ADVERTISEMENT

ಹಲಸಿನ ಹಣ್ಣಿನಿಂದ ಜಾಕ್‌ಪಾಟ್‌

​ಪ್ರಜಾವಾಣಿ ವಾರ್ತೆ
Published 20 ಏಪ್ರಿಲ್ 2015, 19:30 IST
Last Updated 20 ಏಪ್ರಿಲ್ 2015, 19:30 IST
ಹಲಸಿನ ಹಣ್ಣಿನಿಂದ  ಜಾಕ್‌ಪಾಟ್‌
ಹಲಸಿನ ಹಣ್ಣಿನಿಂದ ಜಾಕ್‌ಪಾಟ್‌   

ಕೃಷಿಕರು, ಹಲಸು ಬೆಳೆಗಾರರು ಸ್ವಲ್ಪ ಶ್ರಮಪಟ್ಟರೆ ಆದಾಯ ತಂದುಕೊಡುವ ಉದ್ಯಮ ಹಲಸಿನ ಹಣ್ಣಿನ ‘ಜಾಕ್‌ಪಾಟ್‌ ಫ್ರೂಟ್‌ಬಾರ್‌’ ತಯಾರಿಕೆ. ಮಹಾರಾಷ್ಟ್ರದಲ್ಲಿ ತಯಾರಾಗುತ್ತಿರುವ ಈ ಉತ್ಪನ್ನವನ್ನು  ನಮ್ಮಲ್ಲೂ ತಯಾರಿಸಬಹುದು ಎನ್ನುತ್ತಾರೆ ಶ್ರೀಪಡ್ರೆ

ಹಲಸಿನ ಹಣ್ಣಿನಿಂದ ವಿವಿಧ ಬಗೆಯ ಖಾದ್ಯಗಳನ್ನು ತಯಾರಿಸಿ ಅವುಗಳಿಗೆ ವಿದೇಶಗಳಲ್ಲೂ ಮಾರುಕಟ್ಟೆ ಕುದುರಿಸಿಕೊಳ್ಳುತ್ತಿರುವುದು ಇತ್ತೀಚಿನ ಬೆಳವಣಿಗೆ. ಇಂಥ ಸಾಲಿಗೆ ಈಗ ಹಣ್ಣಿನ ತಿರುಳಿನ ‘ಜಾಕ್‌ಪಾಟ್‌ ಫ್ರೂಟ್‌ಬಾರ್‌’ ಸೇರ್ಪಡೆಗೊಂಡಿದೆ. ಮಹಾರಾಷ್ಟ್ರದ ದಾಪೋಲಿ ಬಳಿಯ ಉಸ್‌ಗಾಂ ಎಂಬ ಊರಿನ ಮಾಧವ ಮರಾಠೆ ಎನ್ನುವವರು ತಯಾರಿಸುತ್ತಿರುವ ಈ ಫ್ರೂಟ್‌‌ಬಾರನ್ನು ನಮ್ಮ ಹಲಸು ಬೆಳೆಗಾರರು ಇಲ್ಲೂ ತಯಾರಿಸಿ ಸ್ವಾವಲಂಬಿಗಳಾಗಬಹುದು. ಶ್ರಮ, ಶ್ರದ್ಧೆ ಇದ್ದರೆ ಮನೆಮಂದಿಯಷ್ಟೇ ಸೇರಿ ಇದರ ಉತ್ಪನ್ನ ಕೈಗೊಳ್ಳಬಹುದು.


