ADVERTISEMENT

ಕೊನೆ ಮೊದಲಿಲ್ಲದ ‘ಕೊಳ್ಳುಜ್ವರ’

ರೂಪಾ ಡಿ.ಎ.
Published 9 ಮೇ 2015, 19:30 IST
Last Updated 9 ಮೇ 2015, 19:30 IST

ಮಿತ್ರನೊಬ್ಬನ ಕೈಲಿ 4-ಜಿ ಮೊಬೈಲ್ ಇತ್ತು. ಅದು ಹೊರಗೆ ಮಾರುಕಟ್ಟೆಯಲ್ಲಿ ಸುಭಕ್ಕೆ ಸಿಗುವುದಿಲ್ಲ, ಆನ್‌ಲೈನ್‌ನ ಇ-ಕಾಮರ್ಸ್ ವೆಬ್‌ಸೈಟ್‌ನಲ್ಲೇ ಬುಕ್ ಮಾಡಬೇಕು. ಹೀಗೆ ಬುಕ್ ಮಾಡುವುದು ಒಂದು ಪ್ರಕ್ರಿಯೆ.

ಮೊದಲು ಹೆಸರು, ಇ-ಮೇಲ್ ಅನ್ನು ವೆಬ್‌ಸೈಟ್‌ನಲ್ಲಿ ನೋಂದಾಯಿಸಬೇಕು. ಆಮೇಲೆ ವಾರದ ನಿಗದಿತ ದಿನದ, ನಿಗದಿತ ಸಮಯಕ್ಕೆ ಸರಿಯಾಗಿ ಲಾಗ್‌ಆನ್ ಆಗಿ, ವೆಬ್‌ಸೈಟ್ ಕೇಳುವ ವಿವರಗಳನ್ನೆಲ್ಲಾ ಫಟಾಫಟ್ ತುಂಬಿ, ಹದಿನೈದು ನಿಮಿಷದೊಳಗೆ ಹಣವನ್ನು ಕ್ರೆಡಿಟ್ ಅಥವಾ ಡೆಬಿಟ್ ಕಾರ್ಡ್ ಮೂಲಕ ಪಾವತಿಸಬಲ್ಲಿರಾದರೆ ಮೊಬೈಲ್ ಕೊಂಡಂತೆಯೇ! ‘ಕ್ಯಾಷ್ ಆನ್ ಡೆಲಿವರಿ’ ಅರ್ಥಾತ್ ಮೊಬೈಲ್ ಅನ್ನು ಬಯಸಿದ ವಿಳಾಸಕ್ಕೆ ತಲುಪಿಸಿದ ಮೇಲೆಯೂ ಹಣವನ್ನು ಕಾರ್ಡ್ ಅಥವಾ ಕ್ಯಾಷ್ ಮೂಲಕ ಪಾವತಿಸಬಹುದು.

ಆ ಮೊಬೈಲ್ ನೋಡಿದ ಬೆಂಗಳೂರಿಗೆ ಸಮೀಪದ ತಾಲ್ಲೂಕು ಕೇಂದ್ರವೊಂದರ ಒಬ್ಬರು ತಾವೂ ಅಂಥ ಮೊಬೈಲ್ ಒಂದನ್ನು ಕೊಳ್ಳಲು ಮುಂದಾದರು. ಆದರೆ, ಅವರು ನೆಟಿಜನ್ ಅರ್ಥಾತ್ ಇಂಟರ್ನೆಟ್ ಬಳಕೆದಾರರಲ್ಲ. ಅವರು ತಮಗೂ ಅಂಥದೊಂದು ಮೊಬೈಲ್ ಕೊಡಿಸಿಕೊಡುವಂತೆ ಆ ಮಿತ್ರನನ್ನು  ಕೇಳಿಕೊಂಡರು. ಇ-ಕಾಮರ್ಸ್ ವೆಬ್ ಪುಟವನ್ನು ತೆರೆದ ಆತ, ತಮ್ಮ ಗೆಳೆಯರು ವಾಸ ಮಾಡುತ್ತಿದ್ದ ಪಟ್ಟಣಕ್ಕೂ ಡೆಲಿವರಿ ಇದೆಯೇ ಎನ್ನುವುದನ್ನು ಖಾತರಿಪಡಿಸಿಕೊಂಡ. ಮೊಬೈಲ್ ಅನ್ನು ತಲುಪಿಸಿದ ಮೇಲಷ್ಟೇ ಹಣ ಪಾವತಿ­ಸುವ ಅವಕಾಶ ಆ ಪಟ್ಟಣದ ಗ್ರಾಹಕರಿಗೆ ಇತ್ತು. ಅದೇ ಪಟ್ಟಣದ ಇನ್ನೊಬ್ಬ ಗ್ರಾಹಕ ಆ ವೆಬ್‌ಸೈಟ್‌ನ ಕಾಯಂ ಗಿರಾಕಿ ಆಗಿ ಬಿಟ್ಟಿದ್ದ. ಅಷ್ಟು ಹೊತ್ತಿಗೆ ಅವನಿಗೆ ಹತ್ತಕ್ಕೂ ಹೆಚ್ಚು ವಸ್ತು  ವಿಲೇವಾರಿ ಮಾಡಿದ ಅನುಭವ ಇದ್ದ ಆ ಇ-ಕಾಮರ್ಸ್ ವೆಬ್‌ಸೈಟ್‌ನ ಸಿಬ್ಬಂದಿಗೆ ಇನ್ನೊಂದು ಮೊಬೈಲ್ ತಲುಪಿಸುವುದು ಸವಾಲಾಗಲೇ ಇಲ್ಲ.

