನ್ನು ಬಿಟ್ಟ ಬೆಳೆಗಾರರು ಸುಲಭದಲ್ಲಿ ಸಿಗುವ ಪ್ಲಾಸ್ಟಿಕ್ ಚೀಲ, ಪ್ಲಾಸ್ಟಿಕ್ ಬಳ್ಳಿಯ ಚೂಳಿ, ಫೈಬರಿನ ಚೂಳಿ, ಬಟ್ಟೆಯ ಜೋಳಿಗೆಯ ಮೊರೆ ಹೋದರು.

ಇಷ್ಟಾದರೂ ಹೊಸಹೊಸ ಪರಿಕರಗಳ ಆವಿಷ್ಕಾರ ಇನ್ನೂ ನಿಂತಿಲ್ಲ. ಉತ್ತರ ಕನ್ನಡ ಜಿಲ್ಲೆಯ ಹೊಸ್ಮನೆಯ ಶ್ರೀಧರ ಭಟ್ರು ಯಲ್ಲಾಪುರ ತಾಲ್ಲೂಕಿನಲ್ಲಿ ಮಾದರಿ ಮೆಣಸು ಬೆಳೆಗಾರರು ಎಂದೇ ಗುರುತಿಸಿಕೊಂಡವರು. ಇವರು ಅಡಿಕೆ ತೋಟದಲ್ಲಿ ಅಲ್ಲದೇ, ಸೊಪ್ಪಿನ ಬೆಟ್ಟದಲ್ಲಿಯೂ ಕಾಳು ಮೆಣಸನ್ನು ದೊಡ್ಡ ಪ್ರಮಾಣದಲ್ಲಿ ಬೆಳೆಯುತ್ತಿದ್ದಾರೆ.

ಇವರು ಅನೇಕ ವರ್ಷಗಳಿಂದ ಪ್ಲಾಸ್ಟಿಕ್ ಚೀಲ (ಹಿಂಡಿ, ಗೊಬ್ಬರ) ವನ್ನು ಅರ್ಧ ಮಡಚಿಕೊಂಡು ಅತ್ತಿತ್ತ ಬಳ್ಳಿಯನ್ನು ಕಟ್ಟಿ ಅದನ್ನು ಸೊಂಟಕ್ಕೆ ಕಟ್ಟಿಕೊಂಡು ಮೆಣಸಿನ ಫಸಲನ್ನು ಕೊಯ್ಯುತ್ತಾರೆ. ‘ಬೆತ್ತದ ಚೂಳಿಗಿಂತ ಇದು ಉತ್ತಮ. ಅದಕ್ಕಿಂತಲೂ ಈ ಪ್ಲಾಸ್ಟಿಕ್ ಚೀಲದಲ್ಲಿ ಹೆಚ್ಚು ಮೆಣಸಿನ ಫಸಲು ಹಿಡಿಯುತ್ತದೆ. ಒಂದು ಬಳ್ಳಿಗೆ ಹತ್ತಿದರೇ ಪದೇ ಪದೇ ಇಳಿಯುವ ಕೆಲಸವೂ ಇಲ್ಲ. ಮೆಣಸಿನ ಕರೆ ಕೆಳಗೆ ಬಿದ್ದು ಹೋಗುವುದೂ ಇಲ್ಲ’ ಎನ್ನುತ್ತಾರೆ ಅವರು.

