ADVERTISEMENT

ಹೊನ್ನೀಕೆರೆಯ ಹೊನ್ನು

ಚಂದ್ರಕಾಂತ ಮಸಾನಿ
Published 30 ಜನವರಿ 2017, 19:30 IST
Last Updated 30 ಜನವರಿ 2017, 19:30 IST
ರವೀಂದ್ರ ಪಾಟೀಲರ ಹೊಲದಲ್ಲಿ ಬೆಳೆದ ಹೂಕೋಸು
ರವೀಂದ್ರ ಪಾಟೀಲರ ಹೊಲದಲ್ಲಿ ಬೆಳೆದ ಹೂಕೋಸು   

ಬೀದರ್ ತಾಲ್ಲೂಕಿನ ಹೊನ್ನಿಕೇರಿ ಜಿಲ್ಲೆಯ ಜನರ ಆರಾಧ್ಯ ದೈವ ಸಿದ್ಧೇಶ್ವರ ದೇಗುಲ ಇರುವ ಪವಿತ್ರ ಸ್ಥಳ. ದೇಗುಲದ ಪರಿಸರದಲ್ಲೇ ಇರುವ ರೈತರೊಬ್ಬರು ಕಲ್ಲು ಬಂಡೆಗಳನ್ನು ಒಡೆದು ಧರೆಗೆ ಹಸಿರಿನ ಹೊದಿಕೆ ಹಾಕಿ ಸ್ವರ್ಗದ ರೂಪ ನೀಡಿದ್ದಾರೆ. ಒಣಭೂಮಿಯ ಮಧ್ಯದಲ್ಲಿ ಒಂದಿಷ್ಟು ಪ್ರದೇಶ ನಿರಂತರ ಹಸಿರಿನಿಂದ ನಳನಳಿಸುವಂತೆ ಮಾಡಿ ‘ಹೊನ್ನಿಕೇರಿ’ ಬರಡು ಭೂಮಿಯಲ್ಲ, ಹೊನ್ನು ಬೆಳೆಯುವ ಪ್ರದೇಶವೆಂದು ನಿರೂಪಿಸಿದ್ದಾರೆ.

ಹೊಲವನ್ನೇ ಸೀಳಿಕೊಂಡು ಹೋದಂತಿರುವ ಚಿಕ್ಕದಾದ ಹಳ್ಳ, ಹಳ್ಳದ ಬದಿಯಲ್ಲಿ ವರ್ಷವಿಡಿ ನೀರು ತುಂಬಿಕೊಂಡಿರುವ ಬಾವಿ, ಅಡ್ಡಲಾಗಿ ಕೊರೆದ ಕೊಳವೆ ಆಕಾರದಲ್ಲಿರುವ ಜಮೀನಿನ ಒಂದು ಬದಿಯಲ್ಲಿ ಟೊಮೆಟೊ, ಇನ್ನೊಂದು ಬದಿಯಲ್ಲಿ ಹೀರೆಕಾಯಿ, ಮತ್ತೊಂದು ಕಡೆ ಹೂಕೋಸು, ಶುಂಠಿ, ಮಧ್ಯದಲ್ಲಿ ಮಾವಿನ ಮರಗಳು. ಇದು ಹೊನ್ನಿಕೇರಿಯ ರವೀಂದ್ರ ಶಿವಾಜಿರಾವ್ ಪಾಟೀಲ ಅವರ ಹೊಲದ ಚಿತ್ರಣ.

