ADVERTISEMENT

ನ್ಯೂಯಾರ್ಕ್‌ ಒಂದು ವಾರೆನೋಟ

ಆನಂದ ಉಳಯ
Published 28 ಫೆಬ್ರುವರಿ 2015, 19:30 IST
Last Updated 28 ಫೆಬ್ರುವರಿ 2015, 19:30 IST

‘ನಿನ್ನ ಅಳಿಯನಿಗೆ ಕರ್ಚೀಫ್ ಬೇಕಂತೆ ತರ್ತೀಯಾ?’– ಮಗಳು ಕೇಳಿದಾಗ ನನಗೆ ಸಂತೋಷ, ಆಶ್ಚರ್ಯ ಮತ್ತು ಕುತೂಹಲ. ಸಂತೋಷ ಏಕೆಂದರೆ ಮದುವೆ ಸೇರಿದಂತೆ ಇದುವರೆಗೂ ಏನೂ ನನ್ನಿಂದ ಕೇಳಿರದಿದ್ದ ಅಳಿಯ ಈಗ ಕರ್ಚೀಫಾದರೂ ಕೇಳಿದನಲ್ಲ ಎಂಬುದಕ್ಕೆ; ಆಶ್ಚರ್ಯ ಏಕೆಂದರೆ– ಅಮೆರಿಕದಲ್ಲಿ ಕರ್ಚೀಫ್ ದೊರೆಯದೆ? ಕುತೂಹಲ ಎಂದರೆ, ಕರ್ಚೀಫ್ ಬದಲು ಅಲ್ಲಿನ ಜನ ಏನು ಬಳಸುತ್ತಾರೆ ಎಂಬುದು.

ಮಗಳ ಆಹ್ವಾನದ ಮೇಲೆ ನ್ಯೂಯಾರ್ಕ್ ತಲುಪಿ, ಅಲ್ಲಿ ಅಡ್ಡಾಡಿದ ಮೇಲೆ ತಿಳಿಯಿತು ಈ ಕರ್ಚೀಫಿನ ಮಹತ್ವ. ಏಕೆಂದರೆ ಅಮೆರಿಕನ್ನರಿಗೆ ಅದರ ಅವಶ್ಯಕತೆಯೇ ಇಲ್ಲ, ಕೈ ಒರೆಸಿಕೊಳ್ಳಲು ಬಿಸಿಗಾಳಿ ಅಥವಾ ಪೇಪರ್ ನ್ಯಾಪ್ಕಿನ್ ಅಂದರೆ ಕಾಗದದ ಕರವಸ್ತ್ರ. ‘ಯೂಸ್ ಅಂಡ್ ಥ್ರೊ’ ವ್ಯವಸ್ಥೆಯಲ್ಲಿ ಪೂರ್ಣ ನಂಬಿಕೆ ಇಟ್ಟಿರುವ ಅಮೆರಿಕನ್ನರಿಗೆ ಶೌಚಾಲಯದಲ್ಲೂ ಪೇಪರ್ ಬೇಕು. ನೀರು ಬೇಡ.

ಇಸ್ಸಿ ಮಾಡಿದ ಮೇಲೆ ಪೇಪರ್ ಬಳಸಿ, ನಂತರ ಕೈ ತೊಳೆದು ಒದ್ದೆಯಾದ ಕೈಗಳನ್ನು ಒರೆಸಿಕೊಳ್ಳಲು ಮತ್ತೆ ಪೇಪರ್ ಅಥವಾ ಬಿಸಿ ಗಾಳಿ. ಆದುದರಿಂದಲೇ ಪ್ರತಿ ಶೌಚಾಲಯದಲ್ಲೂ ಈ ನ್ಯಾಪ್ಕಿನ್‌ಗಳಿಂದ ತುಂಬಿ ತುಳುಕುತ್ತಿರುವ ಕಸದ ಡಬ್ಬಿಗಳನ್ನು ನೋಡಬಹುದು. ಈ ಪೇಪರ್ ವಿತರಿಸಲು ಒಂದು ಯಂತ್ರ, ಗುಂಡಿ ಒತ್ತಿದರೆ ಪೇಪರ್ ಹೊರಬರುತ್ತದೆ. ಎಳೆದು, ಕೈ ಒರೆಸಿಕೊಂಡು ಡಬ್ಬಿಯಲ್ಲಿ ಹಾಕಿ ಹೊರ ನಡೆಯಬೇಕು.

ಅಮೆರಿಕದಲ್ಲಿ ಎಲ್ಲೆಡೆ– ಕೆಲವು ಪ್ರದೇಶಗಳನ್ನು ಬಿಟ್ಟು– ನೀರು ಯಥೇಚ್ಚವಾಗಿ ದೊರೆಯುತ್ತದೆ. ಆದರೆ ಪೇಪರ್ ಮೇಲೆ ಜನರಿಗೆ ಹೆಚ್ಚು ವ್ಯಾಮೋಹ. ಒಂದು ಅಧ್ಯಯನದಂತೆ ಪ್ರತಿ ಅಮೆರಿಕದ ಪ್ರಜೆ ಪ್ರತಿ ವರ್ಷ ಸುಮಾರು 50 ರೋಲ್ ಪೇಪರ್ ಬಳಸುತ್ತಾನೆ. ಅಂದಹಾಗೆ, ಇದನ್ನು ಅವರು ಟಿಶ್ಯೂ ಎನ್ನುತ್ತಾರೆ. ಈ 50 ರೋಲ್ ಪೇಪರ್ ನೆಲದ ಮೇಲೆ ಹರಡಿದರೆ 2.8 ಮೈಲಿ ದೂರ ಆಗುತ್ತದೆ ಎಂದು ಒಬ್ಬಾತ ಲೆಕ್ಕಹಾಕಿ ಗೂಗಲ್‌ನಲ್ಲಿ ಪ್ರಕಟಿಸಿದ್ದಾನೆ. ಪ್ರತಿ ಪ್ರಜೆಗೆ 2.8 ಮೈಲಿ ಎಂದರೆ, ಒಟ್ಟು ಅಮೆರಿಕನ್ನರು ಪ್ರತಿವರ್ಷ ಬಳಸುವ ಟಿಶ್ಯೂ ಎಷ್ಟು ದೂರ ಕ್ರಮಿಸುತ್ತದೆ ಎಂದು ನೀವೇ ಲೆಕ್ಕಹಾಕಿ.

ಈ ಟಿಶ್ಯೂ ಬರೇ ಶೌಚಾಲಯಕ್ಕೆ ಮಾತ್ರ ಸೀಮಿತವಲ್ಲ. ಹೊಟೇಲಿನಲ್ಲಿ ಕೈ ಒರೆಸಿಕೊಳ್ಳಲು ಕರವಸ್ತ್ರವನ್ನೇ ಹೋಲುವ, ಅದಕ್ಕಿಂತ ದೊಡ್ಡ ಗಾತ್ರದ, ಅಚ್ಚ ಬಿಳಿ ಬಣ್ಣದ ಟಿಶ್ಯೂ ಸಿಗುತ್ತದೆ. ಹೊಟೇಲಿನಲ್ಲಿ ಎಲ್ಲದಕ್ಕೂ ದುಡ್ಡು ಕೊಡಬೇಕಾದರೂ ಈ ಟಿಶ್ಯೂ ಸೌಲಭ್ಯ ಮಾತ್ರ ಉಚಿತ. ಅಥವಾ ಇದರ ಬೆಲೆ ನಾವು ತಿನ್ನುವ ತಿಂಡಿಯಲ್ಲೇ ಸೇರಿರಬಹುದೆ? ಇರಬಹುದು ಏಕೆಂದರೆ, ಒಂದು ಪ್ಲೇಟ್ ಇಡ್ಲಿಗೆ 2ರಿಂದ 3 ಡಾಲರ್– ಅಂದರೆ ಈಗಿನ ದರದಲ್ಲಿ 120ರಿಂದ 180 ರೂಪಾಯಿ ಎಂದಾಗ ತಿಂದ ಮೇಲೆ ಕೈ ಒರೆಸಿಕೊಳ್ಳಲು ಟಿಶ್ಯೂ ಪೇಪರ್ ಆದರೂ ಉಚಿತವಾಗಿ ಸಿಗಬೇಡವೆ? ಆದುದರಿಂದಲೇ ಎಲ್ಲ ಹೊಟೇಲುಗಳಲ್ಲೂ ಗಿರಾಕಿಗಳಿಗೆ ಟಿಶ್ಯೂ ಪೇಪರ್ ಧಾರಾಳವಾಗಿ ಲಭ್ಯ. ಹೀಗಾಗಿ ಅಲ್ಲಿ ಯಾರಿಗೂ ಕರವಸ್ತ್ರದ ಅವಶ್ಯಕತೆ ಕಂಡುಬರದು. ಆದರೆ ನನ್ನ ಅಳಿಯನಂತಹ ಭಾರತೀಯರಿಗೆ ಹೊರಗೆ ಹೋದಾಗ ಕರವಸ್ತ್ರದ ಅವಶ್ಯಕತೆ ಕಂಡುಬರುತ್ತದೆ. ಆದುದರಿಂದಲೇ ಅವನು ನನಗೆ ಮಗಳ ಮೂಲಕ ಇಂಡೆಂಟ್ ಹಾಕಿಸಿದ್ದ. ವರದಕ್ಷಿಣೆ ಕೊಡದಿದ್ದ ನಾನು ಧಾರಾಳವಾಗಿ ಎರಡು ಡಜನ್ ಬಿಳಿ ಕರವಸ್ತ್ರ ಕೊಂಡೊಯ್ದು ಕೊಟ್ಟು ‘ದಹೇಜ್ ಬಾಬ್ತು ಅಡ್ಜಸ್ಟ್ ಮಾಡಿಕೊ’ ಎಂದು ಉದಾರವಾಗಿ ಹೇಳಿದೆ.

ಈ ಲಗೇಜನ್ನು ನಮ್ಮ ಸೂಟ್‌ಕೇಸಿನಲ್ಲಿ ಇರಿಸಿದರೆ ಅದರ ತೂಕದಲ್ಲಿ ವ್ಯತ್ಯಾಸವೇ ಕಂಡು ಬರುವುದಿಲ್ಲ. ಮತ್ತಿನ್ನೇನು ಸಮಸ್ಯೆ ಕೊಂಡೊಯ್ಯಲು? ಸೌಜನ್ಯದ ಧಾರಾಳ ಪ್ರದರ್ಶನ ನಾಲ್ಕು ತಿಂಗಳು ಅಮೆರಿಕದಲ್ಲಿ ಅಡ್ಡಾಡಿದ ನನಗೆ ಅವರ ಸಂಸ್ಕೃತಿಯ, ನಡೆನುಡಿಯ, ಆಚಾರ ವಿಚಾರಗಳ ಬಗ್ಗೆ ಒಂದಿಷ್ಟು ಅನುಭವ ಆಯಿತು. ನಮ್ಮ ಅಥವಾ ಅವರ ಮಾನಸಿಕ ಸ್ಥಿತಿ ಹೇಗೇ ಇರಲಿ, ಹೊರಗೆ ಧಾರಕಾರವಾಗಿ ಮಳೆ ಅಥವಾ ಮಂಜು ಸುರಿಯುತ್ತಿದ್ದರೂ ಸಹ ‘ಹ್ಯಾವ್ ಎ ಗ್ರೇಟ್ ಡೇ’ ಎಂದೋ ಅಥವಾ ‘ಹ್ಯಾವ್ ಎ ವಂಡರ್‌ಫುಲ್ ಡೇ’ ಎಂದೋ ಎಲ್ಲರಿಗೂ ಧಾರಾಳವಾಗಿ ಹೇಳುತ್ತಾರೆ. ಆದರೆ ನಗುನಗುತ್ತಾ ಹೇಳುವುದರಿಂದ ಅದು ಯಾಂತ್ರೀಕೃತ ಎಂದು ಅನಿಸದು.
ನಾವು ರಸ್ತೆ ದಾಟುತ್ತಿದ್ದರೆ ಕಾರು ಚಾಲಕರು ವಾಹನ ನಿಲ್ಲಿಸಿ ನಮಗೆ ದಾಟಲು ಕೈ ಬೀಸಿ ಸಂಜ್ಞೆ ಮಾಡುತ್ತಾರೆ. ‘ಮನೇಲಿ ಹೇಳಿ ಬಂದಿದ್ದೀರಾ?’ ಎಂದೋ, ಅಥವಾ ‘ನೋಡಿಕೊಂಡು ರಸ್ತೆಗೆ ಇಳಿಯುವುದಕ್ಕೆ ಏನು ಧಾಡಿ?’ ಎಂದು ನಮ್ಮಲ್ಲಿ ರೇಗುವಂತೆ ರೇಗುವುದಿಲ್ಲ. ಅಂಗಡಿ, ಕಚೇರಿಗಳಲ್ಲಿ ನೀವು ಪ್ರವೇಶಿಸಲು ಹೊರಟರೆ ಈಗಾಗಲೇ ಅಲ್ಲಿದ್ದವರು ನಿಮಗಾಗಿ ಬಾಗಿಲು ಹಿಡಿದು ನಿಮಗೆ ಒಳಗೆ ಹೋಗಲು ಬಿಡುತ್ತಾರೆ. ಸೌಜನ್ಯದ ಪ್ರದರ್ಶನ ಧಾರಾಳವಾಗಿ ಸಿಗುತ್ತದೆ. ‘ಎಕ್ಸ್‌ಕ್ಯೂಸ್ ಮಿ’, ‘ಥ್ಯಾಂಕ್ ಯು’, ‘ಸಾರಿ’ಗಳಿಗೆ ಲೆಕ್ಕವೇ ಇಲ್ಲ. ಅವರ ನಿಘಂಟಿನಲ್ಲಿ ಆ ಶಬ್ದಗಳೇ ತುಂಬಿರುವಂತೆ ಕಾಣುತ್ತದೆ.

ಆದರೆ ಇನ್ನೊಂದು ಮುಖವೂ ಇದೆ. ಅದು ನೋಡಬೇಕಾದರೆ ಅವರ ‘ಸಬ್‌ವೆ’ ಅಂದರೆ ಲೋಕಲ್ ರೈಲಿನಲ್ಲಿ ನೀವು ಪಯಣಿಸಬೇಕು. ವಯಸ್ಸಾದವರಿಗೆ ಯಾರೂ ಎದ್ದು ಜಾಗ ಬಿಡುವುದಿಲ್ಲ. ನನ್ನಂತಹ ಸೀನಿಯರ್ ಸಿಟಿಜನ್‌ಗಳು ಸಹ ನಿಂತೇ ಪಯಣಿಸಬೇಕು. ಆಗ ಸಾರಿ, ಥ್ಯಾಂಕ್‌ಯು, ಎಕ್ಸ್‌ಕ್ಯೂಸ್ ಮಿ ಮುಂತಾದವು ನಾಪತ್ತೆ! ನಾನಿದ್ದ ನಾಲ್ಕು ತಿಂಗಳಲ್ಲಿ ಸಬ್‌ವೆ ರೈಲಿನಲ್ಲಿ ಪಯಣಿಸುವಾಗ ಒಬ್ಬನಾದರೂ ಎದ್ದು ನನಗೆ ಕೂರಲು ಹೇಳಲಿಲ್ಲ. ನಾನು ನಿಂತುಕೊಂಡು ನೇತಾಡುತ್ತಿದ್ದಾಗ ಅದನ್ನು ನೋಡಿಯೂ ನೋಡದಂತೆ ತಮ್ಮ ತಮ್ಮ ಐಪಾಡ್‌ಗಳಲ್ಲಿ ಮಗ್ನರಾದವರೇ ಹೆಚ್ಚು. ಅಥವಾ ನಾನು ಸೀನಿಯರ್ ಸಿಟಿಜನ್ ತರಹ ಕಾಣಲಿಲ್ಲವೆ?

ಸಬ್‌ವೇ ಪ್ರಯಾಣ ಎಂದಾಗ ಒಂದು ಘಟನೆ ನೆನಪಿಗೆ ಬರುತ್ತದೆ. ಒಂದು ಮಧ್ಯಾಹ್ನ ನಾನೊಬ್ಬನೇ ರೈಲಿನಲ್ಲಿ ನಿಂತಿದ್ದೆ. ಒಂದು ಸ್ಟೇಶನ್‌ನಲ್ಲಿ ಒಬ್ಬ ಕರಿಯ ತರುಣ ಹತ್ತಿದ. ಅವನು ಆಗಷ್ಟೇ ಕೊಂಡಿದ್ದ ಎನ್ನಬಹುದಾದ ಎಂ.ಪಿ. 3 ಅಥವಾ ಇನ್ನು ಯಾವುದೋ ಎಲೆಕ್ಟ್ರಾನಿಕ್ ಉಪಕರಣದಿಂದ ಪಾಪ್ ಸಂಗೀತ ಜೋರಾಗಿ ಹೊರಬರತೊಡಗಿ, ರೈಲು ಮಾಡುತ್ತಿದ್ದ ಸದ್ದನ್ನು ಅಡಗಿಸಿತ್ತು. ಅದನ್ನು ಕೇಳಿದ ತಕ್ಷಣ ಒಬ್ಬ ಹುಡುಗಿ ಮೊದಲು ಕಾಲು ಕುಣಿಸಿದಳು, ನಂತರ ಕೈ ಕುಣಿಸಿದಳು, ನಂತರ ಅದಕ್ಕೆ ದನಿಗೂಡಿಸಿ ಕೇಳುವುದರಲ್ಲಿ ಮಗ್ನಳಾದಳು. ಇನ್ನೊಬ್ಬ ತರುಣ ಅಲ್ಲೇ ಡ್ಯಾನ್ಸ್ ಮಾಡತೊಡಗಿದ.

ಆ ಅಬ್ಬರದ ಸಂಗೀತ ಇತರರಿಗೆ ತೊಂದರೆ ಮಾಡಬಹುದು ಎಂದವನಿಗೆ ಅನಿಸಲೇ ಇಲ್ಲ. ‘ಸೌಂಡ್ ಕಮ್ಮಿ ಮಾಡು’ ಎಂದೂ ಯಾರೂ ಹೇಳಲೇ ಇಲ್ಲ. ಬಿಟಿಎಸ್ ಬಸ್‌ನಲ್ಲಿ ನನ್ನ ಪಕ್ಕದಲ್ಲಿ ಕುಳಿತವ ಮೊಬೈಲ್‌ನಲ್ಲಿ ಜೋರಾಗಿ ಮಾತನಾಡಿದರೂ ಗದರುತ್ತಿದ್ದ ನಾನು ಆ ಜೋರು ಸಂಗೀತ ಸಹಿಸಿಕೊಂಡೇ ಇರಬೇಕಾಯಿತು. ಆಕ್ಷೇಪಣೆ ಮಾಡುವ ಧೈರ್ಯವಂತೂ ಆ ಅಪರಿಚಿತ ನಾಡಿನಲ್ಲಿ ನನಗೆ ಇರಲಿಲ್ಲ.

ಮಾಡಿದ್ದರೆ ಏನಾಗುತ್ತೋ ಏನೋ ಎಂಬ ಭಯ. ಆದರೆ ಇತರರಿಗೆ ತೊಂದರೆ ಆಗಬಹುದು ಎಂದು ಆ ತರುಣನಿಗೇಕೆ ಅನಿಸಲಿಲ್ಲ ಎಂಬುದೂ ಇಂದಿಗೂ ನನಗೆ ಅರ್ಥವಾಗಿಲ್ಲ. ಹಾಗೆಯೇ, ಇತರ ಪ್ರಯಾಣಿಕರೂ ಆಕ್ಷೇಪಣೆ ಎತ್ತಲಿಲ್ಲವೇಕೆ? ಅಮೆರಿಕ ಸರ್ವ ಸ್ವತಂತ್ರನಾಡು. ಎಲ್ಲರೂ ಸ್ವೇಚ್ಛೆಯಾಗಿರಬಹುದು ಎಂಬುದೇ ಕಾರಣ ಇರಬಹುದೆ?

ಇರಬಹುದು. ಆದುದರಿಂದಲೇ, ರಸ್ತೆ ಬದಿಯ ಬೆಂಚಿನ ಮೇಲೆ ಅಥವಾ ಹೊಟೇಲಿನಲ್ಲಿ ಜಾಗಕ್ಕೆ ಕಾಯುತ್ತಿರುವಾಗಲೋ ತರುಣ ಜೋಡಿಗಳು ತಬ್ಬಿಕೊಂಡು ಚುಂಬನ ವಿನಿಮಯದಲ್ಲಿ ತೊಡಗಿದ್ದರೆ, ಅಥವಾ ರಸ್ತೆಯಲ್ಲಿ ಜಗಳವಾಡುತ್ತಿದ್ದರೆ, ಕಾನೂನು ಉಲ್ಲಂಘನೆ ಮಾಡಿ ಸಿಕ್ಕಿ ಬಿದ್ದವನ ಮೇಲೆ ಪೊಲೀಸರು ಕ್ರಮ ಜರುಗಿಸುತ್ತಿದ್ದರೆ ಇತರರು ಅದನ್ನು ನೋಡುತ್ತಾ ನಿಲ್ಲುವುದಿಲ್ಲ.  

ಹಾಗೆ ಮಾಡುವುದು ಅಸಭ್ಯ ವರ್ತನೆ ಎಂದು ನನಗೆ ತಿಳಿಸಿ ಹೇಳಲಾಯಿತು. ಆದುದರಿಂದಲೇ ಅಮೆರಿಕನ್ನರು ತಾವಾಯಿತು, ತಮ್ಮ ಕೆಲಸವಾಯಿತು ಎಂದು ತಮ್ಮ ತಮ್ಮ ಕಾರ್ಯಗಳಲ್ಲಿ ತೊಡಗಿರುತ್ತಾರೆ. ಇನ್ನೊಬ್ಬರ ಬಗ್ಗೆ ಉಸಾಬರಿ ಬೇಡ. ಅದು ಸರ್ಕಾರಕ್ಕೆ ಬಿಟ್ಟಿರುತ್ತಾರೆ. ಆದುದರಿಂದಲೇ ಅಮೆರಿಕ ಸರ್ಕಾರ ಇತರ ದೇಶಗಳ ವ್ಯವಹಾರಗಳಲ್ಲಿ ಮೂಗು ತೂರಿಸುತ್ತಾ ದೊಡ್ಡಣ್ಣನಂತೆ ವರ್ತಿಸುತ್ತಿರುತ್ತದೆ.

ಶಿಸ್ತಿನ ಸಿಪಾಯಿಗಳು
ಒಂದು ವಿಷಯದಲ್ಲಂತೂ ಅದು ದೊಡ್ಡಣ್ಣನಂತೆಯೇ ನಿಜ. ಅದು ಶ್ರೀಸಾಮಾನ್ಯರಿಗೆ ಕಲ್ಪಿಸಿರುವ ಸೌಲಭ್ಯಗಳ ವಿಷಯದಲ್ಲಿ. 24 ತಾಸು ಬಿಸಿ ಮತ್ತು ತಣ್ಣೀರು, ನಿರಂತರ ಕರೆಂಟ್, ಸಮಯಕ್ಕೆ ಸರಿಯಾಗಿ ಚಲಿಸುವ ರೈಲು/ಬಸ್, ಲಂಚ ರಹಿತ ಸರ್ಕಾರಿ ವ್ಯವಸ್ಥೆ, ಎಲ್ಲೆಡೆ ನಿಗಿ ನಿಗಿ ಹೊಳೆಯುವ ಸಾರ್ವಜನಿಕ ಜಾಗಗಳು, ಅಚ್ಚುಕಟ್ಟಾದ ಶೌಚಾಲಯಗಳು, ರಸ್ತೆಬದಿ ವ್ಯಾಪಾರಿಗಳಿಂದ ಅತಿಕ್ರಮಣ ಮಾಡದೆ ಪಾದಚಾರಿಗಳಿಗಾಗಿಯೇ ಇರುವ ವಿಶಾಲ, ಚೊಕ್ಕಟ ಫುಟ್‌ಪಾತ್‌ಗಳು... ಹೀಗೆ ಜನರಿಗೆ ಬೇಕಾದ ಎಲ್ಲ ಸೌಲಭ್ಯಗಳಿಗೆ ಅಲ್ಲಿ ಪರದಾಡಬೇಕಿಲ್ಲ. ಅದು ನಿಮ್ಮ ಹಕ್ಕು ಎನ್ನುವಂತೆ ಸರ್ಕಾರ ಕಲ್ಪಿಸಿದೆ. ಅದು ದುರುಪಯೋಗವಾಗದಂತೆ ಜನ ಸಹಕರಿಸುತ್ತಾರೆ. ಕಾಫಿ, ಐಸ್‌ಕ್ರೀಂ ಮುಂತಾದವು ಸೇವಿಸಿದ ಮೇಲೆ ಕಪ್ ರಸ್ತೆಯ ಮೇಲೆ ಬೀಳುವುದಿಲ್ಲ. ಕಸದ ಡಬ್ಬಿ ಸಿಗುವವರಿಗೂ ಜನ ಅದನ್ನು ಕೈಯಲ್ಲೇ ಹಿಡಿದಿಟ್ಟುಕೊಂಡಿರುತ್ತಾರೆ.

