ADVERTISEMENT

ಗಾಢವಾಗಿ ಕಾಡುವ ವಯನಾಡು

ಎಸ್.ರವಿಪ್ರಕಾಶ್
Published 19 ಆಗಸ್ಟ್ 2017, 19:30 IST
Last Updated 19 ಆಗಸ್ಟ್ 2017, 19:30 IST
ಗಾಢವಾಗಿ ಕಾಡುವ ವಯನಾಡು
ಗಾಢವಾಗಿ ಕಾಡುವ ವಯನಾಡು   

ಅದು ನಿಸರ್ಗದ ಮೌನ, ರೌದ್ರ ಮತ್ತು ರಮಣೀಯತೆ ಚೈತನ್ಯದಲ್ಲಿ ತಾದ್ಯಾತ್ಮ ಹೊಂದುವ ಕ್ಷಣ. ಮೇಘರಾಶಿ ಹೊತ್ತು ತರುವ ತುಂತುರು ಹನಿಗಳಿಂದ ತೋಯ್ದು ನಿಂತ  ಭುವಿ ಆ ಹೊತ್ತಿನಲ್ಲಿ ಅನುರಾಗದ ಭಾವ ಹೊಮ್ಮಿಸುತ್ತದೆ. ಪ್ರಕೃತಿಯಲ್ಲಿ ಧ್ಯಾನಾಸಕ್ತರಾಗುವಂತೆ ಮಾಡುತ್ತದೆ.  ಪಶ್ಚಿಮಘಟ್ಟದ ಶಕ್ತಿಯೇ ಅಂಥದ್ದು. ವಯನಾಡೂ ಅದಕ್ಕೆ ಹೊರತಲ್ಲ. ಕೇರಳದ ಪ್ರಖ್ಯಾತ ಗಿರಿಧಾಮ ವಯನಾಡು. ಪ್ರತಿಯೊಬ್ಬರಿಗೂ ಅವರವರ ಗ್ರಹಿಕೆ, ಮನೋಸ್ಥಿತಿಗೆ ಅನುಗುಣವಾಗಿ ಅನನ್ಯ ಅನುಭೂತಿ ನೀಡುತ್ತದೆ. ಪ್ರೇಮಿಗಳು, ನವದಂಪತಿ, ಸಾಹಸಿಗರು, ವಿದ್ಯಾರ್ಥಿಗಳು, ನಿಸರ್ಗೋಪಾಸಕರು ಹೀಗೆ ಅವರಿಗೆ ದಕ್ಕಿದ ಅನುಭವವನ್ನು ಮೊಗೆದುಕೊಂಡು ಹೋಗಬಹುದು.

ಸುಂದರ ಪಶ್ಚಿಮ ಘಟ್ಟವನ್ನು ಕಡಿದು, ಕಾಡುಗಳನ್ನು ಸವರಿಹಾಕಿ ನಂದನವನವಾಗಿಸಿದ ‘ಕೀರ್ತಿ’ ಕೇರಳಿಗರಿಗೆ ಸಲ್ಲುತ್ತದೆ. ಇಲ್ಲಿ ಬಹುತೇಕ ಬೆಟ್ಟ– ಗುಡ್ಡಗಳು ಚಹ, ಕಾಫಿ, ರಬ್ಬರ್‌ ತೋಟಗಳಾಗಿ, ಶುಂಠಿಯ ಹೊಲಗಳಾಗಿ ರೂಪಾಂತರಗೊಂಡಿವೆ. ಕಾಡು ಮತ್ತು ತೋಟಗಳನ್ನು ಸೀಳಿಕೊಂಡು ಹೋಗುವ ರಸ್ತೆಗಳು, ಇಕ್ಕೆಲಗಳಲ್ಲಿ ಪಟ್ಟಣಗಳು, ದಟ್ಟಡವಿಯ ಮಧ್ಯೆ ಎದ್ದು ನಿಂತ ರೆಸಾರ್ಟ್‌ಗಳು, ಪಂಚತಾರಾ ಹೊಟೇಲುಗಳು. ರಸ್ತೆ ಬದಿಗಳಲ್ಲಿ ವೈಭವೋಪೇತ ಚರ್ಚುಗಳು, ಮಸೀದಿಗಳ ಸಾಲು. ಕುದಿಯುವ ತೆಂಗಿನೆಣ್ಣೆಯಲ್ಲಿ ಮುಳುಗಿಸಿ ತೆಗೆದ ನೇಂದ್ರ ಬಾಳೆಕಾಯಿಯ ಚಿಪ್ಸ್‌ನ ಘಮ. ಪ್ರವಾಸೋದ್ಯಮವೇ ಇಲ್ಲಿನ ಬದುಕು, ಅದುವೇ ಇಲ್ಲಿನವರ ಪಾಲಿಗೆ ‘ಸೌಭಾಗ್ಯ ಲಕ್ಷ್ಮಿ’!

ಮಳೆಗಾಲದಲ್ಲಿ ಪಶ್ಚಿಮಘಟ್ಟದ ಪ್ರದೇಶಗಳಿಗೆ ಹೋಗುವವರು ಕಮ್ಮಿ. ದಿನದ ಇಪ್ಪತ್ನಾಲ್ಕು ಗಂಟೆ ಧೋ ಎಂದು ಸುರಿಯುವ ಮಳೆ (ಈಗ ಅಂತಹ ಸ್ಥಿತಿ ಇಲ್ಲ ಎಂಬ ಮಾತು ಬೇರೆ), ಥಂಡಿಗೆ ಮಲೆನಾಡಿಗರೇ ಮನೆ ಬಿಟ್ಟು ಹೊರ ಬರುವುದು ಕಮ್ಮಿ. ಆದರೆ, ಬಯಲು ನಾಡಿನವರು ಈ ವಾತಾವರಣಕ್ಕೆ ಗಾಬರಿ ಬೀಳುತ್ತಾರೆ. ಮಳೆಗಾಲದಲ್ಲಿ ಮಲೆನಾಡಿಗರಿಗೆ ಮನೆಯಲ್ಲಿ ಕುಳಿತರೂ ಅದೊಂದು ಬಗೆಯ ಬೆಚ್ಚನೆಯ ಅನುಭವ ನೀಡುತ್ತದೆ. ಮಧುರ ನೆನಪುಗಳ ಮೂಟೆಯೇ ಸ್ಮೃತಿ ಪಟಲದಲ್ಲಿ ಅನಾವರಣಗೊಳ್ಳುತ್ತದೆ. ಹಲಸಿನ ಹಣ್ಣು, ಅದರಿಂದ ಮಾಡಿದ ನಾನಾ ಬಗೆಯ ಖಾದ್ಯಗಳು. ಕಾಫಿ, ಕಷಾಯ, ಕಳಲೆ, ಬಗೆ ಬಗೆ ಸೊಪ್ಪುಗಳು, ಆಣಬೆಗಳು. ಮಳೆಯಿಂದ ಗದ್ದೆಗಳು, ತೋಡುಗಳಲ್ಲಿ ಹರಿದು ಬರುವ ಪ್ರವಾಹದ ನೀರಿನಲ್ಲಿ ಮೀನು ಹಿಡಿಯಲು ಕಾದು ಕೂರುವ ಜನ... ಬಚ್ಚಲು ಮನೆಯ ಹಂಡೆಯಲ್ಲಿ ಕುದಿಯುವ ನೀರು, ಒಲೆಯಿಂದ ಆಗಸದತ್ತ ದೌಡಾಯಿಸುವ ಹೊಗೆ.

ADVERTISEMENT

ವಯನಾಡೂ ಅದಕ್ಕೆ ಹೊರತಲ್ಲ. ಮಳೆಗಾಲವನ್ನು, ಅದರ ವೈಭವವನ್ನು ಎನ್‌ಕ್ಯಾಷ್‌ ಮಾಡಿಕೊಳ್ಳುವ ಜಾಣತನ ಕೇರಳಿಗರದು. ಮಳೆಗಾಲದಲ್ಲಿ ಧುಮ್ಮಿಕ್ಕುವ ಜಲಪಾತಗಳು, ಭೋರ್ಗರೆಯುತ್ತ ಹರಿಯುವ ನದಿಗಳು, ಪಿಸುಗುಡುವ ಕಾಡು, ಮೌನ ಮುರಿದ ಸರೋವರಗಳು. ಇವುಗಳನ್ನು ಕಣ್ತುಂಬಿಕೊಳ್ಳುವುದೇ ಒಂದು ಆನಂದ. ದೇಶ– ವಿದೇಶಗಳ ಪ್ರವಾಸಿಗರು ಇದರ ಅನುಭವ ಉಣ ಬಡಿಸಲೆಂದೇ ಕೇರಳ ಪ್ರವಾಸೋದ್ಯಮ ಇಲಾಖೆ ಮತ್ತು ಅಲ್ಲಿನ ರೆಸಾರ್ಟ್‌ಗಳ ಮಾಲೀಕರು ಒಗ್ಗೂಡಿ ಎರಡು ವರ್ಷಗಳಿಗೊಮ್ಮೆ ವಿಶಿಷ್ಟ ಉತ್ಸವವನ್ನೇ ಆಯೋಜಿಸುತ್ತಾರೆ. ಅದಕ್ಕೆ ‘ಸ್ಪ್ಲಾಷ್‌’ ಎಂಬ ಹೆಸರು. ದೇಶದ ವಿವಿಧ ಭಾಗಗಳಿಂದ ಪ್ರವಾಸೋದ್ಯಮದಲ್ಲಿ ತೊಡಗಿಸಿಕೊಂಡ ಏಜೆನ್ಸಿಗಳು, ಮಾಧ್ಯಮಗಳಿಗೆ ವಯನಾಡಿನ ವೈಭವವನ್ನು ‘ಸ್ಪ್ಲಾಷ್‌’ ಅನಾವರಣಗೊಳಿಸುತ್ತದೆ. ಕಲೆ, ಸಂಸ್ಕೃತಿ, ಆಹಾರ ಮತ್ತು ವಿಹಾರ ಸ್ಪ್ಲಾಷ್‌ನ ಒಂದು ಭಾಗ.

ಮಡ್‌ ಫುಟ್ಬಾಲ್‌ ಮತ್ತು ಮಡ್‌ ವಾಲಿಬಾಲ್ ಸ್ಪ್ಲಾಷ್‌ನ ಆಕರ್ಷಣೆ. ಇವೆರಡೂ ಆಕರ್ಷಕ ಕ್ರೀಡೆ. ಕೆಸರು ತುಂಬಿದ ಗದ್ದೆಯಲ್ಲಿ ಆಡುವ ಆಟ ನೋಡುಗರಿಗೆ ಮುದ ನೀಡುವಂತಹದ್ದು. ಮಳೆಯಲ್ಲಿ ಝಿಪ್‌ ರೈಡ್‌, ಬ್ಯಾಂಬೂ ರಾಫ್ಟಿಂಗ್‌, ಸೈಕ್ಲಿಂಗ್‌ ಒಂದು ಬಗೆಯ ಥ್ರಿಲ್ ನೀಡುತ್ತವೆ. ಮಳೆ ಮತ್ತು ಥಂಡಿ ಹವೆಯ ಮಧ್ಯೆ ಬಿಸಿ ಬಿಸಿ ಪುಟ್ಟು, ಶ್ಯಾವಿಗೆ, ಅಪ್ಪಂ, ಅವಿಯಲ್‌, ಫಿಷ್‌ ಕರಿ, ಎಗ್‌ ಕರಿ ನಾಲಗೆ ರುಚಿಯನ್ನು ತಣಿಸದೇ ಇರದು.

ರೋಮಾಂಚನಗೊಳಿಸುವ ಕೆಲವು ಪ್ರವಾಸಿ ತಾಣಗಳಿಗೆ ಹೊಂದಿಕೊಂಡಂತೆ ಇರುವ ರೆಸಾರ್ಟ್‌ಗಳು ನಿಜಕ್ಕೂ ವಿಸ್ಮಯ ಮೂಡಿಸುತ್ತವೆ. ಆ ಪೈಕಿ ವೈತರಿ ರೆಸಾರ್ಟ್‌ ಕೂಡಾ ಒಂದು. ವೈತರಿ ವಿಲೇಜ್‌ ಮತ್ತು ವಿಸ್ತಾರ್ ರೆಸಾರ್ಟ್‌ಗಳು ನಿಸರ್ಗದ ವೈವಿಧ್ಯ ಅನುಭವಗಳನ್ನು ನೀಡುತ್ತವೆ.    ವೈತರಿ ರೆಸಾರ್ಟ್‌ ಅತ್ಯಂತ ದಟ್ಟ ಅಡವಿಯಲ್ಲಿರುವ ರೆಸಾರ್ಟ್‌. ಕಬಿನಿಗೆ ಸೇರುವ ದೊಡ್ಡ ತೊರೆಗೆ ಹೊಂದಿಕೊಂಡಿದೆ. ದಟ್ಟ ಅಡವಿಯ ವಿಚಿತ್ರ ಮೌನವನ್ನು ಕಲಕುವ ಕೀಟಗಳು, ಪಕ್ಷಿಗಳ ಗಾನ. ತೊರೆಯ ಭೋರ್ಗರೆಯುವ ಸದ್ದು. ಹೀಗೆ ಪಂಚತಾರಾ ರೆಸಾರ್ಟಿನಲ್ಲೂ ಕಾನನದ ದಿವ್ಯ ಅನುಭೂತಿ ನೀಡುತ್ತದೆ. ಮಲಬಾರ್‌ ಗ್ರೇಟ್‌ ಹಾರ್ನ್‌ಬಿಲ್‌, ಮಲಬಾರ್‌ ಅಳಿಲು, ಭಯ ಹುಟ್ಟಿಸುವ ಉರಗಗಳನ್ನೂ ಕಾಣಬಹುದು.

ವೈತರಿ ರೆಸಾರ್ಟ್‌ನಲ್ಲಿ ಹಲವು ಬಗೆಯ ಕಾಟೇಜ್‌ಗಳು ಇವೆ. ಆದರೆ, ಇಲ್ಲಿನ ಹನಿಮೂನ್‌ ಕಾಟೇಜ್‌ ವಿಶಿಷ್ಟವಾದುದು. ಈ ಕಾಟೇಜ್‌ ಒಳಗಿನ ನೆಲ ಸಂಪೂರ್ಣ ಗಾಜಿನದೇ ಆಗಿದೆ. ಇದರ ಕೆಳ ಅಂತಸ್ತಿನಲ್ಲಿ ಈಜುವ ಕೊಳ. ಮೇಲಿನಿಂದಲೇ ತಿಳಿ ನೀಲಿ ಬಣ್ಣದ ಕೊಳವನ್ನು ಕಾಣಬಹುದು. ಮಧುಚಂದ್ರಕ್ಕೆ ಹೋಗುವವರಿಗೆ ಹೇಳಿ ಮಾಡಿಸಿದಂತಿದೆ. ಕಾಟೇಜ್‌ಗಳ ಹೊರ ವಾಸ್ತು ವಿನ್ಯಾಸ ಸಂಪೂರ್ಣ ಕೇರಳ ಶೈಲಿಯದೇ. ಇಲ್ಲಿಂದ ಸ್ವಲ್ಪ ದೂರದಲ್ಲಿ 70 ಅಡಿ ಎತ್ತರದ ಮರದ ಮೇಲೆ ಕಾಟೇಜ್‌ ಇದೆ. ಇದನ್ನೇ ಟ್ರೀ ಕಾಟೇಜ್‌ ಎಂದು ಕರೆಯಲಾಗುತ್ತದೆ. ಇಲ್ಲಿ ರಾತ್ರಿ ಕಳೆಯಲು ಗುಂಡಿಗೆ ಗಟ್ಟಿ ಇರಬೇಕು. ಈ ಕಾಟೇಜ್‌ನ ವರಾಂಡದಲ್ಲಿ ಪುಟ್ಟ ಕುರ್ಚಿ ಇಟ್ಟಕೊಂಡು ಕುಳಿತರೆ ಹೆದ್ದೆರೆಗಳಂತೆ ಕಾಣುವ ಹಸಿರು ಪರ್ವತಗಳ ಸಾಲುಗಳನ್ನು ಕಾಣಬಹುದು.

ವಯನಾಡಿಗೆ ಹೋದವರು ಸೂಚಿಪರ ಜಲಪಾತ, ಎಡಕಲ್ಲು ಗುಡ್ಡಕ್ಕೆ ಹೋಗದೇ ಇದ್ದರೆ ಪ್ರವಾಸವೇ ಆಪೂರ್ಣ. ಅಂಬುಕುಟ್ಟಿಮಲೆ ಶ್ರೇಣಿಯಲ್ಲಿ ಎಡಕಲ್ಲು ಗುಡ್ಡ ಇರುವುದು. ಆದಿ ಮಾನವನ ಕಾಲದ ಗುಹೆಗಳು ಇಲ್ಲಿನ ವಿಶೇಷ. ಬಂಡೆಗಳ ಮೇಲೆ ಶಿಲಾಯುಗದ ಮಾನವರು ಕೆತ್ತಿದ ಚಿತ್ರಗಳಿವೆ. ಸಮುದ್ರದಿಂದ ಸುಮಾರು 1,200 ಮೀಟರ್‌ ಎತ್ತರದಲ್ಲಿರುವ ಗುಹೆ ಏರಬೇಕಾದರೆ ಬೆವರು ಹರಿಸಬೇಕಾಗುತ್ತದೆ. ಕನ್ನಡಿಗರಿಗೆ ಭಾರತೀಸುತ ಬರೆದ ‘ಎಡಕಲ್ಲು ಗುಡ್ಡದ ಮೇಲೆ’ ಕಾದಂಬರಿ ಮತ್ತು ಅದನ್ನು ಆಧರಿಸಿ ಪುಟ್ಟಣ್ಣ ಕಣಗಾಲ್‌ ನಿರ್ಮಿಸಿದ ಚಲನಚಿತ್ರ ನೆನಪಿಗೆ ಬಂದರೆ ಅಚ್ಚರಿ ಇಲ್ಲ. ‘ವಿರಹ ನೂರು ನೂರು ತರಹ... ’ ಎಂಬ ಚಿತ್ರಗೀತೆ ಕಾಡುತ್ತದೆ. ಕೊಡಗು ಜಿಲ್ಲೆಗೆ ಹೊಂದಿಕೊಂಡ ಪರ್ವತ ಶ್ರೇಣಿ ಇದು.

ಈ ಜೂನ್– ಜುಲೈನಲ್ಲಿ ವಯನಾಡಿನಲ್ಲಿ ಭರ್ಜರಿ ಮಳೆ ಏನೂ ಇರಲಿಲ್ಲ. ಇಲ್ಲಿ ಉತ್ತಮ ಮಳೆಯಾದಷ್ಟೂ ಕಬಿನಿ ನದಿ ತುಂಬಿ ಕರ್ನಾಟಕಕ್ಕೆ ಹರಿಯುತ್ತದೆ. ನಾವು ಅಲ್ಲಿಗೆ ಹೋದ ಸಂದರ್ಭದಲ್ಲಿ ಮೋಡಗಳ ಸಾಲು ಹಾದು ಹೋಗುವಾಗ ಒಂದಷ್ಟು ಹನಿಗಳನ್ನು ಸುರಿಸಿ ಮುಂದಕ್ಕೆ ಸಾಗುತ್ತಿದ್ದವು. ಉಳಿದಂತೆ ಬಿರು ಬಿಸಿಲು. ಹಿಂದೆಲ್ಲ ಆಗುತ್ತಿದ್ದಂತೆ ಆಗಸ– ಭೂಮಿ ಒಂದು ಮಾಡುವ ಜಡಿ ಮಳೆ ಇತ್ತೀಚಿನ ವರ್ಷಗಳಲ್ಲಿ ಆಗುತ್ತಲೇ ಇಲ್ಲ ಎನ್ನುತ್ತಾರೆ ವಯನಾಡಿಗರು. ಈಗ ಮಳೆಗಾಲವನ್ನು ಕೊಡೆ ಇಲ್ಲದೆಯೂ ನಿಭಾಯಿಸುವ ಸ್ಥಿತಿ ಬಂದಿದೆ. ಚಳಿಗಾಲದಲ್ಲಿ ಸೆಕೆ. ಬೇಸಿಗೆಯಲ್ಲಿ ಕುಡಿಯುವ ನೀರಿಗೆ ಬವಣೆ. ಕಳೆದ ಬೇಸಿಗೆಯಲ್ಲಿ ಬಾವಿಗಳೂ ಒಣಗಿ ಹೋಗಿದ್ದವು ಎಂಬ ಉದ್ಗಾರಗಳು ಅಲ್ಲಿ  ಕೇಳಿ ಬಂದವು.

ಮಳೆ ಕಡಿಮೆ ಆಗುತ್ತಿರುವುದಕ್ಕೂ ಹವಾಮಾನ ಬದಲಾವಣೆಗೂ ಸಂಬಂಧ ಇದೆಯೇ ಎಂಬುದರ ಬಗ್ಗೆ ತಲೆ ಕೆಡಿಸಿಕೊಂಡವರು ತೀರಾ ಕಡಿಮೆ. ಪಶ್ಚಿಮ ಘಟ್ಟದಲ್ಲಿ ಜೀವ ವೈವಿಧ್ಯಗಳ ರಕ್ಷಣೆಗೆಂದು ಬಾಹ್ಯಾಕಾಶ ವಿಜ್ಞಾನಿ ಡಾ. ಕಸ್ತೂರಿರಂಗನ್‌ ವರದಿ ವಿರೋಧಿಸಿದ ಮುಂಚೂಣಿ ರಾಜ್ಯವೆಂದರೆ ಕೇರಳ. ಅದರಲ್ಲೂ ವಯನಾಡಿನವರು. ಕರ್ನಾಟಕದ ಕೊಡಗು ಮತ್ತು ಮಲೆನಾಡು ಜಿಲ್ಲೆಗಳ ಶಾಸಕರಿಗೆ ಕಸ್ತೂರಿರಂಗನ್‌ ವರದಿಯನ್ನು ವಿರೋಧಿಸುವುದಕ್ಕೆ ವಯನಾಡು ಪ್ರೇರಣೆ ನೀಡಿದೆ ಎಂದರೆ ಹುಬ್ಬೇರಿಸಬೇಕಿಲ್ಲ. ಕೇರಳಕ್ಕೆ ಹೋಲಿಸಿದರೆ ಕರ್ನಾಟಕದಲ್ಲಿ ಸಾಕಷ್ಟು ಅರಣ್ಯ ಉಳಿದಿದೆ.

ಕಸ್ತೂರಿರಂಗನ್‌ ವರದಿ ಬಗ್ಗೆ ಕೇರಳ ರಾಜ್ಯದ ಪ್ರವಾಸೋದ್ಯಮ ಇಲಾಖೆ ಪ್ರಧಾನ ಕಾರ್ಯದರ್ಶಿ ವೇಣುಗೋಪಾಲ್‌ ಹೇಳುವುದು ಹೀಗೆ, ‘ನಮ್ಮಲ್ಲಿ ಸಾವಿರಾರು ವರ್ಷಗಳಿಂದ ಜನ ಪ್ರಕೃತಿಯ ಜತೆ ಬೆರೆತು ಬಾಳ್ವೆ ನಡೆಸಿಕೊಂಡು ಬಂದಿದ್ದಾರೆ. ಎಲ್ಲೆಲ್ಲಿ ಕಾಡುಗಳನ್ನು ಉಳಿಸಬೇಕೊ ಅಲ್ಲಿ ಉಳಿಸುವ ಕೆಲಸ ಆಗಿದೆ. ಕಸ್ತೂರಿರಂಗನ್‌ ವರದಿ ಒಪ್ಪಲು ಸಾಧ್ಯವೇ ಇಲ್ಲ’.

ಪ್ರವಾಸೋದ್ಯಮ ಕೇರಳಕ್ಕೆ ಹೇರಳ ಆದಾಯ ತಂದು ಕೊಡುತ್ತದೆ. ಅದಕ್ಕೆ ಪೂರಕವಾಗಿ ಮೂಲ ಸೌಕರ್ಯಗಳನ್ನು ರಾಜ್ಯ ಸರ್ಕಾರವೇ ಮಾಡಿಕೊಡುತ್ತಿದೆ. ಬಂಡವಾಳ ಹೂಡುವವರು ಖಾಸಗಿಯವರು. ಸರ್ಕಾರದ ಪಾತ್ರ ಕಡಿಮೆ. ‘ಪ್ರವಾಸೋದ್ಯಮದಲ್ಲಿ ಖಾಸಗಿಯವರಿಗೆ ಹೆಚ್ಚಿನ ಆದ್ಯತೆ ನೀಡುತ್ತೇವೆ. ಅವರಿಗೆ ಅಗತ್ಯವಿರುವ ಸೌಲಭ್ಯಗಳನ್ನು ಒದಗಿಸಿಕೊಡುತ್ತೇವೆ. ಯಾವುದೇ ಅಡ್ಡಿಗಳು ಎದುರಾದರೂ ಅದನ್ನು ನಿವಾರಿಸಲು ಸದಾ ಸಿದ್ಧ’ ಎನ್ನುತ್ತಾರೆ ವೇಣುಗೋಪಾಲ್‌.

‘ನೋಟು ರದ್ದತಿಯಿಂದ ಕೇರಳದ ಪ್ರವಾಸೋದ್ಯಮದ ಮೇಲೆ ಪರಿಣಾಮ ಆಗಿದೆ. ಆದಾಯದ ಮೇಲೆ ಶೇ 20 ರಷ್ಟು ಹೊಡೆತ ಬಿದ್ದಿದೆ. ಅದರಿಂದ ಚೇತರಿಸಿಕೊಳ್ಳಲು ಹೊಸ ಮಾರ್ಗೋಪಾಯಗಳನ್ನು ಕಂಡುಕೊಳ್ಳಲಾಗುತ್ತಿದೆ’ ಎಂದರು ಅವರು. ಅಂದ ಹಾಗೆ, ವಯನಾಡು ಜಿಲ್ಲೆಯ ಕಲೆಕ್ಟರ್‌ ಸುಹಾಸ್‌ ಕರ್ನಾಟಕದ ಮಂಡ್ಯ ಜಿಲ್ಲೆಯವರು.

ವಯನಾಡು ಪ್ರವಾಸೋದ್ಯಮ ಕರ್ನಾಟಕಕ್ಕೆ ಎರಡು ರೀತಿಯ ಪಾಠ ಆಗಬಲ್ಲದು. ಇಡಿ ಜಿಲ್ಲೆಯನ್ನೇ ಪ್ರವಾಸಿ ತಾಣವಾಗಿ ಅಭಿವೃದ್ಧಿಪಡಿಸಿದ್ದಾರೆ. ಬೆಟ್ಟಗಳು, ಜಲಪಾತಗಳು, ಸರೋವರ, ಹಿನ್ನೀರು ಎಲ್ಲವೂ ಪ್ರವಾಸಿ ತಾಣಗಳೇ. ಇದರಿಂದ ಜಿಲ್ಲೆಯಲ್ಲಿ ಬಹುಪಾಲು ಜನರು ಒಂದಲ್ಲ ಒಂದು ರೀತಿಯಲ್ಲಿ ಉದ್ಯೋಗ ಪಡೆದಿದ್ದಾರೆ. ಜಿಲ್ಲೆಯಲ್ಲಿ ಎಲ್ಲ ಬಗೆಯ 2,200 ರೆಸಾರ್ಟ್‌, ಹೊಟೇಲ್‌, ಸ್ಟೇ ಹೋಮ್‌ಗಳಿವೆ.

ಕರ್ನಾಟಕ ಅದೇ ಮಾದರಿಯಲ್ಲೇ ಪ್ರವಾಸೋದ್ಯಮ ಅಭಿವೃದ್ಧಿಪಡಿಸಬಹುದು. ಕೇರಳಕ್ಕಿಂತ ಹೆಚ್ಚಿನ ಜಿಲ್ಲೆಗಳಲ್ಲಿ ಪಶ್ಚಿಮಘಟ್ಟ ಪ್ರದೇಶವಿದೆ. ಕಾಡುಗಳನ್ನು ಕಡಿಯದೇ, ಸಹಜತೆ ಉಳಿಸಿಕೊಳ್ಳುವ ಮೂಲಕ ಕೇರಳಕ್ಕಿಂತ ಭಿನ್ನವಾಗಿ ಪ್ರವಾಸೋದ್ಯಮ ರೂಪಿಸಬಹುದು. ಕೆಲವು ಕಟ್ಟುಪಾಡುಗಳನ್ನು ವಿಧಿಸುವ ಮೂಲಕ ಪ್ರವಾಸೋದ್ಯಮದಲ್ಲಿ ಖಾಸಗಿಯವರ ಪಾಲ್ಗೊಳ್ಳುವಿಕೆಗೆ ಉತ್ತೇಜನ ನೀಡಬಹುದು. ಇದರಿಂದ ಸ್ಥಳೀಯವಾಗಿ ಉದ್ಯೋಗಾವಕಾಶ ಸೃಷ್ಟಿಸಬಹುದು.

ವಯನಾಡು ರಮಣೀಯ ಪ್ರದೇಶ. ಬ್ರಿಟಿಷರ ಕಾಲದಿಂದಲೂ ಕಾಡು, ಬೆಟ್ಟ ಕಡಿದು, ಹಲವು  ಬಗೆಯ ತೋಟಗಳನ್ನು ಮಾಡಲಾಗಿದೆ. ಟೀ ಮತ್ತು ಕಾಫಿ ತೋಟ ನೋಡಲು ಚೆಂದ. ಇದರಿಂದ ಮಳೆ ಕೊರತೆ ಆಗುತ್ತದೆ. ರಬ್ಬರ್‌ ಅಂತರ್ಜಲವನ್ನೇ ಬರಿದಾಗಿಸಿಬಿಡುತ್ತದೆ ಎನ್ನುತ್ತಾರೆ. ಸಾವಿರಾರು ವರ್ಷಗಳಿಂದ ಇದ್ದ ಜೀವ ವೈವಿಧ್ಯ ನಾಶವಾಗಿ ಹೋಗಿದೆ. ವಯನಾಡಿನಿಂದ ಹಿಂದಕ್ಕೆ ಬರುವಾಗ ಅಳಿದು ಹೋದ ದಟ್ಟ ಮಲೆಯ ವೈಭವ ನಮ್ಮನ್ನು ಗಾಢವಾಗಿ ಕಾಡದೆ ಇರದು.

(ಕೇರಳ ಪ್ರವಾಸೋದ್ಯಮ ಇಲಾಖೆಗೆ ಆಹ್ವಾನದ ಮೇರೆಗೆ ಲೇಖಕರು ಇತ್ತೀಚೆಗೆ ವಯನಾಡಿಗೆ ಪ್ರವಾಸ ಹೋಗಿದ್ದರು.)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.