ತಿಂಗಳಲ್ಲೇ ಪ್ರಸಿದ್ಧಿ
ಕ್ಯಾಡ್‌ಬರಿ, ಕ್ಯಾಂಪ್ಕೋದಂತಹ ಕೋಕೊ ಚಾಕೊಲೇಟುಗಳ ರೂಪ, ಆಕಾರ ಹೊಂದಿರುವ ‘ಜಾಕ್‌ಪಾಟ್‌ ಫ್ರೂಟ್‌‌ಬಾರ್‌’ ಉಸ್‌ಗಾಂನಲ್ಲಿ  ಮಾರುಕಟ್ಟೆ ಪ್ರವೇಶಿಸಿ ಕೇವಲ ಒಂದೂವರೆ ತಿಂಗಳಾಗಿದೆಯಷ್ಟೇ. ವಾರ್ಧಾ, ಪುಣೆ, ಮುಂಬಯಿಗಳಿಗೂ  ಈಗಾಗಲೇ ಇದು ಪ್ರವೇಶಿಸಿದೆ.  ದಕ್ಷಿಣ ಕನ್ನಡ ಜಿಲ್ಲೆಯಿಂದಲೂ ಇದಕ್ಕೆ ಬೇಡಿಕೆ ಬಂದಿದೆ. ‘ಮೆತ್ತಗಿನ ಸೊಳೆಯ (ತುಳುವ) ಹಲಸಿನ ಪಲ್ಪ್ ತಯಾರಿ ಕೊಂಕಣ ಭಾಗದ ಆಹಾರ ಸಂಸ್ಕರಣಾಗಾರರಿಗೆ ಕರತಲಾಮಲಕ. ಇವನ್ನು ಬೀರ್ ಬಾಟ್ಲಿಗಳಲ್ಲಿ ತುಂಬಿಟ್ಟುಕೊಳ್ಳುತ್ತೇವೆ.

ಬತ್ತಿಸಿ ಹಾಲಿನ ಖೋವಾದಂತಹ ‘ಮಾವಾ’ ತಯಾರಿಸುವುದು ಮುಂದಿನ ಹಂತ. ಈ ಕೆಲಸಕ್ಕೆ ಅನುಭವ ಬೇಕು ಅಷ್ಟೇ. ನಂತರ ಮರದ ಅಚ್ಚು ಬಳಸಿ ಅದರೊಳಗೆ ಇಟ್ಟು ಒತ್ತಿ ಫ್ರೂಟ್‌‌ಬಾರಿಗೆ ರೂಪ ಕೊಡುತ್ತೇವೆ’ ಎಂದು ಇದರ ತಯಾರಿಕಾ ವಿಧಾನ ವಿವರಿಸುತ್ತಾರೆ ಮಾಧವ ಮರಾಠೆ. ಇವರು ಪುನರ್ಪುಳಿ, ಮಾವು ಮತ್ತಿತರ ಸ್ಥಳೀಯ ಹಣ್ಣುಗಳಿಂದ 40 ಮೌಲ್ಯವರ್ಧಿತ ಉತ್ಪನ್ನ ತಯಾರಿಸುತ್ತಾರೆ. ಇವುಗಳ ನಡುವೆ ಫ್ರೂಟ್‌‌ಬಾರಿನ ಕೆಲಸಕ್ಕೀಗ ಕೈ ಹಾಕಿದ್ದಾರೆ.

‘ಈಗ ಲಭ್ಯವಿರುವ ಫ್ರೂಟ್‌‌ಬಾರಿನ ಸಿಹಿ ನಮ್ಮವರಿಗೆ ಸ್ವಲ್ಪ ಹೆಚ್ಚು ಎನಿಸಬಹುದು. ಆದರೆ ಇಲ್ಲಿಯ ಜನರಿಗೆ ಪ್ರತ್ಯೇಕವಾಗಿ ತಯಾರಿಸುವಾಗ ಸಿಹಿ ಕಡಿಮೆಗೊಳಿಸಲು ಕಷ್ಟವಿಲ್ಲ’ ಎನ್ನುತ್ತಾರೆ ಮಾಧವ. ಇಪ್ಪತ್ತು ಗ್ರಾಮ್ ತೂಕದ ಜಾಕ್‌ಪಾಟಿಗೆ ಮಹಾರಾಷ್ಟ್ರದ ಬೆಲೆ ₹15. ಕರ್ನಾಟಕಕ್ಕೆ  ಬಂದಾಗ ಐದು ರೂಪಾಯಿ ಹೆಚ್ಚು. ನಾಲ್ಕು ತಿಂಗಳು ಬಾಳಿಕೆ ಬರುತ್ತದೆ.

ಜಾಕ್‌ಪಾಟ್‌ ಹುಟ್ಟು...
ಮರಾಠೆಯವರು ‘ಜಾಕ್‌ಪಾಟ್’  ಮಾಡಿರುವ ಹಿಂದಿನ ಘಟನೆಯೂ ಕುತೂಹಲಕರ. ಇದರ ಮೂಲ ಕರ್ತೃ ದಾಪೋಲಿಯ ವಿನಾಯಕ್ ಮಹಾಜನ್. ಮೆಕ್ಯಾನಿಕಲ್‌ ಎಂಜಿನಿಯರ್‌ ಆಗಿ ಮುಂಬೈನಲ್ಲಿ ದಶಕಗಳ ಕಾಲ ಉದ್ಯೋಗದಲ್ಲಿದ್ದು ನಂತರ ಹಳ್ಳಿ ಪ್ರೀತಿಯಿಂದ ಹಿಂದಿರುಗಿದವರು. ಪುನರ್ಪುಳಿಯ ಕಾರ್ಬೊನೇಟೆಡ್ ಡ್ರಿಂಕ್ ಮಾಡಿದ ಮೊದಲಿಗ ಕೂಡ ಇವರು.

ದಾಪೋಲಿ ಕೃಷಿ ವಿಶ್ವವಿದ್ಯಾಲಯ ಕಳೆದ ವರ್ಷ ಹಲಸಿನ ಸಮ್ಮೇಳನ ಸಂಘಟಿಸಿತ್ತು. ವಿನಾಯಕ ಅವರು ಅಲ್ಲಿ ಮಾತನಾಡುತ್ತಾ ವರ್ಷಗಳ ಹಿಂದೆ ಕ್ಯಾಡ್‌ಬರಿ ಯಂತೆ ಕಾಣುವ ಹಲಸಿನಹಣ್ಣಿನ ಚಾಕೊಲೇಟ್‌ ತಯಾರಿಸಿ ಸುಂದರ ಪ್ಯಾಕಿನಲ್ಲಿ ಮಾರಿರುವ ಬಗ್ಗೆ ನೆನೆಸಿಕೊಂಡರು. ಅದೇ ಮಾತು ಮರಾಠೆಯವರಿಗೆ ಸ್ಫೂರ್ತಿ ನೀಡಿತು. “ವಿನಾಯಕ ಅವರ ಮಾತನ್ನು ಕೇಳಿ ಆ ಚಾಕೊಲೇಟಿನ ಫೋಟೊ ಕೊಡಿ, ಒಂದು  ರ್ಯಾಪರ್‌ ಆದರೂ ಕೊಡಿ ಎನ್ನುತ್ತಾ ಅವರ ಹಿಂದೆ ಬಿದ್ದೆ.

ನನ್ನಿಂದ ಮಾವಾ ಪಡೆದು ಒಂದಷ್ಟು ಚಾಕೊಲೇಟ್‌‌ ಮಾಡಿ ಕಳಿಸಿಯೇ ಬಿಟ್ಟರು. ಜತೆಗೊಂದು ಷರತ್ತು ವಿಧಿಸಿದರು. ‘ಈ ಚಾಕೊಲೇಟ್‌ ಕಲಿತು ಉತ್ಪಾದಿಸುವ ಛಲವಿರುವ ಉತ್ಸಾಹಿಗಳನ್ನು ಆಯ್ದು  ನನಗೆ ಕೊಡಿ. ಕಲಿತವರು ತಾವೇ ತಯಾರಿಸಿದ ಮೊದಲ ಉತ್ಪನ್ನ ನನಗೆ ಕೊಟ್ಟು ಅದರ ಬೆಲೆ ಪಡೆದುಕೊಳ್ಳಬೇಕು. ಅದುವೇ ನನಗೆ ನೀಡುವ ಗುರುದಕ್ಷಿಣೆ’ ಎಂದರು” ಎಂಬುದನ್ನು ನೆನೆಸಿಕೊಳ್ಳುತ್ತಾರೆ ಮರಾಠೆ. ಕಲಿಯುವ ಆಸಕ್ತರನ್ನು ಪ್ರೇರೇಪಿಸಲು ಮರಾಠೆಯವರು ಯೋಜನೆ ರೂಪಿಸಿದರು. ನೂರಾರು ಫ್ರೂಟ್‌‌ಬಾರ್ ಮಾಡಿ ಶಿರಸಿಯ ಹಲಸು ಸಮ್ಮೇಳನದಲ್ಲಿ ಬಿಡುಗಡೆ ಮಾಡಿದರು.

ಕೇರಳದ ಕೃಷಿ ವಿಶ್ವವಿದ್ಯಾಲಯದ ಸಂಶೋಧನಾ ಕೇಂದ್ರದಿಂದ ಬಂದ ಇಬ್ಬರು ಹೆಣ್ಣುಮಕ್ಕಳಿಗೆ ವಿನಾಯಕ್ ಮಹಾಜನ್ ಅವರು ಇದನ್ನು ತಯಾರಿಸುವ ವಿಧಾನ ಹೇಳಿಯೂ ಕೊಟ್ಟರು. ಆದರೂ ಅದೇಕೋ ಇಲ್ಲಿ ಈ ಕೆಲಸ ಮುಂದುವರಿಯಲಿಲ್ಲ. ಮರಾಠೆಯವರ ಬಳಿ ಈಗಾಗಲೇ 40 ಉತ್ಪನ್ನಗಳು ಇದ್ದರೂ ಜಾಕ್‌ಫ್ರೂಟ್‌‌ ತಯಾರಿಸಲು ಯಾರೂ ಮುಂದೆ ಬರದಿದ್ದ ಕಾರಣ, ಅವರೇ ಶುರು ಮಾಡಿದರು. ಈ ಚಾಕೋಲೆಟ್‌ ತಯಾರಿಸುವ ಟೆಫ್ಲಾನ್ ಅಥವಾ ಸ್ಟೀಲಿನ ಅಚ್ಚು ಮಾಡಿಸಿಕೊಳ್ಳಬೇಕು. ಅದಕ್ಕೆ ವೆಚ್ಚ ಹೆಚ್ಚು.  ಆದರೆ ಹಲಸಿನ ಹಣ್ಣಿನ ಫ್ರೂಟ್‌‌ಬಾರಿಗೆ ಒಳ್ಳೆ ಬೇಡಿಕೆಯಿದೆ ಎನ್ನುವ ಕಾರಣಕ್ಕೆ ಮರಾಠೆಯವರು ಇದರ ತಯಾರಿಕೆ ಮುಂದುವರಿಸಿದ್ದಾರೆ.

ಈ ಥರದ ಫ್ರೂಟ್‌‌ಬಾರ್ ತಯಾರಿಸಲು ಹಲಸಿನ ಹಣ್ಣಿನ ಪಲ್ಪ್ ಬೇಕು ಅಥವಾ ಹಣ್ಣು ಕೊಂಡು ಮಾವಾ ತಯಾರಿಸಬೇಕು. ಹಲಸಿನಹಣ್ಣಿನ ಪಲ್ಪ್ ತಯಾರಿ ಕಲಿಯಲು ಕೇರಳ- ಕರ್ನಾಟಕದ ಆರೆಂಟು ತಂಡಗಳು ಮಹಾರಾಷ್ಟ್ರದ ಕುಡಾಲಿಗೆ ಹೋಗಿ ಬಂದಿವೆ. ಈ ಪೈಕಿ ಕೇರಳದ ಐಸ್‌ಕ್ರೀಮ್ ಕಂಪೆನಿಯವರೊಬ್ಬರು ಪ್ರಾಯೋಗಿಕವಾಗಿ ಪಲ್ಪ್ ತಯಾರಿಸಿದ್ದಾರೆ. ಕರಾವಳಿ, ಮಲೆನಾಡಿನ ಕೆಲವರು ಈ ನಿಟ್ಟಿನಲ್ಲಿ ಚಿಂತಿಸುತ್ತಿದ್ದಾರೆ.

ಹೆಚ್ಚಿನ ಮಾಹಿತಿಗೆ ಮಾಧವ ಮರಾಠೆ: ೦೯೯೭೫೮ ೫೧೦೮೦. ವಿನಾಯಕ್ ಮಹಾಜನ್ : ೦೮೧೪೯೨೮೨೪೦೫
 

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.

ADVERTISEMENT