ADVERTISEMENT

ಮಗು ಮನಸಿನ ಕಥನ

ಲೋಕವನ್ನು ಹೊಸದಾಗಿ ಕಾಣಿಸುವ

ಸುದರ್ಶನ್, ಆಸ್ಟ್ರೇಲಿಯಾ.
Published 19 ಅಕ್ಟೋಬರ್ 2013, 19:30 IST
Last Updated 19 ಅಕ್ಟೋಬರ್ 2013, 19:30 IST
ಮಗು ಮನಸಿನ ಕಥನ
ಮಗು ಮನಸಿನ ಕಥನ   

ನ್ನಂಜೆ ಸಂಜೀವ ಸುವರ್ಣರ ಆತ್ಮಕತೆ ‘ಸಂಜೀವನ’ ಓದುತ್ತಾ ಹೋದಂತೆ, ಅವರ ಬದುಕು ನಮ್ಮ ಕಣ್ಣೆದುರು ವಿಸ್ತರಿಸುತ್ತಾ ಹೋದಂತೆ, ಅವರ ವ್ಯಕ್ತಿತ್ವದ ಛಾಪು ಓದುಗನ ಮೇಲೆ ಬೆಳೆಯುತ್ತಾ ಹೋಗುತ್ತದೆ. ಅವರ ದುರ್ಗಮವಾದ ಎಳೆಯ ಬದುಕಿನಿಂದ ಶುರುವಾದ ಕಥನದ ಜತೆ ನಾವೂ ನಗುತ್ತಾ, ಅಳುತ್ತಾ, ಮೆಚ್ಚುತ್ತಾ, ಅಳುಕುತ್ತಾ ಸಾಗುವುದು ಹರಿಣಿಯವರ ನಿರೂಪಣೆಯ ಬಲದಿಂದಾಗಿಯೇ.

ಓದು ಬರಹ ಬಾರದಿದ್ದರೂ ಸಣ್ಣ ವಯಸ್ಸಿನಲ್ಲೇ ತಾಳವನ್ನು ಮನಸ್ಸಿನಲ್ಲೇ ಕಲಿತು ಅದಕ್ಕೆ ಕುಣಿತದ ಹೆಜ್ಜೆಯನ್ನು ಕಲಿಯುವ ಹುರುಪು ಹಾಗು ಸ್ಥೈರ್ಯ ಮನಸ್ಸನ್ನು ಹಿಡಿದು ನಿಲ್ಲಿಸಿತು. ಮನೆಯಲ್ಲಿ ಬಡತನದ ಹಾಗು ಅವಮಾನದ ಬೇಗೆ ಅವರನ್ನು ಸುಡುತ್ತಿದ್ದರೂ ಯಕ್ಷಗಾನವನ್ನು ನೆಚ್ಚಿದರು.

ಅದರಲ್ಲೇ ಉಳಿದು ಬೆಳೆದರು. ಅಂತಹ ವ್ಯಕ್ತಿತ್ವದ ಬೆಳಕು ಓದುಗರ ಮನಸ್ಸನ್ನೂ  ಬೆಳಗುವುದು ಈ ಆತ್ಮಕಥೆಯ ಒಂದು ವೈಶಿಷ್ಟ್ಯ. ಶತಮಾನಗಳಿಂದ ಯಕ್ಷಗಾನ ರೂಪಾಂತರಗೊಳ್ಳುತ್ತಾ ಬಂದಿರುವುದು ಗೊತ್ತಿರುವ ವಿಷಯ. ಆದರೆ ಸುವರ್ಣರ ಆತ್ಮೀಯ ಕತೆಯಲ್ಲಿ ಅಂತಹ ಬದಲಾವಣೆ ಹಾಗು ಆವಿಷ್ಕಾರದ ಹಿಂದೆ ಅಡಗಿರುವ ವಿಚಾರ, ಭಾವನೆ, ಆತಂಕ, ಆಶ್ಚರ್ಯ ಎಲ್ಲವೂ ಹೃದ್ಯವಾಗುತ್ತದೆ.