ಹಾಗೆ ಮೊಬೈಲ್ ಕೊಂಡ ನೆಟಿಜನ್ ಅಲ್ಲದ ವ್ಯಕ್ತಿ ಒಂದೇ ವಾರದಲ್ಲಿ ‘ಡೇಟಾಪ್ಯಾಕ್’ ಹಾಕಿಸಿಕೊಂಡರು. ಅದೇ ಮೊಬೈಲ್ ಮೂಲಕ ಅವರೂ ಶಾಪಿಂಗ್ ಆರಂಭಿಸಿದರು. ತಮ್ಮ ಅನುಕೂಲಕ್ಕೆ ತಕ್ಕ ಆ್ಯಪ್‌ಗಳನ್ನು ಡೌನ್‌ಲೋಡ್ ಮಾಡಿಕೊಂಡರು. ದೂರದೂರಿಗೆ ಹೊರಡುವಾಗ ಟಿಕೆಟ್ ಕಾಯ್ದಿರಿಸುವುದರಿಂದ ಹಿಡಿದು ಮೊಬೈಲ್ ರಿಚಾರ್ಜ್ ಮಾಡಿಸುವವರೆಗೆ ಅವರೀಗ ಮೊಬೈಲ್ ಇ-ಗ್ರಾಹಕರೇ ಹೌದು.

ಫ್ಲಾಷ್‌ಬ್ಯಾಕ್
2002ರಲ್ಲಿ ಭಾರತದಲ್ಲಿ ಇ-ಕಾಮರ್ಸ್ ಶುರುವಾದದ್ದು ‘ಆನ್‌ಲೈನ್ ಪ್ಯಾಸೆಂಜರ್ ರಿಸರ್ವೇಷನ್ ಸಿಸ್ಟಂ’ (ಐಆರ್‌ಸಿಟಿಸಿ) ಪರಿಚಿತವಾದಾಗ. ಬಸ್ ಹಾಗೂ ರೈಲ್ವೆ ಟಿಕೆಟ್‌ಗಳನ್ನು ಮುಂಗಡ ಕಾಯ್ದಿರಿಸಲು ಅನುಕೂಲವಾಗಲಿ ಎಂದು ಬಂದ ಈ ವ್ಯವಸ್ಥೆ ಇ-ಕಾಮರ್ಸ್ ವಹಿವಾಟಿನ ದಿಡ್ಡಿಬಾಗಿಲು ತೆರೆಯಲು ಪ್ರೇರಣೆಯಾದದ್ದು ತುಸು ತಡವಾಗಿಯೇ ಎನ್ನಬಹುದು. ಸೌಕರ್ಯಕ್ಕೆ ಇಂಟರ್ನೆಟ್ ಬಳಸುವುದಕ್ಕೂ, ವಸ್ತುವನ್ನು ಕೊಳ್ಳಲು ಬಳಸುವುದಕ್ಕೂ ವ್ಯತ್ಯಾಸವಿದೆ. ಏಕಾಏಕಿ ಗ್ರಾಹಕರು ಆನ್‌ಲೈನ್ ಶಾಪಿಂಗ್‌ನತ್ತ ಮುಖ ಮಾಡಲಿಲ್ಲ. ದೂರದ ಅಮೆರಿಕದವರು ಇಲ್ಲಿನ ತಮ್ಮ ಬಂಧು-ಮಿತ್ರರರಿಗೆ ಶುಭ ಸಮಾರಂಭಗಳ ಸಂದರ್ಭದಲ್ಲಿ ಉಡುಗೊರೆಗಳನ್ನು ಕಳಿಸಲು ಸಣ್ಣ ಪುಟ್ಟ ವಹಿವಾಟು ನಡೆಸುತ್ತಿದ್ದುದು ಉಂಟು.

2002ರಲ್ಲಿ ಇ-ಕಾಮರ್ಸ್‌ನಲ್ಲಿ ಸಂಚಲನ ಮೂಡಿಸಿದ್ದು flipcart.comನ ಹುಟ್ಟು. ಸಚಿನ್ ಬನ್ಸಲ್ ಹಾಗೂ ಬಿನ್ನಿ ಬನ್ಸಲ್ ಎಂಬ ಇಬ್ಬರು ದೆಹಲಿ ಐಐಟಿ ಪದವೀಧರರ ಚಿಂತನೆಯ ಫಲವಾದ ಫ್ಲಿಪ್‌ಕಾರ್ಟ್ ನಾಲ್ಕೇ ವರ್ಷದಲ್ಲಿ 4500 ಉದ್ಯೋಗಿಗಳ ದೊಡ್ಡ ಕಂಪೆನಿಯಾಗಿ ಬೆಳೆದದ್ದು ಮಾಯಾ ಕಥನದಷ್ಟೇ ರೋಚಕ. ಭಾರತೀಯ ಗ್ರಾಹಕರಲ್ಲಿ ಆನ್‌ಲೈನ್ ಶಾಪಿಂಗ್‌ನ ಹುಕಿ ಹತ್ತಿಸಿದ್ದು ‘ಫ್ಲಿಪ್‌ಕಾರ್ಟ್.ಕಾಂ’. ನಿಮಿಷಕ್ಕೆ ದೇಶದಾದ್ಯಂತ ಸರಾಸರಿ 25 ಉತ್ಪನ್ನಗಳನ್ನು ವಿಲೇವಾರಿ ಮಾಡುವ ಈ ಕಂಪೆನಿಯು ಏನಿಲ್ಲವೆಂದರೂ ಪ್ರತಿನಿತ್ಯ ಸುಮಾರು 3 ಕೋಟಿ ರೂಪಾಯಿ ವಹಿವಾಟಿಗೆ ಮೋಸವಿಲ್ಲ ಎನ್ನುವಂತೆ ವ್ಯಾಪಾರ ನಡೆಸುತ್ತಿದೆ. ಪ್ರತಿ ಮೂರು ತಿಂಗಳಿಗೊಮ್ಮೆ ವಹಿವಾಟಿನಲ್ಲಿ ಶೇ 100ಕ್ಕೂ ಹೆಚ್ಚು ಜಿಗಿತ ಆಗುತ್ತಿರುವುದು ಅದರ ಪ್ರಗತಿಯ ಬೆಕ್ಕಸ ಬೆರಗಾಗಿಸುವ ಗತಿಗೆ ಕನ್ನಡಿ ಹಿಡಿಯುತ್ತಿದೆ.

ಬನ್ಸಲ್‌ದ್ವಯರ ಎದುರಲ್ಲಿ ಅಮೆಜಾನ್‌ ಡಾಟ್‌ ಕಾಮ್‌ನ ಯಶೋಗಾಥೆ ಇದ್ದರೂ ಅದನ್ನು ಅವರು ಭಾರತೀಯಗೊಳಿಸಿದ ಪರಿಯಲ್ಲಿ ಫ್ಲಿಪ್‌ಕಾರ್ಟ್‌ ಯಶಸ್ಸಿನ ಗುಟ್ಟಿದೆ. ಹಣ ಕೊಡುವ ಮೊದಲೇ ಗ್ರಾಹಕರ ಬಳಿಗ ವಸ್ತುವನ್ನು ಕೊಂಡೊಯ್ಯುವ ಪ್ರಾಯೋಗಿಕ ರಿಸ್ಕ್‌ಗೆ ಅವರು ಮೊದಲು ಕೈಹಾಕಿದ್ದು ಸವಾಲೇ ಹೌದಾಗಿತ್ತು.

ಒಂದಕ್ಕೊಂದು ಸಂಬಂಧವಿಹುದು
ಅಂತರ್ಜಾಲ ಅಕ್ಷರಸ್ಥ ಸಮೂಹದ ಬೇಕುಗಳಿಗೂ ಸಾಮಾನ್ಯ ಗ್ರಾಹಕರ ಬೇಕುಗಳಿಗೂ ವ್ಯತ್ಯಾಸವಿದೆ ಎನ್ನುವುದನ್ನು ಆನ್‌ಲೈನ್ ವ್ಯಾಪಾರಸ್ಥರು ಕಂಡುಕೊಂಡಿದ್ದಾರೆ. ವಿದ್ಯುತ್ ಬಿಲ್ – ನೀರಿನ ಬಿಲ್ ಕಟ್ಟಲು, ತೆರಿಗೆ ಪಾವತಿಸಲು, ಬ್ಯಾಂಕ್ ವಹಿವಾಟು ನಡೆಸಲು, ಅಷ್ಟೇ ಏಕೆ ಶಾಲೆಗೆ ಹೋಗುವ ಮಗುವಿನ ಶುಲ್ಕ ಪಾವತಿಸಲು, ಮಾರ್ಕ್ಸ್‌ಶೀಟ್ ಪಡೆಯಲು... ಇಷ್ಟಕ್ಕೇ ಮುಗಿಯುವುದಿಲ್ಲ. ಲ್ಯಾಬೊ­ರೇಟರಿ­ಯಲ್ಲಿ ಮಾಡಿಸಿದ ಲಿಪಿಡ್ ಪ್ರೊಫೈಲ್, ರಕ್ತಪರೀಕ್ಷೆಯ ಬಿಡಿ ಬಿಡಿ ವಿವರ ಪಡೆಯಲು, ಸಂಬಳದ ಚೀಟಿ ನೋಡಲು ಅಂತರ್ಜಾಲ ಬಳಸುವ ನಗರದ ಅಕ್ಷರಸ್ಥ ಸಮೂಹವೊಂದಿದೆ. ಅದು ವೆಬ್ ಪುಟಗಳ ಬಳಕೆಗೆ ಅಗತ್ಯವಿರುವ ಸೂಕ್ಷ್ಮಮತಿಯನ್ನು ಬೆಳೆಸಿಕೊಂಡಿ­ದ್ದಾಗಿದೆ. ಹಾಗಾಗಿ ಶಾಪಿಂಗ್‌ಗೆ ಒಗ್ಗಿಕೊಳ್ಳುವ ದಿನಗಳೂ ದೂರವಿಲ್ಲ. ಈ ಗುಣಗುಟ್ಟನ್ನು ಅರಿತೇ ಆನ್‌ಲೈನ್ ವ್ಯಾಪಾರಸ್ಥರು ಹೆಜ್ಜೆ ಇಟ್ಟಿದ್ದು.

ಯಾವ ವಸ್ತುವನ್ನು ಮುಟ್ಟಿ ನೋಡದೆಯೇ ಗ್ರಾಹಕರು ಸಲೀಸಾಗಿ ಖರೀದಿಸಬಹುದೋ ಅಂಥವಕ್ಕೆ ಇ-ಮಾರುಕಟ್ಟೆಯಲ್ಲಿ ಬೇಡಿಕೆ ಕುದುರಿಸುವುದು ಕಷ್ಟವೇನೂ ಆಗಲಿಲ್ಲ. ಇ-ಗ್ಯಾಡ್ಜೆಟ್‌ಗಳು ಅದರಲ್ಲೂ ವಿಶೇಷವಾಗಿ ಮೊಬೈಲ್‌ಗಳು ಇ-ಮಾರುಕಟ್ಟೆಯ ಕೇಂದ್ರ ಉತ್ಪನ್ನಗಳೆನ್ನಬಹುದು. ಫ್ಲಿಪ್‌ಕಾರ್ಟ್‌ನ ಮೂಲಕ ‘ಮೋಟೊರೋಲಾ’ ಕಂಪೆನಿ ತನ್ನ ‘ಮೋಟೊ-ಜಿ’ ಮೊಬೈಲ್ ಮಾರಾಟವನ್ನು ಪ್ರಾರಂಭಿಸಿದಾಗ, ಮೊದಲ ಕೆಲವು ಗಂಟೆಗಳಲ್ಲೇ ದೇಶದಾದ್ಯಂತ 20 ಸಾವಿರ ಸೆಟ್‌ಗಳು ಬಿಕರಿಯಾದವು. ‘ಮೋಟೊ-ಜಿ’ ಮಾರಾಟದ ಯಶಸ್ಸು ಅನೇಕ ಬ್ರಾಂಡ್‌ಗಳು ಇ-ಕಾಮರ್ಸ್ ವೇದಿಕೆಗಳ ಜೊತೆ ಒಪ್ಪಂದ ಮಾಡಿಕೊಂಡು ಮೊಬೈಲ್ ಮಾರಾಟ ಮಾಡಲು ಪ್ರೇರಣೆಯಾಯಿತಷ್ಟೆ. ಒಂದೆರಡು ವರ್ಷಗಳಲ್ಲಿಯೇ ಹೊರಗಿನ ಅಂಗಡಿ-ಮಳಿಗೆಗಳಲ್ಲಿ ಸಿಗದ ಮೊಬೈಲ್ ಸೆಟ್‌ಗಳು ಆನ್‌ಲೈನ್‌ನಲ್ಲಿ ಕೊಳ್ಳಲು ಸಿಕ್ಕವು. ಬೇಸಿಕ್ ಸೆಟ್‌ಗಳಿಂದ ಹಿಡಿದು ಆಂಡ್ರಾಯಿಡ್/ಸ್ಮಾರ್ಟ್‌ಫೋನ್‌, ಟ್ಯಾಬ್ಲೆಟ್‌, ನೋಟ್‌ಪ್ಯಾಡ್‌ಗಳ ವರೆಗೆ ಗ್ರಾಹಕರಿಗೆ ದೊಡ್ಡ ಆಯ್ಕೆ. ಕಂಪ್ಯೂಟರ್ ಮುಂದೆ ಕುಳಿತೇ ಮಾರುಕಟ್ಟೆ ಸಮೀಕ್ಷೆ ನಡೆಸಿ, ತಮ್ಮಿಷ್ಟದ ವಸ್ತುವನ್ನು ಕಡಿಮೆ ಬೆಲೆಗೆ ಕೊಳ್ಳಬಹುದಾದ ಆಯ್ಕೆ. ವ್ಯಾಪಾರ ಕುದುರದೇ ಇದ್ದೀತೆ?

ಇ-ಶಾಪಿಂಗ್ ಮೂಲಕ ನಗರ ನಾಗರಿಕರು ಕೊಳ್ಳುಬಾಕರಾಗಲು ಮುಖ್ಯ ಕಾರಣ ಸ್ಮಾರ್ಟ್‌ಫೋನ್‌ಗಳ ಸಂಖ್ಯೆಯಲ್ಲಿನ ಹೆಚ್ಚಳ. ಒಂದು ಬಡಾವಣೆಯಿಂದ ಕಚೇರಿಗೆ ಅಥವಾ ಕಚೇರಿಯಿಂದ ಅದೇ ಬಡಾವಣೆಯ ಮನೆಗೆ ವಾಪಸ್ಸಾಗುವಾಗ ಎಷ್ಟೋ ಮಂದಿ ಕೆಲವು ವರ್ಷಗಳ ಹಿಂದೆ ಮೊಬೈಲ್ ಮೂಲಕ ಸಂಗೀತ ಕೇಳುವುದನ್ನೋ, ಗೇಮ್ ಆಡುವುದನ್ನೋ ಮಾಡುತ್ತಿದ್ದರು. ಈಗ ಡೇಟಾಪ್ಯಾಕ್ ಹಾಕಿಸಿಕೊಂಡು ಎಲ್ಲಿದ್ದರೂ ಇಂಟರ್ನೆಟ್ ಪುಟಗಳನ್ನು ಜಾಲಾಡುವ ಅವಕಾಶ ಇದೆಯಲ್ಲ. ಅದರ ಕವಲೇ ಶಾಪಿಂಗ್ ಬಾಕತನ.