ಅಲ್ಲಿ ಎಲ್ಲವೂ ಯಾಂತ್ರೀಕೃತ. ಪೆಟ್ರೋಲ್ ಬಂಕ್‌ಗಳಲ್ಲಿ ನೀವೇ ಕ್ರೆಡಿಟ್ ಕಾರ್ಡ್ ಬಳಸಿ ಇಂಧನ ತುಂಬಿಸಿಕೊಳ್ಳಬೇಕು. ನಿಮ್ಮ ಬಸ್/ರೈಲು ಪಾಸ್‌ಗಳಿಗೆ ಹಣ ನೀವೇ ಪಾವತಿ ಮಾಡಿ ರಿಚಾರ್ಜ್ ಮಾಡಬೇಕು. ಮ್ಯೂಸಿಯಂಗಳನ್ನು ನೋಡಬೇಕಾದಲ್ಲಿ ನೀವೇ ಕಂಪ್ಯೂಟರ್ ಮುಖಾಂತರ ಕಾರ್ಡ್ ಬಳಸಿ ಟಿಕೆಟ್ ಪ್ರಿಂಟ್ ಮಾಡಿಕೊಳ್ಳಬೇಕು. ಅಂಚೆ ಕಚೇರಿಯಲ್ಲಿ ನೀವೇ ನಿಮ್ಮ ಲಕೋಟೆಯನ್ನು ತೂಕಮಾಡಿ ಅದಕ್ಕೆ ಬೇಕಾದ ಸ್ಟಾಂಪ್ ಹಚ್ಚಲು ಕಾರ್ಡ್ ಬಳಸಿ ಹಣ ಸಲ್ಲಿಸಿ ಡಬ್ಬಕ್ಕೆ ಹಾಕಬೇಕು. ಪಾದರಕ್ಷೆ ಅಂಗಡಿಯಲ್ಲಿ ನಿಮ್ಮ ಸೈಜಿನ ಚಪ್ಪಲಿ ಅಥವಾ ಶೂ ಅನ್ನು ನೀವೇ ಹುಡುಕಿ ಹಾಕಿಕೊಳ್ಳಬೇಕು! ಸಹಾಯ ಮಾಡಲು ಯಾರೂ ಇರರು.

ಹೀಗೆ ನಮ್ಮಂತಹ ಹೊರಗಿನವರನ್ನು ಚಿಕಿತಗೊಳಿಸುವ ಅಮೆರಿಕದಲ್ಲಿ ಯಾವುದೂ ಉಚಿತವಾಗಿ ಸಿಗುವುದಿಲ್ಲ. ಎಲ್ಲಕ್ಕೂ ಡಾಲರ್ ನೀಡಬೇಕು. ವಿಶ್ವಸಂಸ್ಥೆ ನೋಡಬೇಕೆ? ಎಂಪೈರ್ ಸ್ಟೇಟ್ ಬಿಲ್ಡಿಂಗ್ ಮೇಲೆ ಹತ್ತಬೇಕೆ? 9/11ರ ಘೋರ ದುರಂತದ ಮ್ಯೂಸಿಯಂಗೆ ಭೇಟಿ ನೀಡಬೇಕೆ? ಪ್ರಖ್ಯಾತ ಟೀವಿ ಸುದ್ದಿ ಸಂಸ್ಥೆ ಎನ್‌ಬಿಸಿ ಕಾರ್ಯಗಳನ್ನು ವೀಕ್ಷಿಸಬೇಕೆ? ಮ್ಯೂಸಿಯಂ, ಮೃಗಾಲಯ, ಹೀಗೆ ಯಾವುದೇ ಇರಲಿ– ಟಿಕೆಟ್ ಪಡೆಯಬೇಕು.

ಎಲ್ಲವನ್ನು ಉಚಿತವಾಗಿ ನೋಡಲು ಬಯಸುವ ನನ್ನಂತಹ ಭಾರತೀಯರಿಗೆ ಇದೊಂದು ಭರಿಸಲಾಗದ ಮುಜುಗರ. ಟಿಕೆಟ್ ಕೊಳ್ಳುವ ಎಂದರೆ 1-2 ಡಾಲರ್ರೇ? ಅಲ್ಲ 5, 12, 20, 30 ಹೀಗೆ ರೂಪಾಯಿ ನಾಡಿನಿಂದ ಬಂದಿರುವ ನಮಗೆ ದುಬಾರಿ ಎನಿಸುವಷ್ಟು ದರಗಳು. ಬಸ್/ರೈಲಿನಲ್ಲೂ ಅಷ್ಟೇ. ಅದರೊಳಗೆ ಕಾಲಿಡಬೇಕಾದರೆ 2.50 ಡಾಲರ್ ಕೊಡಬೇಕು. ಮುಂದಿನ ಸ್ಟಾಪ್‌ನಲ್ಲಾದರೂ ಇಳಿಯಿರಿ, 50 ಕಿಮೀ ಆಚೆಯ ಕೊನೆಯ ಸ್ಟಾಪ್‌ನಲ್ಲಾದರೂ ಇಳಿಯಿರಿ, ದರ ಒಂದೇ. ಟ್ಯಾಕ್ಸಿ ಹಿಡಿದರೆ ಮೀಟರ್ ಮೇಲೆ ಭಕ್ಷೀಸ್ ನೀಡಲೇಬೇಕು. ಅದು ಅಲ್ಲಿನ ಸಂಸ್ಕೃತಿಯಂತೆ. ಬೆಂಗಳೂರಿನಲ್ಲಿ ಆಟೊವಾಲ ಮೀಟರ್ ಮೇಲೆ 5-10 ರುಪಾಯಿ ಕೇಳಿದರೆ ಪೊಲೀಸಿನವರಿಗೆ ದೂರು ಕೊಡುವ ಬೆದರಿಕೆ ಹಾಕುವ ನಾವು ಅಲ್ಲಿ 2-3 ಡಾಲರ್ ಟಿಪ್ಸ್ ನೀಡಿ ಗೌರವ ಉಳಿಸಿಕೊಳ್ಳಬೇಕು. ಅಥವಾ ಅವರ ಪ್ರತಿಷ್ಠೆ ಉಳಿಸಬೇಕು.

ಮೋಜಿನ ರೈಡಿಗೆ ಸೈಕಲ್‌ ರಿಕ್ಷಾ!
ಅಂದಹಾಗೆ ನ್ಯೂಯಾರ್ಕಿನ ಪ್ರತಿಷ್ಠಿತ ಫಿಫ್ತ್ ಅವೆನ್ಯೂ, ಟೈಮ್ಸ್ ಸ್ಕ್ವೇರ್, 42 ಸ್ಟ್ರೀಟ್ ಮುಂತಾದೆಡೆ ಸೈಕಲ್ ರಿಕ್ಷಾ ಸಿಗುತ್ತದೆ. ಉದರ ಪೋಷಣೆಗಾಗಿ ಯುವಕರು ಅದನ್ನು ಓಡಿಸುತ್ತಾರೆ. ಆದರೆ ಹತ್ತುವ ಮುನ್ನ ಪರ್ಸ್ ಮುಟ್ಟಿ ನೋಡಕೊಳ್ಳಲೇಬೇಕು. ಏಕೆಂದರೆ ರಿಕ್ಷಾ ಬಾಡಿಗೆ ನಿಮಿಷಕ್ಕೆ ಒಂದೇ ಡಾಲರ್! ಅಂದರೆ ಅದಿರುವುದು ಒಂದು ಜಾಗದಿಂದ ಇನ್ನೊಂದು ಜಾಗಕ್ಕೆ ಹೋಗಲು ಅಲ್ಲ. ಮೋಜಿನ ರೈಡ್‌ಗಾಗಿ. ಅಲ್ಲಿ ಟಾಂಗಾಗಳೂ ಸಿಗುತ್ತವೆ. ಕಣ್ಣಿಗೆ ಬೀಳದಿರುವುದೆಂದರೆ ಬೀದಿ ನಾಯಿಗಳು ಮತ್ತು ಬೀಡಾಡಿ ದನಗಳು.

ನಮ್ಮೂರಿನ ರಸ್ತೆಗಳ ಅನಧಿಕೃತ ಕಾವಲುಗಾರರಾಗಿ, ಇಡೀ ರಾತ್ರಿ ಬೊಗಳಿ, ಜಗಳ ಕಾಯುವ ಬೀದಿ ನಾಯಿಗಳು ಇಲ್ಲಿ ಎಲ್ಲಿ ಹೋದವು? ರಸ್ತೆ ಬದಿ ಸಿಗುವ ಆಹಾರ ಮೇಯುತ್ತಾ ರಸ್ತೆಯ ಮೇಲೆ ರಾಜಾರೋಷವಾಗಿ ನಡೆಯುತ್ತಾ ಸುಸ್ತಾದಾಗ ರಸ್ತೆಯ ಮಧ್ಯದಲ್ಲೇ ಮೆಲುಕು ಹಾಕುತ್ತಾ ಧರಣಿ ಕೂರುವ ನಮ್ಮ ಗಂಗೆ ಗೌರಿ ಮುಂತಾದ ಗೋಮಾತೆಯರೂ ಇಲ್ಲಿ ನಾಪತ್ತೆ! ಅಮೆರಿಕದಲ್ಲಿ ಸಣ್ಣ ಪುಟ್ಟ ಗೌಳಿಗರೇ ಇಲ್ಲದಿರುವುದರಿಂದ ಅಂತಹ ದನಗಳೂ ಇಲ್ಲ. ರಸ್ತೆಗೂ ಬರುವುದಿಲ್ಲ.

ನಾಯಿಗಳು ಇಲ್ಲವೇ ಇಲ್ಲ ಎಂದಲ್ಲ. ವಿವಿಧ ಗಾತ್ರದ, ಬಣ್ಣದ, ಜಾತಿಯ ನಾಯಿಗಳಿವೆ. ಆದರೆ ಅವೆಲ್ಲಾ ಮಾಲೀಕರ ಜತೆ ಮಾತ್ರ ಹೊರಬರುತ್ತವೆ ಅಡ್ಡಾಡಲು. ಅದರ ಮಾಲೀಕ ನಾಯಿಯ ಚೈನ್ ಒಂದು ಕೈಯಲ್ಲಿ, ಇನ್ನೊಂದು ಕೈನಲ್ಲಿ ಒಂದು ಪ್ಲಾಸ್ಟಿಕ್ ಚೀಲ ಹಿಡಿದು ಅದರ ಜತೆ ಹೊರಟಿರುತ್ತಾನೆ. ಚೈನ್ ಸರಿ, ಆದರೆ ಪ್ಲಾಸ್ಟಿಕ್ ಚೀಲ? ಅವನ ಪ್ರೀತಿಯ ನಾಯಿ ಇಸ್ಸೀ ಮಾಡಿದರೆ ಅದನ್ನು ಅವನೇ/ಳೇ ಬಳಿದು, ಆ ಚೀಲಕ್ಕೆ ಹಾಕಿಕೊಂಡು ಹೋಗಬೇಕು. ಇದರ ಬಗ್ಗೆ ಎಚ್ಚರಿಕೆ/ಸೂಚನೆ ನೀಡುವ ಫಲಕಗಳು ರಸ್ತೆಯಲ್ಲಿ ನೋಡಲು ಕಾಣಸಿಗುತ್ತವೆ. ಇದನ್ನು ಶ್ವಾನ ಮಾಲೀಕರು ವಿಧಿವತ್ತಾಗಿ, ಸಂಕೋಚವಿಲ್ಲದೆ ಪಾಲಿಸುತ್ತಾರೆ. ಹಾಗಾಗಿ ನಮ್ಮ ಮನೆಯ ಜಾಕಿ, ಟಾಮಿ ನಿಮ್ಮ ಮನೆಯ ಮುಂದೆ ಬಹಿರ್ದೆಶೆ ಮಾಡಿ ರಾಜಾರೋಷವಾಗಿ ಹೋಗುವಂತಿಲ್ಲ.

ನಾಯಿಗಳಿಗೇ ಇಂತಹ ಕಡಿವಾಣ ಇರುವಾಗ ಜನಗಳು ರಸ್ತೆ ಬದಿ ಮೂತ್ರ ಮಾಡಲು ಸಾಧ್ಯವೆ? ಅದಕ್ಕೆ ಅವಕಾಶವೇ ಇಲ್ಲ. ತೀರಾ ಅವಸರವಾದರೆ ನೀವು ಯಾವುದಾದರೂ ಮಾಲ್ ಹೊಕ್ಕು ಅಲ್ಲಿರುವ ಶೌಚಾಲಯ ಬಳಸಬಹುದು. ನನಗೆ ಯಾವ ಮಾಲ್ ಸಹ ಕಾಣದಿದ್ದಾಗ ಸಮೀಪದ ಹೊಟೇಲಿಗೆ ನುಗ್ಗಿದೆ. ಆದರೆ ಅಲ್ಲಿದ್ದ ಶೌಚಾಲಯದ ಬಾಗಿಲು ತೆಗೆಯಲು ಆಗಲಿಲ್ಲ. ನಂತರ ತಿಳಿಯಿತು ಅದರ ಬಾಗಿಲು ತೆಗೆಸುವ ಮರ್ಮ. ಹೊಟೇಲಿನಲ್ಲಿ ಏನಾದರೂ ಕೊಂಡರೆ ಕೊಡುವ ಬಿಲ್ಲಿನಲ್ಲಿ ಒಂದು ಪಾಸ್‌ವರ್ಡ್ ನಮೂದಿಸಿರುತ್ತಾರೆ.

ಅದನ್ನು ಬಳಸಿದರೆ ಮಾತ್ರ ಅದು ‘ಬಾಗಿಲು ತೆಗೆ ಸೇಸಮ್ಮ’ನಾಗಿ ಬಾಗಿಲನು ತೆಗೆದು ಸೇವೆಯನ್ನು ಕೊಡುತ್ತದೆ. ಹೀಗಾಗಿ ಶೌಚಾಲಯ ಬಳಸಲು ನನಗೆ ಬೇಡದಿದ್ದರೂ 3 ಡಾಲರ್ ಕೊಟ್ಟು ಆಲೂ ಫ್ರೈ ಕೊಳ್ಳಬೇಕಾಯಿತು. ಬೆಂಗಳೂರಿನಲ್ಲಾಗಿದ್ದರೆ ಯಾವುದೋ ರಸ್ತೆ ಬದಿ ಉಚಿತವಾಗಿ ಕೆಲಸ ಮುಗಿಸಬಹುದಿತ್ತು. ಆದುದರಿಂದಲೇ ರಸ್ತೆ ಕಾಮಗಾರಿಯಲ್ಲಿ ತೊಡಗಿರುವ ಕೆಲಸಗಾರರಿಗೆ ಬಹಿರ್ದೆಶೆಗೆ ಹೋಗಲು ಅನುಕೂಲವಾಗುವಂತೆ ಮೊಬೈಲ್ ಶೌಚಾಲಯಗಳನ್ನು ಕೊಟ್ಟಿರುತ್ತಾರೆ!

ಗುಬ್ಬಚ್ಚಿಗಳು ನ್ಯೂಯಾರ್ಕಿನಲ್ಲಿ ಹೇರಳವಾಗಿವೆ. ಬೆಂಗಳೂರಿನಿಂದ ಇಲ್ಲಿಗೆ ವಲಸೆ ಬಂದಿರಬಹುದೆ? ಏಕೆಂದರೆ, ಬೆಂಗಳೂರಿನಲ್ಲಿ ಈಗ ನೋಡಲೂ ಗುಬ್ಬಚ್ಚಿಗಳು ಇಲ್ಲ. ವೀಸಾ ಸಮಸ್ಯೆ ಇಲ್ಲದಿರುವುದರಿಂದ ಅವೆಲ್ಲ ಸಲೀಸಾಗಿ ಹಾರಿ ಬಂದಿರಬಹುದು ಎಂದು ನನ್ನ ಊಹೆ. ಆದರೆ ಅವುಗಳ ಆಹಾರದ ಬಗ್ಗೆ ನನ್ನ ಕುತೂಹಲ ಕಾಡುತ್ತಲೇ ಇತ್ತು. ಏಕೆಂದರೆ ಇಲ್ಲಿ ಯಾರೂ ಕಾಳು, ಬೇಳೆ ಉಪಯೋಗಿಸುವುದಿಲ್ಲ. ಕ್ರಿಮಿಕೀಟಗಳೂ ಕಡಿಮೆ. ಆದರೂ ಅಂಗಸೌಷ್ಟವ ಚೆನ್ನಾಗಿರುವ ಗುಬ್ಬಚ್ಚಿಗಳು ಹಾರಾಡುತ್ತಿರುವುದನ್ನು ನಾನು ದಿನನಿತ್ಯ ನೋಡುತ್ತಲೇ ಇದ್ದೆ. ಹುಟ್ಟಿಸಿದ ದೇವರು ಏನನ್ನಾದರೂ ಮೇಯಿಸಿಯೇ ಮೇಯಿಸುತ್ತಾನೆ ಅಲ್ಲವೆ?

ಮೆಟ್ರೊ ಎನ್ನುವ ಬೆರಗು!
ಬೆಂಗಳೂರಿನ ಮೆಟ್ರೊ ರೈಲಿನ ಸುರಂಗಕಾರ್ಯ ಬಹಳ ಸುದ್ದಿಯೇ ಮಾಡಿದೆ. ಜನಗಳ ಕುತೂಹಲ ಕೆರಳಿಸಿವೆ. ಆದರೆ ನ್ಯೂಯಾರ್ಕಿನ ಸುರಂಗ ರೈಲುಗಳು ಸುಮಾರು 100 ವರ್ಷಗಳಷ್ಟು ಹಳೆಯವು. ಆಗಲೇ ಅವರು ನಗರದ ಬೆಳವಣಿಗೆಯ ಬಗ್ಗೆ ಮುಂದಾಲೋಚನೆ ಹೊಂದಿದ್ದರು. ಕಟ್ಟಡಗಳು ಮೇಲೆ ಮೇಲೆ ಹೋಗುತ್ತಿದ್ದಂತೆ ಅವರು ಭೂಮಿಯ ತಳದಲ್ಲಿ ಸುರಂಗ ಕೊರೆಯುತ್ತಿದ್ದರು. ಸುರಂಗ ರೈಲಿನ ಮೊದಲ ಹಂತದ ನಿಲ್ದಾಣ ರಸ್ತೆಯಿಂದ 20 ಅಡಿ ಕೆಳಗಿದ್ದರೆ ಕೆಲವು ಕಡೆ ಉಳಿದ ಅಂತಸ್ತಿನ ನಿಲ್ದಾಣಗಳಿಗೆ ಹೋಗಲು ಅಲ್ಲಿಂದ ಎಸ್ಕಲೇಟರ್ ಬಳಸಬೇಕು. ಅದನ್ನು ಹಿಡಿದು ಕೆಳಗೆ ಇಳಿಯುತ್ತಿದ್ದರೆ ಗಣಿಯಲ್ಲಿ ಇಳಿದಂತೆ ಭಾಸವಾಗುತ್ತದೆ. ಅಷ್ಟು ಆಳದಲ್ಲಿ ರೈಲು ಗಡಗಡ ಎಂದು ಧಾವಿಸುತ್ತದೆ. ನಿಮಿಷಗಳಲ್ಲಿ ನಿಮ್ಮನ್ನು ಹೋಗಬೇಕಾದ ಜಾಗಕ್ಕೆ ತಲುಪಿಸುತ್ತದೆ. ಅಂತಹ ದೂರಾಲೋಚನೆ ನಮ್ಮಲ್ಲಿ ಇದ್ದಿದ್ದರೆ ಬೆಂಗಳೂರನ್ನು 2015ರಲ್ಲಿ ಹೀಗೆ ಅಗೆಯಲು ಪರದಾಡಬೇಕಾಗಿ ಬರುತ್ತಿರಲಿಲ್ಲ.

ಇಲ್ಲಿ ಉಚಿತವಾಗಿ ಏನೂ ಸಿಗದು ಎಂದು ಹೇಳಿದೆ ಅಲ್ಲವೆ? ತಾಳಿ, ಇಲ್ಲಿ ಒಮ್ಮೊಮ್ಮೆ ಟೀವಿ ಸಹ ಉಚಿತವಾಗಿ ಲಭ್ಯ! ಫುಟ್‌ಪಾತಿನ ಮೇಲೇ ಇರುತ್ತದೆ! ಬೇಕಿದ್ದರೆ ಕೊಂಡೊಯ್ಯಬಹುದು. ಟೀವಿ ಅಷ್ಟೇ ಅಲ್ಲ ಪೀಠೋಪಕರಣಗಳು, ಗೃಹೋಪಯೋಗಿ ಸಾಮಾನುಗಳು, ಪುಸ್ತಕಗಳು ಲಭ್ಯ. ಇದು ಹೇಗೆ ಸಾಧ್ಯ ಎಂದಿರಾ? ಮನೆ ಖಾಲಿ ಮಾಡುವ ಸಂದರ್ಭದಲ್ಲಿ ಬೇಡದ ಸಾಮಾನುಗಳನ್ನು ಹೀಗೆ ಫುಟ್‌ಪಾತಿನ ಮೇಲೆ ಇಡಲಾಗುತ್ತದೆ. ಅಥವಾ ಹೊಸ ಸಾಮಾನು ಕೊಂಡಾಗ ಅದಕ್ಕೆ ಜಾಗ ಮಾಡಲು ಹಳೆಯ ವಸ್ತುಗಳು ಫುಟ್‌ಪಾತಿಗೆ ಬರುತ್ತವೆ. ಕೆಲವರು ‘ಸಂಕೋಚ ಬೇಡ, ತೆಗೆದುಕೊಳ್ಳಿ’ ಎಂಬ ಫಲಕ ಅಂಟಿಸಿರುತ್ತಾರೆ. ಯಾರು ಬೇಕಾದರೂ ಅವುಗಳನ್ನು ತಮ್ಮ ಮನೆಗೆ ಸಾಗಿಸಿ ಬಳಸಬಹುದು.

ಈ ಬೀರುವಿನಲ್ಲಿ ಜಿರಳೆ/ತಿಗಣೆ ಇಲ್ಲ ಎಂಬ ಸರ್ಟಿಫಿಕೇಟ್ ಇರುವ ಸಾಮಾನನ್ನು ನಾನು ಫುಟ್‌ಪಾತಿನ ಮೇಲೆ ನೋಡಿದ್ದೇನೆ. ನಮ್ಮ ಮನೆಯ ಮುಂದೇ ಒಮ್ಮೆ ಎರಡು ಟೀವಿ ಸೆಟ್‌ಗಳನ್ನು ಉಚಿತ ವಿಲೇವಾರಿಗೆಂದು ಇಟ್ಟಿದ್ದರು. ಮೂರು ದಿನ ಅವು ಹಾಗೇ ಇದ್ದವು. ನಾಲ್ಕನೆಯ ದಿನ ಅದರಲ್ಲಿ ದೊಡ್ಡದಿದ್ದ ಸೆಟ್ ಯಾರೋ ಕೊಂಡೊಯ್ದಿದ್ದರು. ಇಂತಹ ಸಾಮಾನು ಯಾರಿಗೂ ಬೇಡವಾಗದೆ ಹಾಗೇ ಉಳಿದಿದ್ದರೆ ಅದನ್ನು ಮುನಿಸಿಪಾಲಿಟಿಯವರು ಕಚಡಾ ಎಂದು ವಿಲೇವಾರಿ ಮಾಡುತ್ತಾರೆ.

ಅಂದಹಾಗೆ, ಇಲ್ಲಿ ಹಳೆ ಪೇಪರ್ ಕೊಳ್ಳಲು ಪೇಪರ್.., ಪ್ಯಾಪರ್.., ಪೇಪರ್ರೇ.. ಎಂದು ಕೂಗುತ್ತಾ ತಕಡಿ ಹಿಡಿದು ರದ್ದಿವಾಲ ಬೀದಿ ಸುತ್ತುವುದಿಲ್ಲ. ಅಮೆರಿಕನ್ನರು ಓದುವ ಅತ್ಯಧಿಕ ಪ್ರಸಾರದ ದಿನಪತ್ರಿಕೆಗಳು ಸಹ ಫುಟ್‌ಪಾತಿನ ಮೂಲಕ ಕಚಡಾ ಆಗಿ ಮುನಿಸಿಪಾಲಿಟಿ ಲಾರಿ ಹತ್ತುತ್ತವೆ.

ಫುಟ್‌ಪಾತಿನ ಮೇಲೆ ಶೇಖರಗೊಳ್ಳುವ ಪ್ಲಾಸ್ಟಿಕ್ ತ್ಯಾಜ್ಯದಿಂದ ಕೆಲವರು ಹೊಟ್ಟೆ ಹೊರೆಯುತ್ತಾರೆಂದರೆ ನಂಬುವಿರಾ? ಮುನಿಸಿಪಾಲಿಟಿಯವರು ಅದನ್ನು ಸಾಗಿಸುವ ಮೊದಲೇ ಆರ್ಥಿಕವಾಗಿ ಹಿಂದುಳಿದವರು ಬಂದು ತಾವು ತಂದಿರುವ ಚೀಲಗಳಲ್ಲಿ ತುಂಬಿಕೊಂಡು ಹೋಗಿ ಪುನರ್ಬಳಕೆ ಕೇಂದ್ರಕ್ಕೆ ಮಾರಿ ಡಾಲರ್ ಸಂಪಾದಿಸುತ್ತಾರೆ. ಇಲ್ಲಿ ಹೊಟೇಲಿನ ಮುಂದಿರುವ ಕಸದ ಡಬ್ಬಿಗಳಿಗೆ ಕೈಹಾಕಿದರೆ ಸಿಗುವ ಪಿಜ್ಜಾ, ಬರ್ಗರ್, ಸ್ಯಾಂಡ್‌ವಿಚ್‌ಗಳ ತುಣುಕಗಳನ್ನು ತಿಂದು ಹೊಟ್ಟೆ ತುಂಬಿಸಿಕೊಳ್ಳುವ ನಿರ್ಗತಿಕರೂ ಇದ್ದಾರೆ.

ರೈಲು ನಿಲ್ದಾಣಗಳಲ್ಲಿ ವಯಸ್ಸಾದವರು ‘ಫೈವ್ ಡಾಲರ್ಸ್ ಪ್ಲೀಸ್’ ಎಂದು ಕೈ ಒಡ್ಡುತ್ತಾರೆ. ಚಳಿಗಾಲದಲ್ಲಿ ಹಿಮಪಾತದಿಂದ ಪಾರಾಗಲು ನಿರ್ಗತಿಕರು ರೈಲಿನ ಡಬ್ಬಿಗಳನ್ನೇ ಆಕ್ರಮಿಸಿಕೊಳ್ಳುತ್ತಾರೆ. ಇದು ಶ್ರೀಮಂತ ಅಮೆರಿಕದ ಇನ್ನೊಂದು ಮುಖ.

ವಕೀಲರಿದ್ದಾರೆ ಎಚ್ಚರಿಕೆ!
ಲಾಯರ್‌ಗಳು ಗಿರಾಕಿಗಳನ್ನು ಹುಡುಕಲು ಜಾಹೀರಾತು ನೀಡುವುದನ್ನು ಭಾರತದಲ್ಲಿ ನೋಡಿದ್ದೀರಾ? ಆದರೆ ಇಲ್ಲಿ ಅಂತಹ ಪ್ರಚಾರ ಫಲಕಗಳು ಎದ್ದು ಕಾಣುತ್ತವೆ. ಟೀವಿಯಲ್ಲಿ, ರೈಲಿನಲ್ಲಿ, ಬಸ್‌ನಲ್ಲಿ, ಸಾರ್ವಜನಿಕ ಪ್ರದೇಶಗಳಲ್ಲಿ ವಕೀಲರು ತಾವು ನೀಡಲಿರುವ ಸೇವೆಯ ಬಗ್ಗೆ ಫಲಕ ಹಾಕಿ ಪ್ರಚಾರ ಮಾಡಿಕೊಳ್ಳುತ್ತಾರೆ. ‘ವಾಂಟ್ ಡೈವೋರ್ಸ್? ಓನ್ಲಿ 375 ಡಾಲರ್ಸ್, ನೊ ಕ್ವೊಶ್ಚೆನ್ ಆಸ್ಕಡ್’ ಎಂಬ ಫಲಕದ ಮೂಲಕ ಡೈವೋರ್ಸ್ ಬಗ್ಗೆ ಚಿಂತಿಸುತ್ತಿರುವ ದಂಪತಿಗಳಿಗೆ ವಕೀಲರು ಆಮಿಷ ಒಡ್ಡುತ್ತಾರೆ. ಮನೆ ಮಾಲೀಕನಿಂದ ಕಿರುಕುಳ?

ಅಪಘಾತದಲ್ಲಿ ಗಾಯ? ಆಸ್ಪತ್ರೆಯಲ್ಲಿ ನಿರ್ಲಕ್ಷ್ಯ? ಯಾವ ಯಾವ ಪ್ರಕರಣದಲ್ಲಿ ಎಷ್ಟೆಷ್ಟು ಪರಿಹಾರ ಸಿಗಬಹುದು ಎಂದು ಸಾರುವ ಫಲಕಗಳು ಎಲ್ಲೆಲ್ಲೂ ರಾರಾಜಿಸುತ್ತಿರುತ್ತವೆ– ನಮ್ಮಲ್ಲಿನ ಫ್ಲೆಕ್ಸಿ ಬೋರ್ಡ್‌ಗಳಂತೆ. ಕೆಲವು ವಕೀಲರಂತೂ ‘ಫೋನ್ ಮಾಡಿ ನಾವೇ ಮನೆಗೆ/ಆಸ್ಪತ್ರೆಗೆ ಬರುತ್ತೇವೆ’ ಎಂಬ ಬೋರ್ಡ್ ಹಾಕಿಕೊಂಡಿರುತ್ತಾರೆ. ಡೋಂಟ್ ವೈಟ್ ಕಾಲ್ 8- 8888888888 ಎಂಬ ಲಾಯರಾಫೀಸಿನ ಜಾಹೀರಾತು ಕಿರುತೆರೆಯ ಮೇಲೆ ಮೂಡುತ್ತಲೇ ಇರುತ್ತದೆ. ಅವರ ಕೈಗೆ ಸಿಕ್ಕಿಬಿದ್ದರೆ ಏನಾಗುತ್ತದೊ ನನಗಂತೂ ಗೊತ್ತಿಲ್ಲ.

ಆದರೆ ನಾಪಿತನ ಕೈಗೆ ನಾನು ಸಿಕ್ಕಿಕೊಳ್ಳಲಿಲ್ಲ. ಅದಕ್ಕೆ ಎರಡು ಕಾರಣಗಳು ಒಂದು, ಸೀನಿಯರ್ ಸಿಟಿಜನ್ ಎಂದು ಸಾರುವ ನನ್ನ ಬೋಳುತಲೆ. ಇನ್ನೊಂದು, ಆಯುಷ್ಕರ್ಮದ ದರಗಳು. ಮಧ್ಯಮ ವರ್ಗದವರಿಗೆ ದುಬಾರಿ ಎನಿಸುವಂತಹ 60 ರೂ. ಬೆಂಗಳೂರಿನಲ್ಲಿ ಕೊಡಬೇಕಾದರೆ ಇಲ್ಲಿ ಅದೇ ಆಯುಷ್ಕರ್ಮಕ್ಕೆ 12ರಿಂದ 15 ಡಾಲರ್ ತೆತ್ತಬೇಕು. ಅದರ ಮೇಲೆ 3ರಿಂದ 5 ಡಾಲರ್ ಟಿಪ್?  ಹಾಗೆ ಟಿಪ್ ಕೊಡುವುದು ಇಲ್ಲಿನ ಸಂಸ್ಕೃತಿಯಂತೆ. ಸಲೂನಿನ ಕಾರ್ಮಿಕನಿರಲಿ, ಅಂಗಡಿಯ ಮಾಲೀಕನೇ ನಿಮಗೆ ಕೇಶಮುಂಡನೆ ಮಾಡಿದರೂ ಅವನಿಗೂ ಟಿಪ್ ಕೊಡಬೇಕು. ಹಾಗಾಗಿ, ಅಲ್ಲಿ ನಾಪಿತನಿಗೆ ತಲೆ ಒಡ್ಡುವ ನನ್ನ ಕುತೂಹಲವನ್ನು ಡಾಲರ್ ಉಳಿಸುವ ಉದ್ದೇಶದಿಂದ ಹತ್ತಿಕ್ಕಬೇಕಾಯಿತು. ಅಮೆರಿಕದಲ್ಲಿ ಬೋಳಿಸಿಕೊಳ್ಳುವ ಅನುಭವದಿಂದ ವಂಚಿತನಾದೆ.

ಅಮೆರಿಕದಲ್ಲಿರುವ ಭಾರತೀಯರು ಹಬ್ಬ ಹುಣ್ಣಿಮೆ ಆಚರಿಸಲು ಪಂಚಾಂಗ/ಕ್ಯಾಲೆಂಡರ್ ನೋಡುವುದಿಲ್ಲ. ಅದಕ್ಕೆ ಸಮೀಪದ ಶನಿವಾರ/ಭಾನುವಾರವೇ ಶುಭ ದಿನಗಳು ಅಥವಾ ಅನುಕೂಲಕರ ದಿನಗಳು. 29 ಶುಕ್ರವಾರ ಗಣೇಶನ ಹಬ್ಬವಾದರೆ ಅದನ್ನು ಶನಿವಾರ/ಭಾನುವಾರ ಆಚರಿಸುತ್ತಾರೆ. ಇಲ್ಲಿನ ಭಾರತೀಯ ಅಂಗಡಿಯೊಂದರಲ್ಲಿ ಒಂದು ಗಣೇಶ ಕೊಂಡರೆ ಎರಡು ಉಚಿತ ಎಂದಿತ್ತು. ಮೂರು ಗಣೇಶ ಮೂರ್ತಿಗಳನ್ನು ಪಡೆದು ಮಾಡುವುದಾದರೂ ಏನು ಎಂದು ತಲೆ ಕೆಡಿಸಿಕೊಂಡೆ.

ಕ್ಯಾಲಿಫೋರ್ನಿಯಾದ ಸ್ಯಾನ್ ಓಸೆ ಎಂಬ ಊರಿಗೆ ಹೋದಾಗ ಅಲ್ಲಿದ್ದ ಮಠದಲ್ಲಿ ರಾಘವೇಂದ್ರ ಸ್ವಾಮಿಗಳ ಆರಾಧನೆ ಒಂದು ದಿನ ಮುಂಚಿತವಾಗಿಯೇ ನಡೆಯಿತು. ಏಕೆಂದರೆ ಅಂದು ಭಾನುವಾರ, ಎಲ್ಲ ಭಕ್ತರಿಗೂ ರಜಾದಿನ. ಅಂದೇ ಮಾಡಿದರೆ ರಾಯರು ಒಲ್ಲೆ ಎನ್ನುವರೆ? ಆದುದರಿಂದಲೇ ಸುಮಾರು 600 ಮಂದಿ ರಾಯರ ಭಕ್ತರು ನೆರೆದಿದ್ದರು. ಶಾಸ್ತ್ರೋಕ್ತವಾಗಿ ದಿನ ನೋಡಿ ಆಚರಿಸಿದ್ದರೆ 60 ಮಂದಿ ಹಾಜರಾತಿ ಹಾಕುತ್ತಿದ್ದರೇನೋ. ಎಲ್ಲರಿಗೂ ಎಲೆ ಹಾಕಿ ಸೊಗಸಾದ ಭಾರತೀಯ ಊಟ ಬಡಿಸಲಾಯಿತು. ಚಾತುರ್ಮಾಸ್ಯಕ್ಕೆ ಬಂದಿದ್ದ ಸ್ವಾಮಿಗಳನ್ನು ಸ್ವಾಗತಿಸಲು ‘ವೆಲ್‌ಕಂ ಟು ಚಾತುರ್ಮಾಸ’ ಎಂಬ ಬಣ್ಣದ ಫ್ಲೆಕ್ಸಿ ಕಟ್ಟಲಾಗಿತ್ತು.

ರಸ್ತೆಗಳಲ್ಲಿ ಋತುವಿಲಾಸ
ನ್ಯೂಯಾರ್ಕಿನ ಬಡಾವಣೆಗಳಲ್ಲಿ ಓಡಾಡುವುದೇ ಒಂದು ಸಂತಸ. ಪ್ರತಿ ಅಪಾರ್ಟ್‌ಮೆಂಟಿನ ಮುಂದೆಯೂ ಹೂಗಳಿಂದ ಕಂಗೊಳಿಸುವ ತೋಟ, ಹಸಿರು ಹುಲ್ಲಿನ ಹಾಸು. ಹೂಬಣ್ಣಗಳೆಷ್ಟು ಗಾಢ. ಅವುಗಳ ಅಂದ ಚಂದಕ್ಕೆ ನಾವು ಮರುಳಾದೆವು. ಆದರೆ ಈ ಅಂದಚಂದ ಬೇಸಿಗೆಯ 3–4 ತಿಂಗಳಿಗೆ ಮಾತ್ರ ಸೀಮಿತ. ನಂತರ ಚಳಿಗಾಲ. ಹಿಮವರ್ಷದಲ್ಲಿ ಗಿಡಗಳು ಅಡಗಿ ಹೋಗುತ್ತವೆ. ಆ ಮೂರ್ನಾಲ್ಕು ತಿಂಗಳಾದರೂ ಸಿಂಗಾರಗೊಳ್ಳುತ್ತದಲ್ಲ? ಆದರೆ ನಮಗೆ ಇನ್ನೂ ಅಚ್ಚರಿ ಮೂಡಿಸಿದ ಸಂಗತಿ ಎಂದರೆ ಆ ಹೂಗಳನ್ನು ಯಾರೂ ಕೀಳುವುದಿಲ್ಲ. ಬೆಂಗಳೂರಿನಲ್ಲಾಗಿದ್ದರೆ, ಮನೆಯ ಮುಂದೆ ಒಡತಿ ಕಷ್ಟಪಟ್ಟು ಬೆಳೆಸಿದ್ದ ಹೂಗಳು ಬೆಳಗಾಗುವುದಕ್ಕೆ ಮುಂಚೆಯೇ ಭಕ್ತರ ಕೈ ಚಳಕಕ್ಕೆ ಕಣ್ಮರೆಯಾಗುತ್ತಿದ್ದವು. ಆದರೆ ಇಲ್ಲಿ ಅಂತಹ ಹೂ ಬೇಡುವ/ಬಯಸುವ ದೇವರುಗಳು ಇಲ್ಲ. ಮಹಿಳೆಯರಿಗೆ ಮುಡಿಯುವ ಚಪಲವೂ ಇಲ್ಲ. ಹಾಗಾಗಿ, ಹೂಗಳು ಸೇಫ್. ನೋಡುಗರ ಕಣ್ಣು ತಂಪು.

ಇಲ್ಲಿ ಚಿಲ್ಲರೆ ಅಂಗಡಿಗಳೇ ಇಲ್ಲ. ನಮ್ಮ ದಿನಸಿ ಅಂಗಡಿಯವ ಹೋಲ್‌ಸೇಲ್ ದರದಲ್ಲಿ 100 ಗ್ರಾಂ ತೊಗರಿಬೇಳೆ ಸಹ ಏನೂ ಗೊಣಗದೆ ಕೊಡುತ್ತಾನೆ. ಆದರೆ ಇಲ್ಲಿ ಏನೇ ಕೊಂಡರೂ ಮೊದಲೇ ಪ್ಯಾಕ್ ಮಾಡಿದ ಚೀಲಗಳಲ್ಲೇ ಇರುವ ವಸ್ತುಗಳನ್ನು ಮಾತ್ರ ಕೊಳ್ಳಲು ಸಾಧ್ಯ. ಚಿಲ್ಲರೆ ಅಂಗಡಿಗಳಿಲ್ಲ ನಿಜ, ಆದರೆ ಭಾರಿ ಭಾರಿ ಮಾಲ್‌ಗಳಿವೆ. ಅವು ಎಷ್ಟು ವಿಶಾಲವಾಗಿರುತ್ತೆಂದರೆ ಒಂದು ಮಹಡಿ ಖಾಲಿ ಮಾಡಿದರೆ ಅಲ್ಲಿ ಫುಟ್‌ಬಾಲ್ ಆಡಬಹುದು! ಅಷ್ಟು ದೊಡ್ಡದು. ಅಂತಹ ಮಹಡಿಗಳು ಹಲವಾರು ಸೇರಿದರೆ ಒಂದು ಮಾಲ್! ದುಡ್ಡು ಉಳಿಸಲು ಬಯಸುವ ಸಂಸಾರಸ್ಥರು ಇಲ್ಲಿ ಹೋಲ್‌ಸೇಲ್ ದರದಲ್ಲಿ ಹೋಲ್‌ಸೇಲಾಗಿ ಐಟಂಗಳನ್ನು ಕೊಂಡೊಯ್ಯುತ್ತಾರೆ. ವರ್ಷದಲ್ಲಿ ನಾಲ್ಕೈದು ಬಾರಿ ಶೇ 50ರಿಂದ 90 ರಿಯಾಯತಿ ಸಿಗುವ ದಿನಗಳಂದು ಮಾಲ್‌ಗಳ ಮುಂದೆ ಸರತಿ ಸಾಲು ಹಿಂದಿನ ರಾತ್ರಿಯೇ ಪ್ರಾರಂಭವಾಗುತ್ತದೆ. ಫ್ಲಾಸ್ಕ್‌ನಲ್ಲಿ ಕಾಫಿ, ಕೈನಲ್ಲಿ ತಿಂಡಿ, ಕೂರಲು ಕುರ್ಚಿ ಹಿಡಿದು ಜನ ಕ್ಯೂ ನಿಲ್ಲುತ್ತಾರೆ. ಬೆಳಿಗ್ಗೆ ಅಂಗಡಿ ತೆರೆಯುತ್ತಿದ್ದಂತೆ ಧಾವಿಸಿ ಒಳ ನುಗ್ಗಿ ತಮಗೆ ಬೇಕಾದ ಸಾಮಾನುಗಳಿಗೆ ಲಗ್ಗೆ ಇಡುತ್ತಾರೆ. ರಿಯಾಯತಿ ಮಾರಾಟ ಎಂದರೆ ಎಲ್ಲರ ಬಾಯಿನಲ್ಲೂ ನೀರೂರುವುದು ಸಹಜ.

ಒಬಾಮ ಬರುತ್ತಾರೆಂದು ಅವರ ರಕ್ಷಣೆಗಾಗಿ ತರಾತುರಿಯಲ್ಲಿ ದೆಹಲಿಯಲ್ಲಿ ಸಾವಿರಾರು ಸಿಸಿಟಿವಿ ಅಳವಡಿಸಲು ನಮ್ಮ ಸರ್ಕಾರ ಕಾಳಜಿ ತೋರಿತ್ತು. ಆದರೆ 1000 ಕೋಟಿ ರೂಪಾಯಿ ನಿರ್ಭಯ ಫಂಡ್ ಹಾಗೇ ಕುಳಿತಿದೆ. ಅದೇ ನಮಗೂ ಅಮೆರಿಕಕ್ಕೂ ಇರುವ ವ್ಯತ್ಯಾಸ. ಅಲ್ಲಿ ಶ್ರೀಸಾಮಾನ್ಯನ ಬಗ್ಗೆ ಕಾಳಜಿ ಇದೆ. ಅದಕ್ಕಾಗಿಯೇ ಎಲ್ಲ ಸೌಕರ್ಯ ಕಲ್ಪಿಸುತ್ತದೆ. ಹಾಗೆ ಕಲ್ಪಿಸುವಾಗ ಹಣ ಸೋರಿ ಹೋಗುವುದಿಲ್ಲ. ಕಳಪೆ ಕಾಮಗಾರಿ ಆಗುವುದಿಲ್ಲ. ಅದರ ಸದುಪಯೋಗ ಮಾಡಿಕೊಳ್ಳುವ ಜನ ಪ್ರಜ್ಞಾವಂತರೂ ಸಹ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT