ADVERTISEMENT

ಪುಟ್ಟ್–ಕಡಲೆ ಕರಿ: ಸುಲಭ, ಸ್ವಾದಿಷ್ಟ

ವಿಕ್ರಂ ಕಾಂತಿಕೆರೆ
Published 23 ಸೆಪ್ಟೆಂಬರ್ 2017, 19:30 IST
Last Updated 23 ಸೆಪ್ಟೆಂಬರ್ 2017, 19:30 IST
ಪುಟ್ಟ್–ಕಡಲೆ ಕರಿ: ಸುಲಭ, ಸ್ವಾದಿಷ್ಟ
ಪುಟ್ಟ್–ಕಡಲೆ ಕರಿ: ಸುಲಭ, ಸ್ವಾದಿಷ್ಟ   

ಮೊದಲ ಬಾರಿ ಕೇರಳಕ್ಕೆ ಪ್ರವಾಸ ಹೋದ ಗೆಳೆಯ ಹೊರಡುವ ಮೊದಲು ಅಲ್ಲಿನ ತಿಂಡಿ–ತಿನಿಸಿನ ಬಗ್ಗೆ ಕೇಳಿದ. ಆತ ಮಾಂಸಾಹಾರಿಯಲ್ಲದ ಕಾರಣ ಮೀನಿನ ವಿವಿಧ ಖಾದ್ಯಗಳ ಬಗ್ಗೆ ಹೇಳುವಂತಿರಲಿಲ್ಲ. ಆದ್ದರಿಂದ ಪುಟ್ಟ್‌ ಬಗ್ಗೆ ಹೇಳಿದ್ದೆ. ಅದನ್ನು ತಿನ್ನದೆ ವಾಪಸಾಗಬೇಡ ಎಂದೂ ‘ತಾಕೀತು’ ಮಾಡಿದ್ದೆ. ಆತ ಅಲ್ಲಿ ಪುಟ್ಟ್‌ ತಿಂದದ್ದು ಮಾತ್ರವಲ್ಲ, ವಾಪಸ್ ಬರುವಾಗ ಪುಟ್ಟ್‌ ಮಾಡುವ ಪಾತ್ರೆಯನ್ನೂ ತಂದು ಅಚ್ಚರಿ ಮೂಡಿಸಿದ್ದ. ಕೇರಳದ ಸಾರ್ವತ್ರಿಕ ಖಾದ್ಯವಾದ ಪುಟ್ಟ್‌ ಮೂರೇ ದಿನಗಳಲ್ಲಿ ಆತನ ಮೇಲೆ ಅಷ್ಟು ಪ್ರಭಾವ ಬೀರಿತ್ತು. ದೋಸೆ, ಇಡ್ಲಿ, ಚಪಾತಿ, ಪರೋಟ...ಇವೆಲ್ಲವೂ ಕೇರಳದ ಉಪಾಹಾರದಲ್ಲಿ ಸಾಮಾನ್ಯ. ಪಿಜ್ಜಾ, ಬರ್ಗರ್‌ನಂಥ ಆಧುನಿಕ ಆಹಾರ ಕಾಲಿಟ್ಟ ನಂತರ ಇಲ್ಲೂ ಆಹಾರ ಪದ್ಧತಿ ಬದಲಾವಣೆಯ ಹಾದಿ ಹಿಡಿದಿದೆ. ಆದರೂ ಪುಟ್ಟ್ ಎಂಬ ಖಾದ್ಯದ ಸ್ಥಾನ ‘ದೇವರ ನಾಡಿನಲ್ಲಿ’ ಇನ್ನೂ ವಿಶಿಷ್ಟವಾಗಿಯೇ ಉಳಿದಿದೆ. ಪುಟ್ಟ್‌ ಇಲ್ಲದೆ ಇಲ್ಲಿನ ಯಾವುದೇ ಹೋಟೆಲ್‌ನ ತಿಂಡಿ ಪಟ್ಟಿ ಪೂರ್ಣವಾಗುವುದಿಲ್ಲ. ಪುಟ್ಟ್‌ ಮಾಡದ ಮನೆ ಇಲ್ಲವೆಂದೇ ಹೇಳಬೇಕು.

ಅಕ್ಕಿಯಿಂದ ತಯಾರಿಸಿದ ಆಹಾರವನ್ನು ಹೆಚ್ಚು ಸೇವಿಸುವ ಕೇರಳಿಗರ ಮನೆ–ಮನೆಯ ತಿಂಡಿ ಈ ಪುಟ್ಟ್‌. ಸಕ್ಕರೆ, ಬೆಲ್ಲ ಇತ್ಯಾದಿ ಯಾವುದೇ ಸಿಹಿ ಪದಾರ್ಥಗಳನ್ನು ಸೇರಿಸದೇ ಮಾಡುವುದರಿಂದ ಪುಟ್ಟ್‌ ಅತ್ತ ಸಿಹಿಯೂ ಅಲ್ಲ; ಇತ್ತ ಸಪ್ಪೆಯೂ ಅಲ್ಲ. ಯಾವುದರ ಜೊತೆ ಸೇವಿಸುತ್ತೇವೆಯೋ ಅದಕ್ಕೆ ತಕ್ಕಂತೆ ಈ ತಿಂಡಿ ರುಚಿ ಬದಲಿಸುತ್ತದೆ. ಆದರೆ ಕೇರಳದ ವಿಶಿಷ್ಟ ‘ಕಡಲೆ ಕರಿ’ಯ ಜೊತೆ ಸೇವಿಸಿದರೆ ಇದರ ರುಚಿಯೇ ಬೇರೆ. ನಾಲಿಗೆಗೆ ರುಚಿ ನೀಡುವ ಪುಟ್ಟ್‌ ದೇಹಕ್ಕೆ ಶಕ್ತಿಯನ್ನೂ ನೀಡುತ್ತದೆ ಎಂಬ ಖ್ಯಾತಿಯನ್ನೂ ಹೊಂದಿದೆ. ಬೇಗ ಜೀರ್ಣವಾಗದೇ ಇರುವುದರಿಂದ ಶ್ರಮಜೀವಿಗಳಿಗೂ ಇದು ಅಚ್ಚುಮೆಚ್ಚು.

ಅಕ್ಕಿ ಹಿಟ್ಟು, ತೆಂಗಿನ ಕಾಯಿ ತುರಿ
ಪುಟ್ಟ್‌ ಮಾಡುವ ವಿಧಾನ ಸುಲಭ. ಅಕ್ಕಿ ಮತ್ತು ತೆಂಗಿನಕಾಯಿ ಮಾತ್ರ ಇದಕ್ಕೆ ಬೇಕಾದ ವಸ್ತುಗಳು. ಈ ಎರಡು ಕಾರಣಕ್ಕಾಗಿಯೇ ಕೇರಳದಲ್ಲಿ ಇದು ಸರ್ವಸಾಮಾನ್ಯವಾಗಿರುವ ಸಾರ್ವತ್ರಿಕ ಖಾದ್ಯವಾಗಿ ಇನ್ನೂ ಉಳಿದಿದೆ.

ADVERTISEMENT

ಬೆಳ್ತಿಗೆ ಅಕ್ಕಿ ಅಥವಾ ಕುಚಲಕ್ಕಿಯನ್ನು ರವೆಯ ಮಾದರಿಯಲ್ಲಿ ಪುಡಿ ಮಾಡಿ ಈ ತಿಂಡಿಗಾಗಿ ಬಳಸುತ್ತಾರೆ. ಈಗ ಸಿದ್ಧಪಡಿಸಿದ ಪುಡಿ ಅಂಗಡಿಯಲ್ಲೂ ಸಿಗುತ್ತದೆ. ಬೆಂಗಳೂರು, ಮಂಗಳೂರು, ಮೈಸೂರು ಮುಂತಾದ ನಗರಗಳ ಮಾಲ್‌ ಮತ್ತು ಕೇರಳಿಗರ ಅಂಗಡಿ–ಮಳಿಗೆಗಳಲ್ಲಿ ಪುಟ್ಟ್‌ ಪುಡಿ ಸುಲಭವಾಗಿ ಸಿಗುತ್ತದೆ. ಈ ಪುಡಿಯನ್ನು ನೀರಿನೊಂದಿಗೆ ಬೆರೆಸಬೇಕು. ಕೈಯಲ್ಲಿ ಹಿಡಿದರೆ ಉದುರುವಂತೆ ಇರಬೇಕು ಈ ಪಾಕ. ಇದನ್ನು ಸ್ವಲ್ಪ ಪ್ರಮಾಣದಲ್ಲಿ ಪುಟ್ಟ್‌ ಪಾತ್ರೆಯೊಳಗೆ ಹಾಕಬೇಕು. ಅದರ ಮೇಲೆ ಸ್ವಲ್ಪ ತೆಂಗಿನ ತುರಿ ಹಾಕಬೇಕು. ನಂತರ ಹಿಟ್ಟಿನ ಪಾಕ ಹಾಕಬೇಕು. ಹೀಗೆ ನಾಲ್ಕೈದು ಬಾರಿ ಹಾಕಿದಾಗ ಪಾತ್ರೆ ತುಂಬುತ್ತದೆ. ನಂತರ ಇಡ್ಲಿ ಪಾತ್ರೆಯೊಳಗೆ ಇರಿಸಿ ಬೇಯಿಸಬೇಕು. ಹೊರಗೆ ತೆಗೆದು ಪಾತ್ರೆಯ ಒಂದು ಭಾಗದಲ್ಲಿರುವ ಸಣ್ಣ ಮುಚ್ಚಳವನ್ನು ನಿಧಾನವಾಗಿ ನೂಕಿದರೆ ಇನ್ನೊಂದು ಭಾಗದಿಂದ ಪುಟ್ಟ್‌ ತುಂಡುಗಳು ಹೊರಬೀಳುತ್ತವೆ.
ಕಡಲೆ ಕರಿ ಮಾತ್ರವಲ್ಲದೆ ನೇಂದ್ರ ಬಾಳೆ ಹಣ್ಣು, ಏಲಕ್ಕಿ ಬಾಳೆಹಣ್ಣು (ಕೇರಳದಲ್ಲಿ ಕದಳಿ) ಮುಂತಾದವುಗಳ ಜೊತೆಗೆ ಸೇವಿಸುವವರೂ ಇದ್ದಾರೆ. ಕೆಲವರು ಬರೀ ಸಕ್ಕರೆಯೊಂದಿಗೆ ತಿನ್ನುತ್ತಾರೆ. ಮೊಸರಿನೊಂದಿಗೆ ತಿನ್ನುವವರೂ ಇಲ್ಲದಿಲ್ಲ.

