ADVERTISEMENT

ಪ್ರತಿಭೆಗೂ ಮಿತಿಯಿದೆ

ನರೇಂದ್ರ ಎಸ್ ಗಂಗೊಳ್ಳಿ
Published 2 ಜೂನ್ 2018, 19:30 IST
Last Updated 2 ಜೂನ್ 2018, 19:30 IST
ಚಿತ್ರ: ಎಂ.ಎಸ್. ಶ್ರೀಕಂಠಮೂರ್ತಿ
ಚಿತ್ರ: ಎಂ.ಎಸ್. ಶ್ರೀಕಂಠಮೂರ್ತಿ   

ಶ್ರೀನಾಥ ಎಂಟನೇ ತರಗತಿಯಲ್ಲಿ ಕಲಿಯುತ್ತಿದ್ದ. ಜಾಣ ವಿದ್ಯಾರ್ಥಿ ಆಗಿದ್ದರಿಂದ ಆತ ಅಧ್ಯಾಪಕರಿಗೆ ಅಚ್ಚುಮೆಚ್ಚಿನ ಹುಡುಗನೂ ಆಗಿದ್ದ. ಸ್ನೇಹಿತರಿಗೂ ಅವನನ್ನು ಕಂಡರೆ ವಿಶೇಷ ಅಭಿಮಾನವಿತ್ತು. ಆದರೆ ಸಹಪಾಠಿ ಸುಶೀಲ್‍ಗೆ ಶ್ರೀನಾಥನನ್ನು ಕಂಡರೆ ಅಷ್ಟಕಷ್ಟೇ. ಸುಶೀಲ್‌ ಸ್ವಲ್ಪ ತುಂಟ ಹುಡುಗನೆಂದು ಗುರುತಿಸಿಕೊಂಡಿದ್ದ. ಸಿರಿವಂತರ ಮನೆಯವನಾಗಿದ್ದ ಸುಶೀಲ್‌ ಬಹಳ ಚೆನ್ನಾಗಿ ಬೈಕ್ ಓಡಿಸುತ್ತಿದ್ದ. ಆಗಾಗ್ಗೆ ಆತ ಬೈಕ್ ಓಡಿಸುವುದನ್ನು ಶ್ರೀನಾಥ ಕಂಡಿದ್ದ.

ಶ್ರೀನಾಥನಿಗೂ ಬೈಕ್ ಓಡಿಸಬೇಕೆಂಬ ಆಸೆಯಿತ್ತಾದರೂ ಆತನ ಮನೆಯಲ್ಲಿ ಬೈಕ್ ಇರಲಿಲ್ಲ. ಸರಳ ಜೀವನ ಅಳವಡಿಸಿಕೊಂಡಿದ್ದ ಅವನ ತಂದೆ ಕಚೇರಿಗೆ ಬಸ್ಸಿನಲ್ಲಿ ಹೋಗಿಬರುತ್ತಿದ್ದರು. ಆದರೆ ಶ್ರೀನಾಥನಿಗೆ ಅವರು ಯಾವುದಕ್ಕೂ ಕಡಿಮೆ ಮಾಡಿರಲಿಲ್ಲ. ಅವನನ್ನು ಚೆನ್ನಾಗಿ ಓದುವಂತೆ ಪ್ರೋತ್ಸಾಹಿಸುತ್ತಿದ್ದರು. ಒಮ್ಮೆ ಶ್ರೀನಾಥ ತಂದೆಯ ಬಳಿ, ‘ನನ್ನ ಸ್ನೇಹಿತ ಸುಶೀಲ್ ಬೈಕ್ ಓಡಿಸುತ್ತಾನಂತೆ. ನನಗೂ ಬೈಕ್ ಓಡಿಸುವ ಆಸೆ ಇದೆ’ ಎಂದನು. ಅದಕ್ಕೆ ಅವನ ತಂದೆ, ‘ಆಗಲಿ ದೊಡ್ಡವನಾದ ಮೇಲೆ ಓಡಿಸುವೆಯಂತೆ. ನಾನೇ ಕಲಿಸಿಕೊಡುತ್ತೇನೆ’ ಎಂದಿದ್ದರು.

ಅದೊಂದು ದಿನ ಶ್ರೀನಾಥ ಶಾಲೆಗೆ ಹೋಗುತ್ತಿರುವಾಗ ದಾರಿಯಲ್ಲಿ ಸ್ನೇಹಿತ ತ್ಯಾಗರಾಜ್ ಸಿಕ್ಕಿದ. ‘ನೋಡಿದೆಯಾ ಶ್ರೀನಾಥ, ಸುಶೀಲ್ ಇವತ್ತು ಬೆಳಿಗ್ಗೆ ಬೈಕನ್ನು ಒಂದೇ ಚಕ್ರದಲ್ಲಿ ಓಡಿಸಿಕೊಂಡು, ವೀಲಿಂಗ್ ಮಾಡುತ್ತಿದ್ದನಂತೆ. ನಮ್ಮ ಶಾಲೆಯ ಹಲವು ಮಕ್ಕಳು ನೋಡಿದ್ದಾರೆ. ನಾನೂ ಬೈಕ್ ಓಡಿಸುತ್ತೇನೆ ಮಾರಾಯಾ. ಆದರೆ ಒಂದು ಚಕ್ರದಲ್ಲಿ ಓಡಿಸಲು ಮಾತ್ರ ಆಗಲ್ಲ’ ಎಂದನು. ‘ಹೌದಾ’ ಎಂದು ಶ್ರೀನಾಥ ಅಚ್ಚರಿಗೊಂಡ. ಅವತ್ತು ಸುಶೀಲ್ ಒಂದೇ ಚಕ್ರದಲ್ಲಿ ಬೈಕ್ ಓಡಿಸಿದ್ದ ಸುದ್ದಿಯನ್ನು ಶಾಲೆಯ ಎಲ್ಲ ಮಕ್ಕಳೂ ಮಾತನಾಡಿಕೊಳ್ಳುತ್ತಿದ್ದರು. ಸುಶೀಲ್ ಅವರ ದೃಷ್ಟಿಯಲ್ಲಿ ಹೀರೋ ಆಗಿಬಿಟ್ಟಂತಿದ್ದ. ಇದನ್ನೆಲ್ಲಾ ನೋಡಿದ ಶ್ರೀನಾಥನಿಗೆ ಸ್ವಲ್ಪ ಬೇಸರವಾಯಿತು. ತಾನೂ ಒಂದೇ ಚಕ್ರದಲ್ಲಿ ಬೈಕ್ ಓಡಿಸಿ ಇತರರ ಎದುರು ಹೀರೊ ಆಗಬೇಕು ಎಂದು ಬಯಸಿದ.

ADVERTISEMENT

ಆವತ್ತೇ ಬೈಕ್ ಕಲಿಯಲು ನಿರ್ಧರಿಸಿದ ಶ್ರೀನಾಥ ತನ್ನ ಸ್ನೇಹಿತರಲ್ಲಿ ಅದನ್ನು ಹೇಳಿಕೊಂಡ. ತ್ಯಾಗರಾಜ ತನ್ನ ಅಣ್ಣನ ಬೈಕು ತಂದು ಕಲಿಸುವುದಾಗಿ ಹೇಳಿದ. ತನ್ನ ಸ್ನೇಹಿತರ ನೆರವಿನಿಂದ ಖಾಲಿ ಮೈದಾನವೊಂದರಲ್ಲಿ ಶ್ರೀನಾಥ ಬೈಕ್ ಓಡಿಸುವುದನ್ನು ಕಲಿತ. ತಂದೆಗೆ ಹೇಳಿದರೆ ಬಯ್ಯುತ್ತಾರೆಂದು ಅವರಿಗೆ ಹೇಳಲಿಲ್ಲ. ಕೊನೆಗೊಂದು ದಿನ ಒಂದೇ ಚಕ್ರದಲ್ಲಿ ವೀಲಿಂಗ್ ಮಾಡುವುದನ್ನು ಕೂಡ ಕಲಿತ. ಈಗ ಶ್ರೀನಾಥ ಕೂಡ ವೀಲಿಂಗ್ ಮಾಡುತ್ತಾನೆ ಎನ್ನುವುದು ಶಾಲೆಯ ಮಕ್ಕಳ ನಡುವೆ ದೊಡ್ಡ ಸುದ್ದಿಯಾಯಿತು.

ಅದು ಸುಶೀಲ್‍ನ ಕಿವಿಗೂ ಬಿತ್ತು. ಆತ ಶ್ರೀನಾಥನನ್ನು ಕರೆದು ಹೇಳಿದ. ‘ನೀನು ಕೂಡ ವೀಲಿಂಗ್ ಮಾಡುತ್ತೀಯಂತೆ? ನೀನು ಓದುವುದರಲ್ಲಿ ಮೊದಲ ಸ್ಥಾನ ಪಡೆಯಬಹುದು. ಆದರೆ ವೀಲಿಂಗ್‍ನಲ್ಲಿ ಮಾತ್ರ ಆಗಲ್ಲ’ ಎಂದ. ಅದಕ್ಕೆ ಶ್ರೀನಾಥ, ‘ಹಾಗೇನಿಲ್ಲ, ನನಗೂ ಚೆನ್ನಾಗಿ ವೀಲಿಂಗ್ ಬರುತ್ತೆ’ ಅಂದ. ಅದನ್ನು ಕೇಳಿ ಸುಶೀಲ್, ‘ಹಾಗಾದರೆ ನನ್ನೊಡನೆ ಪಂದ್ಯ ಕಟ್ಟು. ನಾಳೆ ಜನ ಸೇರುವ ಸಂತೆ ರಸ್ತೆಯಲ್ಲಿ ನಮ್ಮ ಸ್ಪರ್ಧೆ ನಡೆಯಲಿ. ನೀನು ಗೆದ್ದರೆ ನಾನು ಐದು ಸಾವಿರ ರೂಪಾಯಿ ಕೊಡುತ್ತೇನೆ. ನಾನು ಗೆದ್ದರೆ ನೀನು ಇನ್ನು ಮುಂದೆ ಬೈಕ್ ವೀಲಿಂಗ್ ಮಾಡಬಾರದು’ ಎಂದು ಸವಾಲು ಹಾಕಿದ. ಶ್ರೀನಾಥ ತಕ್ಷಣ ಅದಕ್ಕೆ ಒಪ್ಪಿಕೊಂಡ.

ಮರುದಿನ ಸ್ಪರ್ಧೆ ನಡೆಯಿತು. ಜನನಿಬಿಡ ರಸ್ತೆಯಲ್ಲಿಯೇ ಇವರು ವೀಲಿಂಗ್ ಮಾಡಿದರು. ಇವರ ಹುಚ್ಚಾಟ ನೋಡಿ ಜನ ಬೈದುಕೊಂಡರು. ಅಂತಿಮವಾಗಿ ಶ್ರೀನಾಥ ಸುಶೀಲ್‍ನನ್ನು ಸೋಲಿಸಿದ್ದ. ಮಾತಿನಂತೆಯೆ ಸುಶೀಲ್, ಶ್ರೀನಾಥನಿಗೆ ಐದು ಸಾವಿರ ರೂಪಾಯಿ ಕೊಟ್ಟ. ಶ್ರೀನಾಥನಿಗೆ ಬಹಳ ಖುಷಿಯಾಯ್ತು. ಇವತ್ತು ಈ ವಿಚಾರವನ್ನು ತಂದೆಯ ಬಳಿ ಹೇಳಬೇಕು ಎಂದು ತೀರ್ಮಾನಿಸಿದ.

ಆ ದಿನ ಸಂಜೆ ಕಚೇರಿಯಿಂದ ಮನೆಗೆ ಬಂದ ತಂದೆಯ ಕೈ ಹಿಡಿದೆಳೆದು, ಐದು ಸಾವಿರ ರೂಪಾಯಿಗಳನ್ನು ಅವರ ಕೈಗಳಲ್ಲಿಟ್ಟು, ನಡೆದಿದ್ದೆಲ್ಲವನ್ನೂ ಪಟಪಟನೆ ನಗುನಗುತ್ತಲೇ ಹೇಳಿದ ಶ್ರೀನಾಥ ತಂದೆ ತನ್ನ ಸಾಧನೆಯನ್ನು ಹೊಗಳುತ್ತಾರೆ ಎಂದು ನಿರೀಕ್ಷಿಸಿದ್ದ.

ಆದರೆ ಶ್ರೀನಾಥ ಹೇಳಿದ್ದನ್ನು ಕೇಳಿದ ತಂದೆ ಕೋಪಗೊಂಡು ಆತನ ಕಪಾಳಕ್ಕೆ ಬಾರಿಸಿದರು. ನಂತರ ಅವನನ್ನು ತಮ್ಮ ಪಕ್ಕದಲ್ಲಿ ಕೂರಿಸಿಕೊಂಡು ಹೇಳಿದರು: ‘ನೋಡು ಶ್ರೀನಾಥ, ನೀನು ಒಳ್ಳೆಯ ಹುಡುಗ. ಸ್ಪರ್ಧಾ ಮನೋಭಾವವೂ ನಿನ್ನಲ್ಲಿದೆ. ಬೈಕ್‌ ಒಡಿಸುವುದನ್ನು ಕಲಿತೆ ಎನ್ನುವುದನ್ನು ಒಪ್ಪೋಣ. ಆದರೆ ನಿನಗೆ ಗೊತ್ತಿರಲಿ ಎಲ್ಲ ಪ್ರತಿಭೆಗಳಿಗೂ, ಸ್ಪರ್ಧೆಗಳಿಗೂ ಒಂದು ಮಿತಿ ಇರುತ್ತದೆ. ನೀನು ಲೈಸೆನ್ಸ್‌ ಇಲ್ಲದೆ ಬೈಕ್‌ ಓಡಿಸಿ ತಪ್ಪು ಮಾಡಿದ್ದೀಯ. ಅದರಲ್ಲೂ ಜನನಿಬಿಡ ರಸ್ತೆಯಲ್ಲಿ ವೀಲಿಂಗ್ ಮಾಡಿದ್ದು ದೊಡ್ಡ ತಪ್ಪು. ವೀಲಿಂಗ್ ಮಾಡುವುದೇ ದೊಡ್ಡ ಸಾಧನೆಯಲ್ಲ. ಬೈಕನ್ನು ಒಂದೇ ಚಕ್ರದಲ್ಲಿ ಓಡಿಸುವುದಾಗಿದ್ದರೆ ಅದಕ್ಕೆ ಎರಡು ಚಕ್ರಗಳನ್ನೇಕೆ ಇಡುತ್ತಿದ್ದರು? ಸ್ವಲ್ಪ ಹೆಚ್ಚುಕಡಿಮೆಯಾಗಿದ್ದರೆ ನಿನಗೆ ಮಾತ್ರವಲ್ಲದೆ ನಿನ್ನಿಂದಾಗಿ ಉಳಿದವರ ಜೀವಕ್ಕೂ ಸಂಚಕಾರ ಬರುತಿತ್ತು. ರಸ್ತೆಗಳಿರುವುದು ನಿಮಗೆ ವೀಲಿಂಗ್ ಮಾಡುವುದಕ್ಕಾಗಿ ಅಲ್ಲ. ಸ್ಪರ್ಧೆಯ ಹೆಸರಿನಲ್ಲಿ ಬೆಟ್ಟಿಂಗ್ ಮಾಡಿರುವುದು ಕೂಡ ಅಪರಾಧ. ನಿನ್ನ ಸ್ನೇಹಿತ ನಿನಗೆ ಕೊಟ್ಟ ಹಣ ಅವನು ದುಡಿದದ್ದಲ್ಲ. ಅಪ್ಪನ ಹಣವನ್ನು ಕೊಟ್ಟಿದ್ದಾನೆ. ಹಾಗಾಗಿ ಅದನ್ನು ತೆಗೆದುಕೊಳ್ಳುವುದು ನೈತಿಕವಾಗಿ ತಪ್ಪಲ್ಲವೇ? ಸುಶೀಲನಿಗೆ ಈ ಹಣ ವಾಪಸು ಮಾಡು. ಪ್ರತಿಭೆಯನ್ನು ಎಲ್ಲಿ ತೋರಿಸಬೇಕೋ ಅಲ್ಲಿ ತೋರಿಸಿದರೆ ಮಾತ್ರ ಅದಕ್ಕೆ ಬೆಲೆ’ ಎಂದು ಬೆನ್ನು ನೇವರಿಸಿದರು.

ಶ್ರೀನಾಥನಿಗೆ ತನ್ನ ತಪ್ಪಿನ ಅರಿವಾಯಿತು. ಕೂಡಲೇ ತಂದೆಯ ಬಳಿ ಕ್ಷಮೆ ಕೇಳಿ ಇನ್ನೆಂದೂ ಈ ರೀತಿಯ ತಪ್ಪು ಮಾಡುವುದಿಲ್ಲವೆಂದು ವಚನ ಕೊಟ್ಟನು. ನಿಜ. ಯಾವತ್ತೂ ಬೇರೆಯವರೊಂದಿಗೆ ನಮ್ಮನ್ನು ಹೋಲಿಸಿಕೊಳ್ಳಲು ಹೋಗಬಾರದು. ಅವರವರವರ ಬೆಲೆ ಅವರಿಗಿದ್ದೇ ಇರುತ್ತದೆ. ಗೆಲುವಿನ ಹೆಸರಿನಲ್ಲಿ ಅನವಶ್ಯಕ ಸ್ಪರ್ಧೆ ಒಳ್ಳೆಯದಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.