ADVERTISEMENT

ವಿದೇಶಿ ಮೇಕೆಗಳ ದರ್ಬಾರು

ಹೊಸ ಹೆಜ್ಜೆ – 21

ಚಳ್ಳಕೆರೆ ವೀರೇಶ್
Published 19 ಸೆಪ್ಟೆಂಬರ್ 2016, 19:30 IST
Last Updated 19 ಸೆಪ್ಟೆಂಬರ್ 2016, 19:30 IST
ಯಾಹೀಯ ಅವರು ಸಾಕಿರುವ ಜಮುನಪಾರಿ ತಳಿ ಓತ
ಯಾಹೀಯ ಅವರು ಸಾಕಿರುವ ಜಮುನಪಾರಿ ತಳಿ ಓತ   

ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲ್ಲೂಕಿನ ದೊಡ್ಡೇರಿ ಗ್ರಾಮದ ಮಹಮ್ಮದ್ ಯಾಹೀಯ ಅವರ ಫಾರ್ಮ್‌ನಲ್ಲಿ ವಿದೇಶಿ ಮೇಕೆಗಳದ್ದೇ ಕಾರುಬಾರು. ಬೋಯರ್‌ಗೋಡ್ಸ್, ಸೇಲ್ ಆಫೀಕರ್, ಜಮುನಪಾರೀ, ಶಿರೋಹಿ... ಹೀಗೆ 100ಕ್ಕೂ ಹೆಚ್ಚು ತಳಿಗಳ ಮೇಕೆಗಳು ಇವರ ಫಾರ್ಮಿನಲ್ಲಿವೆ.

ಮೇಕೆಗಳ ಪಾಲನೆಯಲ್ಲಿ ಲಾಭ ಕಾಣುತ್ತಿರುವ ಯಾಹೀಯ, ‘ಈ ಮೇಕೆಗಳು ಅಧಿಕ ತೂಕ ಹೊಂದುವ ತಳಿಗಳಾದ ಕಾರಣ, ಅದರಿಂದ ಹೆಚ್ಚಿನ ಲಾಭ ಗಳಿಸಬಹುದು’ ಎನ್ನುವ ಲೆಕ್ಕಾಚಾರವೇ ಯಶಸ್ಸಿನ ಹಿಂದಿನ ಕಾರಣ ಎನ್ನುತ್ತಾರೆ. ಒಮ್ಮೆ ಇವರು ಬೀದರ್‌ನಲ್ಲಿನ ಪಶುವೈದ್ಯಕೀಯ ವಿಶ್ವವಿದ್ಯಾಲಯದಲ್ಲಿ ನಡೆಯುತ್ತಿದ್ದ  ಜಾನುವಾರು, ತೋಟಗಾರಿಕೆ, ಮತ್ಸ್ಯ ಮೇಳಕ್ಕೆ ಭೇಟಿ ನೀಡಿದ್ದರು. ಆಗ ಅವರಿಗೆ ಕಂಡ ವಿವಿಧ ಮೇಕೆ ತಳಿಗಳ ಪೈಕಿ ಗಮನ ಸೆಳೆದ ಕೆಲ ತಳಿಯ ಮೇಕೆಗಳನ್ನು ತಾವು ಸಾಕಾಣಿಕೆ ಮಾಡಲು ಆರಂಭಿಸಿದರು.

‘ನನ್ನಲ್ಲಿರುವ ಮೇಕೆಗಳು ಮಾಂಸಕ್ಕಾಗಷ್ಟೇ ಸೀಮಿತವಾಗಿಲ್ಲ. ಇದರ ಹಿಕ್ಕೆಯನ್ನು ಗೊಬ್ಬರದ ರೂಪದಲ್ಲಿ ಬಳಸಲಾಗುವ ಕಾರಣ, ಅದಕ್ಕೂ ಅಧಿಕ ಬೇಡಿಕೆ ಇದೆ. ಹೆಚ್ಚು ಬೆಲೆಗೆ ಖರೀದಿಸುತ್ತಾರೆ. ಇನ್ನೂ ಒಂದು ವಿಶೇಷ ಎಂದರೆ ಇವುಗಳ ನಿರ್ವಹಣೆಯ ವೆಚ್ಚವೂ ಕಮ್ಮಿಯೇ’ ಎಂದು ಮಹಮ್ಮದ್‌ ಹೆಮ್ಮೆಯಿಂದ ಹೇಳುತ್ತಾರೆ.

ಮೇಕೆ ಸಾಕಾಣಿಕೆಗಾಗಿ ತೋಟದಲ್ಲಿ ಸುಮಾರು ₹13 ಲಕ್ಷ ವೆಚ್ಚದಲ್ಲಿ ಶೆಡ್ ನಿರ್ಮಿಸಿದ್ದಾರೆ. ಗಾಳಿ, ಬೆಳಕು ಸರಾಗವಾಗಿ ಬರುವಂತೆ ಹಾಗೂ ಸ್ವಚ್ಛತೆ ಕಾಪಾಡುವ ನಿಟ್ಟಿನಲ್ಲಿ ಭೂಮಿಯಿಂದ ಸುಮಾರು 14 ಅಡಿಗಳಷ್ಟು ಎತ್ತರಲ್ಲಿ ಶೆಡ್ ನಿರ್ಮಿಸಿದ್ದಾರೆ.

‘ಬೋಯರ್ ತಳಿಗಳ ಮೇಕೆಗಳು ವರ್ಷದಲ್ಲಿ ಎರಡು ಬಾರಿ 3 ರಿಂದ 4 ಮರಿಗಳಿಗೆ ಜನ್ಮ ನೀಡುತ್ತವೆ. ದಿನವೊಂದಕ್ಕೆ 1 ರಿಂದ 2 ಲೀಟರ್ ಹಾಲು ನೀಡುತ್ತವೆ. ಇವು 90 ರಿಂದ 120 ಕೆ.ಜಿಯಷ್ಟು ತೂಕ ಬರುತ್ತವೆ’ ಎಂಬ ಅಂಕಿಅಂಶ ನೀಡುತ್ತಾರೆ. ದಕ್ಷಿಣ ಆಫ್ರಿಕಾ ಮೂಲದ ಈ ತಳಿ ಮೇಕೆಗಳು ಅಗಲ ಕಿವಿಗಳಿಂದ ಆಕರ್ಷಕವಾಗಿವೆ. ಇದನ್ನು ಪುಣೆಯ ಫಾಲ್ಟನ್ ಇನ್‌ಸ್ಟಿಟ್ಯೂಟ್‌ನಿಂದ ತರಲಾಗಿದೆ.

ಒಂದೊಂದು ಮೇಕೆಗೆ ತಲಾ 4ಸಾವಿರ ರೂಪಾಯಿಯಾದರೆ ಹೋತಕ್ಕೆ ₹1,750. ಜಮುನಪಾರಿ ತಳಿ ಹೋತವನ್ನು ಮಹಾರಾಷ್ಟ್ರ ಪಲಾರಿನ್ ಸಂಶೋಧನಾ ಕೇಂದ್ರದಿಂದ ತರಲಾಗಿದೆ. ಇವುಗಳ ಬೆಲೆ 5–10 ಸಾವಿರ ರೂಪಾಯಿ.  ಹೀಗೆ ಇವರ ಫಾರ್ಮಿನಲ್ಲಿ ಸುಮಾರು 17 ಲಕ್ಷ ಬೆಲೆಬಾಳುವ ವಿವಿಧ ತಳಿಗಳ ಮೇಕೆ, ಹೋತಗಳಿವೆ.

‘ಇಷ್ಟೆಲ್ಲಾ ಹಣ ನೀಡಿ ಹಲವರಿಗೆ ಖರೀದಿಲು ಕಷ್ಟವಾಗಬಹುದು. ಅಂಥವರು ಸಾಮಾನ್ಯ ತಳಿಗೆ ಇಲ್ಲಿ ದೊರೆಯುವ ಹೋತಗಳಿಂದ ಕ್ರಾಸ್ ಮಾಡಿದರೆ ಅದರಿಂದಲೂ ಉತ್ತಮ ಗುಣಮಟ್ಟದ ಮಾಂಸ ಇರುವ ತೂಕವೂ ಅಧಿಕ ಇರುವ ತಳಿಗಳ ಮೇಕೆ ಪಡೆಯಬಹುದು’ ಎನ್ನುವುದು ಅವರ ಅನುಭವದ ಮಾತು.

ಮೇವಿಗಾಗಿ ತೋಟದ ತುಂಬೆಲ್ಲಾ ಐದರಿಂದ ಆರು ರೀತಿಯ ಹುಲ್ಲಿನ ಗಿಡಗಳನ್ನು ಹಾಕಿದ್ದಾರೆ. ರೂಟ್ ಸಿ.ಒ–4, ಸೆಡೆ, ಸೂಬಾಬುಲ್, ರಾಗಿಕಡ್ಡಿ, ಪ್ಯಾರಗಿನಿಯ ಹೀಗೆ ಹಲವು ರೀತಿಯ ಹುಲ್ಲಿನ ಗಿಡಗಳು ಇವರಲ್ಲಿವೆ. ಇದರ ಜೊತೆಯಲ್ಲಿ ಮೆಕ್ಕೆಜೋಳದ ನುಚ್ಚು, ಹಿಂಡಿ, ಗೋಧಿ ನುಚ್ಚು ವಿಶ್ರಣ ಮಾಡಿ ಬೆಳಿಗ್ಗೆ 9 ಗಂಟೆಯೊಳಗೆ ನೀಡುತ್ತಾರೆ. ಪ್ರತಿ ತಿಂಗಳಿಗೊಮ್ಮೆ ರೋಗ ನಿರೋಧಕ ಔಷಧಿ, ಲಸಿಕೆಗಳನ್ನು ನೀಡಲಾಗುತ್ತದೆ. 

ಮೇಕೆ ಮಾರಾಟಕ್ಕೆ ಇದುವರೆಗೆ ಮಾರುಕಟ್ಟೆಗೆ ಅಲೆಯದಿರುವುದು ವಿಶೇಷವೇ. ಇವರಲ್ಲಿರುವುದು ವಿಶೇಷ ತಳಿಗಳ ಮೇಕೆಗಳಾದ ಕಾರಣ, ಅಲ್ಲೇ ಖರೀದಿಸುತ್ತಾರೆ.

ಸಂಪರ್ಕಕ್ಕೆ 9845331591.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.