ADVERTISEMENT

ದಕ್ಷಿಣ ಕನ್ನಡದಲ್ಲಿ, ಬೆಂಗಳೂರಲ್ಲಿ, ದೆಹಲಿಯಲ್ಲಿ, ಯೂರೋಪಿನಲ್ಲಿ, ದಕ್ಷಿಣ ಅಮೇರಿಕಾದಲ್ಲಿ– ಹೀಗೆ ಹೋದ ಹೋದಲ್ಲೆಲ್ಲಾ ಸುತ್ತಲ ಜನ, ಜಗತ್ತು ಹಾಗು ಆಗುಹೋಗುಗಳನ್ನು ಬೆರಗುಗಣ್ಣಿನಿಂದ ನೋಡುತ್ತಾ ಕಲಿಯುತ್ತಾ ಹೋಗುವ ಸುವರ್ಣರ ಕತೆ, ಈ ‘ಗ್ಲೋಬಲೈಸ್ಡ್’ ಯುಗದಲ್ಲೂ ನಮಗೆ ಲೋಕವನ್ನು ಹೊಸದಾಗಿ ಕಾಣಿಸುತ್ತದೆ. ಅವರ ಮಗುವಿನ ಮನಸ್ಸು ಹಾಗು ಅನುಭವದ ಪ್ರಾಮಾಣಿಕತೆ ಅದನ್ನು ಸಾಧ್ಯ ಮಾಡಿದೆ.

ಜರ್ಮನಿಯ ಹೆಣ್ಣುಮಗಳು ಕ್ಯಾಥರೀನ್ ಬೈಂಡರ್, ಇವರೊಡನೆ ಇವರ ಮನೆಯಲ್ಲಿ ಮಗಳಂತೆ ಬದುಕಿ, ಯಕ್ಷಗಾನ ಕಲಿತು, ತನ್ನ ಮದುವೆಯಲ್ಲಿ ‘ಇವರು ತನ್ನ ಗುರು’ ಎಂದು ಕಾಲಿಗೆ ಬಿದ್ದು ಆಶೀರ್ವಾದ ಬೇಡುವಾಗ, ಸುವರ್ಣರ ಬದುಕು ಒಂದು ಪೂರ್ಣ ಸುತ್ತು ಬಂದಿದೆಯೇನೋ ಅನಿಸಿ ಎದೆ ಬೆಚ್ಚಗಾಗುತ್ತದೆ. ಯಕ್ಷಗಾನದ ಸಂಬಂಧದಲ್ಲೂ ಶಿವರಾಮ ಕಾರಂತರ ಹೊಸತನದ ಅಭೀಪ್ಸೆ  ಹಾಗು ನಿಷ್ಠುರವಾದಿ ನಿಲುವು  ನಮಗಿಲ್ಲಿ ಕಾಣುತ್ತದೆ.

ಅದರ ಜತೆಗೆ ಸುವರ್ಣರ ಬಗೆಗಿನ ಅವರ ಆತ್ಮೀಯತೆ, ಸೌಹಾರ್ದವೂ ಮನಮುಟ್ಟುತ್ತದೆ. ಕಾರಂತರ ಒಲವಿನ ಪ್ರತೀಕವೋ ಎಂಬಂತೆ ಸುವರ್ಣರ ಮದುವೆಗೆ ಬೆಳಿಗ್ಗೆಯೇ ಬಂದು ಮೂಲೆಯಲ್ಲಿ ಕೂತಿದ್ದು ಕಣ್ಣಿಗೆ ಕಟ್ಟುವಂತೆ ಮನಸ್ಸನ್ನೂ ಆವರಿಸುತ್ತದೆ. ಮುಂದೆ ಸುವರ್ಣರ ಕಷ್ಟದ ಹೊತ್ತಲ್ಲಿ ಕಾರಂತರು ನೆರವಿಗೆ ಬಂದಿದ್ದನ್ನು ತುಂಬಾ ನವಿರಾಗಿ ವಿವರಿಸುವ ಸುವರ್ಣರೂ ನಮಗೆ ಆತ್ಮೀಯವಾಗುತ್ತಾರೆ.

