ADVERTISEMENT

ಪಾಟೀಲರ ಸಮನ್ವಯ ಕೃಷಿ ಪಾಠ

ಸಿದ್ದೇಶ
Published 2 ಮಾರ್ಚ್ 2015, 19:30 IST
Last Updated 2 ಮಾರ್ಚ್ 2015, 19:30 IST

ಪಾರಂಪರಿಕ ಕೃಷಿಯೊಂದಿಗೆ ಆಧುನಿಕ ಪಲ್ಲಟಗಳನ್ನು ಕಮತದ ಭಾಗವಾಗಿಸಿಕೊಂಡ ಹುಬ್ಬಳ್ಳಿಯ ಡಿ.ಬಿ. ಪಾಟೀಲ ಅವರ ಬದ್ಧತೆ ಪ್ರಶ್ನಾತೀತ. ನಗರೀಕರಣದ ವ್ಯಾಮೋಹಕ್ಕೆ ಒಳಗಾಗಿ, ಐಷಾರಾಮಿ ಬದುಕಿನ ಬೆನ್ನಟ್ಟಿದ ಯುವಕರಿಗೆ ಕೃಷಿ, ಆರೋಗ್ಯಕರ ಮತ್ತು ಲಾಭದಾಯಕ ಎಂಬುದನ್ನು ಅರಿಯಲು ಅವರು ಸಿದ್ಧ ಮಾದರಿ...

‘ಪುಣೆ–ಬೆಂಗಳೂರು ರಸ್ತೆ ಮೂಲಕ ಧಾರವಾಡಕ್ಕೆ ತೆರಳುವಾಗ ಪೆಡಲ್‌ ಕಿತ್ತು ಹೋದ ಸೈಕಲ್‌ಗೆ ಬೀಗ ಹಾಕದೇ ಅಲ್ಲೇ ಪಕ್ಕದಲ್ಲಿರುವ ಲೈಟು ಕಂಬಕ್ಕೆ ಒರಗಿಸಿ ಬಸ್ಸಿನಲ್ಲಿ ಧಾರವಾಡಕ್ಕೆ ಹೋಗಿ ಬರುತ್ತಿದ್ದೆ. ಮತ್ತದೇ ಸೈಕಲ್‌ ಏರಿ ಮನೆಗೆ ತೆರಳುತ್ತಿದ್ದೆ. ಇಂದು ಕಾರಿನಲ್ಲಿ ಓಡಾಡುತ್ತೇನೆ. ಒಡಿಶಾ, ರಾಜಸ್ತಾನ, ದೆಹಲಿ, ಗುಜರಾತ್‌, ತಮಿಳುನಾಡು, ಆಂಧ್ರಪ್ರದೇಶ, ಕೇರಳ, ಮಹಾರಾಷ್ಟ್ರ ಮತ್ತು ಗೋವಾ ಅಲ್ಲದೆ ಚೀನಾಕ್ಕೂ ಹೋಗಿ ಬಂದಿದ್ದೇನೆ. ಇದನ್ನು ನನ್ನ ದೊಡ್ಡಸ್ತಿಕೆ ಪ್ರದರ್ಶಿಸಲು ಹೇಳಿಕೊಳ್ಳುತ್ತಿಲ್ಲ. ಕೃಷಿಕನೊಬ್ಬ ತನ್ನ ಆತ್ಮಬಲದ ಮೇಲೆ ನಂಬಿಕೆ ಇಟ್ಟು ದುಡಿದರೆ ಏನೆಲ್ಲ ಸಾಧ್ಯ ಎಂದು ಹೇಳುತ್ತಿದ್ದೇನಷ್ಟೇ’ ಎಂದರು ದ್ಯಾವನಗೌಡ ಪಾಟೀಲ (ಡಿ.ಟಿ. ಪಾಟೀಲ).

ಪಿಯುಸಿ ಮಾತ್ರ ಕಲಿತಿರುವ 69 ವರ್ಷದ ಪಾಟೀಲರು ಇಂದು 48 ಎಕರೆ ಜಮೀನಿನ ಒಡೆಯ. ಪಿತ್ರಾರ್ಜಿತವಾಗಿ ಬಂದ 15 ಎಕರೆ ಬರಡು ಭೂಮಿಯನ್ನು ‘ಹೊನ್ನು’ ಬೆಳೆಯುವ ಭೂಮಿಯನ್ನಾಗಿಸಿದ್ದಲ್ಲದೇ, ತಮ್ಮ ದುಡಿಮೆಯಿಂದ 33 ಎಕರೆ ಜಮೀನು ಖರೀದಿಸಿದ್ದಾರೆ. ಆರು ಪಂಪ್‌ಸೆಟ್‌ ಒಳಗೊಂಡ 30 ಎಕರೆ ಭೂಮಿಯಲ್ಲಿ ಹನಿ ನೀರಾವರಿ ಪದ್ಧತಿ ಅಳವಡಿಸಿ ವಿವಿಧ ವಾಣಿಜ್ಯ ಮತ್ತು ತೋಟಗಾರಿಕಾ ಬೆಳೆಗಳನ್ನು ಬೆಳೆಯುತ್ತಿರುವ ಅವರು, ಇದರಲ್ಲಿನ 15 ಎಕರೆ ಭೂಮಿಯನ್ನು ಸಾವಯವ ಕೃಷಿ ಪದ್ಧತಿಯಡಿಗೆ ತಂದಿದ್ದಾರೆ. ಇನ್ನು ಮೂರ್ನಾಲ್ಕು ವರ್ಷಗಳಲ್ಲಿ ಸಂಪೂರ್ಣ ಸಾವಯವ ಕೃಷಿ ಮಾಡುವ ಗುರಿಯನ್ನೂ ಇಟ್ಟುಕೊಂಡಿದ್ದಾರೆ.

ಓದುವ ಆಸೆಯಿದ್ದರೂ ತಂದೆ–ತಾಯಿಗೆ ಒಬ್ಬನೇ ಮಗನಾದ್ದರಿಂದ ಕೃಷಿ ಮಾಡುವುದು ಅನಿವಾರ್ಯವಾಯಿತು. ಹುಬ್ಬಳ್ಳಿಯ ಕಾಡಸಿದ್ದೇಶ್ವರ ಕಾಲೇಜಿನಲ್ಲಿ ಪದವಿ ತರಗತಿಗೆ ನೋಂದಣಿ ಮಾಡಿಸಿಕೊಂಡಿದ್ದ ಅವರು, ಕಾಲೇಜಿಗೆ ಹೋಗದೆ ಓದಿಗೆ ವಿದಾಯ ಹೇಳಿ 1970ರಲ್ಲಿ ಕೃಷಿ ಆರಂಭಿಸಿದರು. ಆನಂತರ ಸುಮಾರು ಎರಡು ದಶಕಗಳ ಕಾಲ ಒಣ ಬೇಸಾಯ ಪದ್ಧತಿ ಅನುಸರಿಸಿ ಅಷ್ಟೇನೂ ಲಾಭ ಕಾಣದ ಅವರು ಆಧುನಿಕ ಕೃಷಿಯತ್ತ ಮುಖ ಮಾಡಿದರು.

ADVERTISEMENT

1996ರಲ್ಲಿ ಮೊದಲ ಬಾರಿಗೆ 2 ಎಕರೆ ಭೂಮಿಗೆ ಪಂಪ್‌ಸೆಟ್‌ ವ್ಯವಸ್ಥೆ ಕಲ್ಪಿಸಿ ನೀರಾವರಿ ಕೃಷಿ ಆರಂಭಿಸಿದ ಪಾಟೀಲರು ಬಾಳೆ ಬೆಳೆದರು. ಮೊದಲ ಪ್ರಯತ್ನದಲ್ಲೇ ಯಶಸ್ವಿಯಾದ ಅವರು ಆನಂತರ ಮತ್ತೆರಡು ಎಕರೆಗೆ ನೀರಾವರಿ ವ್ಯವಸ್ಥೆ ವಿಸ್ತರಿಸಿದರು. ಹೀಗೆ ಸ್ವಲ್ಪಸ್ವಲ್ಪವಾಗಿಯೇ ನೀರಾವರಿ ವ್ಯವಸ್ಥೆ ವಿಸ್ತರಿಸಿದ ಅವರು ಇಂದು 30 ಎಕರೆ ಭೂಮಿಗೆ ಹನಿ ನೀರಾವರಿ ವ್ಯವಸ್ಥೆ ಮಾಡಿದ್ದಾರೆ.