ವನಕೆಮನೆಯ ಗಜಾನನ ಹೆಗಡೆ ಅವರು  ಬಿದಿರಿನ ಚೂಳಿ ಎಲ್ಲಿಯೂ ಸಿಗದೇ ಇರುವ ಕಾರಣ ಅನಿವಾರ್ಯವಾಗಿ ಫೈಬರ್‌ನ ಚೂಳಿ ಹಾಗೂ ಪ್ಲಾಸ್ಟಿಕ್‌ನ ಬಳ್ಳಿಯಿಂದ ನೇಯ್ಗೆ ಮಾಡಿದ ಚೂಳಿಯನ್ನು ಬಳಸುತ್ತಿದ್ದಾರೆ. ‘ಫೈಬರ್‌ನ ಚೂಳಿ ಬಹಳ ಚಿಕ್ಕವಾಗಿದೆ. ಹೇಳಿಕೊಳ್ಳುವಷ್ಟು ಮೆಣಸಿನ ಫಸಲು ಹಿಡಿಯುವುದಿಲ್ಲ. ಹೀಗಾಗಿ ದೊಡ್ಡ ಬಳ್ಳಿಯಲ್ಲಿ ಇರುವ ಮೆಣಸನ್ನು ಕೊಯ್ಯುವಾಗ ಪದೇ ಪದೇ ಹತ್ತಿಳಿಯಬೇಕಾಗುತ್ತದೆ’ ಎನ್ನುತ್ತಾರೆ. ಅದೇ ವೇಳೆ ಪ್ಲಾಸ್ಟಿಕ ಬಳ್ಳಿಯ ಚೂಳಿಯ ಬಾಳಿಕೆಯ ಬಗ್ಗೂ ಅವರು ಸಂಶಯ ವ್ಯಕ್ತಪಡಿಸುತ್ತಾರೆ.

ಎಲ್ಲಕ್ಕಿಂತಲೂ ಸುಲಭ ಹಾಗೂ ಅಗ್ಗದ ಪರಿಕರ ಎಂದರೆ  ಜೋಳಿಗೆ ಎನ್ನುತ್ತಾರೆ ಅನೇಕ ಬೆಳೆಗಾರರು. ‘ಹಳೆಯ ಸೀರೆ ಅಥವಾ ಹಳೆಯ ಪಂಚೆಯನ್ನು ಕತ್ತರಿಸಿ ಎರಡು ಅಂಚುಗಳನ್ನು ಸೇರಿಸಿ ಪ್ರತ್ಯೇಕ ಎರಡು ಗಂಟುಗಳನ್ನು ಹಾಕಿ ಅದನ್ನು ಎರಡು ಭುಜಕ್ಕೆ ಬರುವಂತೆ ಬೆನ್ನಿಗೆ ಹಾಕಿಕೊಳ್ಳಬೇಕು. ಆಮೇಲೆ ಮರವನ್ನೇರಿ ಮೆಣಸಿನ ಫಸಲನ್ನು ಸುಲಭವಾಗಿ ಕೊಯ್ಯಬಹುದು.

ಈ ಜೋಳಿಗೆಯಲ್ಲಿ ಚೂಳಿಯ ಮೂರು ಪಟ್ಟು ಮೆಣಸಿನ ಫಸಲು ಹಿಡಿಯುತ್ತದೆ. ಒಂದು ಬಳ್ಳಿ ಕೊಯ್ಯುವಾಗ ಪದೇ ಪದೇ ಹತ್ತಿಳಿಯುವ ಪ್ರಮೇಯವೇ ಬರುವುದಿಲ್ಲ. ಎರಡು ಭುಜಕ್ಕೆ ಜೋಳಿಗೆ ಇರುವುದರಿಂದ ಸೊಂಟ ಭಾಗದಲ್ಲಿ ಚೂಳಿ ಕಟ್ಟಿಕೊಂಡು ಮೆಣಸು ಕೊಯ್ಯುವಾಗ ಆಗಬಹುದಾದ ನೋವೇನೂ ಆಗುವುದಿಲ್ಲ’ ಎನ್ನುತ್ತಾರೆ ಆಶೀಸರದ ಕೃಷಿಕ ಗಂಗಾಧರ ಹೆಗಡೆ.

ಒಬ್ಬರಿಗೆ ಇಷ್ಟವಾಗುವ ಪರಿಕರ ಇನ್ನೊಬ್ಬರಿಗೆ ಇಷ್ಟವಾಗುತ್ತದೆ ಎನ್ನಲಾಗದು. ಹೀಗೆ ಕಾಳುಮೆಣಸು ಬೆಳೆಗಾರರು ಇನ್ನೂ ಈ ನಿಟ್ಟಿನಲ್ಲಿ ಪ್ರಯೋಗಶೀಲರಾಗಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.