ADVERTISEMENT

ಕೊಡಗಿನ ಕೃಷಿಕರ ಕಂಪೆನಿ

​ಪ್ರಜಾವಾಣಿ ವಾರ್ತೆ
Published 31 ಜುಲೈ 2017, 19:30 IST
Last Updated 31 ಜುಲೈ 2017, 19:30 IST
ಕೊಡಗಿನ ಕೃಷಿಕರ ಕಂಪೆನಿ
ಕೊಡಗಿನ ಕೃಷಿಕರ ಕಂಪೆನಿ   

* ಕೋವರ್ ಕೊಲ್ಲಿ ಇಂದ್ರೇಶ್

ಇಂದಿನ ಐಟಿ ಯುಗದಲ್ಲಿ ನಾವು ದಿನನಿತ್ಯ ಬಳಸುವ ಉತ್ಪಾದನೆಗಳೆಲ್ಲವೂ ಪ್ರಮುಖ ಬ್ರಾಂಡ್‌ಗಳದ್ದೇ ಆಗಿವೆ. ಈ ಬ್ರಾಂಡ್‌ಗಳ ಮೂಲಕ ಉತ್ಪನ್ನಗಳನ್ನು ಮಾರಾಟ ಮಾಡುತ್ತಿರುವವರು ಕೋಟ್ಯಂತರ ರೂಪಾಯಿ ಹೂಡಿಕೆ ಮಾಡಿರುವ ಪ್ರತಿಷ್ಠಿತ ಕಂಪೆನಿಗಳು. ಇಂತಹ ಸನ್ನಿವೇಶದಲ್ಲಿ ಸಣ್ಣ ರೈತರೇ ಸೇರಿಕೊಂಡು ಕಂಪೆನಿಯೊಂದನ್ನು ಹುಟ್ಟುಹಾಕಲು ಸಾಧ್ಯವೇ?

ಏಕೆ ಸಾಧ್ಯವಿಲ್ಲ ಎಂದು ಪ್ರಶ್ನಿಸುತ್ತಾರೆ ಕೊಡಗು ಜಿಲ್ಲೆಯ ರೈತರು. ರಾಜ್ಯ ಹಾಗೂ ಕೇಂದ್ರ ಸರ್ಕಾರಗಳ ಯೋಜನೆಗಳ ನೆರವಿನಿಂದ ಇಲ್ಲಿನ ರೈತರೇ ಸೇರಿಕೊಂಡು ಕಂಪೆನಿಯೊಂದನ್ನು ಸ್ಥಾಪಿಸಿದ್ದಾರೆ.

ADVERTISEMENT

ಕೊಡಗಿನ ತೀರ್ಥ ಕ್ಷೇತ್ರ ಎನಿಸಿರುವ ಭಾಗಮಂಡಲದಲ್ಲಿ ಈ ಕಂಪೆನಿ ಸ್ಥಾಪನೆಯಾಗಿದೆ. ಕೇಂದ್ರ ಸರ್ಕಾರದ ರಾಷ್ಟ್ರೀಯ ಕೃಷಿ ವಿಕಾಸ ಯೋಜನೆ ಮತ್ತು ರಾಜ್ಯ ಸರ್ಕಾರದ ಸಮಗ್ರ ತೋಟಗಾರಿಕಾ ಅಭಿವೃದ್ಧಿ ಯೋಜನೆಯ ನೆರವಿನೊಂದಿಗೆ ಈ ಕಂಪೆನಿ ಆರಂಭಗೊಂಡಿದ್ದು ಕೊಡಗು ಜಿಲ್ಲೆಯಲ್ಲೇ ಮೊದಲನೆಯದ್ದಾಗಿದೆ.

ಈ ಯೋಜನೆಗಳ ಬಗ್ಗೆ ಮಾಹಿತಿ ಪಡೆದ ಪ್ರಗತಿಪರ ಕೃಷಿಕರು ಮೊದಲಿಗೆ ಆಸಕ್ತ ರೈತರ ತಲಾ 20 ರೈತರನ್ನೊಳಗೊಂಡ 52 ರೈತ ಗುಂಪುಗಳನ್ನು ರಚಿಸಿದರು. ಈ ರೀತಿಯಲ್ಲಿ ಒಟ್ಟು 1,040 ಸದಸ್ಯರನ್ನು ಒಳಗೊಂಡ ರೈತ ಉತ್ಪಾದಕರ ಸಂಘ ಅಸ್ತಿತ್ವಕ್ಕೆ ಬಂತು. ಪ್ರತಿಯೊಬ್ಬ ಸದಸ್ಯನಿಂದ ತಲಾ ಸಾವಿರ ರೂಪಾಯಿಯಂತೆ ಒಟ್ಟು 10.40 ಲಕ್ಷ ರೂಪಾಯಿ ಬಂಡವಾಳವೂ ಸಂಗ್ರಹವಾಯಿತು. ಈ ಬಂಡವಾಳದಿಂದ ರೂಪುಗೊಂಡದ್ದೇ ಶ್ರೀ ಭಗಂಡೇಶ್ವರ ಹಾರ್ಟಿಕಲ್ಚರಲ್ ಫಾರ್ಮರ್ಸ್ ಪ್ರೊಡ್ಯೂಸರ್ಸ್ ಕಂಪೆನಿ ಲಿಮಿಟೆಡ್.