‘ಬೇರೊಬ್ಬರಿಂದ ಬರಡು ಭೂಮಿ ಖರೀದಿಸಿ ಅದರಲ್ಲಿ ವ್ಯವಸಾಯ ಆರಂಭಿಸಿದಾಗ ಸಂಬಂಧಿಕರು ಮತ್ತು ಅಕ್ಕಪಕ್ಕದೂರಿನ ಜನರು ನಿನಗೆ ಹುಚ್ಚು ಹಿಡಿದಿದೆ ಎಂದರು. ಏಕಾಏಕಿ ಶ್ರೀಮಂತನಾಗುವ ಹುಕಿ ಯಾಕೆ ಎಂದು ಪ್ರಶ್ನಿಸಿದರು. ಅದ್ಯಾವುದನ್ನೂ ಗಂಭೀರವಾಗಿ ಪರಿಗಣಿಸಲಿಲ್ಲ. ಅಕ್ಷರಶಃ ಕಲ್ಲುಮುಂಟಿಯಾಗಿದ್ದ ಭೂಮಿ ಇಂದು ಎಸ್ಟೇಟ್ ರೀತಿಯಲ್ಲಿ ಕಾಣುತ್ತದೆ. ಈ ಭೂಮಿಯಲ್ಲಿದ್ದ 350 ಟ್ರ್ಯಾಕ್ಟರ್‌ಗೂ ಹೆಚ್ಚು ದೊಡ್ಡ ಗಾತ್ರದ ಕಲ್ಲು ಕಿತ್ತು ಮಾರಾಟ ಮಾಡಿದ್ದೇನೆ. ಅದೇ ಭೂಮಿಯನ್ನು ಸಮತಟ್ಟಾಗಿಸಿ ಹೆಚ್ಚುವರಿ ಮಣ್ಣಿನಿಂದ ಇಟ್ಟಿಗೆ ತಯಾರಿಸಿ ಮಾರಾಟ ಮಾಡಿದ್ದೇನೆ. ಇವೆಲ್ಲವೂ ಲಾಭ ತಂದುಕೊಟ್ಟಿವೆ. ಇಂದು ಅದೇ ಜಮೀನನ್ನು ನೋಡುವ ಜನರು ಬಾಯಿ ಮೇಲೆ ಕೈ ಇಟ್ಟುಕೊಳ್ಳುತ್ತಾರೆ. ಜನರ ಕುಹಕಗಳಿಗೆ ನನ್ನ ನಿರ್ಧಾರ ಬದಲಿಸಿದ್ದರೆ ಇಂದು ಏನಾಗಿದೆಯೋ ಅದಾಗುತ್ತಿರಲಿಲ್ಲ’ ಎನ್ನುವ ಪಾಟೀಲರು ಎಲ್ಲರಂತೆಯೇ ರೈತನಿಗೂ ದೃಢ ನಿರ್ಧಾರ ಕೈಗೊಳ್ಳುವ ತಾಕತ್ತು ಇರಬೇಕು ಎಂಬುದನ್ನು ಮನವರಿಕೆ ಮಾಡಿಕೊಡುತ್ತಾರೆ.

ಪಾಟೀಲರು, 5 ಎಕರೆ ಮಾವು ಅದರ ನಡುವೆಯೇ ಪಪ್ಪಾಯಿ, 4 ಎಕರೆ ಅಡಿಕೆ ಅದರ ನಡುವೆ ಬಾಳೆ ಬೆಳೆದು ಲಾಭ ಗಳಿಸಿದ್ದಾರೆ. ಈ ಭಾಗಕ್ಕೆ ಅಪರೂಪ ಎನಿಸಿದ ಗೋಡಂಬಿ, ಅಡಿಕೆ, ಏಲಕ್ಕಿ, ದಾಲ್ಚಿನ್ನಿ, ಲವಂಗ, ಕೋಲ್ಕತ್ತಾ ಎಲೆ ಬೆಳೆದಿರುವುದು ಅವರ ಸಾಹಸ ಪ್ರವೃತ್ತಿಯ ದ್ಯೋತಕ. ಜೊತೆಗೆ ಸೀತಾಫಲ, ಚಿಕ್ಕು, ತೆಂಗು, ಕಲ್ಲಂಗಡಿ, ನೆಲ್ಲಿ, ಪೇರಲ, ಬಾರೆ, ಮೋಸಂಬಿ, ಕರಿಬೇವು, ನುಗ್ಗೆ ಅವರು ಬೆಳೆಯುವ ಬೆಳೆಗಳ ಪಟ್ಟಿಯಲ್ಲಿವೆ! ತೇಗ, ಬೀಟೆ, ಹಲಸು, ಬಿದಿರು, ಹುಣಸೆ, ಬೇವು, ಹೊಂಗೆ, ಸಿಲ್ವರ್‌ ಓಕ್‌, ತೊಗಚಿ ಸೇರಿದಂತೆ ಹಲವು ನಮೂನೆಯ ಮರಗಳು ಅವರ ಜಮೀನಿನಲ್ಲಿವೆ.

ಹುಬ್ಬಳ್ಳಿ ತಾಲ್ಲೂಕಿನ ಗಬ್ಬೂರು, ಬೆಳಗಲಿ, ಮಾವನೂರು ಮತ್ತು ಗೌಡಗೇರಿಗಳಲ್ಲಿ ಜಮೀನು ಹೊಂದಿರುವ ಅವರು 18 ಎಕರೆ ಭೂಮಿಯಲ್ಲಿ ಒಣ ಬೇಸಾಯ ಮಾಡುತ್ತಾರೆ. ಅಲ್ಲಿ ಜೋಳ, ಸೋಯಾಬೀನ್‌, ಹತ್ತಿ, ಶೇಂಗಾ, ಬದನೆ, ಹೀರೆ, ಹಾಗಲ, ಕುಂಬಳಕಾಯಿ ಮತ್ತು ಮೆಣಸಿನಕಾಯಿ ಬೆಳೆಯುತ್ತಾರೆ. ಒಂದು ಕಡೆ ಕರ್ಕಿಹಳ್ಳದ ಕೊಳಚೆ ನೀರನ್ನು ಹನಿ ನೀರಾವರಿ ವ್ಯವಸ್ಥೆ ಮೂಲಕ ಬಳಸಿ ವಿವಿಧ ಫಸಲುಗಳನ್ನು ಪಾಟೀಲರ ಕುಟುಂಬ ಬೆಳೆಯುತ್ತಿದೆ.

11 ಆಕಳುಗಳಿದ್ದು, ಅವುಗಳಲ್ಲಿ ಸದ್ಯ ನಾಲ್ಕು ಹಸುಗಳು ಹಾಲು ಕೊಡುತ್ತಿವೆ. ಪ್ರತಿನಿತ್ಯ 10 ಲೀಟರ್‌ ಹಾಲು ಮಾರಾಟ ಮಾಡುತ್ತಿದ್ದಾರೆ. ಐದು ಕುರಿಗಳಿದ್ದು, ಎರಡು ಹೋರಿಗಳನ್ನು ಉಳುಮೆಗಾಗಿ ಇಟ್ಟುಕೊಂಡಿದ್ದಾರೆ. ಒಂದು ಟ್ರ್ಯಾಕ್ಟರ್‌ ಇದ್ದು, ಆಧುನಿಕ ಕೃಷಿ ಪದ್ಧತಿ ಅಳವಡಿಸಿಕೊಂಡಿರುವುದರಿಂದ ಕೃಷಿ–ಕಾರ್ಮಿಕರ ಅನಿವಾರ್ಯತೆ ಅಷ್ಟಾಗಿ ಇಲ್ಲ. ಫಸಲಿಗೆ ಗೊಬ್ಬರ–ಗೋಡು ಹಾಕುವಾಗ, ಬಿತ್ತನೆ ಮಾಡುವಾಗ ಮಾತ್ರ ಕಾರ್ಮಿಕರ ಅಗತ್ಯವಿದೆ.

ಹೊಸತನ್ನು ಕಂಡರೆ ಅದನ್ನು ಕಲಿಯುವ ಹಂಬಲವನ್ನು ಪಾಟೀಲರು ಇಂದಿಗೂ ಇಟ್ಟುಕೊಂಡಿದ್ದಾರೆ. ಇದೇ ಅವರ ಯಶಸ್ಸಿನ ಹಿಂದಿನ ಶಕ್ತಿ. ಆಸಕ್ತ ರೈತರಿಗೆ ವಿವಿಧ ಬೆಳೆಗಳನ್ನು ಬೆಳೆಯುವ ಕುರಿತು ಮಾರ್ಗದರ್ಶನ ಮಾಡುವ ಅವರು, ‘ಈಗಾಗಲೇ ರಾಸಾಯನಿಕ ಗೊಬ್ಬರಗಳಿಂದ ಭೂಮಿ ಸಾಕಷ್ಟು ಹೊಡೆತ ಅನುಭವಿಸಿದೆ. ಇನ್ನಾದರೂ ಸಾವಯವ ಕೃಷಿ ಮಾಡಿ’ ಎನ್ನುವುದನ್ನು ಮರೆಯದೇ ಹೇಳುತ್ತಾರೆ. ಸಲಹೆಗಳನ್ನು ಮಾತ್ರ ನೀಡುವುದಕ್ಕೆ ಸೀಮಿತವಾಗದ ಪಾಟೀಲರು ಪ್ರತಿವರ್ಷ 30 ಟ್ರ್ಯಾಕ್ಟರ್‌ ದನದ ಗೊಬ್ಬರವನ್ನು ಅಕ್ಕಪಕ್ಕದ ಅಗ್ರಹಾರ ತಿಮ್ಮಸಾಗರ, ಅಂಚಗೇರಿ, ಗಬ್ಬೂರುಗಳಲ್ಲಿ ಖರೀದಿಸುತ್ತಾರೆ. ಬಾಗಲಕೋಟೆಯಿಂದ ಬೇವಿನ ಹಿಂಡಿಯನ್ನು ತರಿಸುತ್ತಾರೆ. ಇದರೊಂದಿಗೆ ತಮ್ಮ ಹೊಲದಲ್ಲಿಯೇ ಎರೆಹುಳ ಗೊಬ್ಬರವನ್ನೂ ತಯಾರಿಸಿಕೊಳ್ಳುತ್ತಾರೆ.

