ADVERTISEMENT

ಬಿಸಿಲು ಬೆಳದಿಂಗಳು

​ಪ್ರಜಾವಾಣಿ ವಾರ್ತೆ
Published 30 ಏಪ್ರಿಲ್ 2016, 20:08 IST
Last Updated 30 ಏಪ್ರಿಲ್ 2016, 20:08 IST
4. ವಿಜಯಪುರಕ್ಕೆ ಕಲಶದಂತಿರುವ ‘ಪಿಸುಗುಡುವ ಗುಮ್ಮಟ’ ಮೊಗಲ್ ದೊರೆ ಮಹಮ್ಮದ್ ಆದಿಲ್ ಶಾ ಕಾಲದಲ್ಲಿ ರೂಪುಗೊಂಡಿತು. ವಿಶ್ವದ ಎರಡನೇ ಅತಿ ದೊಡ್ಡ ಗುಮ್ಮಟ ಎನ್ನುವ ಖ್ಯಾತಿ ಇದರದು. - ಚಿತ್ರಪಟ  ವಿಶ್ವನಾಥ ಸುವರ್ಣ
4. ವಿಜಯಪುರಕ್ಕೆ ಕಲಶದಂತಿರುವ ‘ಪಿಸುಗುಡುವ ಗುಮ್ಮಟ’ ಮೊಗಲ್ ದೊರೆ ಮಹಮ್ಮದ್ ಆದಿಲ್ ಶಾ ಕಾಲದಲ್ಲಿ ರೂಪುಗೊಂಡಿತು. ವಿಶ್ವದ ಎರಡನೇ ಅತಿ ದೊಡ್ಡ ಗುಮ್ಮಟ ಎನ್ನುವ ಖ್ಯಾತಿ ಇದರದು. - ಚಿತ್ರಪಟ ವಿಶ್ವನಾಥ ಸುವರ್ಣ   

ನಾಡಿಗೆ ನಾಡೇ ಒಂದು ಕುದಿತಪ್ಪಲೆಯಂತೆ ಪರಿಣಮಿಸಿರುವ ಹಿನ್ನೆಲೆಯಲ್ಲಿ ಎಲ್ಲೆಡೆ ಒಂದೇ ಮಾತು– ಬಿಸಿಲ ಝಳದ್ದು! ಮೈಮನಸ್ಸುಗಳನ್ನು ಜ್ವರದಂತೆ ಕಾಡುವ ಈ ಕಾವಿನಿಂದ ಪಾರಾಗುವುದು ಹೇಗೆ? ಅದಕ್ಕೆ ಇರುವುದು ಒಂದೇ ಉಪಾಯ– ಪ್ರವಾಸ!

ಬೇಸಿಗೆಯಲ್ಲಿ ಪ್ರವಾಸ ಪ್ರಯಾಸ ಎಂದಿರಾ? ಹಾಗೇನೂ ಇಲ್ಲ. ಒಮ್ಮೆ ಮೈಮನಗಳನ್ನು ಕೊಡವಿಕೊಂಡು ಊರು ಸುತ್ತಲಿಕ್ಕೆ ಹೊರಟರೆ ನೋಟ ನವನವೀನ. ಕನ್ನಡನಾಡಂತೂ ನೋಡುಗರ ಪಾಲಿಗೆ ಕೊನೆಯಿರದ ನೋಟ.

ನಾಡಿನ ಯಾವ ಮೂಲೆಗೆ ಹೋದರೂ ಎಡತಾಕುವ ಕೋಟೆ ಕೊತ್ತಲಗಳು – ಚಾರಿತ್ರಿಕ ಸ್ಥಳಗಳು ಸಾವಿರಾರು ಕಥೆಗಳನ್ನು ಪಿಸುಗುಡುತ್ತವೆ. ಬಿಸಿಲು–ಮಳೆಗಂಜದೆ ಬಯಲಲ್ಲಿ ನೂರಾರು ವರ್ಷಗಳಿಂದ ನಿಂತಿರುವ, ನಿಂತಲ್ಲೇ ಕರಗುತ್ತಿರುವ, ಕರಗಿಯೂ ಕೆಚ್ಚು ಬಿಡದಂತೆ ಉಸಿರು ಹಿಡಿದುಕೊಂಡಿರುವ ಈ ಸ್ಮಾರಕಗಳು ಜೀವನೋತ್ಸಾಹವನ್ನು ಹೆಚ್ಚಿಸುವಂತಿವೆ.

