ADVERTISEMENT

ತೂಬು

ಗೋಪಿನಾಥ ರಾವ್
Published 15 ಮಾರ್ಚ್ 2014, 19:30 IST
Last Updated 15 ಮಾರ್ಚ್ 2014, 19:30 IST
ತೂಬು
ತೂಬು   

ಬಚ್ಚಲುಮನೆಯ ತೂಬಿನೊಳಗಿಂದ ಒಂದು ಇಲಿ ಹೊರಗೋಡಿದ್ದನ್ನು ಕಾಣುತ್ತಲೇ ಸಾವಿತ್ರಿ ಹೆದರಿ ಮಹದೇವಪ್ಪನವರನ್ನು ಕೂಗಿ ಕರೆದಳು. ‘‘ಒಂದು ಇಲಿ ಅಲ್ಲಿಂದ ಹೊರಗೆ ಹೋಯಿತು, ಪುನಃ ಒಳಗೆ ಬರುತ್ತಾ ಅಂತ ನನಗೆ ಹೆದರಿಕೆ..’’ ಥರ ಥರ ನಡುಗುತ್ತಿದ್ದಳಾಕೆ.

ಪರಿಸರವಾದಿಗಳ ತೃತೀಯ ಅಖಿಲ ಭಾರತ ಸಮ್ಮೇಳನದ ಡಾಕ್ಯುಮೆಂಟುಗಳನ್ನು ಜೋಡಿಸಿಕೊಂಡು ಹೊರಡುವ ಗಡಿಬಿಡಿಯಲ್ಲಿದ್ದ ಮಹದೇವಪ್ಪ ಒಮ್ಮೆ ಬಚ್ಚಲುಮನೆಗೆ ಬಂದು ಅಲ್ಲಿ ಇಲ್ಲಿ ನೋಡಿ, ಏನೂ ಮಾತಾಡದೇ ಹಿಂದೆ ಹೋಗುವಾಗ ಮಂಚದ ಮೇಲೆ ಹತ್ತಿ ನಿಂತಿದ್ದ ಸಾವಿತ್ರಿಯನ್ನು ನೋಡಿ "ಇಲಿ ಬಂದುದಕ್ಕೇ ಇಷ್ಟು, ಎಲ್ಲಾದ್ರೂ ಹುಲಿ ಬಂದರೆ ಏನು ಮಾಡುತ್ತಿ? ಕೆಳಗೆ ಇಳಿ" ಎಂದು ಕಿಚಾಯಿಸಿ ತಮ್ಮ ಕೆಲಸಕ್ಕೆ ಮರಳಿದರು. ಸ್ವಲ್ಪ ಹೊತ್ತು ಹಾಗೇ ನಿಂತಿದ್ದ ಸಾವಿತ್ರಿ ಕೊನೆಗೊಮ್ಮೆ ಧೈರ್ಯ ಮಾಡಿ ಮಂಚದಿಂದ ಕೆಳಗಿಳಿದವಳೇ ಓಡಿಹೋಗಿ ಬಚ್ಚಲುಮನೆಯ ಬಾಗಿಲು ಹಾಕಿ ಚಿಲಕ ಸಿಕ್ಕಿಸಿದಳು.

ಪುನಃ ಮಂಚ ಹತ್ತಿ ಸ್ವಲ್ಪ ಹೊತ್ತು ಕುಳಿತು ಸಾವರಿಸಿಕೊಂಡು ಇದಕ್ಕೆ ಇನ್ನೇನು ಮಾಡುವುದು ಕೇಳೋಣ ಅಂತ ಆಕೆ ಹೊರಗೆ ಬಂದರೆ ಮಹದೇವಪ್ಪ ಆಗಲೇ ಹೊರಟುಹೋಗಿದ್ದರು. ಮಂತ್ರಿಗಳು ಹಾಜರಿರುವ ಸಮ್ಮೇಳನದ ಉದ್ಘಾಟನೆಯಲ್ಲಿ ಭಾಗವಹಿಸಬೇಕಿದ್ದ ಸಂಘಟಕರಲ್ಲೊಬ್ಬರಾದ ಮಹದೇವಪ್ಪರಿಗೆ ಇಲಿ ಕಂಡು ಹೆದರಿದ ಹೆಂಡತಿಗೆ ಸಾಂತ್ವನ ಹೇಳುವಷ್ಟು ಪುರುಸೊತ್ತೆಲ್ಲಿದೆ! ಸಾವಿತ್ರಿಗೆ ಭಯವಾಯಿತು. ಮನೆಯಲ್ಲಿ ತಾನೊಬ್ಬಳೇ..! ಮನೆಯ ಹೊರಗೇ ನಿಂತಿದ್ದ ಸಾವಿತ್ರಿಯನ್ನು ಮಾತಾಡಿಸಿ ವಿವರ ತಿಳಿದ ಹತ್ತಿರದ ಮನೆಯ ಜಾನಕಮ್ಮ "ಇಲಿಯ ಹಿಂದೆ ಹಿಂದೆ ಹಾವು ಅಂತಾರೆ.. ಸ್ವಲ್ಪ ಜಾಗ್ರತೆಯಾಗಿರಿ" ಅಂದದ್ದು ಆಕೆಯ ಭಯದ ಬೆಂಕಿಗೆ ತುಪ್ಪವಾಯಿತು.

"ಕಾಳಿಂಗ ಸರ್ಪ ಭಾರತೀಯ ಉಪಖಂಡದಲ್ಲಿ ಮಾತ್ರ ಕಂಡುಬರುವ ವಿಶಿಷ್ಟವಾದ ಸರ್ಪ. ಕೆದಕಿದಾಗ ನೇರವಾಗಿ ಸೆಟೆದು ನಿಲ್ಲುವುದು ಇದರ ಪ್ರತ್ಯೇಕತೆ. ಇವುಗಳ ಸಂತತಿಯೂ ಇದೀಗ ವಿನಾಶದೆಡೆಗೆ ತಲುಪುತ್ತಿದೆ. ಭಾರತದಲ್ಲಿ ಹಲವೆಡೆ ಇವುಗಳ ಸಂತತಿವೃದ್ಧಿಯ ಪ್ರಯತ್ನಗಳು ನಡೆಯುತ್ತಿವೆ. ಸರ್ಪ ಜಾತಿಯ ಅತ್ಯಂತ ವಿಷಕಾರಿ ಪ್ರಭೇದಗಳಲ್ಲಿ ಎಣಿಸಲ್ಪಟ್ಟರೂ ಕಾಳಿಂಗ ಸರ್ಪ ಮಾನವನಿಗೆ ಕಚ್ಚಿದ್ದು ಕಡಿಮೆ, ಸೆಟೆದು ನಿಂತು ಮಾನವನನ್ನು ಹೆದರಿಸಿದ್ದು ಜಾಸ್ತಿ.." ಮಹದೇವಪ್ಪ ತನ್ನ ಪ್ರಬಂಧ ಮಂಡಿಸುತ್ತಿದ್ದರು.

ಥಾಯ್ಲೆಂಡಿನಲ್ಲಿ ಮುಂದಿನ ಬೇಸಗೆಯಲ್ಲಿ ವಿಶ್ವ ಸರ್ಪ ಸಮ್ಮೇಳನ ಇದೆ, ಭಾರತದಿಂದ ಒಂದಿಬ್ಬರಿಗೆ ಸಮ್ಮೇಳನಕ್ಕೆ ಹೋಗುವ ಅವಕಾಶ ಇದೆ ಎಂಬುದನ್ನು ಮೊದಲೇ ಅರಿತಿದ್ದ ಮಹದೇವಪ್ಪ ತಮ್ಮ ಪ್ರಬಂಧಕ್ಕೆ ಉದ್ದೇಶಪೂರ್ವಕವಾಗಿಯೇ ಕಾಳಿಂಗ ಸರ್ಪವನ್ನು ಆಯ್ಕೆಮಾಡಿಕೊಂಡಿದ್ದರು. ಪರಿಸರವಾದಿಗಳ ಸಮ್ಮೇಳನಕ್ಕೆ ಬಂದಿದ್ದ ಹಲವು ಸರ್ಕಾರಿ ಅಧಿಕಾರಿಗಳ ಎದುರು ತಾನು ಸರ್ಪ ಸಮ್ಮೇಳನಕ್ಕೆ ಹೋಗಲು ಸೂಕ್ತ ವ್ಯಕ್ತಿ ಎಂಬುದನ್ನು ಸಾಬೀತು ಪಡಿಸುತ್ತಿದ್ದಾರೇನೋ ಎಂಬಂತೆ ಅವರ ಪ್ರಬಂಧ ಮಂಡನೆ ಸಾಗುತ್ತಿತ್ತು. ಇದಕ್ಕಾಗಿ ಅವರು ಅದೆಷ್ಟು ತಯಾರಿ ಮಾಡಿದ್ದರು!

ಬಚ್ಚಲುಮನೆಗೆ ಬಾಗಿಲು ಹಾಕಿಟ್ಟಿದ್ದನ್ನು ಒಂದೆರಡು ಬಾರಿ ನೋಡಿ ಧೈರ್ಯ ಹೆಚ್ಚಿಸಿಕೊಂಡು ಅಡುಗೆಮನೆಗೆ ಬಂದಳು ಸಾವಿತ್ರಿ. ದಿನ ಪೂರ್ತಿ ನಡೆಯುವ ಸಮ್ಮೇಳನ, ರಾತ್ರಿ ಅತಿಥಿಗಳೊಂದಿಗೆ ಪಾರ್ಟಿ ಬೇರೆ ಉಂಟು.. ನಾನು ಮಧ್ಯಾಹ್ನವೂ ಇಲ್ಲ, ರಾತ್ರಿ ಊಟಕ್ಕೂ ಇಲ್ಲ. ರಾತ್ರಿ ನಾನು ಬರುವುದನ್ನೂ ಕಾಯಬೇಡ... ಎಲ್ಲ ಮುಗಿಸಿ ಬರುವಾಗ ಬಹಳ ಹೊತ್ತಾದೀತು, ಬೀಗ ಹಾಕಿ ಮಲಗಿಕೋ" ಮಹದೇವಪ್ಪ ನಿನ್ನೆಯೇ ಸೂಚನೆ ನೀಡಿದ್ದರು. ಒಬ್ಬಳಿಗೇ ಏನು ದೊಡ್ದ ಅಡುಗೆ ಮಾಡೋದು? ಸುಮ್ಮನೆ ಒಂದಿಷ್ಟು ಅನ್ನ ಮತ್ತೊಂದು ಸಾರು ಮಾಡಿದರೆ ಮಧ್ಯಾಹ್ನಕ್ಕೂ ರಾತ್ರಿಗೂ ಅದೇ ಸಾಕು. ಅಡುಗೆಯದ್ದೇನೂ ದೊಡ್ದ ವಿಷಯವಲ್ಲ... ಈಗ ಮುಗಿಯುತ್ತದೆ.

ಆದರೆ ಸ್ನಾನ ಮಾಡೋದು ಹೇಗೆ? ಬಚ್ಚಲುಮನೆಯ ಹತ್ತಿರ ಹೋಗಲೂ ಹೆದರಿಕೆ. .. ಆದರೂ ಬಾಗಿಲಿಗೆ ಕಿವಿಗೊಟ್ಟು ಒಳಗಿಂದ ಏನಾದರೂ ಸದ್ದು ಬರುತ್ತೇನೋ ಆಲಿಸಿದಳು. ಎನೂ ಇಲ್ಲ... ಮೆಲ್ಲಗೆ ಬಾಗಿಲು ತೆರೆದರೆ ಹೇಗೆ? ಹಾಗೆ ಯೋಚಿಸುತ್ತಲೇ ಕುಕ್ಕರ್ "ಕ್ರೀ" ಅಂದಾಗ ಸಾವಿತ್ರಿ ಬೆಚ್ಚಿಬಿದ್ದಳು. ‘ಥೂ.. ಅದಕ್ಕೂ ಈಗಲೇ ಶಿಳ್ಳೆ ಹೊಡೆಯಬೇಕಿತ್ತೇ...! ದಿನಾ ಕೇಳುವ ಶಿಳ್ಳೆಗೂ ಹೆದರುವಷ್ಟು ಅಂಜುಬುರುಕಿಯೇ ತಾನು?’

ಮಧ್ಯಾಹ್ನ ಊಟಕ್ಕೆ ಮೊದಲು ನಿಗದಿಯಾಗಿದ್ದ ಪ್ರಶ್ನೋತ್ತರ ಕಾರ್ಯಕ್ರಮದಲ್ಲಿ ಮಹಾಶಯರೊಬ್ಬರು ಮಾತು ಆರಂಭಿಸಿ "ಪರಿಸರವಾದ ಎಂದರೆ ಪರಿಸರದ ಸಮತೋಲನ ಕಾಯ್ದುಕೊಳ್ಳುವ ಶ್ರಮ. ಆದಷ್ಟು ಮಟ್ಟಿಗೆ ಮಾನವ ಪ್ರಾಕೃತಿಕ ಸಮತೋಲನದಲ್ಲಿ ಕೈಯಾಡಿಸುವುದನ್ನು ತಡೆಹಿಡಿಯುವುದು ನಮ್ಮ ಗುರಿ. ಹೀಗಿರುವಾಗ ಒಮ್ಮೆಗೆ ಇಪ್ಪತ್ತರಿಂದ ನಲ್ವತ್ತು ಮೊಟ್ಟೆಗಳನ್ನಿಟ್ಟು ಮರಿಮಾಡಬಲ್ಲ ಕಾಳಿಂಗದಂಥಾ ಸರ್ಪಗಳನ್ನು ಕ್ಯಾಪ್ಟಿವಿಟಿಯಲ್ಲಿ ಬೆಳೆಸಿ ಕಾಡಲ್ಲಿ ಬಿಡುವುದು ಎಷ್ಟು ಸೂಕ್ತ? ಸಣ್ಣ ಸಣ್ಣ ಹಾವುಗಳು, ಕಪ್ಪೆ ಹಾಗೂ ಮತ್ತಿತರ ಸಣ್ಣಪುಟ್ಟ ಜಂತುಗಳನ್ನು ತಿನ್ನುವ ಕಾಳಿಂಗ ಸರ್ಪಗಳನ್ನು ಬೃಹತ್ ಪ್ರಮಾಣದಲ್ಲಿ ಬೆಳೆಸಿ ಕಾಡಿಗೆ ಬಿಡುವುದರಿಂದ ಸಮತೋಲನಕ್ಕೆ ಭಂಗ ಬರುವುದಿಲ್ಲವೇ? ಈ ಭೂಮಿಯಲ್ಲಿ ಕಪ್ಪೆಗಳಿಗೂ ಬದುಕುವ ಅವಕಾಶ ಇದೆ.

ದಿನನಿತ್ಯ ಕಾಣಸಿಗುತ್ತಿದ್ದ ಅದೆಷ್ಟೋ ಜಾತಿಯ ಕಪ್ಪೆಗಳು ಮಾಯವಾಗಿವೆ. ಸರ್ಕಾರ ಅಲ್ಪಜ್ಞಾನಿಗಳ ಮಾತು ಕೇಳದೆ ಈ ಬಗ್ಗೆಯೂ ಸೂಕ್ತ ಅಧ್ಯಯನ ನಡೆಸಬೇಕಿದೆ" ಪರಿಸರವಾದಿಗಳ ಸಮ್ಮೇಳನದಲ್ಲಿ ಕಪ್ಪೆಗಳ ಮೇಲಿನ ತನ್ನ ಪ್ರಬಂಧ ಮಂಡನೆಗೆ ಅವಕಾಶ ದೊರೆಯದೇ ಇದ್ದುದಕ್ಕೆ ಮಹದೇವಪ್ಪನವರೇ ಕಾರಣ ಎಂದು ಬಗೆದು ಸುತ್ತುಬಳಸಿ ಮಹದೇವಪ್ಪನವರನ್ನು ಗುರಿಯಾಗಿಸಿಕೊಂಡು ಸರ್ಕಾರಕ್ಕೇ ಛೀಮಾರಿ ಹಾಕಿ ತಮ್ಮ ಸಿಟ್ಟು ಇಳಿಸಿಕೊಂಡರು.