ಸುವರ್ಣರಂತಹ ಸಹೃದಯರ ಮೂಲಕ ಕಾರಂತರ ಆತ್ಮೀಯ ಮುಖ ನಮಗೆ ಕಾಣಿಸಿವುದು ನಮ್ಮ ಅದೃಷ್ಟವೇ ಸರಿ. ಈ ಆತ್ಮಕತೆಯಲ್ಲಿ ಒಂದು ಪ್ರಸಂಗವಿದೆ. ರಷ್ಯಾದಲ್ಲಿ ನಡೆದ ಮೇಳಕ್ಕೆ ಯಕ್ಷಗಾನವೂ ಆಮಂತ್ರಿತವಾಗಿ ಕಾರಂತರ ತಂಡ ಹೊರಟು ನಿಂತಿದೆ. ಆ ಮೇಳದಲ್ಲಿ ಯಕ್ಷಗಾನಕ್ಕೆ  ಪ್ರದರ್ಶನ ಕಲೆಯ ಮರ್ಯಾದೆ ಸಿಕ್ಕದೆ, ಬರೇ ಪೆರೇಡಿನಲ್ಲಿ ಹೋಗಬೇಕು ಎಂದು ದೆಹಲಿಯಲ್ಲಿ ತಂಡಕ್ಕೆ ತಿಳಿಯುತ್ತದೆ. ಹಾಗಾದರೆ ಹೋಗುವುದೇ ಬೇಡ ಎಂದು ಕಾರಂತರು ಪಟ್ಟು ಹಿಡಿದು ನಿಲ್ಲುತ್ತಾರೆ.

ಇಟಲಿಯಲ್ಲೂ ಒಂದೊಂದು ದೃಶ್ಯ ಒಂದೊಂದು ಕಡೆ ಮಾಡಬೇಕು ಎಂದಾಗ ಕಾರಂತರು ಮತ್ತೆ ಅಂತಹುದೇ ನಿಲುವು ತಳೆಯುತ್ತಾರೆ. ಅದು ಸಾಧ್ಯವಾಗುವುದು ನಮ್ಮ ಕಲೆಗಳ ಬಗ್ಗೆ  ತುಂಬಾ ಖಚಿತವಾದ ಕಲ್ಪನೆ ಇದ್ದಾಗ ಮಾತ್ರ. ಯಾಕೆ ಹೇಳಿದೆನಂದರೆ, ಈಗ ಭಾರತವೆಂದರೆ ಬಾಲಿವುಡ್, ಕ್ರಿಕೆಟ್ ಎಂಬ ನಮ್ಮ ಸ್ವವಿವರಣೆ ಜಾಳಷ್ಟೇ ಅಲ್ಲ ಅದೊಂದು ಸೂಕ್ಷ್ಮಮನಸ್ಸಿಗೆ ಕಸಿವಿಸಿ ತರುವ ವಿವರಣೆ.

ಸುವರ್ಣರ ಆತ್ಮಕತೆ ಅಂತಹ ವಿವರಣೆಯನ್ನು ಅಲ್ಲಾಡಿಸುವುದಲ್ಲದೇ ನಮ್ಮ ಕಲೆಗಳ ಬಗ್ಗೆ ಆಳವಾಗಿ ಚಿಂತಿಸುವಂತೆ ಮಾಡುತ್ತದೆ. ಹಲವು ಕಲೆಗಳ ಸಾಗರದಂತಿರುವ ಭಾರತದ ಸಾಂಸ್ಕೃತಿಕ ಸಂದರ್ಭದಲ್ಲಿ ಸುವರ್ಣರ ಬದುಕು, ಕಲೆ ಹಾಗೂ ಸಾಧನೆ ನಮ್ಮನ್ನು ಏಕಮುಖ ವಿವರಣೆಯ ವಿರುದ್ಧ ಎಚ್ಚರಿಸುವಂತಿದೆ. ಈ ಆತ್ಮಕಥನ ಆ ಕೆಲಸವನ್ನು ಮೆಲುದನಿಯಲ್ಲಿಯೇ ಆದರೂ ಪ್ರಬಲವಾಗಿ ಮಾಡುತ್ತದೆ ಎಂಬುದರಲ್ಲಿ ನನಗೆ ಅನುಮಾನವಿಲ್ಲ.
–ಸುದರ್ಶನ್, ಆಸ್ಟ್ರೇಲಿಯಾ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.