ADVERTISEMENT

ಫಕೀರನ ಮಾತು

​ಪ್ರಜಾವಾಣಿ ವಾರ್ತೆ
Published 8 ಜುಲೈ 2017, 19:30 IST
Last Updated 8 ಜುಲೈ 2017, 19:30 IST
ಫಕೀರನ ಮಾತು
ಫಕೀರನ ಮಾತು   

ಇಮಾಮ್ ಗೋಡೆಕಾರ

ಪುಣ್ಯ ಗಳಿಸುವ ಮಾಸದಲ್ಲಿ
ಕೊಡುವುದಾದರೆ
ಮದ್ಯದ ಬಾಟಲಿಯೊಂದನ್ನು
ದಾನ ಕೊಡು,
ಒಂದೊಂದು ಹನಿ ಗಂಟಲಿಗಿಳಿದಾಗೆಲ್ಲ
ನಿನ್ನ ಒಳಿತಿಗೆ ದುವಾ ಮಾಡುವೆ,
ನಶೆಯಿಂದ ಪ್ರಜ್ಞೆ ಕಳೆದು
ಲೋಕದ ಚಿಂತೆ ಮರೆತು
ನನಗೊದಗುವ ನಿದ್ದೆಯ ಘಳಿಗೆ
ನಿನ್ನ ಖಾತೆಯ ಪುಣ್ಯವನ್ನು ಹೆಚ್ಚಿಸಲಿ.

ಕರಿ ಬಟ್ಟೆ, ಕೊಳಕು ಕೂದಲು
ಊರಿಂದೂರಿಗೆ ಅಲೆವ ಸಂಚಾರಿ,
ಆಗಾಗ ನಿಶಾಚರಿ, ನಿರಾಹಾರಿ
ನನ್ನ ಮೇಲೆ ಶೀತ ಗಾಳಿಯ ದಾಳಿ.

ADVERTISEMENT

ನನ್ನಂಥವನಿಗೆ
ಭಕ್ಷೀಸು ಕೊಡುವುದಾದರೆ
ಬೀಡಿಯ ಕಟ್ಟೊಂದು ಕೊಡು;
ನಿನ್ನ ಮನೆ ಮಂದಿಗೆ ಬರಲಿರುವ
ರೋಗವ ಸುಡುವೆ ನನ್ನೆದೆಯಲೆ.

ಒಳಗೂ ಹೊರಗೂ
ಅವನದೇ ಸ್ತುತಿ,
ಲೋಕದ ಪಾಲಿನ ದರವೇಶಿ,
ನಿತ್ಯ ಹಸಿವು ನನಗೂ
ಅದರ ಚಿಂತೆಯಿಲ್ಲ ಯಾರಿಗೂ;
ಜನರೂ ಜಾಣರು
ಪುಣ್ಯದ ನೆನಪಾದಾಗಲೇ
ಆಗುವರು ದಾನವಂತರು.

ಹಸಿ ಖಾರ ಶುಂಠಿ - ಮೆಣಸಿನ
ಮಸಾಲೆಯಲಿ ಬೇಯಿಸಿದ
ಮಾಂಸಕೆ ಏನನ್ನಾದರೂ
ಮಾಡಿಯೇನು;
ಆದರೆ
ಈಗೀಗ ಹಣ್ಣು ಹಂಪಲು
ಮದ್ಯದ ಬಾಟಲಿಯನ್ನೇ ಹೆಚ್ಚು
ನೆಚ್ಚಿಕೊಂಡಿದ್ದೇನೆ.

ಪ್ರಜೆಯ ಅನ್ನದ ಹಕ್ಕನ್ನೇ
ಅಮಾನತ್ತಿನಲ್ಲಿಟ್ಟಾಗ
ಆಳುವವರು;
ಸರ್ಕಾರಿ "ಲೆಕ್ಕ"ದಲ್ಲಿಲ್ಲದ
ನನ್ನ ಮಾತು
ಕೇಳೋರು ಯಾರು?

(ದುವಾ - ಪ್ರಾರ್ಥನೆ ನಂತರದ ಹಾರೈಕೆ, ದೇವರಲ್ಲಿ ಬೇಡುವುದು)

ಭಕ್ತಿ ಎಂಬುದು ಕಠಿಣ...

ಇದ್ದೆ ಉಪವಾಸ
ನಿನ್ನ ಹೆಸರಿನ ಕಲ್ಮಾ
ಓದಿಲ್ಲ
ಅಷ್ಟೇ ವ್ಯತ್ಯಾಸ.

ಅನ್ನ ಸಿಕ್ಕು
ಹೊಟ್ಟೆಯುರಿ ತಣ್ಣಗಾದಾಗ
ತಿಳಿಯದೆಯೇ
ನಿನ್ನ ನೆನೆದದ್ದು ಸುಳ್ಳೇ?

ಚೆನ್ನಾಗಿ ತೊಳೆಯುವರು
ಕೈ ಕಾಲು ಮುಖ ಮೈ
ಮೆಚ್ಚಬೇಕು ಮಡಿವಂತಿಕೆ
ಹಾಳಾದ ಮನಸಿನ ಕೊಳೆ
ತೊಳೆಯೋದು ಹೇಗೆ?

ನಿನ್ನ ಬಾರಗಾಹಕ್ಕೆ ಬಂದು
ಐದ್ಹೊತ್ತು ಬಾಗಿ
ಗ್ರಂಥವನ್ನೋದಿ
'ಮೋಮೀನ'ನಾಗುವುದು
ಬಲು ಕಠಿಣ.

ಮನಸಿನ ಮೈಲಿಗೆ ಇಳಿದು
ಭವದ ಚಿಂತೆ ಕಳೆದು
ಪಾಪ ಪುಣ್ಯದ ಲೆಕ್ಕ
ಮರೆತ ಘಳಿಗೆ
ಹಣೆ ಹಚ್ಚುವೆ
ನಿನ್ನ ಸನ್ನಿಧಿಗೆ.

(ಕಲ್ಮಾ - ಮಂತ್ರ, ಸ್ತೋತ್ರ
ಬಾರಗಾಹ - ದೇವಾಲಯ
ಮೋಮೀನ್ - ಧರ್ಮನಿಷ್ಠ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.