ಕೃಷಿಯಲ್ಲಿ ತಕ್ಕಮಟ್ಟಿಗೆ ವೈಜ್ಞಾನಿಕ ಪದ್ಧತಿ ಅನುಸರಿಸಿದರೂ  ಸಾವಯವ ಕೃಷಿಯ ಮೂಲಕ ವಾರ್ಷಿಕ ಸರಾಸರಿ ₹40 ಲಕ್ಷದಿಂದ 50 ಲಕ್ಷ ಆದಾಯ ಗಳಿಸುವ ಮೂಲಕ ಹೈದರಾಬಾದ್ ಕರ್ನಾಟಕದ ರೈತರು ಮೂಗಿನ ಮೇಲೆ ಬೆರಳಿಟ್ಟುಕೊಳ್ಳುವಂತೆ ಮಾಡಿದ್ದಾರೆ. ಮಾರುಕಟ್ಟೆಯ ಅಧ್ಯಯನ ಮಾಡಿ ತೋಟಗಾರಿಕೆ ಬೆಳೆಗಳನ್ನು ಬೆಳೆಯುವ ಪರಿಪಾಠ ರೂಢಿಸಿಕೊಂಡಿದ್ದಾರೆ.

ನೈಸರ್ಗಿಕ ವಿಕೋಪಗಳ ಸಂದರ್ಭದಲ್ಲಿ ಕಡಿಮೆ ಇಳುವರಿ ಪಡೆದುಕೊಂಡಿದ್ದಾರೆ ಹೊರತು ಒಂದು ಬಾರಿಯೂ ಕಂಗಾಲಾಗುವಷ್ಟು  ಬೆಳೆ ನಷ್ಟ ಅನುಭವಿಸಿಲ್ಲ. ಅವರಿಗೆ ಸರ್ಕಾರದ ಎದುರು ಕೈಚಾಚಿ ನಿಲ್ಲುವಂಥ ಪ್ರಸಂಗವೂ ಬಂದಿಲ್ಲ.

ರವೀಂದ್ರ ಪಾಟೀಲರಿಗೂ ಆರಂಭದಲ್ಲಿ ಕೃಷಿಯಲ್ಲಿ ಲಾಭ ಕಡಿಮೆ ಎನ್ನುವ ಭ್ರಮೆ ಇತ್ತು. 2003-2004ರಲ್ಲಿ ಶುಂಠಿ ಬೆಳೆದು ಮಾರಾಟ ಮಾಡಿದಾಗ ಒಮ್ಮೆಲೆ ₹3 ಲಕ್ಷ ಲಾಭ ಬಂದಿತ್ತು. ಆದರೂ ಕೃಷಿಯ ಮೇಲೆ ಅಷ್ಟು ನಂಬಿಕೆ ಬಂದಿರಲಿಲ್ಲ. ಕೃಷಿ ಕಾರ್ಯದಲ್ಲಿ ತೊಡಗಿಸಿಕೊಳ್ಳುವ ಜೊತೆಗೆ ಕಾಲೇಜಿಗೂ ಹೋಗಿ 2007ರಲ್ಲಿ ಬಿಎಸ್ಸಿ ಪದವಿ ಪಡೆದರು.

₹ 20 ಸಾವಿರ, 30 ಸಾವಿರ ಸಂಬಳದ ನೌಕರಿ ಅವರಿಗೆ ಇಷ್ಟವಾಗಲಿಲ್ಲ. ಹೀಗಾಗಿ ಕೃಷಿಯಲ್ಲೇ ಸಾಧನೆ ಮಾಡಲು ನಿರ್ಧರಿಸಿದರು. ಮುಂಗಾರು ಹಾಗೂ ಹಿಂಗಾರಿನಲ್ಲಿ ಬಹುತೇಕ ರೈತರು ಹೆಚ್ಚು ಬೆಲೆ ಇರುವ ತೋಟಗಾರಿಕೆ ಬೆಳೆಗಳನ್ನೇ ಬೆಳೆಯುತ್ತಿರುವುದು ಕಂಡು ಬಂದಿತು. ಫಸಲು ಕೈಗೆ ಬಂದಾಗ ಮಾರುಕಟ್ಟೆಯಲ್ಲಿ ಬೆಲೆ ಕುಸಿದಿರುತ್ತಿತ್ತು.

ಹೀಗಾಗಿ ರೈತರ ಶ್ರಮ ವ್ಯರ್ಥವಾಗುತ್ತಿತ್ತು. ಇದನ್ನು ಮನಗಂಡ ಅವರು ಮುಂದಿನ ಮೂರು ತಿಂಗಳ ಅವಧಿಯಲ್ಲಿ ಮಾರುಕಟ್ಟೆಯಲ್ಲಿ ಆಗಬಹುದಾದ ಬದಲಾವಣೆಯನ್ನು ಗಮನದಲ್ಲಿಟ್ಟುಕೊಂಡು ಬೆಳೆ ಬೆಳೆದರು. ಕೈತುಂಬ ಹಣವನ್ನೂ ಗಳಿಸಿದರು. ಮೊದಲ ಪ್ರಯೋಗದಲ್ಲಿ ಯಶ ಸಾಧಿಸಿದ ನಂತರ ಕೃಷಿಯಲ್ಲೇ ತೊಡಗಿಸಿಕೊಂಡರು.

ಬರಡು ಭೂಮಿ ಸಮಪಾತಳಿ: 25 ಎಕರೆ ಪ್ರದೇಶದಲ್ಲಿನ ಕಲ್ಲು ಮಿಶ್ರಿತ ಜಮೀನನ್ನು ಟ್ರ್ಯಾಕ್ಟರ್ ಮೂಲಕ ಅಗೆದು ಕಪ್ಪು ಮಣ್ಣು ಸುರಿದು ನೆಲವನ್ನು ಸಮಪಾತಳಿಗೊಳಿಸಿ ಸಾಗುವಳಿಗೆ ಅನುಕೂಲ ಮಾಡಿಕೊಂಡರು. ಹೊಲದಲ್ಲಿ ಹಾದು ಹೋಗುವ ಹಳ್ಳಕ್ಕೆ ಚಿಕ್ಕ ಒಡ್ಡು ಹಾಕಿ ನೀರು ನಿಲುಗಡೆ ಮಾಡಿದರು. ಹಳ್ಳದ ಅಂಚಿನಲ್ಲೇ ದೊಡ್ಡದಾದ ಬಾವಿ ಕಟ್ಟಿಸಿ, ವರ್ಷವಿಡಿ ನೀರು ನಿಲ್ಲುವಂತೆ ಮಾಡಿದರು. ಅತಿವೃಷ್ಟಿ ಇರಲಿ, ಅನಾವೃಷ್ಟಿ ಇರಲಿ ಈಗ ವಾರ್ಷಿಕ ಮೂರು ಹಂತದಲ್ಲಿ ನಾಲ್ಕು ಬಗೆಯ ತೋಟಗಾರಿಕೆ ಬೆಳೆಯ ಲಾಭ ಪಡೆಯುತ್ತಿದ್ದಾರೆ.

ಹೊಲದಲ್ಲಿ ನಾಲ್ಕು ದನಗಳನ್ನು ಸಾಕಿದ್ದಾರೆ. ಸೆಗಣಿ ಸಂಗ್ರಹಕ್ಕೆ ಟ್ಯಾಂಕ್ ನಿರ್ಮಿಸಿ ಅದಕ್ಕೆ ಒಂದಿಷ್ಟು ನೀರು ಬೆರೆಸಿ ನೇರವಾಗಿ ಬೆಳೆಗಳಿಗೆ ಹರಿಸುತ್ತಿದ್ದಾರೆ. ಅವರ ಹೊಲಕ್ಕೆ ಬರಲು ದಾರಿ ಇರಲಿಲ್ಲ. ದಾರಿ ನಿರ್ಮಿಸಿಕೊಡುವಂತೆ ಉಪ ವಿಭಾಗಾಧಿಕಾರಿ, ತಹಶೀಲ್ದಾರ್, ತಾಲ್ಲೂಕು ಪಂಚಾಯಿತಿ ಸಿಇಒ ಅವರಿಗೆ ಮನವಿ ಮಾಡಿದರೂ ಪ್ರಯೋಜನವಾಗಲಿಲ್ಲ. 2007ರಲ್ಲಿ ಸ್ವತಃ ಅವರೇ ಟ್ರ್ಯಾಕ್ಟರ್ ಬಳಸಿ 2 ಕಿ.ಮೀ ರಸ್ತೆ ವಿಸ್ತರಣೆ ಮಾಡಿದರು.

