ಹೆಬ್ಬರಳ ಗಾತ್ರ, ಕೆಂಪನೆಯ ಬಣ್ಣ, ಲೋಲಾಕಿನಂತೆ ಗಿಡಗಳಲ್ಲಿ ಜೋತಾಡುವ ಕಾಯಿಗಳು. ಗದ್ದೆ ತುಂಬಾ ಒಣಗಿದಂತೆ ಕಾಣುವ ಗಿಡಗಳಲ್ಲಿ ನೇತಾಡುವ ಕೆಂಪನೆಯ ಕಾಯಿಯ ‘ಹರೇಕಳ ಮೆಣಸು’!
ಮಂಗಳೂರಿನ ಸಮೀಪದ ಪುಟ್ಟ ಗ್ರಾಮ ಹರೇಕಳ. ಈ ಗ್ರಾಮದಲ್ಲಿ ಮಾತ್ರ ಆ ತಳಿಯ ಮೆಣಸನ್ನು ಬೆಳೆಯುತ್ತಿದ್ದರಿಂದ ಮೆಣಸಿನಕಾಯಿ ಜತೆ ಊರಿನ ಹೆಸರು ಸೇರಿಕೊಂಡು ‘ಹರೇಕಳ ಮೆಣಸು’ ಎಂದಾಗಿದೆ.
ನೋಡುವುದಕ್ಕೆ ಗಾಂಧಾರಿ ಮೆಣಸು, ಮುಗಿಲು ಮೆಣಸು, ಲವಂಗ ಮೆಣಸು, ಅಸ್ಸಾಂನ ಭೂತ್ ಝಲೋಕಿಯಾ ತರಹ ಕಾಣಿಸುತ್ತದೆ. ಆದರೆ, ‘ಇದು ಆ ಜಾತಿಗೆ ಸೇರಿಲ್ಲ. ಇದು ಬೇರೆಯದ್ದೇ ತಳಿ’ ಎನ್ನುತ್ತಾರೆ ಹರೇಕಳ ಗ್ರಾಮದ ಬೆಳೆಗಾರರು.
ಒಂದು ಕಾಲದಲ್ಲಿ ಈ ಗ್ರಾಮದಲ್ಲಿರುವ 600 ಕುಟುಂಬಗಳೂ ಈ ಮೆಣಸು ಬೆಳೆಯುತ್ತಿದ್ದರು. ಮೆಣಸಿನಿಂದಾಗಿಯೇ ಈ ಊರು ಪ್ರಸಿದ್ಧಿ ಪಡೆದಿತ್ತು. ಆಗ ಹಡಗಿನ ಮೂಲಕ ಈ ತಳಿಯನ್ನು ವಿದೇಶಕ್ಕೆ ರಫ್ತು ಮಾಡುತ್ತಿದ್ದರಂತೆ. ಅಷ್ಟರಮಟ್ಟಿಗೆ ಮೆಣಸಿನ ರುಚಿಗೆ ವಿದೇಶಿಗರು ಮನಸೋತಿದ್ದರು. ಈಗಲೂ ಮಾರುಕಟ್ಟೆಯಲ್ಲಿ ಮೆಣಸಿಗೆ ಬೇಡಿಕೆ ಇದೆ. ಆದರೆ ಬೆಳೆಯುವವರ ಸಂಖ್ಯೆ ಕ್ಷೀಣಿಸಿದೆ.
ಊರಲ್ಲಿದ್ದ ಅವಿಭಕ್ತ ಕುಟುಂಬ ವ್ಯವಸ್ಥೆ ದೂರವಾದಂತೆ ಕೃಷಿಭೂಮಿ ಹಂಚಿ ಹೋಯಿತು. ಶಿಕ್ಷಿತ ಯುವಕರು ದುಡಿಮೆಗಾಗಿ ನಗರ ಸೇರಿದರು. ಕೂಲಿಯಾಳುಗಳ ಸಮಸ್ಯೆ ಎದುರಾಯಿತು. ಅಧಿಕ ಇಳುವರಿ ಪಡೆಯುವ ಉದ್ದೇಶದಿಂದ ರಾಸಾಯನಿಕದ ಬಳಕೆ ಹೆಚ್ಚಾಯಿತು. ಗಿಡಗಳಿಗೆ ರೋಗಬಾಧೆ ಅಧಿಕವಾಗತೊಡಗಿತು. ಮನೆಯಲ್ಲಿ ಉಪ್ಪಿನಕಾಯಿ ಮಾಡುವವರ ಸಂಖ್ಯೆಯೂ ಕ್ಷೀಣಿಸಿತು. ಹೀಗಾಗಿ ಮೆಣಸಿನ ಬೇಡಿಕೆ ಇಳಿಮುಖವಾಗತೊಡಗಿತು. ಮೆಣಸಿನ ಬದಲು ಕಬ್ಬು, ಅಡಕೆ, ಭತ್ತ ಬೆಳೆದ ಪರಿಣಾಮ ಮೆಣಸು ಅಳಿವಿನಂಚಿಗೆ ತಲುಪುವಂತಾಯಿತು.
ಈಗ ಅಳವಿನಂಚಿನಲ್ಲಿರುವ ದೇಸಿ ಮೆಣಸಿನ ತಳಿಗೆ ಜೀವ ಕೊಡಲು ಹರೇಕಳ ಗ್ರಾಮದ ಬೈತಾರ್ ಮನೆಯ ಶೇಖರ್ ಗಟ್ಟಿ ಮತ್ತು ಅವರ ತಾಯಿ 80ರ ಹರೆಯದ ಲೀಲಾ ಮುಂದಾಗಿದ್ದಾರೆ. ಇವರ ಜತೆಗೆ ಪರಿಯಳದಲ್ಲಿ ಆರು, ಬೈತಾರ್‌ನಲ್ಲಿ ನಾಲ್ಕು ಕುಟುಂಬದವರು ಈ ತಳಿಯ ಮೆಣಸಿನ ಗಿಡಗಳನ್ನು ಬೆಳೆಸುತ್ತಿದ್ದಾರೆ. ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಇಂಥ ಕೃಷಿಕರನ್ನು ಉತ್ತೇಜಿಸುತ್ತಿದೆ.
ಕೃಷಿ ಮಾಡುವ ವಿಧಾನ
ಶೇಖರ್ ಕುಟುಂಬ ಐದು ವರ್ಷಗಳಿಂದ ಒಂದು ಎಕರೆ ಜಮಿನನ್ನು ಗೇಣಿಗೆ ಪಡೆದು ಮೆಣಸು ಬೆಳೆಯುತ್ತಿದ್ದಾರೆ. ಶೇಖರ್, ಆಗಸ್ಟ್ ತಿಂಗಳಲ್ಲಿ ಮೆಣಸಿನ ಬೀಜಗಳಿಂದ ಸಸಿ ಮಡಿ ತಯಾರಿಸುತ್ತಾರೆ. ಒಂದು ವಾರದೊಳಗೆ ಸಸಿಗಳು ಮಡಿಯಲ್ಲಿ ಬೆಳೆಯುತ್ತವೆ. 40 ದಿನಗಳ ಕಾಲ ಬೆಳೆದ ಮೆಣಸಿನ ಗಿಡಗಳನ್ನು ಗದ್ದೆಗೆ ಸ್ಥಳಾಂತರಿಸುತ್ತಾರೆ. ಇದಕ್ಕೂ ಮುನ್ನ ಗದ್ದೆಯನ್ನು ಮೂರು ಬಾರಿ ಟ್ರ್ಯಾಕ್ಟರ್‌ನಲ್ಲಿ ಉಳುಮೆ ಮಾಡಿಸಿ, ಬೂದಿ, ಕೊಟ್ಟಿಗೆ ಗೊಬ್ಬರವನ್ನು ಮಣ್ಣಿಗೆ ಹರಗಿಸುತ್ತಾರೆ. ಗಿಡದಿಂದ ಗಿಡಕ್ಕೆ ಅರ್ಧ ಅಡಿ ಅಂತರ ಬಿಟ್ಟು, ಸಾಲಿನಿಂದ ಸಾಲಿಗೆ ಎರಡು ಅಡಿ ಅಂತರ ಬಿಟ್ಟು ಕೈ ಬೆರಳಿನಿಂದ ಗುಣಿ ತೆಗೆದು ಒಂದು ಗುಳಿಗೆ ಎರಡು ಗಿಡದಂತೆ ಮೆಣಸಿನ ಸಸಿ ನಾಟಿ ಮಾಡುತ್ತಾರೆ. ಇಪ್ಪತ್ತು ದಿನಗಳಿಗೊಮ್ಮೆ ಕೀಟನಾಶಕ ಸಿಂಪಡಿಸುತ್ತಾರೆ. 15 ದಿನಗಳಿಗೊಮ್ಮೆ ಕೊಟ್ಟಿಗೆ ಗೊಬ್ಬರ ಮತ್ತು ಬೂದಿಯನ್ನು ಕೊಡುತ್ತಾರೆ. ಜಮೀನಿನ ಪಕ್ಕದಲ್ಲೇ ನೇತ್ರಾವತಿ ನದಿ ಹರಿಯುವುದರಿಂದ, ನೀರಿನ ಕೊರತೆ ಇಲ್ಲ. ಹಾಗಾಗಿ ಗಿಡಗಳಿಗೆ ವಾರದಲ್ಲೊಂದು ಬಾರಿ ಅರ್ಧ ದಿನ ನೀರು ಪೂರೈಕೆ.
ಸಸಿ ನಾಟಿ ಮಾಡಿದ ಎರಡು ತಿಂಗಳಲ್ಲಿ ಗಿಡ ಹೂವು ಬಿಡುತ್ತದೆ. ಆ ಸಂದರ್ಭದಲ್ಲಿ ಪ್ರತಿ ಗಿಡದ ಬುಡಕ್ಕೆ ಕೊಟ್ಟಿಗೆ ಗೊಬ್ಬರ ಕೊಟ್ಟು, ಮಣ್ಣಿನಿಂದ ಮುಚ್ಚಿಗೆ ಮಾಡಬೇಕು. ನಂತರ ಗಿಡಗಳು ಕಾಯಿ ಕಚ್ಚುತ್ತವೆ. ನಾಲ್ಕೂವರೆ ತಿಂಗಳ ನಂತರ ಸಂಪೂರ್ಣವಾಗಿ ಕಾಯಿಗಳು ಹಣ್ಣಾಗಿ ಕೆಂಬಣ್ಣಕ್ಕೆ ತಿರುಗುತ್ತವೆ. ಹಣ್ಣಾದ ಮೆಣಸನ್ನು ಕಟಾವು ಮಾಡಬೇಕು.
ಒಟ್ಟು 13 ಬಾರಿ ಕಟಾವು
ಎಂಟು ದಿನಕ್ಕೊಂದು ಬಾರಿಯಂತೆ ಹದಿಮೂರು ಬಾರಿ ಕಟಾವು ಮಾಡುತ್ತಾರೆ. ಅಂದರೆ 128 ದಿನಗಳವರೆಗೆ ಕಟಾವಿಗೆ ಸಿಗುತ್ತದೆ. ಒಂದು ಬಾರಿಗೆ 30 ಕೆಜಿ ಒಣ ಮೆಣಸು ಸಿಗುತ್ತದೆ.
ಒಂದು ಎಕರೆಗೆ 8 ಕ್ವಿಂಟಲ್ ಹಸಿ ಮೆಣಸು ಲಭ್ಯ. ಅದನ್ನು ಹದಿನೈದು ದಿನಗಳವರೆಗೆ ಬಿಸಿಲಲ್ಲಿ ಒಣಗಿಸಿದರೆ 4 ಕ್ವಿಂಟಲ್‌ನಷ್ಟಾಗುತ್ತದೆ. ಒಣಗಿದ ಮೆಣಸನ್ನು ಮಂಗಳೂರು ಮಾರುಕಟ್ಟೆ ಕಳುಹಿಸುತ್ತಾರೆ. ‘ಸುಮಾರು 300 ಮೆಣಸಿನ ಕಾಯಿಗಳು ಸೇರಿದರೆ ಒಂದು ಕೆ.ಜಿ ತೂಕವಾಗುತ್ತವೆ. ಒಂದು ಕೆ.ಜಿ ಒಣ ಮೆಣಸಿನ ಬೆಲೆ ₹400 ರಿಂದ ₹500. ಕಳೆದ ವರ್ಷ ಒಂದು ಎಕರೆಗೆ ಎಲ್ಲಾ ಸೇರಿ ₹13 ಸಾವಿರ ಖರ್ಚು ಕಳೆದು, ₹75 ಸಾವಿರ ಆದಾಯ ಬಂದಿತ್ತು’ ಎನ್ನುತ್ತಾರೆ ಶೇಖರ್. ಉಪ್ಪಿನಕಾಯಿ ರುಚಿ ವರ್ಧನೆಯಾಗಬೇಕೆಂದರೆ ಹರೇಕಳ ಮೆಣಸಿನ ಪುಡಿ ಇರಲೇ ಬೇಕು. ಅಪ್ಪೆ ಮಾವಿನ ಮಿಡಿಯ ಉಪ್ಪಿನ ಕಾಯಿ ತಯಾರಕರಂತೂ ಇದರ ಪುಡಿಯನ್ನೇ ಅವಲಂಬಿಸುತ್ತಾರೆ.
ಇಲ್ಲಿ ಮೆಣಸು ಬೆಳೆಯುವ ಕುಟುಂಬಗಳಿಗೆ ಕಾಯಂ ಗ್ರಾಹಕರಿದ್ದಾರೆ. ಮಂಗಳೂರು, ಉಡುಪಿಯ ಖರೀದಿದಾರರು ಬೆಳೆಗಾರರ ಮನೆಗೆ ಬಂದು ಖರೀದಿಸುತ್ತಾರೆ. ಮಂಗಳೂರು ಮಾರುಕಟ್ಟೆಯಲ್ಲಿ ಹರೇಕಳ ಒಣಮೆಣಸು ಲಭ್ಯವಿದೆ. ಬೆಳೆಯುವವರ ಸಂಖ್ಯೆ ಕಡಿಮೆಯಿರುವ ಕಾರಣ ಅಂಗಡಿಯವರಿಗೆ ಮುಂಚಿತವಾಗಿ ತಿಳಿಸಿದರೆ ಮಾತ್ರ ಮೆಣಸು ಲಭ್ಯ.
ಇತರೆಲ್ಲಾ ಮೆಣಸಿಗಿಂತ ಇದು ಕೆಂಪು ಬಣ್ಣವನ್ನು ಹೊಂದಿದ್ದು ಇದರ ಹುಡಿಗೆ ಸಾಕಷ್ಟು ಬೇಡಿಕೆ ಇದೆ. ಆದರೆ, ಹರೇಕಳ ಗ್ರಾಮಸ್ಥರು ಮೌಲ್ಯವರ್ಧನೆ ಮಾಡುವುದಿಲ್ಲ. ಮಾಲ್ಯವರ್ಧನೆಗೆ ಸಾಕಷ್ಟು ಅವಕಾಶಗಳಿದ್ದು ಮುಂದಿನ ದಿನಗಳಲ್ಲಿ ಬೆಳೆಗಾರರು ಈ ನಿಟ್ಟಿನಲ್ಲಿ ಯೋಚಿಸಬಹುದಾಗಿದೆ.
