ADVERTISEMENT

ತಿಂದಿದ್ದೀರಾ ಹಿಬ್ಬಡಲ?

ಬಳಕೂರು ವಿ.ಎಸ್.ನಾಯಕ
Published 6 ನವೆಂಬರ್ 2017, 19:30 IST
Last Updated 6 ನವೆಂಬರ್ 2017, 19:30 IST
ತಿಂದಿದ್ದೀರಾ ಹಿಬ್ಬಡಲ?
ತಿಂದಿದ್ದೀರಾ ಹಿಬ್ಬಡಲ?   

‘ಹೋಯ್ ... ಇಲ್ಲಿ ಬನ್ನಿ ಮಾರಾಯ್ರೇ. ತಗೊಂಡೋಗಿ, ಈ ಥರ ಒಳ್ಳೆ ಹಣ್ಣು ಎಲ್ಲೂ ಸಿಗಲ್ಲ. ಬರೀ ಇಪ್ಪತ್ತು ರೂಪಾಯಿ’ ಎಂದು ಒಂದೇ ಸಮನೆ ಏರುದನಿಯಲ್ಲಿ ಗಿರಾಕಿಗಳನ್ನು ಕುದುರಿಸುವ ಹಳ್ಳಿಯ ಹೆಣ್ಣು ಮಕ್ಕಳು ರಸ್ತೆಯ ಇಕ್ಕೆಲಗಳಲ್ಲಿ ತಾವು ತಂದ ಹಿಬ್ಬಡಲು ಹಣ್ಣನ್ನು ಮಾರಾಟ ಮಾಡಲು ತುದಿಗಾಲಲ್ಲೇ ನಿಂತ ನೋಟಗಳು ಕರಾವಳಿಯ ಈ ರಸ್ತೆಯುದ್ದಕ್ಕೂ ಸಾಮಾನ್ಯ.

ಮನೆಯ ತೋಟದಲ್ಲಿ ಬೆಳೆದ ರಸಭರಿತವಾದ ಹಿಬ್ಬಡಲ ಹಣ್ಣನ್ನು ಸೂರ್ಯೋದಯವಾಗುತ್ತಿದ್ದಂತೆ ಕಿತ್ತು ತಂದು ರಸ್ತೆಯುದ್ದಕ್ಕೂ ಮಾರಾಟಕ್ಕೆ ನಿಲ್ಲುತ್ತಾರೆ. ಆದ್ದರಿಂದಲೇ ಹೊನ್ನಾವರ, ಕುಮಟಾ, ಗೋಕರ್ಣ, ಅಂಕೋಲಾ, ಕಾರವಾರಗಳಲ್ಲಿ ಹಿಬ್ಬಡಲ ಹಿಡಿದು ನಿಂತ ಮಹಿಳೆಯರ ದಂಡೇ ಕಾಣುತ್ತದೆ.

ತಾವು ತಂದ ಬುಟ್ಟಿಗಳಲ್ಲಿ ಕಾಲಾನುಕ್ರಮದಲ್ಲಿ ಜೋಡಿಸಿ ಗಿರಾಕಿಗಳಿಂದ ಹಿಡಿದು ತಾವು ತಂದ ಹಣ್ಣಿನ ವರ್ಣನೆ ಮಾಡುತ್ತಿರುವುದನ್ನು ನೋಡಿದರೆ ಯಾವ ಕವಿಗೂ ಕಡಿಮೆ ಏನಿಲ್ಲ ಎನಿಸುತ್ತದೆ. ಆ ದಿನ ಅಕ್ಕಪಕ್ಕದ ಊರಿನವರು ಪೇಟೆಗೆ ತಮಗೆ ಬೇಕಾದ ವಸ್ತುಗಳನ್ನು ಖರೀದಿ ಮಾಡಲು ಬಂದವರು ಕೈಯಲ್ಲೊಂದು ಹಿಬ್ಬಡಲ ಹಣ್ಣನ್ನು ತೆಗೆದುಕೊಂಡು ಹೋಗುತ್ತಾರೆ.

ADVERTISEMENT

ಹಿಬ್ಬಡಲ, ಕರಾವಳಿಯ ಮೊಗೆಕಾಯಿ ಜಾತಿಗೆ ಸೇರಿದ್ದು.ಇದು ಮೃದು, ರಸಭರಿತವಾಗಿದ್ದು, ಹೆಚ್ಚು ನೀರಿನ ಅಂಶವನ್ನು ಒಳಗೊಂಡಿದೆ. ಇಲ್ಲಿಯ ಜನರು ಋತುಮಾನದ ಫಲವಾಗಿ ಇದರ ಪಾಯಸ, ಜೋನಿ ಬೆಲ್ಲದ ಜೊತೆಗೆ ಬೆರೆಸಿ ತಿನ್ನುತ್ತಾರೆ. ಇದರ ಪಾನಕವನ್ನು ಮಾಡಿ ಕೂಡ ಕುಡಿಯುತ್ತಾರೆ. ಇದು ದೇಹಕ್ಕೆ ಬಹಳ ತಂಪನ್ನು ಕೊಡುತ್ತದೆ. ಇದರ ರುಚಿ ಅಷ್ಟಿಷ್ಟಲ್ಲ. ಕರಾವಳಿ ಬಿಟ್ಟು ಬೇರೆ ಎಲ್ಲಿಯೂ ಸಿಗುವುದಿಲ್ಲ. ಇದನ್ನು ಬೇರೆ ಕಡೆಗೆ ರಫ್ತು ಮಾಡಲು ಆಗುವುದಿಲ್ಲ. ಏಕೆಂದರೆ ಇದು ಹೆಚ್ಚು ದಿನ ಬಾಳುವುದಿಲ್ಲ. ಒಂದು ದಿನ ಮಾತ್ರ ಇರಬಲ್ಲದು. ಆದ್ದರಿಂದ ಒಂದು ಊರಿನಿಂದ ಇನ್ನೊಂದು ಊರಿಗೆ ತೆಗೆದುಕೊಂಡು ಹೋಗುವುದು ಕಷ್ಟ. ಇದು ಬೆಂಗಳೂರಿನಲ್ಲಿ ಸಿಗುವ ಕರಬೂಜ ಜಾತಿಗೆ ಸೇರಿದ ಹಣ್ಣು ಎಂದು ಹೇಳಬಹುದು.

ಸಾಮಾನ್ಯವಾಗಿ ಕರಾವಳಿಯಲ್ಲಿ ಸೆಪ್ಟೆಂಬರ್ ಹಾಗೂ ನಂತರದ ಅವಧಿಯಲ್ಲಿ ಸಿಗುವ ಫಲವಾದ್ದರಿಂದ ತಾವು ಈ ತಿಂಗಳಿನಲ್ಲಿ ರಾಷ್ಟ್ರೀಯ ಹೆದ್ದಾರಿ 66 ಮೂಲಕ ಮಂಗಳೂರಿನಲ್ಲಿ ಕಾರವಾರದ ಕಡೆಗೆ ಸಾಗುತ್ತಿರುವವರಾದರೆ ಹಿಬ್ಬಡಲು ಹಣ್ಣನ್ನು ಖರೀದಿ ಮಾಡುವುದನ್ನು ಮರೆಯಬೇಡಿ. ಇಲ್ಲಿ ಇದನ್ನು ಹೆಚ್ಚಾಗಿ ಸಾವಯವ ಗೊಬ್ಬರ ಬಳಸುವುದರಿಂದ ಆರೋಗ್ಯದ ದೃಷ್ಟಿಯಿಂದ ತುಂಬಾ ಒಳ್ಳೆಯದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.