ADVERTISEMENT

ಗುಡ್ಡಕ್ಕೆ ಹಾರ

​ಪ್ರಜಾವಾಣಿ ವಾರ್ತೆ
Published 30 ಆಗಸ್ಟ್ 2014, 19:30 IST
Last Updated 30 ಆಗಸ್ಟ್ 2014, 19:30 IST
ಗುಡ್ಡಕ್ಕೆ ಹಾರ
ಗುಡ್ಡಕ್ಕೆ ಹಾರ   

ನಾನು ಮತ್ತು ನನ್ನ ಸಹೋದ್ಯೋಗಿಗಳು ಮಾಳಿಣ್ ಹಳ್ಳಿಯನ್ನು ತಲುಪಿದಾಗ ರಾಷ್ಟ್ರೀಯ ವಿಪತ್ತು ಕಾರ್ಯಾಚರಣೆ ಪಡೆ, ಮಹಾರಾಷ್ಟ್ರ ಪೊಲೀಸ್, ಸ್ವಯಂಸೇವಕ ಕಾರ್ಯಕರ್ತರು, ರಾಜಕಾರಣಿಗಳು, ಅನೇಕ ವಿಭಾಗಗಳ ಅಧಿಕಾರಿಗಳು ಮತ್ತು ಜನಸಾಮಾನ್ಯರು ಅಲ್ಲಿ ಸೇರಿದ್ದರು. ಸಣ್ಣದಾದ ರಸ್ತೆಯ ತುಂಬಾ ವಾಹನಗಳು.

ಮನೆಗಳು ಸಿಕ್ಕಿಬಿದ್ದಿದ್ದ ರಾಶಿರಾಶಿ ಮಣ್ಣಿನ ಮಧ್ಯೆ ನಿಂತಿದ್ದ ನಾಲ್ಕಾರು ಕ್ರೇನುಗಳು, ನಿಧಾನವಾಗಿ ಮಣ್ಣಿನಲ್ಲಿ ಸಿಕ್ಕಿಕೊಂಡಿದ್ದ ಮನುಷ್ಯ ದೇಹಗಳನ್ನು ಹುಡುಕುತ್ತಿದ್ದವು. ಮಣ್ಣಿನಿಂದ ತೆಗೆದ ದೇಹಗಳನ್ನು ಯಾರಿಗೆ ಒಪ್ಪಿಸುವುದು ಎನ್ನುವ ಗೊಂದಲ ಉಂಟಾಗಿತ್ತು. ಕಾರಣ ಬಹಳಷ್ಟು ಕುಟುಂಬಗಳೇ ದುರಂತದಲ್ಲಿ ಸಿಲುಕಿಕೊಂಡಿದ್ದವು. ಸಮೀಪದಲ್ಲೇ, ಕಟ್ಟಡವೊಂದರ ಮಧ್ಯೆ ಬೆಂಕಿ ಹಾಕಿ ಸಿಕ್ಕಿದ ಹೆಣಗಳನ್ನು ಬಿಳಿ ಬಟ್ಟೆಯಲ್ಲಿ ಸುತ್ತಿ ಬೆಂಕಿಯಲ್ಲಿ ಸುಡಲಾಗುತ್ತಿತ್ತು.

ದೂರದ ಹಳ್ಳಿಗಳಿಂದ ಬಂದ ಜನರು ಯಾರಾದರೂ ತಮ್ಮ ಬಂಧುಗಳ ದೇಹಗಳು ಸಿಕ್ಕುತ್ತವೆಯೇ ಎಂದು ಎದುರು ನೋಡುತ್ತಿದ್ದರು. ಆಶ್ಚರ್ಯವೆಂದರೆ, ಈ ದುರಂತದಲ್ಲಿ ತಾಯಿಯೊಬ್ಬಳು ತನ್ನ ಆರು ತಿಂಗಳ ಮಗುವಿನೊಂದಿಗೆ ಎರಡು ದಿನಗಳ ಕಾರ್ಯಾಚರಣೆ ನಂತರ ಬದುಕಿ ಉಳಿದು ಬಂದದ್ದು. ಅವರಿದ್ದ ಮನೆಯನ್ನು ಸುತ್ತುವರಿದ ಗೋಡೆಗಳು ಮಣ್ಣು/ನೀರನ್ನು ಒಳಗೆ ಬಿಡದೆ ತಡೆ ಹಿಡಿದಿದ್ದು ಅವರನ್ನು ಪ್ರಾಣದಿಂದ ಉಳಿಸಿತ್ತು. ತಾಯಿ ಮಗುವನ್ನು ಎದೆಗೆ ಅವುಚಿಕೊಂಡು ಎರಡು ದಿನಗಳು ಕಾಲ ಇದ್ದಲ್ಲಿಯೇ ಇದ್ದಳು.

ಈ ದುರಂತ ನಡೆದ ಸ್ಥಳ ಮಹಾರಾಷ್ಟ್ರದ ಮಾಳಿಣ್ ಎನ್ನುವ ಹಳ್ಳಿಯಲ್ಲಿ. ಬುಡಕಟ್ಟು ಜನರ ಈ ಹಳ್ಳಿ ಎಂದಿನಂತೆ ಜುಲೈ 30ರ ನಸುಕಿನಲ್ಲೂ ತಣ್ಣಗೆ ಮಲಗಿತ್ತು. ಊರಿನ ಸುತ್ತಲೂ ಬಸಾಲ್ಟ್ ಶಿಲೆಗಳ ಪರ್ವತಗಳು ಸುತ್ತುವರಿದಿವೆ. ಹಳ್ಳಿಯ ಮುಂದೆ ಬುಬ್ರಾ ಎನ್ನುವ ಸಣ್ಣ ನದಿ ಕೆಂಪನೆ ಕೆಸರು ಮಣ್ಣು ತುಂಬಿಕೊಂಡು ಹರಿಯುತ್ತಿತ್ತು. ನದಿಯ ದಡದಿಂದ ಪಶ್ಚಿಮಕ್ಕೆ 220 ಮೀಟರುಗಳ ಎತ್ತರದ ಬೆಟ್ಟದ ಸೊಂಟದಲ್ಲಿ (40 ಮೀಟರುಗಳ ಎತ್ತರದಲ್ಲಿ) ನಾಲ್ಕು ಸಾಲುಗಳ ಮನೆಗಳು, ನಾಲ್ಕು ಮೆಟ್ಟಿಲು ಅಥವಾ ಹಂತಗಳಲ್ಲಿದ್ದ ಹಳ್ಳಿ ಚಳಿಗೆ ನಡುಗುತ್ತಿತ್ತು.

ಹಿಂದಿನ ದಿನ ಮತ್ತು ಹಿಂದಿನ ರಾತ್ರಿ ಸುಮಾರು 500 ಮಿ.ಮೀಗಳ ಮಳೆ ಅಲ್ಲಿ ಸುರಿದಿತ್ತು. ಹಳ್ಳಿಯ ಮೇಲೆ 160 ಮೀಟರ್‌ ಎತ್ತರದಲ್ಲಿ ಹಲವು ಮೆಟ್ಟಿಲುಗಳನ್ನು ಮಾಡಿ ಭತ್ತ ನಾಟಿ ಮಾಡಲಾಗಿತ್ತು. ಧಾರಾಕಾರ ಮಳೆ ಶಿಲೆಗಳು/ಮಣ್ಣಿನ ಮೂಲಕ ಒಳಗೊಳಗೆ ಹರಿದು ಹಳ್ಳಿಯ ಮನೆಗಳ ಕಚ್ಚಾ ಗೋಡೆಗಳ ಮೂಲಕ ಮನೆಗಳ ಒಳಗೆ ನುಗ್ಗಲು ಪ್ರಾರಂಭವಾಗಿತ್ತು. ನೆಲದ ಮೇಲೆ ಮಲಗಿದ್ದ ಜನ ಎಚ್ಚರಗೊಂಡು, ರಾತ್ರಿಯೆಲ್ಲ ಬಿದ್ದ ಮಳೆಯಿಂದ ಹೀಗಾಗಿರಬೇಕೆಂದುಕೊಂಡು ಬಕೆಟ್‌ಗಳಲ್ಲಿ ನೀರನ್ನು ತುಂಬಿ ಹೊರಕ್ಕೆ ಚೆಲ್ಲತೊಡಗಿದರು.

ಹತ್ತಿರದ ಶಾಲೆಕಾಲೇಜುಗಳಿಗೆ ಹೋಗಬೇಕಾದ ಮಕ್ಕಳನ್ನು ಪೋಷಕರು ದ್ವಿಚಕ್ರ ಗಾಡಿಗಳಲ್ಲಿ ಕೂರಿಸಿಕೊಂಡು ಹೊರಟರು. ಕೆಲವರು ಮಕ್ಕಳನ್ನು ಕರೆದುಕೊಂಡು ಹೊರಕ್ಕೆ ಬಂದು ಬಸ್ಸಿಗೆ ಕಾಯತೊಡಗಿದರು. ಗೋಡೆಗಳ ಮೂಲಕ ನುಗ್ಗಿ ಬರುತ್ತಿದ್ದ ನೀರನ್ನು ಮಹಿಳೆಯರು ಬೆಳಗ್ಗೆ ಏಳೂವರೆವರೆಗೂ ಹೊರಕ್ಕೆ ತೆಗೆದು ಚೆಲ್ಲುತ್ತಲೇ ಇದ್ದರು. ಬಹುಶಃ ಯಾರಾದರೂ ತಜ್ಞರು, ‘ಇಷ್ಟು ನೀರು ಮನೆಗಳ ಒಳಕ್ಕೆ ನುಗ್ಗಿ ಬರುವಾಗ ಹಳ್ಳಿಯ ಬೆನ್ನಿನಲ್ಲಿರುವ ಕಡಿದಾದ ಬೆಟ್ಟದ ಮೇಲಿಂದ ಮಣ್ಣು (ಭತ್ತ ನಾಟಿ ಮಾಡಿದ ಮೆಟ್ಟಿಲಾಕಾರದ) ಕುಸಿಯಬಹುದು’ ಎಂದು ಎಚ್ಚರಿಸಿದ್ದರೆ 170 ಜನರು ಮತ್ತು ಸಾಕು ಪ್ರಾಣಿಗಳ ಪ್ರಾಣ ಉಳಿಯುತ್ತಿತ್ತೋ ಏನೋ?

ಅಪಘಾತ ಶುರುವಾದದ್ದು ಬೆಳಿಗ್ಗೆ ಸರಿಯಾಗಿ ಏಳೂವರೆಗೆ. 160 ಮೀಟರ್‌ ಎತ್ತರದಿಂದ ಮಣ್ಣು–ಕಲ್ಲುಗಳ ರಾಶಿ ಕುಸಿದು ಕೆಳಕ್ಕೆ ಉರುಳತೊಡಗಿತು. ಈ ಮೆಟ್ಟಿಲುಗಳ ಅಂಚಿನಲ್ಲಿ ನೀರು ಹರಿಯದಂತೆ ತಡೆಯಲು ಜೋಡಿಸಿದ್ದ ಗುಂಡುಕಲ್ಲುಗಳು ಮಣ್ಣಿನೊಂದಿಗೆ ವೇಗವನ್ನು ಹೆಚ್ಚಿಸಿಕೊಂಡಿದ್ದವು. ಮೇಲಿಂದ ಉರುಳಿದ ಮಣ್ಣು–ಕಲ್ಲುಗಳು ಹಳ್ಳಿಯ ಎದೆಯ ಮೇಲೆ ಆಶ್ರಯಪಡೆದವು.

ಕೆಲವೇ ನಿಮಿಷಗಳಲ್ಲಿ ಇಡೀ ಹಳ್ಳಿಯ ಉಸಿರು ನಿಂತುಹೋಯಿತು. ಹಳ್ಳಿಯ ಹೊರ ಅಂಚಿನಲ್ಲಿ ನಿಂತಿದ್ದ ಅದೇ ಹಳ್ಳಿಯ ಜನ ಮೂಕಪ್ರೇಕ್ಷಕರಾಗಿ ಸಿಡಿಲು ಬಡಿದಂತಾದರು. ಅವರ ಕಣ್ಣುಗಳ ಮುಂದೆಯೇ ಅವರ ಹಳ್ಳಿ, ಅವರ ರಕ್ತಸಂಬಂಧಿಗಳು, ಒಡನಾಡಿಗಳು ಮಣ್ಣಿನಲ್ಲಿ ಮುಚ್ಚಿಹೋಗಿದ್ದರು. ಮಧ್ಯಾಹ್ನದ ಹೊತ್ತಿಗೆ ಮಾಧ್ಯಮದವರು ಮತ್ತು ಜನರು ತಂಡೋಪತಂಡವಾಗಿ ಮಾಳಿಣ್ ಹಳ್ಳಿಯ ಕಡೆಗೆ ಬರತೊಡಗಿದರು.

ಪೂನಾ ನಗರದಿಂದ ಉತ್ತರ ದಿಕ್ಕಿಗೆ 95 ಕಿ.ಮೀ. ದೂರದಲ್ಲಿರುವ ಮಾಳಿಣ್ ಹೆಸರಿನ ಈ ಹಳ್ಳಿ ಬಸಾಲ್ಟ್ ಶಿಲೆಗಳಿಂದ ಕೂಡಿದ ಬೆಟ್ಟದ ತಪ್ಪಲಿನಲ್ಲಿದೆ. ಮಹಾರಾಷ್ಟ್ರ ಸರ್ಕಾರ ತೀರ ಇತ್ತೀಚೆಗೆ ಬೆಟ್ಟಗಳ ಇಳಿಜಾರುಗಳಲ್ಲಿ ಮೆಟ್ಟಿಲಾಕಾರದ ಜಮೀನಿನಲ್ಲಿ ಕೃಷಿ ಬೆಳೆಯಲು ಸ್ಥಳೀಯರಿಗೆ ಪ್ರೋತ್ಸಾಹ ನೀಡಿತ್ತು. ಈ ದುರಂತದ ನಂತರ ಸರ್ಕಾರ ಮತ್ತು ವಿರೋಧ ಪಕ್ಷಗಳು ಪರಸ್ಪರ ಕೆಸರು ಎರಚಿಕೊಳ್ಳತೊಡಗಿವೆ. ‘ಇದು ಅಸಂಗತ ಕೃಷಿ’ ಎನ್ನುವುದು ವಿರೋಧ ಪಕ್ಷದ ಟೀಕೆ.

‘ಇದು ಎಲ್ಲ ಪರ್ವತ ಪ್ರದೇಶಗಳಲ್ಲಿ ಚಾಲ್ತಿಯಲ್ಲಿರುವ ಕೃಷಿ ಪದ್ಧತಿ’ ಎನ್ನುವುದು ಸರ್ಕಾರದ ವಾದ. ನಿಜ, ಈ ರೀತಿಯ ಕೃಷಿ ಬಹಳ ಹಿಂದಿನ ಕಾಲದಿಂದಲೂ ಚಾಲ್ತಿಯಲ್ಲಿದೆ. ಆದರೆ ಮೊದಲ ಬಾರಿಗೆ ಹಳ್ಳಿಗೆ ಹಳ್ಳಿಯೇ ಮಣ್ಣು ಕುಸಿತದಿಂದ ಸಂಪೂರ್ಣವಾಗಿ ನಾಶವಾದುದು ಮಾತ್ರ ಖೇದದ ಸಂಗತಿ.

ಮಾಳಿಣ್ದಲ್ಲಿನ ದುರಂತಕ್ಕೆ ಮುಖ್ಯಕಾರಣಗಳೆಂದರೆ: ಬೆಟ್ಟದ ಮೇಲೆ ಗಿಡಮರಗಳನ್ನು ಕಡಿದು ನೆಲಸಮ ಮಾಡಿದ್ದು, ಹಳ್ಳಿಯ ಮೇಲೆ ಭತ್ತ ನಾಟಿ ಮಾಡಿದ್ದು, ಅಲ್ಲಿ ದೊಡ್ಡದೊಡ್ಡ ಕಲ್ಲುಗಳನ್ನು ಜೋಡಿಸಿ ನೀರು ಹರಿಯದಂತೆ ತಡೆ ಹಿಡಿದದ್ದು ಹಾಗೂ ಇದೆಲ್ಲಕ್ಕೂ ಪೂರಕವಾಗಿ ಸುರಿದ ಭಾರೀ ಮಳೆ. ಮಾಳಿಣ್ ದುರಂತದಿಂದ ಕಲಿಯಬೇಕಾದ ಪಾಠವೊಂದಿದೆ: ಇನ್ನುಮುಂದಾದರೂ ಬೆಟ್ಟಗಳ ಇಳಿಜಾರಿನಲ್ಲಿ ಮನೆಗಳ ಮೇಲೆ ಕೃಷಿ ಮಾಡಬಾರದು, ಮರಗಿಡಗಳನ್ನು ಕಡಿಯಬಾರದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.