ADVERTISEMENT

ಕಾರಂತರ ಕೆನ್ನೆಗೆ ಹೊಡೆದೆ!

ಮಂದಹಾಸ

ಡಾ.ಕಬ್ಬಿನಾಲೆ ವಸಂತ ಭಾರದ್ವಾಜ
Published 12 ಏಪ್ರಿಲ್ 2014, 19:30 IST
Last Updated 12 ಏಪ್ರಿಲ್ 2014, 19:30 IST

ಇಪ್ಪತ್ತು ವರ್ಷಗಳ ಹಿಂದಿನ ಮಾತು. ಆಗ ನಾನು ಹದಿನೈದರ ಹರೆಯದ ಹುಡುಗ. ಒಂದು ದಿನ ಪತ್ರಿಕೆಯಲ್ಲಿ ‘ಕಾರಂತರ ಸಿನಿಮಾಕ್ಕೆ ಬಾಲನಟರು ಬೇಕಾಗಿದ್ದಾರೆ’ ಎಂಬ ಬರಹ ನೋಡಿದೆ. ಹುಡುಗಾಟಿಕೆಯ ಹುಮ್ಮಸ್ಸಿನಿಂದ ಅರ್ಜಿ ಗುಜರಾಯಿಸಿದೆ. ಸಂದರ್ಶನಕ್ಕೆ ಕರೆಯೂ ಬಂತು. ಉತ್ಸಾಹದಿಂದ ಅವರ ಮನೆಗೆ ಹೋದಾಗ ನನ್ನಂತೆಯೇ 20–30 ಹುಡುಗರು ಸಂದರ್ಶನಕ್ಕೆ ಕಾದು ಕುಳಿತಿದ್ದರು.

ನನ್ನ ಸರದಿ ಬಂದಾಗ ಕಾರಂತರ ಕೋಣೆಗೆ ಹೋದೆ. ನನ್ನನ್ನು ಒಂದೆರಡು ನಿಮಿಷ ನೆಟ್ಟ ದೃಷ್ಟಿಯಿಂದ ನೋಡಿದರು. ನಾನೂ ಅವರನ್ನೇ ದಿಟ್ಟಿಸಿ ನೋಡುತ್ತಿದ್ದೆ. ಆಗ ಅವರು ‘ನಾನು ನಿನ್ನ ಅಜ್ಜ. ನೀನು ನನ್ನ ಮೊಮ್ಮಗ. ನಾನೇನೋ ನಿನ್ನನ್ನು ಬೈದುದಕ್ಕೆ ನಿನಗೆ ನನ್ನ ಮೇಲೆ ಸಿಟ್ಟು ಬಂದಿದೆ ಎಂದು ಭಾವಿಸಿಕೋ. ಆಗ ಯಾವ ರೀತಿ ಅಭಿನಯಿಸುತ್ತಿಯೋ ತೋರಿಸು’ ಎಂದರು. ನನಗಾದರೋ ಒಮ್ಮೆಲೇ ಸ್ಫೂರ್ತಿ ಗರಿಗೆದರಿತು. ಸಿಟ್ಟಿನಿಂದ ಮೈಯೆಲ್ಲ ಬಿಸಿಯೇರಿತು. ಅಜ್ಜನಿಗೆ ಬೈಯುತ್ತಾ ಅಲ್ಲಿರುವ ಪುಸ್ತಕಗಳನ್ನು ಚೆಲ್ಲಾಪಿಲ್ಲಿ ಎಸೆದು ಕಾರಂತಜ್ಜನ ಕೆನ್ನೆಗೆ ಒಂದೇಟು ಬಿಗಿದೆ! ಕಾರಂತರು ‘ವೆರಿಗುಡ್‌’ ಎಂದರು! ಸಂದರ್ಶನ ಮುಗಿಯಿತು. ಎಲ್ಲಾ ಮಕ್ಕಳೊಂದಿಗೆ ನಾನು ಹಿಂತಿರುಗಿದೆ. ಒಂದು ವಾರದಲ್ಲಿ ‘ನಿನ್ನನ್ನು ಆಯ್ಕೆ ಮಾಡಲಾಗಿದೆ’ ಎಂಬ ಕಾರಂತರ ಪತ್ರ ಕೈಸೇರಿತು. ಸಿನಿಮಾ ನಟನಾದೆನೆಂದು ನಾನಂತೂ ಹಿರಿಹಿರಿ ಹಿಗ್ಗಿದೆ.