ಪಾಟೀಲರು ಆರಂಭದಲ್ಲಿ ತೋಟಗಾರಿಕೆ ಉತ್ಪನ್ನಗಳನ್ನು  ಹೈದರಾಬಾದ್ ಮಾರುಕಟ್ಟೆಯಲ್ಲಿ ಮಾರುತ್ತಿದ್ದರು. ಏಜೆಂಟರು ಸರಿಯಾದ ಸಮಯಕ್ಕೆ ಹಣ ಕೊಡುತ್ತಿರಲಿಲ್ಲ.

ಹೀಗಾಗಿ ಕೃಷಿ ಕಾರ್ಮಿಕರನ್ನು ಬಳಸಿಕೊಂಡು ಹೊಲದಲ್ಲೇ ಗ್ರೇಡಿಂಗ್‌ ಮಾಡಲು ಶುರು ಮಾಡಿದರು. ಗುಣಮಟ್ಟದ ಟೊಮೆಟೊ ಹಾಗೂ ಹೂಕೋಸು ಲಭಿಸುತ್ತಿದ್ದ ಕಾರಣ ವ್ಯಾಪಾರಸ್ಥರು ನೇರವಾಗಿ ಹೊಲಕ್ಕೆ ಬಂದು ಖರೀದಿಸತೊಡಗಿದರು. ಹೀಗಾಗಿ ಮಾರುಕಟ್ಟೆಗೆ ಹೋಗಿಬರುವ ತಲೆ ನೋವು ತಪ್ಪಿತು. ಈಗ ಬೀದರ್, ಹೈದರಾಬಾದ್ ಹಾಗೂ ಜಹೀರಾಬಾದ್‌ನ ವ್ಯಾಪಾರಸ್ಥರು ನೇರವಾಗಿ ಅವರ ಹೊಲಕ್ಕೆ ಬಂದು ತರಕಾರಿ ಒಯ್ಯುತ್ತಾರೆ.

‘ನನ್ನ ಮಾತೃ ಭಾಷೆ ಮರಾಠಿ. ಗಡಿಯೊಳಗಿನವರು ನಮ್ಮನ್ನು ಹಚ್ಚಿಕೊಳ್ಳುವುದಿಲ್ಲ, ಗಡಿ ಆಚೆಯವರು ನಮ್ಮನ್ನು ಸೇರಿಸಿಕೊಳ್ಳುವುದಿಲ್ಲ. ನಮ್ಮದು ಒಂದು ರೀತಿಯ ಅತಂತ್ರ ಸ್ಥಿತಿ. ಕೃಷಿ ಹಾಗೂ ತೋಟಗಾರಿಕೆ ಇಲಾಖೆಯ ಅಧಿಕಾರಿಗಳು, ಐಪಿಎಸ್, ಐಎಎಸ್‌ ಅಧಿಕಾರಿಗಳು ನಮ್ಮ ತೋಟಕ್ಕೆ ಬಂದು ಮೆಚ್ಚುಗೆಯ ಮಾತುಗಳನ್ನು ಆಡಿ ಹೋಗುತ್ತಾರೆ ಅಷ್ಟೇ’ ಎನ್ನುತ್ತಾರೆ ಅವರು.

₹90 ಲಕ್ಷ ಆದಾಯ: ಕೃಷಿಯಲ್ಲಿ ತೊಡಗಿಸಿಕೊಂಡ ರವೀಂದ್ರ ಪಾಟೀಲರಿಗೆ ಮೊದಲ (2003- 2004) ವರ್ಷದಲ್ಲಿ ₹3 ಲಕ್ಷ ಆದಾಯ ಬಂದಿತ್ತು. 2012-2013ರಲ್ಲಿ ಮೂರು ಎಕರೆ ಪ್ರದೇಶದಲ್ಲಿ ಬೆಳೆದ ಶುಂಠಿ ಮಾರಾಟ ಮಾಡಿದಾಗ ₹45 ಲಕ್ಷ  ಕೈಸೇರಿತು. 2013-2014ರಲ್ಲಿ ಮಾರುಕಟ್ಟೆಯಲ್ಲಿ ಶುಂಠಿಯ ಕೊರತೆ ಉಂಟಾಗಿತ್ತು. ಏಳು ಎಕರೆಯಲ್ಲಿ ಬೆಳೆದ ಶುಂಠಿಗೆ ಗರಿಷ್ಠ ಬೆಲೆ ಸಿಕ್ಕಿತ್ತು. ಆ ವರ್ಷದಲ್ಲಿ ₹90 ಲಕ್ಷ ಆದಾಯ ಲಭಿಸಿತು. ಈ ಹಣವನ್ನು ಬರಡು ಭೂಮಿಯನ್ನು ಸಮತಟ್ಟುಗೊಳಿಸಲು ಬಳಸಿದರು.

