ADVERTISEMENT

ಕುಸ್ತಿ ಕಾಂಡ

​ಪ್ರಜಾವಾಣಿ ವಾರ್ತೆ
Published 13 ಮೇ 2017, 19:30 IST
Last Updated 13 ಮೇ 2017, 19:30 IST
ಕುಸ್ತಿ ಕಾಂಡ
ಕುಸ್ತಿ ಕಾಂಡ   

‘ಡಬ್ಲ್ಯುಡಬ್ಲ್ಯುಇ’ ಸರ್ಕೀಟ್‌ನಲ್ಲಿ ಭಾರತದ ಕುಸ್ತಿಪಟು ಕಾಲಿ ಸದ್ದು ಮಾಡಿದ್ದು ಅನೇಕರಿಗೆ ಗೊತ್ತು. ಭಾರತದಲ್ಲಿ ಕುಸ್ತಿಯ ಪರಂಪರೆಯೇ ಇದೆ. ಸಾವಿರಾರು ವರ್ಷಗಳಿಂದ ಈ ಸ್ಪರ್ಧೆ ನಡೆದುಕೊಂಡು ಬಂದಿದೆ.

ಪುರಾಣಗಳಲ್ಲಿಯೂ ಇದರ ಉಲ್ಲೇಖಗಳಿವೆ. ಶ್ರೀಕೃಷ್ಣನು ಚಾಣೂರನನ್ನು ಸೋಲಿಸಿದ. ಮಗಧ ರಾಜ ಜರಾಸಂಧನನ್ನು ಭೀಮ ಸದೆಬಡಿದ. ಭಾರತದ ರಾಜರು ಕುಸ್ತಿಯನ್ನು ಪೋಷಿಸಿದರು. ಮರಾಠಾ ನಾಯಕ ಶಿವಾಜಿ ಮಹಾರಾಷ್ಟ್ರದಾದ್ಯಂತ ಕುಸ್ತಿ ಅಖಾಡಗಳನ್ನು ಸಿದ್ಧಪಡಿಸುವಂತೆ ಸೂಚಿಸಿದ್ದ. ಗುರು ಸಮರ್ಥ್ ರಾಮದಾಸ್ ಸೂಚನೆಯಂತೆ ಅವನು ಹಾಗೆ ಮಾಡಿದ್ದು.

ಬ್ರಿಟಿಷರ ಕಾಲದಲ್ಲಿಯೂ ಕುಸ್ತಿ ಜನಪ್ರಿಯವಾಗಿತ್ತು. ವಿಶ್ವದರ್ಜೆಯ ಕೆಲವು ಕುಸ್ತಿಪಟುಗಳು ಆ ಕಾಲದಲ್ಲಿ ಇದ್ದರು. ಕರೀಂ ಬಕ್ಷ್  ಅವರಲ್ಲಿ ಒಬ್ಬ. 1892ರಲ್ಲಿ ಅವನು ಇಂಗ್ಲೆಂಡ್‌ನ ಟಾಮ್ ಕೆನನ್ ವಿರುದ್ಧ ಗೆದ್ದಿದ್ದ. ತನ್ನ 50 ವರ್ಷಗಳ ಕುಸ್ತಿ ಬದುಕಿನಲ್ಲಿ ಒಂದೂ ಸೋಲು ಕಾಣದ ಗಾಮಾ ಇದ್ದ. ಟರ್ಕಿಯ ಕೋರ್ ಡೆರೆಲಿ ವಿರುದ್ಧ 1900ರಲ್ಲಿ ಗೆದ್ದ ಗುಲಾಮ್ ಕೂಡ ದಿಗ್ಗಜ.

ಭಾರತದಲ್ಲಿ ಕುಸ್ತಿಯು ಪೈಲ್ವಾನಿ, ಮಲ್ಲಯುದ್ಧ ಎಂಬ ಹೆಸರುಗಳಿಂದಲೂ ಜನಪ್ರಿಯವಾಗಿದೆ. ಕುಸ್ತಿ ಆಡುವ ನೈಪುಣ್ಯವನ್ನು ಮಲ್ಲಕಲೆ ಎನ್ನುತ್ತಾರೆ. ಮಲ್ಲವಿದ್ಯೆ ಎಂದು ಕರೆಯುವುದೂ ಉಂಟು. ಹಾಲು, ತುಪ್ಪ, ಬಾದಾಮಿ ಕುಸ್ತಿಪಟುಗಳ ಪಥ್ಯದ ಪ್ರಮುಖ ಪದಾರ್ಥಗಳು. ಮದ್ಯ, ತಂಬಾಕು ಸೇವನೆ ನಿಷಿದ್ಧ.

ಮಣ್ಣಿನ ಅಖಾಡದಲ್ಲಿ ಕುಸ್ತಿಪಟುಗಳು ಅಭ್ಯಾಸ ಮಾಡುತ್ತಾರೆ. ಹನುಮಂತನ ಮೂರ್ತಿಯನ್ನು ಪೂಜಿಸಿ ಕುಸ್ತಿ ಅಭ್ಯಾಸ ಪ್ರಾರಂಭಿಸುವುದು ವಾಡಿಕೆ. ಎಷ್ಟು ವ್ಯಾಯಾಮ ಮಾಡಬೇಕು, ಯಾವ ಆಹಾರ ಸೇವಿಸಬೇಕು, ಎಷ್ಟು ವಿಶ್ರಾಂತಿ ಬೇಕು ಎಂಬುದನ್ನು ಗುರು ನಿರ್ಧರಿಸುತ್ತಾನೆ.

ಸೂರ್ಯನಮಸ್ಕಾರ, ಪುಷ್ ಅಪ್‌ಗಳು, ಗದೆ ತಿರುಗಿಸುವುದು, ಮಂಡಿಗಳ ವ್ಯಾಯಾಮ ಕಡ್ಡಾಯ. ಭಾರದ ಲೋಹ ಪದಾರ್ಥಗಳು, ಕಲ್ಲುಗಳನ್ನು ಎತ್ತುವುದು ಕೂಡ ಮುಖ್ಯ.

ಕ್ಷಮತೆ ಹಾಗೂ ಚಾಣಾಕ್ಷತನ ರೂಢಿಸಿಕೊಳ್ಳಲು ಕುಸ್ತಿಪಟುಗಳು ಕೆಲವು ಆಟಗಳನ್ನೂ ಆಡುತ್ತಾರೆ. ‘ಕೋತಿ ಓಟ’ ಅಂಥ ಆಟಗಳಲ್ಲಿ ಮುಖ್ಯವಾದುದು. ಗುಂಡಿಯ ಸುತ್ತ ಕುಕ್ಕರಗಾಲಿನಲ್ಲಿಯೇ ಓಡುವ ಈ ಆಟದಿಂದ ಕಾಲುಗಳ ಸ್ನಾಯುಗಳು ಬಲವಾಗುತ್ತವೆ. ಕುಸ್ತಿಪಟುಗಳಿಗೆ ಅಂಗಮರ್ದನವೂ ಬೇಕು.

ಕುಸ್ತಿ ಆಡುವ ಮೊದಲು ಅಖಾಡಕ್ಕೆ ನಮಸ್ಕಾರ ಮಾಡಿ, ಅದರ ಮಣ್ಣನ್ನು ಮೆತ್ತಿಕೊಂಡು ತೊಡೆತಟ್ಟುವುದು ರೂಢಿ. ದೇಹ ಹಾಗೂ ಮಾನಸಿಕ ಆರೋಗ್ಯ ಕಾಪಾಡಿಕೊಳ್ಳುವ ದಾರಿಯಾಗಿ ಅನೇಕರಿಗೆ ಕುಸ್ತಿ ಒದಗಿಬಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.