ADVERTISEMENT

ಆತಂಕ

​ಪ್ರಜಾವಾಣಿ ವಾರ್ತೆ
Published 2 ಸೆಪ್ಟೆಂಬರ್ 2017, 19:30 IST
Last Updated 2 ಸೆಪ್ಟೆಂಬರ್ 2017, 19:30 IST

ಹಿರಿಯೂರಿನ ಸಕ್ಕರೆ ಕಾರ್ಖಾನೆಯಲ್ಲಿ ನನ್ನ ಅಣ್ಣ ಕೆಲಸಕ್ಕೆ ಸೇರಿಸಿ ಆರು ತಿಂಗಳಾದರೂ ನಾವ್ಯಾರೂ ಆತನನ್ನು ನೋಡಲು ಹೋಗಿರಲಿಲ್ಲ. ಅಣ್ಣ ಮಾತ್ರ ವಾರಕ್ಕೊಮ್ಮೆ ಊರಿಗೆ ಬಂದು ಹೋಗುತ್ತಿದ್ದ. ಆದಾಗ್ಯೂ ಅಣ್ಣ ಯಾವ ಸೆಕ್ಷನ್‌ನಲ್ಲಿ ಕೆಲಸ ಮಾಡುತ್ತಿದ್ದಾನೆ ಎಂಬುದು ನಮಗಾರಿಗೂ ತಿಳಿದಿರಲಿಲ್ಲ.

ಒಂದು ದಿನ ಅಮ್ಮ ರೊಟ್ಟಿ - ಚಟ್ನಿ ತಯಾರಿಸಿ ಅದನ್ನು ಅಣ್ಣನಿಗೆ ಕೊಟ್ಟು ಹಾಗೆಯೆ ಸ್ವಲ್ಪ ಹಣ ಪಡೆದುಕೊಂಡು ಬರಲು ನನ್ನನ್ನು ಹಿರಿಯೂರಿಗೆ  ಕಳುಹಿಸಿದಳು. ನನಗೆ ಖುಷಿಯೋ ಖುಷಿ. ಆ ದಿನಗಳಲ್ಲಿ ನಮ್ಮೂರಿಗೆ ಬಸ್ಸುಗಳು ಬಹಳ ಕಡಿಮೆ. ಬಹುತೇಕ ನಾವುಗಳೆಲ್ಲ 5 ಮೈಲಿ ದೂರವಿರುವ ಬೀರೇನಹಳ್ಳಿಗೆ ನಡೆದು ಅಲ್ಲಿಂದ ಬಸ್ಸು ಹಿಡಿದು ಹಿರಿಯೂರು ಸೇರಬೇಕಾಗಿತ್ತು.

ಸರಿ. ನಾನು ರಾತ್ರಿಗೆ ಬುತ್ತಿ ಹಾಗೂ ನಾಲ್ಕು ದಿನಗಳಿಗೆ ಆಗುವಷ್ಟು ರೊಟ್ಟಿಗಳನ್ನು ಚೀಲದಲ್ಲಿ ಹಾಕಿಕೊಂಡು 6 ಮೈಲಿ ನಡೆದು ಬೀರೇನಹಳ್ಳಿ ತಲುಪಿ ಅಲ್ಲಿಂದ ಬಸ್ಸು ಹತ್ತಿ ಸಕ್ಕರೆ ಕಾರ್ಖಾನೆ ತಲುಪುವ ವೇಳೆಗೆ ಸರಿಯಾಗಿ 5 ಗಂಟೆ. ಫ್ಯಾಕ್ಟರಿ ಸೈರನ್ ಕೂಗಿತು. ಫ್ಯಾಕ್ಟರಿ ಗೇಟಿನ ಮೂಲಕ ಒಳ ಹೊಗುವುದರಲ್ಲಿದ್ದೆ. ಅಷ್ಟರಲ್ಲಿ ವಾಚ್‌ಮನ್ ನನ್ನ ತಡೆದು ವಿಚಾರಿಸಿದ. ನಾನು ನನ್ನ ಅಣ್ಣನನ್ನು ನೋಡಬೇಕು ಎಂದು ತಿಳಿಸಿದೆ. ಆತನಿಗೆ ನನ್ನ ಅಣ್ಣನ ಹೆಸರು ಗೊತ್ತಿಲ್ಲ. ನನಗೆ ಅಣ್ಣ ಯಾವ ಕಡೆ ಕೆಲಸ ಮಾಡುತ್ತಿದ್ದಾನೆ ಎಂಬುದು ತಿಳಿದಿಲ್ಲ. ಹೀಗಾಗಿ ಮಾತುಕತೆ ನಡೆಯುತ್ತಿತ್ತು. ಸಂಜೆಯಾಗುತ್ತಲಿದೆ. ಪರಿಚಯದವರಾರು ಇಲ್ಲ. ನಾನು ಚಡಪಡಿಸತೊಡಗಿದೆ.