ದೇಶದ ಎಲ್ಲಾ ಕಂಪೆನಿಗಳಂತೆ ಈ ಕಂಪೆನಿಯೂ ರಿಜಿಸ್ಟ್ರಾರ್ ಆಫ್ ಕಂಪೆನಿ ಕಾಯ್ದೆ ಪ್ರಕಾರ 2016ರಲ್ಲಿ ನೋಂದಣಿ ಆಗಿದೆ. ಇದಕ್ಕೆ ಎಂಬಿಎ ಪದವೀಧರರೊಬ್ಬರನ್ನು ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿ ನೇಮಕ ಮಾಡಿಕೊಳ್ಳಲಾಗಿದೆ. ರಾಜ್ಯ ಹಾಗೂ ಕೇಂದ್ರ ಸರ್ಕಾರಗಳಿಂದ ಈ ಕಂಪೆನಿಗೆ 15 ಲಕ್ಷ ರೂಪಾಯಿ ದುಡಿಯುವ ಬಂಡವಾಳ ಮತ್ತು ಯಂತ್ರೋಪಕರಣಗಳ ಖರೀದಿಗಾಗಿ 25 ಲಕ್ಷ ರೂಪಾಯಿ ಅನುದಾನ ಸಿಕ್ಕಿದೆ. ‌

ಅಲ್ಲದೆ ಈ ಕಂಪೆನಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮತ್ತು ನಾಲ್ವರು ಸಂಪನ್ಮೂಲ ವ್ಯಕ್ತಿಗಳಿಗೆ ಸರ್ಕಾರವೇ ಮೂರು ವರ್ಷಗಳವರೆಗೆ ವೇತನ ನೀಡುತ್ತದೆ. ನಂತರ ಕಂಪೆನಿಯೇ ಎಲ್ಲ ವೆಚ್ಚಗಳ ಹೊಣೆಯನ್ನು ಹೊರಬೇಕಿದೆ. ಈ ಕಂಪೆನಿಯ ಲೆಕ್ಕಪತ್ರ ನಿರ್ವಹಣೆ, ತಾಂತ್ರಿಕ ಹಾಗೂ ಆಡಳಿತಾತ್ಮಕ ಕಾರ್ಯ ಚಟುವಟಿಕೆ, ಉತ್ಪಾದನೆ ಮತ್ತು ಉತ್ಪನ್ನಗಳ ಮಾರುಕಟ್ಟೆಗಾಗಿ ಬೆಂಗಳೂರು ಮೂಲದ ಎನ್‍ಜಿಒ ಒಂದರ ನೆರವನ್ನು ಪಡೆಯಲಾಗಿದೆ. ಇಂಡಿಯನ್ ಸೊಸೈಟೀಸ್ ಫಾರ್ ಅಗ್ರಿ ಬಿಸಿನೆಸ್ ಪ್ರೊಫೆಷನಲ್ ಸಂಸ್ಥೆ ನೋಡಲ್ ಈ ಕಂಪೆನಿಗೆ ಏಜೆನ್ಸಿ ಆಗಿ ಕಾರ್ಯ ನಿರ್ವಹಿಸುತ್ತಿದೆ.

ಪ್ರಸ್ತುತ ಕಂಪೆನಿ ಕರಿಮೆಣಸು, ಕಾಫಿ ಪುಡಿ, ತೆಂಗಿನ ಎಣ್ಣೆ ಹಾಗೂ ಏಲಕ್ಕಿಯನ್ನು ತನ್ನದೇ ಬ್ರಾಂಡ್ ಮೂಲಕ ಮಾರಾಟ ಮಾಡುತ್ತಿದ್ದು ಒಂದು ವರ್ಷದಲ್ಲಿ 4.36 ಲಕ್ಷ ರೂಪಾಯಿ ಲಾಭ ಗಳಿಸಿದೆ.

ರೈತರಿಗೆ ಉಪಯೋಗವಾಗುವ ನಿಟ್ಟಿನಲ್ಲಿ ಟ್ರ್ಯಾಕ್ಟರ್, ಟಿಲ್ಲರ್, ಕಳೆ ತೆಗೆಯುವ, ಔಷಧ ಸಿಂಪಡಿಸುವ ಯಂತ್ರಗಳನ್ನು ಖರೀದಿಸಿದ್ದು ಇವು ಗಳನ್ನು ಬಾಡಿಗೆಗೆ ನೀಡುವ ಮೂಲಕವೂ ಕಂಪೆನಿ ಆದಾಯ ಗಳಿಸುತ್ತಿದೆ. ಕಂಪೆನಿಯು ಪ್ರಸ್ತುತ ಕರಿಕೆ ಮತ್ತು ಚೇರಂಬಾಣೆಯಲ್ಲಿ ಎರಡು ಶಾಖೆಗಳನ್ನು ತೆರೆದಿದ್ದು ಇದರಿಂದ ಉತ್ಪನ್ನಗಳ ಮಾರಾಟಕ್ಕೆ ಮತ್ತು ರೈತರಿಗೆ ಯಂತ್ರೋಪಕರಣಗಳನ್ನು ಒದಗಿಸಲು ಹೆಚ್ಚಿನ ಅನುಕೂಲವಾಗಿದೆ ಎಂದು ಮಾಹಿತಿ ನೀಡುತ್ತಾರೆ.

ಪ್ರಸ್ತುತ ರಾಜ್ಯದಲ್ಲಿ 58 ಫಾರ್ಮರ್ಸ್ ಪ್ರೊಡ್ಯುಸರ್ಸ್ ಆರ್ಗನೈಸೇಷನ್‌ಗಳು (ಎಫ್‍ಪಿಒ) ಕಾರ್ಯನಿರ್ವಹಿಸುತಿದ್ದು ಈ ಕಂಪೆನಿಗಳ ಮೂಲಕ ರಾಜ್ಯದಾದ್ಯಂತ ಉತ್ಪನ್ನಗಳನ್ನು ಮಾರಾಟ ಮಾಡುವುದಕ್ಕೆ ಮತ್ತು ಅವರ ಉತ್ಪನ್ನಗಳನ್ನು ಇಲ್ಲಿ ಮಾರಾಟ ಮಾಡುವುದಕ್ಕೆ ಮಾತುಕತೆ ತಯಾರಿಗಳು ನಡೆದಿವೆ. ಮುಂದಿನ ತಿಂಗಳಿನಲ್ಲಿ ಕಂಪೆನಿಯ ಚೊಚ್ಚಲ ವಾರ್ಷಿಕ ಮಹಾಸಭೆ ನಡೆಯುತ್ತಿದ್ದು ಅಲ್ಲಿ ಈ ಸಂಬಂಧ ರೂಪುರೇಷೆಗಳು ಅಂತಿಮ ಸ್ವರೂಪ ಪಡೆಯಲಿವೆ.

ಈ ಕಂಪೆನಿಯಿಂದಾಗಿ ರೈತರ ಉತ್ಪನ್ನಗಳಿಗೆ ನ್ಯಾಯೋಚಿತ ಬೆಲೆ ಸಿಗುತ್ತದೆ. ಬಳಕೆದಾರರಿಗೆ ರೈತರಿಂದ ತಾಜಾ ಉತ್ಪನ್ನಗಳು ಕಡಿಮೆ ಬೆಲೆಗೆ ಸಿಗುತ್ತಿವೆ. ಇದರಿಂದ ಇಬ್ಬರಿಗೂ ಲಾಭ ಎನ್ನುತ್ತಾರೆ ಮಡಿಕೇರಿಯ ತೋಟಗಾರಿಕಾ ಇಲಾಖೆಯ ಸಹಾಯಕ ನಿರ್ದೇಶಕ ಚಕ್ಕೇರ ಪ್ರಮೋದ್.

ಗೋದಾಮು ನಿರ್ಮಾಣಕ್ಕೆ ಇಲಾಖೆಯಿಂದ ಶೇಕಡಾ 90ರಷ್ಟು ಅನುದಾನ ನೀಡಲಾಗುವುದು ಎಂದು ಅವರು ಹೇಳುತ್ತಾರೆ. ಸರ್ಕಾರವು ಇಷ್ಟೆಲ್ಲಾ ನೆರವು ನೀಡುತ್ತಿದ್ದರೂ ಆಡಳಿತದಲ್ಲಿ ಸರ್ಕಾರದ ಹಸ್ತಕ್ಷೇಪ ಮಾತ್ರ ಇಲ್ಲದಿರುವುದು ಈ ಕಂಪೆನಿಯ ವಿಶೇಷಗಳಲ್ಲೊಂದು.

ರೈತರೇ ಕಂಪೆನಿಯ ನಿರ್ದೇಶಕರನ್ನು ಆಯ್ಕೆ ಮಾಡಿದ್ದು ಕಂಪೆನಿಯ ಪ್ರತೀ ನಡೆಯನ್ನು ನಿರ್ದೇಶಕ ಮಂಡಳಿ ನೋಡಿಕೊಳ್ಳುತ್ತದೆ. ಸಂಪರ್ಕಕ್ಕೆ: 94831 10621 ಅಥವಾ 94484 22291.⇒

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.