ನಾಡಿನ ಒಂದು ತುದಿ ಬೀದರ್‌ಗೆ ಬನ್ನಿ. ಬಹಮನಿ ಸುಲ್ತಾನರ ಕಾಲದ ವೈಭವದ ಪಳೆಯುಳಿಕೆಯಂತೆ ಅಲ್ಲಿನ ಕೋಟೆ ಕಾಣಿಸುತ್ತದೆ. ನಮ್ಮ ಅರಿವಿಗೆ ಸಿಕ್ಕದಂತಿರುವ ಸಹಬಾಳ್ವೆ–ಸಹಿಷ್ಣುತೆಯ ರೂಪಕಗಳು ಬೀದರ್‌ ನೆಲದಲ್ಲಿ ಉಸಿರಾಡುತ್ತಿವೆ.

ಚಾಲುಕ್ಯರ ಕಾಲದ ಬಸವಕಲ್ಯಾಣವಂತೂ ಚಾರಿತ್ರಿಕವಾಗಿದ್ದೂ ಪುರಾಣದ ಆವರಣವನ್ನು ಹೊಂದಿರುವ ಅಪೂರ್ವ ಸ್ಥಳ. ಚಾಲುಕ್ಯ ದೊರೆಗಳ ವಾಸ್ತುಶಿಲ್ಪದ ಕುರುಹುಗಳ ಜೊತೆಗೆ, ಬಸವ ಕ್ರಾಂತಿಯ ನೆನಪುಗಳು ಕಲ್ಯಾಣದಲ್ಲಿ ಉಮ್ಮಳಿಸುತ್ತವೆ.

ಬಸವಕಲ್ಯಾಣದಿಂದ ಬೀಳ್ಕೊಂಡು ಕಲಬುರಗಿಗೆ ಬಂದರೆ, ಅಲ್ಲಿನ ಬಿಸಿಲಿನ ಬಿಸುಪನ್ನು ಹೀರಿಕೊಂಡು ಶಕ್ತಿಯುತವಾದಂತೆ ಕೋಟೆ ಕಾಣಿಸುತ್ತದೆ. ಕನ್ನಡನಾಡಿನ ಇಸ್ಲಾಮಿಕ್‌ ವಾಸ್ತುಶಿಲ್ಪದ ಅನನ್ಯ ಪ್ರತಿನಿಧಿ ಈ ಕೋಟೆ. ಕಲಬುರಗಿಯ ನೆಲ ಧಾರ್ಮಿಕ ಸಾಮರಸ್ಯಕ್ಕೆ ಹೊಸ ಭಾಷ್ಯ ಬರೆದ ತಾಣವೂ ಹೌದು.

ಇಲ್ಲಿನ ಪ್ರಸಿದ್ಧ ಹಜ್ರತ್ ಖ್ವಾಜಾ ಬಂದೇ ನವಾಜ್ ದರ್ಗಾ ಭಾರತದ ಅಪೂರ್ವ ಸಾಂಸ್ಕೃತಿಕ ಸ್ಮಾರಕದಂತಿದೆ. ಬಂದೇ ನವಾಜ್‌ ಓರ್ವ ಸೂಫಿ ಸಂತ. ಅವರ ಸ್ಮರಣೆಯ ಈ ದರ್ಗಾ ತನ್ನ ಬೃಹತ್‌ ಗಾತ್ರದಿಂದಲೂ ಮುಸ್ಲಿಮರ ಜೊತೆಗೆ ಹಿಂದೂಗಳ ಶ್ರದ್ಧಾಕೇಂದ್ರವಾಗಿರುವ ಕಾರಣದಿಂದಲೂ ಗಮನಸೆಳೆಯುತ್ತದೆ. ಕೋಟೆ–ದರ್ಗಾಗಳ ಹಾಜರಿಯಲ್ಲಿ ಕಲಬುರಗಿಯ ಬಿಸಿಲು ಬೆಳದಿಂಗಳಂತೆ ತೋರುತ್ತದೆ.

ಕಲಬುರಗಿಯಿಂದ ವಿಜಯಪುರಕ್ಕೆ ಬಂದರೆ ಗೋಲಗುಮ್ಮಟ ಹಲೋ ಎನ್ನುತ್ತದೆ. ಒಂದು ಮಾತನ್ನು ಎರಡಾಗಿ ಮೂರಾಗಿ ಏಳಾಗಿ ಅನುರಣನಗೊಳಿಸುವ ಈ ಗುಮ್ಮಟ ಮೊಗಲರ ಮಹಮ್ಮದ್‌ ಆದಿಲ್‌ ಶಾ ನಿರ್ಮಾಣ.

ADVERTISEMENT

ಅರಸ ಅರಸಿಯರು ಸಲ್ಲಾಪದ ಪಿಸುನುಡಿಗಳು ಇನ್ನೂ ಮಾರ್ದನಿಗೊಳ್ಳುತ್ತಿರುವಂತೆ ಭಾಸವಾಗುವ ಗೋಲಗುಮ್ಮಟ ನೋಡಿದಷ್ಟೂ ತೀರದ ಬೆರಗು. ವಿಜಯಪುರದಲ್ಲೇ ಬಾರಾಕಮಾನು ಇದೆ. ಹನ್ನೆರಡು ಕಮಾನುಗಳ ಈ ವಾಸ್ತುಶಿಲ್ಪ ನಗರದ ಚಾರಿತ್ರಿಕ ಪ್ರಭಾವಳಿಯಂತಿದೆ.

ಗೊಮ್ಮಟದ ಬೆಡಗು–ಬೆರಗಿನಿಂದ ಬಿಡಿಸಿಕೊಂಡು ಕೊಡಗಿಗೆ ಬಂದರೆ, ಅಲ್ಲಿ ಹೊಸತೇ ಪರಿಸರ! ‘ಭೂರಮೆ ದೇವ ಸನ್ನಿಧಿ ಬಯಸಿ ಬಿಮ್ಮನೆ ಬಂದ’ ನಾಡಿದು. ಬ್ರಿಟಿಷರ ಕಾಲದಲ್ಲಿ ಸ್ವತಂತ್ರ ರಾಜ್ಯವಾಗಿದ್ದ ಕೊಡಗು, ಸ್ವಾತಂತ್ರ್ಯಾನಂತರ ಮೈಸೂರು ಸಂಸ್ಥಾನದ ತೆಕ್ಕೆಗೆ ಬಂತು.

ಹೈದರಾಲಿ, ಟಿಪ್ಪು, ಚಿಕವೀರ ರಾಜೇಂದ್ರ, ಬ್ರಿಟಿಷ್‌ ಅಧಿಕಾರಿಗಳ ರಾಜಕಾರಣಕ್ಕೆ ವೇದಿಕೆಯಾಗಿದ್ದ ಕೊಡಗಿನಲ್ಲಿ ತೊರೆ, ಝರಿ, ನದಿ, ಕಾಫಿ ಪರಿಮಳದ ಜೊತೆಗೆ ಅರಮನೆಯೂ ಇದೆ. ಅರಮನೆ ಈಗ ಸರ್ಕಾರಿ ಕಚೇರಿಯಾಗಿ ಬದಲಾಗಿದೆ.

ಕೊಡಗನ್ನು ಕಣ್ತುಂಬಿಕೊಂಡು ಸಕಲೇಶಪುರದತ್ತ ಸಾಗಿದರೆ, ಸಮೀಪದ ಮಂಜರಾಬಾದ್‌ನ ಕೋಟೆ ಎದುರಾಗುತ್ತದೆ. ನಕ್ಷತ್ರಾಕಾರ ರಚನೆಯ ಈ ಕೋಟೆ ಶ್ರೀರಂಗಪಟ್ಟಣದ ಪತನದ ದುರಂತವನ್ನು ಉಸುರುವಂತಿದೆ. ಕೋಟೆಯ ಒಳಭಾಗದಲ್ಲಿನ ಕೊಳ, ಶಯನಗೃಹ, ಊಟದ ಸ್ಥಳ, ಶೌಚಾಲಯ– ಇವೆಲ್ಲವೂ ಈ ಭಾಗದಲ್ಲಿ ಇದ್ದುಹೋದ ನಾಗರೀಕ ಸಮೂಹವೊಂದರ ಕಥೆ ಹೇಳುವಂತಿವೆ.

ಬೀದರಿನಿಂದ ಮಂಜರಾಬಾದ್‌ವರೆಗಿನ ಈ ನೋಟ ಹೀಗೆ ಸುಲಭಕ್ಕೆ ಹೇಳಿಮುಗಿಸುವಂತಹದ್ದಲ್ಲ. ಪ್ರತಿ ಕೋಟೆಯ ಎದುರು ನಿಂತು ಕಲ್ಲಿಗೊಂದು ಕಥೆ ಕೇಳಬೇಕು. ಪ್ರತಿ ಸ್ಮಾರಕದ ಸನ್ನಿಧಿಯಲ್ಲಿ ಚರಿತ್ರೆಯ ಏಳುಬೀಳುಗಳಿಗೆ ಕಣ್ಣುಕಿವಿ ಆಗಬೇಕು. ಮಣ್ಣಾದ ಸಾಮ್ರಾಜ್ಯಗಳ ನೆನಪಿಸಿಕೊಂಡು ಹೆಮ್ಮೆಯಿಂದಲೂ ವಿಷಾದದಿಂದಲೂ ಹನಿಗಣ್ಣಾಗಬೇಕು.

ಬೇಸಿಗೆ ಎಂದರೆ ಶಾಲಾ ಕಾಲೇಜುಗಳ ರಜೆದಿನಗಳೂ ಹೌದು. ಮಕ್ಕಳೊಂದಿಗಿನ ‘ಕರ್ನಾಟಕ ದರ್ಶನ’ ರಜೆಯನ್ನು ಸ್ಮರಣೀಯಗೊಳಿಸುವ ಅರ್ಥಪೂರ್ಣ ಶೈಕ್ಷಣಿಕ ಪ್ರವಾಸವೂ ಹೌದು. ಈ ಪ್ರವಾಸದ ನಂತರ ಯಾರಿಗಾದರೂ ಅನ್ನಿಸುವುದು– ಬಿಸಿಲು ಇರುವುದು ಮನೆಯೊಳಗೆ; ಹೊರಗೆ ಬಂದರೆ ಬೆಳದಿಂಗಳು!

1. ಬಹಮನಿ ಸುಲ್ತಾನರ ವೈಭವದ ಪಳೆಯುಳಿಕೆ ರೂಪದಲ್ಲಿ ಉಳಿದಿರುವ ಬೀದರ್‌ನ ಕೋಟೆ

2.  ಬೀದರ್‌ನ ಕೋಟೆಯೊಳಗೆ ಇರುವ ಪ್ರಾರ್ಥನಾ ಸ್ಥಳ

3. ಚಾಲುಕ್ಯರ ಕಾಲದ ಬಸವಕಲ್ಯಾಣ ಕೋಟೆಯ ಪ್ರವೇಶದ್ವಾರ

4. ವಿಜಯಪುರಕ್ಕೆ ಕಲಶದಂತಿರುವ ‘ಪಿಸುಗುಡುವ ಗುಮ್ಮಟ’ ಮೊಗಲ್ ದೊರೆ ಮಹಮ್ಮದ್ ಆದಿಲ್ ಶಾ ಕಾಲದಲ್ಲಿ ರೂಪುಗೊಂಡಿತು. ವಿಶ್ವದ ಎರಡನೇ ಅತಿ ದೊಡ್ಡ ಗುಮ್ಮಟ ಎನ್ನುವ ಖ್ಯಾತಿ ಇದರದು.

5. ವಿಜಯಪುರದ ಮತ್ತೊಂದು ಗರಿ ಹನ್ನೆರಡು ಕಮಾನುಗಳ ‘ಬಾರಾಕಮಾನ್’

6. ಕರ್ನಾಟಕ ಪ್ರಾಚೀನ ಇಸ್ಲಾಮಿಕ್ ವಾಸ್ತುಶಿಲ್ಪದ ಪ್ರತಿನಿಧಿಯಂತಿರುವ ಕಲಬುರಗಿಯ ಕೋಟೆ

7. ಕೊಡಗು ಅರಮನೆಯ ಒಳಾಂಗಣದ ವೈಭವ

8. ಜಿಲ್ಲಾಧಿಕಾರಿ ಕಚೇರಿಯಾಗಿ ಬದಲಾಗಿರುವ ಕೊಡಗಿನ ಅರಮನೆ

9. ನಕ್ಷತ್ರಾಕಾರದ ರಚನೆಯಿಂದ ನೋಡುಗರನ್ನು ಸೆಳೆಯುವ ಸಕಲೇಶಪುರಕ್ಕೆ ಸಮೀಪದ ಮಂಜರಾಬಾದ್ ಕೋಟೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.