ADVERTISEMENT

ದೂರದೃಷ್ಟಿಯ ಕಾದಂಬರಿಕಾರ ಆರ್ಥರ್ ಸಿ. ಕ್ಲಾರ್ಕ್‌

ಮಿನುಗು ಮಿಂಚು

​ಪ್ರಜಾವಾಣಿ ವಾರ್ತೆ
Published 28 ಜೂನ್ 2014, 19:30 IST
Last Updated 28 ಜೂನ್ 2014, 19:30 IST
ದೂರದೃಷ್ಟಿಯ ಕಾದಂಬರಿಕಾರ ಆರ್ಥರ್ ಸಿ. ಕ್ಲಾರ್ಕ್‌
ದೂರದೃಷ್ಟಿಯ ಕಾದಂಬರಿಕಾರ ಆರ್ಥರ್ ಸಿ. ಕ್ಲಾರ್ಕ್‌   

*ಆರ್ಥರ್‌ ಸಿ. ಕ್ಲಾರ್ಕ್‌ ಯಾರು?
ವೈಜ್ಞಾನಿಕ ಕಥೆಗಳನ್ನು ಇಟ್ಟುಕೊಂಡು ಕೃತಿಗಳನ್ನು ರಚಿಸಿದ ಅಪರೂಪದ ಪ್ರತಿಭೆ ಆರ್ಥರ್‌ ಸಿ. ಕ್ಲಾರ್ಕ್‌. 70ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದ ಅವರು 2008ರಲ್ಲಿ, ತಮ್ಮ 90ನೇ ವಯಸ್ಸಿನಲ್ಲಿ ನಿಧನರಾದರು. ವಿಜ್ಞಾನ ಮತ್ತು ಬಾಹ್ಯಾಕಾಶ ತಂತ್ರಜ್ಞಾನದ ಆಳ–ಅಗಲಗಳನ್ನು ತಿಳಿದುಕೊಂಡಿದ್ದ ಅವರ ಕೃತಿಗಳು ದೂರದೃಷ್ಟಿಯನ್ನು ಹೊಂದಿದ್ದವು.

*ವಿಜ್ಞಾನ ಸಂಬಂಧಿ ಕಾಲ್ಪನಿಕ ಕೃತಿಗಳನ್ನು ಆರ್ಥರ್‌ ಬರೆಯತೊಡಗಿದ್ದು ಹೇಗೆ?
ಇಂಗ್ಲೆಂಡ್‌ನಲ್ಲಿ ಹುಟ್ಟಿದ ಕ್ಲಾರ್ಕ್‌ ಬಾಲಕನಾಗಿದ್ದಾಗಲೇ ವೈಜ್ಞಾನಿಕ ಕಾಲ್ಪನಿಕ ಕಥೆಗಳನ್ನು ಓದುವ ಹವ್ಯಾಸ ಬೆಳೆಸಿಕೊಂಡಿದ್ದರು. ಅಮೆರಿಕದ ವಿಜ್ಞಾನ ಕಥೆಗಳನ್ನು ಒಳಗೊಂಡ ಪುಸ್ತಕಗಳನ್ನು ಖರೀದಿಸಲು ಅವರು ತಮ್ಮ ಪಾಕೆಟ್‌ ಮನಿಯನ್ನು ವಿನಿಯೋಗಿಸುತ್ತಿದ್ದರು. ತಮ್ಮ ಹದಿನೇಳನೇ ವಯಸ್ಸಿನಲ್ಲಿಯೇ ಅವರು ‘ಬ್ರಿಟಿಷ್‌ ಇಂಟರ್‌ಪ್ಲಾನಟರಿ ಸೊಸೈಟಿ’ಯ ಸದಸ್ಯರಾದರು. ಆಮೇಲೆ ಅವರು ಅದರ ಅಧ್ಯಕ್ಷರಾದರೆನ್ನುವುದು ವಿಶೇಷ.‌

*ಕ್ಲಾರ್ಕ್‌ ಬರವಣಿಗೆಯ ವೈಶಿಷ್ಟ್ಯವೇನು?
ಬಾಹ್ಯಾಕಾಶ ತಂತ್ರಜ್ಞಾನ ಹಾಗೂ ಜಾಗತಿಕ ಸಂವಹನದಲ್ಲಿ ಬಾಹ್ಯಾಕಾಶದ ಬಳಕೆಯ ಕುರಿತು ವಿವರಣಾತ್ಮಕವಾದ, ದೂರದೃಷ್ಟಿಯುಳ್ಳ ಸಂಗತಿಗಳನ್ನು ಅವರ ಕೃತಿಗಳು ಒಳಗೊಂಡಿದ್ದವು. ಅವರು ಮೊದಮೊದಲು ಬರೆದ ‘ಇಂಟರ್‌ಪ್ಲಾನೆಟರಿ ಫ್ಲೈಟ್‌’ ಹಾಗೂ ‘ಎಕ್ಸ್‌ಪ್ಲೊರೇಷನ್‌ ಆಫ್‌ ಸ್ಪೇಸ್‌’ ಪುಸ್ತಕಗಳು ಅತ್ಯಧಿಕ ಸಂಖ್ಯೆಯಲ್ಲಿ ಮಾರಾಟವಾದವು. ಬಾಹ್ಯಾಕಾಶ ವಿಜ್ಞಾನಿಗಳು ಹಾಗೂ ಖಗೋಳವಿಜ್ಞಾನಿ ಕಾರ್ಲ್‌ ಸಾಗನ್‌ ಆ ಕೃತಿಗಳಿಂದ ಸ್ಫೂರ್ತಿ ಪಡೆದರು.