ರುಚಿಕರ ಕಪ್ಪ ಪುಟ್ಟ್‌ನಂತೆಯೇ ಕೇರಳದಲ್ಲಿ ಹೆಚ್ಚು ಬಳಕೆಯಲ್ಲಿರುವ ಆಹಾರ ಕಪ್ಪ. ಕಪ್ಪ ಎಂದರೆ ಮರಗೆಣಸು. ಇದನ್ನು ಬೇಯಿಸಿ ಸ್ವಲ್ಪ ಮೆಣಸಿನ ಖಾರ, ಉಪ್ಪು ಹಾಕಿದರೆ ರುಚಿಕರವಾದ ತಿಂಡಿ ಸಿದ್ಧವಾಗುತ್ತದೆ. ತಿನ್ನಲು ಅತ್ಯಂತ ರುಚಿಕರವಾದ ಈ ತಿಂಡಿ ದೇಹವನ್ನು ಬಲಿಷ್ಠವಾಗಿಸಲು ಸಹಕಾರಿ. ಹೀಗಾಗಿ ಇದು ಕೂಡ ಶ್ರಮಜೀವಿಗಳಿಗೆ ಇಷ್ಟವಾದ ತಿಂಡಿ.

ಕೇರಳದ ಹೋಟೆಲ್‌ಗಳಲ್ಲಿ ಕಪ್ಪ ಬಿರಿಯಾನಿ ಲಭ್ಯ. ಬಡವರ ಆಹಾರವಾದ ಕಪ್ಪ, ಬಿರಿಯಾನಿ ಸ್ವರೂಪ ಪಡೆದಾಗ ಅದರ ರುಚಿಯೂ ಹೆಚ್ಚಿದ್ದು ಒಮ್ಮೆ ತಿಂದರೆ ಮತ್ತೆ ಮತ್ತೆ ಬಾಯಲ್ಲಿ ನೀರೂರಿಸುತ್ತದೆ. ಮಾಂಸಾಹಾರ ಪ್ರಿಯರು ಕಪ್ಪ ಜೊತೆಯಲ್ಲಿ ಮೀನಿನ ವಿವಿಧ ಬಗೆಯ ಖಾದ್ಯವನ್ನೂ ಸೇವಿಸುತ್ತಾರೆ. ಬೂತಾಯಿ ಅಥವಾ ತಾರ್ಲಿ (ಕೇರಳದಲ್ಲಿ ಮತ್ತಿ) ಸಾರು, ಬಾಂಗ್ಡಾ (ಅಯ್ಲ) ಅಥವಾ ಪಾಪ್ಲೆಟ್‌ (ಮಾಂಜಿ) ಮೀನಿನ ಫ್ರೈ ಕಪ್ಪದ ರುಚಿಯನ್ನು ಇಮ್ಮಡಿಗೊಳಿಸುತ್ತದೆ. ⇒v

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.