ಬಚ್ಚಲುಮನೆಯ ಬಾಗಿಲು ತೆರೆದು ಸ್ನಾನ ಮಾಡುವುದೋ ಅಥವಾ ಟಾಯ್ಲೆಟ್ಟಿನಲ್ಲೇ ಒಂದು ಬಕೆಟ್ ನೀರನ್ನು ತನ್ನ ಮೇಲೆ ಸುರುವಿಕೊಂಡು ಸ್ನಾನದ ಶಾಸ್ತ್ರ ಮುಗಿಸುವುದೋ ಎಂಬ ಗೊಂದಲಕ್ಕಿಳಿದ ಸಾವಿತ್ರಿ ಕೊನೆಗೊಮ್ಮೆ ಅಷ್ಟು ಸಣ್ಣ ಇಲಿಗೆ ಇಷ್ಟೆಲ್ಲ ಹೆದರಬಾರದು. ಬಚ್ಚಲುಮನೆಯಲ್ಲೇ ಸ್ನಾನ ಮಾಡುತ್ತೇನೆ, ಏನಾಗುತ್ತೋ ನೋಡಿಯೇಬಿಡೋಣ ಎಂದು ಧೈರ್ಯ ಮಾಡಿ, ಒಳಗೊಳಗೇ ಹುಟ್ಟಿಬರುತ್ತಿದ್ದ ಹೆದರಿಕೆಯ ಎಳೆಗಳನ್ನು ಅಲ್ಲೇ ಚಿವುಟಿಹಾಕಿ ಮೆಲ್ಲನೆ ಬಚ್ಚಲುಮನೆಯ ಬಾಗಿಲು ತೆರೆದು ಒಳಗೆ ಇಣುಕಿದಳು.

ಸಾಕಷ್ಟು ಬೆಳಕಿದ್ದರೂ ಲೈಟು ಹಾಕಿ ನಾಲ್ಕೂ ಕಡೆ ನೋಡುತ್ತಾ ಒಂದೊಂದೇ ಹೆಜ್ಜೆ ಮುಂದಿಡುತ್ತಾ ಬಂದಳು. ಎಲ್ಲೂ ಇಲಿ ಕಾಣಿಸಲಿಲ್ಲ. ಧೈರ್ಯ ಮಾಡಿ ಮೂಲೆಯಲ್ಲಿ ಮಹದೇವಪ್ಪ ಒಗೆಯಲೆಂದು ಬಿಚ್ಚಿ ಹಾಕಿದ್ದ ಬಟ್ಟೆಗಳನ್ನು ಒಂದೊಂದಾಗಿ ಎರಡೇ ಬೆರಳುಗಳಲ್ಲಿ ಹಿಡಿದು ಕೈಗೆತ್ತಿಕೊಂಡಳು. ನಲ್ಲಿಯ ಕೆಳಗಿದ್ದ ಬಕೆಟನ್ನು ಕಾಲಲ್ಲಿ ಅತ್ತ ಸರಿಸಿದಳು. ಅಲ್ಲೇ ಇನ್ನೊಂದು ಮೂಲೆಯಲ್ಲಿದ್ದ ಪೊರಕೆಯನ್ನು ಕೂಡ ಸ್ಥಾನಪಲ್ಲಟ ಮಾಡಿದಳು.. ಎಲ್ಲೆಲ್ಲೂ ಇಲಿಯಿಲ್ಲ ಎಂಬುದು ದೃಢವಾಗುತ್ತಿದ್ದಂತೆ ಆಕೆಗೆ ತಾನಿನ್ನು ಸ್ನಾನ ಮಾಡಬಹುದೆಂಬ ಧೈರ್ಯ ಬಂತು.

ಕೈಯಲ್ಲಿದ್ದ ಬಟ್ಟೆಗಳನ್ನು ಬಕೆಟೊಂದರಲ್ಲಿ ಹಾಕಿ ಹೊರಗಿರಿಸಿ ಜಡೆ ಎತ್ತಿ ತುರುಬಿನಂತೆ ಮೇಲೆ ಕಟ್ಟಿ ಬಾತ್ ಟವೆಲ್ ಗೂಟಕ್ಕೆ ನೇತು ಹಾಕಿ ಬಚ್ಚಲುಮನೆಯ ಬಾಗಿಲು ಮುಚ್ಚುತ್ತಿರುವಾಗ ಹೊಸತೊಂದು ಯೋಚನೆ ತಲೆಗೆ ಬಂತು.. ಮನೆಯಲಿ ಯಾರೂ ಇಲ್ಲವಲ್ಲ.. ಬಾಗಿಲು ಹಾಕಿಕೊಳ್ಳುವ ಅವಶ್ಯಕತೆಯೇನಿದೆ?
"ಸರ್ ಅಭಿನಂದನೆಗಳು. ತುಂಬಾ ಅಧ್ಯಯನ ನಡೆಸಿ ಪ್ರಬುದ್ಧ ಪ್ರಬಂಧ ಬರೆದಿದ್ದೀರಿ.

ಪರಿಸರವಾದಿ ಎನ್ನುವುದರ ಜೊತೆಗೆ ಉರಗವಾದಿ ಅಂತಲೂ ನಿಮ್ಮನ್ನು ಕರೆಯಬಹುದು ಸರ್" ಊಟದ ಟೇಬಲ್ಲಿನ ಬಳಿ ಕುಳಿತು ಶ್ಲಾಘಿಸಿದವರೆಡೆಗೆ ಮಂದಹಾಸ ಬೀರಿ ಮಹದೇವಪ್ಪ ಸರ್ಕಾರಿ ಅಧಿಕಾರಿಗಳಿದ್ದ ಊಟದ ಟೇಬಲ್ಲಿನತ್ತ ವೇಗದ ಹೆಜ್ಜೆ ಹಾಕುತ್ತಿದ್ದರು. ರಾಜ್ಯ ಪರಿಸರ ಖಾತೆಯ ಸಹ ಕಾರ್ಯದರ್ಶಿಯವರು "ಊಟದ ಸಮಯದಲ್ಲಿ ಬನ್ನಿ, ದೆಹಲಿಯಿಂದ ಬಂದ ಕೇಂದ್ರ ಪರಿಸರ ಖಾತೆಯ ಕಾರ್ಯದರ್ಶಿಯ ಪರಿಚಯ ಮಾಡಿಕೊಡುತ್ತೇನೆ" ಅಂದಿದ್ದರು.

ಸಹ ಕಾರ್ಯದರ್ಶಿ ಮಹದೇವಪ್ಪನವರನ್ನು ಪರಿಚಯ ಮಾಡಿಕೊಡುತ್ತ "ಇವರು ಈ ಪರಿಸರದ ಪ್ರತಿಭಾವಂತ ಉರಗಶಾಸ್ತ್ರಜ್ಞ.." ಎಂದೆಲ್ಲ ಹೇಳಿದಾಗ ಕೇಂದ್ರ ಕಾರ್ಯದರ್ಶಿಯವರು "ಹೌದಾ.. ಒಳ್ಳೇದು.. ಕೋಬ್ರದ ಬಗ್ಗೆ ನೀವು ಮಾತನಾಡುವಾಗ ಒಂದು ವಿಷಯ ನೆನಪಾಗಿ ನಿಮ್ಮನ್ನು ಕೇಳಬೇಕು ಅಂದುಕೊಂಡಿದ್ದೆ.. ಹೋದಲ್ಲಿ ಬಂದಲ್ಲಿ ಊಟಕ್ಕೆ ಚಿಕನ್, ಮಟನ್, ಬೀಫ್ ತಿಂದು ತಿಂದು ಸಾಕಾಗಿ ಹೋಗಿದೆ.. ಬೇರೆ ದೇಶಗಳಲ್ಲಿ ಹಾವುಗಳನ್ನು ಸುಲಿದು ಬೇಯಿಸಿ ಮಸಾಲೆ ಹಾಕಿ ಚಪ್ಪರಿಸಿ ತಿನ್ನುತ್ತಾರಲ್ಲ, ಹಾಗೆ ನಮ್ಮಲ್ಲಿಯ ಯಾವ ಹಾವುಗಳನ್ನಾದರೂ ತಿನ್ನಬಹುದಾ? ಭಾರತದಲ್ಲಿ ಎಲ್ಲಾದ್ರೂ ಯಾವ ಜನಾಂಗದವರಾದ್ರೂ ತಿನ್ನುತ್ತಾರ?" ಕೇಳಿದರು.

ಅನಿರೀಕ್ಷಿತ ಪ್ರಶ್ನೆಗೆ ಗಲಿಬಿಲಿಗೊಂಡರೂ ಸಾವರಿಸಿಕೊಂಡು ಮಹದೇವಪ್ಪ "ಆ ಬಗ್ಗೆ ನಾನು ಹೆಚ್ಚು ಓದಿಲ್ಲ ಸರ್.. ವಿವರ ಕಲೆಹಾಕಿ ನಿಮಗೆ ಒಂದೆರಡು ದಿನಗಳಲ್ಲಿ ಇಮೇಲ್ ಮಾಡುತ್ತೇನೆ." ಎಂದರು. "ಬೇಸಗೆಯಲ್ಲಿ ಥಾಯ್ಲೆಂಡಿನ ಸರ್ಪ ಸಮ್ಮೇಳನಕ್ಕೆ ನಾನು ಹೋಗುವುದು ಅಂತ ತೀರ್ಮಾನ ಮಾಡಿದ್ದೇನೆ. ಅಲ್ಲಿ ಬಹಳ ರುಚಿಕರವಾದ ಹಾವಿನ ಮಾಂಸದ ಅಡುಗೆ ಮಾಡುತ್ತಾರಂತೆ, ಒಮ್ಮೆ ರುಚಿ ನೋಡಬೇಕು. ಇನ್ನೊಂದು ಗೊತ್ತಾ? ಅಲ್ಲೆಲ್ಲೋ ಸ್ನೇಕ್ ಬ್ಲಡ್ ವೈನ್ ಕೂಡ ಸಿಗುತ್ತದಂತೆ. ಅದಕ್ಕೆ ಹೆಚ್ಚುಕಡಿಮೆ ವಯಾಗ್ರದಷ್ಟೇ ಪವರ್ ಇದೆಯಂತೆ.. ಸಾಧ್ಯವಾದರೆ ಥಾಯ್ಲೆಂಡಿಗೆ ನಿಮ್ಮನ್ನೂ ಕರೆದುಕೊಂಡು ಹೋಗುತ್ತೇನೆ, ಸ್ವಲ್ಪ ತಯಾರಿ ಮಾಡಿಕೊಂಡಿರಿ. ಬರೇ ಕೋಬ್ರಾ ಮಾತ್ರ ಸಾಲದು.. ಎಲ್ಲ ಭಾರತೀಯ ಹಾವುಗಳ ಸಮಗ್ರ ಚಿತ್ರಣ ಬೇಕು.." ಅನ್ನುತ್ತ ಆತ ಊಟದಲ್ಲಿ ಮಗ್ನರಾದರು.

ನಲ್ಲಿಯ ಎದುರಿದ್ದ ಬಕೆಟನ್ನು ಇನ್ನೊಮ್ಮೆ ಆಚೀಚೆ ಸರಿಸಿ ಇಲಿ ಇಲ್ಲವೆಂದು ಖಾತ್ರಿ ಪಡಿಸಿ ನೀರು ತುಂಬಿಸಿಕೊಂಡು ಸ್ನಾನಕ್ಕೆಂದು ಬಟ್ಟೆ ಕಳಚುವುದಕ್ಕೆ ಆರಂಭಿಸಿದಾಗ ಸಾವಿತ್ರಿಗೆ ಏನೋ ಕಸಿವಿಸಿ. ಬಾಗಿಲು ತೆರೆದಿಟ್ಟೇ ಸ್ನಾನ ಮಾಡುವುದೇ! ಬಾಗಿಲು ಭದ್ರಪಡಿಸಿದರೆ ಸ್ನಾನದ ನಡುವಲ್ಲಿ ಎಲ್ಲಿಯಾದರೂ ಇಲಿ ಕಾಣಿಸಿದರೆ! ಹೊರಗೆ ಓಡಲು ಕಷ್ಟ. ತನ್ನ ಧೈರ್ಯವೇನಿದ್ದರೂ ಇಲಿ ಕಾಣಿಸದಿದ್ದಾಗ ಮಾತ್ರ. ಎಷ್ಟೇ ಧೈರ್ಯ ಹೇರಿಕೊಂಡರೂ ಇಲಿ ಪ್ರತ್ಯಕ್ಷವಾದ ಪಕ್ಷದಲ್ಲಿ ಕೈಕಾಲು ನಡುಗದೇ ನಿಲ್ಲಬಲ್ಲೆನೇ ಎನ್ನುವುದು ಇನ್ನೂ ಸಂದೇಹವೇ. ಬಾಗಿಲು ತೆರೆದಿಟ್ಟೇ ಸ್ನಾನಕ್ಕಿಳಿದಳು ಸಾವಿತ್ರಿ. ಅರ್ಧಸ್ನಾನವಾಗುತ್ತಿದ್ದಂತೆ ಸೋಪಿನ ನೀರು ತೂಬಿನಿಂದ ಹೊರಗೆ ಹೋಗದೆ ಬಚ್ಚಲುಮನೆಯಲ್ಲಿ ಕೃತಕ ನೆರೆ ಬಂದಿತ್ತು.

ನೀರು ಹೊರಗೆ ಹೋಗದಂತೆ ತೂಬಲ್ಲಿ ಇಲಿ ತಡೆಯೊಡ್ಡುತ್ತಿದೆಯೇ? ನೀರಿನ ಪ್ರವಾಹ ಬಂದಾಗ ಇಲಿ ಯಾಕೆ ಹೊರಗೋಡಿಲ್ಲ? ತೂಬಿನ ಆಚೆ ಬದಿಯಲ್ಲಿ ಹಾವೇನಾದರೂ ಹೊಂಚು ಹಾಕಿ  ಕಾಯುತ್ತಿದೆಯೇ? ಆಚೆ ಹೋಗಲಾಗದೆ ಇಲಿ ಅಲ್ಲೇ ಇದ್ದರೆ ನೀರು ತುಂಬಿ ಉಸಿರು ಕಟ್ಟಿ ಇನ್ಯಾವ ಕ್ಷಣದಲ್ಲಾದರೂ ಪುನಃ ತೂಬಿನಿಂದ ಒಳಗೆ ಓಡಿ ಬರಬಹುದು.. ಹಿಂದೆಯೇ ಹಾವೂ... ಅಷ್ಟು ತಲೆಗೆ ಬರುತ್ತಲೇ ಹೌಹಾರಿದ ಸಾವಿತ್ರಿ ಅಲ್ಲೇ ಇದ್ದ ಪೊರಕೆಯನ್ನು ತೂಬಿನ ಬಾಯಿಗೆ ಮುಚ್ಚಿ ಭದ್ರಪಡಿಸಿದಳು.

ಲಗುಬಗೆಯಿಂದ ಸ್ನಾನ ಮುಗಿಸಿ ಬಟ್ಟೆತೊಟ್ಟುಕೊಂಡಳು. ಇಡೀ ಬಚ್ಚಲುಮನೆಯಲ್ಲಿ ತುಂಬಿದ್ದ ನೆರೆಗೆ ತನ್ನ ಪೊರಕೆಯೂ ಕಾರಣವಾಗಿರುವುದನ್ನು ಗಮನಿಸಿದ ಸಾವಿತ್ರಿ ಮೆಲ್ಲನೆ ಪೊರಕೆ ಹಿಂದೆಳೆದು ಒಂದೇ ಉಸಿರಿನಲ್ಲಿ ಬಚ್ಚಲುಮನೆಯಿಂದ ಹೊರ ಬಂದು ಬಾಗಿಲು ಭದ್ರ ಪಡಿಸಿ ನಿಟ್ಟುಸಿರು ಬಿಟ್ಟಳು. ಹೇಗೂ ಸ್ನಾನ ಮುಗಿಯಿತಲ್ಲ ಸದ್ಯಕ್ಕೆ!

ಊಟದ ವಿರಾಮ ಮುಗಿದು ಪುನಃ ಸಮ್ಮೇಳನದಲ್ಲಿ ಪ್ರಬಂಧ ಮಂಡನೆ ಮುಂದುವರೆದಿತ್ತು. ಎರಡು ಗೋಷ್ಠಿಗಳೂ ಆಯೋಜಿಸಲ್ಪಟ್ಟಿದ್ದವು. ಗೋಷ್ಠಿಗಳಲ್ಲಿ ಎಲ್ಲರೂ ಕೊಟ್ಟಿದ್ದ ಹತ್ತು ನಿಮಿಷಗಳಲ್ಲಿ ತಮ್ಮ ತಮ್ಮ ಮೂಗಿನ ನೇರಕ್ಕೆ ಸರಿಯೆನಿಸಿದ ವಾದಗಳನ್ನು ಮಂಡಿಸಿದರು.

ಸರಿಯೆನಿಸದಿದ್ದವರು ಅವುಗಳನ್ನು ಖಂಡಿಸಿದರು. ಚರ್ಚೆ ಕಾವೇರುತ್ತ ಹೋದಂತೆ ಪರಿಸರವಾದದ ಆವರಣದೊಳಗೆ ಮಾತನಾಡುವವರಿಗೆ ಮಾತ್ರ ಅವಕಾಶ ನೀಡಲಾಯಿತು. ಪರಿಸರವೆಂದರೆ ಬರೇ ಪ್ರಾಣಿಪಕ್ಷಿಗಳು ಮಾತ್ರವಲ್ಲ.. ನದಿ, ನೀರು, ಮರಳು, ಖನಿಜ, ಗಾಳಿ, ಮರ, ಗಿಡ ಇವೆಲ್ಲವನ್ನೂ ಪರಿಗಣನೆಗೆ ತೆಗೆದುಕೊಳ್ಳಬೇಕು ಎಂದೊಬ್ಬರು ಗಂಭೀರವಾಗಿ ವಾದ ಮಂಡಿಸಿದಾಗ ಯಾರೋ ಇನ್ನೊಬ್ಬರು ಹಗುರವಾಗಿ "ಪರಿಗಣಿಸದೆ ಯಾವುದನ್ನು ಬಿಡಬಹುದು ಅದನ್ನು ಹೇಳಿ" ಅಂದಾಗ ಎಲ್ಲರೂ ಗೊಳ್ಳೆಂದು ನಕ್ಕರು. ಮಾತಿಗೆ ಮಾತು ಜೋರಾಯಿತು.. ಮಹದೇವಪ್ಪ ನಡುವೆ ಪ್ರವೇಶಿಸಿ ವಾತಾವರಣ ತಿಳಿಗೊಳಿಸಿದರು.

"ಹೈವೇಯಿಂದಾಗಿ ನಮ್ಮೂರಲ್ಲಿ ಸಣ್ಣ ಸಣ್ಣ ಮಳೆಗೂ ಶಾಶ್ವತ ನೆರೆ ಬರುತ್ತಿದೆ, ನಮಗೆ ಕೆಲವು ದೋಣಿಗಳನ್ನು ಮಂಜೂರು ಮಾಡಿಸಿ" ಎಂದು ಒಬ್ಬರು ಗೋಗರೆದರು. ಪರಿಸರ ಸಮ್ಮೇಳನ ದಿಕ್ಕು ತಪ್ಪುತ್ತಿದೆ ಎಂದು ಯಾರೋ ಆಕ್ಷೇಪಿಸಿದಾಗ ಎದ್ದು ನಿಂತ ಇನ್ನೊಬ್ಬರು, "ಸಮ್ಮೇಳನ ಅಲ್ಲ ಸ್ವಾಮೀ, ಪರಿಸರವಾದವೇ ದಿಕ್ಕು ತಪ್ಪುತ್ತಿದೆ" ಅಂದರು!

ಡೋರ್ ಬೆಲ್ ಸದ್ದಿಗೆ ಗಡಿಬಿಡಿಯಿಂದ ಎದ್ದಳು ಸಾವಿತ್ರಿ. ನೋಡಿದರೆ ಜಾನಕಮ್ಮ. "ಮನೆಯ ಸುತ್ತ ನೋಡು.. ಪೊದೆ, ಬಲೆ, ಕಸಕಡ್ಡಿ, ಒಣಗಿದ ಎಲೆ ಎಲ್ಲ ಬಿದ್ದಿವೆ. ಇಲಿ, ಹೆಗ್ಗಣ, ಹಾವು, ಓತಿ, ಕಪ್ಪೆ ಇವಕ್ಕೆಲ್ಲ ಇದೇ ಕಾರಣ.. ನಮ್ಮ ಡ್ರೈವರ್ ವಾಸು ಬಂದಿದ್ದಾನೆ. ಚಹಾಕ್ಕೆ ಹತ್ತು ರುಪಾಯಿ ಕೊಟ್ಟು ಬಿಡು, ಎಲ್ಲಾ ಸವರಿ ಕ್ಲೀನ್ ಮಾಡಿ ರಾಶಿ ಹಾಕಿ ಬೆಂಕಿಕೊಟ್ಟು ಬೂದಿ ಮಾಡಿ ಹೋಗ್ತಾನೆ. ಮಾಡಲಿಕ್ಕೆ ಹೇಳಲಾ?" ಜಾನಕಮ್ಮ ಸೂಚಿಸಿದಾಗ ಸಾವಿತ್ರಿ ತಲೆಯಾಡಿಸಿ ಒಪ್ಪಿಗೆ ನೀಡಿದಳು. "ವಾಸು, ಇಲ್ಲೆಲ್ಲ ಸ್ವಲ್ಪ ಕ್ಲೀನ್ ಮಾಡಪ್ಪಾ" ಅಲ್ಲಿಂದಲೇ ಕೂಗಿ ಕರೆದರು ಜಾನಕಮ್ಮ. ಶರ್ಟು ಕೈ ಮೇಲೇರಿಸಿ, ಪ್ಯಾಂಟು ಎರಡು ಪಟ್ಟಿ ಮಡಚಿ ಎಡಗೈಯಲ್ಲಿ ಕೋಲು, ಬಲಗೈಯಲ್ಲಿ ಕತ್ತಿ ಹಿಡಿದು ಬಂದ ವಾಸು ಕಾಂಪೌಂಡಿನ ಒಂದು ಮೂಲೆಯಿಂದ ಕೆಲಸ ಆರಂಭಿಸಿದ.

"ಅಕ್ಕಾವ್ರೇ.. ಯಾವ ಯಾವ ಗಿಡ-ಬಳ್ಳಿ ಬೇಕಾದ್ದು, ಕಡೀಬಾರ್ದು ಅಂತ ನೋಡಿ ಹೇಳಿ ನನಗೆ" ಅಂದಾಗ ಸಾವಿತ್ರಿ ಅಂಗಳಕ್ಕಿಳಿದು ಒಂದೊಂದಾಗಿ ಬೇಕಿದ್ದ ಗಿಡಗಳನ್ನು ತೋರಿಸುತ್ತ ಮನೆಯ ಹಿಂದೆ ಬಂದಳು. ಬಚ್ಚಲುಮನೆಯ ತೂಬಿಗೆ ಸಿಕ್ಕಿಸಿದ್ದ ಪೈಪು ಕೊಳಚೆನೀರನ್ನು ಬಾಳೆಗಿಡವೊಂದಕ್ಕೆ ಬಿಡುತ್ತಿತ್ತು. ಕೊಳಚೆ ನೀರಾದರೂ ಪೋಲಾಗಬಾರದು, ಗಿಡಗಳಿಗೆ ಹರಿಯಬಿಡಬೇಕು ಅನ್ನುವ ಮಹದೇವಪ್ಪನವರ ಪರಿಸರವಾದದ ಫಲಶ್ರುತಿ.. ಪೈಪಿನ ಕೊನೆಯಲ್ಲಿ ಈಗಲೂ ನೀರು ತೊಟ್ಟಿಕ್ಕುತ್ತಿತ್ತು.

"ಆ ಪೈಪೇನಾದರೂ ಬ್ಲಾಕಾಗಿದೆಯಾ ನೋಡಿ" ಸಾವಿತ್ರಿ ಹೇಳಿದಾಗ ವಾಸು ಆ ಪೈಪನ್ನು ಅಲುಗಿಸಿ ಎಳೆದು ತೆಗೆದ. ತೂಬಿನಿಂದ ರಭಸಕ್ಕೆ ಬಂದ ಕೊಳಚೆ ನೀರು ಗೋಡೆಯ ಬಳಿ ಹೊರಗೆ ಚಿಮ್ಮಿತು. ವಾಸು ಕೈಯಲ್ಲಿದ್ದ ಪೈಪಿನೊಳಗೆ ಇಣುಕಿದ. "ಇದು ಪೂರ್ತಿ ಬ್ಲಾಕಾಗಿದೆ" ಎನ್ನುತ್ತ ತನ್ನ ಕೋಲು ತೆಗೆದು ಪೈಪಿನೊಳಗೆ ತೂರಿಸಿ ಕಸಕಡ್ಡಿ, ಕೂದಲು, ಕಲ್ಲುಮಣ್ಣು ಎಲ್ಲವನ್ನೂ ಹೊರಕ್ಕೆ ತೆಗೆದ. ಪೈಪಿನೊಳಗೆ ಇನ್ನೇನೂ ಇಲ್ಲ ಎಂದು ಖಾತರಿ ಪಡಿಸಿಕೊಂಡು ಅದನ್ನು ತೂಬಿಗೆ ಮೊದಲಿದ್ದಂತೆ ಸಿಕ್ಕಿಸಿದ. "ಇದರ ಮೂತಿಗೆ ಪ್ಲಾಸ್ಟಿಕ್ ಬಲೆ ಕಟ್ಟಿಬಿಡುತ್ತೇನೆ.

ಇಲ್ಲಾಂದ್ರೆ ಕಪ್ಪೆ, ಹಾವು ಒಳಗೆ ಬಂದಾವು..." ಎನ್ನುತ್ತ ಬಲೆಯ ತುಂಡೊಂದನ್ನು ಪೈಪಿನ ಮೂತಿಗೆ ಕಟ್ಟಿದ. "ಇಲ್ನೋಡಿ.. ಹಾವಿನ ಪೊರೆ" ಎನ್ನುತ್ತ ಅಲ್ಲೇ ಬಿದ್ದಿದ್ದ ಪೊರೆಯನ್ನೆತ್ತಿ ಆತ ಕಸದ ರಾಶಿಗೆ ಹಾಕುವಾಗ ಸಾವಿತ್ರಿಯ ಮೈ ಜುಂ ಎಂದಿತು. ಕಸಕ್ಕೆ ಬೆಂಕಿ ಹಾಕಿ, ಹಣ ಪಡೆದು, ಆತ ಹೊರಟು ಹೋದ. ಮನೆಯೊಳಗೆ ಬಂದ ಸಾವಿತ್ರಿ ಬಚ್ಚಲುಮನೆಯ ನೆರೆ ಖಾಲಿಯಾಗಿದೆಯಾ ನೋಡಲು ಒಳಗೆ ಇಣುಕಿದಳು. ಕಂಡದ್ದು ತೂಬಿನ ಬಳಿಯಲ್ಲಿ ಒದ್ದೆಯಾಗಿ ಮುದ್ದೆಯಾಗಿ ಕುಳಿತ ಇಲಿ! ಒಂದೇ ಉಸಿರಲ್ಲಿ ಬಚ್ಚಲುಮನೆಯ ಬಾಗಿಲೆಳೆದು ಚಿಲಕ ಹಾಕಿ ಯಥಾ ಪ್ರಕಾರ ಮಂಚ ಏರಿದ್ದಳು ಸಾವಿತ್ರಿ! ಮೊದಲಬಾರಿಗೆ ತಾನು ಮಾತ್ರ ಅಲ್ಲ, ಇಲಿಯೂ ಹೆದರಿಕೊಂಡಿದೆ ಪಾಪ.. ಅನ್ನಿಸಿತ್ತವಳಿಗೆ!

ಸಂಜೆ ಸಮಾರೋಪ ಭಾಷಣ ಮಾಡುತ್ತಾ ಕೇಂದ್ರ ಕಾರ್ಯದರ್ಶಿಯವರು "ಮಾನವನಿಗೆ ತನ್ನ ಜೀವನ ಸುಗಮಗೊಳಿಸಿಕೊಳ್ಳಲು ನೈಸರ್ಗಿಕ ಸಂಪತ್ತನ್ನು ಬಳಸಿಕೊಳ್ಳುವ ಅಧಿಕಾರ ಇದೆ, ಮನೆಯಿಲ್ಲದವರಿಗೆ ಕಟ್ಟಿಕೊಳ್ಳುವ ಅಧಿಕಾರ ಇದೆ. ಅದಕ್ಕೆ ಸಿಮೆಂಟು, ಕಬ್ಬಿಣ, ಮರ, ಮರಳು ಇವೆಲ್ಲ ಬೇಕು, ಮನೆಗೆ ವಿದ್ಯುತ್, ನೀರು ಬೇಕು. ನಮಗೆಲ್ಲ ರಸ್ತೆ ಬೇಕು, ರೈಲು ಬೇಕು.. ಇವನ್ನೆಲ್ಲ ಹೊಂದಿಸಿಕೊಡುವಾಗ ಸ್ವಲ್ಪಮಟ್ಟಿನ ಪರಿಸರ ಹಾನಿ ಇದ್ದೇ ಇರುತ್ತೆ, ಅದನ್ನೇ ದೊಡ್ಡದು ಮಾಡಬಾರದು..

ಸರಕಾರ ಇವೆಲ್ಲವನ್ನು ಪರಿಗಣಿಸಿಯೇ ನಿಯಮಗಳನ್ನು ರೂಪಿಸುತ್ತದೆ. ಹಣದಾಸೆಗಾಗಿ ಕೆಲವರು ನಿಯಮಗಳನ್ನು ಮೀರಿ ನಡೆದುಕೊಳ್ಳುತ್ತಾರೆ. ಅಂತಹ ಸಂದರ್ಭಗಳಲ್ಲಿ ಸರಕಾರಕ್ಕೆ ಮಾಹಿತಿ ನೀಡಿ ಪರಿಸರ ನಾಶವನ್ನು ತಪ್ಪಿಸಬೇಕು. ಪರಿಸರವಾದದ ಹೆಸರಿನಲ್ಲಿ ಕೆಲವರು ಬೆಳಿಗ್ಗೆ ಮಂತ್ರಿಯವರು ಹೇಳಿದ ಹಾಗೆ ಇಲ್ಲಸಲ್ಲದ ಕಾರಣಗಳನ್ನು ಮುಂದಿಟ್ಟು ಅಭಿವೃದ್ಧಿಗೆ ಅಡ್ಡಿಯಾಗುತ್ತಿದ್ದಾರೆ.. ಅದನ್ನು ಬಿಟ್ಟು ನಿಜವಾದ ಪರಿಸರ ರಕ್ಷಣಾ ಕಾರ್ಯದಲ್ಲಿ ಸರ್ಕಾರವನ್ನು ಬೆಂಬಲಿಸಬೇಕು... ನೈಸರ್ಗಿಕ ಸಂಪತ್ತನ್ನು ಉಳಿಸುತ್ತ, ಬೆಳೆಸುತ್ತ, ಹಿತಮಿತವಾಗಿ ಬಳಸಿಕೊಳ್ಳುವುದೇ ನಿಜವಾದ ಪರಿಸರವಾದ" ಎಂದೆಲ್ಲ ಹೇಳಿ ಪರಿಸರವಾದದ ಸಮ್ಮೇಳನದ ಆಶಯವನ್ನೇ ಸರ್ಕಾರದ ಮೂಗಿನ ನೇರಕ್ಕೆ ತಿರುಗಿಸಿಕೊಂಡರು!

ರಾತ್ರಿಯಾಗುತ್ತ ಬಂದಂತೆ ಸಾವಿತ್ರಿಗೆ ಹೆದರಿಕೆ ಪುನಃ ಶುರುವಾಯಿತು. ಶನಿ ಮುಂಡೇದು.. ಇನ್ನೂ ಅಲ್ಲೇ ಇದೆಯೇನೋ.. ಅದಕ್ಕೆ ಇವತ್ತೇ ದಿನ ಸಿಕ್ಕಬೇಕೆ? ಲೈಟು ಆಫ್ ಮಾಡಲು ಹೆದರಿಕೆ, ಮಾಡದಿದ್ದರೆ ತನಗೆ ನಿದ್ದೆ ಹತ್ತಿರ ಸುಳಿಯುವುದಿಲ್ಲ. ಸಾವಿತ್ರಿ ಮಂಚ ಇಳಿದು ಚಾವಡಿಯ ಸೋಫಾದಲ್ಲಿ ಕಾಲು ಮೇಲೆ ಇಟ್ಟು ಕುಳಿತು ಟಿವಿ ಹಾಕಿದಳು. ‘ಭಾರತದ ವೈಶಿಷ್ಟ್ಯಗಳು’ ಕಾರ್ಯಕ್ರಮದಲ್ಲಿ ಉತ್ತರಭಾರತದ ದೇವಾಲಯವೊಂದನ್ನು ತೋರಿಸುತ್ತಿದ್ದರು.

ದೇವಾಲಯದಲ್ಲಿ ಸುತ್ತುಮುತ್ತೆಲ್ಲ ಇಲಿಗಳು.. ಸಮರ್ಪಣೆಗೆ ಇಟ್ಟ ಸಿಹಿತಿಂಡಿಯನ್ನು ಇಲಿ ತಿಂದ ಮೇಲೆ ದೇವರಪ್ರಸಾದ ಎಂದು ತಿನ್ನುವ ಭಕ್ತರನ್ನು ನೋಡಿ ಸಾವಿತ್ರಿಗೆ ರೋಮ ನಿಮಿರಿ ನಿಂತಿತು. ಭಕ್ತನೊಬ್ಬನ ಮೈಮೇಲೆ ಹರಿದಾಡುವ ಇಲಿಗಳನ್ನು ನೋಡಿ ಸಾವಿತ್ರಿಗೆ ತನ್ನ ಮೈಮೇಲೆಯೇ ಇಲಿ ಬಂದಂತಾಯ್ತು. ಮುಂದೆ ನೋಡಲಾಗದೆ ಚಾನೆಲ್ ಬದಲಿಸಿದಾಗ ಬಂದದ್ದು ಹಾವುಗಳೊಂದಿಗೆ ಇಪ್ಪತ್ತನಾಲ್ಕು ಗಂಟೆ ಮಲಗಿದ ಯುವಕನೊಬ್ಬನ ಸಾಧನೆಯ ಸಾಕ್ಷ್ಯ ಚಿತ್ರ, ವಿವರಣೆ.. ತಲೆ ಚಿಟ್ಟು ಹಿಡಿದಂತೆನಿಸಿ ರಿಮೋಟ್ ತೆಗೆದು ಟಿವಿ ಆಫ್ ಮಾಡಿ ಅಲ್ಲೇ ಕಣ್ಮುಚ್ಚಿಕೊಂಡಳು.

ಸ್ವಲ್ಪ ಹೊತ್ತಲ್ಲಿ ಮೊಬೈಲು ಕಿಣಿಕಿಣಿಸಿದಾಗ ಅರ್ಧ ನಿದ್ರೆಯಲ್ಲಿದ್ದ ಸಾವಿತ್ರಿ ಗಡಬಡಿಸಿ ಎದ್ದಳು. ನೋಡಿದರೆ ಮುಂಬೈನಿಂದ ಅವಳ ಅಕ್ಕ. ಅವಳ ಮಗನ ಸ್ಕೂಲಲ್ಲಿ ಎಲ್ಲರೂ ಪೆಟ್ ಇಟ್ಕೊಂಡಿದ್ದಾರಂತೆ, ಇವನೂ ಇಲಿಗಳನ್ನು ಸಾಕ್ತೀನಿ ಅಂತ ಶುರುವಿಟ್ಟುಕೊಂಡಿದ್ದಾನಂತೆ. "ಮಾರ್ಕೆಟಿಗೆ ಹೋದರೆ ಜೋಡಿಗೆ ಐನೂರರಿಂದ ಐದುಸಾವಿರದವರೆಗೂ ರೇಟು ಹೇಳ್ತಾರೆ. ಯಾವ ಇಲಿ ಪ್ರಭೇದವನ್ನು ಸಾಕುವುದು ಸುಲಭ ಅಂತ ಮಹದೇವನನ್ನು ಕೇಳಿ ಹೇಳು ಅಂತ ಫೋನ್ ಮಾಡಿದ್ದು" ಅಂದಳಾಕೆ.

"ಇಲಿಗಳೂ ಪೆಟ್ ಆಗಲೂ ಸಾಧ್ಯವಾ? ನಾನಿಲ್ಲಿ ಬಚ್ಚಲುಮನೆಗೆ ಇಲಿ ಬಂದದ್ದಕ್ಕೆ ಚಾವಡಿಯಲ್ಲಿ ಕಾಲು ಸೋಫಾದ ಮೇಲಿಟ್ಟು ಕೂತಿದ್ದೀನಿ" ಅಂದಳು ಸಾವಿತ್ರಿ ಸಂಕೋಚದಿಂದ. "ಏನು ಹೇಳೋದೆ, ಅಲ್ಲಿ ಮಾರ್ಕೆಟಲ್ಲಿ ನೋಡಿದ್ರೆ ಚಿಕ್ಕಂದಿನಲ್ಲಿ ನಾವು ಏನೆಲ್ಲ ನೋಡಿ ಹೆದರ್ಕೊಳ್ತಿದ್ವಲ್ಲ, ಅವನ್ನೆಲ್ಲ ಪೆಟ್ ಅಂತ ಮಾರಾಟಕಿಟ್ಟಿದ್ದಾರೆ" ಅಂದಳು ಅಕ್ಕ!    

ಸುಭಿಕ್ಷಾ ಬಾರ್‌ನಲ್ಲಿ ಕಾರ್ಯದರ್ಶಿ ಮತ್ತು ಸಹ ಕಾರ್ಯದರ್ಶಿಯವರ ಜೊತೆ ಇತರ ಸಂಘಟಕರೊಂದಿಗೆ ಮಹದೇವಪ್ಪನವರೂ ಊಟಕ್ಕೆ ಕುಳಿತಿದ್ದರು. ಎರಡೆರಡು ಪೆಗ್ ಇಳಿಸಿಯಾಗಿತ್ತು. "ಪರಿಸರವಾದ ಎನ್ನುವುದು ದೈವನಿಂದೆಗೆ ಸಮ" ಸಹಕಾರ್ಯದರ್ಶಿ ಮಾತು ಆರಂಭಿಸಿದರು.

"ಯಾವುದೇ ಜಾತಿಯಾಗಿದ್ರೂ ಇರಲಿ, ಜಗತ್ತನ್ನು ದೇವರು ನಿಯಂತ್ರಿಸುವುದು ಅನ್ನುವುದನ್ನು ನಂಬುವವರು ನಾವು. ಎಲ್ಲ ಆಗುಹೋಗುಗಳಿಗೂ ದೇವರೇ ಕಾರಣ ಅಂದಮೇಲೆ ಪರಿಸರದ ಅಸಮತೋಲನಕ್ಕೂ ದೇವರೇ ಕಾರಣ. ಪರಿಸರಕ್ಕೆ ಆಗುವ ಹಾನಿ ತಪ್ಪಿಸುತ್ತೇವೆ ಅಂತ ಹೊರಡುವ ನಾವು ಯಾರು? ದೇವರಾ?" ಅಂತ ಅವರ ಮಾತು ಎಲ್ಲೆಲ್ಲೋ ಹೊರಟಾಗ ಕಾರ್ಯದರ್ಶಿಯವರು ಮೆಲ್ಲನೆ "ತಲೆಗೆ ಏರಿದೆ.. ಅವರನ್ನು ಅವರ ರೂಮಿಗೆ ಬಿಟ್ಟು ಬಿಡಿ ಮಹದೇವಪ್ಪ.

ಇನ್ನೊಂದು ಹತ್ತು ನಿಮಿಷದಲ್ಲಿ ನಾವೂ ಮುಗಿಸಿ ಹೊರಟು ಬಿಡ್ತೀವಿ.. ನಿಮ್ಮ ಫೈಲು ದೆಹಲಿಗೆ ಬರಲಿ, ನಾನು ನೋಡ್ಕೊತೀನಿ" ಎಂದಾಗ ಸರಿ ಎನ್ನುತ್ತ ಎದ್ದ ಮಹದೇವಪ್ಪ ಸಹಕಾರ್ಯದರ್ಶಿಯವರನ್ನೂ ಎಬ್ಬಿಸಿ ಹೊಟೆಲಿಗೆ ಹೊರಟರು. ದಾರಿಯುದ್ದಕ್ಕೂ ದೇವರು ಮನಸ್ಸು ಮಾಡಿದರೆ ಏನೆಲ್ಲವನ್ನು ಸರಿದಾರಿಗೆ ತರಬಹುದು ಅನ್ನುವುದನ್ನು ಸಹಕಾರ್ಯದರ್ಶಿ ಪಟ್ಟಿಮಾಡಿ ಹೇಳುತ್ತಿದ್ದರು.

ಸಹಕಾರ್ಯದರ್ಶಿಯವರನ್ನು ಹೊಟೆಲಿಗೆ ಬಿಟ್ಟು ಮನೆಗೆ ಮರಳಿದ ಮಹದೇವಪ್ಪನವರಿಗೆ ಏರಿದ್ದ ನಶೆಯಲ್ಲಿಯೂ ಬೆಳಿಗ್ಗೆ ಸಾವಿತ್ರಿ ಇಲಿ ನೋಡಿ ಹೆದರಿಕೊಂಡದ್ದು ನೆನಪಾಯಿತು. ನಶೆಯ ಕಣ್ಣುಗಳಿಗೆ ಸೋಫಾದಲ್ಲಿ ಕಾಲು ಮೇಲಿಟ್ಟೇ ಕುಳಿತಿದ್ದ ಹೆಂಡತಿಯ ಮಾದಕ ಭಂಗಿ ಮೋಹಕವೆನಿಸಿತು. ಮಹದೇವಪ್ಪನವರಿಗೆ ರಸಿಕತೆ ಉಕ್ಕಿ ಬಂದು ಆಕೆಯ ಗಲ್ಲ ಹಿಡಿದು ನಕ್ಕು "ಇನ್ನೂ ನಿನ್ನ ಇಲಿ ಬಚ್ಚಲುಮನೆಯಲ್ಲೇ ಇದೆಯಾ? ಪರಿಸರವಾದಿಯ ಮನೆಗೆ ಬಂದು ಹೆಂಡತಿಯನ್ನು ಹೆದರಿಸುವ ಅಹಂಕಾರ ತೋರಿಸಿದ ಅದಕ್ಕೆ ತಕ್ಕ ಶಾಸ್ತಿ ಮಾಡುತ್ತೇನೆ.. ಎಲ್ಲಿದೆ ತೋರಿಸು" ಅನ್ನುತ್ತ ಕೈಯಲ್ಲೊಂದು ದೊಣ್ಣೆ ಹಿಡಿದು ಹೋಗಿ ಬಚ್ಚಲುಮನೆಯ ಬಾಗಿಲು ತೆರೆದು ಆಚೀಚೆ ಬಹಳ ಹೊತ್ತು ಹುಡುಕಿದರೂ ಅಲ್ಲೆಲ್ಲಿಯೂ ಅವರಿಗೆ ಇಲಿ ಕಾಣಿಸಲಿಲ್ಲ. ಆದರೆ ದೊಣ್ಣೆಯನ್ನೇ ಆಧಾರವಾಗಿ ಹಿಡಿದು ನಿಂತು ನಶೆಯಲ್ಲಿ ಮುಚ್ಚಿಕೊಳ್ಳುತ್ತಿದ್ದ ಕಣ್ಣುಗಳನ್ನು ಮತ್ತೆಮತ್ತೆ ತೆರೆದು ಸುತ್ತಲೂ ನೋಡುತ್ತಿದ್ದ ಮಹದೇವಪ್ಪರಿಗೆ ಅದೇ ಬಚ್ಚಲುಮನೆಯ ತೂಬು ‘ಅನುಕೂಲ ಪರಿಸರವಾದಿಗಳು’ ಪರಿಸರವಾದಕ್ಕೆ ತೋಡಿದ ದೊಡ್ಡ ಸುರಂಗದಂತೆ ಕಂಡುಬಂತು.

"ಎಲ್ಲಾ ಸಮಸ್ಯೆಗಳಿಗೂ ಇಂತಹ ತೂಬುಗಳೇ ಕಾರಣ" ಎನ್ನುತ್ತ ಕೋಪದಲ್ಲಿ ಕೈಯೆತ್ತಿದ ಮಹದೇವಪ್ಪನವರ ಕೈಯಲ್ಲಿದ್ದ ದೊಣ್ಣೆ ಜಾರಿ ದೇಹ ಮುಗ್ಗರಿಸಿ ಇನ್ನೇನು ಬೀಳುವುದರಲ್ಲಿದ್ದರು. "ಸಂಜೆವರೆಗೂ ಇಲಿ ಅಲ್ಲೇ ಇತ್ತು" ಅನ್ನುತ್ತ ಹೆದರುತ್ತಲೇ ಅವರನ್ನು ಹಿಂಬಾಲಿಸಿಕೊಂಡು ಬಂದಿದ್ದ ಸಾವಿತ್ರಿ ಓಡಿ ಬಂದು ಅವರಿಗೆ ಆಧಾರವಾಗಿ ಹೆಗಲುಕೊಟ್ಟು ಸಾವರಿಸಿಕೊಂಡು ಬೆಡ್‌ರೂಮಿನವರೆಗೆ ನಡೆಸಿತಂದು ಮಲಗಿಸಿದಳು.

ಆ ಸಮಯದಲ್ಲಿ ಸಾವಿತ್ರಿಯ ಎದುರಿಗೆ ಕಾಣಿಸಿಕೊಳ್ಳದೆ ಇಲಿ ದೊಡ್ಡ ಅನಾಹುತವನ್ನು ತಪ್ಪಿಸಿತ್ತು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.