ADVERTISEMENT

ಪ್ರಾಚೀನ ಭತ್ತಗಳ ಕಣಜ...

ಕೊನರು: 4

ಎ.ಎಸ್.ಹೂಲಗೇರಿ
Published 29 ಸೆಪ್ಟೆಂಬರ್ 2014, 19:30 IST
Last Updated 29 ಸೆಪ್ಟೆಂಬರ್ 2014, 19:30 IST
ಪ್ರಾಚೀನ ಭತ್ತಗಳ ಕಣಜ...
ಪ್ರಾಚೀನ ಭತ್ತಗಳ ಕಣಜ...   

ಭತ್ತ ಬೇಸಾಯದಲ್ಲಿ ಒಂದಿಲ್ಲೊಂದು ಪ್ರಯೋಗ ಮಾಡುತ್ತಲೇ ಬಂದಿರುವ ಉತ್ತರ ಕನ್ನಡ ಜಿಲ್ಲೆಯ ಅಂಕೋಲಾದ ತೆಂಕಣಕೇರಿ ರೈತ ನಾಗರಾಜ ನಾಯ್ಕ ಪ್ರಾಚೀನ ಕಾಲದ ಭತ್ತದ ತಳಿಗಳನ್ನು ಬೆಳೆದು ಕೃಷಿ ಕ್ಷೇತ್ರದಲ್ಲಿ ಹೊಸ ಭಾಷ್ಯ ಬರೆದಿದ್ದಾರೆ. ತಮ್ಮ ಮೂರು ಎಕರೆ ಜಮೀನನ್ನು ಒಂದು ಪ್ರಯೋಗ ಶಾಲೆಯನ್ನಾಗಿ ಮಾಡಿರುವ ನಾಗರಾಜ, ಈ ಮೊದಲು ಶ್ರೀಪದ್ಧತಿ ಅನುಸರಿಸಿ ಅರೈಜಾ, ಲೋಕನಾಥ, ಎಮೊ- 4ನಂತಹ ವಿಶಿಷ್ಟ ತಳಿಯ ಭತ್ತ ಬೆಳೆದು ನಿರೀಕ್ಷೆಯಂತೆ ಇಳುವರಿ ತಂದುಕೊಂಡರು. ಈಗ ಇದೇ ಜಮೀನಿನಲ್ಲಿ ಸಾವಯವ ಪದ್ಧತಿ ಅನುಸರಿಸಿ ರಾಮಗಲ್, ಬಾದಷಹಾ ಭೋಗ, ಕಾಳಜಿರಾ, ಕರಿಹಕ್ಕಳ ಸಾಲಿ, ಕುಂಕುಮಸಾಳಿ, ಕರಿಜೀವಿರಿ, ಕೆಂಪದಡಿ ಬುಡ್ಡ... ಹೀಗೆ ವಿವಿಧ ಪ್ರಾಚೀನ ತಳಿಗಳ ಭತ್ತ ಬೆಳೆದು ಜಿಲ್ಲೆಯಲ್ಲಿಯೇ ವಿಶಿಷ್ಟ ಪ್ರಯೋಗಶೀಲ ರೈತರೆನಿಸಿದ್ದಾರೆ.

ಟೈಫಾಯ್ಡ್ ಜ್ವರಕ್ಕೆ, ನರಗಳ ದೌರ್ಬಲ್ಯಕ್ಕೆ, ಪಾರ್ಶ್ವವಾಯು ಮತ್ತು ಸಕ್ಕರೆ ಕಾಯಿಲೆಗೆ ಪೋಷಕಾಂಶ ನೀಡುವ ಈ ಭತ್ತವನ್ನು ಹಿಂದೆ ರಾಜರ ಕಾಲದಲ್ಲಿ ಬೆಳೆಯುತ್ತಿದ್ದರು. ಇಂತಹ ರೋಗ ನಿರೋಧಕ ಔಷಧೀಯ ಗುಣವುಳ್ಳ ಪ್ರಾಚೀನ ಕಾಲದ ಭತ್ತದ ತಳಿಗಳನ್ನು ಉಳಿಸಿ ಬೆಳೆಸುವ ಮತ್ತು ರೈತರಿಗೆ ಪರಿಚಯಿಸುವ ಉದ್ದೇಶದಿಂದ  ನಾಗರಾಜರು ಬೆಳೆದಿದ್ದಾರೆ. ಇದಕ್ಕಾಗಿ ಬಾಬಾ ರಾಮದೇವ್ ಅವರ ಸ್ವದೇಶಿ ಜಾಗರಣ ಮಂಚನ ಸಹಯೋಗ ಸಂಸ್ಥೆ ಬೆಳಗಾವಿಯ ಸಿದ್ಧಾರೂಢ ಸಾವಯವ ಕೃಷಿಕರ ಗೆಳೆಯರ ಬಳಗ ಹಾಗೂ ಬೆಂಗಳೂರಿನ ಗ್ರೀನ್‌ಲ್ಯಾಂಡ್ ಸಂಸ್ಥೆಯವರಿಂದ ಭತ್ತವನ್ನು  ತರಿಸಿಕೊಂಡು ನಾಟಿ ಮಾಡಿದ್ದಾರೆ.

ಭತ್ತದ ಬೆಳೆಯ ಆದಾಯ ಕುಂಠಿತವಾಗದಂತೆ ಧರ್ಮಸ್ಥಳದ ಕ್ಷೇಮಾಭಿವೃದ್ಧಿ ಸಂಘದ ಮಾರ್ಗದರ್ಶನಗಳನ್ನು ಅನುಸರಿಸುತ್ತಿರುವ ನಾಗರಾಜ ಅವರು ಕೆಲಸದ ಆಳುಗಳನ್ನು ಅವಲಂಬಿಸಿಲ್ಲ. ಬಹುತೇಕ ಕೆಲಸಗಳನ್ನು ತಾವೇ ಮಾಡುತ್ತಾರೆ. ಪತ್ನಿ ಮಾಲಾ ಅವರೂ ಪತಿಗೆ ಸಮನಾಗಿ ದುಡಿಯುತ್ತಾರೆ. ನಾಟಿ ಸಮಯದಲ್ಲಿ ಕೂಲಿ ಆಳುಗಳ ಕೊರತೆ ನೀಗಿಸಲು ಜಿಲ್ಲೆಯಲ್ಲಿಯೇ ಯಂತ್ರ ಬಳಸಿದವರಲ್ಲಿ ನಾಗರಾಜರೇ ಮೊದಲಿಗರು.

ಉತ್ಪಾದನೆ ಹಾಗೂ ಗುಣಮಟ್ಟ ಎರಡರಲ್ಲೂ ಯಶಸ್ಸು ಕಂಡು ಮಾದರಿ ರೈತ ಎನಿಸಿಕೊಂಡ ಇವರು, ತಾಲ್ಲೂಕು ಮಟ್ಟದ ಉತ್ತಮ ಬೆಳೆ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಪಡೆದಿದ್ದಾರೆ. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಹಾಗೂ ಕೃಷಿ ಇಲಾಖೆಯ ಸಂಯುಕ್ತ ಆಶ್ರಯದಲ್ಲಿ ನಡೆದ ಅವರ್ಸಾ ಮತ್ತು ಕುಮಟಾದಲ್ಲಿನ  ಕೃಷಿ ಮೇಳದಲ್ಲಿ ಸನ್ಮಾನಿತಗೊಂಡಿದ್ದಾರೆ. ಹೆಚ್ಚಿನ ಮಾಹಿತಿಗೆ 9886475097.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.