ADVERTISEMENT

ನಗುವಿಗೆ ಕಾರಣ

​ಪ್ರಜಾವಾಣಿ ವಾರ್ತೆ
Published 1 ಜುಲೈ 2017, 19:30 IST
Last Updated 1 ಜುಲೈ 2017, 19:30 IST
ನಗುವಿಗೆ ಕಾರಣ
ನಗುವಿಗೆ ಕಾರಣ   

ನಾವೇಕೆ ನಗುತ್ತೇವೆ? ಏನಾದರೂ ತಮಾಷೆ ನಡೆದರೆ ನಗು ಬರುತ್ತದಲ್ಲವೇ ಎಂದು ಉತ್ತರಿಸುವವರೇ ಹೆಚ್ಚು. ಆದರೆ, ಸಂಶೋಧನೆಯ ಪ್ರಕಾರ ಹಾಸ್ಯ ಪ್ರಸಂಗಗಳೇ ನಗುವಿಗೆ ಕಾರಣವಾಗಬೇಕೆಂದೇನೂ ಇಲ್ಲ. ಕೇವಲ ಶೇಕಡ 10-20 ಸಂದರ್ಭಗಳಲ್ಲಿ ಮಾತ್ರ ಹಾಸ್ಯ ಪ್ರಸಂಗಗಳು ನಗು ಉಕ್ಕಿಸಿರುತ್ತವೆ ಎಂದು ಅಧ್ಯಯನಗಳು ಹೇಳುತ್ತವೆ.

ಎಲ್ಲ ಸಂಸ್ಕೃತಿಗೆ ಸೇರಿದ ಜನರೂ ನಗುತ್ತಾರೆ. ಶಿಶುಗಳಿಗೆ ಕಚಗುಳಿ ಇಟ್ಟರೆ ನಗುತ್ತವೆ. ಅದರಲ್ಲೂ ಯಾವುದಕ್ಕಾಗಿಯೋ ಹಟ ಮಾಡುವಾಗ ಕಚಗುಳಿ ಇಟ್ಟರಂತೂ ನಕ್ಕು ನಕ್ಕು ಹಗುರಾಗುತ್ತವೆ. ಮಗು ಹಾಗೂ ಅಪ್ಪ-ಅಮ್ಮ, ಅಕ್ಕ-ತಂಗಿಯ ನಡುವಿನ ಬಾಂಧವ್ಯ ವೃದ್ಧಿಗೆ ಇಂಥ ಕಚಗುಳಿ ಪ್ರಸಂಗಗಳು ಇಂಬುಗೊಡುತ್ತವೆ.

ಒಂಟಿಯಾಗಿದ್ದಾಗ ಬರುವುದಕ್ಕಿಂತ 30 ಪಟ್ಟು ಹೆಚ್ಚು ನಗು ಬೇರೆಯವರ ಸಾಂಗತ್ಯದಲ್ಲಿರುವಾಗ ಬರುತ್ತದೆ ಎಂದು ಇನ್ನೊಂದು ಅಧ್ಯಯನ ಹೇಳುತ್ತದೆ. ನಗುವಿಗೆ ಸಮಾಜ ಹಿತದ ಉದ್ದೇಶವೂ ಇದೆಯೆನ್ನುವುದಕ್ಕೆ ಇದೇ ಕಾರಣ. ಬಾಂಧವ್ಯ ಗಟ್ಟಿಗೊಳಿಸಲು ಪೂರ್ವಜರಿಂದ ಸಿಕ್ಕಿರುವ ಬಳುವಳಿ ನಗು.

ADVERTISEMENT

ನಗು ಸಾಂಕ್ರಾಮಿಕವೂ ಹೌದು. ಎಷ್ಟೋ ಸಂದರ್ಭಗಳಲ್ಲಿ ಇತರರು ನಗುವುದನ್ನು ಕಂಡು ನಾವೂ ನಗಲಾರಂಭಿಸುತ್ತೇವೆ. ಇದು ಇಡೀ ಗುಂಪೇ ನಗೆಗಡಲಿನಲ್ಲಿ ತೇಲಲು ಪ್ರೇರಣೆಯಾಗುತ್ತದೆ. ಒತ್ತಡ ಕಳೆದುಕೊಂಡು, ಸಮುದಾಯದಲ್ಲಿ ಏಕತೆ ಮೂಡಿಸಲು ಇದರಿಂದ ಅನುಕೂಲ.

ನಗು ಸಾಂಕ್ರಾಮಿಕ ಎನ್ನುವುದಕ್ಕೆ ಒಂದು ಐತಿಹಾಸಿಕ ಘಟನೆಯನ್ನು ಅನೇಕರು ಉದಾಹರಣೆಯಾಗಿ ಕೊಡುತ್ತಾರೆ. ಆ ಕಥೆ ಹೀಗಿದೆ: ‘1962ರಲ್ಲಿ ತಾಂಜೇನ್ಯಿಕದಲ್ಲಿ (ಈಗಿನ ತಾಂಜೇನಿಯ) ನಗು ಸಾಂಕ್ರಾಮಿಕವಾಯಿತು. ಶಾಲೆಯೊಂದರ ಮೂವರು ವಿದ್ಯಾರ್ಥಿನಿಯರು ಮೊದಲು ನಗಲಾರಂಭಿಸಿದರು. ಅದು ಸುತ್ತಮುತ್ತಲ ಪಟ್ಟಣಗಳಿಗೆ ಹರಡಿ, 10,000 ಮಂದಿ ನಗೆಗಡಲಿನಲ್ಲಿ ತೇಲಿದರು.

ನಕ್ಕು ನಕ್ಕು ಸುಸ್ತಾಗಿ ಕೆಲವು ಮಕ್ಕಳು ಮೂರ್ಛೆ ಹೋದರು. ಇದನ್ನು ತಪ್ಪಿಸಲೆಂದೇ ಶಾಲೆಗಳಿಗೆ ರಜಾ ನೀಡಿದರು. ಹೀಗೆ ಆದ ಕಾಲಘಟ್ಟದಲ್ಲಿ ಸಾಮಾಜಿಕ ಸಮಸ್ಯೆಗಳು ಹೆಚ್ಚಾಗಿದ್ದವು. ಆ ಒತ್ತಡದಿಂದ ಜನ ಮುಕ್ತರಾಗಲು ಸಾಂಕ್ರಾಮಿಕ ನಗು ಕಾರಣವಾಯಿತು’.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.