ADVERTISEMENT

ಚಂದ್ರ ಹೊಲಿಸಿದ ಅಂಗಿ!

ಮಕ್ಕಳ ಪದ್ಯ

ಶಿವಮೊಗ್ಗ ಗೀತಾಶಾಸ್ತ್ರಿ
Published 28 ಮಾರ್ಚ್ 2015, 19:30 IST
Last Updated 28 ಮಾರ್ಚ್ 2015, 19:30 IST

ಚಂದ್ರನೊಮ್ಮೆ ಬಂದನು
ದರ್ಜಿಯ ಬಳಿಗೆ
ದರ್ಜಿಗೆ ಚಂದ್ರನು ನುಡಿದರನು ಹೀಗೆ:

ಚಂದದ ಅಂಗಿಯ
ನೀನು ನನಗೆ ಹೊಲಿ
ನಾ ಕೊಡುವೆನು ನಿನಗೆ
ಹಣದ ಥೈಲಿ

ಎನ್ನಲು ದರ್ಜಿಯು
ಹೀಗೆ ನುಡಿದನು:
ದಿನಕೊಂದು ರೀತಿ
ಇರುವವ ನೀನು

ADVERTISEMENT

ಪಾಡ್ಯದ ದಿನ
ನೀನಿರುವೆ ತೆಳ್ಳಗೆ
ಹುಣ್ಣಿಮೆ ಬಂದಾಗ
ಡುಮ್ಮನ ಹಾಗೆ!

ಪ್ರತಿದಿನ ನನಗೆ
ನಿನ್ನ ಅಳತೆಯ ನೀಡು
ನಾ ಹೊಲಿವ ಅಂಗಿಯ
ಚಂದವ ನೋಡು

ಚಂದ್ರನು ಬಂದು
ಅಳತೆಯ ಕೊಟ್ಟು
ದರ್ಜಿಯು ಚಂದದ
ಅಂಗಿಯ ಹೊಲಿದೇ ಬಿಟ್ಟ

ಪಾಡ್ಯ ಬಿದಿಗೆ ತದಿಗೆ
ಚೌತಿಗೆ ತೆಳುವಂಗಿ
ನಂತರದ ದಿನದಿನಕೆ
ಹೊಸ ಹೊಸ ಅಂಗಿ

ಹುಣ್ಣಿಮೆ ಬಂದಾಗ
ಬಿಳಿಯ ಸೂಟು
ಅಮಾವಾಸ್ಯೆಗೆ ಹೊಲಿದ
ಕಪ್ಪನೆ ಕೋಟು

ಬದಲಾದ ಹಾಗೆ
ಚಂದ್ರನ ಭಂಗಿ
ರೆಡಿಯಾಗಿ ಬಿಡ್ತು
ಹೊಸ ಹೊಸ ಅಂಗಿ

ಚಂದ್ರನು ಖುಷಿಯಲಿ
ಅಂಗಿಯ ಧರಿಸಿದ
ತಾರೆಗಳಿಗೆ ತೋರಿಸುವ
ಆಗಸದಿ ನಲಿದ!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.