ADVERTISEMENT

ಇದೇ ಸಮಯಕ್ಕೆ ಡ್ಯೂಟಿ ಪೂರೈಸಿ ಮನೆಗೆ ಹೊರಟಿದ್ದ ಹೆಡ್ ವಾಚ್‌ಮನ್ ದೇವರ ಹಾಗೆ ಬಂದ್ರು. ವಿಚಾರ ತಿಳಿದು ‘ನಿಂದು ಯಾವೂರಪ್ಪ’ ಎಂದು ಕೇಳಿದರು. ನಾನು ‘ ಗೌನಹಳ್ಳಿ’ ಎಂದೆ. ‘ಓ ಅಲ್ಲಿ ನಮ್ಮ ಸಂಬಂಧಿಕರಿದ್ದಾರೆ. ನಿಮ್ಮ ಅಣ್ಣನ ಹೆಸರು ಆರಾಧ್ಯ ಹೌದಾ’ ಎಂದರು. ನಾನು ‘ಹೌದು‘ ಎಂದೆ. ‘ಬಾ ಬೇಗ ಹೋಗೋಣ ನಾನು ನಿಮ್ಮ ಅಣ್ಣನ ಹತ್ತಿರ ಕರಕೊಂಡು ಹೋಗುತ್ತೇನೆ’ ಎಂದು ಹೇಳಿ ನನ್ನನ್ನು ಅವರ ಸೈಕಲ್‌ ಮೇಲೆ ಕೂರಿಸಿಕೊಂಡು ಅಣ್ಣನ ಆಫೀಸಿನ ಕಡೆ ಸೈಕಲ್ಲು ತುಳಿದರು. ಆ ಕ್ಷಣದಲ್ಲಿ ನನ್ನ ದುಗುಡಗಳೆಲ್ಲ ದೂರವಾದವು. ಅಣ್ಣನ ಕಚೇರಿ ಬಳಿಗೆ ಬರುವ ವೇಳೆಗೆ ಅಣ್ಣ ಆಗಲೇ ಡ್ಯೂಟಿ ಮುಗಿಸಿಕೊಂಡು ರೂಮಿಗೆ ಹೋದರು ಅಂತ ತಿಳಿಯಿತು.

ಹೆಡ್ ವಾಚ್‌ಮನ್ ಅವರಿಗೆ ನನ್ನ ಅಣ್ಣನ ರೂಮಿನ ವಿಳಾಸ ಗೊತ್ತಿಲ್ಲ. ಇಷ್ಟು ಹೊತ್ತಿಗೆ ಆಗಲೇ ರಾತ್ರಿ 7 ಗಂಟೆಯಾಗಿತ್ತು. ನನಗೆ ಪುನಃ ಆತಂಕ. ರಾತ್ರಿ ಹೇಗೆ ಕಳೆಯುವುದು? ಜೇಬಲ್ಲಿ ಕೇವಲ ಬೆಳಗಿನ ಬಸ್ಸಿನ ಚಾರ್ಜು ಮಾತ್ರ ಇದೆ. ಚಿಂತೆಗೊಳಗಾಗಿ ಅಳು ಬಂತು. ನನ್ನ ಅವಸ್ಥೆ ನೋಡಿದ ಹೆಡ್ ವಾಚ್‌ಮನ್ ‘ನಮ್ಮ ಮನೇಲಿ ರಾತ್ರಿ ಇದ್ದು ಬೆಳಗ್ಗೆ ನಿಮ್ಮ ಅಣ್ಣನ ಬಳಿಗೆ ಕರಕೊಂಡು ಹೋಗುತ್ತೇನೆ’ ಎಂದರು. ನಾನು ಅದಕ್ಕೆ ಪ್ರತಿ ಮಾತಾಡದೆ ಸಪ್ಪೆ ಮೋರೆಯಲ್ಲಿ ’ಆಗಲಿ ಸರ್’ ಎಂದೆ. ಅಲ್ಲಿಯೇ ಇದ್ದ ಕ್ಯಾಂಟೀನಿನಲ್ಲಿ ನನಗೆ ಟೀ ಕೊಡಿಸಿ ನನ್ನನ್ನು ಅವರ ಸೈಕಲ್ಲು ಕ್ಯಾರಿಯರ್ ಮೇಲೆ ಕೂರಿಸಿಕೊಂಡು ಫ್ಯಾಕ್ಟರಿ ಕ್ವಾಟ್ರಸ್ ಕಡೆ ಹೊರಟರು. ಸ್ವಲ್ಪ ದೂರ ಹೋದ ಮೇಲೆ ರಸ್ತೆ ಕಡಿದಾಗಿದ್ದರಿಂದ ನನ್ನ ಕೆಳಗಿಸಿ ಸೈಕಲ್ಲು ತಳ್ಳಿಕೊಂಡು ಹೊರಟರು. ಹೀಗೆ ಹೋಗುತ್ತಿರುವಾಗ ಹಿಂದೆ ಟ್ರಿನ್ ಟ್ರಿನ್ ಶಬ್ದ ಮಾಡುತ್ತ ಯಾರೋ ಸೈಕಲ್ಲು ತುಳಿದುಕೊಂಡು ಬರುವುದು ಕಂಡಿತು. ಹತ್ತಿರ ಬಂದಾಗ ನೋಡುತ್ತೇನೆ, ನನ್ನ ಅಣ್ಣ! ‘ಓ ಆರಾಧ್ಯರೇ?’ ಎಂದು ಹೆಡ್ ವಾಚ್‌ಮನ್ ರವರ ಅಚ್ಚರಿ ಭರಿತ ಮಾತುಗಳು. ಅಂತೂ ಕತ್ತಲಲ್ಲೆ ನನ್ನ ಅಣ್ಣನ ಜೊತೆ ಸೇರಿಸಿದ ಹೆಡ್ ವಾಚ್‌ಮನ್ ತಿಮ್ಮಾನಾಯಕರನ್ನು ಆ ದಾರಿಯಲ್ಲಿ ಬಸ್ಸಿನಲ್ಲಿ ಹೊಗುವಾಗ ಈಗಲೂ ನಾನು ನೆನಪು ಮಾಡಿಕೊಳ್ಳುತ್ತೇನೆ.

ಪ.ಚಂದ್ರಕುಮಾರ ಗೌನಹಳ್ಳಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.