ಹೊಲದಲ್ಲಿ ಹಾದು ಹೋಗಿರುವ ಹಳ್ಳವನ್ನು ವಿಸ್ತರಿಸಿ ನೀರು ನಿಲ್ಲುವಂತೆ ಮಾಡಿದರು. ಒಂದು ಬಾವಿಯನ್ನು ತೋಡಿಸಿದರು. ಮರು ವರ್ಷ ಶುಂಠಿ ಬೆಲೆ ಕುಸಿದ ಕಾರಣ ₹ 8 ಲಕ್ಷ ಮಾತ್ರ ಲಾಭ ಬಂದಿತು. ಆದರೆ 10 ಎಕರೆಯಲ್ಲಿ ಬೆಳೆಸಿದ್ದ ಟೊಮೆಟೊ ಮಾರಾಟದಿಂದ  ₹42 ಲಕ್ಷ ಅವರ ಕೈಸೇರಿತು. 2015-2016ರಲ್ಲಿ ಸ್ವಲ್ಪ ಬದಲಾವಣೆ ಮಾಡಿದರು. ತಲಾ ಏಳು ಎಕರೆಯಲ್ಲಿ ಟೊಮೆಟೊ ಹಾಗೂ ಹೂಕೋಸು ನಾಟಿ ಮಾಡಿದರು. ಕ್ರಮವಾಗಿ ₹12 ಲಕ್ಷ ಹಾಗೂ13 ಲಕ್ಷ ಆದಾಯ ಬಂದಿತು.

‘2016 ವರ್ಷಾಂತ್ಯದಲ್ಲಿ ಟೊಮೆಟೊ ಮಾರಾಟದಿಂದ ₹ 40 ಲಕ್ಷ, ಹೂಕೋಸು ಮಾರಾಟದಿಂದ ₹1.04 ಲಕ್ಷ ಆದಾಯ ಬಂದಿದೆ. ಇಂದಿನ ಮಾರುಕಟ್ಟೆಯ ಬೆಲೆಯ ಪ್ರಕಾರ ಶುಂಠಿ ಮಾರಾಟದಿಂದ ₹ 9 ಲಕ್ಷ ಹಾಗೂ ಹೀರೆಕಾಯಿ ಮಾರಾಟದಿಂದ ₹4 ಲಕ್ಷ ಬರುವ ನಿರೀಕ್ಷೆ ಇದೆ. ಹಿಂಗಾರು ಹಾಗೂ ಮುಂಗಾರು ಸೇರಿ ಒಟ್ಟು ಸುಮಾರು ₹54 ಲಕ್ಷ ಆದಾಯ ನನ್ನ ಕೈಸೇರಲಿದೆ’ ಎನ್ನುತ್ತಾರೆ ಅವರು.