ಕೊಳ್ಳುಬಾಕರ ಸಂಶೋಧನೆ
ಕೆಲವೇ ವರ್ಷಗಳ ಹಿಂದೆ ಸಾವಿರಾರು ರೂಪಾಯಿ ಬೆಲೆಯ ಒಂದು ವಸ್ತು ಖರೀದಿಸುವ ಮೊದಲು ಬಹುತೇಕ ಗ್ರಾಹಕರು ಸಣ್ಣ ಮಟ್ಟದ ಮಾರುಕಟ್ಟೆ ಸಂಶೋಧನೆಯನ್ನಾದರೂ ನಡೆಸುತ್ತಿದ್ದರು. ಟೀವಿ, ಮೊಬೈಲ್, ಮ್ಯೂಸಿಕ್ ಸಿಸ್ಟಂ, ವಾಷಿಂಗ್ ಮಷೀನ್, ಮಿಕ್ಸರ್, ಎ.ಸಿ. ಇತ್ಯಾದಿ ವಸ್ತುಗಳನ್ನು ಕೊಳ್ಳುವವರಂತೂ ಎಲ್ಲಿ ಕಡಿಮೆ ಬೆಲೆಗೆ ಎಟುಕುವುದೋ ಎಂದು ತಲಾಷು ಮಾಡದೇ ಇರುತ್ತಿರಲಿಲ್ಲ. ಈಗ ಈ ಕೆಲಸವನ್ನು ಕೈಯಲ್ಲಿ ಇರುವ ಮೊಬೈಲ್ ಮೂಲಕವೇ ಸಲೀಸಾಗಿ ಮಾಡಬಹುದು.

ಎಲೆಕ್ಟ್ರಾನಿಕ್ ಉತ್ಪನ್ನಗಳ ತಾಂತ್ರಿಕ ಸೌಕರ್ಯಗಳ ತೌಲನಿಕ ಅಧ್ಯಯನವನ್ನೂ ನಡೆಸಬಹುದು. ಯಾವ್ಯಾವ ಇ-ಕಾಮರ್ಸ್ ವೇದಿಕೆಯಲ್ಲಿ ಅವು ಎಷ್ಟೆಷ್ಟು ಬೆಲೆಗೆ ಸಿಗುತ್ತಿವೆ ಎಂದೂ ಹುಡುಕಬಹುದು.

 ತಿಳಿವಳಿಕೆ, ಆಯ್ಕೆಯ ಸ್ಪಷ್ಟತೆ ಇವಿಷ್ಟಿದ್ದರೆ ಆಯಿತಲ್ಲವೇ? ಕೊಳ್ಳುಬಾಕರ ಸಂಶೋಧನೆಗೆ ದಿಡ್ಡಿ ಬಾಗಿಲು ತೆರೆದ ಅಂತರ್ಜಾಲ, ಮುಕ್ತ ‘ವಿಂಡೋ ಶಾಪಿಂಗ್’ಗೂ ತೆರೆದುಕೊಂಡಿದೆ. ನೋಡಲು ಸುಂಕವಿಲ್ಲ. ಹುಡುಕಲು ತೆರಿಗೆ ಇಲ್ಲ. ಅನುಕೂಲವಾದಾಗ ಕೊಂಡರೂ ಅಡ್ಡಿಯಿಲ್ಲ.

ಕೊಳ್ಳುಬಾಕರ ಸಂಶೋಧನೆ ಈಗ ಆನ್‌ಲೈನ್‌ನಲ್ಲಿ ವಸ್ತುವಿನ ಕೊಡು-ಕೊಳುವಿಕೆಗೇ ಸೀಮಿತಗೊಂಡಿಲ್ಲ. ಬೇಕಾದ ನಿವೇಶನ, ಅಪಾರ್ಟ್‌ಮೆಂಟ್, ಬಾಡಿಗೆ ಮನೆ, ಸೆಕೆಂಡ್ ಹ್ಯಾಂಡ್ ಕಾರು ಮಾರಾಟ-ಕೊಳ್ಳುವಿಕೆ, ಪೀಠೋಪಕರಣ ಖರೀದಿ, ಒಳಾಂಗಣ ಅಲಂಕಾರಿಕ ವಸ್ತುಗಳ ಅಗತ್ಯ ಪೂರೈಕೆ, ಔಷಧ-ವೈದ್ಯಕೀಯ ಸಾಧನಗಳ ಖರೀದಿ ಹೀಗೆ ವಹಿವಾಟಿನ ಅವಕಾಶಗಳನ್ನು ಇ-ಕಾಮರ್ಸ್ ವಿಸ್ತರಿಸಿದೆ. ನಗರ ನಾಗರಿಕರು ವ್ಯೋಮ ಜಗತ್ತಿನ ದೊಡ್ಡ ಸಂತೆಯಲ್ಲಿ ಕಳೆದುಹೋಗಲು ಇನ್ನೇನು ಬೇಕು?

ಇಂಥ ಉತ್ಪನ್ನಗಳ ಮಾತು ಹಾಗಿರಲಿ, ಸಚಿನ್ ತೆಂಡೂಲ್ಕರ್ ಆತ್ಮಕಥೆಯ ಪುಸ್ತಕ ಬಿಡುಗಡೆಯಾದಾಗ ಹೊರಗಿನ ಮಾರುಕಟ್ಟೆಗಿಂತ ಕಡಿಮೆ ಬೆಲೆಯಲ್ಲಿ ಆನ್‌ಲೈನ್ ವೇದಿಕೆಗಳು ಮಾರಿದವು. ಜಪಾನ್‌ನ ಲೇಖಕ ಹುರುಕಿ ಮುರಾಕಮಿಯ ‘1Q84’ ಕೃತಿಯ ಮೂಲಬೆಲೆ 1000 ರೂಪಾಯಿ. ಅದನ್ನು 700 ರೂಪಾಯಿಗೆ ವೆಬ್‌ಸೈಟ್ ಒಂದು ಮಾರಾಟ ಮಾಡಿದಾಗ, ದೆಹಲಿ ವಿಶ್ವವಿದ್ಯಾಲಯದ ಹಿಂಡುಗಟ್ಟಲೆ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಮುಗಿಬಿದ್ದು ಪುಸ್ತಕ ಕೊಂಡುಕೊಂಡರು.

‘ಅಸೋಚಾಮ್’ (ಅಸೋಸಿಯೇಟೆಡ್ ಚೇಂಬರ್ಸ್ ಆಫ್ ಕಾಮರ್ಸ್ ಅಂಡ್ ಇಂಡಸ್ಟ್ರಿ ಆಫ್ ಇಂಡಿಯಾ) ಸಮೀಕ್ಷೆಯ ಪ್ರಕಾರ 2015, ಅಂದರೆ ಈ ವರ್ಷದ ಅಂತ್ಯದ ಹೊತ್ತಿಗೆ ಇ-ಕಾಮರ್ಸ್‌ನ ವಹಿವಾಟು ಏನಿಲ್ಲವೆಂದರೂ 70 ಸಾವಿರ ಕೋಟಿ ರೂಪಾಯಿ ಮುಟ್ಟಲಿದೆ. 2011ರಲ್ಲಿ ಇ-ಕಾಮರ್ಸ್‌ನ ವಹಿವಾಟು 20 ಸಾವಿರ ಕೋಟಿ ರೂಪಾಯಿ ಇತ್ತೆಂದು ‘ಅಸೋಚಾಮ್’ ತಿಳಿಸಿತ್ತು.

‘ಇಂಟರ್‌ನೆಟ್‌ ಅಂಡ್‌ ಮೊಬೈಲ್‌ ಅಸೋಸಿಯೇಷನ್‌ ಆಫ್‌ ಇಂಡಿಯಾ’ (ಐಎಎಂಎಐ) ವರದಿಯ ಪ್ರಕಾರ 2009ರಲ್ಲಿ ಶೇ 25ರಷ್ಟು ಅಂತರ್ಜಾಲ ಗ್ರಾಹಕರು ನಗರಿಗರು. ಅವರಲ್ಲಿ ಶೇ 32ರಷ್ಟು ಕಂಪ್ಯೂಟರ್ ಅಕ್ಷರಸ್ಥರು. ಆ ಅಕ್ಷರಸ್ಥರಲ್ಲಿ ಶೇ 72ರಷ್ಟು ಮಂದಿ ಚುರುಕು ಬಳಕೆದಾರರು. ಇ-ಕಾಮರ್ಸ್‌ನಲ್ಲಿ ವಿಶ್ವದಲ್ಲೇ ಐದನೇ ಸ್ಥಾನದಲ್ಲಿ ನಮ್ಮ ದೇಶವಿದೆ. ಏಷ್ಯಾದಲ್ಲಿ ಎರಡನೇ ಸ್ಥಾನ. 10 ಕೋಟಿಗೂ ಹೆಚ್ಚು ಅಂತರ್ಜಾಲ ಬಳಕೆದಾರರಲ್ಲಿ ಅರ್ಧದಷ್ಟು ಜನ ಏನಾದರೂ ವಸ್ತುವನ್ನು ಕೊಳ್ಳಲು ಅಂತರ್ಜಾಲದ ಮೊರೆಹೋಗುತ್ತಿದ್ದಾರೆ. ಕೊಳ್ಳದೇ ಹೋದರೂ ಕನಿಷ್ಠ ಹುಡುಕಾಟಕ್ಕಾದರೂ ಅದನ್ನು ನೋಡುತ್ತಿದ್ದಾರೆ.

ಈಗಲೂ ಪೂರ್ಣ ನಂಬಿಕೆ ಇಲ್ಲ
ಅಂತರ್ಜಾಲ ಅಕ್ಷರಸ್ಥರ ಸಂಖ್ಯೆ ಗಣನೀಯವಾಗಿ ಏರುತ್ತಾ ಇದ್ದರೂ ಭಾರತೀಯ ಕೊಳ್ಳುಬಾಕನ ಮೂಲ ಮನಸ್ಥಿತಿಯಲ್ಲಿ ಅಷ್ಟೇನೂ ವ್ಯತ್ಯಾಸವಾಗಿಲ್ಲ ಎಂದು ಇನ್ನೊಂದು ಸಮೀಕ್ಷೆ ಹೇಳುತ್ತದೆ.

 ಐಎಎಂಎಐ ಹಾಗೂ ಕೆಪಿಎಂಜಿ ಆಡಿಟ್ ಸಂಸ್ಥೆಯ ಪ್ರಕಾರ ಶೇ 60ರಷ್ಟು ಆನ್‌ಲೈನ್ ಗ್ರಾಹಕರು ಈಗಲೂ ವಸ್ತು ತಲುಪಿದ ಮೇಲೆಯೇ ಹಣ ಸಂದಾಯ ಮಾಡುತ್ತಿದ್ದಾರೆ. ಅಂದರೆ, ಇ-ಕಾಮರ್ಸ್‌ನ ವೆಬ್‌ಸೈಟ್ ಒಂದು ವಸ್ತುವನ್ನು ಕೊಟ್ಟಮೇಲೆ ಕಾರ್ಡ್ ಮೂಲಕವೋ, ನಗದು ರೂಪದಲ್ಲಿಯೋ ಹಣ ಪಾವತಿ ಮಾಡುತ್ತಿದ್ದಾರೆ. ತಮ್ಮ ಕಾರ್ಡ್‌ನ ಸೂಕ್ಷ್ಮ ವಿವರಗಳನ್ನು ವೆಬ್‌ಸೈಟ್‌ಗಳಲ್ಲಿ ಹಂಚಿಕೊಳ್ಳಲು ಅನೇಕ ಗ್ರಾಹಕರು ಈಗಲೂ ಇಷ್ಟಪಡುತ್ತಿಲ್ಲ. ಸುರಕ್ಷೆಯ ಖಾತರಿ ಈ ವ್ಯೋಮ ಜಗತ್ತಿನಲ್ಲಿ ಗ್ರಾಹಕರಿಗೆ ಇನ್ನೂ ಸಿಗಬೇಕೋ ಏನೋ?

ಕವಲುಗಳು
ಇ-ಕಾಮರ್ಸ್ ಈಗ ಒಂದಿಷ್ಟು ಮೆಟ್ಟಿಲುಗಳಷ್ಟು ಮೇಲೇರಿದೆ. ಕಾರಿನ ರಿಪೇರಿ ಮಾಡುವವರಿಂದ ಹಿಡಿದು, ಮನೆಯ ಸಂಪು, ಟ್ಯಾಂಕ್ ಶುಚಿಗೊಳಿಸುವವರೆಗೆ ಹಲವು ಸೇವೆಗಳಿಗೆ ಅದು ವೇದಿಕೆ. ಟ್ಯಾಕ್ಸಿ ಹಿಡಿಯುವ, ಆಟೊ ಕರೆಯುವ ಉಸಾಬರಿಯನ್ನೂ ಅದು ದೂರಮಾಡಿದೆ. ಸಿನಿಮಾ ಟಿಕೆಟ್ ಕೊಳ್ಳಲು ಸರತಿ ಸಾಲಿನ ಹಂಗಿಲ್ಲದಂತೆ ಮಾಡಿದ ಅಗ್ಗಳಿಕೆಯೂ ಅದರದ್ದು. ಈಗ ವಿಶೇಷ ಸರಣಿಯ ವಸ್ತುಗಳನ್ನು ಮಾರಾಟ ಮಾಡುವ ವೆಬ್‌ಸೈಟ್‌ಗಳು ಹೊಸ ಕವಲುಗಳ ರೂಪದಲ್ಲಿ ಟಿಸಿಲೊಡೆದಿವೆ.

ದಿನಸಿ ಪದಾರ್ಥಗಳನ್ನು ಮಾರಾಟ ಮಾಡುವ LocalBanya.com, Aaramshop, AtMyDoorstep.com, MyGrahak.com, RationHut.com, Atadaal.com om ಮೊದಲಾದವು ದೇಶದ ಕೆಲವು ಪ್ರಮುಖ ನಗರಗಳಲ್ಲಿ ಗಮನಾರ್ಹ ವಹಿವಾಟು ನಡೆಸಿವೆ.

Babyoye.com ಎಂಬ ವೆಬ್‌ಸೈಟ್ ಮಕ್ಕಳ ಬಟ್ಟೆ, ಗೊಂಬೆ, ಡಯಪರ್ ಇತ್ಯಾದಿಯನ್ನು ಮಾರುತ್ತಿದೆ. LensKart.com ಸನ್‌ಗ್ಲಾಸ್‌ಗಳು, ಕಾಂಟಾಕ್ಟ್ ಲೆನ್ಸ್‌ಗಳು ಮೊದಲಾದವನ್ನು ಗ್ರಾಹಕರಿಗೆ ಪೂರೈಸುತ್ತಿದೆ. ಸುರಾಪಾನ ಪ್ರಿಯರಿಗೆ ಬೇಕಾದ ಮದ್ಯಪಾನವನ್ನು Makemydrink.com om ಒದಗಿಸುತ್ತಿದೆ.

ಇಂಥ ಕವಲುಗಳಿಂದಾಗಿಯೇ 2012ರಲ್ಲಿ ಇದ್ದ ಇ-ಕಾಮರ್ಸ್‌ನ ಮಹಿಳಾ ಗ್ರಾಹಕರ ಸಂಖ್ಯೆ 2013ರ ಹೊತ್ತಿಗೆ ನಾಲ್ಕು ಪಟ್ಟು ಹೆಚ್ಚಾದದ್ದು. ಇಷ್ಟಾಗಿಯೂ ಕೆಲವು ವಸ್ತುಗಳನ್ನು ಆನ್‌ಲೈನ್ ಮೂಲಕ ಖರೀದಿಸಲು ಗ್ರಾಹಕರು ಹಿಂದೇಟು ಹಾಕುತ್ತಿದ್ದಾರೆ. ಬಟ್ಟೆಗಳು, ಬೂಟು-ಚಪ್ಪಲಿಗಳನ್ನು ಕೊಳ್ಳಲು ಹಿಂಜರಿಕೆ. ನೋಡಲು ಒಂದು ಬಣ್ಣ ಕಂಡು, ವಿಲೇವಾರಿಯಾದಾಗ ಇನ್ನೊಂದು ಸಿಕ್ಕರೆ ಎಂಬ ಆತಂಕ. ಅದನ್ನು ದೂರಮಾಡುವ ಖಾತರಿಯನ್ನು ಇ-ಕಾಮರ್ಸ್ ವೆಬ್‌ಸೈಟ್‌ಗಳು ನೀಡಿದರೂ, ದೊಡ್ಡ ಮಟ್ಟದಲ್ಲಿ ಗ್ರಾಹಕರ ಮನಸ್ಸು ಕರಗಿಲ್ಲ.

ಚಪ್ಪಲಿ, ಬೂಟುಗಳ ಅಳತೆ ಹೊಂದದಿದ್ದರೆ ಏನು ಗತಿ ಎನ್ನುವುದು ಇನ್ನೊಂದು ಅನುಮಾನ. ಮುಂದೆ ಈ ಅನುಮಾನಗಳೆಲ್ಲಾ ಬಗೆಹರಿದು ಇ-ಕೊಳ್ಳುಬಾಕರ ಸಂಖ್ಯೆ ವ್ಯಾಪಕವಾಗುವುದರಲ್ಲಿ ಅನುಮಾನವೇ ಇಲ್ಲ. ಈಗೀಗ ಚೌಕಾಸಿ ಮಾಡಲು ಆ್ಯಪ್‌ಗಳು ಸಹ ಹುಟ್ಟಿಕೊಂಡಿವೆಯಲ್ಲ. ಹಳೆಯ ವಸ್ತುಗಳನ್ನು ಮಾರಿಬಿಡಿ ಎಂದು ಪುಸಲಾಯಿಸುತ್ತಿರುವ ವೆಬ್‌ಸೈಟ್‌ಗಳ ಸಂಖ್ಯೆಯೂ ಏರುತ್ತಿದೆ.

ಕುಂತಲ್ಲೇ ಕುಲದೇವತೆಗೆ ಇ-ಮೇಲ್ ಅರ್ಚನೆ ಸಲ್ಲಿಸುವ ನೆಟ್ಟಿಗರಿಗೆ ಪುಟ್ಟ ಕಂಪ್ಯೂಟರ್‌ನಲ್ಲೇ ಸಂತೆ ತೆರೆದುಕೊಂಡರೆ ಪುಳಕವಾಗದೇ ಇದ್ದೀತೆ? ಕಾಣುವ, ಕಾಣಬಹುದಾದ, ಇನ್ನೂ ಕಾಣಿಸದ ಎಷ್ಟೋ ಸಾಧ್ಯತೆಗಳಿಂದಾಗಿಯೇ ವ್ಯೋಮ ಜಗತ್ತು ಗಮನ ಸೆಳೆಯುತ್ತಿರುವುದು. ಗ್ರಾಹಕರೇ, ಖರೀದಿಸಿದ ವಸ್ತುವಿನ ಚೆಂದ, ಹುಳುಕಿನ ಕುರಿತು ವಿಮರ್ಶೆ ಮಾಡುವ ಅವಕಾಶವೂ ವೆಬ್ ಪುಟಗಳಲ್ಲಿವೆ. ಅದನ್ನು ಓದಿಕೊಂಡು ಇನ್ನಷ್ಟು ಕೊಳ್ಳುಬಾಕರು ಆನ್‌ಲೈನ್ ಜಗಲಿ ಹತ್ತುವ ನಿರೀಕ್ಷೆಯಿದೆ.

****
ಬೆಂಗಳೂರಿನ ಡಿ.ಎ. ರೂಪಾ ಶಿಕ್ಷಕಿ ಹಾಗೂ ಹವ್ಯಾಸಿ ಬರಹಗಾರ್ತಿ. ಸಾಹಿತ್ಯ, ಸಿನಿಮಾದಲ್ಲಿ ಅವರಿಗೆ ವಿಶೇಷ ಆಸಕ್ತಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT