ADVERTISEMENT

ಬಿಕೋ ಎನ್ನುತಿದೆ ಮನೆ...

ಕವನ

ಸವಿತಾ ನಾಗಭೂಷಣ್
Published 14 ಜನವರಿ 2017, 19:30 IST
Last Updated 14 ಜನವರಿ 2017, 19:30 IST
ಸಂಘಮಿತ್ರೆ ಎಚ್.ಎಸ್.
ಸಂಘಮಿತ್ರೆ ಎಚ್.ಎಸ್.   

ಸವಿತಾ ನಾಗಭೂಷಣ
ಬಾಗಿಲಿಗೆ ತೋರಣವಿಲ್ಲ
ಅಂಗಳದಲಿ ರಂಗೋಲೆಯಿಲ್ಲ
ಬಿಕೋ ಎನ್ನುತಿದೆ ಮನೆ...

ತೆಂಗು ಇಳಿಸುವವರಿಲ್ಲ
ಬಾಳೆ ಕಡಿಸುವವರಿಲ್ಲ
ಬಿಕೋ ಎನ್ನುತಿದೆ ಮನೆ...

ಜಾಜಿ ಮೊಲ್ಲೆ ಸೇವಂತಿಗೆ
ಕಟ್ಟುವವರಿಲ್ಲ ಹೂಮಾಲೆ?
ಬಿಕೋ ಎನ್ನುತಿದೆ ಮನೆ...

ADVERTISEMENT

ಗೇಟಿನಲ್ಲಿ ಕಾದಿದೆ ನಾಯಿ
ಎಲ್ಲವಳು ಉಣಿಸುವ ತಾಯಿ?
ಬಿಕೋ ಎನ್ನುತಿದೆ ಮನೆ...

ಭರಭರ ಬೆಳೆದಿದೆ ಕಳೆ
ನಿಂತಲ್ಲೆ ನಿಂತಿದೆ ಹೊಳೆ
ಬಿಕೋ ಎನ್ನುತಿದೆ ಮನೆ...

ದೇವರ ಮುಂದಣ ದೀಪ ಕರಗಿದೆ
ಗಂಧದ ಪರಿಮಳ ತಾನೇ ಅಡಗಿದೆ
ಬಿಕೋ ಎನ್ನುತಿದೆ ಮನೆ...

ಇನ್ನಿಲ್ಲ ಸಿಡಿಮಿಡಿ ಗಡಿಬಿಡಿ
ದೂಷಣೆ ಘೋಷಣೆ
ಬಿಕೋ ಎನ್ನುತಿದೆ ಮನೆ...

ಖಾಲಿ ಖಾಲಿ ಕೋಣೆ
ಮೂಕವಾಗಿದೆ ವೀಣೆ
ಬಿಕೋ ಎನ್ನುತಿದೆ ಮನೆ...

ಒಳಗೆಲ್ಲೋ ಕುದ್ದಂತೆ ಸಾರು
ಕಾಸಿದ ತುಪ್ಪ ಸಿಡಿದಂತೆ ನೀರು
ಬಿಕೋ ಎನ್ನುತಿದೆ ಮನೆ...

ಇನ್ನೆಲ್ಲಿ ಗಲಗಲ ಗೆಜ್ಜೆ
ಒನಪಾದ ಹೆಜ್ಜೆ ಹೆಜ್ಜೆ
ಬಿಕೋ ಎನ್ನುತಿದೆ ಮನೆ...

ದುಗುಡ ದುಃಖ ಹತಾಶೆ
ತಲೆಯಿಟ್ಟರೆ ದಿಂಬಿಗೆ
ಅವಳೇ ಹಾಕಿದ ಕಸೂತಿ
ಒತ್ತುತ್ತಿದೆ ಕೆನ್ನೆಗೆ
ಕೊನೆಯುಂಟೆ ಕಣ್ಣೀರಿಗೆ ?

ಮರೆಯಲಾರೆ ಕರೆಯಲಾರೆ
ಬೆರೆಯಲಾರೆ ಸಂದಿಹಳು ಬಾರದೂರಿಗೆ

ಇನ್ನಿಲ್ಲದ ಶೋಕ ನಿರ್ದಯಿ ಈ ಲೋಕ
ಇಗೋ ಹೊರಟೆ ಅವಳ ತಾವಿಗೆ...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.