ADVERTISEMENT

ನರಿ ಮತ್ತು ಕಪಿ

​ಪ್ರಜಾವಾಣಿ ವಾರ್ತೆ
Published 8 ಏಪ್ರಿಲ್ 2017, 19:30 IST
Last Updated 8 ಏಪ್ರಿಲ್ 2017, 19:30 IST
ನರಿ ಮತ್ತು ಕಪಿ
ನರಿ ಮತ್ತು ಕಪಿ   

ಒಂದು ಕುಂಟ ನರಿ ಸೈಕಲ್ ಮೇಲ್ ಹೋಗ್ತಾ ಇತ್ತು. ದಾರೀಲಿ ಒಬ್ಬ ಮುದುಕಪ್ಪ ಸಿಕ್ಕಿದ. ಆ ಮುದುಕಪ್ಪ – ‘ಮುಂದೆ ನನ್ನದೊಂದು ಕಬ್ಬಿನ ಗದ್ದೆ, ಬಾಳೆ ತೋಟ ಅಯ್ತೆ. ಅಲ್ಲೀಗಂಟ ನಾನೂ ಬತ್ತೀನಿ’ ಅಂದ. ನರಿ ಮುದುಕಪ್ಪನ ಸೈಕಲ್ ಮೇಲೆ ಕರ್ಕೊಂಡು ಹೋಯ್ತು. ದಾರೀಲಿ ಇಬ್ಬರೂ ಬಿದ್‌ಬಿಟ್ರು. ಆಗೊಂದು ಕಪಿ ಬಂದು ಇಬ್ಬರನ್ನೂ ಎಬ್ಬಿಸ್ಬುಟ್ಟು ಅವರಿಗೆ ತಿನ್ನಾಕೆ ಮಾವಿನಕಾಯಿ ಕೊಡ್ತು.

ಕಪಿ, ನರಿಗೆ ಕೇಳ್ತು, ‘ನೀನ್ಯಾಕೆ ಮುದುಕಪ್ಪನ ಕರಕೊಂಡು ಬಂದೆ?’ ಅನ್ತ. ಆಗ ನರಿ ಹೇಳ್ತು, ‘ಮುಂದೆ ಮುದುಕಪ್ಪಂದು ಕಬ್ಬಿನ ಗದ್ದೆ, ಬಾಳೆತೋಟ ಅಯ್ತಂತೆ, ಅದಕ್ಕೆ’ ಅಂದು ಕಪಿಗೆ ಕಣ್ಣು ಮಿಟುಕಿಸಿತು. ಆಗ ಕಪಿ, ‘ನಾನೂ ನಿಮ್ ಜೊತೆ ಬತ್ತೀನಿ’ ಅಂತು.

‘ಮೂರು ಜನ ಸೈಕಲ್ ಮೇಲೆ ಹೋಗಕಾಗದಿಲ್ಲ. ನೀನ್ ಮುಂದ್ ಮುಂದ್ಕೆ ಓಡು ಕಪಿಯಣ್ಣ, ನಾನು ಮುದುಕಪ್ಪನ ಕರಕಂಡು ಬತ್ತೀನಿ’ ಎಂದು ನರಿ ಹೇಳ್ತು. ಕಪಿ ಮುಂದೆ ಓಡ್ತು.

ಸೈಕಲ್ ಮೇಲೆ ಬರಬೇಕಾದರೆ ನರಿ ದಿಬ್ಬವೊಂದಕ್ಕೆ ನುಗ್ಗಿಸಿ ಮುದುಕಪ್ಪನ ಬೀಳಿಸಿಬಿಡ್ತು. ಅವನನ್ನ ಅಲ್ಲೇ ಬಿಟ್ಟು, ಕಪಿ ಜೊತೆಗೆ ತೋಟದ ಕಡೆಗೆ ಓಡ್ತು. ಅಲ್ಲಿ ಮುದುಕಪ್ಪನ ಮಗ ಕಾವಲು ಕಾಯ್ತಾ ಕೂತಿದ್ದ. ಇಬ್ರಿಗೂ ಬೇಜಾರಾಯ್ತು. ಆದ್ರೂ ಅವರ ಹತ್ತಿರ ಹೋಗಿ – ‘ನಿಮ್ಮಪ್ಪ ದಾರೀಲಿ ಬಿದ್ದೋಗವ್ನೆ, ಓಡು’ ಅಂದ್ವು.

ADVERTISEMENT

ಅದೇ ವೇಳೆಗೆ ಮುದುಕಪ್ಪನ ಹೆಂಡ್ತಿ, ಗಂಡಂಗೂ ಮಗಂಗೂ ಊಟ ಹೊತ್ಕಂಡು ಬರಬೇಕಾದರೆ ದಾರೀಲಿ ಗಂಡ ಬಿದ್ದೋಗಿರಾದನ್ನು ನೋಡಿ, ಹಟ್ಟಿಗೆ ಕರಕೊಂಡು ಹೋದಳು. ಮಗ ಬಂದು ನೋಡ್ತಾನೆ, ಅಪ್ಪ ಅಲ್ಲಿಲ್ಲ.

ಮತ್ತೆ ತೋಟದ ತನಕ ಹೋದರೆ, ಅಲ್ಲಿ ನರಿ ಮತ್ತೆ ಕಪಿ ಇಬ್ಬರೂ ಕಬ್ಬು, ಬಾಳೆಹಣ್ಣನ್ನ ತಿನ್ನಾಕ ನುಗ್ಗತಿದ್ರು. ಅವರಿಗೆ ಅವನು ಓಡಿಬಂದಿದ್ದು ನೋಡಿ ಬೇಜಾರಾಯ್ತು. ‘ನಮ್ಮಪ್ಪ ಅಲ್ಲಿಲ್ಲ. ನೀವಿಬ್ರೂ ಕಳ್ಳತನ ಮಾಡಾಕೆ ಸುಳ್ಳ್ ಹೇಳಿದ್ರಿ’ ಅಂದ. ಅದಕ್ಕೆ ಕಪಿ, ‘ನರಿಯಣ್ಣನೇ ನಿಮ್ಮಪ್ಪನ ಬೀಳಿಸಿ ಬಂದದ್ದು’ ಅಂತು. ಅದಕ್ಕೆ ನರಿ, ‘ಐಡಿಯಾ ಕೊಟ್ಟಾಂವ ಕಪಿಯಣ್ಣನೇ’ ಅಂತು. ಇಬ್ಬರಿಗೂ ಜಗಳ ಶುರುವಾಯ್ತು.

ಅದೇ ಹೊತ್ತಿಗೆ ಅಲ್ಲಿಗೆ ಮುದುಕಪ್ಪ ಬಂದ. ಜಗಳ ನಿಲ್ತು. ಆಗ ಮುದುಕಪ್ಪ – ‘ಕಬ್ಬು ತಿನ್ಬೇಕು, ಬಾಳೆಹಣ್ಣು ತಿನ್ಬೇಕು ಎಂದು ಕೇಳಿದ್ರೆ ನಾನೇ ಕೊಡ್ತಿದ್ದೆ. ಅದಕ್ಕೆ ಯಾಕೆ ನನ್ನ ಬೀಳಿಸ್ಬೇಕಿತ್ತು?’ ಅಂದ. ನರಿಯೂ ಕಪಿಯೂ ‘ತಪ್ಪಾಯ್ತು’ ಅಂತ ಕೈಮುಗಿದವು. ಮುದುಕಪ್ಪ ನರಿಗೊಂದು ಕಬ್ಬಿನ ಜಲ್ಲೆ, ಕಪಿಗೊಂದು ಬಾಳೆಗೊನೆಯ ಕೊಟ್ಟ. ಇಬ್ಬರೂ ತಿನ್ಕೋತಾ ಹೋದ್ರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.