ADVERTISEMENT

*ಕ್ಲಾರ್ಕ್‌ ಅವರ ಯಾವ ಚಿಂತನೆ ವಾಸ್ತವ ಕೂಡ ಆಯಿತು?
ಬಾಹ್ಯಾಕಾಶ ತಂತ್ರಜ್ಞಾನ ಶೈಶವಾವಸ್ಥೆಯಲ್ಲಿ ಇದ್ದಾಗಲೇ ಭೂಮಿಗೆ ಹತ್ತಿರದ ಕಕ್ಷೆಗೆ ಭೂಸ್ಥಾಯಿ ಉಪಗ್ರಹಗಳನ್ನು ಉಡಾವಣೆ ಮಾಡಬಹುದು ಎಂದು ಅವರು ಚಿಂತಿಸಿದ್ದರು. ಅಂಥ ಉಪಗ್ರಹಗಳು ಜಾಗತಿಕ ಸಂವಹನಕ್ಕೆ ತುಂಬಾ ಮುಖ್ಯ ಎಂದೂ ಪ್ರತಿಪಾದಿಸಿದ್ದರು. ಸಮಭಾಜಕ ವೃತ್ತದ ಮೇಲ್ಭಾಗವನ್ನು ಅವರ ಗೌರ­ವಾರ್ಥ ‘ಕ್ಲಾರ್ಕ್‌ ಕಕ್ಷೆ’ ಎಂದು ಕರೆಯು­ತ್ತಾರೆ. ‘ಫೌಂಡೇಷನ್ಸ್‌ ಆಫ್‌ ಪ್ಯಾರಡೈಸ್’ (1979) ಎನ್ನುವ ವೈಜ್ಞಾನಿಕ ಕಾಲ್ಪನಿಕ ವಸ್ತುವಿನ ಕಾದಂಬರಿಯಲ್ಲಿ ಅವರು ಕೊಳವೆಯಂಥ ‘ಸ್ಪೇಸ್‌ ಎಲಿವೇಟರ್‌ಗಳು’ (ಬಾಹ್ಯಾಕಾಶ ಉತ್ಥಾನಕಗಳು) ಮುಂದೊಂದು ದಿನ ಅನ್ಯಗ್ರಹಗಳಿಗೆ ಸರಕು ಸಾಗಣೆ ಮಾಡುತ್ತವೆ ಎಂದು ಬರೆದಿದ್ದರು.

*ಕ್ಲಾರ್ಕ್‌ ಅವರ ಅತಿ ಜನಪ್ರಿಯ ಕಾಲ್ಪನಿಕ ಬರಹ ಯಾವುದು?
2001ರಲ್ಲಿ ಅವರು ‘ಎ ಸ್ಪೇಸ್‌ ಒಡಿಸ್ಸಿ’ ಎಂಬ ಚಿತ್ರಕಥೆಯನ್ನು ಬರೆದರು. ಹಾಲಿವುಡ್‌ನ ಸ್ಟ್ಯಾನ್ಲಿ ಕುಬ್ರಿಕ್‌ ನಿರ್ದೇಶನದ ಚಿತ್ರಕ್ಕೆ ಬರೆದ ಆ ಚಿತ್ರಕಥೆ ದೃಶ್ಯ ಶ್ರೀಮಂತಿಕೆಯಿಂದ ಜನಪ್ರಿಯವಾದದ್ದೇ ಅಲ್ಲದೆ ಆಸ್ಕರ್‌ ಪ್ರಶಸ್ತಿಗೂ ಭಾಜನ­ವಾಯಿತು. ಚಿತ್ರಕಥೆಯ ಪುಸ್ತಕ ಕೂಡ ಜನಪ್ರಿಯ­ವಾಯಿತು. ಬಾಹ್ಯಾಕಾಶ ಯಾನ ಹಾಗೂ ವಿಜ್ಞಾನದಲ್ಲಿ ಆಸಕ್ತಿ ಇದ್ದಂತೆ ಸ್ಕೂಬಾ ಡೈವಿಂಗ್‌ನಲ್ಲೂ ಅವರಿಗೆ ಆಸಕ್ತಿ ಇತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.