ADVERTISEMENT

ಗಾಂಧಿ ಶಿಕ್ಷಣ

ಮಿನುಗು ಮಿಂಚು

​ಪ್ರಜಾವಾಣಿ ವಾರ್ತೆ
Published 22 ಅಕ್ಟೋಬರ್ 2016, 19:30 IST
Last Updated 22 ಅಕ್ಟೋಬರ್ 2016, 19:30 IST
ಗಾಂಧಿ ಶಿಕ್ಷಣ
ಗಾಂಧಿ ಶಿಕ್ಷಣ   

ಶಿಕ್ಷಣ ಎಂದರೆ ಮಗುವನ್ನು ಮನುಷ್ಯನನ್ನಾಗಿಸುವ ಸರ್ವತ್ರ ಸಾಧನ. ದೇಹ, ಮಿದುಳು ಹಾಗೂ ಚೈತನ್ಯ ಎಲ್ಲವನ್ನೂ ರೂಪಿಸುವುದೇ ಶಿಕ್ಷಣ ಎಂದು ಮಹಾತ್ಮ ಗಾಂಧಿ ಪ್ರತಿಪಾದಿಸಿದ್ದರು.

ದಕ್ಷಿಣ ಆಫ್ರಿಕಾದಲ್ಲಿ ಇದ್ದಾಗ ಗಾಂಧೀಜಿ ಫೀನಿಕ್ಸ್‌ನಲ್ಲಿದ್ದ ತಮ್ಮ ಆಶ್ರಮದಲ್ಲೇ ಒಂದು ಶಾಲೆಯನ್ನು ಪ್ರಾರಂಭಿಸಿದರು. ಮಕ್ಕಳಲ್ಲಿ ಅರಿವು ಮೂಡಿಸುವುದಷ್ಟೇ ಅಲ್ಲದೆ ಅವರನ್ನು ಸಜ್ಜನರನ್ನಾಗಿ ರೂಪಿಸುವುದು ಅವರ ಶಾಲೆಯ ಉದ್ದೇಶವಾಗಿತ್ತು. ಪರೀಕ್ಷೆಗಳ ಮೂಲಕ ಮಕ್ಕಳ ನೆನಪಿನ ಶಕ್ತಿಯನ್ನು ಅಳೆಯುವುದು ಅವರಿಗೆ ಬೇಕಿರಲಿಲ್ಲ. ಎಲ್ಲರಿಗೂ ಒಂದೇ ಪ್ರಶ್ನೆಯನ್ನು ನೀಡಿ, ಅದಕ್ಕೆ ಯಾವ ರೀತಿಯ ಉತ್ತರ ಕೊಡುತ್ತಾರೆ ಎಂದು ಕುತೂಹಲದಿಂದ ಓದುತ್ತಿದ್ದರು.

ಹೆಚ್ಚು ಅಂಕ ಗಳಿಸಿದ ಮಕ್ಕಳು ಸಂತುಷ್ಟರಾಗಿ, ಇನ್ನಷ್ಟು ಕಲಿಯುವುದರಿಂದ ವಿಮುಖರಾದರೆ ಗಾಂಧೀಜಿ ಅಂಥವರತ್ತ ಗಮನಹರಿಸುತ್ತಿದ್ದರು. ಕಡಿಮೆ ಅಂಕ ಗಳಿಸಿಯೂ ತಪ್ಪು ತಿದ್ದಿಕೊಳ್ಳಲು ಕಷ್ಟಪಡುತ್ತಿದ್ದ ಮಕ್ಕಳನ್ನು ಹುರಿದುಂಬಿಸುತ್ತಿದ್ದರು.

ಗಾಂಧೀಜಿ ಅಂಗಿ ಹಾಕುತ್ತಿರಲಿಲ್ಲ. ಅದನ್ನು ಕಂಡು ಒಬ್ಬ ವಿದ್ಯಾರ್ಥಿ – ‘ಬಾಪು, ನೀವು ಯಾಕೆ ಕುರ್ತಾ ಹಾಕಿಲ್ಲ’ ಎಂದು ಪ್ರಶ್ನಿಸಿದ. ಅದಕ್ಕೆ ಗಾಂಧಿ, ‘ನನ್ನಿಂದ ಕೊಳ್ಳಲಾಗದು’ ಎಂದು ಉತ್ತರಿಸಿದರು. ಆ ಬಾಲಕ, ‘ನನ್ನ ಅಮ್ಮನಿಗೆ ಹೇಳುವೆ. ಅವಳು ಹೊಲೆದುಕೊಡುತ್ತಾಳೆ’ ಎಂದ. ‘ನನಗೆ ಒಂದೇ ಕುರ್ತಾ ಸಾಕಾಗುವುದಿಲ್ಲವಲ್ಲ’ ಎಂದರು ಗಾಂಧಿ. ಅದಕ್ಕೆ ಆ ಹುಡುಗ, ‘ಎಷ್ಟು ಕುರ್ತಾ ಬೇಕೋ ಹೇಳಿ. ಅಷ್ಟನ್ನೂ ಹೊಲೆದುಕೊಡುತ್ತಾಳೆ.

ನಾನು ಕೇಳಿದರೆ ಅಮ್ಮ ಇಲ್ಲ ಎನ್ನಳು’ ಎಂದು ವಿಶ್ವಾಸದಿಂದ ನುಡಿದ ಬಾಲಕ. ಅದಕ್ಕೆ ಗಾಂಧಿ ನಗುತ್ತಾ, ‘ಮಗೂ ನನ್ನ ಸಹೋದರ–ಸಹೋದರಿಯರು ದೇಶದಲ್ಲಿ 40 ಕೋಟಿ ಇದ್ದಾರೆ. ಅವರೆಲ್ಲರಿಗೂ ಬಟ್ಟೆ ಇಲ್ಲ. ಅವರೆಲ್ಲರೂ ಅಂಗಿ ಹಾಕದ ಸ್ಥಿತಿಯಲ್ಲಿ ನಾನೊಬ್ಬ ಹೇಗೆ ಹಾಕಲಿ. ಅವರೆಲ್ಲರಿಗೂ ಬಟ್ಟೆ ಹೊಂದಿಸಿಕೊಳ್ಳುವ ಶಕ್ತಿ ಸಿಕ್ಕ ಮೇಲೆ ನೋಡೋಣ’ ಎಂದರು. ಬಾಲಕನಿಗೆ ಅವರ ತತ್ತ್ವ ಅರ್ಥವಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.