ADVERTISEMENT

ಬದುಕಿದೆಯಾ ಬಡ ಜೀವವೇ...

ಸಹನಾ ಕಾಂತಬೈಲು
Published 24 ಸೆಪ್ಟೆಂಬರ್ 2016, 19:30 IST
Last Updated 24 ಸೆಪ್ಟೆಂಬರ್ 2016, 19:30 IST

ಈಚೆಗೆ ನನ್ನ ಅನುದಿನದ ಸಂಗಾತಿ ಲ್ಯಾಪ್‌ಟಾಪ್ ಹಾಳಾಗಿತ್ತು. ಸರಿಪಡಿಸಲು ನಮ್ಮೂರಿನ ಕಂಪ್ಯೂಟರ್ ಸೆಂಟರ್‌ನಲ್ಲಿ ಕೊಟ್ಟೆ. ಅವರು ‘ಇದರ ಕೀ ಬೋರ್ಡ್ ಹೋಗಿದೆ. ಇಲ್ಲಿ ಆಗಲ್ಲ. ಮಂಗಳೂರಿಗೆ ಕೊಂಡುಹೋಗಿ’ ಎಂದು ಹೇಳಿದರು. ವಿಷಯ ತಿಳಿದ, ಬೆಂಗಳೂರಿನಲ್ಲಿ ಸಾಫ್ಟ್‌ವೇರ್ ಎಂಜಿನಿಯರ್ ಆಗಿರುವ ಮಗ ‘ಇಲ್ಲಿಗೆ ತೆಗೆದುಕೊಂಡು ಬಾ. ನಾನು ಸರಿಪಡಿಸಿಕೊಡುತ್ತೇನೆ. ನನಗೂ ನಿನ್ನನ್ನು ನೋಡಿದ ಹಾಗೆ ಆಗುತ್ತದೆ’ ಎಂದ. ‘ಸರಿ’ ಎಂದು ನಾನು ಮರುದಿನ ಬೆಳಗ್ಗೆ ಏಳು ಗಂಟೆಗೆ ಬೆಂಗಳೂರು ಬಸ್ ಹತ್ತಿದೆ.

ನನ್ನ ಗ್ರಹಚಾರಕ್ಕೆ ಆ ದಿನ ಕಾವೇರಿ ನೀರಿನ ಹಂಚಿಕೆ ವಿಷಯದಲ್ಲಿ ಮಂಡ್ಯ ರೈತರು ಬಂದ್‌ಗೆ ಕರೆ ಕೊಟ್ಟಿದ್ದರು. ಮಡಿಕೇರಿಯಿಂದ ಬೆಂಗಳೂರಿಗೆ ಹೋಗುವ ಬಸ್ಸುಗಳು ಮಾಮೂಲು ದಾರಿಯಾದ ಮಡಿಕೇರಿ, ಕುಶಾಲನಗರ, ಮೈಸೂರು, ಮಂಡ್ಯ ದಾರಿಯಲ್ಲಿ ಹೋಗದೆ ಸುತ್ತುಬಳಸಿ ಮಡಿಕೇರಿ, ಸೋಮವಾಪೇಟೆ, ಅರಕಲಗೂಡು, ಚನ್ನರಾಯಪಟ್ಟಣ, ಕುಣಿಗಲ್, ನೆಲಮಂಗಲ ಬೈಪಾಸ್ ಮಾರ್ಗವಾಗಿ ಬೆಂಗಳೂರಿಗೆ ಚಲಿಸುತ್ತಿದ್ದವು. ಬಸ್ ಹತ್ತಿದ ಮೇಲೆಯೇ ಈ ಸಂಗತಿ ನನಗೆ ಗೊತ್ತಾದದ್ದು. “ಹೇಗೂ ಹೊರಟಿದ್ದೇನೆ. ಇನ್ನು ಹಿಂದಿರುಗುವುದಿಲ್ಲ’ ಎಂದು ಗಟ್ಟಿ ಮನಸು ಮಾಡಿ ಟಿಕೇಟ್ ಪಡೆದು ಕುಳಿತುಕೊಂಡೆ. ಇಡೀ ಬಸ್ಸಲ್ಲಿ ಕಂಡಕ್ಟರ್, ಡ್ರೈವರ್ ಬಿಟ್ಟರೆ ನಾನೊಬ್ಬಳೇ!

ಸೋಮವಾರಪೇಟೆ ಬಂದಾಗ ಏಳೆಂಟು ಮಂದಿ ಹತ್ತಿದರು. ಅವರಲ್ಲಿ ವೃದ್ಧೆ ತಾಯಿ ಮತ್ತು ಅವಳ ಸುಂದರಿ ಮಗಳು ವಿಶೇಷವಾಗಿ ನನ್ನ ಗಮನ ಸೆಳೆದರು. ಅವರೂ ಬೆಂಗಳೂರಿಗೆ ಹೋಗುವವರೇ. ಮೆಟ್ಟಲಿನ ಪಕ್ಕದ ಸೀಟಿನಲ್ಲಿ ಕುಳಿತುಕೊಂಡರು. ಮಧ್ಯಾಹ್ನ ಎರಡು ಗಂಟೆಯಷ್ಟು ಹೊತ್ತಿಗೆ ನಮ್ಮ ಬಸ್ ಎಡೆಯೂರಿನ ‘ಸಹ್ಯಾದ್ರಿ ಭವನ’ ಎಂಬ ಹೋಟೆಲಿನ ಮುಂದೆ ಊಟಕ್ಕೆ ನಿಂತಿತು. ಆ ತಾಯಿ–ಮಗಳು ಊಟಕ್ಕೆ ಇಳಿಯದೆ ಬುತ್ತಿಗಂಟನ್ನು ಬಿಚ್ಚಲಾರಂಭಿಸಿದರು. ನಾನು ಬ್ಯಾಗನ್ನು ಸೀಟಲ್ಲೇ ಬಿಟ್ಟು ಇಳಿದೆ. ಅಲ್ಲೇ ಪಕ್ಕದಲ್ಲಿರುವ ಶೌಚಾಲಯದಲ್ಲಿ ದೇಹಬಾಧೆ ತೀರಿಸಿ ಹೋಟೆಲಿಗೆ ಹೋದೆ.

ಊಟ ಮಾಡಿ ಹೊರಗೆ ಬಂದು ನೋಡುತ್ತೇನೆ; ನಾನು ಇಳಿಯುವಾಗ ಇದ್ದ ಒಂದೆರಡು ಬಸ್ಸಿನ ಬದಲಾಗಿ ಈಗ ಅಲ್ಲಿ ಹತ್ತು, ಹದಿನೈದು ಬಸ್ಸುಗಳು ನಿಂತಿವೆ. ಎಲ್ಲವೂ ಬೆಂಗಳೂರಿಗೆ ಹೋಗುವ ಸುವರ್ಣ ಸಾರಿಗೆ ಕೆಂಪು ಬಸ್ಸುಗಳೇ! ಇದು ಒಳ್ಳೆ ಕಥೆಯಾಯ್ತಲ್ಲ! ನಾನು ಬಂದ ಬಸ್ಸನ್ನು ಹೇಗೆ ಹುಡುಕುವುದು ಎಂದು ಚಿಂತಿಸುತ್ತ ನನ್ನ ಬಸ್ ನಿಂತ ಜಾಗದಲ್ಲೇ ಇದ್ದ ಒಂದು ಬಸ್ಸಿಗೆ ಹತ್ತಿದೆ. ತಕ್ಷಣ ಬಸ್ಸು ಹೊರಟಿತು. ಸೀಟಿನಲ್ಲಿ ಬ್ಯಾಗ್ ಇರಲಿಲ್ಲ.

ತಾಯಿ–ಮಗಳೂ ಕಾಣಲಿಲ್ಲ. ಇದು ಬೇರೆ ಬಸ್ಸು ಎಂದು ಗೊತ್ತಾಯಿತು. ಕಂಡಕ್ಟರ್‌ನ ಹತ್ರ ಬಸ್ ನಿಲ್ಲಿಸಲು ಹೇಳಿ ಇಳಿದೆ. ಅಲ್ಲೇ ಇದ್ದ ಇನ್ನೊಂದು ಬಸ್ ಹತ್ತಿದೆ. ಅಲ್ಲೂ ನನ್ನ ಬ್ಯಾಗ್ ಇರಲಿಲ್ಲ. ಡ್ರೈವರ್ ಬಳಿ ‘ಇಲ್ಲೇ ನಿಂತಿದ್ದ ಬೆಂಗಳೂರು ಬಸ್ ಹೋಯ್ತಾ?’ ಎಂದು ಕೇಳಿದೆ. ‘ಬಸ್ ಬರುತ್ತದೆ, ಹೋಗುತ್ತದೆ. ಅದನ್ನೆಲ್ಲ ಯಾರು ಲೆಕ್ಕ ಇಡುತ್ತಾರೆ? ನೀವು ಅರ್ಧದಿಂದ ಬಸ್ ಇಳಿಯುವುದಿದ್ದರೆ ನಂಬರ್ ಬೋರ್ಡ್ ನೋಡಿಯೇ ಇಳಿಯಬೇಕು. ಅಷ್ಟು ಗೊತ್ತಾಗುವುದಿಲ್ಲವಾ?’ ಎಂದ.

ಕೆಲವು ಬಸ್‌ಗಳನ್ನು ಹತ್ತಿ ಇಳಿದೆ. ಬಸ್ ಹೋದರೆ ತೊಂದರೆ ಇರುತ್ತಿರಲಿಲ್ಲ. ಬೇರೆ ಬಸ್ ಹತ್ತಬಹುದು. ಆದರೆ ನನ್ನ ಬ್ಯಾಗ್ ಇದೆಯಲ್ಲ. ಆಗ ಹೋಟೆಲಿನ ಇನ್ನೊಂದು ಬದಿಯಲ್ಲಿ ಹೊರಡಲು ತಯಾರಾದ ಬಸ್ ಒಂದರಲ್ಲಿ ತಾಯಿ–ಮಗಳು ಕಾಣಿಸಿದರು. ‘ಬದುಕಿದೆಯಾ ಬಡ ಜೀವವೇ’ ಎಂದು ಮನದಲ್ಲೇ ಅಂದುಕೊಳ್ಳುತ್ತ ಬಸ್ ಏರಿದೆ. ನನ್ನ ಬ್ಯಾಗ್ ನಾನು ಬರುವುದನ್ನೇ ಕಾಯುತ್ತಿತ್ತು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT