ADVERTISEMENT

ಕವಿವಿಯಲ್ಲಿ ಗರಿಗೆದರಿದ ಯುವಜನೋತ್ಸವ

​ಪ್ರಜಾವಾಣಿ ವಾರ್ತೆ
Published 28 ಸೆಪ್ಟೆಂಬರ್ 2018, 19:30 IST
Last Updated 28 ಸೆಪ್ಟೆಂಬರ್ 2018, 19:30 IST
ಕರ್ನಾಟಕ ವಿವಿಯಲ್ಲಿ ನಡೆಯುತ್ತಿರುವ ಯುವಜನೋತ್ಸವದಲ್ಲಿ ಜನಪದ ನೃತ್ಯ ಪ್ರದರ್ಶಿಸಿದ ವಿದ್ಯಾರ್ಥಿನಿಯರು
ಕರ್ನಾಟಕ ವಿವಿಯಲ್ಲಿ ನಡೆಯುತ್ತಿರುವ ಯುವಜನೋತ್ಸವದಲ್ಲಿ ಜನಪದ ನೃತ್ಯ ಪ್ರದರ್ಶಿಸಿದ ವಿದ್ಯಾರ್ಥಿನಿಯರು   

ಕ್ಲಾಸಿಗೆ ಲೇಟಾಗುತ್ತಲ್ಲ ಎಂದು ಜುಬ್ಲಿ ಸರ್ಕಲ್‌ನಲ್ಲಿ ಲೊಚಗುಡುತ್ತಾ ದಿನವೂ ನಿಂತಿರುತ್ತಿದ್ದ ವಿದ್ಯಾರ್ಥಿಗಳಲ್ಲಿ ಇಂದು ಆ ತಳಮಳ ಮಾಯಾವಾಗಿತ್ತು. ಆದರೂ ದಿನಾಲೂ ಹೋಗುವ ಸಮಯಕ್ಕಿಂತ ಬೇಗನೆ ಕ್ಯಾಂಪಸ್‌ಗೆ ಹಾಜರಾಗಬೇಕನ್ನೊ ಅವಸರದಲ್ಲಿದ್ದರು.

‘ಇಂದು ಕನ್ನಡ ವಿಭಾಗದಲ್ಲಿ ನಾಟಕವಿದೆ ಬೇಗ ಹೋಗ್ಬೇಕು. ಅದು ನನ್ನ ಫೇವರಿಟ್’ ಅಂತಾ ಒಬ್ಳು ಅಂದ್ರೆ, ‘ಸೆನೆಟ್ ಹಾಲ್‌ನಲ್ಲಿ ಕ್ಲಾಸಿಕಲ್ ಮ್ಯೂಸಿಕ್ ಕಾಂಪಿಟೀಷನ್ ಇದೆಯಂತೆ. ನಾನಂತೂ ಅಲ್ಲೇ ಹೋಗೋದು’ ಅಂತಿದ್ಲು ಮತ್ತೊಬ್ಳು. ‘ಮಧ್ಯಾಹ್ನ ಗಾಂಧಿಭವನದಲ್ಲಿ ಭರತನಾಟ್ಯ ಮತ್ತು ಡೊಳ್ಳು ಬಡಿತ ಕಾರ್ಯಕ್ರಮವಿದೆ. ಅದಂತೂ ಅಲ್ಲಿದ್ದವರನ್ನು ಹುಚ್ಚೆದ್ದು ಕುಣಿಯುವಂತೆ ಮಾಡುತ್ತೆ. ಕಳೆದ ವರ್ಷ ಹೆಚ್ಚು ಮಜಾ ಬಂದದ್ದೇ ಅಲ್ಲಿ. ಸೋ ನಾನಂತೂ ಅದನ್ನು ಮಿಸ್ ಮಾಡೋದೆ ಇಲ್ಲಾ...’ ಹೀಗೆ ಎಲ್ಲಾ ವಿದ್ಯಾರ್ಥಿಗಳು ಸಿಲೇಬಸ್ ಮರೆತು ತಮ್ಮ ಹವ್ಯಾಸಕ್ಕೆ ತಕ್ಕಂತ ಕಾರ್ಯಕ್ರಮಗಳ ವೀಕ್ಷಣೆಯ ಬಗ್ಗೆ ಚರ್ಚೆಯಲ್ಲಿ ತೊಡಗಿದ್ದರು. ದಿನವೂ ಕಾಣುವುದಕ್ಕಿಂತ ಕ್ಯಾಂಪಸ್ ಇಂದೇಕೊ ತುಸು ವಿಭಿನ್ನವಾಗಿ ಕಾಣುತ್ತಿತ್ತು.

ಈ ರೀತಿಯ ವಾತಾವರಣ ನಿರ್ಮಾಣವಾಗಿದ್ದು ವಿದ್ಯಾಕಾಶಿ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ. ಹೌದು ಕ್ಯಾಂಪಸ್‌ಲ್ಲಿ 5ನೇ ಅಂತರ್ ವಲಯದ ಯುವಜನೋತ್ಸವದ ಸಂಭ್ರಮ ಗರಿಗೆದರಿತ್ತು. ಸಂತೋಷ ಎಲ್ಲರಲ್ಲೂ ಮನೆಮಾಡಿತ್ತು. ಕ್ಯಾಂಪಸ್‌ನ ಪ್ರತ್ಯೇಕ ವಿಭಾಗಗಳಲ್ಲಿ ರಂಗೋಲಿ, ಕ್ವಿಜ್, ಡಿಬೇಟ್, ಡಾನ್ಸ್, ನಾಟಕ, ಶಾಸ್ತ್ರೀಯ ಮತ್ತು ಪಾಶ್ಚಾತ್ಯ ಸಂಗೀತ ಕಾರ್ಯಕ್ರಮ, ನಾಟಕ, ಮೈಮ್, ಡೊಳ್ಳು ಬಡಿತ ಇತ್ಯಾದಿ ಸ್ಪರ್ಧೆಗಳು ನಿಗದಿತ ಸಮಯದಲ್ಲಿ ಆರಂಭಗೊಂಡು ನೋಡುಗರ ತನುಮನವನ್ನು ತಂಪುಗೊಳಿಸಿದವು.

ADVERTISEMENT

ಕವಿವಿಯ ಕ್ಯಾಂಪಸ್ ಕಣ್ಣು ಹಾಯಿಸಿದಷ್ಟು ದೂರ ಕಾಣುವಂತದ್ದು. ನಡೆದಷ್ಟು ದೂರ ಮುಗಿಯದಂತದ್ದು. ಅಪ್ಪಿ-ತಪ್ಪಿ ದಾರಿ ತಪ್ಪಿದರೆ ಅಲ್ಲೂ ಒಂದೂ ವಿಭಾಗ ಕಾಣುವಂತದ್ದು. ಹೀಗಾಗಿ ಇಲ್ಲಿ ಓದುವಂತಹ ಅನೇಕ ವಿದ್ಯಾರ್ಥಿಗಳಿಗೆ, ತಾವು ಓದುತ್ತಿರುವ ವಿಭಾಗ ಹೊರತುಪಡಿಸಿದರೆ ಮತ್ತೊಂದು ವಿಭಾಗದ ಪರಿಚಯವಿರುವುದು ಬಹಳ ಕಡಿಮೆ. ಆದರೆ ಯುವಜನೋತ್ಸವದ ಪರಿಣಾಮ ಕಾರ್ಯಕ್ರಮ ವೀಕ್ಷಣೆಗಾಗಿ ವಿಭಾಗ ಮತ್ತು ವಿಭಾಗದ ವಿದ್ಯಾರ್ಥಿಗಳು ಅದಲು ಬದಲಾಗಿದ್ದರು. ಪ್ರತಿನಿತ್ಯ ಇಂಟರ್ನಲ್ಸ್, ಅಸೈನ್‌ಮೆಂಟ್ಸ್, ಸೆಮಿನಾರ್, ನೋಟ್ಸ್ ಕಲೆಕ್ಟ್ ಹೀಗೆ ಬ್ಯುಸಿಯಾಗಿರುತ್ತಿದ್ದ ವಿದ್ಯಾರ್ಥಿಗಳು ಇಂದು ಅದೆಲ್ಲವನ್ನು ಮರೆತು, ಹಾಯಾಗಿ ಲವಲವಿಕೆಯಿಂದ ಕ್ಯಾಂಪಸ್ ತುಂಬಾ ಓಡಾಡುತ್ತಿದ್ದರು.

ಸೆನೆಟ್ ಹಾಲ್‌ನಲ್ಲಿ ಕಾರ್ಯಕ್ರಮದ ಉದ್ಘಾಟನೆ ಆಗಿದ್ದೆ ತಡ, ಸ್ಪರ್ಧೆಯಲ್ಲಿ ಭಾಗವಹಿಸುವ ಸ್ಪರ್ಧಿಗಳು ಅವರ ಸ್ಪರ್ಧೆಯ ವಿಭಾಗದತ್ತ ಹೋಗುವ ತರಾತುರಿಯಲ್ಲಿದ್ದರು. ಅವುಗಳನ್ನು ನೋಡಿ ತಮ್ಮ ಸ್ನೇಹಿತರನ್ನು ಪ್ರೋತ್ಸಾಹಿಸಬೇಕೆಂಬ ಹಂಬಲದಿಂದ ಉಳಿದವರು ಅಷ್ಟೇ ಅವಸರದಿಂದ ದಾಪುಗಾಲು ಹಾಕುತ್ತಿದ್ದರು. ಕನ್ನಡ ವಿಭಾಗದವರು ಪ್ರಾಣಿಬಲಿ ಕುರಿತು ಜಾಗೃತಿ ಮೂಡಿಸುವ ನಾಟಕವನ್ನು ಪ್ರಸ್ತುತಪಡಿಸಿದರು. ಜೊತೆಗೆ ಇಂದಿನ ದಿನಮಾನಗಳಲ್ಲಿ ಹೋದಲ್ಲಿ ಬಂದಲ್ಲಿ ಹಿಂದೆ-ಮುಂದೆ ನೋಡದೆ ಕ್ಲಿಕ್ ಕ್ಲಿಕ್ ಅಂತಾ ಕ್ಲಿಕ್ಕಿಸಿಕೊಳ್ಳುತ್ತಿರುವ ಸೆಲ್ಫಿ ಕ್ರೇಜ್ ಬಗೆಗಿನ ನಾಟಕ ಹಾಸ್ಯದಿಂದ ಗಂಭೀರ ಚಿಂತನೆಯತ್ತ ಕೊಂಡೊಯ್ದು ಸೆಲ್ಫಿಯಿಂದಾಗುತ್ತಿರುವ ಅನಾಹುತದ ಬಗ್ಗೆ ಎಚ್ಚರಿಕೆಯ ಸಂದೇಶ ನೀಡಿತು.