ನಾಲ್ಕು ದಶಕಗಳ ಕೃಷಿ ಬದುಕಿನಲ್ಲಿ ಸಾಕಷ್ಟು ಹಿನ್ನಡೆ ಹಾಗೂ ಲಾಭ ಗಳಿಸಿರುವ ಪಾಟೀಲರು, ಪ್ರಯತ್ನ ಬಿಟ್ಟಿಲ್ಲ. ಸರ್ಕಾರ, ಕೃಷಿ ವಿಶ್ವವಿದ್ಯಾಲಯ ಮತ್ತು ವಿವಿಧ ಸಂಘ–ಸಂಸ್ಥೆಗಳ ಮೂಲಕ ದೇಶ–ವಿದೇಶಗಳಲ್ಲಿ ಕೃಷಿ ಪ್ರವಾಸ ಮಾಡಿರುವ ಅವರು ಅಲ್ಲಿ ತಿಳಿದುಕೊಂಡಿದ್ದನ್ನು ತಮ್ಮ ಭೂಮಿಯಲ್ಲಿ ಅಳವಡಿಸಿ ಯಶಸ್ಸನ್ನು ಕಂಡಿದ್ದಾರೆ.

ತಮಿಳುನಾಡಿನ ಕೊಯಮತ್ತೂರಿನ ರೈತರೊಬ್ಬರು ಒಮ್ಮೆ ಪಾಟೀಲರ ಖರ್ಚು ವೆಚ್ಚವನ್ನೆಲ್ಲಾ ನೀಡಿ ತಮ್ಮಲ್ಲಿಗೆ ಕರೆಸಿಕೊಂಡು ಸಲಹೆ ಪಡೆದಿದ್ದಾರೆ. ಪಾಟೀಲರ ಕೆಲಸ–ಕಾರ್ಯಗಳನ್ನು ವಿವಿಧ ಸಂಘ ಸಂಸ್ಥೆಗಳು ಪ್ರೋತ್ಸಾಹಿಸಿ, ಗೌರವಿಸಿವೆ. ಅವರ ಜಮೀನಿಗೆ ಹಲವು ಕೃಷಿ ವಿಜ್ಞಾನಿಗಳು, ಪದವೀಧರರು ಆಗಾಗ್ಗೆ ಅಧ್ಯಯನಕ್ಕೆ ಬರುತ್ತಾರೆ.

ಪುತ್ರರಾದ ತಮ್ಮನಗೌಡ ಮತ್ತು ಸಿದ್ಧನಗೌಡ ಪಾಟೀಲರ ಜೊತೆಗೆ ನಾಲ್ಕು ಕುಟುಂಬಗಳು ಕೃಷಿ ಚಟುವಟಿಕೆಗಳನ್ನು ಹೊಲದಲ್ಲಿದ್ದುಕೊಂಡೇ ನೋಡಿಕೊಳ್ಳುವ ಮೂಲಕ ಪಾಟೀಲರ ಬೆನ್ನಿಗೆ ನಿಂತಿವೆ. ಕೃಷಿಯಿಂದ ವಾರ್ಷಿಕ ₨12 ಲಕ್ಷಕ್ಕೂ ಅಧಿಕ ಆದಾಯ ಕಾಣುತ್ತಿರುವ ಪಾಟೀಲರಿಗೆ ಇಂದಿಗೂ ನೆತ್ತಿಗೆ ಟವಲ್‌ ಕಟ್ಟಿಕೊಂಡು ಕೃಷಿ ಕೆಲಸ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುವುದೆಂದರೆ ಅತೀವ ಪ್ರೀತಿ.
ಅವರ ಸಂಪರ್ಕಕ್ಕೆ: 9448147090.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.