‘ನನ್ನ ತಂದೆಗೆ ನಾಲ್ಕು ಮಕ್ಕಳು. ಇಬ್ಬರು ಹಿರಿಯ ಸಹೋದರರು ತಜ್ಞ ವೈದ್ಯರು. ಸಹೋದರಿಯ ಮದುವೆ ಆಗಿದೆ. ನಾನು ಮಾತ್ರ ಕೃಷಿಯಲ್ಲಿ ತೊಡಗಿಸಿಕೊಂಡಿದ್ದೇನೆ. ತೋಟದಲ್ಲೇ ಮನೆ ಕಟ್ಟಿಕೊಂಡು ಸುಖಮಯ ಜೀವನ ನಡೆಸುತ್ತಿದ್ದೇನೆ. 25 ಮಂದಿಗೆ ಉದ್ಯೋಗವನ್ನೂ ಕೊಟ್ಟಿದ್ದೇನೆ’ ಎಂದು ಹೆಮ್ಮೆಯಿಂದ ಹೇಳುತ್ತಾರೆ. ಸಂಪರ್ಕಕ್ಕೆ 94484-22551

ಎಪಿಎಂಸಿಗೆ ಪತ್ರ
ನಿರೀಕ್ಷೆ ಮೀರಿ ಆದಾಯ ಬಂದಿರುವ ಕಾರಣ ಬ್ಯಾಂಕ್‌ ಹಾಗೂ ಆದಾಯ ತೆರಿಗೆ ಇಲಾಖೆಗೆ ವ್ಯವಹಾರಗಳ ವಿವರಗಳನ್ನು ಹೇಗೆ ಕೊಡಬೇಕು ಎನ್ನುವ ಗೊಂದಲ ಸೃಷ್ಟಿಯಾಗಿದೆ. ವ್ಯಾಪಾರಸ್ಥರು ನೇರವಾಗಿ ಹೊಲಕ್ಕೆ ಬಂದು ತರಕಾರಿ ಖರೀದಿಸುತ್ತಿದ್ದಾರೆ. ರಸೀದಿ ಕೊಡಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ರವಿ ಪಾಟೀಲ ಬೀದರ್‌ ಎಪಿಎಂಸಿ ಕಾರ್ಯದರ್ಶಿ ತುಳಸಿರಾಮ ಇಲಾಖೆ ಅವರಿಗೆ ಮಾರ್ಗದರ್ಶನ ಮಾಡುವಂತೆ ಪತ್ರ ಬರೆದಿದ್ದಾರೆ.

ಎಪಿಎಂಸಿ ಕಾರ್ಯದರ್ಶಿ ಮೇಲಧಿಕಾರಿಗಳಿಗೆ ಪತ್ರ ಬರೆದು ಹೆಚ್ಚಿನ ಮಾಹಿತಿ ಕೋರಿದ್ದಾರೆ. ಆದರೆ ಮೇಲಧಿಕಾರಿಗಳಿಂದ ಯಾವುದೇ ಉತ್ತರ ಬಂದಿಲ್ಲ. ಸದ್ಯಕ್ಕೆ ನಿಮ್ಮ ಹೆಸರಲ್ಲೇ ಒಂದು ಬಿಲ್‌ ಬುಕ್‌ ಸಿದ್ಧಪಡಿಸಿಕೊಂಡು ವ್ಯಾಪಾರಿಗಳಿಗೆ ರಸೀದಿ ಕೊಡಿ. ಸರ್ಕಾರದ ನಿರ್ದೇಶನ ಬಂದ ಮೇಲೆ ಮುಂದಿನ ಕ್ರಮ ಕೈಗೊಳ್ಳಬಹುದೆಂದು ಅವರು ಸಲಹೆ ನೀಡಿದ್ದಾರೆ ಎನ್ನುತ್ತಾರೆ ರವೀಂದ್ರ ಪಾಟೀಲ.

***
‘ಶ್ರದ್ಧೆಯಿಂದ ಕೆಲಸ ಮಾಡಿದರೆ ಸಾಕು ಒಬ್ಬ ಐಎಎಸ್ ಅಧಿಕಾರಿಗಿಂತ ಹೆಚ್ಚಿನ ಆದಾಯ ಪಡೆಯಬಹುದು. ಸರ್ಕಾರದ ಯಾವ ಸೌಲಭ್ಯಗಳೂ ಅಗತ್ಯವಿಲ್ಲ.
-ರವೀಂದ್ರ ಶಿವಾಜಿರಾವ್ ಪಾಟೀಲ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.