ADVERTISEMENT

ಗೋಡೆ ಮತ್ತು ಛಾಯಾಚಿತ್ರ

ಪ್ರಬಂಧ

ಎಚ್.ರಮೇಶ ಕೆದಿಲಾಯ
Published 13 ಫೆಬ್ರುವರಿ 2016, 19:30 IST
Last Updated 13 ಫೆಬ್ರುವರಿ 2016, 19:30 IST
ಚಿತ್ರ–ಶಶಿಕಿರಣ್ ದೇಸಾಯಿ
ಚಿತ್ರ–ಶಶಿಕಿರಣ್ ದೇಸಾಯಿ   

ತೀರಿ ಹೋದ ತಂದೆ – ತಾಯಿಯ ಛಾಯಾಚಿತ್ರ ಮನೆಯ ಗೋಡೆಯ ಮೇಲೆ ಗಟ್ಟಿಯಾಗಿ ಕುಳಿತಿರದೆ ಇದ್ದರೆ ಏನೋ ಕಾಣೆಯಾದ, ಖಾಲಿಯಾದ ಅನುಭವವಾಗುತ್ತದೆ! ತಂದೆಯ ಛಾಯಾಚಿತ್ರವನ್ನು ಸುಂದರವಾದ ಫ್ರೇಮಿನೊಳಗೆ ಬಂಧಿಸಿಟ್ಟು, ಗೋಡೆಗೆ ಮೊಳೆ ಹೊಡೆದು ಚೊಕ್ಕವಾಗಿ ನೇತಾಡಿಸುವುದಕ್ಕೂ ತಂದೆಯ ಮೇಲಿನ ಪ್ರೀತಿಗೂ ಯಾವುದೇ ಸಂಬಂಧವಿಲ್ಲ! ತಂದೆಯ ಜೊತೆ ದಿನವೂ ಜಗಳವಾಡುತ್ತಿದ್ದವನೂ ಗೋಡೆಯಲ್ಲಿ ಅಪ್ಪನ ಅಲಂಕಾರ ಮಾಡಬಹುದು! ಹಾಗೆಯೇ ಅಪ್ಪನನ್ನು ಅಪಾರವಾಗಿ ಪ್ರೀತಿಸುತ್ತಿದ್ದವನೊಬ್ಬ ಛಾಯಾಚಿತ್ರದಿಂದ ದೂರವೆ ಉಳಿಯಬಹುದು!

ಹೀಗಿದ್ದೂ ಸಾವಿನ ಬಳಿಕವೂ ಒಂದು ‘ಬದುಕಿನ ನೋಟ’ ಬೇಕೆಂದುಕೊಂಡಾಗ ಅಪ್ಪ ಅಮ್ಮ ಗೋಡೆಯನ್ನು ಜೀವಂತ ಸಮಾಧಿಯಾಗಿ ರೂಪಾಂತರಗೊಳಿಸುವಂತೆ ಬದುಕಿ ಉಳಿದವರು ಮಾಡುತ್ತಾರೆ! ಹಾಗೆ ನೋಡಿದರೆ ಸಾವಿನ ಬಗ್ಗೆ ಬರೆಯುವುದು ಎಂದರೆ ಬದುಕಿನ ಬಗ್ಗೆ ಬರೆದಂತೆಯೆ! ಹುಟ್ಟು ಒಂದು ದಡವಾದರೆ ಸಾವು ಇನ್ನೊಂದು ದಡ. ಹುಟ್ಟಿನ ಬಗ್ಗೆ ಗೊತ್ತಿರುವಷ್ಟು ನಮಗೆ ಸಾವಿನ ಬಗ್ಗೆ ಗೊತ್ತಿಲ್ಲ. ಸಾವು ನಿಗೂಢವಾಗಿರುವುದರಿಂದಲೇ ನಮಗೆ ಭಯ.  ಹೀಗಾಗಿಯೇ ಅದರ ಕುರಿತು ನಾವು ಮಾತನಾಡುವುದೇ ಇಲ್ಲ.

ಮಾತನಾಡಿದರೆ ಸಾವೂ ಮರು ನುಡಿದರೆ ಏನು ಗತಿ ಎನ್ನುವುದು ನಮ್ಮ ಭಯ! ಹುಟ್ಟು ಕೊನೇ ಪಕ್ಷ ಅಳುತ್ತದೆ! ಮಗು ಅತ್ತಾಗ ಹುಟ್ಟಿನ ಸಂಭ್ರಮ. ಆದರೆ ಸಾವಿನಲ್ಲಿ ಆ ಅಳುವೂ ಇಲ್ಲ! ಅಲ್ಲಿ ಹುಟ್ಟು ಮೌನವಾಗಿರುತ್ತದೆ, ಅಷ್ಟೇ! ಯಾರಾದರೂ ಮೌನಕ್ಕೆ ಹೆದರುತ್ತಾರೆಯೆ? ಪ್ರಾಯಃ ಈ ಮೌನಕ್ಕೆ ಭಾವಚಿತ್ರ ಮಾತು ಕಲಿಸಿ ಅಗಲಿದವರಿನ್ನೂ ಬಳಿಯೇ ಇದ್ದಾರೆನ್ನುವ ಭಾವವನ್ನೂ ಬಿಂಬಿಸುತ್ತದೆಯೇ ಏನೋ!
‘ಗೇಟ್‌ ಆಫ್‌ ದಿ ವಿಸನ್’ ಎನ್ನುವ ಕಾದಂಬರಿಯನ್ನು ಬರೆದದ್ದು ಎಲಿಯಸ್‌ ಕೌರಿ (Elias Khoury). ಇದರಲ್ಲಿ ಯುನಿಸ್‌ ಎನ್ನುವ ಪ್ಯಾಲೆಸ್ಟೀನಿಯನ್‌ ಸ್ವಾತಂತ್ರ್ಯ ಹೋರಾಟಗಾರ ಕೋಮಾದಲ್ಲಿದ್ದಾನೆ.

ಹಾಗೆ ಕೋಮಾದಲ್ಲಿ ಮಲಗಿರುವವನ ಪಕ್ಕದಲ್ಲಿ ಕುಳಿತ ಅವನ ಆಧ್ಯಾತ್ಮಿಕ ಗುರು ಡಾ. ಖಲೀಲ್‌ ಅವನಿಗೆ ಬದುಕಿನ ಕತೆ ಹೇಳುತ್ತಿರುತ್ತಾನೆ! ಅಷ್ಟೇ ಅಲ್ಲ, ಅವನನ್ನು ಸದಾ ಮಾತನಾಡಿಸುತ್ತಲೆ ಇರುತ್ತಾನೆ! ಸಾಯುತ್ತಿರುವವನಿಗೂ ಮಾತು ಬೇಕು; ಕತೆ ಬೇಕು;  ಸಾಂತ್ವನ ಬೇಕು; ಧೈರ್ಯ ಬೇಕು! ಸಾವು ಬರುವ ತನಕವೂ ಮನುಷ್ಯ ನೇತಾಡುವುದು ಬದುಕಿನೊಂದಿಗೇ ಅಲ್ಲವೆ? ಇರಲಿ. ಈ ಡಾ. ಖಲೀಲ್‌ ಹೇಳುವ ಒಂದು ಮಾತು ತುಂಬಾ ಸ್ವಾರಸ್ಯಕರವಾಗಿದೆ.

ಆತ ಯೂನಿಸ್‌ಗೆ ಹೇಳುತ್ತಾನೆ– ‘‘ನೀನು ದಿನ ಹೋದಂತೆ ಯುವಕನಾಗುತ್ತಾ ಇದ್ದಿ’’ ಎಂದು! ಸಾವಿನಂಚಿನಲ್ಲಿರುವ ಮುದುಕನಿಗೆ ಕೇಳುವ ಈ ಮಾತು ವಿಸ್ಮಯ ಹುಟ್ಟಿಸುತ್ತದೆ! ಆತ ಹೇಳುತ್ತಾನೆ: ‘‘ಮನುಷ್ಯ ಸಾಯುವುದಿಲ್ಲ, ಆತ ತಾಯಿಯ ಗರ್ಭಕ್ಕೆ ಮರಳಿ ಹೋಗುತ್ತಾನೆ. ಸಾಯುವ ಮೊದಲು ಮನುಷ್ಯ ಮತ್ತೆ ಮಗುವಾಗುತ್ತಾನೆ. ಇಲ್ಲಿ ಮಗು ಮಾತ್ರ ಸಾಯುತ್ತದೆ, ದೊಡ್ಡವರಲ್ಲ! ಎಲ್ಲಾ ಸಾವು ಮಗುವಿನ ಸಾವು’’.
ನೂರು ವರ್ಷದ ಮುದುಕನೂ ಮಗುವಾಗಿಯೆ ಸಾಯುತ್ತಾನೆ ಎನ್ನುವ ಉಪಮೆಯಲ್ಲೆ ಹೊಸ ಉಸಿರಿದೆ! ಸಾವು ಮಗುವಿನ ಮುಗ್ಧತೆ ಪಡೆಯುವುದು ಹೀಗೆ.

ದೊಡ್ಡವರಾಗಿ ಮಾಡಿದ ಸಣ್ಣ ಕೆಲಸಗಳೆಲ್ಲಾ ಮತ್ತೆ ಮಗುವಾಗುವಾಗ ಮಾಯವಾಗುತ್ತದೆ! ಪ್ರಾಯಃ ಖಲೀಲ್‌ ಸಾವಿಗೆ ಹೆದರಬೇಡ ಎನ್ನುವುದನ್ನೆ ಹೀಗೆ ಹೇಳುತ್ತಿರಬಹುದು. ಮಗುವಾಗುವಲ್ಲಿ ಭಯ ಇರುವುದು ಸಾಧ್ಯವೆ? ಇನ್ನೂ ಮುಂದುವರಿದು ಆತ ಹೇಳುತ್ತಾನೆ: ‘‘ಇಲ್ಲಿ ಪರಿಮಳ ತುಂಬಾ ಮುಖ್ಯ! ಮಗುವಿನ ಪರಿಮಳ ಹದಿಹರಯದವನ  ಪರಿಮಳಕ್ಕಿಂತ ಭಿನ್ನ! ಮುದುಕ ಕೊಳೆತ ವಾಸನೆಯನ್ನು ಬೀರಬಹುದು. ಅದಕ್ಕೇ ಮಕ್ಕಳ ಹಾಗೆ ನಾವು ಪರಿಮಳ ಸೂಸಬೇಕು. ನೀವು ಸಾವಿಗೆ ಹತ್ತಿರವಾದಾಗ ಮಗುವಿನ ಹಾಗೆಯೇ ಸುವಾಸನೆ ಬೀರುತ್ತೀರಿ; ಮಗುವಿನ ಹಾಗೆಯೆ ಉಣ್ಣುತ್ತೀರಿ. ಕುಡಿಯುತ್ತೀರಿ...’’.

ಅಂದರೆ ಸಾವಿನ ಪರಿಮಳ ಮಗುವಿನ ಪರಿಮಳವೋ ಹೇಗೆ? ಸಾವಿನ ಮುಖದಲ್ಲಿ ಮುಗ್ಧತೆ ಮನೆ ಮಾಡಿರುವುದಂತೂ ಸತ್ಯವೆ! ನಿಜದ ಬದುಕಿನಲ್ಲಿ ಕುರೂಪಿಯಾಗಿದ್ದವನೂ ಸಾವಿನಲ್ಲಿ ಅಂದವಾಗಿಯೆ ಕಾಣುತ್ತಾನೆ. ಮಕ್ಕಳಿಗೆ ಹೇಗೋ ಹೆಣಕ್ಕೂ ಹಾಗೆಯೆ ಶೃಂಗಾರ ಮಾಡುವುದು ಇದೇ ಕಾರಣಕ್ಕೇ ಇರಬಹುದು. ತಂದೆಯೋ ತಾಯಿಯೋ ಬದುಕಿದ್ದಾಗ ಇರುವುದಕ್ಕಿಂತ ಹೆಚ್ಚು ಅಂದವಾಗಿ, ಮುದ್ದಾಗಿ ಭಾವಚಿತ್ರದಲ್ಲಿ ಮೂಡುವುದೂ ಇದೇ ಕಾರಣಕ್ಕಾಗಿಯೆ ಇರಬಹುದೋ ಏನೋ! ಅದಿಲ್ಲವಾದರೆ ಅವರು ಬದುಕಿದ್ದಾಗ ತೆಗಿಸಿಕೊಂಡ ಫೋಟೋವನ್ನೆ ಅಲ್ಲವೆ ನಾವು ಎನ್‌ಲಾರ್ಜ್‌ ಮಾಡಿಸುವುದು? ಮತ್ತು ಅದೇ ಭಾವಚಿತ್ರ ಈಗ ತುಂಬಾ ಹಿಡಿಸುವುದು?

ನೀವು ಏನೇ ಹೇಳಿ, ತಾಯಿಯ ಭಾವಚಿತ್ರ ಅವಳನ್ನು ಸಾಯಲು ಬಿಡುವುದೆ ಇಲ್ಲ! ಅವರ ಕಣ್ಣುಗಳು ನಮ್ಮನ್ನು ನೋಡುತ್ತಿರುವುದು, ನಮ್ಮ ಕಣ್ಣುಗಳು ಅವಳ ನಗುವನ್ನು ನೋಡುವುದು ಸುಳ್ಳಾಗುವುದೆ ಇಲ್ಲ! ಅಲ್ಲಿ ಎಲ್ಲೋ ಸೂಕ್ಷ್ಮ ರೂಪದಲ್ಲಿ ಅವಳಿದ್ದಾಳೆ ಎನ್ನುವುದಕ್ಕಿಂತ ಇಲ್ಲೇ ನನ್ನ ಕಣ್ಣೆದುರೇ ಇದ್ದಾಳೆ ಎನ್ನುವುದೆ ಮುಖ್ಯವಾಗುತ್ತದೆ. ಅದಕ್ಕೇ ಇರಬೇಕು. ನಾವು ಆಗಾಗ್ಗೆ ಗೋಡೆಯಲ್ಲಿರುವ ಭಾವಚಿತ್ರವನ್ನು ಕೆಳಗಿಳಿಸಿ, ಒದ್ದೆ  ಬಟ್ಟೆಯಲ್ಲಿ ಕನ್ನಡಿಯನ್ನು, ಅದರ ಫ್ರೇಮ್‌ ಅನ್ನು ಒರೆಸಿ, ದೂಳು ತೆಗೆದು ನಿರ್ಮಲಗೊಳಿಸಿ ಮತ್ತೆ ಅದರ ಸ್ಥಾನದಲ್ಲೇ ಇಡುತ್ತೇವೆ.

ಅಷ್ಟೇ ಅಲ್ಲ, ದೀಪಾವಳಿ ಬರಲಿ, ಯುಗಾದಿಯೆ ಬರಲಿ, ಹೆತ್ತವರ ಫೋಟೋಗಳಿಗೆ ಒಂದು ಹೂವಿನ ಹಾರ ಹಾಕಿಯೇ ಹಾಕುತ್ತೇವೆ! ಸೇವಂತಿಗೆಯ ಅಥವಾ ಮಲ್ಲಿಗೆಯ ಮಾಲೆಯ ನಡುವೆ ಅದೇ ಅಮ್ಮನ ಭಾವಚಿತ್ರ ಏನೋ ಲಹರಿ ಪಡೆದಂತೆ ಕಾಣುವುದೂ ಇದೆ! ಆ ಲಹರಿ ನಮ್ಮೊಳಗಿನ ಭಾವವೇ ಆಗಿರಬಹುದು. ಆದರೆ ಆ ಭಾವ ಗಾಳಿಯಲ್ಲಿ ಸೇರಿ ಭಾವಚಿತ್ರವನ್ನು ವ್ಯಾಪಿಸುವಾಗ ಜೀವ ಬಂದಂತಾಗುತ್ತದೆ.
ಅದೇ ‘ಗೇಟ್‌ ಆಫ್‌ ವಿಸನ್’ ಕಾದಂಬರಿಯಲ್ಲಿ ಸಣ್ಣದೊಂದು ಹೆಣ್ಣಿನ ಪಾತ್ರವಿದೆ. ಆಕೆ ಭಾವಚಿತ್ರದ ಬಗ್ಗೆ ಹೇಳುವ ಮಾತುಗಳು ನಮ್ಮ ನಡವಳಿಕೆ ನೋಡಿಯೆ ಹೇಳಿದಂತಿದೆ. ಆಕೆ ಹೇಳುವುದಿಷ್ಟು: ‘‘ನಾವು ನೀರು ಹಾಕದಿದ್ದರೆ ಭಾವಚಿತ್ರಗಳು ಸಾಯುತ್ತವೆ. ಅದಕ್ಕೆ ಒದ್ದೆ ಬಟ್ಟೆಯಲ್ಲಿ ಫ್ರೇಂ ಒರೆಸಿ ಹೂವಿನ ಹಾರ ಹಾಕಬೇಕು.

ಭಾವಚಿತ್ರಗಳು ಹೂವಿನಲ್ಲಿರುವ ನೀರು ಮತ್ತು ಪರಿಮಳ ಸೇವಿಸಿ ಬದುಕುತ್ತವೆ!’. ಸಾವಿನ ಭಯ ಹೋಗಲು ಇಂಥ ರೂಪಕಗಳು ಬೇಕು. ರೂಪಕಗಳಿಗೆ ಮಂತ್ರಶಕ್ತಿ ಇದೆ! ಸುಮ್ಮನೆ ಹೇಳುವುದು ಒಂದು ಬಗೆಯಾದರೆ ರೂಪಕದ ಸಹಾಯದಿಂದ ಹೇಳುವುದು ಇನ್ನೊಂದು ಬಗೆ. ಸುಮ್ಮನೆ ಹೆದರಬೇಡಿ ಎನ್ನುವುದಕ್ಕೂ ಹೆದರಬೇಡಿ ನಾನಿದ್ದೇನೆ ಎನ್ನುವುದಕ್ಕೂ ವ್ಯತ್ಯಾಸವಿದೆ! ಅದಕ್ಕೇ ಇರಬೇಕು, ಕತೆಗಳು ಅಷ್ಟು ಪ್ರಭಾವಶಾಲಿಯಾಗಿರುವುದು.

ಅಜ್ಜಿ ಕತೆ ಹೇಳಿಯೇ ಖುಷಿ ಪಡಿಸುತ್ತಿದ್ದುದಲ್ಲವೆ? ಕತೆಯ ಮೂಲಕವೇ ಅಮ್ಮ ಧೈರ್ಯ ತುಂಬುತ್ತಿದ್ದುದಲ್ಲವೆ? ಹೀಗಿರುವಾಗ ಸಾಯುತ್ತಿರುವವನ ಕಿವಿಗೆ ಕತೆ  ತುಂಬಿದರೆ ಆತ ಮಗುವಾಗದೆ ಇರುವನೆ? ಇನ್ನೊಂದು ರೀತಿಯ ಕತೆಯೂ ಇದೆ. ಅದು ಸತ್ತವನೇ ಹೇಳುವ ಕತೆ! ಸತ್ತಿದ್ದಾನೆಂದು ತಿಳಿದರೆ ಮತ್ತೆ ಬದುಕಿ ಬಂದು ಕತೆ ಹೇಳಿದ ಉದಾಹರಣೆಗಳು ನಮ್ಮ ಸುತ್ತಮುತ್ತಲೆ ಇದೆ! ಹೀಗೆ ಮರಳಿ ಬಂದವ ಅಚ್ಚರಿ ಸಹಿತ ಆನಂದ ಹುಟ್ಟಿಸುತ್ತಾನೆ. ಕೆಲವೊಮ್ಮೆ ಬದುಕಿದ್ದಾನೆಂದು ನಂಬಿದರೂ ಆತ ಮರಳಿ ಬರುವುದೆ ಇಲ್ಲ. ಆಗಲೂ ನಿರಂತರವಾಗಿ ಕತೆಗಳು ಹೊರಬರುತ್ತಲೆ ಇರುತ್ತವೆ.

ಓರಮ್‌ ಪಮುಖ್‌ ‘ಮೈ ನೇಮ್‌ ಈಸ್‌ ರೆಡ್‌’ (ನನ್ನ ಹೆಸರು ಕೆಂಪು) ಎನ್ನುವ ಕಾದಂಬರಿ ಬರೆದಿದ್ದಾನೆ. ಹೆಣವೊಂದು ಕತೆ ಹೇಳುವ ಸನ್ನಿವೇಶವನ್ನು ಆತ ಸೃಷ್ಟಿಸಿದ್ದಾನೆ. ಅವನನ್ನು ಯಾರೋ ಕೊಂದು ಬಾವಿಯೊಳಗೆ ಎಸೆದಿರುತ್ತಾರೆ. ಆದರೆ ಮನೆಯವರು ಆತ ಬದುಕಿದ್ದಾನೆ ಎಂದೇ ನಂಬಿ ಅವನಿಗಾಗಿ ಕಾಯುತ್ತಿದ್ದಾರೆ. ಹೀಗಾಗಿಯೇ ಆ ಬಾವಿ ಕತೆಯ ಬಾಯಿಯಾಗಿ ರೂಪಾಂತರಗೊಳ್ಳುತ್ತದೆ! ಸತ್ತವರನ್ನು ನಾವು ಒಂದಲ್ಲ ಒಂದು ನೆಪದಲ್ಲಿ ಜೀವಂತವಾಗಿರಿಸುವುದು ನಮ್ಮ ಬದುಕಿನ ಅಂದವನ್ನು ಹೆಚ್ಚಿಸುವುದಕ್ಕೆ ಎಂದರೆ ಅತಿಯಾಗಲಾರದು.

ಬದುಕಿನ ‘ಅಂದ’ ಹೆಚ್ಚುವುದು ಸಾವು ಅಂತ್ಯವಲ್ಲ ಎಂದುಕೊಂಡಾಗಲೇ! ಸತ್ತಮೇಲೂ ನಾವು ಮಕ್ಕಳ, ಮೊಮ್ಮಕ್ಕಳ ನೆನಪಿನಲ್ಲಿರುತ್ತೇವೆ ಎನ್ನುವ ಒಂದೇ ಒಂದು ನಂಬಿಕೆಗೆ ಸಾವನ್ನು ಗೆಲ್ಲುವ ಶಕ್ತಿಯಿದೆ! ತಿಥಿ, ವೈಕುಂಠ ಸಮಾರಾಧನೆ, ಶ್ರಾದ್ಧಗಳೆಲ್ಲಾ ಇದನ್ನೇ ಮಾಡುತ್ತದೆಯೋ ಏನೋ! ಸಮಾಧಿ ಇದ್ದರಂತೂ ಅಮೂರ್ತ ಮೂರ್ತವಾಗಿಯೇ ಬಿಡುತ್ತದೆ! ತಾಯಿಗೆ ಸಮಾಧಿ ನಿರ್ಮಿಸುವವರು ತಾವೂ ಚಿರಂಜೀವಿಗಳಾಗುವ ಕನಸು ಕಾಣುತ್ತಾರೋ ಏನೋ!

ಇವೆಲ್ಲಾ ಬೇಡವೆಂದು ಸತ್ತ ಮೇಲೆ ದೇಹವನ್ನು ವೈದ್ಯಕೀಯ ಕಾಲೇಜಿಗೆ ದಾನ ಮಾಡುತ್ತಾರಲ್ಲ, ಅವರು ಸಾವನ್ನು ಗೆದ್ದಹಾಗೆ ಬೇರೆ ಯಾರೂ ಗೆಲ್ಲರಾರರು! ಅಥವಾ ನೇತ್ರದಾನ ಮಾಡಿ ಇನ್ನಿಬ್ಬರಿಗೆ ದೃಷ್ಟಿಯಾದಾಗ, ಕಿಡ್ನಿಗಳನ್ನು ದಾನ ನೀಡಿ ಜೀವ ಉಳಿಸಿದಾಗ, ಹೃದಯವನ್ನೆ ನೀಡಿ ಇನ್ನೊಂದು ಜೀವಿಯ ಹೃದಯ ಮಿಡಿದಾಗ ಸಾವು ನಿಜಕ್ಕೂ ಗೆಲ್ಲುತ್ತದೆ; ಸಾವಿನ ಭಯವೂ ನೀಗುತ್ತದೆ! ಭಯವಿಲ್ಲದೆ ಬದುಕಿಗೆ ಸಾವು ಮುತ್ತಿಕೊಳ್ಳುವುದೆ ಇಲ್ಲ; ಮುತ್ತಿಕೊಂಡರೂ ಅದರಿಂದ ಬಿಡಿಸಿಕೊಂಡು ಹೊಸ ದಾರಿ ತುಳಿಯುವ ಧೈರ್ಯ ಬಂದೇ ಬರುತ್ತದೆ. ಎಲ್ಲಾ ನದಿಗಳೂ ಸಮುದ್ರವನ್ನೇ ಸೇರುವಂತೆ ಎಲ್ಲ ಉಸಿರುಗಳೂ ಬ್ರಹ್ಮಾಂಡವನ್ನು ಸೇರುತ್ತವೆ! ಹಾಗೆ ಸೇರುವ ಮೊದಲು, ಇಲ್ಲೇ ಅಕ್ಕಪಕ್ಕದ ಬಂಜರು ಭೂಮಿಗೆ ಹಸಿರಾದರೆ ಹೇಗೆ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.