ADVERTISEMENT

ಜಾಲಿ ಮುಳ್ಳು ಮತ್ತು ಅವ್ವನ ಕರುಣೆ

​ಪ್ರಜಾವಾಣಿ ವಾರ್ತೆ
Published 11 ಮಾರ್ಚ್ 2017, 19:30 IST
Last Updated 11 ಮಾರ್ಚ್ 2017, 19:30 IST
ಚಿತ್ರ: ಮದನ್‌ ಸಿ.ಪಿ
ಚಿತ್ರ: ಮದನ್‌ ಸಿ.ಪಿ   

ನಮ್ದು ಹೈದರಾಬಾದ್ ಕರ್ನಾಟಕದ ಬಿಸಿಲನಾಡಿನ ಕಡುಬಡತನ ಮನೆತನದ ಫ್ಯಾಮಿಲಿ. ಬಾಲ್ಯದಲ್ಲಿ ನನ್ನವ್ವನ ಲಾಲನೆ–ಪಾಲನೆ, ಕಷ್ಟ–ಕಾರ್ಪಣ್ಯಗಳು ಕಹಿ–ಮಧುರ ಗೀತೆಗಳಾಗಿದ್ದವು. ದಿನಂಪ್ರತಿ ಊಟಕ್ಕೆ ಅನ್ನ–ರೊಟ್ಟಿ ಕುಚ್ಚಲಿಕ್ಕೆ ಕಟ್ಟಿಗೆ ಬೇಕೇ ಬೇಕು! ಅದು ಕರಿ ಜಾಲಿ ಮರದ ಕಟ್ಟಿಗೆ.

ನನಗೆ ಐದನೇ ಕ್ಲಾಸ್‌ನಿಂದ ಮೆಟ್ರಿಕ್ ಹಂತದವರೆಗೂ ಆ ಜಾಲಿಗಿಡದ ಕಟ್ಟಿಗೆಯೊಂದಿಗೆ ಅವಿನಾಭಾವ ಸಂಬಂಧವಿತ್ತು. ಕಟ್ಟಿಗೆ ಕಡಿಯಲಿಕ್ಕೆ ಗೆಳೆಯರ ಜೊತೆ ಜಾತ್ರೆಗೆ ಹೋಗೋ ರೀತಿ ಹೋಗುತ್ತಿದ್ದೆ. ಹರಕು ಟವಲ್, ಗೋಣಿಹಗ್ಗ, ತಂಗ್ಳು ಬುತ್ತಿ ಕಟ್ಕೊಂಡು, ಮಾಗಿ ಚಳಿಗಾಲದ್ಯಾಗ ಗದಗದ ನಡುಗುತ್ತ, ಬೆಳಗ್ಗೆ ಹೈವೇ ದಾಟಿದರೆ ಎಲ್ಲಿ ನೋಡಿದರಲ್ಲಿ ಜಾಲಿಗಿಡದ ಸಾಲುಗಳೇ ಗೋಚರಿಸುತ್ತಿದ್ದವು.

‘ನನಗೆ ಅದು, ನಿನಗೆ ಇದು’ ಎಂದು ಓಡೋಡಿ ಕಡಿಯಲು ಶುರು ಮಾಡೋದೇ ತಡ – ಕೈಗೊಂದು ಮುಳ್ಳು, ಕಾಲಿಗೊಂದು ಪಿಕ್ ಜಾಲಿ ಮುಳ್ಳು ಚುಚ್ಚುತ್ತಿದ್ದವು. ‘ಯಾವ್ವಾ’ ಅಂಥ ಮನದಲ್ಲೇ ಚೀರಿ, ಕಟ್ಟಿಗೆ ಕಡಿದು ಹಗ್ಗ ಬಿಗಿಮಾಡಿ ಅರ್ಧಂಬರ್ಧ ಉಂಡು, ಅವಸರದಾಗ ತೆಲಿಮ್ಯಾಗ ಒತ್ಕೊಂಡಾಗ ಸಣ್ ಸಣ್ಣ ಮುಳ್ಳುಗಳು ತೆಲೆಗೆ ಚುಚ್ಚುತ್ತಿದ್ದವು.

ಮನಿಗೆ ಬಂದ ತಕ್ಷಣ ಅವ್ವ ಪೀರುತಿಯ ಮುದ್ದು ಮಾಡಿ ನೀರುಕೊಟ್ಟು – ಮುಳ್ಳು ಚುಚ್ಚುದ ಕೈಗೆ ಬಿಸಿಕಾವು, ಕಾಲಿಗೆ ಅರಿಶಿನ ಪುಡಿ, ಬೆಂಕಿಗೆ ಕಾಯಿಸಿದ ಸುಡ ಉಳ್ಳಾಗಡ್ಡಿ ಮಿಶ್ರಣ ಮಾಡಿ ಕಟ್ಟಿದ್ರೆ ಕ್ಷಣಾರ್ಧದಲ್ಲೇ ನೋವು ಮಾಯ! ಅವಳ ಮಮತೆಯ ಆಮೃತದ ಔಷಧವದು.

ಮತ್ತೆದೇ ರಾಗ, ಅದೇ ಹಾಡು... ನಸುಕಿನಲ್ಲೇ ಎದ್ದು ಕರೀ ಜಾಲಿಗಿಡದ ಸ್ನೇಹ. ನಂತರ ಶಾಲಿ ಸಂಗ. ಆ ದಿನಗಳನ್ನು ನೆನಪಿಸಿಕೊಂಡಾಗ ಅನ್ನಿಸುವುದು:
ಹನಿ–ಹನಿ ಇಬ್ಬನಿ
ಜಾಲಿಗಿಡದ ಕಹಾನಿ
ನನ್ನವ್ವನ ಮನಸ್ಸು ಮಾಹಾಮನಿ!
–ಡಿ. ರೇವುಹರ್ಷ, ಉಜ್ಜಿನಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT