ADVERTISEMENT

ಚೆನ್ನಿ, ಚಂದ್ರಿ ಮತ್ತು ಹುಣಸೆಮರ

​ಪ್ರಜಾವಾಣಿ ವಾರ್ತೆ
Published 27 ಮೇ 2017, 19:30 IST
Last Updated 27 ಮೇ 2017, 19:30 IST
ಚೆನ್ನಿ, ಚಂದ್ರಿ ಮತ್ತು ಹುಣಸೆಮರ
ಚೆನ್ನಿ, ಚಂದ್ರಿ ಮತ್ತು ಹುಣಸೆಮರ   

ಚಂದ್ರಿ ಮತ್ತು ಚೆನ್ನಿ ಅಕ್ಕತಂಗಿಯರು. ಬಹಳಾನೆ ಚುರುಕಾದ ಹುಡುಗಿಯರು. ಒಂದು ದಿನ ಇವರಿಬ್ರೂ ಆಟ ಆಡ್ತಾ ಆಡ್ತಾ ಮನೆ ಹಿತ್ತಲಿಗೆ ಬಂದರು. ಹಿತ್ತಲಲ್ಲಿ ಇದ್ದ ಹುಣಸೆ ಮರದ ಕೆಳಗೆ ಕುಂಟೆಬಿಲ್ಲೆ ಆಡಲು ಶುರುಮಾಡಿದರು. ಅಷ್ಟರಲ್ಲಿ ಚೆನ್ನೀಗೆ ಹುಣಸೆ ಹಣ್ಣು ತಿನ್ನಬೇಕು ಅನ್ನಿಸಿತು. ‘ಲೇ ಅಕ್ಕಾ, ನನಗೆ ಹುಣಸೆ ಹಣ್ಣು ತಿನ್ನಬೇಕಾಗಿದೆ, ಕಿತ್ತು ಕೊಡೆ’ ಅಂದಳು. ಆಗ ಚಂದ್ರಿ, ‘ಆಯ್ತು ತಡಿಯೆ. ಯಾವಾಗಲೂ ನಿನಗೆ ಇದೇ ಗೋಳು. ಹುಣಸೆ ಹಣ್ಣು ಚೀಪೋದು, ನಾಲಿಗೆ ಉರೀತಿದೆ ಅನ್ನೋದು’ ಎಂದು ಗೊಣಗುತ್ತಾ ಹುಣಸೆ ಮರದಲ್ಲಿ ನೇತಾಡುತ್ತಿದ್ದ ಒಂದೆರಡು ಹುಣಸೆ ಹಣ್ಣನ್ನ ಕಿತ್ತು ಚೆನ್ನಿ ಕೈಗೆ ಕೊಟ್ಟಳು. ಚೆನ್ನಿ ಹುಣಸೆ ಹಣ್ಣನ್ನು ತಿನ್ನುತ್ತ ‘ಅಹಾ ಎಷ್ಟು ಚೆನ್ನಾಗಿದೆ ಅಕ್ಕಾ’ ಎಂದು ಹುಣಸೆಯ ರುಚಿಯನ್ನು ಸವಿಯುತ್ತಿರುವಾಗಲೆ ‘ಗುಳುಕ್’ ಅನ್ನೋ ಸದ್ದು ಬಂತು. ಒಂದು ಕ್ಷಣ ಚೆನ್ನಿ ಸುಮ್ಮನೆ ಬಿಟ್ಟ ಕಣ್ಣು ಬಿಟ್ಟಂಗೆ ನಿಂತುಬಿಟ್ಟಳು.

ಇವಳು ಹಾಗೆ ಸುಮ್ಮನೆ ನಿಂತದ್ದನ್ನು ನೋಡಿ ಚಂದ್ರಿ – ‘ಲೇ ಚೆನ್ನಿ ಅದ್ಯಾಕೆ ಹಂಗೇ ನಿಂತಿದ್ದೀಯ’ ಎಂದು ಎಚ್ಚರಿಸಿದಳು. ದಡಕ್ಕನೆ ಎಚ್ಚರಗೊಂಡು ಚೆನ್ನಿ ಗಾಬರಿಯಿಂದ, ‘ಅಕ್ಕಾ ನಾನು ಹುಣಸೆಹಣ್ಣಿನ ಬೀಜವನ್ನ ನುಂಗಿಬಿಟ್ಟೆ’ ಎಂದಳು. ಅದಕ್ಕೆ ಚಂದ್ರಿ ‘ಅಷ್ಟೇ ತಾನೆ, ಅದಕ್ಯಾಕೆ ಅಷ್ಟೊಂದು ಗಾಬರಿಯಾಗ್ತೀಯ. ನಾಳೆ ನಿನ್ನ ಹೊಟ್ಟೇಲಿ ಹುಣಸೆ ಮರ ಬೆಳಿಯುತ್ತೆ. ಆವಾಗ ನೀನು ಎಷ್ಟು ಬೇಕಾದರೂ ಹುಣಸೆಹಣ್ಣು ಕಿತ್ತುಕೊಂಡು ತಿನ್ನಬಹುದು. ಬಿಡು, ಯಾಕೆ ಚಿಂತೆ ಮಾಡ್ತೀಯಾ’ ಅಂದಳು. ಹಾಗೆಂದವಳೇ ಚಂದ್ರಿಗೆ ಅವಳಮ್ಮ ಹೇಳಿದ್ದ ಕೆಲಸದ ನೆನಪಾಗಿ, ಕೆಲಸ ಮಾಡಿಲ್ಲ ಅಂದ್ರೆ ಬೈಸ್ಕೋಬೇಕಾಗುತ್ತೆ ಎಂದು ಗೊತ್ತಿದ್ದರಿಂದ ಮನೆಯ ಒಳಗೆ ಓಡಿದ್ಲು.

ಅಷ್ಟರಲ್ಲಾಗಲೇ ಚೆನ್ನಿಗೆ ಒಳಗೊಳಗೇ ಒಂಥರ ಭಯ ಶುರುವಾಗಿಬಿಟ್ಟಿತ್ತು. ನನ್ನೊಳಗೆ ಹುಣಸೆ ಮರ ಬೆಳೆದುಬಿಟ್ಟರೆ ಏನಪ್ಪಾ ಮಾಡೋದು ಅಂತ ಮನಸ್ಸಲ್ಲೇ ಅನ್ಕೋತಾ ಹಾಗೇನೆ ಹಿತ್ತಲಲ್ಲಿದ್ದ ಒಂದು ಕಲ್ಲಿನ ಮೇಲೆ ಕುಳಿತಳು. ತನ್ನ ಮೊಳಕಾಲಿನ ಮೇಲೆ ಮೊಳಕೈ ಇಟ್ಟುಕೊಂಡ್ಲು. ಅಂಗೈನ್ನು ಕೆನ್ನೆಗೆ ಆಸರೆಯಾಗಿ ಒತ್ತಿ ಚಿಂತಿಸುತ್ತಿರಬೇಕಾದರೆ; ಅವಳ ತಲೆಯಿಂದ ಒಂದು ಹುಣಸೆಮರ ಬೆಳೆದೇಬಿಟ್ಟಿತು. ತಲೆಯ ಮೇಲೆ ಏನೋ ಓಡಾಡಿದಂತಾಗಿ ತನ್ನ ಕೈಯಿಂದ ತಲೆಯನ್ನು ಮುಟ್ಟಿ ನೋಡಿಕೊಳ್ಳುತ್ತಾಳೆ – ಹುಣಸೆಮರ. ಚೆನ್ನಿ ತಕ್ಷಣವೇ ಆ ಹುಣಸೆಮರವನ್ನು ಜೋರಾಗಿ ತಲೆಯಿಂದ ಕಿತ್ತು ಹಿತ್ತಲಲ್ಲೇ ಒಂದು ಕಡೆ ಮಣ್ಣಲ್ಲಿ ನೆಟ್ಟಳು. ನೆಡುತ್ತಿದ್ದಂತೆಯೇ ಹುಣಸೆಮರ ದೊಡ್ಡದಾಗಿ ಬೆಳೆದುಬಿಟ್ಟಿತು.

ADVERTISEMENT

ನೋಡುನೋಡುತ್ತಿದ್ದಂತೆಯೇ ಗಿಡದ ತುಂಬೆಲ್ಲ ಹುಣಸೆ ಹಣ್ಣುಗಳು ಮೂಡಿದವು. ಚೆನ್ನಿಗೆ ಅವುಗಳನ್ನು ನೋಡಿ ಬಾಯಲ್ಲಿ ನೀರೂರಿತು. ಹುಣಸೆಹಣ್ಣನ್ನು ಕೀಳಲು ಮರ ಹತ್ತುವುದು ಹೇಗೆಂದು ಯೋಚಿಸುತ್ತಿರುವಾಗಲೇ ಮರದ ಬುಡದಲ್ಲಿ ಮೆಟ್ಟಿಲುಗಳು ಕಾಣಿಸಿದವು. ಚೆನ್ನಿಗೆ ಸಂತೋಷವೋ ಸಂತೋಷ. ಅವಳು ಹಣ್ಣುಗಳನ್ನು ಕಿತ್ತುಕೊಳ್ಳಲು ಮೆಟ್ಟಿಲುಗಳನ್ನು ಹತ್ತಿದಳು. ಮೆಟ್ಟಿಲುಗಳು ಮರದ ತುದಿಯವರೆಗೂ ಬಂದು, ಹಾಗೆಯೇ ಅವುಗಳು ಮೋಡಗಳನ್ನೂ ದಾಟಿ ಆಕಾಶದವರೆಗೂ ಹಬ್ಬಿದ್ದವು. ಚೆನ್ನಿ ಮೆಟ್ಟಿಲುಗಳನ್ನು ಹತ್ತುತ್ತಲೇ ಹೋದಳು ಹಾಗೆಯೇ ಮೇಲೆ, ಮೇಲೆ, ಮೇಲೆ...

ಚೆನ್ನಿ ಖುಷಿಯಿಂದ ಮೆಟ್ಟಿಲುಗಳನ್ನು ಹತ್ತುತ್ತಲೇ ಇದ್ದಳು. ಅವಳಿಗೆ ಆಕಾಶದಲ್ಲಿ ತೇಲಾಡುವ ಅನುಭವ ಮೋಜೆನಿಸುತ್ತಿತ್ತು. ಹಾಗೆಯೇ ಬಹಳ ದೂರದವರೆಗೂ ಅವಳು ಮೆಟ್ಟಿಲುಗಳನ್ನು ಏರುತ್ತಲೇ ಇದ್ದಳು. ಇದ್ದಕ್ಕಿದ್ದಂತೆ ಅವಳ ಕಣ್ಣೆದುರು ‘ಧುಥ್’ ಎಂದು ಒಂದು ಅರಮನೆ ಪ್ರತ್ಯಕ್ಷವಾಯಿತು. ಚೆನ್ನಿ ಕಣ್ಣರಳಿಸಿ ನೋಡುತ್ತಾಳೆ – ಥಳಥಳ ಹೊಳೆಯುವ ಶುಭ್ರವಾದ, ಸುಂದರವಾದ ಗಾಜಿನ ಅರಮನೆ ಕಾಣಿಸಿತು. ಕಾಲಿಡಲೋ ಬೇಡವೋ ಎನ್ನುತ್ತ ನಿಧಾನಕ್ಕೆ ಒಳಗಡೆ ಹೋದಳು. ಅಲ್ಲಿ ಚಂದ್ರ ನಕ್ಷತ್ರಗಳಿಂದ ಅಲಂಕರಿಸಿದ ತೂಗುಮಂಚ ಕಾಣಿಸಿತು. ಆ ತೂಗುಮಂಚದಲ್ಲಿ ಮೋಡದಿಂದಲೇ ಮಾಡಿದ ಮೆತ್ತೆ(ದಿಂಬು)ಗಳಿದ್ದವು. ಚೆನ್ನಿ ತೂಗುಮಂಚದಲ್ಲಿ ಕುಳಿತು ತೂಗಿಕೊಳ್ಳುತ್ತ ಮೈಮರೆತಳು.

