ADVERTISEMENT

ಪುಟ್ರಜಯ ನಿಸರ್ಗ ವೈಭವದಲ್ಲಿ ಆಧುನಿಕ ಲಾಸ್ಯ

​ಪ್ರಜಾವಾಣಿ ವಾರ್ತೆ
Published 2 ಜುಲೈ 2016, 19:30 IST
Last Updated 2 ಜುಲೈ 2016, 19:30 IST
ಹಡಗು ವಿಹಾರದಲ್ಲಿ ಕಾಣುವ ಸೆರಿ ವಾವಾಸನ್‌ ಸೇತುವೆ. ಹಿನ್ನೆಲೆಯಲ್ಲಿ ಪುಟ್ರಾ ಮಸೀದಿ
ಹಡಗು ವಿಹಾರದಲ್ಲಿ ಕಾಣುವ ಸೆರಿ ವಾವಾಸನ್‌ ಸೇತುವೆ. ಹಿನ್ನೆಲೆಯಲ್ಲಿ ಪುಟ್ರಾ ಮಸೀದಿ   

ಮಲೇಷ್ಯಾದ ಪುಟ್ರಜಯ ನಿಸರ್ಗದ ಮೋಹಕತೆಯೊಂದಿಗೆ ಆಧುನಿಕತೆಯ ಘನತೆಯನ್ನೂ ಮೈಗೂಡಿಸಿಕೊಂಡ ಯೋಜಿತ ನಗರ. ನಗರದಲ್ಲಿನ ಉದ್ಯಾನಗಳನ್ನು ನೋಡುತ್ತಿದ್ದರೆ, ‘ಉದ್ಯಾನಗಳಲ್ಲೇ ನಗರ’ ಇದೆ ಎನ್ನುವ ಭಾವ ಉಂಟಾಗದಿರದು. ನಿತ್ಯ ಮದುವಣಗಿತ್ತಿಯಂತೆ ಕಂಗೊಳಿಸುವ ಈ ನಗರ, ಪ್ರವಾಸಿಗರ ಪಾಲಿನ ಅಮರಾವತಿ.

ಜಿತ ನಗರಿ, ವಿನೂತನ ಪಟ್ಟಣ ಮಾದರಿ ಹಾಹೂ ಮಲೇಷ್ಯಾದ ಆಡಳಿತ ಕಚೇರಿಗಳಿರುವ ಪ್ರದೇಶ ಪುಟ್ರಜಯ. ಪರಿಸರವನ್ನು ಕಡೆಗಣಿಸದೆ ಪರಂಪರೆಯನ್ನು ಒಳಗೊಂಡು ಮುಂದಿನ ಪೀಳಿಗೆಗೆ ಉಳಿಸುವ ಭರವಸೆ ಮೂಡಿಸುವಂತೆ ಈ ನಗರ ನಿರ್ಮಾಣವಾಗಿದೆ.

ಸುಂದರವಾಗಿ ವಿನ್ಯಾಸಗೊಳಿಸಿದ ರಸ್ತೆ, ಹಸಿರು ಭೂಮಿ, ಉದ್ಯಾನ, ಆಕರ್ಷಕ ವಾಸ್ತುವಿನ್ಯಾಸದಲ್ಲಿ ಎದ್ದು ಕಾಣುವ ಅತ್ಯಾಧುನಿಕ ಕಟ್ಟಡಗಳನ್ನು ನೋಡುತ್ತಿದ್ದರೆ ‘ಉದ್ಯಾನದಲ್ಲೇ ನಗರ’ ಎಂಬ ಉದ್ದೇಶದ ಸಾಕಾರ ರೂಪ ಇದೆನಿಸುತ್ತದೆ.

4931 ಹೆಕ್ಟೇರ್‌ಗಳಷ್ಟು ವಿಸ್ತೀರ್ಣದಲ್ಲಿ ಹರವಿಕೊಂಡ ಪುಟ್ರಜಯವನ್ನು ನೋಡಲು ಇಡೀ ದಿನವಾದರೂ ಸಾಕಾಗುವುದಿಲ್ಲ. ಸೈಟ್‌ ಸೀಯಿಂಗ್‌ ಬಸ್‌ನಲ್ಲಿ ಒಂದು–ಅರ್ಧ ದಿನದ ಪ್ಯಾಕೇಜ್‌ ಸೌಲಭ್ಯಗಳಿವೆ. ಆದರೆ ಕೆಲವು ನಿಮಿಷಗಳಲ್ಲೇ ಪುಟ್ರಜಯದ ಅನನ್ಯ ಸೌಂದರ್ಯ ಅನುಭವಿಸಲು ಇನ್ನೂ ಎರಡು ದಾರಿಗಳಿವೆ. ಪುಟ್ರಜಯ ಸರೋವರದಲ್ಲಿ ಪುಟ್ಟ ಹಡಗಿನಲ್ಲಿ ವಿಹರಿಸುತ್ತ ದಡದ ಮೇಲೆ ಕಾಣುವ ಕಟ್ಟಡಗಳು, ವಿಶಿಷ್ಟ ವಿನ್ಯಾಸದ ಸೇತುವೆಗಳ ಸೊಬಗು ಸವಿಯುವ ದಾರಿಯದು.

500 ಮೀಟರ್‌ ಎತ್ತರದಿಂದ ಹೀಲಿಯಂ ಬಲೂನಿನಲ್ಲಿ ನಿಂತು ಹಸಿರೇ ಉಸಿರಾದಂತಹ ಪರಿಸರದಲ್ಲಿ ಸರೋವರ, ಮತ್ತು ಕಟ್ಟಡಗಳ ಸೌಂದರ್ಯ ಕಣ್ತುಂಬಿಕೊಳ್ಳುವ ದಾರಿ ಮತ್ತೊಂದು. ಹೀಗೆ ನೀರ ಮೇಲೆ ಪುಟ್ಟ ಹಡಗಿನಲ್ಲಿ ಕುಳಿತು ದಡದ ಮೇಲೆ ಕಾಣುವ ಪುಟ್ರಾ ಮಸೀದಿ, ಸ್ಟೀಲ್‌ ಮಸೀದಿಯ ಸೌಂದರ್ಯವನ್ನು ಆಕರ್ಷಕ ವಾಸ್ತುವಿನ್ಯಾಸಗಳ ಸೇತುವೆಗಳ ಹಿನ್ನೆಲೆಯ ಜತೆಗೆ ನೋಡಿದರೆ ಯಾವುದೋ ಪೋಸ್ಟರ್‌ ನೋಡುತ್ತಿರುವಂತೆ ಭಾಸವಾದರೆ ಆಶ್ಚರ್ಯವಿಲ್ಲ.

ಸಾಂಪ್ರದಾಯಿಕ – ಆಧುನಿಕತೆಯ ಕಸಿ
ಪುಟ್ರಜಯದ ಆಧುನಿಕ ಮತ್ತು ತಾಜಾ ನೋಟಕ್ಕೆ ಕಲಾತ್ಮಕ, ಕಾವ್ಯಾತ್ಮಕ ಆಯಾಮ ಒದಗಿದ್ದು ಈ ವಿಶಿಷ್ಟ ವಿನ್ಯಾಸದ ಸೇತುವೆಗಳಿಂದ. ಪುಟ್ರಾ ಸೇತುವೆ ಇಸ್ಲಾಮಿಕ್‌ ಶೈಲಿಯ ವಾಸ್ತುವಿನ್ಯಾಸದಿಂದ ಕೂಡಿದ ಅಷ್ಟಕೋನಾಕೃತಿಯ ಸ್ತಂಭಗಳಿಂದ ಆಕರ್ಷಿಸುತ್ತದೆ. ಇದರ ಕೆಳಗೆ ‘ಕ್ರೂಸ್‌ ತಾಸಿಕ್‌’ ಹಡಗು ವಿಹಾರದ ಸೌಲಭ್ಯ ಇದೆ.

650 ಹೆಕ್ಟೇರ್‌ಗಳಷ್ಟು ವಿಶಾಲವಾದ ಮಾನವ ನಿರ್ಮಿತ ಪುಟ್ಟ ಕೆರೆ, ವಿಸ್ತಾರವಾದ ಪುಟ್ರಜಯದ ಶೇ 13ರಷ್ಟು ಭಾಗವನ್ನು ಆಕ್ರಮಿಸಿದೆ. ಸ್ಥಳದ ಸೌಂದರ್ಯ ಹೆಚ್ಚಿಸುವುದರ ಜತೆಗೆ ವಾತಾವರಣವನ್ನು ಹಸನಾಗಿಡುವುದರಲ್ಲಿಯೂ ಈ ಕೆರೆ ನೆರವಾಗಿದೆ. ಗೈಡ್‌ ಮತ್ತು ವೀಕ್ಷಕ ವಿವರಣೆಗಳಿಂದ ಕೂಡಿದ ಇಲ್ಲಿನ ಹಡಗು ಯಾನ ರೋಮಾಂಚನಕಾರಿ ಅನುಭವ.

ಪುಟ್ರಾ ಮಸೀದಿಯ 116 ಮೀಟರ್‌ ಎತ್ತರದ ಮಿನಾರು ಈ ಪ್ರದೇಶದಲ್ಲೇ ಅತ್ಯಂತ ಎತ್ತರವಾದುದು. ಇಲ್ಲಿನ ಅತ್ಯಂತ ಪ್ರಸಿದ್ಧ ಮಸೀದಿ ಇದು. ಮಸೀದಿಯ ಬೃಹತ್‌ ಗುಮ್ಮಟ ಗುಲಾಬಿ ವರ್ಣದ ಗ್ರಾನೈಟ್‌ನಿಂದ ಅಲಂಕೃತವಾಗಿದೆ. ಏಕಕಾಲಕ್ಕೆ 15000 ಜನರು ಪ್ರಾರ್ಥನೆ ಸಲ್ಲಿಸಬಹುದಾದಷ್ಟು ದೊಡ್ಡ ಆವರಣವಿದೆ. ಪಕ್ಕದಲ್ಲೇ ಸ್ಟೀಲ್‌ ಮಸೀದಿ ಇದೆ.
ಪರ್ದಾನಾ ಪುಟ್ರಾ, ಪ್ರಧಾನ ಮಂತ್ರಿ ಕಚೇರಿ ಮತ್ತು ಇತರ ಮಂತ್ರಿಗಳ ಕಚೇರಿ ಇರುವ ಕಟ್ಟಡ ಇಸ್ಲಾಮಿಕ್‌–ಮೊಘಲ್‌ ವಾಸ್ತುವಿನ್ಯಾಸದಿಂದ ಆಕರ್ಷಿಸುತ್ತದೆ. ಈರುಳ್ಳಿ ಆಕಾರದ ಹಸಿರುಗುಮ್ಮಟ ದೂರದಿಂದಲೆ ಕಾಣುತ್ತದೆ.

ಇಲ್ಲಿನ ಪ್ರಮುಖ ಲ್ಯಾಂಡ್‌ಮಾರ್ಕ್‌ ‘ಪುಟ್ರಜಯ ಇಂಟರ್‌ನ್ಯಾಷನಲ್‌ ಕನ್ವೆನ್ಷನ್‌ ಸೆಂಟರ್‌’. ಮಡಚಿದ ಒರಿಗ್ಯಾಮಿ ಆಕಾರದಲ್ಲಿ ಅನತಿ ದೂರದಿಂದಲೆ ಗಮನ ಸೆಳೆಯುವ ಇದು, 1.3 ದಶಲಕ್ಷ ಚದರ ಅಡಿಗಳಷ್ಟು ವಿಶಾಲವಾಗಿದೆ. 57 ವಿವಿಧ ಸಭಾಂಗಣಗಳು, ಚಿಕ್ಕ ಸಭೆ ನಡೆಸುವ ಕೋಣೆಗಳು ಇಲ್ಲಿವೆ. ಅತ್ಯಂತ ದೊಡ್ಡ ಸಭಾಂಗಣದಲ್ಲಿ 27,778 ಜನರು ಆಸೀನರಾಗಬಹುದು! ಇಲ್ಲಿನ ಸಭಾಂಗಣವೊಂದರಿಂದ ಪುಟ್ರಜಯದಲ್ಲಿರುವ ಪ್ರಧಾನ ಮಂತ್ರಿಗಳ ಕಾರ್ಯಾಲಯದ ಕಟ್ಟಡ ನೇರವಾಗಿ ಕಾಣುವಂತಿದೆ.

‘ಪಿಐಸಿಸಿ’ಯ ಕೊನೆಯ ಅಂತಸ್ತಿನಿಂದಲೂ ಪುಟ್ರಜಯದ ವಿಹಂಗಮ ನೋಟ ಸವಿಯಬಹುದು. ಈ ನಗರದ ಊಟದಲ್ಲಿ ಸ್ಥಳೀಯ, ಖಂಡಾಂತರ ವೈವಿಧ್ಯಗಳ ಭರಪೂರ ಆಯ್ಕೆ ಇದೆ.

ಮಳೆಕಾಡುಗಳ ನಾಡು
ಮೂರನೇ ಎರಡು ಭಾಗದಷ್ಟು ಮಳೆಕಾಡುಗಳಿಂದ ಆವೃತವಾದ ಮಲೇಷ್ಯಾವನ್ನು ನಿಸರ್ಗ ಸಮೃದ್ಧವಾಗಿ ಹರಸಿದೆ. 130 ದಶಲಕ್ಷ ವರ್ಷಗಳಷ್ಟು ಹಳೆಯದಾದ ಈ ಮಳೆಕಾಡು ಜಗತ್ತಿನ ಶೇ 20ರಷ್ಟು ಪ್ರಾಣಿ ಪ್ರಭೇದಗಳಿಗೆ ಮನೆ. ಇದೇ ಕಾಡಿನ ಪರಿಕಲ್ಪನೆಯನ್ನು ಪರಿಸರ ಸಂರಕ್ಷಣೆಯ ಸಂದೇಶದೊಂದಿಗೆ ಸಿದ್ಧಗೊಳಿಸಿದ ‘ಫ್ಯಾಂಟಸಿ ರೇನ್‌ ಫಾರೆಸ್ಟ್‌’ ಎಂಬ ನೃತ್ಯರೂಪಕ ದಿನವೂ ಎರಡು ಬಾರಿ ‘ಪಿಐಸಿಸಿ’ಯಲ್ಲಿ ಪ್ರದರ್ಶನಗೊಳ್ಳುತ್ತದೆ.

ಸುಮಾರು 1 ಕೋಟಿ ರಿಂಗಿಟ್‌ (ಒಂದು ರಿಂಗಿಟ್‌ ನಮ್ಮ 17 ರೂಪಾಯಿಗೆ ಹತ್ತಿರ) ವೆಚ್ಚದಲ್ಲಿ ನಿರ್ಮಾಣವಾದ ಪ್ರದರ್ಶನದಲ್ಲಿ ವಿವಿಧ ದೇಶಗಳ 60 ಕಲಾವಿದರು, ವೇದಿಕೆಯ ಹಿನ್ನೆಲೆಯಲ್ಲಿ 30 ಜನರ ದುಡಿಮೆ ಇದೆ. ಕಾಂಬೋಡಿಯಾ, ಚೈನಾ, ಸಿಂಗಪುರ, ಹಾಂಗ್‌ಕಾಂಗ್‌ ಮತ್ತು ಫ್ರಾನ್ಸ್‌ನ ಇತಿಹಾಸ, ಸಂಸ್ಕೃತಿ ಮತ್ತು ಪರಿಸರ ತಜ್ಞರು ಮೂರು ವರ್ಷ ಸಂಶೋಧನೆ ಮಾಡಿ ವಸ್ತುವಿಷಯವನ್ನು, ಪ್ರಸ್ತುತಿಯನ್ನು ನಿರ್ಧರಿಸಿದ್ದು ಇದರ ಅಗ್ಗಳಿಕೆ.

ಪ್ರೇಮ, ಸಹನೆ, ನಿಸರ್ಗದೊಡನೆ ಮಾನವರ ಸಹಬಾಳ್ವೆ, ಸಮನ್ವಯ ಮೆರೆದ ಒಂದು ತಾಸಿನ ಪ್ರದರ್ಶನ ಅದು. ಬೃಹತ್‌ ಪರದೆ, ಪ್ರಭಾವಶಾಲಿ ಬೆಳಕು ಮತ್ತು ದನಿಸಂಯೋಜನೆ, ಮೈನವಿರೇಳಿಸುವ ರೋಮಾಂಚಕಾರಿ ಸಾಹಸ, ಸಾಂಸ್ಕೃತಿಕ ಮತ್ತು ಸ್ಥಳೀಯ ನೃತ್ಯಶೈಲಿ, ಸುಮಧುರ ಸಂಗೀತ ಎಲ್ಲವೂ ಮೈಮರೆಸಿತು.

ಇಲ್ಲಿರುವ ಹಲವು ಪ್ರಮುಖ ಉದ್ಯಾನಗಳ ಪೈಕಿ ಮಲೇಷ್ಯಾದಲ್ಲೇ ಅತ್ಯಂತ ದೊಡ್ಡದಾದ ಜೈವಿಕ ಉದ್ಯಾನ ‘ತಮನ್‌ ಬಾಟನಿ’ ಭೇಟಿ ಆಹ್ಲಾದಕರ. 92 ಹೆಕ್ಟೇರ್‌ ವಿಸ್ತೀರ್ಣದ ಉದ್ಯಾನದಲ್ಲಿ ಸ್ಥಳೀಯ, ದಕ್ಷಿಣ ಅಮೆರಿಕ, ಆಫ್ರಿಕಾ ಹಾಗೂ ಏಷ್ಯಾ ಪೆಸಿಫಿಕ್‌ ಪ್ರದೇಶದ ಸುಮಾರು 90 ದೇಶಗಳ 700 ಸಸ್ಯ ಪ್ರಬೇಧಗಳಿವೆ. ಗಿಡದ ಸುಮಾರು ಎತ್ತರದ ಮಟ್ಟಕ್ಕೆ ಬರುವಂತೆ ಕಣಿವೆಯ ಮೇಲೆ ನಿರ್ಮಿಸಿದ 170 ಮೀಟರ್‌ ಉದ್ದದ ಕಟ್ಟಿಗೆಯ ಸೇತುವೆ (ಕೆನಾಪಿ ಸೇತುವೆ) ಮೇಲೆ ನಡೆದು, ಮಳೆಕಾಡಿನ ಗಿಡಗಳ ಸಾಮೀಪ್ಯವನ್ನು ಅನುಭವಿಸಬಹುದು.

‘ಗಾರ್ಲಿಕ್‌ ವೈನ್‌’ ಎಂಬ ಗಿಡದ ಎಲೆ, ಹೂ ಎಲ್ಲವೂ ಬೆಳ್ಳುಳ್ಳಿ ವಾಸನೆ. ಕಾಲ್ನಡಿಗೆಯಲ್ಲಿ, ಸೈಕಲ್‌ ಟ್ರ್ಯಾಕ್‌ನಲ್ಲಿ, ಬಾಡಿಗೆ ಟ್ರಾಮ್‌ನಲ್ಲಿ ಉದ್ಯಾನ ವೀಕ್ಷಣೆ ಸಾಧ್ಯ. ಪಾಮ್‌ ಗಿಡಗಳಂತೂ ಈ ಉದ್ಯಾನದ ವಿನ್ಯಾಸಕ್ಕೆ ವಿಶೇಷ ಮೆರುಗು ನೀಡಿವೆ. ಇಲ್ಲಿ ಮಾತ್ರ ಕಂಡು ಬರುವ ವಿಶಿಷ್ಟ ಕೊಡೆ ಆಕಾರದ ಎಲೆಯುಳ್ಳ ಪಾಮ್‌ ಅಳಿವಿನಂಚಿನಲ್ಲಿರುವ ಅಪರೂಪದ ಸಸ್ಯ ಪ್ರಭೇದ. ಇಂತಹ ಸಸ್ಯಸಂಕುಲದ ಸಂರಕ್ಷನೆಯೇ ಉದ್ದೇಶವಾಗಿರುವ ‘ತಮನ್‌ ಬಾಟನಿ’ಯನ್ನು ಸಾಂಕೇತಿಕವಾಗಿ ಪ್ರತಿನಿಧಿಸುತ್ತಿದೆ ಈ ಎಲೆಯ ಚಿತ್ರ, ಅಧಿಕೃತ ಮುದ್ರೆಯ ಭಾಗವಾಗಿ.

ಉದ್ಯಾನದಲ್ಲಿನ ‘ಮೊರಕ್ಕನ್‌ ಪೆವಿಲಿಯನ್‌’ನಲ್ಲಿ ಇಸ್ಲಾಮಿಕ್‌ ಶೈಲಿಯ ಅಪರೂಪದ ಪೀಠೋಪಕರಣ, ಅಲಂಕಾರಿಕ ಹೂಜಿ, ಇತರೆ ವಸ್ತುಗಳನ್ನು ಸಂಗೀತದ ಹಿನ್ನೆಲೆಯಲ್ಲಿ ನೋಡುತ್ತಿದ್ದರೆ– ಆ ವಿಶಿಷ್ಟ ವಾಸ್ತುವಿನ್ಯಾಸದ ಕೋಣೆ, ಅಂಗಣದಲ್ಲಿ ಶಾಂತ ಸ್ಥಿತಿ ಅನುಭವಕ್ಕೆ ಬರುತ್ತದೆ. ‘ಪ್ಯಾರಾಡೈಸ್‌ ಫೌಂಡ್‌–ಜರ್ನಿ ಥ್ರು ನೊಬೆಲ್‌ ಗಾರ್ಡನ್‌ ಆಫ್ ಏಷ್ಯಾ ಬುಕ್‌’ನಲ್ಲಿ ಉಲ್ಲೇಖಿತವಾದಂತೆ, ಏಷ್ಯಾದ 40 ಸುಂದರ ಉದ್ಯಾನಗಳ ಪಟ್ಟಿಯಲ್ಲಿ ಸ್ಥಾನ ಪಡೆದು ಅಂತರರಾಷ್ಟ್ರೀಯವಾಗಿ ಗುರುತಿಸಿಕೊಂಡ ಉದ್ಯಾನದ ತುಂಬೆಲ್ಲ ಹಸಿರಿನ ವಿವಿಧ ಛಾಯೆಗಳದೇ ವಿಲಾಸ.

ರಜೆ ಋತುವಿನ ತಂಗುದಾಣ
ಪುಟ್ರಜಯದಲ್ಲಿ ಕುಟುಂಬದೊಡನೆ ರಜೆಯ ಅನುಭವಕ್ಕೆ ಹೇಳಿ ಮಾಡಿಸಿದ ಇಂತಹ ತಾಣಗಳಿವೆ. ರಜೆಯ ಮಜವನ್ನು ಊಹೆಗೂ ಮೀರಿ ವಿಸ್ತರಿಸಿದ ತಾಣಗಳಿವು. ಏಳೆಂಟು ವರ್ಷಗಳಿಂದೀಚೆಗೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಳ್ಳುತ್ತಿರುವ ಮುಖ್ಯ ಕಾರ್ಯಕ್ರಮ ರಾಯಲ್‌ ಫ್ಲೋರಿಯಾ. ಜಾದೂಮಯ ಹೂಗಳ ಜಗವನ್ನು ಉದ್ಯಾನದ ಸೊಬಗಿನೊಂದಿಗೆ ಕಣ್ತುಂಬಿಕೊಳ್ಳಲು ಕಾತರದಿಂದ ಕಾಯುತ್ತಿದ್ದ ಕ್ಷಣ ಹತ್ತಿರವಾಗತೊಡಗಿತ್ತು.

ಪ್ರವಾಸೋದ್ಯಮ ಮತ್ತು ಸಂಸ್ಕೃತಿ ಮಂತ್ರಾಲಯ, ಮಲೇಷ್ಯಾ ಪ್ರವಾಸೋದ್ಯಮ ಇಲಾಖೆ ಸಹಯೋಗದಲ್ಲಿ ‘ಪರ್‌ಬದನನ್‌ ಪುಟ್ರಜಯ’ (ಪಿಪಿಜೆ, ಸ್ಥಳೀಯ ಆಡಳಿತ ಕಚೇರಿ) ಹಾಗೂ ಪಿಪಿಜೆಯ ಅಂಗಸಂಸ್ಥೆ ‘ಪುಟ್ರಜಯ ಫ್ಲೋರಿಯಾ ಎಸ್‌ಡಿಎನ್‌ ಬರ್‌ಹಾದ್‌’ (ಪಿಎಫ್‌ಎಸ್‌ಬಿ) ಪುಷ್ಪ ಮತ್ತು ಉದ್ಯಾನ ಉತ್ಸವದ 9ನೇ ಆವೃತ್ತಿ ಆಯೋಜಿಸಿದ ಸಂದರ್ಭಕ್ಕೆ ಸಾಕ್ಷಿಯಾಗುವ ಅವಕಾಶವದು.

2007ರಲ್ಲಿ ಶುರುವಾದ ‘ರಾಯಲ್‌ ಫ್ಲೋರಿಯಾ’ 2009ರಿಂದ ಮಲೇಷ್ಯಾ ಪ್ರವಾಸೋದ್ಯಮದ ವಾರ್ಷಿಕ ಅಂತರರಾಷ್ಟ್ರೀಯ ಚಟುವಟಿಕೆಯಾಗಿ ಗುರುತಿಸಿಕೊಂಡಿದೆ. ಈ ಬಾರಿಯ ಉತ್ಸವ ‘ಮ್ಯಾಜಿಕಲ್‌ ವರ್ಲ್ಡ್‌ ಆಫ್‌ ಫ್ಲೋರಿಯಾ’ ಎನ್ನುವ ವಿಷಯದೊಂದಿಗೆ ಆಯೋಜಿತವಾಗಿತ್ತು. ಸೇವಂತಿಗೆಯ ಜೊತೆಗೆ ಅನೇಕ ವಿಧದ ಪುಷ್ಪ ಪ್ರದರ್ಶನ, 4 ಲಕ್ಷಕ್ಕೂ ಹೆಚ್ಚು ಹೂಗಿಡಗಳು ಸುಂದರ ಉದ್ಯಾನದ ಮಾದರಿಗಳಲ್ಲಿ ಪ್ರದರ್ಶನಗೊಂಡವು. ಸ್ಥಳೀಯ ಮತ್ತು ಅಂತರರಾಷ್ಟ್ರೀಯ ಸಂಸ್ಥೆಗಳಿಂದ ಸಮಕಾಲೀನ, ನೂತನ ಪರಿಕಲ್ಪನೆಯ ವಿನ್ಯಾಸಗಳು, ಜೋಡಣೆಗಳು ಪ್ರಕಟವಾದವು. ಖರೀದಿಗೂ ಲಭ್ಯ ಇದ್ದವು.

ಪುಷ್ಪ ಅಲಂಕಾರಿಕ ವಿನ್ಯಾಸಗಳು, ಜೋಡಣೆಯ ಪ್ರಾತ್ಯಕ್ಷಿಕೆಗಳು, ಉದ್ಯಾನ ನಿರ್ವಹಣೆಯ ಕಾರ್ಯಾಗಾರ, ಮನರಂಜನಾ ಕಾರ್ಯಕ್ರಮ, ಫೋಟೊಗ್ರಫಿ ಮತ್ತು ವಾಟರ್‌ ಕಲರ್‌ ಪೇಂಟಿಂಗ್‌ ಸ್ಫರ್ಧೆಗಳು, ಪ್ರದರ್ಶನಗಳು ಹೀಗೆ ಅನೇಕ ಚಟುವಟಿಕೆಗಳು ಕನಿಷ್ಠ ವಾರ ಕಾಲ ನಡೆಯುವುದು ವಿಶೇಷ. ಹೊರಾಂಗಣ ಜೀವನಶೈಲಿ ಬಿಂಬಿಸುವ ಚಟುವಟಿಕೆಗಳಾದ ಪಿಕ್‌ನಿಕ್‌, ಕ್ಯಾಂಪಿಂಗ್‌, ಉದ್ಯಾನದಲ್ಲಿ ಮದುವೆ ಪ್ರದರ್ಶನ, ಉದ್ಯಾನದಲ್ಲಿ ಬಳಸಬಹುದಾದ ಪೀಠೋಪಕರಣ ಇತ್ಯಾದಿಗಳು ಉದ್ಯಾನದ ಹಲವು ಪ್ರಯೋಗಾತ್ಮಕ ವಿನ್ಯಾಸಗಳ ಮಾದರಿಯಂತೆ ಸಾಕಾರಗೊಂಡ ಬಗೆ ಮತ್ತಷ್ಟು ಕಲಾತ್ಮಕವಾಗಿ ಗರಿಗೆದರಿತ್ತು.

‘ಈ ಪ್ರದರ್ಶನ ಕೇವಲ ಪ್ರವಾಸೋದ್ಯಮದ ಚಟುವಟಿಕೆಯಾಗಿ ಗುರುತಿಸಿಕೊಳ್ಳದೆ ಆರ್ಥಿಕ ಚಟುವಟಿಕೆಯನ್ನು ಉತ್ತೇಜಿಸಲಿದೆ’ ಎಂದು ‘ಪುಟ್ರಜಯ ಕಾರ್ಪೋರೇಷನ್‌’ನ ಅಧ್ಯಕ್ಷ ಹಾಜಿ ಹಾಶಿಂ ಬಿನ್‌ ಹಾಜಿ ಇಸ್ಮಾಯಿಲ್‌ ಹೇಳಿದ್ದು ಪ್ರದರ್ಶನಕ್ಕೆ ಪೂರಕವಾಗೇ ಇತ್ತು. ಜಾದೂ ಉದ್ಯಾನದ ಹೊರತಾಗಿ ಒಂದು ಬದಿ ತೆರೆದುಕೊಂಡಿದ್ದ ಸ್ಟಾಲ್‌ಗಳು ಈ ಮಾತಿಗೆ ಸಾಕ್ಷಿಯೆಂಬಂತೆ ವಿವಿಧ ಬೀಜಗಳು, ಸಸ್ಯಗಳು, ಉದ್ಯಾನದ ಪರಿಕರಗಳು ಮತ್ತು ಗ್ರಾಹಕ ಸೇವೆಗಳ ವ್ಯವಹಾರಕ್ಕೆ ತಾವು ನೀಡಿದ್ದವು. ಅಲಂಕಾರಿಕ, ಹಣ್ಣಿನ ಗಿಡಗಳು, ಜೈವ ತಾಂತ್ರಿಕ ಉತ್ಪನ್ನಗಳೆಲ್ಲ ಚಿಲ್ಲರೆ ಮಾರಾಟದ ಮಳಿಗೆಗಳಲ್ಲಿ ಹರಡಿಕೊಂಡಿದ್ದವು.

ಯುರೋಪಿನ ಅತ್ಯಾಧುನಿಕ ತಂತ್ರಜ್ಞಾನ ಬಳಸಿಕೊಂಡು ರೂಪಿಸಿದ ಜಾದೂ ಉದ್ಯಾನಗಳು, ಕಾಡಿನ ಅನೂಹ್ಯ ಪರಿಸರದಲ್ಲಿ ಹಾದುಬರುತ್ತಿದ್ದಂತೆ ಇದ್ದಕ್ಕಿದ್ದಂತೆ ಮಳೆಯಲ್ಲಿ ನೆನೆಯುವ ಅನುಭವಕ್ಕೆ ಚಕಿತರಾಗುವ ಸರದಿ. ‘ಸೇವಂತಿಗೆ ಹೂದೋಟ’, ‘ಮತ್ಸ್ಯಕನ್ಯೆಯ ಜಗತ್ತು’ ಎಂಬ ಪ್ರದರ್ಶನದಲ್ಲಿ ಸಾಗರದಾಳದಲ್ಲಿ ಹಡಗು ಮುಳುಗಿದ ಸ್ಥಳಕ್ಕೆ ನಾವು ಹೋದಂತಹ ವಾತಾವರಣ.

ರಾತ್ರಿಯ ಕತ್ತಲಿನಲ್ಲೂ ಹೊಳೆಯುವ ಹೂ ಕಾರ್ಪ್ಸ್‌ನ ಮಾದರಿ ಪೆಪ್ಪರ್‌ಮೆಂಟಿನ ಸಭೆ, ಎಲ್ಲವೂ  ಅಷ್ಟೇ ಜಾದೂಮಯ ವಾತಾವರಣ ನಿರ್ಮಿಸಿದ್ದವು. ದೊಡ್ಡ ಉದ್ಯಾನದ ತುಂಬೆಲ್ಲ ಪುಟ್ಟ ಪುಟ್ಟ ಉದ್ಯಾನದ ಮಾದರಿಗಳು ಸಿನಿಮಾ ಸೆಟ್‌ನಂತೆ ಆಕರ್ಷಿಸುತ್ತಿದ್ದವು. ಉಲ್ಲಸಿತ ವಾತಾವರಣ ನಿರ್ಮಿಸಿದ್ದ ರಾಯಲ್‌ ಉದ್ಯಾನ, ವಿನ್ಯಾಸಕಾರರ ಉದ್ಯಾನ, ಟೀ ಪಾರ್ಟಿ ಉದ್ಯಾನ, ಬೋನ್ಸಾಯ್‌ ಗಿಡಗಳ ಜಾದೂ, ಸಂಗೀತಮಯ ಉದ್ಯಾನ, ಗಾಜಿನಲ್ಲಿ ಟ್ರಾಪಿಕಲ್‌ ಜಾದೂ ಎಂಬುವು ಪುಷ್ಟ ಪ್ರದರ್ಶನ ವಿಶೇಷಗಳಲ್ಲಿ ಹಲವು.

ಪುಟ್ರಜಯದಲ್ಲಿ ವಿಶ್ವದ ಬಿಂಬ
ಆಸ್ಟ್ರೇಲಿಯಾ, ಚೀನಾ, ಹಾಂಗ್‌ಕಾಂಗ್‌, ಇಂಡೋನೇಷ್ಯಾ, ಜಪಾನ್‌, ಜರ್ಮನಿ, ಕೊರಿಯಾ, ಸ್ಪೇನ್‌, ಸಿಂಗಾಪೂರ್‌, ತೈವಾನ್‌, ಥಾಯ್ಲೆಂಡ್‌ ಮತ್ತು ಯುರೋಪಿನ ವಿಶಿಷ್ಟ ವಿನ್ಯಾಸಗಳು ಮತ್ತು ಜೋಡಣೆ, ವಿವಿಧ ಹೊಂದಾಣಿಕೆಗಳಲ್ಲಿ ಪ್ರದರ್ಶನಕ್ಕೆ ಇದ್ದವು. ಜಾದೂಗನ್ನಡಿ, ಥ್ರೀಡಿ ಹೋಲೊಗ್ರಾಫಿಕ್‌ ವಿಧದ ಪ್ರದರ್ಶನ, ಹಿಮಪಾತದ ಅನುಭವ ನೀಡುವ, ಕಾಡಿನಲ್ಲಿ ಅಲೆದು ಕಂಡಂತೆ ಭಾಸವಾಗುವ ಅನಿಮೇಶನ್‌ನಲ್ಲಿ ಗಿಡಗಳ ಬೆಳವಣಿಗೆಯ ಪರಿ ಕಂಡು ವಿಸ್ಮಯ.

ಸಾಗರದಾಳದ ರಹಸ್ಯ ಬೃಹತ್‌ ಪರದೆಯ ಮೇಲೆ ಅನಾವರಣಗೊಳ್ಳುತ್ತಿತ್ತು. ಬಣ್ಣ ಬಣ್ಣದ ಹೂಗಳ ಮಧ್ಯೆ ಕಂಗೊಳಿಸುತ್ತಿದ್ದ ಬಾಯಲ್ಲಿ ನೀರೂರುವಂತಿದ್ದ ಚಾಕೊಲೇಟ್‌ ಕಾಟೇಜ್‌ನ ಎದುರು ಲಾಲಿಪಾಪ್‌, ಪೆಪ್ಪರ್‌ಮೆಂಟುಗಳು, ಐಸ್‌ಕ್ರೀಮ್‌ ಕೋನ್‌ಗಳು, ದೊಡ್ಡ ಅಣಬೆ ಪ್ರತಿಕೃತಿಗಳಿದ್ದ ‘ಎಂಚ್ಯಾಂಟೆಡ್‌ ಗಾರ್ಡನ್‌’ ಮಕ್ಕಳೊಡನೆ ದೊಡ್ಡವರೂ ಮರಳಿ ಬಾಲ್ಯ ಅನುಭವಿಸುವಂತೆ ಮಾಡಿದವು. ಅಲ್ಲಿದ್ದ ಕೊಳಕ್ಕೆ ದೊಡ್ಡ ನಲ್ಲಿಯಿಂದ ನೀರು ಬೀಳುತ್ತಿದ್ದರೂ ನಲ್ಲಿಯ ಹಿಂದೆ ಕಂಡ, ಕತ್ತರಿಸಿದ ನೀರಿನ ಪೈಪ್‌ ವಿಸ್ಮಯದಿಂದ ನೋಡುತ್ತಿದ್ದರು.

‘ಎಂಚ್ಯಾಂಟೆಡ್‌ ಫ್ಲೋರಲ್‌ ಗಾರ್ಡನ್‌’ ಕೂಡ ಕತೆಗಳಲ್ಲಿ ಕೇಳಿದಂತಹ ಕಲ್ಪನೆಯನ್ನು ನಿಜ ಮಾಡಿದಂತಿತ್ತು. ಮಕ್ಕಳು ಇಷ್ಟಪಡುವಂತಿದ್ದ ಮತ್ತೊಂದು ಉದ್ಯಾನ ಪೆರಾಕ್‌ ರಾಜ್ಯದ ಅನಿಮೇಶನ್‌ ಗೊಂಬೆಗಳ ಮಾದರಿ. ಅದು ಅಣಬೆ ಮನೆಯಿದ್ದ ಗಾಢ ಬಣ್ಣಗಳ ಉದ್ಯಾನ. ಕನಸು ಸಾಕಾರವಾಗುತ್ತವೆ ಎಂಬ ನಂಬಿಕೆಯೊಡನೆ ಹೀಗೇ ಸಿದ್ಧವಾದ ಇನ್ನೊಂದು  ‘ಪಿಜೆಎಚ್‌ ಫ್ಯಾಂಟಸಿಯಾ ಗಾರ್ಡನ್‌’. ಕೋಟೆಯ ಎದುರಿನ ಉದ್ಯಾನದಲ್ಲಿ ರಾಜಕುಮಾರ, ರಾಜಕುಮಾರಿಯರ ಕಟೌಟ್‌. ಮಲೇಷ್ಯಾ ಪ್ರವಾಸೋದ್ಯಮ ಮತ್ತು ಸಂಸ್ಕೃತಿ ಹಾಗೂ ಪ್ರವಾಸೋದ್ಯಮ ಇಲಾಖೆಯ ಸಹಯೋಗದಲ್ಲಿ ‘ಮಿಸ್ಟಿಕಲ್‌ ಮಾಸ್ಸಿ ಫಾರೆಸ್ಟ್‌’ನಲ್ಲಿ ಗಜೆಬೊಗಳು, ಮಳೆಕಾಡಿನ ಅನುಭವ ನೀಡುವ ಚಪ್ಪರ, ಪುಟ್ಟ ಕೊಳ ಶಾಂತ ವಾತಾವರಣ ನಿರ್ಮಿಸಿದ್ದವು.

ಜೋಹೋರ್‌ ರಾಜ್ಯದ ರಾಜ ನಿವಾಸದ ಮಾದರಿಯ ಎದುರು ಆಕರ್ಷಕ ಉದ್ಯಾನ ಪುರಾತನ ಸ್ಮಾರಕ ಮತ್ತು ಸಾಂಪ್ರದಾಯಿಕ ಮುಖವನ್ನು ಬಿಂಬಿಸುವಂತೆ ಇತ್ತು. ಭವ್ಯ ಅರಮನೆಯ ಪ್ರತಿಕೃತಿ ವಿಶಿಷ್ಟ ಆಂಗ್ಲೋ ಮಲಯ ವಾಸ್ತುವಿನ್ಯಾಸದಿಂದ ಸೆಳೆಯಿತು. ಅದರೆದುರಿನ ಅರ್ಧ ಚಂದ್ರಾಕಾರದ ವೇದಿಕೆ ಸಾಂಸ್ಕೃತಿಕ ಕಾರ್ಯಕ್ರಮಗಳ ಪ್ರದರ್ಶನಕ್ಕೆ ಸಿದ್ಧವಾಗಿತ್ತು.

ಸಹಜವಾಗಿ ಹಲವು ವಿಂಡ್‌ಚೈಮ್‌ಗಳಿಂದ ಹೊಮ್ಮುತ್ತಿದ್ದ ಇಂಪಾದ ಸಂಗೀತದ ಅಲೆ ಮ್ಯೂಸಿಕಲ್‌ ಗಾರ್ಡನ್‌ನಲ್ಲಿ ಗಾಢ ಹೊಳಪಿನ ಹೂಗಿಡಗಳ ನಡುವೆ ತೇಲಿ ಬರುತ್ತಿತ್ತು. ಪಂಜಾಬಿ ನೃತ್ಯ ಮಾಡುತ್ತ ಪುಟ್ಟ ಉದ್ಯಾನಗಳ ನಡುವಿನ ರಸ್ತೆಯಲ್ಲಿ ಹುಡುಗಿಯರ ಜತೆ ಡೋಲು ಬಡಿಯುತ್ತಿದ್ದ ಪುರುಷರ ತಂಡ ಅತ್ತ ಹೊರಳುವಂತೆ ಮಾಡಿದಾಗ, ಸೂರ್ಯ ನಾಚಿ ಕೆಂಪಾಗುವ ಸಮಯ. ಬೆಳಕು ಸರಿಯುತ್ತಿದ್ದಂತೆ ಬಣ್ಣ ಬಣ್ಣದ ಅಲಂಕಾರಿಕ ದೀಪಗಳಿಂದ ಕಂಗೊಳಿಸಿ ಗಿಡಗಳು ವಿಶೇಷ ಕಾಲ್ಪನಿಕ ಆಕರ್ಷಣೆ ಪಡೆದುಕೊಳ್ಳತೊಡಗಿದವು.

ಕತ್ತಲು ಗಾಢವಾಗುತ್ತ ಹೋದಂತೆ ಕನಸುಗಣ್ಣುಗಳಲ್ಲಿ ನಿರೀಕ್ಷೆ. ‘ರಾತ್ರಿಯ ಜಾದೂ’ ಕ್ಷಣಕ್ಕಾಗಿ ಮರೀನಾ ಕೆರೆಯ ದಡದಲ್ಲಿ ಕಾಯುತ್ತಿದ್ದೆವು. ಸೆರಿ ಸೌಜಾನಾ ಸೇತುವೆಯ ಬಳಿ ದಡದಲ್ಲಿ ಕುಳಿತು ದಿನಕರನ ನೋಟಕ್ಕೆ ಕೆಂಪಾಗುತ್ತಿದ್ದ ಕೆರೆಯ ನೀರು ವಿಭಿನ್ನ ನಿರಾಳ ಮನಸ್ಥಿತಿಗೆ ಪೂರಕವಾಗತೊಡಗಿತ್ತು. ಕಮಾನು ಮತ್ತು ಕೇಬಲ್‌ ಸ್ಥಾವರ ಎಂಬ ಎರಡು ವಾಸ್ತುತಂತ್ರಗಳನ್ನು ಆಧರಿಸಿದ ಜಗತ್ತಿನ ಮೊದಲ ಸೇತುವೆ ಎಂಬ ಬಿರುದು ಸೇತುವೆಗೆ.

ಈಗಲೂ ಇಂಥ ಇನ್ನೊಂದು ಸೇತುವೆ ಎಲ್ಲೂ ಇಲ್ಲ ಎನ್ನಲಾಗಿದೆ. ಕತ್ತಲು ಗಾಢವಾಗುತ್ತಿದ್ದಂತೆ ಸಂಗೀತ, ನೃತ್ಯದ ಕಾರ್ಯಕ್ರಮ ನೀರ ಮೇಲೆ ತೇಲಿದ ವೇದಿಕೆಯ ಮೇಲೆ. ಆಚೆ ದಡದಿಂದ ಬೀರುತ್ತಿದ್ದ ಫ್ಲೋರೊಸೆಂಟ್‌, ನಿಯಾನ್‌ ದೀಪಗಳ ಕಿರಣಗಳ ಲಾಸ್ಯ ಕೆರೆಯ ಮೇಲ್ಮೈ ಸವರುತ್ತಿತ್ತು. ಹೊಳೆವ ಬಣ್ಣದ ದೀಪಗಳಿಂದ ಅಲಂಕೃತವಾದ ದೋಣಿಗಳು ಆಯಾ ರಾಜ್ಯದ, ಪ್ರದೇಶದ ವಿಭಿನ್ನ ಜನಜೀವನ ಬಿಂಬಿಸುವ ಸ್ತಬ್ಧ ಚಿತ್ರಗಳು, ಕಲಾವಿದರ ಭಂಗಿಗಳು, ನೃತ್ಯದ ವಿನ್ಯಾಸಗಳೊಂದಿಗೆ ವಿವರಣೆಯ ಹಿನ್ನೆಲೆಯೊಂದಿಗೆ ಸರೋವರದಲ್ಲಿ ಒಂದೊಂದೇ ತೇಲಿ ಬಂದುದು ಅವಿಸ್ಮರಣೀಯ ಅನುಭವ.

ಎಲ್ಲರ ಕೈಯಲ್ಲೂ ಮೊಬೈಲ್‌ ಕ್ಯಾಮೆರಾಗಳು ಜಾಗೃತವಾದವು. ಕ್ಯಾಮೆರಾ ಕಣ್ಣಿನಿಂದ ಒಮ್ಮೆ, ಬರಿಗಣ್ಣಿನಿಂದೊಮ್ಮೆ ದೋಣಿಗಳ ಪೆರೇಡ್‌ನ ಅಪರೂಪದ ಚಿತ್ರಣವನ್ನು ಸವಿಯುತ್ತಲೇ ಅತ್ತ ಡ್ರೋಣ್‌ ಕ್ಯಾಮೆರಾಗಳೂ ಹಾರಾಡಿದವು. ಆಕಾಶದಲ್ಲೂ ಪಟಾಕಿ, ಬಾಣ ಬಿರುಸುಗಳ ಚಿತ್ತಾರದೊಂದಿಗೆ ಪುಷ್ಪೋತ್ಸವದ ಉದ್ಘಾಟನಾ ಕಾರ್ಯಕ್ರಮಕ್ಕೆ ತೆರೆ.

ಸಾವಿರಾರು ಹೂಗಳು, ಹಲವಾರು ಉದ್ಯಾನಗಳು, ನೂರಾರು ಉತ್ಪನ್ನಗಳು ಬರಿಯ ಕಣ್ಣಿಗೆ ಹಬ್ಬವಲ್ಲ, ನೂತನ ತಂತ್ರಜ್ಞಾನಗಳ ಜಾದೂ ಜಗದೊಳ ಹೊಕ್ಕರೆ ದನಿ, ಪರಿಮಳ, ಮೃದು ಸ್ಪರ್ಶ, ರುಚಿಗಳಿಂದ ಕೂಡಿದ ಪಂಚೇಂದ್ರಿಯಗಳೂ ಜಾಗೃತವಾಗಿ ಭಾವಗಳ ಉದ್ದೀಪನವಾದಂತಿತ್ತು.

(‘ಟೂರಿಸಂ ಮಲೇಷ್ಯಾ’ ಆಹ್ವಾನದ ಮೇರೆಗೆ ಐಲೇಖಕರು ಇತ್ತೀಚೆಗೆ ಮಲೇಷ್ಯಾಕ್ಕೆ ಭೇಟಿ ನೀಡಿದ್ದರು)

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.