ಈ ಅಪರೂಪದ ತಳಿಯ ಮೆಣಸು ಉಳಿಸಬೇಕು ಎನ್ನುವುದು ಹಿರಿಯರ ಸಲಹೆಯಾಗಿದೆ. ಈ ಕುರಿತ ಹೆಚ್ಚಿನ ಮಾಹಿತಿಗಾಗಿ ಶೇಖರ್ (8951765247) ಅವರನ್ನು ಸಂಪರ್ಕಿಸಬಹುದು.
ಗ್ರಾಮದ ಪ್ರತಿಷ್ಠೆ ಹೆಚ್ಚಿಸಿದ ತಳಿ
ಹರೇಕಳ ಗ್ರಾಮದೊಂದಿಗೆ ಸಂಬಂಧ ಬೆಳೆಸುವುದೆಂದರೆ ಪ್ರತಿಷ್ಠೆಯ ಪ್ರಶ್ನೆಯಾಗಿತ್ತು. ಅಷ್ಟರಮಟ್ಟಿಗೆ ಗ್ರಾಮದ ಕೀರ್ತಿಯನ್ನು ಮೆಣಸು ಹೆಚ್ಚಿಸಿತ್ತು. ಮೆಣಸಿನ ಸಸಿಯ ನಾಟಿ ಮತ್ತು ಕಟಾವು ಸಮಯದಲ್ಲಿ ಊರಿನಲ್ಲಿ ಜನಜಾತ್ರೆಯೆ ಸೇರುತ್ತಿತ್ತಂತೆ. ಈ ಕೆಲಸಗಳು ಊರಿನ ಹಬ್ಬದಂತೆ ನಡೆಯುತ್ತಿತ್ತು ಎನ್ನುತ್ತಾರೆ ಹಿರಿಯರು. ಈ ಮೂಲಕ ಗ್ರಾಮದಲ್ಲಿ ಕುಟುಂಬಗಳ ನಡುವೆ ಬಾಂಧವ್ಯ, ಸ್ನೇಹ, ಪ್ರೀತಿಗೆ ಮೆಣಸಿನ ಕೃಷಿ ಕೊಂಡಿಯಾಗಿತ್ತು.
ಈ ಗ್ರಾಮದಲ್ಲಿ ಒಂದು ಎಕರೆಯಿಂದ ಐದು ಎಕರೆವರೆಗೆ ಜಮೀನಿರುವ ಕುಟುಂಬಗಳಿವೆ. ನೇತ್ರಾವತಿ ನದಿ ನೀರು ಹರಿಯುವುದರಿಂದ 20 ರಿಂದ 30 ಅಡಿ ಅಳದಲ್ಲಿ ತೆರೆದ ಬಾವಿಗಳಲ್ಲಿ ನೀರು ಇರುತ್ತದೆ. ಕೃಷಿಗೆ ಪೂರಕವಾದ ಮಣ್ಣು, ಹವಾಮಾನ, ಬೆಳೆಯುವವರ ಉತ್ಸಾಹದಿಂದಾಗಿ ಮೆಣಸನ್ನು ಹೆಚ್ಚಾಗಿ ಬೆಳೆಯುತ್ತಿದ್ದರು. ಕಡಿಮೆ ಖರ್ಚಿನಲ್ಲಿ ಅಧಿಕ ಇಳುವರಿ ಪಡೆಯುವ ಬೆಳೆ ಇದಾಗಿತ್ತು. ಭೂಮಿಗೆ ರಾಸಾಯನಿಕ ಸೋಕಿಸಿರಲಿಲ್ಲ ಎಂದು ಹಳೆಯ ದಿನಗಳನ್ನು ಗ್ರಾಮಸ್ಥರು ನೆನಪಿಸಿಕೊಳ್ಳುತ್ತಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.