ಹಾಗೆಯೇ ಬಹಳ ಹೊತ್ತಾದ ನಂತರ ಅರಮನೆಯನ್ನೆಲ್ಲಾ ಒಮ್ಮೆ ಸುತ್ತಿ ನೋಡೋಣ ಎನಿಸಿತು. ತೂಗುಮಂಚದಿಂದ ಎದ್ದು ಅಲ್ಲಿಯ ಎಲ್ಲ ಕೊಠಡಿಗಳನ್ನು ನೋಡಿಕೊಂಡು ನಿಧಾನವಾಗಿ ಬರುತ್ತಿರಲು ಅವಳಿಗೊಂದು ಕಿಟಕಿ ಕಾಣಿಸಿತು. ಅವಳು ಕಿಟಕಿಯಿಂದ ಕೆಳಗೆ ಬಗ್ಗಿ ನೋಡುತ್ತಾಳೆ. ಭೂಮಿ ಒಂದು ಸಣ್ಣ ಮೂಸಂಬಿ ಹಣ್ಣಿನ ಹಾಗೆ ಕಾಣುತ್ತಿದೆ. ಅವಳ ಹೃದಯ ಢವಢವ ಎಂದು ಹೊಡೆದುಕೊಳ್ಳಲು ಶುರು ಮಾಡಿತು.

‘ಅಯ್ಯೋ ಇದೇನಿದು?! ನಾನು ಇಷ್ಟು ಮೇಲಕ್ಕೆ ಬಂದಿದ್ದೀನಲ್ಲ, ಇನ್ನ ವಾಪಸ್ಸು ಹೋಗೋದು ಹೆಂಗಪ್ಪ’ ಎಂದು ಅಂದುಕೊಳ್ಳುತ್ತಿರುವಾಗಲೇ ಅವಳು ಹತ್ತಿ ಬಂದಿದ್ದ ಮೆಟ್ಟಿಲುಗಳು ಕಣ್ಣಿಗೆ ಬಿದ್ದವು. ಚೆನ್ನಿ ತಡಮಾಡಲಿಲ್ಲ. ಬೇಗ ಬೇಗನೆ ಮಟ್ಟಿಲುಗಳನ್ನು ಇಳಿಯಲು ಪ್ರಾರಂಭಿಸಿದಳು. ಅವುಗಳು ಆಕಾಶದಲ್ಲಿನ ಅರಮನೆಯಿಂದ ಶುರುವಾಗಿ, ಮೋಡಗಳಲ್ಲಿ ಹಾದು ಕೊನೆಗೆ ಹುಣಸೆ ಮರದ ಬುಡದಲ್ಲಿ ಬಂದು ಕೊನೆಗೊಂಡವು.

ಚೆನ್ನಿ ಮರದಿಂದ ಕೆಳಗಿಳಿದು ಉಸ್ಸಪ್ಪಾ ಎಂದು ಜೋರಾಗಿ ಒಮ್ಮೆ ಉಸಿರು ಬಿಟ್ಟಳು. ಅವಳಿಗೆ ಮೆಟ್ಟಿಲು ಇಳಿದೂ ಇಳಿದು ಸುಸ್ತಾಗಿತ್ತು. ಸ್ವಲ್ಪ ನೀರಾದ್ರೂ ಕುಡಿಯೋಣ ಎಂದು ಹಿತ್ತಲ ಬಾಗಿಲು ಇದ್ದ ಕಡೆ ತಿರುಗಿದಳು. ಇನ್ನೇನು ಅವಳು ಮನೆಯ ಒಳಗೆ ಕಾಲು ಇಡಬೇಕು ಅನ್ನುವಷ್ಟರಲ್ಲಿಯೇ ‘ಚೆನ್ನಿ..., ಏ ಚೆನ್ನಿ... ನೀನೊಬ್ಬಳೆ ಮನೆ ಒಳಗೆ ಹೋಗ್ತೀಯ? ನಾನೂ ಬರ್ತೀನಿ. ನನ್ನನ್ನು ಕರಕೊಂಡು ಹೋಗು’ ಎಂದು ದುಂಬಾಲು ಬಿದ್ದಿತು ಹುಣಸೆ ಮರ. ಚೆನ್ನಿಗೆ ಫಜೀತಿಗಿಟ್ಟುಕೊಂಡಿತು.

‘ಅಯ್ಯೋ ಇದೇನಪ್ಪಾ, ತಲೆ ಮೇಲಿದ್ದ ಹುಣಸೆಮರಾನಾ ಮಣ್ಣಲ್ಲಿ ಇಟ್ನಲ್ಲ ಸದ್ಯ ಮುಗೀತು ಅಂದರೆ ಮತ್ತೆ ಇದು ನನ್ನ ತಲೆ ಮೇಲೇನೆ ಬರೋ ಹಾಗೆ ಕಾಣ್ತಾ ಇದೆಯಲ್ಲಾ’ ಅಂದುಕೊಳ್ಳುವಷ್ಟರಲ್ಲೇ ಹುಣಸೆಮರ ಬಂದು ಚೆನ್ನಿ ತಲೆ ಮೇಲೆ ಕೂತೇಬಿಟ್ಟಿತು. ಚೆನ್ನಿ ಜೋರಾಗಿ ಕಿರುಚಲು ಶುರುಮಾಡಿದಳು. ‘ಅಮ್ಮಾ ನನ್ ತಲೆ ಮೇಲೆ ಹುಣ್ಸೆಮರ, ಅಮ್ಮಾ ನನ್ ತಲೆ ಮೇಲೆ ಹುಣ್ಸೆಮರ’ ಎಂದು.

‘ಏನ್ ಹುಡುಗಿಯರೋ ಏನೋ ಸರಿಯಾದ ಸಮಯಕ್ಕೆ ಊಟ ಮಾಡೊಲ್ಲ, ಮೂರು ಹೊತ್ತೂ ಆಟಾನೆ ಇವರಿಗೆ’ ಎಂದು ಚೆನ್ನಿಯ ಅಮ್ಮ ಗೊಣಗುತ್ತ ಚೆನ್ನಿಯನ್ನು ಕರೆಯಲು ಹಿತ್ತಲಿಗೆ ಬಂದರು.

ಅಮ್ಮನ ಧ್ವನಿ ಕೇಳಿದ್ದೆ ತಡ ಚೆನ್ನಿ ವಾಸ್ತವಕ್ಕೆ ಬಂದಳು. ಎದುರಿಗೆ ಅಮ್ಮ ಮತ್ತು ಅಕ್ಕ ಚಂದ್ರಿ ನಿಂತಿರುವುದು ಕಂಡಿತು. ಅಮ್ಮನನ್ನು ನೋಡಿದ್ದೇ ತಡ ‘ಅಮ್ಮ..., ನನ್ನ ತಲೆ ಮೇಲೆ ಹುಣಸೆಮರ ಬೆಳೆದಿತ್ತು, ನಿನ್ನ ನೋಡಿದ್ದೆ ತಡ, ‘ಥಟ್ ಅಂತ ಮಾಯಾ ಆಗೋಯ್ತು ನೋಡಮ್ಮ’ ಎನ್ನುತ್ತ ಅಮ್ಮನನ್ನು ಅಪ್ಪಿಕೊಂಡಳು. ಅಮ್ಮನ ಜೊತೆಯಲ್ಲೆ ಇದ್ದ ಚಂದ್ರಿ, ಚೆನ್ನಿಯನ್ನು ನೋಡಿ ಕಣ್ಣು ಮಿಟುಕಿಸಿ ತುಂಟ ನಗೆ ಬೀರಿದಳು.

‘ಎಲ್ಲೋ ಆಟ ಆಡುವ ಸಮಯದಲ್ಲಿ ಬೆಚ್ಚಿ ಬಿದ್ದಿರಬಹುದು’ ಎಂದು ಚೆನ್ನಿಯ ಅಮ್ಮ ಮನಸ್ಸಲ್ಲೇ ಅಂದುಕೊಂಡು, ‘ನಡಿಯಮ್ಮ, ಎಷ್ಟು ಹೊತ್ತಿನಿಂದ ನಿನ್ನ ಊಟಕ್ಕೆ ಕರೀತಾನೆ ಇದ್ದೀನಿ’ ಎಂದು ಮಗಳನ್ನು ಮುದ್ದಿಸುತ್ತ ಮನೆಯ ಒಳಗೆ ಕರೆದುಕೊಂಡು ಹೋದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.