ಇನ್ನು ಗಾಂಧಿಭವನದಲ್ಲಿ ನಡೆದ ಭರತನಾಟ್ಯದ ಸ್ಪರ್ಧಿಯ ಪ್ರದರ್ಶನ ನೋಡುಗರನ್ನು ನಿಬ್ಬೇರಗಾಯಿಸಿತು. ಹಾಡಿಗೆ ತಕ್ಕಂತೆ ನವರಸಗಳನ್ನು ತನ್ನ ಆಂಗೀಕಾಭಿನಯದ ಮೂಲಕ ತೋರಿಸಿದ ನೃತ್ಯಗಾರ್ತಿ ನೆರೆದಿದ್ದ ಪ್ರೇಕ್ಷಕ ವರ್ಗವನ್ನು ತನ್ನತ್ತ ಕೇಂದ್ರಿಕರಿಸಿಕೊಂಡಳು. ಎಲ್ಲರೂ ಶಾಂತವಾಗಿ ಕಣ್ಣರಳಿಸಿ ನೋಡುವಂತೆ ಆಕೆ ನೃತ್ಯ ಮಾಡಿದಳು. ಇದಕ್ಕೆ ವಿರುದ್ಧವಾಗಿ ಕುಳಿತವರು ಹುಡುಗ-ಹುಡುಗಿ ಎಂಬ ಭೇದ ಮರೆತು ಶಿಳ್ಳೆ, ಚಪ್ಪಾಳೆ ಹೊಡೆಯುತ್ತಾ, ಹುಚ್ಚೆದ್ದು ಕುಣಿಯುವಂತೆ ಮಾಡಿದ್ದು ಗಂಡುಕಲೆ ಡೊಳ್ಳುಬಡಿತ! ಅಬ್ಬಾ... ಕಿವಿಗಡಚಿಕ್ಕುವಂತಹ ಭಾರಿ ಸದ್ದು, ಡಿಜೆ ಸದ್ದನ್ನು ಮಂಕಾಗಿಸಿ ಗಾಂಧಿಭವನದಲ್ಲಿ ಪ್ರತಿಧ್ವನಿಸುತ್ತಿತ್ತು.

ಅತ್ತ ವೇದಿಕೆ ಮೇಲೆ ಸ್ಪರ್ಧಾಳುಗಳು ಬೆವರು ಕಿತ್ತು ಬರುವಂತೆ ಹುರುಪಿನಿಂದ ಡೊಳ್ಳು ಬಾರಿಸುವುದರಲ್ಲಿ ಮಗ್ನರಾಗಿದ್ದರೆ ನೋಡುಗರು ಗುಂಪು-ಗುಂಪಾಗಿ ಖುಷ್-ಖುಷಿಯಿಂದ ಹೆಜ್ಜೆ ಹಾಕುತ್ತ ಮೈಚಳಿ ಬಿಟ್ಟು ಕುಣಿಯುತ್ತಿದ್ದರು. ಇನ್ನು ಉಳಿದವರು ಈ ಸುಂದರ ಕ್ಷಣಗಳನ್ನು ತಮ್ಮ ಜಂಗಮವಾಣಿಯಲ್ಲಿ ಜಮಾ ಮಾಡುವುದರಲ್ಲಿ ಕಳೆದೋಗಿದ್ದರು. ಹೀಗೆ ಗಾಂಧಿಭವನದಲ್ಲಿ ಯಾರೊಬ್ಬರು ಸುಮ್ಮನೆ ಕುಳಿತರಲಿಲ್ಲ.

ಒಟ್ಟಿನಲ್ಲಿ ಕ್ಯಾಂಪಸ್‌ನಲ್ಲಿ ಎರಡು ದಿನಗಳ ಕಾಲ ಹೊಸದೊಂದು ವಾತಾವರಣ ನಿರ್ಮಾಣವಾಗಿ, ಒತ್ತಡದಲ್ಲಿದ್ದ ವಿದ್ಯಾರ್ಥಿಗಳಿಗೆ ಭರಪೂರ ಮನರಂಜನೆಯನ್ನು ನೀಡಿತು. ವಿದ್ಯಾರ್ಥಿಗಳು ಅಷ್ಟೇ ಖುಷಿಯಾಗಿ ಅದನ್ನು ಎಂಜಾಯ್ ಮಾಡಿ, ಕೊಂಚ ರಿಲೀಫ್ ಪಡೆದುಕೊಂಡದ್ದು ಸುಳ್ಳಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.