‘ಕುಡಿಯರ ಕೂಸು’ ಕಾದಂಬರಿ ‘ಮಲೆಯ ಮಕ್ಕಳು’ ಎನಿಸಿಕೊಂಡು ಚಿತ್ರೀಕರಣವಾಯಿತು. ಮಿನುಗುತಾರೆ ಕಲ್ಪನಾ ಅಭಿನಯಿಸಿದ ಕೊನೆಯ ಚಿತ್ರ ಅದು. ರಾಜಕೀಯ ಕಾರಣಗಳಿಂದಾಗಿ ಚಿತ್ರ ಮೂಲೆಗುಂಪಾಯಿತು. ನನ್ನ ಸಿನಿಮಾ ಜೀವನದ ಭವಿಷ್ಯವೂ ಬದಲಾಯಿತು. ಈ ಮಾತು ಬೇರೆ...

ಐದಾರು ವರ್ಷಗಳ ನಂತರ, ಅವರ ಯಕ್ಷಗಾನ ಬ್ಯಾಲೆಗಳಲ್ಲಿ ನಟಿಸುವ ಭಾಗ್ಯ ನನಗೆ ಒದಗಿ ಬಂದಿತು. ಕಾರಂತರೇ ಗೆಜ್ಜೆ ಕಟ್ಟಿಕೊಂಡು ಕುಣಿದು ಭಾವಾಭಿನಯ ಮಾಡಿ ತೋರಿಸುತ್ತಿದ್ದರು. ಮುಖದ ಗೆರೆಗೆರೆಗಳಲ್ಲೂ ರಸಾಭಿವ್ಯಕ್ತಿ ಮೂಡಬೇಕೆಂಬುದು ಅವರ ನಿರ್ದೇಶ.

‘ವೀರ  ಅಭಿಮನ್ಯು’ ಪ್ರಸಂಗದಲ್ಲಿ ನನ್ನದು ಕರ್ಣನ ಪಾತ್ರ. ಯಾವುದೋ ಒಂದು ಸನ್ನಿವೇಶದಲ್ಲಿ ಅವರ ಕೆನ್ನೆ ಕುಣಿದಂತೆ ನನ್ನ ಕೆನ್ನೆಯೂ ಅಲುಗಾಡಬೇಕೆಂದರು! ಅವರು ಎಪ್ಪತ್ತೈದು ದಾಟಿದ ವೃದ್ಧರು. ಕೆನ್ನೆಗಳು ಕುಣಿಯಲು ಸಾಧ್ಯ. ಆದರೆ ನನ್ನ ತಾರುಣ್ಯದ ಕೆನ್ನೆಗಳು ಜೋತಾಡಲು ಸಾಧ್ಯವೆ? ನಾನು ಅವರಂತೆ ಅಭಿನಯಿಸಲು ಸೋತೆ. ಕಾರಂತರಿಗೆ ಸಿಟ್ಟು ಬಂತು. ನನ್ನ ಕೆನ್ನೆಗೆ ಒಂದೇಟು ಬಾರಿಸಿಯೇ ಬಿಟ್ಟರು!

ಸಿನಿಮಾ ಮಾಡಹೊರಟ ಕಾರಂತಜ್ಜನಿಗೆ ನಾನು ಕೆನ್ನೆಗೆ ಬಾರಿಸಿದರೆ, ಯಕ್ಷಗಾನದ ರಿಹರ್ಸಲ್‌ನಲ್ಲಿ ನಾನೇ ಅವರಿಂದ ಕೆನ್ನೆಗೆ ಬಾರಿಸಿಕೊಂಡೆ! ಸೇಡಿಗೆ ಸೇಡು! ಕೊಡುವ ಕೊಂಬುವ ಲೆಕ್ಕಾಚಾರ ಚುಕ್ತಾ ಆಯಿತು! ಇದಲ್ಲವೇ ನನ್ನ ಪೂರ್ವಜನ್ಮದ ಪುಣ್ಯ!
ಡಾ. ಕಬ್ಬಿನಾಲೆ ವಸಂತ ಭಾರದ್ವಾಜ
(ಕೃತಿ: ಕಾರಂತ ಯುಗಾಂತ ; ಸಂ: ಡಾ. ಜಯಪ್ರಕಾಶ ಮಾವಿನಕುಳಿ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.